Wednesday, April 28, 2010

ಕತ್ತೆಗೂ 'ಕತ್ತೆ ಕೆಲಸ'!


ಬದುಕಿನಲ್ಲಿ 'ಕತ್ತೆ ಕೆಲಸ' ಅಂತ ಮಾತಿದೆ. ಅಂದರೆ ಅವಿರತವಾಗಿ ಕೆಲಸ ಮಾಡುವವ. ಕತ್ತೆಗೂ ಕೂಡಾ ಈ ಮಾತು ಅನ್ವಯ. ತನ್ನನ್ನು ನಂಬಿದ ಯಜಮಾನನ ಕುಟುಂಬ ಒಂದೆಡೆ, ತನ್ನ ಬಹಿರ್ದೆಶೆಯನ್ನು ಗೊಬ್ಬರವಾಗಿ ಬಳಸುವ ತೋಟದೆಜಮಾನ ಮತ್ತೊಂದೆಡೆ.

ತುಮಕೂರು ಜಿಲ್ಲೆಯ ಬಹುತೇಕ ತೆಂಗಿನ ತೋಟದಲ್ಲಿ ಗೊಬ್ಬರಕ್ಕಾಗಿ 'ಕತ್ತೆ ಕಟ್ಟುವುದು' ಅತ ಒಂದು ಕೃಷಿಪದ್ಧತಿಯಿದೆ. ನೂರು ಕತ್ತೆಗಳ ಒಂದು ಗುಂಪನ್ನು ಇಂದು ಒಂದೆಡೆ ಕಟ್ಟಿದರೆ, ನಾಳೆ ಅದರ ಪಕ್ಕ. ಹೀಗೆ ವಿವಿಧ ಹಂತಗಳಲ್ಲಿ ಕಟ್ಟುತ್ತಾರೆ. ಅವುಗಳ ಮಲಮೂತ್ರ ಮಣ್ಣಿಗೆ ಸೇರಿ ತೆಂಗಿಗೆ ಉತ್ತಮ ಗೊಬ್ಬರ. ತೋಟದ ವಿಸ್ತೀರ್ಣ ಹೆಚ್ಚಿದಷ್ಟೂ 'ಕತ್ತೆ ಕಟ್ಟುವ' ದಿವಸಗಳು ಹೆಚ್ಚಾಗುತ್ತದೆ. ಇಂತಿಷ್ಟು ದಿವಸ ಅಂತ ಮೊದಲೇ ನಿರ್ಧಾರ.

ಕತ್ತೆಗೆ ದಿನವೊಂದಕ್ಕೆ ಮೂರು ರೂಪಾಯಿ ಸಂಬಳ! ಕತ್ತೆಯ ರಕ್ಷಣೆ, ಆರೈಕೆ ಕತ್ತೆಯ ಯಜಮಾನನದ್ದು. ಬೆಳಿಗ್ಗೆ ಒಂಭತ್ತರಿಂದ ಸಂಜೆ ತನಕ ಕೆರೆಯ ದಂಡೆ, ರಸ್ತೆ ಬದಿಗಳಲ್ಲಿ ಕತ್ತೆಗಳನ್ನು ಮೇಯಿಸಿ, ಸಂಜೆಯಾಗುತ್ತಲೇ ಮೋದಲೇ ನಿಶ್ಚಯವಾದ ತೋಟದಲ್ಲಿ ಕಟ್ಟುತ್ತಾರೆ. ಅಕಸ್ಮಾತ್ ಕತ್ತೆ ತಪ್ಪಿಸಿ ಪಕ್ಕದ ತೋಟಕ್ಕೆ ನುಗ್ಗಿ ಹಾಳುಮಾಡಿದರೆ, ಐನೂರು ರೂಪಾಯಿ ಜುಲ್ಮಾನೆಯನ್ನು ಕತ್ತೆಯೊಡೆಯನಿಗೆ!

