Friday, September 9, 2011

ನೀರಿನ ಇನ್ಸೂರೆನ್ಸಿಗೆ 'ಕಾನೂನಿನ' ಪಾಲಿಸಿ!

'ಅಡಿಕೆ ದರ ಹೀಗೆ ನಿಂತರೆ ತೊಂದರೆಯಿಲ್ಲ. ಈ ವರ್ಷ ಎರಡು ಬೋರ್ ತೆಗೆಸಿದೆ. ಎರಡರಲ್ಲೂ ನೀರು ಅಷ್ಟಕ್ಕಷ್ಟೇ. ಮಳೆಗಾಲ ಕಳೆದ ನಂತರ ಮೂರನೆಯದ್ದು ತೆಗೆಸಬೇಕು' - ಸಮಾರಂಭವೊಂದರ ಊಟದ ಪಂಕ್ತಿಯಲ್ಲಿ ಕೇಳಿಸಿಕೊಂಡ ಮಾತು. ಕುಡಿನೀರಿಗೆ ಬಾವಿ, ತೋಟಕ್ಕೆ ಕೆರೆ ನೀರು ಬಳಕೆ. ಇವೆರಡೂ 'ಕೈಕೊಟ್ಟರೆ' ಕೊಳವೆ ಬಾವಿಯದ್ದು ಉಪಯೋಗಕ್ಕೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಮೂರನೇ ಕೊಳವೆ ಬಾವಿಯನ್ನು ತೋಡಲು ಹೊರಟಿದ್ದರು. ಅದರಲ್ಲೂ ನೀರಿಲ್ಲದಿದ್ದರೆ? ನಾಲ್ಕನೆಯದ್ದು...

ಹಣ ಕೈಯಲ್ಲಿ ಓಡುತ್ತಿದ್ದರೂ, ಮನಸ್ಸು ಬಂದಂತೆ ಕೊಳವೆ ಬಾವಿಗಳನ್ನು ಇನ್ನು ಕೊರೆಯುವಂತಿಲ್ಲ. 'ನನ್ನ ಜಮೀನಲ್ವಾ, ಯಾರು ಕೇಳುವವರು, ನನ್ನಿಷ್ಟ' ಎನ್ನುವ ಧಿಮಾಕಿಗೆ ಕಡಿವಾಣ. ಭೂಒಡಲಿಂದ ನೀರೆತ್ತಿದರೆ ಸಾಲದು, ಅದನ್ನು ಮತ್ತೆ ತುಂಬಿಕೊಡಬೇಕಲ್ವಾ. ಅದಕ್ಕಾಗಿ ಹೊಸ ಮನೆಕಟ್ಟುವಾಗ ಕಡ್ಡಾಯವಾಗಿ ಜಲಮರುಪೂರಣದ ವ್ಯವಸ್ಥೆ.

'ಜಲಭರ್ತಿ'ಗಾಗಿ ಕಾನೂನು

ಅಂತರ್ಜಲವನ್ನು ಹೆಚ್ಚಿಸುವ, ಕೊಳವೆ ಬಾವಿಗಳನ್ನು ಕಡಿಮೆಗೊಳಿಸಿ ಭೂಒಡಲನ್ನು ಮತ್ತೆ ತುಂಬಿಕೊಡಲು 'ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011'ಕ್ಕೆ ರಾಜ್ಯಪಾಲರ ಅಂಕಿತ ಬಿದ್ದಿದೆ. 'ಕುಡಿಯುವ ನೀರಿನ ಮೂಲಗಳ ಸಂರಕ್ಷಣೆ' ಹಿಂದಿರುವ ಆಶಯ. 'ವಿವೇಚನೆಯಿಲ್ಲದೆ ಅಂತರ್ಜಲವನ್ನು ಮೇಲೆತ್ತುವುದಕ್ಕೆ' ಲಗಾಮು. ಸರಕಾರಿ ಪ್ರಣೀತ 'ಕರ್ನಾಟಕ ಅಂತರ್ಜಲ ಪ್ರಾಧಿಕಾರ'ಕ್ಕೆ ಶಿಕ್ಷೆ-ರಕ್ಷೆಯ ಹೊಣೆ.

