Wednesday, March 31, 2010

ಅಡಿಕೆಯನ್ನಾಧರಿಸಿದ ತೊಂಡೆಕೃಷಿ

'ಈಗಿನ ಅಡಿಕೆ ಬೆಲೆಯನ್ನು ನೋಡಿದರೆ, ಅಡಿಕೆಕೃಷಿಗಿಂತ ತರಕಾರಿ ಕೃಷಿ ಒಳ್ಳೆಯದು' ಎನ್ನುತ್ತಾರೆ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಸನಿಹದ ಎ.ಸುಬ್ರಹ್ಮಣ್ಯ ಭಟ್. ಇವರಿಗೆ ಮುಖ್ಯ ಕೃಷಿ ಅಡಿಕೆ. ಜತೆಗೆ ಬಾಳೆ, ಭತ್ತ, ತರಕಾರಿ. ದಿನನಿತ್ಯದ ಕೃಷಿ ನಿರ್ವಹಣಾ ವೆಚ್ಚವನ್ನು ತರಕಾರಿ ಭರಿಸುತ್ತದೆ.

ಕಳೆದ ೩-೪ ವರುಷದಿಂದ ತೊಂಡೆಕಾಯಿ ಇವರಿಗೆ ಆದಾಯ ತರುವ ಉಪಕೃಷಿ. ಸನಿಹದ ಪುತ್ತೂರು ಮುಖ್ಯ ಮಾರುಕಟ್ಟೆ. ವಾರಕ್ಕೆ ಸರಾಸರಿ ಆರರಿಂದ ಏಳು ಕ್ವಿಂಟಾಲ್ ಇಳುವರಿ. ಕಿಲೋಗೆ ಸರಾಸರಿ 6 ರೂಪಾಯಿ ದರದಂತೆ ಮಾರಾಟ. ಸೀಸನ್ನಲ್ಲಿ ಇಪ್ಪತ್ತಾರು ಸಿಕ್ಕಿದ್ದೂ ಇದೆ!

ತೊಂಡೆ ಕೃಷಿಯಲ್ಲಿ 'ಮಾಡಿ-ನೋಡಿದ' ಸ್ವ-ಅನುಭವ. ತೊಂಡೆ ಕೃಷಿಯ ಅನುಭವಿ ಗುಂಡಿಮಜಲು ಗೋಪಾಲ ಭಟ್ ಇವರಿಗೆ ಪ್ರೇರಣೆ. ಎರಡೂವರೆ ಅಡಿ ಅಗಲ, ಮೂರುವರೆ ಅಡಿ ಉದ್ದ, ಮೂರಡಿ ಅಳದ ಹೊಂಡ. ಇದರೊಳಗೆ ಸುಡುಮಣ್ಣು ಮಿಶ್ರಮಾಡಿದ ಮಣ್ಣಿನ ಅರ್ಧಡಿ ಎತ್ತರದ ಮಡಿ.

ಚಪ್ಪರಕ್ಕೆ ಹಬ್ಬಿದ ಚೆನ್ನಾಗಿ ಇಳುವರಿ ಬರುವ ಅರ್ಧ ಇಂಚು ದಪ್ಪದ ಬಳ್ಳಿಯಲ್ಲಿ ಒಂದಡಿ ಬಳ್ಳಿಯನ್ನು ತುಂಡರಿಸಿ, ಅದರಲ್ಲಿ ಒಂದು ಗಂಟು ಮಣ್ಣಿನೊಳಗಿರುವಂತೆ ನೆಡುವುದು. 'ಒಂದು ಹೊಂಡದಲ್ಲಿ ಕನಿಷ್ಠ ಐದು ಬಳ್ಳಿ ನೆಡಿ. ಕ್ರಮೇಣ ಎರಡೋ ಮೂರೋ ಬದುಕುಳಿಯುತ್ತದೆ. ಮೂಲ ಬಳ್ಳಿಯಿಂದ ಕಟ್ ಮಾಡಿದ ಇಪ್ಪತ್ತನಾಲ್ಕು ಗಂಟೆಯ ಒಳಗೆ ನೆಡಬೇಕು' ಎನ್ನುತ್ತಾರೆ ಎ.ಎಸ್.ಭಟ್. ಬುಡದಿಂದ ಬುಡಕ್ಕೆ ಮತ್ತು ಸಾಲಿನಿಂದ ಸಾಲಿಗೆ ಇಪ್ಪತ್ತಡಿ ಅಂತರ.

