


ಮುಳಿಯ ವಾಣೀ ಶರ್ಮರಲ್ಲಿ ಭೋಜನದ ಹೊತ್ತು. 'ಇದು ಯಾವ ತರಕಾರಿಯ ಪದಾರ್ಥ ಅಂತ ಹೇಳಿ' ಎನ್ನುತ್ತಾ ಬಡಿಸುತ್ತಿದ್ದರೆ. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಉತ್ತರ ಹೇಳಿದಂತೆ ಒಂದಿಬ್ಬರು 'ದೀವಿಹಲಸು, ಎಳೆಗುಜ್ಜೆ' ಎಂದರು. ಎಲ್ಲರ ಅಂಕಗಳೂ ಶೂನ್ಯ ಸಂಪಾದನೆ. 'ಇದು ನೀರ್ಗುಜ್ಜೆ' ಅವರೇ ಉತ್ತರ ಹೇಳಿದರು.
ಗುಜ್ಜೆ (ಹಲಸಿನ ಎಳೆ ಕಾಯಿ) ಕೇಳಿದ್ದೇವೆ. ಇದು ನೀರ್ಗುಜ್ಜೆ, ನೀರಿನ ಗುಜ್ಜೆ.. ನೀರಿನಾಶ್ರಯವಿರುವಲ್ಲಿ ಹೆಚ್ಚು ಬೆಳೆಯುವ ಗಿಡವಾದ್ದರಿಂದ 'ನೀರ್ಗುಜ್ಜೆ.' ಪ್ರಾದೇಶಿಕವಾಗಿ 'ನೀರ್ಕುಜುವೆ, ನೀರ್ಹಲಸು, ಹೆಂಬ ಹಲಸು' ಎಂಬ ಹೆಸರಿದೆ. ನಿಜಕ್ಕೂ ಅಪರೂಪದ್ದೇ. ಫಕ್ಕನೆ ನೋಡುವಾಗ ಥೇಟ್ ಎಳೆ ಹಲಸಿನಂತಿದೆ. ಹೆಬ್ಬಲಸಿನ ಹೋಲಿಕೆ. ದೀವೀ ಹಲಸಿನ ಗಾತ್ರ. ಪದಾರ್ಥದೊಂದಿಗಿನ ಹೋಳುಗಳು ಎಳೆ ಹಲಸಿನ ಗುಜ್ಜೆಯದೇ ರುಚಿ, ಸ್ವಾದ.
ಒಳ್ಳೆಯ ನೀರಿರುವ ಜಾಗದಲ್ಲಿ ಬೇಗ ಫಸಲು. ಬಹುವಾರ್ಶಿಕ ತರಕಾರಿ. ಬೀಜದಿಂದಲೇ ಗಿಡ. ಕಾಯಿ ಬಿಟ್ಟು ಒಂದೂವರೆ ತಿಂಗಳ ನಂತರ, ಮೂರು ತಿಂಗಳ ಒಳಗೆ ಬೆಳೆದ ಎಳೆ ಹಲಸು ಬಳಕೆಗೆ ಸೂಕ್ತ. ಬಲಿತರೆ ಅಷ್ಟಕ್ಕಷ್ಟೇ. ಗಿಡಗಳ ಒಂದೊಂದು ಗೆಲ್ಲುಗಳ ತುದಿಯಲ್ಲಿ ಎರಡರಿಂದರಿಂದ ಮೂರು ಕಾಯಿಗಳು. ನೀರ್ಗುಜ್ಜೆಯ ಮೈಮೇಲೆ (ಹಾರ್ಡ್ ಅಲ್ಲದ) ದೊಡ್ಡದಾದ ಮುಳ್ಳುಗಳಿವೆ. ಇದರಿಂದಾಗಿ ಬಾವಲಿಗಳಿಂದ ರಕ್ಷೆ.
ಗಿಡ ಮಾಡಿದ ಐದು ವರ್ಷದಲ್ಲೇ ಫಸಲು. ಆರಂಭದಲ್ಲಿ ಗಂಡು ಹೂಗಳ ಸಂಖ್ಯೆ ಜಾಸ್ತಿ. ಬಳಿಕ ಸರಿಹೋಗುತ್ತದೆ. ಸದೃಢವಾಗಿ ಬೆಳೆಯಲು ಬಿಸಿಲು ಬೇಕು. ತೀರಾ ನೆರಳಿನಲ್ಲಿ ಕಷ್ಟ. ಇದರ ಎಲೆಯು ದೀವೀಹಲಸನ್ನು ಹೋಲುತ್ತದೆ. ಒಂದೊಂದು ಕಾಯಿ ಅರ್ಧದಿಂದ ಒಂದು ಕಿಲೋದವರೆಗೆ ತೂಕ. 'ಆಗಸ್ಟ್ ತಿಂಗಳಲ್ಲಿ ದೀವೀ ಹಲಸು ಮುಗಿದಿರುತ್ತದೆ. ನಂತರ ಇದರ ಸರದಿ. ವರುಷಕ್ಕೆ ಎರಡು-ಮೂರು ಸಲ ಇಳುವರಿ ಕೊಡುತ್ತದೆ' ಎನ್ನುತ್ತಾರೆ ವಿಟ್ಲ (ದ.ಕ.) ಅಳಿಕೆ ಸನಿಹದ ವೆಂಕಟಕೃಷ್ಣ ಶರ್ಮ.
