Tuesday, March 23, 2010

ಗೊಬ್ಬರದಬ್ಬರವಿಲ್ಲದ 'ಜಿನೈನ್'

ಸೀಮೆಗೊಬ್ಬರ (ರಾಸಾಯನಿಕ) ರಹಿತವಾಗಿ ಬಾಳೆ ಬೆಳೆಯಲು ಯಾಕೆ ಸಾಧ್ಯವಾಗುತ್ತಿಲ್ಲ - ನೋಡ್ಬೇಕು ಎಂಬ ಹಠವಿತ್ತು. ಬೆಳೆದು ನಿಂತ ಬಾಳೆ, ಗೊನೆಯನ್ನು ಕಂಡಾಗ ಸಾಧ್ಯ ಅಂತ ವಿಶ್ವಾಸ ಬಂತು' - ಬಾಳೆ ಕೃಷಿಯ ಯಶದ ಖುಷಿಯಲ್ಲಿ ಮಾತಿಗೆಳೆಯುತ್ತಾರೆ ಸಕಲೇಶಪುರ ಸನಿಹದ ಯಡೆಹಳ್ಳಿಯ ಆರ್.ಭಾಗ್ಯವತಿ ರುದ್ರಪ್ಪ.

ಮನೆಗೆ ತಾಗಿಕೊಂಡೇ ಎರೆಗೊಬ್ಬರದ ತೊಟ್ಟಿ. ಅದರ ಸನಿಹ ಸ್ವಲ್ಪ ಇಳಿಜಾರಾದ ಭೂಮಿಯಲ್ಲಿ ನೂರು 'ಜಿನೈನ್' ತಳಿಯ ಬಾಳೆ ನೆಟ್ಟು ಒಂದು ವರ್ಷವಾಯಿತು. ಆಳೆತ್ತರದ ಗೊನೆಗಳು ಇನ್ನೇನು ಕಟಾವ್ ಆಗಲಿದೆ!

ಗಿಡದಿಂದ ಗಿಡಕ್ಕೆ ಆರಡಿ ಅಂತರ. ಒಂದೂವರೆ ಅಡಿ ಆಳದ ಹೊಂಡ. ಎರಡಡಿ ಉದ್ದಗಲ. ಇದಕ್ಕೆ ಎರೆಗೊಬ್ಬರ ಹಾಕಿ ಗಿಡ ನಾಟಿ. ಹತ್ತು ದಿನಕ್ಕೊಮ್ಮೆ ನಿಯಮಿತ ಸ್ಲರಿ ಮತ್ತು ಎರೆಗೊಬ್ಬರ ಉಣಿಕೆ. ಯಾವುದೇ ಸಿಂಪಡಣೆ ಮಾಡಿಲ್ಲ. 'ಗೊನೆ ಬಿಟ್ಟ ನಂತರವೂ ಸ್ಲರಿ, ಗೊಬ್ಬರ ಇದ್ದೀವಿ. ತೊಂದರೆಯಾಗಿಲ್ಲ. ಮೂರ್ನಾಲ್ಕು ಗಿಡಗಳಿಗೆ ಕಟ್ಟೆ ರೋಗ ಬಂತು. ಅದನ್ನು ಸಮೂಲ ತೆಗೆದು ಪುನಃ ಗಿಡ ನೆಟ್ವಿ' ಎನ್ನುತ್ತಾರೆ ಭಾಗ್ಯವತಿ. ಎರೆಹುಳಗಳನ್ನು ಬಾಳೆ ಬುಡಕ್ಕೆ ಬಿಟ್ಟಿದ್ದಾರೆ. ಅಲ್ಲೂ ಕೂಡಾ ಎರೆಗೊಬ್ಬರದ ಕಾರ್ಖಾನೆ ಸ್ಥಷ್ಟಿಯಾಗಿವೆ!

ಬೇಸಿಗೆಯಲ್ಲಿ ನೀರಾವರಿ. ಮನೆಕೆಲಸವನ್ನು ಹೊಂದಿಸಿಕೊಂಡು ಬಾಳೆ ಕೆಲಸ. ನೀರು, ಸ್ಲರಿ, ಗೊಬ್ಬರ, ಒಣಗಿದ ಬಾಳೆಕೈಗಳನ್ನು ಕಡಿದು ಎರೆತೊಟ್ಟಿಗೆ ಸೇರಿಸುವುದು ಮುಂತಾದ ಕೆಲಸಕ್ಕೆ ಇವರಿಗೆ ಸಹಾಯಕರು ಬೇಡ. ದಿನಕ್ಕೆ ಒಂದು ಗಂಟೆ ಇವರ ಕೈ ಕೆಸರು! ಗಿಡ ನಾಟಿ ಮಾಡುವಾಗ ಮಾತ್ರ ಸಹಾಯಕರ ಅವಲಂಬನೆ.

