Thursday, September 29, 2011

ಕೃಷಿಕನಿಂದ ಕೃಷಿಕರಿಗಾಗಿ..ಅಡಿಕೆ ಸಾಬೂನು


ಕೃಷಿಕ ಬದನಾಜೆ ಶಂಕರ ಭಟ್ ಕೃಷಿ ಸಂಶೋಧಕ. ಅಡಿಕೆಯ ಪರ್ಯಾಯ ಉತ್ಪನ್ನಗಳ ಕುರಿತು ಎರಡು ದಶಕಗಳ ಸಂಶೋಧನೆ. ಅಡಿಕೆಯ (ಪೂಗ) ಸಾಬೂನು ಈಚೆಗಿನ ಯಶಸ್ವೀ ಉತ್ಪನ್ನ.


ಶಿರಸಿಯ ಬಾಲಚಂದ್ರ ಹೆಗಡೆ ಸಾಯಿಮನೆಯವರು ಮಂಗಳೂರಿನ ಕ್ಯಾಂಪ್ಕೋದಲ್ಲಿ ಪ್ರದರ್ಶಿಸಿದ ಚೀನಾ ನಿರ್ಮಿತ ಅಡಿಕೆ ಸಾಬೂನನ್ನು ವೀಕ್ಷಿಸಿದ ಮೇಲೆ, ಬದನಾಜೆಯವರ ಮನದೊಳಗಿದ್ದ ಸಾಬೂನೂ ಫಾರ್ಮುಲಾಕ್ಕೆ ಮರುಜೀವ.


ಕಾಸರಗೋಡು ಜಿಲ್ಲೆಯಲ್ಲಿ ಸಾಬೂನು ಫ್ಯಾಕ್ಟರಿ ಹೊಂದಿದ್ದ ಏತಡ್ಕ ಶ್ರೀಧರ ಭಟ್ಟರ ಫ್ಯಾಕ್ಟರಿಯಲ್ಲಿ ಮೊದಲ ಪ್ರಯೋಗಕ್ಕೆ ನಾಂದಿ. ಅಡಿಕೆ ಸಾರದೊಂದಿಗೆ ಇತರ ಕಚ್ಚಾವಸ್ತುಗಳ ಪೂರೈಕೆ. ಮೊದಲು ಉತ್ಪನ್ನ ಬಾರ್ ಸೋಪು. ಚೊಚ್ಚಲ ಯತ್ನದಲ್ಲೇ ನಿರೀಕ್ಷೆಯ ಯಶ. ಗುಣಮಟ್ಟ ಪ್ರಾಪ್ತಿ. ಸಮಾನ ಮನಸ್ಕ ಆಪ್ತೇಷ್ಟರಿಗೆ ಸಾಬೂನು ನೀಡಿ ಅಭಿಪ್ರಾಯ ಸಂಗ್ರಹಿಸಿದರು.


ಮುಂದಿನ ಹಂತ ಸ್ನಾನದ ಸಾಬೂನು ತಯಾರಿ. ಮಂಗಳೂರು ಯೆಯ್ಯಾಡಿಯ ಅಶೋಕ ಆಗ್ರೋ ಇಂಡಸ್ಟ್ರೀಸ್ ಮಾಲಿಕರಾದ ಗೋಪಿನಾಥ ಮಲ್ಯರೊಡನೆ ಮಾತುಕತೆ. ಫಾರ್ಮುಲಾ ನೀಡಿಕೆ. ತುಳಸಿ, ಮಲ್ಲಿಗೆ, ಗುಲಾಬಿ, ನಿಂಬೆ ಮತ್ತು ಹಣ್ಣಿನ ಪರಿಮಳವಿರುವ ಐದು ಪರಿಮಳಗಳ ಸಾಬೂನು ತಯಾರಾಯಿತು.


ಫೀಡ್ಬ್ಯಾಕ್ ಪಡೆಯಲು ಸಾಬೂನನ್ನು ಹಂಚಿದರು. ಪರಿಚಿತ ಡಾಕ್ಟರ್ಗಳಿಗೆ ನೀಡಿದರು. 'ಏನಿಲ್ಲವೆಂದರೂ ಮೂರು ಸಾವಿರ ಸಾಬೂನು ನೀಡಿರಬಹುದು' ಎನ್ನುತ್ತಾರೆ ಭಟ್. ಗುಣಮಟ್ಟ, ಬಣ್ಣ, ಪರಿಮಳ ಎಲ್ಲರಿಗೂ ಮೆಚ್ಚುಗೆಯಾಯಿತು. ಮಾರುಕಟ್ಟೆ ಮಾಡುವತೆ ವಿನಂತಿಸಿದವರೇ ಅಧಿಕ. ಸಾಬೂನಿನಲ್ಲಿ ಶುದ್ಧ ತೆಂಗಿನೆಣ್ಣೆಯ ಬಳಕೆ ಮತ್ತು ಕೃತಕ ಪರಿಮಳವಿಲ್ಲ.