ಒಂದು ಕಾಯಲ್ಲಿ ಸುಮಾರು ಮೂವತ್ತೈದರಿಂದ ನಲವತ್ತು ಬೀಜಗಳು. ಹಲಸಿನ ಬೀಜದಂತೆ ಚಿಕ್ಕವು. ಇದನ್ನು ಕೂಡ ಪದಾರ್ಥ ಮಾಡಬಹುದೇನೋ? ಕಾಯಿ ಬಲಿಯುವುದಕ್ಕಿಂತ ಮೊದಲೇ ನಾವು ಪದಾರ್ಥ ಮಾಡುವುದರಿಂದ ಇನ್ನೂ ಪ್ರಯತ್ನಿಸಿಲ್ಲ ಎನ್ನುತ್ತಾರೆ ವಾಣೀ ಶರ್ಮ. ಮರದಲ್ಲಿ ಕಾಯಿಕಚ್ಚಿ ನಾಲ್ಕು ತಿಂಗಳಾಗುವಾಗ ಹಣ್ಣಾಗಿ ಬೀಳುತ್ತದೆ.
'ನೀರ್ಗುಜ್ಜೆಯ ಸಿಪ್ಪೆಯನ್ನು ಕೆತ್ತಿ, ಎರಡಾಗಿ ಭಾಗ ಮಾಡಿ ನೀರಿನಲ್ಲಿ ಹಾಕಿ. ಅದರ ಹಾಲಿನಂತಹ ಮೇಣ ತೊಳೆದುಹೋಗುತ್ತದೆ. ಹೋಳುಗಳನ್ನಾಗಿ ಮಾಡಿ, ಅರ್ಧ ಗಂಟೆ ಮಜ್ಜಿಗೆಯಲ್ಲಿ ನೆನೆ ಹಾಕಿ. ಹೋಳಲ್ಲಿದ್ದ ಚೊಗರು (ಕನೆರು) ಬಿಟ್ಟುಕೊಡುತ್ತದೆ. ನಂತರ ಮಜ್ಜಿಗೆಯನ್ನು ಚೆಲ್ಲಿ, ಹೋಳುಗಳನ್ನು ಮಾತ್ರ ಪದಾರ್ಥ ಮಾಡಿ. ಒಳ್ಳೆಯ ರುಚಿ. ನಾವು ಪಲ್ಯ, ಗಸಿ, ಸಾಂಬಾರು, ಕಾಯಿಹುಳಿ ಮಾಡುತ್ತೇವೆ' ಎನ್ನುತ್ತಾರೆ ಶರ್ಮ.
ಶರ್ಮರಲ್ಲಿ ಎರಡು ಮರವಿದೆ. ಒಂದರಲ್ಲಿ ಇಳುವರಿ. ಹತ್ತು ವರುಷದ ನಂತರ ಒಂದು ಮರವು ಐವತ್ತರಿಂದ ನೂರು ಕಾಯಿವರೆಗೆ ಬಿಡಬಹುದು ಎಂಬ ಅಂದಾಜು. ಮರ ವಿಶಾಲ. ಅತಿ ಎತ್ತರ. ಉದ್ದಗಲ ವಿಶಾಲ. ನಿತ್ಯ ಹಸುರಿನ ಮರ. ಮಾರಾಟ ದೃಷ್ಟಿಯಿಂದ ಯಶಸ್ಸಾಗದೇನೋ. ಕಾರಣ, ಬಹುತೇಕರಿಗೆ ಇದೊಂದು ತರಕಾರಿ ಅಂತ ಗೊತ್ತಿಲ್ಲ
'ನಮ್ಮಲ್ಲಿ ಮನೆ ಬಳಕೆಗೆ ಮೀರಿದ್ದು ಆತ್ಮೀಯರಿಗೆ, ಸ್ನೇಹಿತರಿಗೆ ನೀಡುತ್ತೇನೆ. ಕೇಳಿದವರಿಗೆ ಗಿಡ ಮಾಡಿ ಕೊಟ್ಟದ್ದುಂಟು. ಇದು ನಿರ್ಲಕ್ಷ್ಯಕ್ಕೆ ಒಳಗಾದ ತರಕಾರಿ' ಎಂದು ನೀರ್ಗುಜ್ಜೆಯ ನಂಟನ್ನು ಶರ್ಮಾ ವಿವರಿಸುತ್ತಾರೆ.
0 comments:
Post a Comment