ಕುಡ್ಲದಲ್ಲೊಂದು ಧಾರ್ಮಿಕ ಸಮಾರಂಭ. ಸಾಮಾಜಿಕ, ಧಾರ್ಮಿಕ, ರಾಜಕೀಯ 'ನೇತಾರ'ರು - ಹೀಗೆ ವೇದಿಕೆಯಲ್ಲಿ ಹದಿನೈದು ಗಣ್ಯರು ಉಪಸ್ಥಿತರಿದ್ದಿರಬೇಕು. ಪ್ರಾರ್ಥನೆ, ಸ್ವಾಗತ, ಪ್ರಸ್ತಾವನೆ, ಹೂಗುಚ್ಛ, ಶಾಲು-ಸ್ಮರಣಿಕೆ ನೀಡಿಕೆ.. ಇಷ್ಟಕ್ಕೇ ಮುಕ್ಕಾಲು ಗಂಟೆ. ಸ್ವ-ಪಾತ್ರ ವಿವೇಚನೆಯಿಲ್ಲದ ಎಂಸಿಯ ಕೊರೆತ.
ದೀಪ ಜ್ವಲಿಸಿ ಉದ್ಘಾಟನೆ. ಛಾಯಾಗ್ರಾಹಕರಿಗಾಗಿಯೇ ಮತ್ತೊಮ್ಮೆ ದೀಪಜ್ವಲನ! (ಆ ಹೊತ್ತಿಗೆ ಅವರು ಯಾರಲ್ಲೋ ಹರಟುತ್ತಿದ್ದರು) ಉದ್ಘಾಟಕರ ಮಾತು-ಉಪದೇಶ. 'ನನಗೆ ಇನ್ನೊಂದು ಕಾರ್ಯಕ್ರಮಕ್ಕೆ ತುರ್ತಾಗಿ ಹೋಗಬೇಕಾಗಿದೆ' ಎನ್ನುತ್ತಾ ತೆರಳುವ ಮುನ್ಸೂಚನೆ ಸಿಕ್ಕಾಗ ಸಂಘಟಕರು ಕಕ್ಕಾಬಿಕ್ಕಿ. ತಕ್ಷಣ ಧನ್ಯವಾದ ಸಮರ್ಪಣೆ. ಸ್ಮರಣಿಕೆ ಪ್ರದಾನ. ಬಹುಪರಾಕ್ ಉವಾಚ.
ಮುಖ್ಯ ಅತಿಥಿಗಳ ಸರದಿ. ಹರಟೆ-ಕೊರೆತ. ಒಂದರ್ಧ ಗಂಟೆ ಜಾಳು ಜಾಳು ವಿಚಾರಗಳ ವಾಕರಿಕೆ. 'ಇವರೂ ಅನ್ಯಕಾರ್ಯ ನಿಮಿತ್ತ' ನಿರ್ಗಮನ. ಮತ್ತೊಬ್ಬ, ಇನ್ನೊಬ್ಬ ಎನ್ನುತ್ತಾ ಭಾಷಣ ಮಾಡಿ, 'ಅನ್ಯಕಾರ್ಯ ನಿಮಿತ್ತ' ಹೊರಟ ಬಳಿಕ ವೇದಿಕೆಯಲ್ಲಿ ಅಧ್ಯಕ್ಷರು ಮಾತು ಉಳಿದಿದ್ದರು! ಸಭಾಸದರು ಮಧ್ಯಾಹ್ನದ ಪೂಜೆಯ ನಿರೀಕ್ಷೆಯಲ್ಲಿದ್ದುದರಿಂದ ಸಭಾಮಂದಿರ ತುಂಬಿತ್ತು!
'ಕೊನೆಗೆ ಅಧ್ಯಕ್ಷರ ಭಾಷಣ' ನಿರ್ವಾಹಕರಿಂದ ಆರ್ಡರ್! ಪಾಪ, ಆಗಲೇ ಕೊರೆತದ ಭೋರ್ಗರೆತಕ್ಕೆ ಹಣ್ಣುಗಾಯಿಯಾಗಿದ್ದ ಸಭಾಸದರು ಆಕಳಿಸುತ್ತಿದ್ದರು. ಅಧ್ಯಕ್ಷರಿಂದಲೂ ಹಿತವಚನ. ವೇದಿಕೆಯಿಂದ ಪ್ರತೀಯೊಬ್ಬರೂ ನಿರ್ಗಮಿಸುತ್ತಿರುವಾಗಲೂ 'ಧನ್ಯವಾದ ಸಮರ್ಪಣೆ' ಆಗಿದ್ದರೂ, ಕಾರ್ಯಕ್ರಮದ ಕೊನೆಗೆ ವೇದಿಕೆಯ ಬರಿದಾದ ಆಸನಗಳಿಗೆ ಧನ್ಯವಾದ. ಅಂತೂ ಕಲಾಪ ಮುಗಿಯಿತು.