ಶಂಕರ ಭಟ್ಟರ ಮಗಳು-ಅಳಿಯ ಬಿ.ಸಿ.ರೋಡಿನಲ್ಲಿದ್ದಾರೆ. ಮಗಳು ಡಾ. ಸ್ಮಿತಾ ಆಯುರ್ವೇದ ವೈದ್ಯೆ. ಅಳಿಯ ಮಕ್ಕಳ ತಜ್ಞ ಡಾ.ಮಹೇಶ್. ಇವರಿಂದ ಸಾಬೂನು ಮಾರುಕಟ್ಟೆ ಮಾಡಲು ಒತ್ತಾಸೆ. ಸಾಬೂನಿಗೆ 'ಪೂಗ ಸಿಂಗಾರ್' ಎಂಬ ನಾಮಕರಣ. ಉದ್ಯಮ ಮಾಡುವ ಉಮೇದು ನನಗಿಲ್ಲ. ಅಡಿಕೆಯ ಗುಣ ಎಲ್ಲರಿಗೂ ಗೊತ್ತಾಗಲಿ ಎಂಬುದು ಮುಖ್ಯ ಉದ್ದೇಶ ಎನ್ನುತ್ತಾರೆ.


‘ನಾನು ಗ್ಲಿಸರಿನ್ ಸಾಬೂನು ಬಳಸುತ್ತಿದ್ದೆ. ಈಚೆಗೆ ಅಡಿಕೆ ಸಾಬೂನು ಬಳಸಲು ಆರಂಭಿಸಿದೆ. ಗ್ಲಿಸರಿನ್ ಸಾಬೂನು ಸ್ನಾನದ ನಂತರ ಏನು ಮುದ ನೀಡುತ್ತದೋ, ಅದನ್ನೇ ಈ ಸಾಬೂನೂ ಕೊಡುತ್ತದೆ ಎನ್ನುತ್ತಾರೆ’ ಮಣಿಪಾಲದ ಶ್ಯಾಮ ಭಟ್.


ಚರ್ಮ ಕಪ್ಪಾಗುವ ಸಮಸ್ಯೆಯಿದ್ದವರ ಚರ್ಮ ಸಹಜ ಸ್ಥಿತಿಗೆ ಬಂದಿದೆ. ಕೂದಲು ಉದುರುವ ಪ್ರಮಾಣ ಕಡಿಮೆಯಾಗಿದೆ. ಮೊಡವೆಗಳ, ಕಣ್ಣಿಗೆ ಕಾಣದ ಗಾಯಗಳ ಶಮನವಾಗಿದೆ. ಇವೆಲ್ಲಾ ಬಳಸಿದವರ ಅನುಭವಗಳು. ಅಡಿಕೆಯ ಸಾರಕ್ಕೆ ಚರ್ಮದ ಸೂಕ್ಷ್ಮಗ್ರಂಥಿಗಳಲ್ಲಿರುವ ಕೊಳೆ ತೆಗೆಯುವ ಸಾಮಥ್ರ್ಯವಿದೆ ಎಂದು ವಿಶ್ಲೇಷಿಸುತ್ತಾರೆ ಭಟ್.


ನಮ್ಮಿಂದ ಸಾಬೂನು ಕೊಂಡೊಯ್ದು ಬಳಸಿದವರ ತಲೆಹೊಟ್ಟು, ಮೊಡವೆ, ತುರಿಕಜ್ಜಿ, ಬೆವರುಸಾಲೆಗಳು ಕಡಿಮೆಯಾಗಿವೆಯಂತೆ, ದನಿಗೂಡಿಸುತ್ತಾರೆ ಡಾ.ಮಹೇಶ್.‘