ಬಳ್ಳಿ ಚಿಗುರು ಬಂದ ನಂತರ ಅವಕ್ಕೆ ಆಧಾರ ಕೊಟ್ಟು, ಒಂದು ಬುಡಕ್ಕೆ ಎರಡು ಬುಟ್ಟಿಯಂತೆ ಹಟ್ಟಿಗೊಬ್ಬರ ಉಣಿಕೆ. ಇಪ್ಪತ್ತೇ ದಿವಸಕ್ಕೆ ಬಳ್ಳಿ ಹಬ್ಬಲು ಸುರು. ಚಪ್ಪರಕ್ಕೆ ಬಳ್ಳಿ ಹಬ್ಬಲು ಸುರುವಾದ ನಂತರ ಬುಡದ ಹೊಂಡ ಮುಚ್ಚುವಂತೆ ವಾರದಲ್ಲಿ ಮೂರು ದಿವಸ ನೀರು ನಿಲ್ಲಿಸುತ್ತಾರೆ. 'ಯಾವುದೇ ಕಾರಣಕ್ಕೂ ತೊಂಡೆ ಬಳ್ಳಿಯ ಬುಡ ಒಣಗಿರಬಾರದು. ತೇವವಾಗಿರಬೇಕು' ಇವರ ಅನುಭವದ ಮಾತು.

ತಿಂಗಳೊಳಗೆ ಹೂ ಬಿಡುತ್ತದೆ. ಈ ಹಂತದಲ್ಲಿ ಹೇನು, ನೊಣ ಬಂದುಬಿಡುತ್ತದೆ. ಅದಕ್ಕೆ 1:5ರ ಅನುಪಾತದಲ್ಲಿ ಗೋಮೂತ್ರದ ಸಿಂಪಡಣೆ. 'ಸಮತಟ್ಟಾದ ಭೂಮಿಯಲ್ಲಿ ಕೀಟಗಳ ಹಾವಳಿ ಜಾಸ್ತಿ. ಹಾಗಾಗಿ ತೊಂಡೆಕೃಷಿಗೆ ಇಳಿಜಾರಾದ ಭೂಮಿ ಒಳ್ಳೆಯದು. ಕೀಟ ಬಾಧೆ ಕಡಿಮೆ.'

ಇವರ ತೊಂಡೆ ಇಳುವರಿಯ ಲೆಕ್ಕಾಚಾರ - ಒಂದು ಬುಡದಲ್ಲಿ ಆರಂಭದ ದಿವಸಗಳಲ್ಲಿ ಒಂದು ವಾರಕ್ಕೆ ಎರಡು ಕಿಲೋದಿಂದ ಇಳುವರಿ ಆರಂಭ. ಬಳ್ಳಿಗೆ ಎರಡು ತಿಂಗಳು ಕಳೆದಾಗ ವಾರಕ್ಕೆ 5-7 ಕಿಲೋ ಸಿಗುತ್ತದೆ. ನಂತರದ ದಿವಸಗಳಲ್ಲಿ 15-17 ಕಿಲೋ ಖಚಿತ. ವಾರಕ್ಕೆ ಎರಡು ಕೊಯಿಲು. ಈ ಹಂತದಲ್ಲಿ ಗಿಡ ಸದೃಢವಾಗಲು ಮತ್ತು ಇಳುವರಿ ಜಾಸ್ತಿಯಾಗಲು ಒಂದೊಂದು ಬುಡಕ್ಕೆ ಒಂದು ಕಿಲೋದಷ್ಟು ರಾಸಾಯನಿಕ ಗೊಬ್ಬರ ಉಣಿಕೆ. ವಾರಕ್ಕೆ ಎರಡು ಕೊಯಿಲು ಮಾಡಿದರೆ ಗಿಡದಲ್ಲೇ ತೊಂಡೆಕಾಯಿ ಹಣ್ಣಾಗುವ ಸಾಧ್ಯತೆ ಕಡಿಮೆ. ಜನವರಿ-ಫೆಬ್ರವರಿ ತಿಂಗಳಲ್ಲಿ ಇಳುವರಿ ಕಡಿಮೆ.

ಎರಡೆಕ್ರೆ ಜಾಗದಲ್ಲಿ 72 ತೊಂಡೆ ಬುಡಗಳಿವೆ. ಜೂನ್ ತಿಂಗಳಲ್ಲಿ ನಾಟಿ. ನೀರು, ಗೊಬ್ಬರ, ಕೊಯಿಲು ಮತ್ತು ಇತರ ನಿರ್ವಹಣಾ ಕೆಲಸಕ್ಕೆ ವಾರಕ್ಕೆ ಇಪ್ಪತ್ತು ಮಂದಿಯ ಶ್ರಮ. 'ಕಳೆದ ವರುಷ ಸುಮಾರು ಒಂದೂಕಾಲು ಲಕ್ಷ ರೂಪಾಯಿ ತೊಂಡೆ ಗಳಿಸಿಕೊಟ್ಟಿದೆ. ಇದರಲ್ಲಿ ನಲವತ್ತು ಸಾವಿರದಷ್ಟು ಖರ್ಚು.’ ಎನ್ನುತ್ತಾರೆ.

