ನಾಲ್ಕು ವರುಷದ ಹಿಂದೆ. ಹಿರಿಯ ಪತ್ರಕರ್ತ 'ಶ್ರೀ'ಪಡ್ರೆಯವರಿಗೆ ಜಾಲತಾಣದಲ್ಲಿ ಹವಾಯ್ ದ್ವೀಪದ ಹಣ್ಣು ಕೃಷಿಕ, ಪತ್ರಕರ್ತ ಕೆನ್ ಲವ್ ಸಂಪರ್ಕ. ಜಾಲತಾಣದ ಮೂಲಕ ಹವಾಯಿತ ಹಣ್ಣುಗಳ ಲೋಕದ ವೀಕ್ಷಣೆ. ನಿತ್ಯ ಮಿಂಚಂಚೆ (ಈಮೆಯಿಲ್) ವಿನಿಮಯ. ಮಾಹಿತಿಗಳ ಕೊಡುಕೊಳ್ಳುವಿಕೆ. ಕೆನ್ ಚಟುವಟಿಕೆಗಳ ಪೂರ್ಣದರ್ಶನ. ಕೊನೆಗೆ 'ನಾನು ಭಾರತಕ್ಕೆ ಬರಲಿದ್ದೇನೆ' ಎಂಬ ಮಿಂಚಂಚೆ. ತಿಂಗಳೊಳಗೆ ಹವಾಯಿಯಿಂದ ಕನ್ನಾಡಿಗೆ ಕೆನ್ ಹಾರಿ ಬಂದುಬಿಟ್ಟರು. ಇದು ಜಾಲತಾಣ ಬೆಸೆದ ಬಂಧ.
ಭಾರತಕ್ಕೆ ಅದರಲ್ಲೂ ಕನ್ನಾಡಿನ ಕರಾವಳಿಗೆ ಕೆನ್ಲವ್ ಮೂರು ಸಲ ಬಂದರು. ಕೇರಳದ ವಯನಾಡಿನ 'ಉರವು' ಸಂಘಟಿಸಿದ ಹಲಸಿನ ಮೇಳವನ್ನು ಉದ್ಘಾಟಿಸಿದ್ದರು. ಪುತ್ತೂರಿನ ಗಿಡ ಗೆಳೆತನ ಸಂಘ 'ಸಮೃದ್ಧಿ' ಆಯೋಜಿಸಿದ ಸಂವಾದದಲ್ಲಿ ಪಾಲ್ಗೊಂಡರು. ದಕ್ಷಿಣದ ಕನ್ನಡದ ಕೆಲವು ತೋಟಗಳಿಗೆ ಭೇಟಿಯಿತ್ತು ಕೃಷಿಮನೆಯ ಆತಿಥ್ಯವನ್ನು ಅನುಭವಿಸಿದರು. ಈ ವರುಷದ ಆದಿಯಲ್ಲಿ ಕೇರಳದ ರಾಜಧಾನಿಯಲ್ಲಿ ಜರುಗಿದ 'ರಾಷ್ಟ್ರೀಯ ಹಲಸು ಹಬ್ಬ'ದಲ್ಲಿ ಓಡಾಡಿದರು. ಹವಾಯಿಯ ಹಲಸಿನ ಜ್ಞಾನವನ್ನು ಹಂಚಿಕೊಂಡರು. ಹಲಸಿನ ಸೊಳೆಯನ್ನು ಬಹುಕಾಲ ಕಾಪಿಡುವ ರೆಸಿಪಿಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದರು.
