Monday, July 25, 2011

ಮತ್ತೆ ಮೂಡಿತು ಜೇನಿನೊಲವು

"ಹಾವೇರಿ, ಧಾರವಾಡಗಳಲ್ಲಿ ಗುತ್ತಿಗೆಯಾಧಾರಿತ ಸೀಡ್ ಫಾರ್ಮ್ ಗಳಿವೆ. ಹಲವಾರು ರೈತರು ಈ ಯೋಜನೆಯಲ್ಲಿದ್ದಾರೆ. ಜೇನು ಹುಳುಗಳ ಪರಾಗಸ್ಪರ್ಶದಿಂದ ತಾವು ಉತ್ಪಾದಿಸುವ ಬೀಜದ ಗುಣಮಟ್ಟ ಕೆಡುತ್ತದೆ ಎಂಬುದಕ್ಕಾಗಿ ಕಂಪನಿಗಳೇ ರೈತರಿಂದ ಜೇನುಕುಟುಂಬಗಳನ್ನು ಮಾಡಿಸುತ್ತಿದ್ದಾರೆ," ಎಂಬ ಮಾಹಿತಿಯನ್ನು ಉದಾಹರಣೆ ಸಹಿತ ಸಾಗರ ಜೇನು ಸಹಕಾರ ಸಂಘದ ಅಧ್ಯಕ್ಷ ನಾಗೇಂದ್ರ ಸಾಗರ್ ಅವರು ಹೇಳುತ್ತಾ, "ಈಗ ಇಲ್ಲಿ ರೈತರೇ ಜೇನು ಕೃಷಿಯತ್ತ ಆಕರ್ಶಿತರಾಗುತ್ತಿದ್ದಾರೆ!'" ಎಂಬ ಸಂತೋಷದ ಸುದ್ದಿಯನ್ನು ಹೇಳಲು ಮರೆಯಲಿಲ್ಲ. ಇದು ಸಾಗರ ಜೇನು ಸಹಕಾರ ಸಂಘದ ಕರಾಮತ್ತು.

ಒಂದು ಕಾಲಘಟ್ಟದಲ್ಲಿ ಮಲೆನಾಡಿಯಲ್ಲಿ ಜೇನು ಸಮೃದ್ಧ. ಜೇನು ಕುಟುಂಬಗಳು ಕಾಯಿಲೆಯಿಂದಾಗಿ ನಾಶವಾಗುತ್ತಾ ಬಂತೋ, ಅಲ್ಲಿಂದ ಜೇನು ಕೃಷಿಗೆ ಹಿಂಬಡ್ತಿ. ಅಲ್ಲೋ ಇಲ್ಲೋ ಕೆಲವರು ಕೃಷಿ ಮಾಡುತ್ತಿದ್ದಾರಷ್ಟೇ.

ಸಾಗರದ ರೈತ ಸ್ನೇಹಿತರ ಒಕ್ಕೂಟ 'ರೈತಾಪಿ' ಜೇನಿಗೆ ಪುನಶ್ಚೇತನ ನೀಡುವತ್ತ ಒಲವು. ಸಮ್ಮೇಳನ, ಸಭೆಗಳ ಮೂಲಕ ಜೇನುಪ್ರಿಯರನ್ನು ಗುರುತಿಸಿ ಸುಖ-ದುಃಖಗಳನ್ನು ದಾಖಲಿಸಿತು. ಜೇನಿನ ಆಸಕ್ತಿ ಇನ್ನೂ ಜೀವಂತವಿರುವುದನ್ನು ಗಮನಿಸಿದ ರೈತಾಪಿಯಿಂದ 'ಜೇನು ಸಹಕಾರ ಸಂಘ' ಸ್ಥಾಪನೆ.

ಬದುಕಿನಿಂದ ಕಳಚಿಹೋಗಿದ್ದ ಜೇನು ಸಂಸಾರವನ್ನು ಪುನಃ ಸ್ಥಾಪಿಸುವುದು ಮೊದಲ ಯತ್ನ. ಇದಕ್ಕಾಗಿ ತರಬೇತಿ, ಪ್ರವಾಸ, ರೈತರ ಭೇಟಿ. ಜೇನುಕೃಷಿಗೆ ಬೇಕಾದ ಎಲ್ಲಾ ಸಲಕರಣೆಗಳ ಜೋಡಣೆ ಮತ್ತು ಒದಗಣೆ. ದೂರವಿದ್ದ ಮತ್ತು ಜೇನು ಕೃಷಿಗೆ ಹೊಸದಾಗಿ ಮನಸ್ಸು ಮಾಡಿದ ಮಂದಿಗೆ ಉತ್ತೇಜನ.

ಸಂಘಕ್ಕೆ 241 ಮಂದಿ ಸದಸ್ಯರ ನೋಂದಣಿ. ಸದಸ್ಯರಾಗುವವರು ಕನಿಷ್ಠ ಎರಡು ಜೇನು ಪೆಟ್ಟಿಗೆ ಹೊಂದಿರಲೇಬೇಕೆಂಬ ಶರತ್ತು. ಸಂಘವೇ ಮಾರುಕಟ್ಟೆ ಮಾಡಲು ಮುಂದಾದಾಗ ಇನ್ನಷ್ಟು ಮುತುವರ್ಜಿ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯೊಂದಿಗಿದ್ದ ಜೇನುಕೃಷಿ ವಿಭಾಗ ಆಗಲೇ ನಿಸ್ತೇಜವಾಗಿತ್ತು. 'ಈ ವಿಭಾಗದಲ್ಲಿ ಲಾಭವಿಲ್ಲ' ಎಂದರಿತ ಇಲಾಖೆಯಿಂದ ಇದಕ್ಕೂ ಕೊಕ್! ಅಧಿಕಾರಿಗಳು ಸ್ವ-ನಿವೃತ್ತಿ ಹೊಂದಿದರು. ಇದ್ದ ಸಿಬ್ಬಂದಿಗಳಿಂದ ದಿನ ಎಣಿಕೆ! ಈಚೆಗೆ ಜೇನುವಿಭಾಗವನ್ನು ತೋಟಗಾರಿಕಾ ಇಲಾಖೆಯೊಂದಿಗೆ ಸರಕಾರ ಮರ್ಜಿ ಮಾಡಿತು. ಸಾಗರದಲ್ಲಿ ಪಾಳು ಸ್ಥಿತಿಗೆ ಇಳಿಯುತ್ತಿದ್ದ ಜೇನಿನ ಇಲಾಖೆಯಿದ್ದ ಕಟ್ಟಡದಲ್ಲಿ ಸದ್ಯ ಸಂಘದ ಕಚೇರಿಯಿದೆ.