ಅಧಿನಿಯಮದುದ್ದಕ್ಕೂ 'ಅಧಿಸೂಚಿತ ಪ್ರದೇಶ' ಎಂಬ ಶಬ್ದ ಮರುಕಳಿಸುತ್ತದೆ. ಏನಿದು? ನಿಯಮದ ಉದ್ದೇಶ ಈಡೇರಿಕೆಗಾಗಿ ಯಾವ ಪ್ರದೇಶದಿಂದ ಅಂತರ್ಜಲ ತೆಗೆಯುವುದನ್ನು, ಬಳಸುವುದನ್ನು ಅಥವಾ ಇವೆರಡನ್ನು ವಿನಿಯಮಿಸುವುದು ಸಾರ್ವಜನಿಕ ದೃಷ್ಟಿಯಿಂದ ಆವಶ್ಯಕವೆಂದು ಕಂಡು ಬಂದರೆ ಅಂತಹ ಪ್ರದೇಶವು 'ಅಧಿಸೂಚಿತ ಪ್ರದೇಶ'. ವಿವಿಧ ತಜ್ಞ ಸಂಸ್ಥೆಗಳೊಡನೆ ಸಮಾಲೋಚನೆ ನಡೆಸಿಯೇ ಈ ಪ್ರದೇಶವನ್ನು ಗೊತ್ತು ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ಇಲ್ಲಿ ಅಂತರ್ಜಲದ ಲಭ್ಯತೆಯು ಹೆಚ್ಚಾದಲ್ಲಿ 'ಕಪ್ಪುಪಟ್ಟಿ'ಯಿಂದ ಹೊರಗಿಡಲೂ ಕಾನೂನಿನಲ್ಲಿ ಅವಕಾಶವಿದೆ.

ಅಧಿಸೂಚಿತ ಪ್ರದೇಶದಲ್ಲಿ ಬೇಕಾದಂತೆ ಕೊಳವೆ ಬಾವಿ ಕೊರೆಯುವಂತಿಲ್ಲ. ನೀರನ್ನು ಎತ್ತುವಂತಿಲ್ಲ. ವೈಯಕ್ತಿಕ ಅಥವಾ ಸಮುದಾಯದ ಬಳಕೆಯ ಉದ್ದೇಶಕ್ಕಾಗಿ ಬಾವಿಯನ್ನು ಕೊರೆಯಬೇಕಾದರೆ ಪ್ರಾಧಿಕಾರದಿಂದ ಅನುಮತಿ ಬೇಕು. ಕೈಗಾರಿಕೆ, ವಾಣಿಜ್ಯ, ಮನೋರಂಜನೆ, ಕೃಷಿ, ಗೃಹಕೃತ್ಯ.. ಹೀಗೆ ವಿವಿಧ ಉದ್ದೇಶಗಳಿಗೆ ಬೇರೆ ಬೇರೆ ಅರ್ಜಿ ನಮೂನೆಗಳು, ಶುಲ್ಕಗಳು.

'ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾದುದಲ್ಲ' ಎಂದು ಪ್ರಾಧಿಕಾರದ ಅಣ್ಣಂದಿರಿಗೆ ಮನದಟ್ಟಾದಲ್ಲಿ ಷರತ್ತಿಗೆ ಒಳಪಟ್ಟು ಅನುಮತಿ ಲಭ್ಯ. ಸರಕಾರಿ ವ್ಯವಸ್ಥೆಯಲ್ವಾ. 'ನಾಳೆ ಬಾ' ಸಂಸ್ಕೃತಿ! ಇಷ್ಟು ಹೊತ್ತಿಗೆ ಅರ್ಜಿದಾರ ಹೈರಾಣ! ಅರ್ಜಿ ನಮೂನೆ, ಶುಲ್ಕಗಳು, ಕಚೇರಿಯ ಅಲೆದಾಟ, ಅಧಿಕಾರಿಗಳ ಸಂಪರ್ಕಗಳನ್ನು ಸರಳಗೊಳಿಸಿ ಒಂದೆರಡು ಭೇಟಿಯಲ್ಲಿ ಅನುಮತಿ ಸಿಗುವ ವ್ಯವಸ್ಥೆ ಬರುವಂತಾಗಬೇಕು. ಇಲ್ಲದಿದ್ದರೆ ಹಳೆ ಬಾಟಲಿ, ಹೊಸ ಮದ್ಯ!