ಕೆನ್ ಲವ್ ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಪ್ರೀತಿಸಿ, ಅನುಸರಿಸಲು ಪ್ರಯತ್ನಿಸಿದವರು. ಇಲ್ಲಿಗೆ ಬಂದಿದ್ದಾಗ ಎರಡೂ ಕೈಜೋಡಿಸಿ 'ನಮಸ್ಕಾರ' ಎನ್ನುತ್ತಾ ಬಾಯಿತುಂಬಾ ನಗುತ್ತಿದ್ದ ಕೆನ್ ನಿತ್ಯ ನೆನಪಾಗುತ್ತಾರೆ. 'ಶ್ರೀ'ಪಡ್ರೆಯವರ ಅಮ್ಮ ಬಡಿಸಿದ ಹಲಸಿನ ಕಾಯಿಯ ದೋಸೆ ತಿಂದು, ಅದರೆ ರೆಸಿಪಿಯನ್ನು ಬರೆದುಕೊಂಡು ಹೋಗಿ ತಮ್ಮನೆಯಲ್ಲಿ ಮಾಡಿ ನೋಡಿದ್ದಾರೆ. ಈಚೆಗೆ ಬಂದಿದ್ದಾಗ ಬೆಣ್ಣೆ ಮಾಡುವ ವಿಧಾನ ನೋಡಿ ಬೆರಗಾದರು ಕೆನ್. ಪ್ಯಾಕೆಟ್ ಬೆಣ್ಣೆ ನೋಡಿದ್ದ ಕೆನ್ 'ಮೊಸರಿನಿಂದ ಬೆಣ್ಣೆ ತೆಗೆಯುವುದನ್ನು ಮೊದಲ ಬಾರಿಗೆ ನೋಡಿದೆ' ಎಂದಿದ್ದರು.
ಕನ್ನಾಡಿನ ನಂಟನ್ನು ಹವಾಯಿಯಲ್ಲೂ ಊರಲು ಶ್ರೀ ಪಡ್ರೆಯವರನ್ನು ಹವಾಯಿಗೆ ಕರೆಸಿಕೊಂಡರು. ಸೆಪ್ಟೆಂಬರ್ 11 ಮತ್ತು 13ರಂದು ಪಡ್ರೆಯವರಿಂದ ಭಾರತದ ಹಣ್ಣುಗಳ ಕುರಿತು ಮಾಹಿತಿ, ಪವರ್ಪಾಯಿಂಟ್ ಪ್ರಸ್ತುತಿ. ಇಲ್ಲಿನ 'ಪುನರ್ಪುಳಿ' ಹಣ್ಣು ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳತ್ತ ಆಸಕ್ತರಾದವರೇ ಹೆಚ್ಚು. ಅಲ್ಲಿನ ಹಸುರು, ಕೃಷಿ, ಹಣ್ಣು, ಜೀವನ.. ಮೊದಲಾದ ಕುರಿತು ಶ್ರೀ ಪಡ್ರೆಯವರು ಸ್ಕೈಪ್ ಸಂದರ್ಶನದಲ್ಲಿ ವಿಚಾರ ಬಿಚ್ಚಿಟ್ಟರು. ಅವರೊಂದಿಗಿನ ಮಾತುಕತೆಯ ಆಯ್ದ ಸರಕು.
ಹಸಿರುಡುಗೆಯ ದ್ವೀಪ
ಹವಾಯ್ ಹಲವು ದ್ವೀಪಗಳ ಸಮುಚ್ಚಯ. ಅಮೇರಿಕಾದ ಸ್ವರ್ಗವೆಂದೇ ಪ್ರಸಿದ್ಧ. 'ಬಿಗ್ ಐಲ್ಯಾಂಡ್' ದೊಡ್ಡ ದ್ವೀಪ. ರಜಾ ಕಳೆಯಲು ಬರುವ ಪ್ರವಾಸಿಗರು ಹೆಚ್ಚು. 'ಅಗ್ನಿಪರ್ವತ' - ಪ್ರವಾಸಿ ಆಕರ್ಷಣೆ. ಬಂದವರಿಗೆ ತೋರಿಸುವುದು ಅಲ್ಲಿನವರಿಗೆ ಸಂತೋಷ.
ಅನತಿ ದೂರದಲ್ಲಿರುವ ಸಮುದ್ರದ ಹವೆ, ಹಸುರು ಮತ್ತು ಹೂಹಣ್ಣುಗಳ ವೈವಿಧ್ಯತೆ ಹವಾಯಿಗರ ಬಂಡವಾಳ. ಇದನ್ನು ಪ್ರವಾಸೋದ್ಯಮಕ್ಕಾಗಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಲ್ಲಿನ ಯಾವ ಭಾಗಕ್ಕೆ ಹೋದರೂ ಮುದ ಅರಸಿ ಬರುವವರಿಗೆ ಸಮೃದ್ಧ. ನಮ್ಮ ಕೇರಳದ ಹಾಗೆ.