ಕತ್ತೆ ಕಟ್ಟುವುದರಲ್ಲೂ ಜಾಣ್ಮೆಯಿದೆ. ಆಚೀಚೆ ಗೂಟಗಳನ್ನು ಊರಿ ನೆಲಮಟ್ಟದಲ್ಲಿ ಹಗ್ಗವನ್ನು ಬಿಗಿಯುತ್ತಾರೆ. ಹಗ್ಗಕ್ಕೆ ಎದುರುಬದುರಾಗಿ ಕತ್ತೆಗಳನ್ನು ನಿಲ್ಲಿಸಿ, ಅವುಗಳ ಕಾಲನ್ನು ಹಗ್ಗಕ್ಕೆ ಸೇರಿಸಿ ಕಟ್ಟುತ್ತಾರೆ. ಇದರಿಂದಾಗಿ ಅವುಗಳು ತಪ್ಪಿಸಲಾರವು.
ಮಳೆಗಾಲದಲ್ಲಿ ತೋಟದ ಯಜಮಾನ ಸೂರು ನಿರ್ಮಿಸಿಕೊಡುತ್ತಾರೆ. ಮೊದಲು ಅರ್ಧಡಿ ಮಣ್ಣನ್ನು ಹಾಕಿ ಸಮತಟ್ಟು ಗೊಳಿಸುತ್ತಾರೆ. ಇದರ ಮೇಲೆ ಎಂಟು ದಿವಸ ಕತ್ತೆಗಳ ವಸತಿ. ಪುನಃ ಇನ್ನರ್ಧಅಡಿ ಮಣ್ಣಿನ ಪಾಯ. ಪುನಃ ಕತ್ತೆ ಕಟ್ಟುವುದು. ಒಂದು ತಿಂಗಳಾಗುವಾಗ 'ಕತ್ತೆ ಗೊಬ್ಬರ' ಸಿದ್ಧ! ಹೀಗೆ 'ಕತ್ತೆ ಕಟ್ಟಿದರೆ' ತಲೆಗೆ ಐವತ್ತು ಪೈಸೆ ಕಡಿಮೆ!

ಕತ್ತೆಯ ಬದಲಿಗೆ ಕುರಿಗಳನ್ನು ಕಟ್ಟುತ್ತಾರೆ. ಕುರಿಗಾದರೆ ಅವುಗಳು ತಪ್ಪಿಸದಂತೆ ಅತ್ತಿತ್ತ ಒಯ್ಯುಬಹುದಾದ ರೆಡಿಮೇಡ್ ಬೇಲಿ ಬೇಕಾಗುತ್ತದೆ. ಒಂದು ರಾತ್ರಿ ಒಂದೆಡೆ, ನಾಳೆ ಅದರ ಪಕ್ಕ. ಐನೂರು ಕುರಿಗಳ ಮಂದೆ. ಒಂದು ಕುರಿಗೆ ಒಂದು ರಾತ್ರಿಗೆ ಒಂದು ರೂಪಾಯಿ!

'ಕಳೆದ ಇಪ್ಪತ್ತು ವರುಷಗಳಿಂದ ನಮ್ಮ ತೋಟಕ್ಕೆ ಕುರಿ ಕಟ್ತೀವಿ. ಇದಕ್ಕಾಗಿಯೇ ವರುಷಕ್ಕೆ ಒಂದು ಲಕ್ಷ ಬೇಕು' ಬಿಳಿಗೆರೆಯ ಕೃಷಿಕ ವೆಂಕಟರಾಮ್ ಅನುಭವ.

ಬಿಳಿಗೆರೆ ಸುತ್ತಮುತ್ತ 'ಕುರಿ ಕಟ್ಟುವ' ಆರು ಮಂದಿಯಿದ್ದಾರೆ. ಇವರು ಬೇರೆಡೆಯಿಂದ ಬಂದವರು. ಮಳೆಗಾಲದಲ್ಲಿ ತಮ್ಮೂರಿಗೆ ಹೊರಟುಹೋಗುತ್ತಾರೆ. ಕತ್ತೆಗಿಂತ ಕುರಿಯಲ್ಲಿ ಲಾಭ ಹೆಚ್ಚು. ಕತ್ತೆ ಒಂದು ವರುಷಕ್ಕೆ ಒಂದೇ ಮರಿ. ಕುರಿಯಾದರೆ ಮೂರ್ನಾಲ್ಕು.ಅದರ ಮಾರಾಟವು ಹೆಚ್ಚುವರಿ ಬೋನಸ್.

ಬಿಳಿಗೆರೆಯಲ್ಲಿ ಎರಡು 'ಕತ್ತೆ ಬ್ಯಾಚ್' ಇದೆ. ಎಲ್ಲವೂ ಮುಂಗಡ ಬುಕ್ಕಿಂಗ್. ಹಾಗಾಗಿ ಎಲ್ಲರಿಗೂ ಪೂರೈಸಲು ತ್ರಾಸ ಎನ್ನುತ್ತಾರೆ ಒಂದು ಕತ್ತೆ ಮಂದೆಯೊದರ ಮಾಲಿಕ ಮಂಜಣ್ಣ. ಇವರಜ್ಜ ಹೊನ್ನಪ್ಪರ ಬಳುವಳಿಯಿದು. ಮೆಟ್ರಿಕ್ ಓದಿದ ಮಗ ರಂಗಸ್ವಾಮಿಗೂ 'ಕತ್ತೆ ಕಾಯುವ' ಹುಮ್ಮನಸ್ಸು.

