'ಊರು ಸೂರು ಯಾಕೆ ಈಚೆಗೆ ಬರುತ್ತಿಲ್ಲ. ಬಿಟ್ಟು ಬಿಟ್ರಾ' ಓದುಗರೊಬ್ಬರಿಂದ ಪ್ರಶ್ನೆ. ಅಬ್ಬಾ.. ಓದಿ ಪ್ರತಿಕ್ರಿಯಿಸುವ ಒಬ್ಬರಾದ್ರೂ ಸಿಕ್ಕರಲ್ಲಾ..! 'ಖಾಸಗಿ, ಕಚೇರಿ ಒತ್ತಡ ಓಡಾಟಗಳಿಂದಾಗಿ ಸ್ವಲ್ಪ ದಿನ ವಿರಾಮ' ಎಂದು ಸಮಜಾಯಿಷಿ ನೀಡಿದೆ. 'ಇನ್ನು ಪ್ರತೀವಾರ ಬರುತ್ತದೆ' ಅಂತ ರಾಜಕೀಯ ಆಶ್ವಾಸನೆ ನೀಡಿದೆ!
ಅಂಕಣ ಕುರಿತು ಮುಖತಃ ಸಿಕ್ಕಾಗಲೆಲ್ಲಾ 'ತೀರಾ ಚಿಕ್ಕ ವಿಷಯ ಯಾಕೆ ಬರೆಯುತ್ತೀರಿ?' ಎಂಬ ಸಾತ್ವಿಕ ಆಕ್ಷೇಪ ಮಿತ್ರರದು. ಬದುಕಿನ ಸುಭಗತನವಿರುವುದೇ ಚಿಕ್ಕ ಚಿಕ್ಕ ವಿಚಾರಗಳಲ್ಲಿ ತಾನೆ? ಓಡಾಟದಿಂದ ನಾನು ಗ್ರಹಿಸಿದ, ನೋಡಿ-ಕೇಳಿದ, ಸಮಕಾಲೀನ ಸ್ಥಿತಿಗೆ ಥಳಕು ಹಾಕುವ ಹಳೆಯ ನೆನಪಿನ ಬುತ್ತಿಯ ದಾಖಲೀಕರಣವೇ ಊರು-ಸೂರು. ಒಂದು ವಸ್ತು-ವಿಷಯ ಒಬ್ಬರಿಗೆ ಹಿತವಾದರೆ, ಇನ್ನೊಬ್ಬರಿಗೆ ಅಹಿತ; ಒಬ್ಬರಿಗೆ ಪ್ರಿಯವಾದರೆ, ಮತ್ತೊಬ್ಬರಿಗೆ ಅಪ್ರಿಯ. ಅದು ಲೋಕದ ಸ್ಥಿತಿ. ಇರಲಿ.
ಉದಯವಾಣಿಯಲ್ಲಿ ಪ್ರಕಟವಾದ ನನ್ನ 'ವಿಷಮಳೆಗೆ ಮುರುಟಿದ ಬದುಕು' ಎಂಬ ಬರೆಹಕ್ಕೆ ವಾರದ ಹಿಂದೆ 'ಚರಕ ಪ್ರಶಸ್ತಿ' ಘೋಷಣೆಯಾಯಿತು. ಖುಷಿಯಾಯಿತು, ಆಗಲೇ ಬೇಕು. ಕಾರಣವೂ ಇಲ್ಲದಿಲ್ಲ. ಲೇಖನಗಳನ್ನು ಸಂಘಟಕರೇ ಪತ್ರಿಕಾಲಯದಿಂದ ಆಯ್ದು, ಆಯ್ಕೆ ಸಮಿತಿಯ ಮುಂದಿಟ್ಟು ಪ್ರಶಸ್ತಿ ನೀಡುವುದು ಚರಕ ಮೊದಲಿನಿಂದಲೇ ಪಾಲಿಸಿಕೊಂಡು ಬಂದಿತ್ತು. ಈ ಸಲವೂ ಹಾಗೆನೇ ಆಯ್ದುಕೊಂಡಿತ್ತು.