ಈ ನಿಯಮದಿಂದ ಮತ್ತೊಂದು ಪ್ರಯೋಜನವಿದೆ - 'ನಿರ್ದಿಷ್ಟ ಅವಧಿಯೊಳಗೆ ಸೂಕ್ತ ಅಳತೆಯ ಕೃತಕ ಮರುಪೂರಣ ರಚನೆ'ಗಳನ್ನು ಅರ್ಜಿದಾರನು ಮಾಡಿಕೊಳ್ಳಬೇಕೆಂಬುದು ಷರತ್ತಿಯಲ್ಲಿ ಕಡ್ಡಾಯವಾಗಿ ಸೇರಿರಲೇಬೇಕು. ಈ ನೆಪದಲ್ಲಾದರೂ ಒಂದಷ್ಟು ಮರುಪೂರಣ ವ್ಯವಸ್ಥೆಗಳು ಅನುಷ್ಠಾನಗೊಳ್ಳಬಹುದು. ಅದೂ ಷರತ್ತು ವಿಧಿಸುವ ಪ್ರಾಮಾಣಿಕ ಅಧಿಕಾರಿಗಳಿದ್ದರೆ..? ಇಲ್ಲದಿದ್ದರೆ 'ಕಡತದಲ್ಲಿ ಮಾತ್ರ ಮುಗಿದುಹೋದ ರಸ್ತೆ'ಗಳಂತೆ ಆಗಬಹುದು.

ಕೃಷಿ, ಕೃಷಿಕರಿಗೆ ಅಪ್ರಿಯವಾದ ಒಂದು ಪ್ಯಾರಾ ಹೀಗಿದೆ -'ಅಧಿಸೂಚಿತ ಪ್ರದೇಶದಲ್ಲಿ ಭತ್ತ, ಕಬ್ಬುಗಳಂತಹ ಹೆಚ್ಚು ನೀರು ಬೇಕಾದ ಬೆಳೆಗಳಿಗೆ ಅನುಮತಿ ನೀಡತಕ್ಕದ್ದಲ್ಲ'. ಕೃಷಿಗೆ ಬಳಸಿದರೆ ಕುಡಿ ನೀರಿಗೆ ತತ್ವಾರವಾದೀತೆಂಬ ಭಯ. ಹತ್ತಿರದ ಕುಡಿಯುವ ನೀರಿನ ಮೂಲಗಳಿಗೆ ಧಕ್ಕೆಯಾದಿತೆಂಬ ದೂರದೃಷ್ಟಿ. ಆದರೆ ಹನಿನೀರಾವರಿ ಅಥವಾ ತುಂತುರು ನೀರಾವರಿಯಲ್ಲಿ ಕೃಷಿ ಮಾಡಬಹುದೆನ್ನುವ ಹಸಿರು ನಿಶಾನೆಯಿದೆ. ಆದರದು ಅಸ್ಪಷ್ಟ.

ಅಧಿಸೂಚಿತ ಪ್ರದೇಶವೆಂದು ಗೊತ್ತು ಮಾಡುವ ಮೊದಲೇ ಭತ್ತವನ್ನೋ, ಕಬ್ಬನ್ನೋ ಬೆಳೆಯುತ್ತಿದ್ದರೆನ್ನಿ. ಗೊತ್ತು ಮಾಡಿದ ಬಳಿಕ ಭತ್ತ, ಕಬ್ಬಿನ ಬದಲಿಗೆ 'ನೀರು ಕಡಿಮೆ ಬೇಡುವ' ಬೆಳೆಗಳನ್ನು ಬೆಳೆದರೂ ಪ್ರಾಧಿಕಾರಕ್ಕೆ ತಿಳಿಸಲೇ ಬೇಕು. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಭತ್ತ ಬೆಳೆಯುವ ಕುರಿತಾದ ಉಲ್ಲೇಖ ಅಧಿನಿಯಮದಲ್ಲಿಲ್ಲ. ಬಹುಶಃ ಮಳೆ ಕಡಿಮೆ ಬೀಳುವ ಪ್ರದೇಶಗಳ ಲಕ್ಷ್ಯವಿರಬಹುದೇನೋ.