ಬಹುತೇಕ ಸಮಾರಂಭಗಳಲ್ಲಿ ಇಂತಹುದೇ ಘಟನೆಗಳ ಮರುಕಳಿಕೆ ಕಾಣಬಹುದು. ಸಭಾಸದರ ಇರುವಿಕೆ, ತನ್ನ ಭಾಷಣವೋ, ಉಪದೇಶವೋ ಸ್ವೀಕಾರವಾಗುತ್ತಾ, ಇಡೀ ಕಲಾಪಕ್ಕೆ ಇರುವ ಸಮಯ ಎಷ್ಟು, ಅದರಲ್ಲಿ ತನ್ನ ಪಾತ್ರವೆಷ್ಟು, ತಾನೇನು ಮಾತನಾಡಬೇಕು - ಈ ಮುಂತಾದ ವಿಚಾರಗಳನ್ನು 'ಅತಿಥಿ'ಯಾದವ ಮೊದಲೇ ತಿಳಿದುಕೊಳ್ಳದಿದ್ದರೆ ಸಂಘಟಕರ 'ತಿಥಿ' ಮಾಡಿದಂತೆ.
ಈಗೀಗ ಸಮಾರಂಭಗಳಲ್ಲಿ ಭಾಗವಹಿಸುವುದೇ ಹಿಂಸೆಯ ಅನುಭವ. ಕೊರೆತಗಳ ಮಾರುಮಾಲೆ. ವಿಷಯಕ್ಕಿಂತ ಹೊರ ಸಂಚಾರ. ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಮಾತು. ಸ್ವಾಗತ, ಪ್ರಸ್ತಾವನೆ, ಧನ್ಯವಾದ ಮತ್ತು ಎಂಸಿಗಳೇ ಕಲಾಪವನ್ನು ನುಂಗಿಬಿಡುತ್ತಾರೆ. ಹೊಗಳಿಕೆ ಬೇಕು. ಅತಿಯಾದರೆ ವಿಷ. 'ಸಭಾಗೌರವ'ದ ಅರ್ಥದ ಹೊಳಹೇ ತಿಳಿಯದ್ದರ ಫಲ.
ಈಚೆಗೆ ಕೇರಳದ ರಾಜಧಾನಿಯಲ್ಲಿ ಮೂರು ದಿವಸದ ರಾಷ್ಟ್ರೀಯ ಹಲಸು ಕಾರ್ಯಗಾರ ನಡೆದಿತ್ತು. ವೇದಿಕೆಯಲ್ಲಿ ಅಧ್ಯಕ್ಷರು. ನಾಲ್ಕು ಮಂದಿ ಅತಿಥಿಗಳು. ದಿವಸಕ್ಕೆ ಎರಡರಂತೆ, ಮೂರು ದಿವಸದಲ್ಲಿ ಆರು ಸಭಾಕಾರ್ಯಕ್ರಮ. ಮಿಕ್ಕಂತೆ ಪವರ್ಪಾಯಿಂಟ್ ಪ್ರಸ್ತುತಿ.
ಸ್ವಾಗತ ಮಾಡುವವರನ್ನು ನಿರ್ವಾಹಕರು ವೇದಿಕೆಗೆ ಆಹ್ವಾನಿಸಿದಲ್ಲಿಗೆ ಅವರ ನಿರ್ಗಮನ. ಮತ್ತೆಲ್ಲಾ ಆಧ್ಯಕ್ಷರಿಂದಲೇ ನಿರ್ವಹಣೆ. ಅತಿಥಿಗಳನ್ನು ಪರಿಚಯ ಮಾಡುವಲ್ಲಿಂದ ಕಲಾಪಕ್ಕೆ ಚಾಲನೆ. ಅವರ ಭಾಷಣ ವಿಷಯಕ್ಕಿಂತ ಹೊರ ಹೋದರೆ, ಅಧ್ಯಕ್ಷರೇ ಮಧ್ಯಪ್ರವೇಶಿಸಿ ಭಾಷಣ ನಿಲ್ಲಿಸುವಂತೆ ಸೂಚನೆ ನೀಡುತ್ತಾರೆ. 'ಈಗ ನನ್ನ ಭಾಷಣದ ಸರದಿ' ಎಂದು ಅಧ್ಯಕ್ಷರು ಭಾಷಣವನ್ನೂ ಮುಗಿಸಿ, 'ಈಗ ಇಂತಹವರಿಂದ ಧನ್ಯವಾದ' ಎಂಬಲ್ಲಿಗೆ ಅವರ ಜವಾಬ್ದಾರಿ ಮುಗಿಸುತ್ತಾರೆ. ಕಲಾಪದ ಕೊನೆಗೆ ಬರುವ ನಿರ್ವಾಹಕ ಮುಂದಿನ ಸೆಶನ್ ಮುನ್ನಡೆಸುತ್ತಾರೆ.