ಆಯ್ಕೆ ಕುರಿತು ದೂರವಾಣಿ ಬಂದಾಗ, 'ಸಾರ್ ರಾಜಭವನದಲ್ಲಿ ಕಾರ್ಯಕ್ರಮ, ಸಮಯಕ್ಕೆ ಸರಿಯಾಗಿ ಬನ್ನಿ. ಬರುವಾಗ ಆಮಂತ್ರಣ ಪತ್ರ ಜತೆಗಿರಲಿ..' ಹೀಗೆ ಒಂದಷ್ಟು 'ವಿಧಿ'ಗಳನ್ನು ಹೇರಿದ್ದರು. ರಾಜಭವನವನ್ನು ನೋಡುವ ಕುತೂಹಲ ಹೆಚ್ಚಾಗತೊಡಗಿತು. ಸದಾ ಸುದ್ದಿಯಲ್ಲಿರುವ ರಾಜ್ಯಪಾಲರನ್ನು ಹತ್ತಿರದಿಂದ ನೋಡುವ, ಕೈಕುಲುಕಿಸುವ, ಅವರ ಮುಖ ನೋಡಿ ಫೋಸ್ ಕೊಡುವ, ಹೇಗೆ ಫೋಟೋ ತೆಗೆಸಬಹುದೆಂಬ ಲೆಕ್ಕಾಚಾರದಲ್ಲಿ ಜುಲೈ 1 (೨೦೧೧) ಬಂದೇ ಬಿಟ್ಟಿತು.
ರಾಜಕೀಯ ಸಂಘರ್ಷದಲ್ಲಿ ಮನೆಮಾತಾದ ರಾಜಭವನ, ಗೇಟಿನ ಮುಂದೆ ನಾಯಕರ ಓಡಾಟ-ಕಿತ್ತಾಟ, ವಾಹಿನಿಗಳ ಮೈಕ್ರೋಫೋನ್ಗಳ ಮೂತಿ, ಫೋಟೋ ಕ್ಲಿಕ್ಕಿಸಲು ಹರಸಾಹಸ ಪಡುತ್ತಿರುವ ಚಿತ್ರಗ್ರಾಹಕರು, ಪೆನ್-ಪ್ಯಾಡ್ ಹಿಡಿದು ಮಾತನ್ನು ಹಿಡಿದಿಡುವ ಪ್ರಯತ್ನದಲ್ಲಿರುವ ಪತ್ರಕರ್ತರ ಪಾಲು.. ಟಿವಿ ಆನ್ ಮಾಡಿದರೆ ಗೋಚರವಾಗುವ ಚಿತ್ರಗಳು.
ಮಿತ್ರ ಗೋಪಾಲ್ ಜತೆ ರಾಜಭವನದ ಗೇಟ್ ಎದುರು ಬೈಕ್ ಇನ್ನೇನು ಆಫ್ ಮಾಡಿಲ್ಲ, ಅಷ್ಟರಲ್ಲಿ ಲಾಠಿ ಹಿಡಿದ ಆರಕ್ಷಕರೊಬ್ಬರು ಬರಬೇಕೇ? 'ಇಲ್ಯಾಕೆ ಬಂದ್ರಿ, ಇಲ್ಲೇನು ಕೆಲಸ' ಪ್ರಶ್ನೆಗಳ ಸುರಿಮಳೆ. ಅಷ್ಟರಲ್ಲಿ ಆಮಂತ್ರಿತರ ಪಟ್ಟಿ ಹಿಡಿದ ಸಂಘಟಕರು, 'ಬನ್ನಿ, ಬನ್ನಿ, ಕಾಯ್ತಾ ಇದ್ದೇವೆ' ಎನ್ನುತ್ತಾ ಹತ್ತಿರ ಬಂದರು. ಇವರು ಸಕಾಲಕ್ಕೆ ಬಾರದೇ ಇರುತ್ತಿದ್ದರೆ 'ಬಾರುಕೋಲು ಸೇವೆ' ಆಗ್ತಾ ಇತ್ತೋ ಏನೋ?