ಹವಾಯ್ ಎತ್ತರ ತಗ್ಗುಳ್ಳ ಭೂಪ್ರದೇಶ. ಪಶ್ಚಿಮ ಭಾಗದ ಕೊನಾ ಪ್ರದೇಶ ಕಾಫಿ ಬೆಳೆಗೆ ಪ್ರಸಿದ್ಧ. 'ಕೋನಾ ಕಾಫಿ' ಅಂತಲೇ ಜನಪ್ರಿಯ. ಜಗತ್ತಿನ ಮುಂಚೂಣಿ ಶ್ರೇಣಿಯ ಕಾಫಿಗಳಲ್ಲಿ ಒಂದು. ಕೋನಾ ಕಾಫಿಗೆ ಕಿಲೋಗೆ ಎರಡೂವರೆ ಸಾವಿರ ರೂಪಾಯಿ! ಅಷ್ಟೊಂದು ದುಬಾರಿಯಾ..! ಇದರಲ್ಲಿ ರೈತರಿಗೆ ಸಿಗುವುದು ಮಾತ್ರ ಅತ್ಯಲ್ಪ. ಕಾರ್ಮಿಕ ಸಮಸ್ಯೆ, ಬೆರ್ರಿ ಬೋರರ್ ಕಾಟಗಳು ಕಾಫಿ ಉದ್ದಿಮೆಗೆ ದೊಡ್ಡ ಸವಾಲು. ಸುಮಾರು ಏಳುನೂರು ಮಂದಿ ಕಾಫಿ ಕೃಷಿಕರು ಮುನ್ನೂರೈವತ್ತು ಬ್ರಾಂಡ್ಗಳಲ್ಲಿ ಕಾಫಿ ಪುಡಿ ತಯಾರಿಸುತ್ತಾರೆ.
ಉಕ್ಕಿದ ಲಾವಾರಸದ ಗಟ್ಟಿಯಾದ ಪುಡಿ ಮೇಲ್ಮಣ್ಣು. 'ಮಣ್ಣು' ಅಪರೂಪ. ನಮ್ಮ ಗದಗದ ಭಾಗದಲ್ಲಿನ ಕಪ್ಪುಬಣ್ಣದ ಮಣ್ಣು. ಹಣ್ಣಿನ ಕೃಷಿಗೆ ಉತ್ತಮ. ಕಾಫಿಯಂತಹ ಬೆಳೆಗಳಿಗೆ ಮಾತ್ರ ಗೊಬ್ಬರ ಉಣಿಕೆ. ಮಿಕ್ಕಂತೆ ಯಾವ ಹಣ್ಣಿನ ಕೃಷಿಗೂ ಗೊಬ್ಬರ ಬೇಕಾಗಿಲ್ಲ. ಮಣ್ಣೇ ಗೊಬ್ಬರ! ಅಷ್ಟೊಂದು ಫಲವತ್ತತೆ.
ಹವಾಯ್ ಹಣ್ಣು ಕೃಷಿಗೆ ಖ್ಯಾತಿ. ಬೆಳೆಯುತ್ತಿದ್ದರೂ ಕಾನೂನು ಕಟ್ಟಳೆಯಿಂದಾಗಿ ಬಹುತೇಕ ಹಣ್ಣುಗಳು ಆಮದಾಗುತ್ತಿರುವುದು ದುರ್ದ್ಯೆವ. ಕಳೆದ ಶತಮಾನ ಪೂರ್ವಭಾಗದಲ್ಲಿರಬೇಕು, ಒಮ್ಮೆ ಕ್ಯಾಲಿಫೋರ್ನಿಯಾಕ್ಕೆ ಆಮದಾದ ಬೆಣ್ಣೆ ಹಣ್ಣಿನಲ್ಲಿ ಹುಳವೊಂದು ಗೋಚರಿಸಿತಂತೆ. ಅಲ್ಲಿಂದ ಹಣ್ಣುಗಳ ರಫ್ತಿಗೆ ಕೊಕ್. ಈ ನಿರ್ಬಂಧ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನಗಳಿಗೆ ಇಲ್ಲ.