ಈ ರೀತಿಯ ಕಲಾಪ ನಿರ್ವಹಣೆ ಬಹಳ ಆಪ್ತವಾಗುತ್ತದೆ. ಮಧ್ಯೆ ನಿರ್ವಾಹಕರ ವೃಥಾಲಾಪ ಇರುವುದಿಲ್ಲ. ನಿಚ್ಚಳವಾಗಿ ವಿಷಯಕ್ಕೆ ಒತ್ತು. 'ಅವರೇ.. ಇವರೇ..' ಎನ್ನುವ ಜಾಳಿಗೂ ಕೊಕ್. ಹೀಗಾದಲ್ಲಿ ಪ್ರೇಕ್ಷಕರೂ ತಲೆನೋವಿನಿಂದ ಮುಕ್ತಿ ಪಡೆಯುತ್ತಾರೆ.
ಅಲ್ಲೇ ಒಂದು ಘಟನೆ ನಡೆಯಿತು. ಒಂದು ಕಲಾಪದಲ್ಲಿ ಹಿರಿಯ ಅನುಭವಿಯೋರ್ವರ ಅಧ್ಯಕ್ಷತೆ. ಮುಖ್ಯ ಅತಿಥಿಯಾಗಿದ್ದರು ರಾಜಕೀಯ ನೇತಾರರು. ಹಲಸಿನ ಕುರಿತು ಮಾತನಾಡಬೇಕಿದ್ದ ಅವರು ರಾಜಕೀಯ ವಿಶ್ಲೇಷಣೆಯಲ್ಲಿ ತೊಡಗಿದ್ದರು. ಹದಿನೈದು ನಿಮಿಷ ಸಹನೆಯಿಂದ ಕಾದ ಅಧ್ಯಕ್ಷರು, ನೇರವಾಗಿ 'ವಿಷಯದಲ್ಲೇ ಮಾತನಾಡಿ' ಎಂಬ ಸೂಚನೆ ಕೊಟ್ಟರು. ಅಭ್ಯಾಸ ಬಲದಂತೆ ಇವರ ಕೊರೆತ ಹಳ್ಳ, ತೋಡು, ಹೊಳೆ ದಾಟಿ ಸಮುದ್ರ ಸೇರುತ್ತಿದ್ದಂತೆ, 'ಮಾತು ನಿಲ್ಲಿಸಿ, ನಿಮ್ಮ ಸಮಯ ಮೀರಿತು' ಎಂದು ಎತ್ತರದ ಸ್ವರದಲ್ಲಿ ಅಧ್ಯಕ್ಷರು ಹೇಳಿದಾಗ ಸಭಾಭವನ ಒಂದು ಕ್ಷಣ ಸ್ತಬ್ಧ. ಭಾಷಣಕ್ಕೂ ವಿದಾಯ.
ಈ ರೀತಿಯ ಕಲಾಪವನ್ನು ನಮ್ಮಲ್ಲೂ ಯಾಕೆ ಮಾಡಬಾರದು? ಅಗತ್ಯಕ್ಕಿಂತ ಹೆಚ್ಚು ಅತಿಥಿಗಳು, 'ಅವರೇ, ಇವರೇ.. ಎನ್ನುವಲ್ಲಿ ಪರದಾಟ, ತನ್ನನ್ನು ಕರೆದ ಸಂಘಟಕರ ಹೆಸರೂ ಮರೆತುಹೋಗಿ, ವೇದಿಕೆಯ ಹಿಂಬದಿಯಲ್ಲಿ ಕಟ್ಟಿದ ಬ್ಯಾನರನ್ನು ಓದಲು ತ್ರಾಸಪಡುವ ಮುಖಗಳು ಎಷ್ಟು ಬೇಕು? ನಮ್ಮಲ್ಲಿ ಸಭಾಕಲಾಪ ಬಿಡಿ, ವಿಚಾರಗೋಷ್ಠಿಗಳಲ್ಲೂ 'ನಮಗ್ಯಾಗೆ ಬಿಡಿ, ಮಾತನಾಡಲಿ' ಎಂದು ಅಧ್ಯಕ್ಷರೇ ರಿಯಾಯಿತಿ ನೀಡಿದರೆ? ಕೆಲವು ವರುಷಗಳ ಹಿಂದೆಲ್ಲಾ ಅಧ್ಯಕ್ಷರೇ ಕಲಾಪವನ್ನು ಮುನ್ನಡೆಸುತ್ತಿದ್ದ ದಿವಸಗಳನ್ನು ಮರೆತಿಲ್ಲ.