ಶೇ.40ರಷ್ಟು ತೊಂಡೆಕಾಯಿ ಸಮಾರಂಭಗಳಿಗೆ ವಿತರಿಸುತ್ತಾರೆ. ಮಿಕ್ಕುಳಿದುದು ಪುತ್ತೂರಿನಲ್ಲಿ ಮಾರಾಟ. 'ಚಪ್ಪರದಲ್ಲಿ ಬಳ್ಳಿಗಳು ಯೂನಿಫಾರ್ಮಿನಲ್ಲಿದೆಯೋ ಎಂಬುದನ್ನು ಗಮನಿಸಬೇಕು. ಯಾವುದಾದರೂ ಬಳ್ಳಿ ಸೊರಗಿದರೆ ತಕ್ಷಣ ಗೊಬ್ಬರ, ನೀರು ಕೊಟ್ಟು ಆರೈಕೆ ಮಾಡಬೇಕು.'

ನೈಲಾನ್ ಹಗ್ಗ ಮತ್ತು ತಂತಿ ಬಳಸಿ ಚಪ್ಪರ. ಆರಂಭದಲ್ಲಿ ಅವರಿಗಾದ ವೆಚ್ಚ ಇಪ್ಪತ್ತು ಸಾವಿರ ರೂಪಾಯಿ. ಒಮ್ಮೆ ಚಪ್ಪರ ಹಾಕಿದರೆ ಮುಂದಿನ ಐದು ವರುಷಕ್ಕೆ ತೊಂದರೆಯಿಲ್ಲ. ಮತ್ತೆ ಪುನಃ ತಂತಿ, ಹಬ್ಬ ಬದಲಿಸಬೇಕು.

ಈ ವರುಷ ನೆಟ್ಟ ಹೊಂಡದಲ್ಲಿ ಮುಂದಿನ ವರುಷ ನೆಡುವುದಿಲ್ಲ. ಅದರ ಪಕ್ಕವೇ ಹೊಸ ಹೊಂಡದಲ್ಲಿ ನಾಟಿ. ನಂತರದ ವರುಷ ಹಳೆ ಹೊಂಡದಲ್ಲೇ ಪುನರಾವರ್ತನೆ. ಇದರಿಂದಾಗಿ ಇಳುವರಿಯಲ್ಲಿ ಹೆಚ್ಚಳ ಕಂಡಿದ್ದಾರಂತೆ. ಜತೆಗೆ ಮಣ್ಣಿನ ಫಲವತ್ತತೆಯೂ.
'ನಮ್ಮಲ್ಲಿಗೆ ಘಟ್ಟದ ಮೇಲಿನಿಂದ ತರಕಾರಿ ಬರುವುದು ಹೆಚ್ಚು. ಈಗೀಗ ಸಾಕಷ್ಟು ಕೃಷಿಕರು ತರಕಾರಿ ಕೃಷಿಯತ್ತ ಒಲವು ತೋರಿಸುತ್ತಿದ್ದಾರೆ. ಊರಿನ ತರಕಾರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕೆಲವೊಮ್ಮೆ ಪೂರೈಸಲು ಕಷ್ಟವಾಗುತ್ತಿದೆ. ನಾನು ಯಾವುದೇ ವಿಷ ಸಿಂಪಡಣೆ ಮಾಡದಿರುವುದರಿಂದ ತೊಂಡೆಕಾಯಿ ಖರೀದಿಸಲು ನನ್ನಲ್ಲಿಗೆ ಹುಡುಕಿ ಬರುತ್ತಾರೆ. ಅಡಿಕೆಯ ದರದ ಸೋಲನ್ನು ತೊಂಡೆ ಭರಿಸಿದೆ' ಎನ್ನುವಾಗ ಎ.ಎಸ್.ಭಟ್ಟರ ಮುಖ ಅರಳುತ್ತದೆ!

1 comments:

Sunil HH said...

"ಚಪ್ಪರಕ್ಕೆ ಹಬ್ಬಿದ ಚೆನ್ನಾಗಿ ಇಳುವರಿ ಬರುವ ಅರ್ಧ ಇಂಚು ದಪ್ಪದ ಬಳ್ಳಿಯಲ್ಲಿ ಒಂದಡಿ ಬಳ್ಳಿಯನ್ನು ತುಂಡರಿಸಿ, ಅದರಲ್ಲಿ ಒಂದು ಗಂಟು ಮಣ್ಣಿನೊಳಗಿರುವಂತೆ ನೆಡುವುದು"

ಸರ್,
ಬೀಜದಿಂದನೆ ತೊಂಡೆ ಗಿಡ ಬರುವುದು ಎಂದು ತಿಳಿದಿದೆ, ಈ ವಿಧಾನ ತಿಳಿಸಿದಕ್ಕೆ ಧನ್ಯವಾದಗಳು

Post a Comment