ಬಾಳೆ ನೆಟ್ಟು ಒಂದು ವರ್ಷವಾಯಿತು. 'ಆರುವರೆ ತಿಂಗಳಲ್ಲೇ ಗೊನೆ ಬಿಟ್ಟಿದೆ'. ಹದಿನೈದಡಿ ಎತ್ತರಕ್ಕೆ ಬೆಳೆದಿದೆ. ಗೊನೆಯ ಭಾರ ತಾಳಲು ಮರದ ಕವಲನ್ನು ಕೊಟ್ಟಿದ್ದಾರೆ. 'ಸೀಮೆ ಗೊಬ್ಬರ ಹಾಕಿದರೆ ಗಿಡ ಎತ್ತರಕ್ಕೆ ಬರುವುದಿಲ್ಲ. ಇದು ನೋಡಿ, ಎಷ್ಟು ಎತ್ತರ ಬೆಳೆದಿದೆ' ಎನ್ನುವಾಗ ಅವರಿಗೆ ಖುಷಿ.

ಒಂದು ಗೊನೆ 35-45 ಕಿಲೋ ಭಾರ. ಗೊನೆಯೊಂದು ಏನಿಲ್ಲವೆಂದರೂ 350-400 ಗಳಿಸಿಕೊಡುತ್ತದೆ. ಕಿಲೋಗೆ 10-12 ರೂಪಾಯಿ. ಬಂದು ಒಯ್ಯುವ ಕೆಲವು ನಿಶ್ಚಿತ ಗಿರಾಕಿಗಳು. ಗೊನೆಯಲ್ಲಿ ಒಳ್ಳೆಯ ಬೆಲೆಯ ನಿರೀಕ್ಷೆಯಲ್ಲಿ ರಾಜಧಾನಿಗೊಯ್ಯುವ ಸಿದ್ಧತೆಯಲ್ಲಿದ್ದಾರೆ ವೈ.ಸಿ.ರುದ್ರಪ್ಪನವರು.

ಇವರಿಗೆ ಐವತ್ತೆಕ್ರೆ ಕೃಷಿಭೂಮಿ. ಕಾಫಿ, ಭತ್ತ ಸಿಂಹಪಾಲು. ಹತ್ತು ವರ್ಷಗಳ ಹಿಂದೆ ನಾಲ್ಕೂವರೆ ಎಕ್ರೆಯಲ್ಲಿ ಸೀಮೆ ಗೊಬ್ಬರ ಬಳಸಿ ಬಾಳೆ ಬೆಳೆದ ಅನುಭವ. ಇವರು ಸಾಮಾಜಿಕ ಕಾರ್ಯಕರ್ತ. ಸ್ಥಳೀಯ ನಿಸರ್ಗ ಸಾವಯವ ಕೃಷಿಕರ ಸಂಘದ ಅಧ್ಯಕ್ಷ. ಗಂಡನ ಅನುಪಸ್ಥಿತಿಯಲ್ಲಿ ಭಾಗ್ಯವತಿಯವರ ಉಸ್ತುವಾರಿಕೆ.

'ಅಂದಿನ ಬಾಳೆ ಕೃಷಿಯ ಕಷ್ಟ-ಸುಖದ ಅರಿವಿತ್ತು. ಗೊನೆಗಳನ್ನು ಒಯ್ಯಲು ಬರುವ ಲಾರಿಗಳ ಭರಾಟೆ ಇನ್ನೂ ಮನಸ್ಸಿಂದ ಮಾಸಿಲ್ಲ' ಹಳೆ ಅನುಭವದ ಬುತ್ತಿ ತೆರೆಯುತ್ತಾರೆ ಭಾಗ್ಯವತಿಯವರು. ಅಂದಿನ ಅನುಭವವೇ ಸ್ವ-ಶ್ರಮದಿಂದ ಬಾಳೆ ಬೆಳೆಯಲು ಪ್ರೇರಣೆ.

ಕಳೆದ ಮೂರು ವರ್ಷಗಳಿಂದ 'ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ'ಯು ಯಡೆಹಳ್ಳಿಯಲ್ಲಿ 'ಗ್ರಾಸ್ರೂಟ್' ಲಕ್ಷ್ಯವಿಟ್ಟು ಸಾವಯವ ಗೊಬ್ಬರ/ಕೃಷಿಯ ಅರಿವನ್ನು ಬಿತ್ತುತ್ತಿದೆ. ಅದರ ನೇರ ಫಲಶ್ರುತಿಯಲ್ಲೊಂದು ಬಾಳೆ ಕೃಷಿ. ಭಾಗ್ಯವತಿಯರಿಗೆ ಇವೆಲ್ಲಾ ಉಸಾಬರಿ ಇಲ್ಲದೆ ಹಾಯಾಗಿರಬಹುದಿತ್ತು. ಇವುಗಳ ಮಧ್ಯೆ 'ಸೀಮೆಗೊಬ್ಬರ ಇಲ್ಲದೆ ಬೆಳೆಯಬೇಕು' ಎಂಬ ಛಲ ಮತ್ತು ಸ್ವ-ದುಡಿಮೆ - ಇದರಲ್ಲಿದೆ ಸಂದೇಶ.

ಆರ್. ಭಾಗ್ಯವತಿ, ತಿ/ಠ ವೈ.ಸಿ.ರುದ್ರಪ್ಪ, ಯಡೇಹಳ್ಳಿ ಅಂಚೆ, ಸಕಲೇಶಪುರ ತಾಲೂಕು, ಹಾಸನ ಜಿಲ್ಲೆ.
ದೂರವಾಣಿ : 08173-292610

0 comments:

Post a Comment