ಕೊಳವೆ ಬಾವಿ ಕೊರೆಯಲು ನಮಗಿಷ್ಟವಾದ ಕೊರೆಯಂತ್ರ ಮ್ಹಾಲಿಕರನ್ನು ಕರೆಯುವಂತಿಲ್ಲ. ಸಂಬಂಧಪಟ್ಟ ಕಂಪೆನಿ, ಮ್ಹಾಲಿಕ ಮತ್ತು ಯಂತ್ರದ ಜಾತಕವನ್ನು ಪ್ರಾಧಿಕಾರದಲ್ಲಿ ನೋಂದಾಯಿಸಬೇಕು. 'ಈ ವೃತ್ತಿಯಲ್ಲಿ ಜ್ಞಾನವಿದೆ' ಎಂದು ಮನದಟ್ಟಾದರೆ ಮಾತ್ರ ಲೈಸನ್ಸ್. ಅದಕ್ಕೂ ಷರತ್ತುಗಳ ಮಾಲೆ.

'ಈ ನೆಲದ ಜ್ಞಾನ ಸಹಿ ಹಾಕುವ ಎಷ್ಟು ಮಂದಿ ಅಧಿಕಾರಿಗಳಿಗೆ ಗೊತ್ತಿದೆ? ಏನಿದ್ದರೂ ಕಡತದ ಆಧಾರ. ದಾಖಲೆ ದಪ್ಪವಾದಷ್ಟೂ ನಂಬಿಕೆ, ವಿಶ್ವಾಸ' ಎಂದು ಛೇಡಿಸುತ್ತಾರೆ ನ್ಯಾಯವಾದಿ ವಿಜಯಕೃಷ್ಣ.

ಮಳೆ ನೀರಿನ ಕೊಯ್ಲು

ಜಲಮರುಪೂರಣ ವ್ಯವಸ್ಥೆಯಲ್ಲಿ ಬಹಳ ಜನಪ್ರಿಯವಾಗುತ್ತಿರುವ ಪದ್ಧತಿ. ಬಹುತೇಕ ಮಂದಿ ಸ್ವ-ಇಚ್ಛೆಯಿಂದ ಸ್ಥಾಪಿಸಿದ್ದಾರೆ, ಸ್ಥಾಪಿಸುತ್ತಿದ್ದಾರೆ. ಮಳೆಗಾಲದಲ್ಲಿ ಕಾಪಿಟ್ಟ ನೀರು ಬೇಸಿಗೆಯಲ್ಲಿ ಬಳಕೆ. ವರುಷದಲ್ಲಿ ಮೂರು ತಿಂಗಳಾದರೂ ಮಳೆನೀರು ಬಳಕೆಯಾದರೆ ಅಷ್ಟು ಅಂತರ್ಜಲವನ್ನು ಕಾಪಾಡಿದಂತೆ.

ಪ್ರಾಧಿಕಾರವು ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯದ ಮೂಲಕ ಅಂತರ್ಜಲ ಮರುಪೂರಣಕ್ಕೆ ಅನುಕೂಲ ಮಾಡಿಕೊಡುತ್ತದೆ. ಅಧಿಸೂಚಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಭಿವೃದ್ಧಿ ಸ್ಕೀಂಗಳಲ್ಲಿ ಮಳೆಕೊಯ್ಲನ್ನು ಸೇರಿಸಲು ನಿರ್ದೇಶ. ನೂರು ಚದರ ಮೀಟರು ಅಥವಾ ಅದಕ್ಕೂ ಹೆಚ್ಚು ವಿಸ್ತಾರವಿರುವ ವಾಸಸ್ಥಳ, ವಾಣಿಜ್ಯ ಮತ್ತು ಇತರ ಆವರಣಗಳಲ್ಲಿ ಮಳೆಕೊಯ್ಲಿನ ರಚನೆ ಕಡ್ಡಾಯ. ಅನುಮೋದನೆ ನೀಡುವ ಹಂತದಲ್ಲೇ ಕಟ್ಟಡ ನಕಾಶೆಯಲ್ಲಿ ಮರುಪೂರಣದ ವ್ಯವಸ್ಥೆ ದಾಖಲಾಗಿಸಬೇಕೆನ್ನುವಲ್ಲಿ ವಿಶೇಷ ಗಮನ. ಈ ನಿರ್ದೇಶನಗಳನ್ನು ಧಿಕ್ಕರಿಸಿದರೆ ನೀರು ಮತ್ತು ವಿದ್ಯುತ್ ಸಂಪರ್ಕಗಳ ಶಾಶ್ವತ ಕಟ್!

ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿದ್ದರೂ, ಅನುಷ್ಠಾನದಲ್ಲಿಯೂ ರಾಜಿ ಮಾಡಿಕೊಳ್ಳದ ವ್ಯವಸ್ಥೆ ಆಡಳಿತದಲ್ಲಿ ಬರಬೇಕು. ಇಲ್ಲದಿದ್ದರೆ 'ಕಾನೂನು ನಮಗಲ್ಲ, ನೆರೆಮನೆಗೆ' ಎಂಬಂತಾದೀತು.

ಅನುಮತಿ ಕಡ್ಡಾಯ

ಪ್ರಾಧಿಕಾರದಿಂದ ಅನುಮತಿ ಪತ್ರವನ್ನು ಪಡೆಯದವರಿಗೆ ಹಣಕಾಸು ವ್ಯವಸ್ಥೆ, ವಿದ್ಯುತ್ ಸರಬರಾಜು, ಸರಕಾರದ ಸಬ್ಸಿಡಿಗಳಿಗೆ ಕೊಕ್. ಬಾವಿ ಕೊರೆಯುತ್ತಿದ್ದಂತೆ ಜೆಸಿಬಿ ಯಂತ್ರಗಳ ಮುಟ್ಟುಗೋಲು. ಅರ್ಧದಲ್ಲಿ ಬಾವಿಯ ಕೊರೆತ ನಿಂತಿದ್ದರೂ ಅದನ್ನು ಮುಂದುವರಿಸದಂತೆ ಆದೇಶ.

ಬಾವಿ ತೋಡುವ, ಕೊರೆಯುವ ಆವರಣವನ್ನು ನೀವು ಭದ್ರ ಪಡಿಸಿದರೆ ಅದನ್ನು ಮುರಿದು ಒಳಹೊಕ್ಕು ಸ್ವಾಧೀನ ಪಡಿಸಿಕೊಳ್ಳುವ ಹಕ್ಕು ಪ್ರಾಧಿಕಾರಕ್ಕಿದೆ.

ನೀವು ನೀಡಿದ ಮಾಹಿತಿ ಸುಳ್ಳು ಎಂದು ಮನದಟ್ಟಾದರೆ ಐದು ಸಾವಿರಕ್ಕೂ ಮಿಕ್ಕಿ ಜುಲ್ಮಾನೆ ಅಥವಾ ಆರು ತಿಂಗಳ ಜೈಲು ವಾಸ. ಅನುಮತಿ ಇಲ್ಲದೆ ಬಾವಿ, ಕೊಳವೆ ಬಾವಿ ಕೊರೆದದ್ದಕ್ಕೂ ಇದೇ ಶಿಕ್ಷೆ.

ಇಷ್ಟೆಲ್ಲಾ ಹೇಳಿದರೂ ಇದಕ್ಕೆ ಆಡಳಿತಾತ್ಮಕವಾದ ಸಮಯ, ಮಂಜೂರು, ಹಿಂಬರಹ, ಅಪೀಲು, ಅರ್ಜಿ.. ಮೊದಲಾದ ಪ್ರಕ್ರಿಯೆಗಳು ಜತೆಜತೆಗಿವೆ. ಹಾಗಾಗಿ ಕಾನೂನಿನಿಂದ ತಪ್ಪಿಸಿಕೊಳ್ಳುವ ಜಾಣರಿಗೆ ಜಾಣತನವನ್ನು ಮೆರೆಯಲು ದಾರಿಗಳಿವೆ.

