Tuesday, September 6, 2011

ಅಡಿಕೆಗೆ ಹೆಗಲುಕೊಡುವ 'ಚಿಕ್ಕು'ಪುತ್ತೂರಿನ ಹಣ್ಣಿನಂಗಡಿಯಲ್ಲಿ ಚಿಕ್ಕು ಖರೀದಿಸಿದೆ. ಒಂದು ಕಿಲೋಗೆ ನಾಲ್ಕು ಹಣ್ಣು! ವ್ಯಾಪಾರಿಗೆ ತೂಕದಲ್ಲಿ ತಪ್ಪಿರಬೇಕು ಎಂದು ಮತ್ತೊಮ್ಮೆ ತೂಗಿಸಿದೆ. ಸರಿಯಾಗಿತ್ತು. ತಿಂದು ನೋಡಿದರೆ ಸಕ್ಕರೆಯಂತಹ ಸಿಹಿ. ತಿಂದ ಬಳಿಕವೂ ಒಂದಷ್ಟು ಹೊತ್ತು ಸ್ವಾದ. ಕ್ರಿಕೆಟ್ ಬಾಲ್ನಷ್ಟು ಗಾತ್ರ.

ವ್ಯಾಪಾರಿಯಿಂದ ಚಿಕ್ಕು ಸಹಿತ, ಬೆಳೆದವರ ವಿವರ ಪಡೆದೆ. ಮರುದಿವಸ ಚಿಕ್ಕು ಕೃಷಿಕ ಬಂಟ್ವಾಳ ತಾಲೂಕಿನ ಮೈಕೆ ಗಣೇಶ ಭಟ್ಟರ ಸಂಪರ್ಕ. ಚಿಕ್ಕು ತೋಟ ವೀಕ್ಷಣೆ. ಮಾತನಾಡುತ್ತಿದ್ದಂತೆ ಒಂದಷ್ಟು ಹಣ್ಣುಗಳೂ ಹೊಟ್ಟೆ ಸೇರಿದುವು!

ಮೈಕೆ ಸನಿಹದ ಕರಿಂಕ ಎಂಬಲ್ಲಿ ಗಣೇಶ ಭಟ್ಟರ ಆರೆಕ್ರೆ ಹಣ್ಣಿನ ತೋಟ. ಅದರಲ್ಲಿ ಒಂದೆಕ್ರೆ ಚಿಕ್ಕು. ಮಿಕ್ಕಿದ್ದು ಮಾವು ಮತ್ತು ಸುಮಾರು ನಲವತ್ತು ವಿಧದ ಹಣ್ಣುಗಳು. 'ಇದು ನನ್ನ ಕನಸಿನ ತೋಟ. ದುಬಾರಿ ಬೆಲೆ ತೆತ್ತು ಹಣ್ಣುಗಳನ್ನು ಖರೀದಿಸಬಾರದೆಂಬುದು ನನ್ನ ಬದುಕಿನ ಪಾಲಿಸಿ' ಎನ್ನುತ್ತಾರೆ.

1999ರಲ್ಲಿ ಕುಂದಾಪುರದ ಕೋ.ಲ.ಕಾರಂತರ ಚಿಕ್ಕು ತೋಟದಿಂದ ಐವತ್ತು ಗಿಡಗಳನ್ನು ಗಣೇಶ್ ಭಟ್ ತಂದು ಆರೈಕೆ. ಆರಂಭದಲ್ಲಿ ಹರಳಿಂಡಿ, ನೆಲಗಡಲೆ ಹಿಂಡಿ ಮತ್ತು ಕಹಿಬೇವಿನ ಹಿಂಡಿಗಳನ್ನು ಮಿಶ್ರ ಮಾಡಿ ಉಣಿಕೆ. ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರಾವರಿ. ಒಂದು ಗೇಟ್ವಾಲ್ವ್ ತಿರುಗಿಸಿದರೆ ಸಾಕು, ಮೂವತ್ತು ಗಿಡಗಳ ಬುಡಗಳು ಒದ್ದೆಯಾಗುವಂತಹ ನೀರಾವರಿ ವ್ಯವಸ್ಥೆ. ವರುಷಕ್ಕೊಮ್ಮೆ ಪ್ರತೀ ಗಿಡಕ್ಕೆ ನಾಲ್ಕು ಕಿಲೋದಂತೆ ಹರಳಿಂಡಿ ಉಣಿಕೆ. ಹೆಚ್ಚಿನ ಬೇರ್ಯಾವ ಆರೈಕೆಯೂ ಇಲ್ಲ.

ಕಳೆದ ಐದು ವರುಷದಿಂದ ಇಳುವರಿ. ವರುಷಕ್ಕೆ ಎರಡು ಬೆಳೆ. ಮಳೆಗಾಲದಲ್ಲೂ, ಬೇಸಿಗೆಯಲ್ಲೂ ಒಂದೇ ರುಚಿ, ಒಂದೇ ಗಾತ್ರ. ಮಳೆಗಾಲದಲ್ಲಿ ಬಲಿತ ಕಾಯಿಗಳನ್ನು ಕೊಯಿದು, ಹಣ್ಣಿನ ಮೇಲ್ಮೈಯ ನೀರಿನ ತೇವವನ್ನು ತೆಗೆಯಲು ಒಂದು ದಿವಸ ನೆರಳಿನಲ್ಲಿ ಒಣಗಿಸುತ್ತಾರೆ. ನಂತರವಷ್ಟೇ ಮಾರುಕಟ್ಟೆಗೆ ರವಾನೆ. ನೀರಿನ ಪಸೆ ಇದ್ದುಬಿಟ್ಟರೆ ಮೂರ್ನಾಲ್ಕು ದಿವಸದಲ್ಲಿ ಹಣ್ಣು ಕೊಳೆಯುವ ಸಾಧ್ಯತೆ ಹೆಚ್ಚು.