'ಇವರು ಹಣ್ಣುಗಳನ್ನು ಹೆಚ್ಚು ಬೆಳೆಯುತ್ತಾರೆ, ಬಳಸುತ್ತಾರೆ' ಎಂದು ಮೇಲ್ನೋಟಕ್ಕೆ ಕಂಡರೂ ವಾಸ್ತವ ಹಾಗಿಲ್ಲ. ಕಾರ್ಮಿಕರ ಅಲಭ್ಯತೆಯಿಂದಾಗಿ ಹಣ್ಣುಗಳು ಕೊಯ್ಯದೆ ಹಾಳಾಗುವುದೇ ಹೆಚ್ಚು. ರುಚಿರುಚಿಯಾದ ಹಣ್ಣುಗಳಿದ್ದರೂ ಪರದೇಶದ ಹಣ್ಣುಗಳ ರಫ್ತಿನ ಧಾಳಿಯಿಂದಾಗಿ 'ಸ್ಥಳೀಯತೆ' ನಾಶವಾಗುತ್ತಿದೆ. ಉದಾ: ಬೆಣ್ಣೆ ಹಣ್ಣು. ವಿದೇಶದಿಂದ ತರಿಸಿದ್ದಕ್ಕೆ ಜನರು ಹಣದ ಮುಖ ನೋಡುವುದಿಲ್ಲ. ಆ ಹಣ್ಣಿಗಿಂತಲೂ ಗುಣಮಟ್ಟದಲ್ಲಿ, ರುಚಿಯಲ್ಲಿ ದುಪ್ಪಟ್ಟಾಗಿರುವ ಸ್ಥಳೀಯ ಹಣ್ಣು ಅರ್ಧ ಕ್ರಯಕ್ಕೂ ಬೇಡ!
ಲಾಂಗಾನ್, ರಂಬುಟಾನ್, ಕುಮ್ಕಾಟ್, ಮೈಸೂರು ಬೆರಿ, ರಂಗ್ಪುರ್ ಲಿಂಬೆ, ದಾಲ್ಚಿನ್ನಿ, ಲೊಕಾಟ್, ದೀವಿಗುಜ್ಜೆ, ಜಂಬು, ಅಬಿಯು, ಮೊಂಬಿನ್, ಇನ್ನೂರು ಜಾತಿಯ ಬೆಣ್ಣೆಹಣ್ಣು, ನೂರು ವಿಧದ ಬಾಳೆ, ಜಬೋಟಿಕಾಬಾ, ಪ್ಯಾಶನ್ಫ್ರುಟ್, ಸ್ಟಾರ್ಫ್ರುಟ್, ಬುದ್ಧಾಸ್ಹ್ಯಾಂಡ್, ಗ್ರೀನ್ ಸಪೋಟಾ, ಲಿಲಿಕೋ.. ಹೀಗೆ ಒಂದೇ ಎರಡೇ.
ಭಾರತದ ಹತ್ತಾರು ಹಣ್ಣು, ಹೂವುಗಳು ಅಲ್ಲಿವೆ. ನಮಗೆ ಪರಿಚಯವಿಲ್ಲದ ಹವಾಯಿಯದೇ ಸಾಕಷ್ಟಿದೆ. ದಾಸವಾಳಕ್ಕೆ ಮೊದಲ ಮಣೆ. ಅದು ಹವಾಯಿಯ ರಾಷ್ಟ್ರೀಯ ಪುಷ್ಪ. 'ಇದು ಇಲ್ಲಿನ ಮೂಲ ಜಾತಿ' ಎನ್ನುತ್ತಾ ಮನೆಯಂಗಳದಲ್ಲಿ ನೆಡುವುದು ಮಾನಿನಿಯರಿಗೆ ಹೆಮ್ಮೆ. ದಾಸವಾಳಕ್ಕೆ ಎಷ್ಟು ಖ್ಯಾತಿಯಿದೆಯೋ ಅಷ್ಟೇ 'ಗೋಸಂಪಿಗೆ' ಹೂವಿಗೂ ಇದೆ. ನೀರೆಯರು ಹೂಹಾರವನ್ನು ಹೆಮ್ಮೆಯಿಂದ ಧರಿಸಿಕೊಳ್ಳುವುದು, ಕಿವಿಯಲ್ಲಿಟ್ಟು ಸಂಭ್ರಮಿಸುವುದು, ಮನೆಗೆ ಆಗಮಿಸಿದ ಅತಿಥಿಗಳಿಗೆ ನೀಡುವುದು ಪ್ರಿಸ್ಟೇಜ್. ಇದು ರಾಷ್ಟ್ರೀಯ ಪುಷ್ಟವೇನೋ ಅನ್ನಿಸುವಷ್ಟು ವ್ಯಾಪಕತೆ. ಹವಾಯಿಗರಿಗೆ ಗಾಢ ಬಣ್ಣದ ಅಂಗಿ ಇಷ್ಟ. ಅದರ ಮೇಲೊಂದು ಗೋಸಂಪಿಗೆಯ ಚಿತ್ರ.