ಸಂಘದ ಜೇನುಕೃಷಿ ಪ್ರಕ್ರಿಯೆ ಶುರುವಾಗುತ್ತಾ ಇದ್ದಂತೆ ತೋಟಗಾರಿಕಾ ಮಿಶನ್ ಉತ್ತೇಜಿತ ಸ್ಕೀಂನಿಂದ ಸಂಘದ ಚಟುವಟಿಕೆ ವಿಸ್ತಾರ. ಆರು ಜಿಲ್ಲೆಗಳಲ್ಲಿ ಜೇನು ಕೃಷಿಯ ಅರಿವು, ಕೃಷಿ ಹೆಚ್ಚಿಸಲು ಸಂಘದ ಜವಾಬ್ದಾರಿ.

'ಜೇನಿನ ಪರಾಗಸ್ಪರ್ಶದಿಂದಾಗಿ ಬೆಳೆ ಜಾಸ್ತಿ, ಫಸಲು ಅಭಿವೃದ್ಧಿ'ಯನ್ನು ರೈತರಿಗೆ ತಿಳಿಸುವುದು ಮೊದಲಾದ್ಯತೆ. ನಂತರ ಜೇನಿನ ತರಬೇತಿ, ಪರಿಕರಗಳ ವಿತರಣೆ. ಈಗಾಗಲೇ ಸುಮಾರು ಒಂದು ಸಾವಿರ ತರಬೇತಿಗಳಾಗಿವೆ. 'ಮೂರು ವರುಷದಲ್ಲಿ ಆರು ಜಿಲ್ಲೆಗಳಲ್ಲಿ ಆರುಸಾವಿರ ಜೇನು ಪೆಟ್ಟಿಗೆಗಳನ್ನು ವಿತರಿಸಿದ್ದೇವೆ. ಫಾಲೋಅಪ್ ಮಾಡ್ತಾ ಇದ್ದೇವೆ' ಎಂಬ ಮಾಹಿತಿ ನೀಡುತ್ತಾರೆ ನಾಗೇಂದ್ರ ಸಾಗರ್.

ಜೇನು ಹುಳುಗಳಿಗೆ ವರುಷಪೂರ್ತಿ ಆಹಾರ ಸಿಗಬಹುದಾದ ಗಿಡಗಳನ್ನು ಬೆಳೆಯುವತ್ತ ಮಾಹಿತಿ ಜತೆಜತೆಗೆ ನೀಡಿಕೆ. ಅರಣ್ಯ ಇಲಾಖೆಯೂ ಸಂಘದೊಂದಿಗೆ ಕೈಜೋಡಿಸಿದೆ. 'ಅರಣ್ಯ ಸಮಿತಿಗಳಿಗೂ ತರಬೇತಿ ನೀಡಿ' ಎಂದು ಅರಣ್ಯ ಅಧಿಕಾರಿಗಳು ವಿನಂತಿಸುತ್ತಾರಂತೆ!

ಆರು ಜಿಲ್ಲೆಗಳಲ್ಲಿ ಜೇನಿನ ಕೃಷಿ ಆರಂಭವಾಗಿದೆ. ಒಲವು ಹೆಚ್ಚುತ್ತಿದೆ. ಜೇನುತುಪ್ಪಕ್ಕೆ ಕಿಲೋಗೆ ಇನ್ನೂರೈವತ್ತು ರೂಪಾಯಿಗೆ ಸಂಘ ಖರೀದಿ. 'ಮೊದಲ ವರುಷ ಜೇನು ಪೆಟ್ಟಿಗೆ ಸಿಗದೆ ತೊಂದರೆಯಾಯಿತು. ಈಗ ತೊಂದರೆಯಿಲ್ಲ' ಎನ್ನುತ್ತಾರೆ ನಾಗೇಂದ್ರ ಸಾಗರ್.
'ಇದನ್ನೊಂದು ವೃತ್ತಿ ಅಲ್ಲದಿದ್ದರೂ, ಹವ್ಯಾಸವಾಗಿ ರೂಢಿಸಿಕೊಂಡರೆ ಜೇನುತುಪ್ಪವೂ ಸಿಗುತ್ತೆ, ಜತೆಗೆ ಪರಾಗಸ್ಪರ್ಶ ಕ್ರಿಯೆಯಿಂದಾಗಿ ತೋಟಗಾರಿಕಾ ಬೆಳೆಗಳೂ ಅಭಿವೃದ್ಧಿಯಾಗ್ತಾವಲ್ಲಾ,' ಎಂದು ಒಟ್ಟೂ ಆಶಯವನ್ನು ನಾಗೇಂದ್ರ ಸಾಗರ್ (9901548613) ಕಟ್ಟಿಕೊಡುತ್ತಾರೆ.

0 comments:

Post a Comment