ನೀಡಿದಂತಹ ಹಾರಗಳು, ಹೂಗುಚ್ಚಗಳನ್ನು 'ಗಣ್ಯರು' ವೇದಿಕೆಯಲ್ಲೇ ಬಿಟ್ಟು ಹೋಗುವುದು ಹೆಚ್ಚು. 'ನಾವು ಕೊಂಡೋಗಿ ಏನು ಮಾಡೋದು' ಎಂದು 'ಗಣ್ಯ'ರೊಬ್ಬರು ಪ್ರತಿಕ್ರಿಯಿಸಿದ್ದರು. ಸರಿ, ಹೂವಿನ ಬದಲಿಗೆ ಪುಸ್ತಕವನ್ನು ನೀಡಿದರೆ, 'ಯಾರು ಮಾರಾಯ್ರೆ ಅದನ್ನು ಓದುವುದು, ನಿಮಗಿರಲಿ' ಎನ್ನುತ್ತಾ ಪುಸ್ತಕವೊಂದನ್ನು ನನ್ನ ಕೈಗೆ ಕುಕ್ಕಿದ ಮಹನೀಯರೋರ್ವರನ್ನು ಹೇಗೆ ಮರೆಯಲಿ?
'ಪುರುಸೊತ್ತಿಲ್ಲ, ಅವರು ಕರೆದಿದ್ದಾರಲ್ಲಾ, ಹಾಗಾಗಿ ಬಂದೆ', 'ಛೇ.. ಇನ್ನೂ ಶುರುವಾಗಿಲ್ವಾ. ನಾನು ಕರೆಕ್ಟ್ ಟೈಂಗೆ ಬಂದೆ', 'ನಮಗೆ ಬೇಕಾದವ ಮಾರಾಯ್ರೆ. ಮನೆಗೆ ಬಂದು ಹೇಳುವಾಗ ಇಲ್ಲ ಎನ್ನುವಂತಿಲ್ಲ. ಹಾಗಾಗಿ ಒಪ್ಪಿಕೊಂಡೆ'.. ಗಣ್ಯರ ಇಂತಹ ಮಾತುಗಳು ಸಂಘಟಕನ ಕಿವಿಗೆ ಬೀಳದೆ ಇರುವುದು ಹೆಚ್ಚು. ಈ ಮಾತನ್ನು ಕೇಳಿದಾಗಲೆಲ್ಲಾ 'ಗಣ್ಯರು' ಎಂಬ ಶಬ್ದದ ಅರ್ಥ ಯಾಕೋ ಈಗೀಗ ಮಸುಕಾಗುತ್ತಿದೆ ಅನ್ನಿಸುತ್ತದೆ.
ಒಂದು ಗಂಟೆಯ ಒಳಗೆ ಮುಗಿಯಬಲ್ಲ ಕಲಾಪವನ್ನು ರೂಪಿಸಲು ಸಾಧ್ಯವಿಲ್ವಾ. ಇದರಿಂದ ಪ್ರೇಕ್ಷಕರಿಗೂ ನೆಮ್ಮದಿ, ವಿಷಯಕ್ಕೆ ನ್ಯಾಯ ಸಲ್ಲಿಸಿದ ತೃಪ್ತಿ. ಇಲ್ಲದಿದ್ದರೆ 'ಸಮಾರಂಭಕ್ಕೆ ಜನ ಬರುವುದಿಲ್ಲ ಮಾರಾಯ್ರೆ' ಎನ್ನುವ ಗಿಳಿಪಾಠವನ್ನು ಪ್ರತೀವರ್ಷ ನವೀಕರಣ ಮಾಡುತ್ತಿದ್ದರಾಯಿತು.
Home › Unlabelled › ಕೊರೆತದ ಭೋರ್ಗರೆತ!
0 comments:
Post a Comment