Monday, September 26, 2011

ಅಪರೂಪದ ಸಸಿ-ಕಸಿ ಪ್ರೇಮಿ : ಗುರುರಾಜ್ ಬಾಳ್ತಿಲ್ಲಾಯ



ಹಣ್ಣು, ಹೂವಿನ ಗಿಡಗಳನ್ನು ನರ್ಸರಿಯಿಂದ ಕೊಳ್ಳುವಾಗ ಕಸಿ ಗಿಡಗಳತ್ತ ಬಹುತೇಕರ ಒಲವು. ಉತ್ತಮ ಹಣ್ಣು, ಹೂಗಳನ್ನು ಕಸಿ ಗಿಡಗಳಿಂದ ಪಡೆಯಹುದೆನ್ನುವ ನಿರೀಕ್ಷೆ. ಒಂದೇ ತಾಯಿ ಗಿಡಗಳಲ್ಲಿ ಹಲವು ತಳಿಗಳ ವೈವಿಧ್ಯಗಳನ್ನು ಕಸಿ ಮೂಲಕ ಪಡೆಯಬಹುದು. ಹಾಗಾಗಿಯೇ ನರ್ಸರಿಗಳತ್ತ ಜನ ಆಕರ್ಷಿತರಾಗುತ್ತಾರೆ.

ಉಡುಪಿಯ ಗುರುರಾಜ ಬಾಳ್ತಿಲ್ಲಾಯರು ಕಸಿ ತಜ್ಞರು. ಬಾಲ್ಯದಿಂದಲೇ ಕಸಿಯ ಆಸಕ್ತ. ಆರಂಭದಲ್ಲಿ ದಾಸವಾಳಕ್ಕೆ ಕಸಿ ಕಟ್ಟಿದರು. ಯಶವಾಯಿತು. ಕಸಿಯ ಹುಚ್ಚು ಇವರೊಳಗೆ ಕಸಿಯಾಗಿ, ಚಿಗುರಿ, ಮರವಾಗಿದೆ!

ಮೂಲತಃ ಧರ್ಮಸ್ಥಳದವರು. ಹೊಟ್ಟೆಪಾಡಿಗಾಗಿ ಹಿರಿಯ ಕಸಿತಜ್ಞ ಆಲಂಕಾರಿನ ನಾರಾಯಣ ಕೆದಿಲಾಯರ ಸಹಾಯಕರಾಗಿ ದುಡಿತ. ಕಸಿಯ ಸೂಕ್ಷ್ಮ ವಿಚಾರಗಳ ಕಲಿಕೆ. ವಾಣಿಜ್ಯಿಕವಾಗಿ ನರ್ಸರಿಯನ್ನು ರೂಪಿಸುವತ್ತ ಅನುಭವ.

2000ನೇ ಇಸವಿಯಲ್ಲಿ ಉಡುಪಿಗೆ ಬಿಡಾರ (ಮನೆ) ಶಿಪ್ಟ್. ಅಲ್ಲಿಂದ ಕಸಿ ಹವ್ಯಾಸವು ವೃತ್ತಿಯಾಯಿತು. ಕೋ.ಲ.ಕಾರಂತರೊಂದಿಗೆ ಒಡನಾಟ. ಅಪರೂಪದ ಗಿಡ, ಹಣ್ಣುಗಳ ಪರಿಚಯ. ತಾನೂ ನರ್ಸರಿ ಹೊಂದಬೇಕೆಂಬ ಸಂಕಲ್ಪ. ಗೇರು, ಮಾವು, ಮೇಣರಹಿತ ಹಲಸು, ಹೂ ಗಿಡಗಳ ತಯಾರಿ. ಈಚೆಗೆ ಹಲಸಿನ ಕಸಿಯತ್ತ ಆಸಕ್ತ. ಹಲಸಿನ ಮೇಳಗಳು ಬಾಳ್ತಿಲ್ಲಾಯರ ಕಸಿ ಹಸಿವಿಗೆ ಪೂರಕವಾಯಿತು.