ನೀರೆಚ್ಚರ ಕಾಲದ ಆವಶ್ಯಕತೆ

ಪ್ರಕೃತ ಕಾಲಘಟ್ಟದ ನೀರಿನ ಸ್ಥಿತಿ ಶೋಚನೀಯ. ಕೊಚ್ಚಿಹೋಗುವಷ್ಟು ಮಳೆ ಬಂದರೂ, ಬೇಸಿಗೆಯಲ್ಲಿ ಕುಡಿನೀರಿಗೆ ತತ್ವಾರದ ರಾಜಧಾನಿಯ ಚಿತ್ರ ಮುಂದಿದೆ. ಮೈಲುಗಟ್ಟಲೆ ದೂರದಿಂದ ನೀರು ತುಂಬಿದ ಕೊಡವನ್ನು ಹೊತ್ತು ತರುವ ಗ್ರಾಮೀಣ ದೃಶ್ಯಕ್ಕಿನ್ನೂ ಶಾಪಮೋಕ್ಷವಾಗಿಲ್ಲ. ಎಲ್ಲವೂ ಕಾನೂನಿನಿಂದ ನಿಯಂತ್ರಿಸಲು ಸಾಧ್ಯವಿಲ್ಲವಲ್ಲಾ. ಬದುಕಿನಲ್ಲಿ ನೀರಿನೆಚ್ಚರ ಬಂದಾಗ, ಕಾನೂನು ಬೇಕಾಗದು.

'ಬೋರಿನ ಹಿಂದೆ ಓಡುವ ಸ್ಥಿತಿ ನಿಲ್ಲಬೇಕು. ಹೆಚ್ಚು ಹೆಚ್ಚು ಕೊರೆಯುತ್ತಾ ಹೋದರೆ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ. ನೀರಿಂಗಿಸುವ ಪ್ರಕ್ರಿಯೆಗಳು ಕಾನೂನಿನಿಂದ, ಒತ್ತಡ ಹೇರಿ ತರಬಹುದಾದ ಬದಲಾವಣೆಯಲ್ಲ, ಸ್ವ-ನಿಯಂತ್ರಣ ಮತ್ತು ಸ್ವ-ನಿಧರ್ಾರಗಳಿಂದ ಆಗಬೇಕಾದುದು. ಕೊಳವೆ ಬಾವಿಯಿಂದ ತೆರೆದ ಬಾವಿಗೆ ಮನಸ್ಸು ಟ್ಯೂನ್ ಆಗಬೇಕಾದುದು ಮೊದಲಾದ್ಯತೆಯ ಕೆಲಸ' - ಜಲತಜ್ಞ ಶ್ರೀ ಪಡ್ರೆಯವರ ಅಭಿಮತ.

ಗುಡ್ಡದ ಮೇಲೆ ನೀರಿಂಗಿಸುವುದು, ನೀರಿನ ಅತಿ ಬಳಕೆಗೆ ಕಡಿವಾಣ, ಕಾಡು ಬೆಳೆಸುವುದು, ಮದಕ-ಕೆರೆ-ಹಳ್ಳಗಳ ಅಭಿವೃದ್ಧಿ, ಇಂಗುಬಾವಿ.. ಕಡಿಮೆ ವೆಚ್ಚದಲ್ಲಿ ಮಾಡಿಕೊಳ್ಳಬಹುದಾದ ನೀರಿಂಗಿಸುವ ಮಾದರಿಗಳು. 'ಗುಡ್ಡದ ಎತ್ತರದ ಜಾಗದಲ್ಲಿ ನೀರಿಂಗಿಸುವುದು ಮತ್ತು ಕಾಡು ಬೆಳೆಸುವ ಪ್ರಯತ್ನಗಳು ವೈಯಕ್ತಿಕ ಮಟ್ಟದಲ್ಲಿ ಆಗಬೇಕು. ಇದು ನೀರಿನ ಇನ್ಸೂರೆನ್ಸ್' ಎನ್ನುತ್ತಾರೆ ಪಡ್ರೆ.

ಎಸ್ಸೆಮ್ಮೆಸ್: 'ರಾಜಧಾನಿಯಲ್ಲಿ ಮಳೆ ನೀರಿನ ಕೊಯ್ಲಿಗೆ ಇಪ್ಪತ್ತು ಕೋಟಿ ರೂಪಾಯಿ ಮೀಸಲು' ಸುದ್ದಿ. ** ಇಪ್ಪತ್ತು ಕೋಟಿಯ ಕೆಲಸದಲ್ಲಿ ಭೂಮಿಗೆಷ್ಟು? ಜೇಬಿಗೆಷ್ಟು?

(ದಿನಾಂಕ 6-9-2011ರ ಉದಯವಾಣಿಯ 'ನೆಲದ ನಾಡಿ' ಅಂಕಣದಲ್ಲಿ ಪ್ರಕಟಿತ ಬರೆಹ)

0 comments:

Post a Comment