Tuesday, April 6, 2010

ಭೂರಹಿತನ ಕೃಷಿ-ಬದುಕು!


ಕಂಠೇಶ್ - ಅರಣ್ಯ ಇಲಾಖೆಯ ನರ್ಸರಿಯಲ್ಲಿ ಮಾಲಿ. ಮೂಲತಃ ಕಡೂರಿನವರು. ಪಾಲಿಗೆ ಬಂದ ಎರಡೆಕ್ರೆಯ ಹೊಲದ ಯಜಮಾನ. ಅದರ ಪಾಲನೆಯನ್ನು ಸಹೋದರರಿಗೆ ಬಿಟ್ಟುಕೊಟ್ಟು 'ಹೆಚ್ಚು' ಸಂಪಾದನೆಯ ನಿರೀಕ್ಷೆಯಲ್ಲಿ ಸೇರಿಕೊಂಡುದು ಮೂಡಿಗೆರೆ ಸನಿಹದ ಫಲ್ಗುಣಿಯ ಸಚ್ಚೇನಹಳ್ಳಿ ಸರಕಾರಿ ನರ್ಸರಿಗೆ!

ಹದಿಮೂರು ವರುಷದ ಹಿಂದೆ ಇನ್ನೂರ ಎಂಭತ್ತು ರೂಪಾಯಿ ಸಂಬಳದ ದುಡಿಮೆಯೀಗ ಅಬ್ಬಬ್ಬಾ ಅಂದರೆ ಮೂರು ಸಾವಿರ ರೂಪಾಯಿಗೇರಿದೆ. ಪತ್ನಿ, ಮೂವರು ಮಕ್ಕಳು. ನರ್ಸರಿಯಲ್ಲೇ ಚಿಕ್ಕ ಗುಡಿಸಲು. ಸನಿಹದಲ್ಲೇ ಭಾವನ ಕುಟುಂಬ. ಅವರೂ ನರ್ಸರಿಯಲ್ಲಿ ಮಾಲಿ. ಒಂಭತ್ತು ಸದಸ್ಯರ ಒಗ್ಗಟ್ಟಿನ ಜೀವನ.

ನರ್ಸರಿಯ ಗಿಡಗಳ ಆರೈಕೆ-ರಕ್ಷಣೆ ಕಂಠೇಶರ ಮುಖ್ಯ ಕಾಯಕ. ಇಲಾಖೆ ನೀಡುವ ಮಾರ್ಗದರ್ಶನ, ಸೂಚಿಸುವ ಗೊಬ್ಬರ-ಸಿಂಪಡಣೆ-ಗಿಡಗಳನ್ನಷ್ಟೇ ಬಳಸಿ ಗಿಡ ತಯಾರಿ.

ಮೂರು ವರುಷದ ಹಿಂದೆ ಫಲ್ಗುಣಿಗೆ ಸರಕಾರದ ಸಾವಯವ ಯೋಜನೆಗಳ ಅನುಷ್ಠಾನಕ್ಕೆ ಬಂದ 'ಭೂಮಿ ಅಭಿವೃದ್ಧಿ ಸುಸ್ಥಿರ ಸಂಸ್ಥೆ'ಯ ಸಂಪರ್ಕ-ಒಡನಾಟ. ಸಭೆಗಳಲ್ಲಿ ಭಾಗಿ. ಎರೆಗೊಬ್ಬರ ತಯಾರಿಯ ಮಾಹಿತಿ. ಸ್ವಂತದ್ದಾದ ಜಮೀನು-ಮನೆ ಇಲ್ಲದ ಕಾರಣ ಯಾವ ಪ್ಯಾಕೇಜ್ಗಳಿಗೂ ಕಂಠೇಶ್ ಅನರ್ಹರು. ಇವರ 'ವಿಶೇಷಾಸಕ್ತಿ'ಗೆ ಮಾನ್ಯತೆ ನೀಡಿದ ಭೂಮಿ ಸಂಸ್ಥೆಯು ಎರೆತೊಟ್ಟಿ ನಿರ್ಮಿಸಲ್ಲು ಸಹಕಾರ ನೀಡಿತು.

ಸಾವಯವದ ಕುರಿತು ಕಂಠೇಶ್ರಿಗೆ ಗೊತ್ತಿತ್ತು. ಸ್ವತಃ ಮಾಡಿ ನೋಡುವ ಕುತೂಹಲ. ತಮ್ಮ ಮನೆಯ ಮುಂದೆ ಮೂವತ್ತಾರು 'ವಿಶೇಷ ತಳಿ'ಯ ಹಲಸಿನ ಮರಗಳಿವೆ. ಬಿದ್ದ ಹಲಸಿನ ಎಲೆಗಳನ್ನು ಬಳಸಿ ಎರೆಗೊಬ್ಬರ ತಯಾರಿಗೆ ನಾಂದಿ.
ಎರಡು ಹಸುಗಳು. ಅದರ ಸೆಗಣಿ, ಗಂಜಲ ಕಚ್ಚಾವಸ್ತು. ಒಂದು ಎರೆಗೊಬ್ಬರ ತೊಟ್ಟಿ. ಮತ್ತೊಂದು ಕಾಂಪೋಸ್ಟ್ ತೊಟ್ಟಿ. ತಯಾರಾದ ಗೊಬ್ಬರವನ್ನು ನರ್ಸರಿಗೆ ಬಳಸಿದರು. ಮೊದಲು 'ಸರಕಾರಿ ಗೊಬ್ಬರ' ತಿಂದು ಬೆಳೆದದ್ದಕ್ಕಿಂತಲೂ ಸೊಂಪಾಗಿ ಗಿಡಗಳು ಮೇಲೆದ್ದುವು!