ಹಣ್ಣುಗಳನ್ನು ಮೌಲ್ಯವರ್ಧನೆ ಮಾಡುವುದು ಹವ್ಯಾಸವಲ್ಲ, 'ಅಭ್ಯಾಸ'. ಇವು ರೈತರ ಮಾರುಕಟ್ಟೆಯಲ್ಲಿ ಮಾರಾಟ. 'ಮೆಕೆಡೇಮಿಯಾ ನಟ್' - ನಮ್ಮಲ್ಲಿನ ಗೇರು ಬೀಜದ ಹಾಗಿರುವಂತಹುದರಿಂದ ನೂರಾರು ಉತ್ಪನ್ನಗಳು. ಸಾಕಷ್ಟು ಪ್ಯಾಕ್ಟರಿಗಳು, ಉದ್ದಿಮೆಗಳು. ಇದಕ್ಕೆ ಕಾಳುಮೆಣಸು ಸೇರಿಸಿದ ಚಾಕೋಲೇಟ್ ತಿನ್ನದವರು ಕಡಿಮೆ. ಗೃಹ ಉದ್ದಿಮೆಗಳೂ ಸಾಕಷ್ಟಿವೆ. ಆಹಾರ ಉದ್ದಿಮೆ ಹವಾಯಿಯಲ್ಲಿ ಬಲವಾಗಿದೆ. ಬಯಸಿ ಬರುವ ಪ್ರವಾಸಿಗರಿಗೆ ಕೈಗೆಟಕುವ ಪೂರೈಕೆ.
ಮನೆಕಟ್ಟಲು ಕಾಡನ್ನು ನಾಶ ಮಾಡುವುದಿಲ್ಲ. ಹಸುರು ಮಧ್ಯೆ ನಡುನಡುವೆ ಮನೆ. ನಗರೀಕರಣ ಬಂದರೂ ಉಳಿದ ಕಡೆ ಇರುವುದಕ್ಕಿಂತ ಹೆಚ್ಚು ವೈವಿಧ್ಯವನ್ನು ಉಳಿಸುವುದರಲ್ಲಿ ಶಕ್ತರು. ಅಮೇರಿಕಾದ ಉಳಿದ ಪ್ರದೇಶದಲ್ಲಿ ಇಂತಹ ಹಸುರು, ತಂಪಿನ ವಾತಾವರಣ ಸಿಗಲಾರದು. ಪೇರಳೆ ಇಲ್ಲಿ ಕಾಡು ಬೆಳೆ. ಕೆಂಪು ಬಣ್ಣ. 'ಪ್ರಥಮ ಬಾರಿಗೆ ನಾನು ಪೇರಳೆ ಜ್ಯೂಸ್ ಕುಡಿದು ಸವಿದೆ' ಎನ್ನುತ್ತಾರೆ ಪಡ್ರೆ.