ಕಸಿಯಲ್ಲಿ ಹಲವು ವಿಧಗಳು. ಮೃದುಕಾಂಡ ಕಸಿ, ಮೊಗ್ಗುಕಸಿ (ಕಣ್ಣುಕಸಿ), ಸೈಡ್ಗ್ರಾಪ್ಟಿಂಗ್.. ಹೀಗೆ. ಒಂದೂವರೆ ತಿಂಗಳು ಪ್ರಾಯದ ಹಲಸಿನ ಬೀಜದ ಗಿಡಕ್ಕೆ ಮೃದುಕಾಂಡ ಕಸಿ ಸೂಕ್ತ. ಕುಡಿಯನ್ನು ಆರಿಸುವಲ್ಲಿ ಎಚ್ಚರ ಬೇಕು, ಬಿಸಿಲು ಬಿದ್ದ ಜಾಗದಿಂದಲೇ ಕುಡಿಯ ಆಯ್ಕೆ, ಅದರಲ್ಲಿ ಚಿಗುರು ಎಲೆ ಇರಬಾರದು, ಯಾವ ಮರದಿಂದ ಕುಡಿ ತೆಗೆಯುತ್ತೀರೋ ಆ ಮರದ ಗೆಲ್ಲು ತೀರಾ ನೆರಳಿನಲ್ಲಿದ್ದರೆ ಅದರ ಕುಡಿ ಬೇಡ - ಎಂಬ ಸಲಹೆ ನೀಡುತ್ತಾರೆ. ಕಸಿ ಕಟ್ಟಿದ ಬಳಿಕ ತಾಯಿ ಗಿಡದ ಬುಡದಲ್ಲಿ ಬರುವ ಚಿಗುರನ್ನು ತೆಗೆಯಬೇಕು.
ತಾಯಿ ಗಿಡಕ್ಕಾಗಿ (ಅಡಿ ಗಿಡ) ಬೀಜವನ್ನು ಮೊಳಕೆಗೆ ಹಾಕುತ್ತೇವೆ. ಒಂದೊಂದರದ್ದೂ ಬೇರೆ ಬೇರೆ ಗುಣ. ಬೀಜದಿಂದ ಹುಟ್ಟುವ ಗಿಡದಲ್ಲಿ ವಂಶವಾಹಿ ಗುಣ ಹೆಚ್ಚು. ಕಸಿ ಕಟ್ಟಿದ ಬಳಿಕ ಯಾವ ವಂಶದ ಗುಣ ಹೆಚ್ಚಿರುತ್ತದೋ ಅದರದ್ದೇ ಆದ ಫಲ ನೀಡುವ ಸಂಭವ ಹೆಚ್ಚಂತೆ.

ಬೀಜದ ಗಿಡದಲ್ಲಿ ಫಲ ಬಿಡಲು ಆರೇಳು ವರುಷವಾದರೆ, ಕಸಿ ಗಿಡದಲ್ಲಿ ನಾಲ್ಕೇ ವರುಷದಲ್ಲಿ ಇಳುವರಿ. ಒಂದು ವರ್ಷದಲ್ಲಿ ನಾಲ್ಕೈದು ಸಾವಿರದಷ್ಟು ಕಸಿ ಗಿಡಗಳನ್ನು ಬಾಳ್ತಿಲ್ಲಾಯರು ತಯಾರಿಸುತ್ತಾರೆ. ನರ್ಸರಿಗಳಿಂದ ಬೇಡಿಕೆ. 'ಹಳ್ಳಿ ಹಳ್ಳಿಯ ಅಂಗಡಿಗಳಲ್ಲಿ ಕಸಿ ಗಿಡಗಳು ಸಿಗುವಂತಾಗಬೇಕು' ಎನ್ನುವ ಆಶೆ.

ಇವರದು ಬಿಡುವಿರದ ದುಡಿಮೆ. ದಿನದ ಹನ್ನೆರಡು ಗಂಟೆ ಬೆವರಿಳಿದರೂ ಕಾಯಕಷ್ಟವಿಲ್ಲ! ದಿವಸಕ್ಕೆ ನಾಲ್ಕುನೂರು ಕಸಿ ಗಿಡ ತಯಾರಿಸಿದ್ದುಂಟು. ಈಚೆಗೆ ದ.ಕ.ಜಿಲ್ಲೆಯ ಉಬರು ಎಂಬಲ್ಲಿ ಜರುಗಿದ ಹಲಸಿನ ಹಬ್ಬದಲ್ಲ್ಲಿ ಕಸಿ ಕಟ್ಟುವ ತರಬೇತಿಯಿತ್ತು. ಕಸಿ ಸಂಶಯಗಳಿಗೆ ಪಟಪಟನೆ ಉತ್ತರಿಸುವ ಬಾಳ್ತಿಲ್ಲಾಯರ ನಿಜವಾದ ಪ್ರತಿಭೆ ಕಂಡು ಎಲ್ಲರೂ ದಂಗು.