'ಕಳೆದ ವರುಷ ಒಂದು ಟನ್ ಗೊಬ್ಬರ ಮಾರಿದೆ. ತಮ್ಮ ನರ್ಸರಿಗೆ ಬಳಸಿ ಮಿಕ್ಕುಳಿದದ್ದನ್ನು ಮಾರಲು ಹಿರಿಯಧಿಕಾರಿಗಳು ಒಪ್ಪಿದ್ದಾರೆ' ಎನ್ನುವ ಕಂಠೇಶ್, 'ಎರೆಗೊಬ್ಬರ ಬಳಸಿದ್ದರಿಂದ ಗಿಡಗಳಿಗೆ ರೋಗ ಕಡಿಮೆ. ಸರಕಾರದ ನರ್ಸರಿ ಅಲ್ವಾ. ಅವರು ಕೊಡುವ ಸಿಂಪಡಣೆಯನ್ನು ಒಮ್ಮೆಯಾದರೂ ಕೊಡಬೇಡ್ವಾ'!

ಈ ವರುಷ ಎರಡು ಟನ್ ಗೊಬ್ಬರದ ನಿರೀಕ್ಷೆ. ಒಂದು ಕಿಲೋ ಗೊಬ್ಬರಕ್ಕೆ ಮೂರುವರೆ ರೂಪಾಯಿಯಂತೆ ಮಾರಾಟ. ನರ್ಸರಿಗೆ ಬಳಸಿದ್ದಕ್ಕೆ ಇಲಾಖೆ ಎರಡು ರೂಪಾಯಿ ನೀಡುತ್ತದೆ. 'ಮನೆ, ಜಾಗ, ಅವಕಾಶ ನೀಡಿದ್ದಾರಲ್ಲಾ' ದನಿಗೂಡಿಸುತ್ತಾರೆ ಕಂಠೇಶ್. ಎರೆಗೊಬ್ಬರಕ್ಕೆ ಹಲಸು ಮತ್ತು ನೇರಳೆ ಗಿಡಗಳು ಬಹುಬೇಗ ಸ್ಪಂದಿಸುತ್ತವೆ. ಎರೆಗೊಬ್ಬರವನ್ನು ಹುಡುಕಿ ಬರುವ ಅಡಿಕೆ-ಮೆಣಸು ಕೃಷಿಕರು ಇವರಿಗೆ ಗಾಹಕರು.

ಹಲಸಿನ ಒಣ ಎಲೆಯು ಬೇಗ ಕರಗುವ ಸಾಮಥ್ರ್ಯ ಹೊಂದಿದ್ದು ಎರಡೇ ತಿಂಗಳಲ್ಲಿ ಗೊಬ್ಬರ ಸಿಗುತ್ತದಂತೆ. ಸಾಮಾನ್ಯವಾಗಿ ಎರೆಗೊಬ್ಬರ ತಯಾರಾಗಲು ಮೂರುವರೆ ತಿಂಗಳು ಬೇಕೇ ಬೇಕು.