ಸರಿ, ಗೇಟಿನ ಒಳಗೆ ನಮ್ಮನ್ನೇನೋ ಬಿಟ್ಟರು. ಇನ್ನೊಬ್ಬರು ರೆಡಿ! ಒಂದೈದು ನಿಮಿಷ ನಖಶಿಖಾಂತ ಪರೀಕ್ಷೆ. ಬ್ಯಾಗ್ ಪೋಸ್ಟ್ಮಾರ್ಟಂ. ಮೊಬೈಲ್ ಇಲ್ಲೇ ಸ್ವಿಚ್ ಆಫ್ ಮಾಡುವಂತೆ ಸೂಚನೆ. ಫೋಟೋ ತೆಗೆಯದಂತೆ ಆದೇಶ. 'ಹೋಗಿ' ಎಂಬ ಹಸಿರು ನಿಶಾನೆ. ಮುಖದಲ್ಲಿ ಒಂಚೂರು ನಗೆಯಿಲ್ಲ. ಉಗ್ರ ಬಿಗುಮಾನ.
ನಾಲ್ಕು ಹೆಜ್ಜೆ ಹೋಗಿಲ್ಲ. ನಗುಮುಖದೊಂದಿಗೆ ಆರಕ್ಷಕ ಮುಖ್ಯಸ್ಥರೊಬ್ಬರು 'ಕಾರ್ಯಕ್ರಮಕ್ಕೆ ಬಂದ್ರಾ' ಎಂಬ ಸ್ವಾಗತ. ಅವರ ನಗುಮುಖದ ದುರುಪಯೋಗ ಪಡಿಸಿಕೊಂಡು, 'ಸರ್, ರಾಜಭವನದೊಳಗೆ ಮೊದಲಿಗೆ ಬರುತ್ತಿದ್ದೇವೆ. ಇಲ್ಲಿ ಯಾವಾಗಲೂ ಹೀಗೆ ಇರುತ್ತಾ' ಎಂದೆ. 'ಅಯ್ಯೋ ಇಂದೇ ಸ್ವಲ್ಪ ನಿರುಮ್ಮಳ. ಯಾವಾಗಲೂ ರಾಜಕೀಯವಾದ ಕಲಾಪಗಳು ನಡೆಯುತ್ತಲೇ ಇವೆ. ಇಲ್ಲಿನ ಪರಿಸರ ಚೆನ್ನಾಗಿ ಇದೆ. ಕತ್ತಲಾಗ್ತಾ ಬಂತು. ಒಂದರ್ಧ ಗಂಟೆ ಮುಂಚೆನೇ ಬರಬೇಕಿತ್ತು' ಎಂದು ರಾಜಭವನದ ಮೆಟ್ಟಿಲ ತನಕ ಹೆಜ್ಜೆ ಹಾಕಿ ಬೀಳ್ಗೊಟ್ಟರು. ಅವರ ನಡವಳಿಕೆಯಿಂದಲೇ ಅವರ ಗೌರವ ಹೆಚ್ಚಿತ್ತು.
ಹಿಂದಿನ ಕಾಲದ ಕಟ್ಟಡಗಳ ವಿನ್ಯಾಸ. ನಿಶ್ಶಬ್ದ. ಎಲ್ಲೆಲ್ಲೂ ಶುಚಿ. ಭವನದ ಒಳ ವಿನ್ಯಾಸ ಖುಷಿ ನೀಡಿತು. 'ಒಳಗೆ ಸ್ವಲ್ಪ ಸುತ್ತಾಡಬಹುದಾ' ಸಂಘಟಕರಲ್ಲಿ ಬಿನ್ನವಿಸಿದೆ. 'ಸುತ್ತಾಡಬಹುದು. ನೀವು ಮನೆಗೆ ಹೋಗೋದು ಮಾತ್ರ ಡೌಟು' ಎಂದರು. ಪ್ರಶಸ್ತಿ ಕಲಾಪ ನಡೆಯುವ ಹಾಲ್ ಸುಂದರವಾಗಿತ್ತು. ರಾಜ್ಯಪಾಲರಿಗಾಗಿಯೇ ಮೀಸಲಿಟ್ಟ ಆಸನ ಕಾಯುತ್ತಿತ್ತು. 'ಮೊಬೈಲ್ ಆಫ್ ಮಾಡಬೇಕು' ಎಂಬ ಕಟ್ಟು ನಿಟ್ಟಿನ ಸೂಚನೆ ಇದ್ದರೂ ಹಲವಾರು ಮೊಬೈಲ್ಗಳು ಸಂಗೀತ ಹಾಡುತ್ತಿದ್ದವು. ಸೇರಿದ್ದ ಸಭಾಸದರೆಲ್ಲಾ ವಿದ್ಯಾವಂತರಾಗಿದ್ದರೂ ಸೂಚನೆಯನ್ನು ಪಾಲಿಸದಷ್ಟು 'ಬೌದ್ಧಿಕ ಎರರ್' ಯಾಕೆ ಬಂತೋ?