ಶಂಕರ ಭಟ್ಟರ ಪ್ರಕಾರ, ಅಡಿಕೆ ಸಾರಕ್ಕೆ ಯಾವುದೇ ಪರಿಮಳವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯಿದೆ. ಹೀಗಾಗಿ ಸ್ನಾನದ ನಂತರವೂ ಪರಿಮಳ ಉಳಿದುಕೊಳ್ಳುತ್ತದೆ. ಎಪ್ಪತ್ತೈದು ಗ್ರಾಮಿನ ಸಾಬೂನಿನ ಬೆಲೆ ಇಪ್ಪತ್ತು ರೂಪಾಯಿ. ತುಳಸಿ, ಗುಲಾಬಿ ಮತ್ತು ಮಲ್ಲಿಗೆ ಪರಿಮಳಕ್ಕೆ ಜನರೊಲವು. ನೈಸರ್ಗಿಕ ಪರಿಮಳ ಬಳಸುವ ಕಾರಣ ಸಾಬೂನಿಗೆ ಅಸಲು ಹೆಚ್ಚು.


ಶಂಕರ ಭಟ್ಟರ ಸಹೋದರ ಮಂಗಳೂರಿನ ಮಂಗಳಾ ನರ್ಸಿಂಗ್ ಹೋಮಿನ ಡಾ.ಗಣಪತಿ ತಮ್ಮ ವ್ಯಾಪ್ತಿಯ ವೈದ್ಯರು, ಪರಿಚಿತರಿಗೆ 'ಪೂಗ ಸಿಂಗಾರ್' ಸಾಬೂನು ಪರಿಚಯಿಸುತ್ತಿದ್ದಾರೆ. ಹೀಗೆ ಆಸ್ಪತ್ರೆ, ಮೆಡಿಕಲ್ ಶಾಪ್, ಕೆಎಂಎಫ್ ಬೂತ್, ಸೊಸೈಟಿ, ಹಳ್ಳಿಗಳ ಅಂಗಡಿಗಳಲ್ಲಿ ಸಿಗುವಂತಾದರೆ ಅಡಿಕೆಯ ಸಾಬೂನು ಯಶಸ್ಸು ಗಳಿಸಬಹುದು.


ಬದನಾಜೆಯವರ ಈ ಶ್ರಮದ ಹಿಂದೆ ಎರಡೂವರೆ ವರುಷದ ಬೆವರಿದೆ. ಲಕ್ಷ ರೂಪಾಯಿಗೂ ಹೆಚ್ಚು ಕಿಸೆಯಿಂದಲೇ ವೆಚ್ಚವಾಗಿದೆ. ಪುತ್ರ ದಿ. ಈಶ್ವರ ಕುಮಾರ್ ಅವರ ನೆನಪಿನ 'ಮಂಗಳಾ ಹರ್ಬಲ್ ಪಾರ್ಕ್, ವಿಟ್ಲ' ಮೂಲಕ ನಡೆಯುತ್ತಿರುವ ಈ ಶಾಹಸದಲ್ಲಿ ಬದನಾಜೆ ಕುಟುಂಬ ಸದಸ್ಯರೆಲ್ಲರ ಪ್ರೋತ್ಸಾಹ, ಶ್ರಮವಿದೆ.


'ಎಲ್ಲಾ ಅಡಿಕೆ ಬೆಳೆಗಾರರು ಈ ಸಾಬೂನನ್ನು ಬಳಸಿದರೆ ಸಾಕು, ಅದುವೇ ದೊಡ್ಡ ಮಾರುಕಟ್ಟೆ,' ಸಾಬೂನನ್ನು ಬಳಸುತ್ತಿರುವ ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಅವರ ಹೇಳಿಕೆಯಲ್ಲಿ ಮಾರುಕಟ್ಟೆ ಸೂಕ್ಷ್ಮವಿದೆ. ಈ ಸಾಬೂನನ್ನು ಬಿಡುಗಡೆ ಮಾಡಿದ್ದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆಯವರು. ಮಾರುಕಟ್ಟೆ ಕುದುರಿಸಲು ಬದನಾಜೆಯವರೊಂದಿಗೆ ಪ್ರತಿಷ್ಠಾನ, ಕ್ಯಾಂಪ್ಕೋ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಫಾರ್ಮರ್ ಫಸ್ಟ್ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಇತರ ಅಡಿಕೆ ಸಂಸ್ಥೆಗಳು ಕೈಜೋಡಿಸಿವೆ.

(08255 - 233231, 239229 )

0 comments:

Post a Comment