ಅರ್ಥಪೂರ್ಣ ಸಮ್ಮೇಳನ
'ಹವಾಯ್ ಟ್ರಾಫಿಕಲ್ ಫ್ರುಟ್ ಗ್ರೋವರ್ಸ್' ಸಂಸ್ಥೆಯು ಹಣ್ಣುಗಳ ಮಾರಾಟ, ಕೃಷಿ ಮತ್ತು ರೈತರ ಕಷ್ಟ-ಸುಖಗಳ ವಿನಿಮಯ-ಪರಿಹಾರ ಕುರಿತಾದ ಮಾತುಕತೆಗೆ ಸಮ್ಮೇಳನ ಏರ್ಪಡಿಸುತ್ತಿದೆ. ಈ ವರುಷ ಸೆ.11, 13ರಂದು ನಡೆದಿತ್ತು. ಅರ್ಥಪೂರ್ಣ ಸಮ್ಮೇಳನ. ಉತ್ತಮ ಕಲಾಪ. 'ಸಮಯ ಕೊಲ್ಲುವ' ಕಲಾಪವಲ್ಲ. ಶ್ರೀ ಪಡ್ರೆಯವರಿಂದ ದಿಕ್ಸೂಚಿ ಭಾಷಣ.
'ಹಲಸು ಮತ್ತು ಪುನರ್ಪುಳಿಯ ಕುರಿತು ಹವಾಯಿಗರು ಬಹಳ ಕುತೂಹಲಿಗರು. ಸಮ್ಮೇಳನದ ಪ್ರದರ್ಶನದಲ್ಲಿ ಸಾಕಷ್ಟು ಹಣ್ಣುಗಳ ಪ್ರದರ್ಶನವಿತ್ತು. ಅಲ್ಲಿನ ಹಣ್ಣುಗಳ ಪ್ರದರ್ಶನ ಇದೆಯಲ್ಲಾ, ಇಡೀ ಹವಾಯಿಗೆ ಬೆಳಕಿಂಡಿ' ಎನ್ನುತ್ತಾರೆ ಪಡ್ರೆ. ಅಪರೂಪದ ಹಣ್ಣಿನ ಚಿತ್ರಗಳುಳ್ಳ 2012ರ ಕ್ಯಾಲೆಂಡರನ್ನು ಸುಂದರವಾಗಿ ಮುದ್ರಿಸಿ, ಸಮ್ಮೇಳನದಲ್ಲಿ ಹಂಚಿದ್ದಾರೆ. ಬಹುಕಾಲ ನೆನಪಿಟ್ಟುಕೊಳ್ಳಬಹುದಾದ ಕ್ಯಾಲೆಂಡರ್.
ಭಾರತದ ನಮಗೆ ಇವರು ಶ್ರೀಮಂತರೆಂದು ಕಂಡರೂ, ನಮ್ಮಲ್ಲಿನ ಸಮಸ್ಯೆ, ಸಂವಹನ ಕೊರತೆ ಸಾಕಷ್ಟಿದೆ. ತಂತ್ರಜ್ಞಾನದ ಅತ್ಯಂತ ಗರಿಷ್ಠ ಬಳಕೆ ಮಾಡುವ ಈ ಊರಲ್ಲಿ ಕೂಡಾ ರೈತ-ರೈತರ ನಡುವೆ ಜಗತ್ತಿನ ಉಳಿದ ಕಡೆ ಏನು ನಡೆಯುತ್ತಿದೆ ಎಂಬ ಕುರಿತು ಮಾಹಿತಿಯ ಕತ್ತಲೆಯಿದೆ.
ಹಣ್ಣು ಪ್ರಿಯರಿಗೆ ಹುಚ್ಚು ಕಟ್ಟಿಸುವ ಪ್ರದೇಶ ಹವಾಯ್. ಉಷ್ಣ ಪ್ರದೇಶದ ಹಣ್ಣುಗಳ ಆಸಕ್ತಿ ಇದ್ದವರಿಗೆ ಹವಾಯ್ ಅಧ್ಯಯನ ತಾಣ.
(20-9-2011-ಉದಯವಾಣಿಯಲ್ಲಿ ಪ್ರಕಟವಾದ 'ನೆಲದ ನಾಡಿ' ಅಂಕಣ ಬರಹ )
1 comments:
ಅರ್ಥಪೂರ್ಣ ಲೇಖನ, ಧನ್ಯವಾದಗಳು. ಇನ್ನೂ ಹೆಚ್ಚಿನ ನಿರೇಕ್ಷೆ ನಿಮ್ಮಿಂದ.
ವಿವಿಧ ಹಣ್ಣಿನ ಬೆಳೆಗಳ ಬಗ್ಗೆ ನಿರೀಕ್ಷಿಸಬಹುದೇ ?
Post a Comment