ರಾಜ್ಯಪಾಲರ ಆಗಮನ. ರಾಷ್ಟ್ರಗೀತೆ. ಪ್ರಶಸ್ತಿ ಪ್ರದಾನ. ಮೊದಲಿನ ಆಸೆ ಇತ್ತಲ್ಲಾ - ಕೈಕುಲುಕಬೇಕು, ಅವರನ್ನು ನೋಡಿ ನಗುವ ಪ್ರಯತ್ನ ಮಾಡಬೇಕು, ಹತ್ತಿರ ನಿಂತುಕೊಂಡು ಫೋಟೋ ತೆಗೆಸಿಕೊಳ್ಳಬೇಕು - ಅವೆಲ್ಲಾ ಈಡೇರಿತು. ಅವರಿಗೆ ಬೇಕೋ, ಬೇಡ್ವೋ 'ನನ್ನ ಪರಿಚಯ' ಒಂದೇ ಉಸಿರಿನಲ್ಲಿ ಹೇಳಿಕೊಂಡೆ! ಪ್ರಶಸ್ತಿ ಪ್ರದಾನದ ಬಳಿಕ ಒಂದರ್ಧ ಗಂಟೆ ಪತ್ರಿಕೋದ್ಯಮದ ಕುರಿತು ಮಾತನಾಡಿದರು. ರಾಜಕೀಯ ಸ್ಥಿತಿಗಳನ್ನು ಛೇಡಿಸಿದರು.
ಮತ್ತೆ ಜರುಗಿದ ಕಾಫಿ ಸೆಶನ್ನಲ್ಲಂತೂ ರಾಜ್ಯಪಾಲರು ಎಲ್ಲರ ಹತ್ತಿರ ಮಗುವಿನಂತೆ ಮಾತನಾಡುತ್ತಿದ್ದರು. ಬೆನ್ನು ತಟ್ಟುತ್ತಿದ್ದರು. 'ರಾಜ್ಯದ ಗಮನ ಸೆಳೆದ ರಾಜ್ಯಪಾಲರು ಇವರು ಹೌದಾ, ಅಲ್ವಾ' ಎಂಬ ಪ್ರಶ್ನೆ ಅವರ 'ಮುಗ್ಧ' ನಡವಳಿಕೆಯಿಂದ ಕಾಡುತ್ತಿತ್ತು.
'ಅದೆಲ್ಲಾ ನಮಗ್ಯಾಕೆ' ಗೋಪಾಲ್ ಪಿಸುಗುಟ್ಟಿದರು.
ರಾಜಭವನದಿಂದ ಮರಳುವಾಗಲೂ ಅದೇ ಬಿಗುಮುಖದ ಸೆಕ್ಯೂರಿಟಿಯ ಕಣ್ಣುಗಳು ಕತ್ತಲೆಯಲ್ಲೂ ಪ್ರಕಾಶಿಸುತ್ತಿದ್ದುವು. ಪ್ರಶಸ್ತಿ ಪ್ರದಾನ ಮರುದಿವಸದ ಪತ್ರಿಕೆಗಳನ್ನು ನೋಡುವ ಕುತೂಹಲ. ರಾಜ್ಯಪಾಲರ ರಾಜಕೀಯ ಛೇಡನೆಯ ಕುರಿತಾದ ವರದಿಗಳು ಹೈಲೈಟ್ ಆಗಿದ್ದುವು. ಎಲ್ಲೋ ಮಧ್ಯದಲ್ಲಿ ಪ್ರಶಸ್ತಿ ಪ್ರದಾನ ನಡೆದ ಸುದ್ದಿ ಮಿಂಚಿ ಮರೆಯಾಗಿತ್ತು.
0 comments:
Post a Comment