ಸನಿಹದ ಪುತ್ತೂರು ಮತ್ತು ತನ್ನೂರು ಇಡ್ಕಿದು ಅಂಗಡಿಗಳಲ್ಲಿ ಮಾರಾಟ. ಕಿಲೋಗೆ ಇಪ್ಪತ್ತು ರೂಪಾಯಿ. ಹಣ್ಣಿನ ಗಾತ್ರಕ್ಕೆ ಮಾರುಹೋದ ಗಿರಾಕಿಗಳು ಹುಡುಕಿ ಬರುತ್ತಾರಂತೆ. 'ಹಳ್ಳಿಗಳಲ್ಲಿ ಹಣ್ಣು ತಿನ್ನುವ ಅಭ್ಯಾಸ ಹೆಚ್ಚಾಗಿದೆ. ನನ್ನೂರಿನ ಒಂದು ಅಂಗಡಿಯಲ್ಲಿ ದಿವಸಕ್ಕೆ ಒಂದು ಕ್ವಿಂಟಾಲ್ ಹಣ್ಣುಗಳು (ಚಿಕ್ಕು ಮಾತ್ರವಲ್ಲ) ಮಾರಾಟವಾಗುತ್ತವೆ. ತಿಂದವರು ಫೀಡ್ಬ್ಯಾಕ್ ಹೇಳುತ್ತಾರೆ' ಎನ್ನುತ್ತಾ ಗಣೇಶ್ ಖುಷಿ ಪಡುತ್ತಾರೆ.

'ಕಳೆದ ವರುಷ ನಾಲ್ಕು ಕ್ವಿಂಟಾಲ್ ಹಣ್ಣು ಮಾರಾಟ ಮಾಡಿದೆ. ಈ ವರುಷ ಕೋಳಿಗೊಬ್ಬರ ಸ್ವಲ್ಪ ಹೆಚ್ಚೇ ಉಣಿಸಿದೆ. ಯಾಕೋ ಏನೋ ಇಳುವರಿ ಅರ್ಧಕ್ಕರ್ಧ ಇಳಿಯಿತು. ಬಹುಶಃ ಹೀಟ್ ಹೆಚ್ಚಾಗಿರಬೇಕು' ಎಂಬ ಖೇದ.

ಚಿಕ್ಕು ಹಣ್ಣಿಗೆ ಬಾವಲಿ ಕಾಟ ಇಲ್ಲವೇ? ಗಣೇಶ್ ಭಟ್ ಹೇಳುತ್ತಾರೆ - ಹಣ್ಣಿನ ಗಾತ್ರ ದೊಡ್ಡದಲ್ವಾ, ಹಾಗಾಗಿ ಬಾವಲಿಗೆ ಎತ್ತಿ ಕೊಂಡೊಯ್ಯಲು ಕಷ್ಟ. ಆದರೂ ಸಣ್ಣ ಗಾತ್ರದ ಕಾಯಿಗಳನ್ನು ಅವುಗಳು ಬಿಡುವುದಿಲ್ಲ. ಮಧ್ಯೆ ಮಧ್ಯೆ ಲೋಕಲ್ ತಳಿಯ ಚಿಕ್ಕು ಬೆಳೆದಿದ್ದೇನೆ. ಅವೆಲ್ಲವೂ ಬಾವಲಿಗೆ! ಆದರೂ ಶೇ.20ರಷ್ಟು ಹಾಳಾಗುತ್ತದೆ.

ಗಣೇಶ್ ಬಾಲ್ಯದಲ್ಲಿದಾಗ ಒಂದು ಹಣ್ಣಿನ ತೋಟ ನೋಡಿದ್ದರಂತೆ. ಭವಿಷ್ಯದಲ್ಲಿ ನನಗೂ ಇಂತಹ ತೋಟ ಮಾಡಲೇಬೇಕು ಎಂಬ ಹಠ ತೊಟ್ಟರಂತೆ. ಅದೀಗ ಈಡೇರಿದೆ. ನಮ್ಮ ತೋಟದ ಹಣ್ಣನ್ನು ನಾವೇ ತಿನ್ನುವುದು ಸ್ವಾಭಿಮಾನವಲ್ವಾ.. ಪ್ರಶ್ನಿಸುತ್ತಾರೆ.

ಗಣೇಶ ಭಟ್ಟರ ಮುಖ್ಯ ಕೃಷಿ ಅಡಿಕೆ. ಜತೆಗೆ ತೆಂಗು, ಕೊಕ್ಕೋ, ಜಾಯಿಕಾಯಿ.. 'ಈಗೇನೋ ಅಡಿಕೆ ಧಾರಣೆ ಏರುಗತಿಯಲ್ಲಿದೆ. ಒಂದು ವೇಳೆ ಅಡಿಕೆ ದರ ಬಿದ್ದರೆ? ಏಕಬೆಳೆಯಾದರೆ ಬದುಕು ಅತಂತ್ರ. ಒತ್ತಡದ ಬದುಕು. ಆದರೆ ನನಗೆ ಮಾತ್ರ ಅಂಜಿಕೆಯಿಲ್ಲ. ಎಡೆಬೆಳೆಗಳು (ಉಪಕೃಷಿ) ಖಂಡಿತಾ ಆಧರಿಸುತ್ತವೆ' - ಎಂಬ ಅವರ ಅನುಭವದಲ್ಲಿ ಇತರರಿಗೂ ಕಿವಿಮಾತಿದೆ.
(08255-281193, 9448725829)

0 comments:

Post a Comment