ಹೊಸದಾಗಿ ಮಂದೆ ಹೊಂದಲು ಬಂಡವಾಳ ಬೇಕು. ಒಂದು ಕತ್ತೆಗೆ 1000-1500 ರೂಪಾಯಿ ದರ. ಮಧುಗಿರಿ ಸುತ್ತ ಮುತ್ತ ಲಭ್ಯ. 'ವಯಸ್ಸಾದಾಗ ದುಡಿಯಲು ಕಷ್ಟಪಡುತ್ತವೆ. ಆಗ ಅದನ್ನು ಬದಲಿಸುತ್ತಿರಬೇಕು. ಹೊಸದಾಗಿ ಕತ್ತೆಮಂದೆಯನ್ನು ಹೊಂದಲು ಒಮ್ಮೆಗೆ ಬಂಡವಾಳ ಹಾಕಿದರೆ ಸಾಕು, ಐದು ವರುಷಕ್ಕೆ ಚಿಂತೆಯಿಲ್ಲ' ಮಂಜಣ್ಣ ಹೇಳುತ್ತಾರೆ.

ಹೇಳುವಂತಹ ರೋಗವಿಲ್ಲ. ಅಪರೂಪಕ್ಕೆ ಸಾಯುವುದಿದೆ. ಈ ಸಂಖ್ಯೆ ಹತ್ತು ತಲುಪಿದಾಗ ಒಮ್ಮೆ 'ರೀಫಿಲ್'! ಹೊಸಬರು ಈ ಕೆಲಸಕ್ಕೆ ಮುಂದೆ ಬರುವುದಿಲ್ಲ. ಮೊದಲು ಕತ್ತೆ ಕಟ್ಟುತ್ತಿರುವವರು ಸಣ್ಣಪುಟ್ಟ ಜಮೀನು ಹೊಂದಿದ್ದಾರೆ. ಕೆಲವರು ವಿದ್ಯಾಭ್ಯಾಸಕ್ಕಾಗಿ ನಗರ ಸೇರಿದ್ದಾರೆ.

ಕತ್ತೆಯ ಹೆಗಲ ಮೇಲೆ ಮಣ್ಣಿನ ಚೀಲ ನೀರಿನ ಚೀಲಗಳನ್ನು ಸಾಗಿಸುತ್ತಾರೆ. ಮಣ್ಣನ್ನು ಸಾಗಿಸಲು ಹೆಚ್ಚಾಗಿ ಬಳಕೆ. ಈಗೀಗ ದೈತ್ಯ ಯಂತ್ರಗಳಿಂದಾಗಿ ಈ ಕೆಲಸಕ್ಕೆ ವಿಶ್ರಾಂತಿ. ಮಣ್ಣು ಸಾಗಿಸುವುದು ಶ್ರಮದ ಕೆಲಸ. ಕತ್ತೆಗಲ್ಲ, ಕತ್ತೆಕಾಯುವವನಿಗೆ! ಪ್ರತೀ ಸಲವೂ ಮಣ್ಣಿನ ಚೀಲವನ್ನು ಕತ್ತೆಗಳ ಮೇಲೇರಿಸಿ, ಅವುಗಳನ್ನು ಇಳಿಸುವ ವರೆಗೂ ಕಾಯುವವ ಜತೆಗಿರಬೇಕು. ತುಂಬಾ ಶ್ರಮಬೇಡುವ ಕೆಲಸವಾದ್ದರಿಂದ ಕತ್ತೆಗಳು ತೋಟವನ್ನು ಫಲವತ್ತಾಗಿ ಮಾಡಿದರೆ ಸಾಕು!

ತೋಟದ ಒಡೆಯನೇ ಕತ್ತೆಯನ್ನು ಯಾಕೆ ಹೊಂದಬಾರದು? ಜತೆಗಿದ್ದ ಮಹಾಲಿಂಗಯ್ಯನವರು ಹೇಳುತ್ತಾರೆ - 'ಅವುಗಳ ನಿರ್ವಹಣೆ ಕಷ್ಟ. ಅವರಿಗದು ಹುಟ್ಟು ವೃತ್ತಿ. ಉಳಿದವರು ಕಲಿತಾಗಬೇಕು. ಅವುಗಳ ನಿರ್ವಹಣೆ, ಸಹವಾಸ ಕಷ್ಟ. ಒಂದು ದಿವಸ ಎಡವಟ್ಟಾದರೂ ತೊಂದರೆ ತಪ್ಪಿದಲ್ಲ'.

ರಾಸಾಯನಿಕ, ಸಾವಯವ, ಶೂನ್ಯ ಕೃಷಿ ಎಂದು ಬಡಿದಾಡುವ ಮನುಷ್ಯರನ್ನು ನೋಡಿ ಹೇಳುತ್ತವೆ - 'ನಮ್ಮನ್ನು ಕಟ್ಟಿ ನೋಡಿ - ಶುದ್ಧ ನೈಸರ್ಗಿಕ ಗೊಬ್ಬರ ಮಾಡಿ ಕೊಡುತ್ತೇವೆ'!

0 comments:

Post a Comment