ಕಂಠೇಶ್ ಮನೆಬಳಕೆಗಾಗಿ ತರಕಾರಿ ಬೆಳೆದಿದ್ದಾರೆ. ಸೀಮೆಬದನೆ, ಟೊಮೇಟೊ, ಮೆಣಸು.. ಹೀಗೆ. ಬೇಸಿಗೆಯಲ್ಲಿ ನೀರಿಗೆ ತತ್ವಾರ. ಸ್ವ-ಆಸಕ್ತಿಯಿಂದ ನರ್ಸರಿ ಗಿಡಗಳನ್ನೂ ಮಾಡುತ್ತಿದ್ದಾರೆ. ಎಲ್ಲಾ ಸೇರಿ ಸಂಬಳದಷ್ಟೇ ಇಲ್ಲಿನ ಉತ್ಪನ್ನಗಳು ಕೈಗೆ ಬರುತ್ತವೆ.
ನರ್ಸರಿ ಗಿಡಗಳನ್ನು ತಯಾರಿಸುವ ಹೊತ್ತಿಗೆ ಕೊಟ್ಟಿಗೆ ಗೊಬ್ಬರವನ್ನು ಹೊರಗಿನಿಂದ ಖರೀದಿಸುತ್ತಾರೆ. ಇದನ್ನು ಮಣ್ಣು-ಮರಳಿನೊಂದಿಗೆ ಪ್ಲಾಸ್ಟಿಕ್ ತೊಟ್ಟೆಗೆ ಹಾಕಿ ಗಿಡ ನಾಟಿ. ಗಿಡ ಬೆಳೆಯುತ್ತಿದ್ದಂತೆ ಗೊಬ್ಬರದೊಂದಿಗೆ ಬಂದ ಕೆಲವು ಸೊಪ್ಪು ತರಕಾರಿಗಳ ಬೀಜ ಮೊಳಕೆಯೊಡೆದು ಸಸಿಯಾಗಿ ನಿತ್ಯದೂಟಕ್ಕೆ ಸುಗ್ರಾಸವಾಗುತ್ತಿದೆ!
ದನಗಳ ಹೊಟ್ಟೆ ಸೇರಿದ ಬೀಜಗಳಿಗೆ ಚೆನ್ನಾಗಿ 'ಬೀಜೋಪಚಾರ'ವಾಗುವುದಿಂದ ಸೊಪ್ಪು ಚೆನ್ನಾಗಿ ಬರುತ್ತದೆ. ರುಚಿಯೂ ಕೂಡಾ ಎನ್ನುತ್ತಾರೆ ಜಯಮ್ಮ ಕಂಠೇಶ್. ಏನಿಲ್ಲವೆಂದರೂ ಹದಿನೈದಕ್ಕೂ ಮಿಕ್ಕಿ ಸೊಪ್ಪು ತರಕಾರಿಗಳು ಸಿಕ್ಕೇ ಸಿಗ್ತವೆ. ಹರಿವೆ, ಮುಳ್ಳರಿವೆ, ಕೀರೆ, ಗೋಣಿಸೊಪ್ಪು, ಬೆರಕೆ ಸೊಪ್ಪು, ಕತ್ತಿ ಸೊಪ್ಪು, ಕೋಳಿಕಾಲು ಸೊಪ್ಪು.. ಹೀಗೆ. 'ಸಾರ್. ಸುತ್ತಮುತ್ತ ಇವೆಲ್ಲಾ ನೋಡೋಕೆ ಸಿಗೊಲ್ಲ. ಅಪರೂಪದ್ದು' ಜತೆಗಿದ್ದ ಭೂಮಿಯ ರವಿ ಪಿಸುಗುಟ್ಟಿದರು.

ನರ್ಸರಿಯಲ್ಲಿರುವ ಮೂವತ್ತಾರು ಹಲಸಿನ ಮರಗಳು ಒಂದೊಂದರಲ್ಲಿ 150-200 ಹಣ್ಣುಗಳು ಬಿಡುತ್ತವೆ. ಅವೆಲ್ಲಾ ಬೀಜಕ್ಕಾಗಿ. ಗಿಡ ಅಭಿವೃದ್ಧಿ ಮಾಡಲು. 'ಒಂದು ಎಲೆಯೂ ನನ್ನ ಕಣ್ತಪ್ಪಿಸಿ ಹೋಗದು. ಒಂದೊಂದು ಎಲೆಯೂ ನನಗೆ ಪೈಸೆಗೆ ಸಮಾನ' - ಕಂಠೇಶ್.

'ಬೆಳೆಯವ ಮನಸ್ಸು ಬೇಕು. ಸ್ವಂತ ಮಾಡುವ ಛಲ ಬೇಕು. ಇಲ್ಲದಿದ್ದರೆ ಮೂರು ಸಾವಿರ ಬಿಡಿ, ಹನ್ನೆರಡು ಸಾವಿರ ಸಿಕ್ಕರೂ ಜೀವನಕ್ಕೆ ಸಾಲದು' ಎನ್ನುವಾಗ ಬದುಕಿನ ಅನಿವಾರ್ಯತೆ, ಸವಾಲನ್ನು ಎದುರಿಸುವ ಕಂಠೇಶರ ಛಲ ಮಿಂಚಿ ಮರೆಯಾಯಿತು.
ಸ್ವಂತದ್ದಾಗ ಮನೆ, ಭೂಮಿಯಿದ್ದರೂ ಕೃಷಿಯೆಂದರೆ 'ಅದೊಂದು ಅವಮಾನ' ಅಂತ ಭಾವಿಸುವ ಪ್ರಸ್ತುತ ಕಾಲಘಟ್ಟದಲ್ಲಿ, ಯಾವುದೇ ಗೊಣಗಾಟವಿಲ್ಲದೆ 'ಕೃಷಿಯನ್ನು ಮಾಡುತ್ತಿರುವ' ಕಂಠೇಶ್ ಪ್ರತ್ಯೇಕವಾಗಿ ಕಾಣುತ್ತಾರೆ.

1 comments:

ಕೇಶವ ಪ್ರಸಾದ್.ಬಿ.ಕಿದೂರು said...

sogasada lekhana.

Post a Comment