ಉತ್ತಮವಾದ ಹಲಸು-ಮಾವು ಪತ್ತೆಯಾದರೆ ಸಾಕು, ಬಾಳ್ತಿಲ್ಲಾಯರು ಕಾಲಿಗೆ ಚಕ್ರಕಟ್ಟಿಕೊಂಡು ಓಡುತ್ತಾರೆ. ಕುಡಿ ತಂದು ಕಸಿ ಕಟ್ಟುತ್ತಾರೆ. ಆಸಕ್ತರಿಗೆ ನೀಡುತ್ತಾರೆ. ಎಲ್ಲರಲ್ಲೂ ಉತ್ತಮವಾದ ಗಿಡಗಳು ಇರಬೇಕೆಂಬ ಹಪಹಪಿಕೆ. ಬೇರೆಯವರು ಕುಡಿಯನ್ನು ಆಯ್ಕೆ ಮಾಡಿದರೆ ಇವರಿಗೆ ಸಮಾಧಾನವಿಲ್ಲ. ನಾನು ಕಟ್ಟುವ ಕಸಿಗೆ ತನ್ನ ಆಯ್ಕೆಯದೇ ಕುಡಿ.

ನಾಲ್ಕೈದು ವರುಷದಿಂದ ಹಲಸಿನ ಕಸಿ ಗಿಡಗಳಿಗೆ ಬೇಡಿಕೆ ಹೆಚ್ಚು. ಅದರಲ್ಲೂ ಮೇಣವಿಲ್ಲದ ಹಲಸಿನತ್ತ ಜನರ ಒಲವು. ಹಲಸಿನ ಕುರಿತು ಜನರಲ್ಲಿ ಅರಿವು ಹೆಚ್ಚುತ್ತಿದೆ.

ತಳಿ ಸಂಗ್ರಹಗಳು ಮೊದಲು ಗ್ರಾಮಮಟ್ಟದಲ್ಲಿ ಆರಂಭವಾಗಬೇಕು. ನಂತರ ತಾಲೂಕು, ಜಿಲ್ಲಾ ಮಟ್ಟದಲ್ಲಿ ತಳಿ ಆಯ್ಕೆಯ ಪ್ರಕ್ರಿಯ ಶುರುವಾದರೆ ಅಂತಹುದನ್ನು ಕಸಿ ಕಟ್ಟಿ ಒಳ್ಳೆಯ ಹಣ್ಣು ಪಡೆಯಬಹುದು. ಮಾರುಕಟ್ಟೆಯನ್ನು ಮಾಡಬಹುದು ಎಂಬುದು ಬಾಳ್ತಿಲ್ಲಾಯರ ಸಲಹೆ.

ಕಸಿ ಗಿಡಗಳಿಗೆ ಬಾಯಿಗೆ ಬಂದ ದರವನ್ನು ಹೇಳಿ ಹಣವನ್ನು 'ದೋಚುವ' ಸ್ವಭಾವದವರಲ್ಲ. ಅವರೆಂದೂ ಹಣದ ಹಿಂದೆ ಓಡಿದವರಲ್ಲ, ಓಡುವವರೂ ಅಲ್ಲ. ಮನುಷ್ಯರಿಗಿಂತಲೂ ಗಿಡಗಳ ಫ್ರೆಂಡ್ಶಿಫ್ ಅವರಿಗೆ ಖುಷಿ ಕೊಡುತ್ತದೆ. ಇವರು ನಮ್ಮ ನಡುವಿನ ಅಪರೂಪದ ಸಸಿ ಪ್ರೇಮಿ.

(ಮೊ : ೯೭೩೧೭೩೪೬೮೮)

0 comments:

Post a Comment