Tuesday, April 13, 2010

ರಾಜಧಾನಿಯಲ್ಲಿ ಸಾವಯವ ಹುಡುಕಾಟ!

ಸಕ್ಕರೆ ಕಾಯಿಲೆಯವರು ಬಳಸಬಹುದಾದ 'ಡಯಾಬಿಟೀಸ್ ರೈಸ್' ಕೇಳಿದ್ದೀರಾ, ಬಾಣಂತಿ ಬತ್ತ ನೋಡಿದ್ದೀರಾ? ಸದಾ ಪಾಲಿಶ್ ಅಕ್ಕಿ ತಿಂದು ಬೇಸರವೇ! ಜವಾರಿ ಭತ್ತದ ಅಕ್ಕಿ ತಿಂದು ಕುಟುಂಬವನ್ನು ರೋಗ ರುಜಿನಗಳಿಂದ ಮುಕ್ತಗೊಳಿಸಲು ಆಸಕ್ತಿಯೇ? ಅಕ್ಕಿಗೊಂದು, ಅವಲಕ್ಕಿಗೊಂದು, ತಂಬಿಟ್ಟಿಗೊಂದು, ರೊಟ್ಟಿಗೆ ಮತ್ತೊಂದು, ಕಜ್ಜಾಯಕ್ಕೆ ಇನ್ನೊಂದು, ಚಕ್ಕುಲಿಗೆ.. ಹೀಗೆ ಅಡುಗೆ ಮನೆಯಲ್ಲಿ ಬಳಸುವ ಅಕ್ಕಿಗಳು ನೂರಾರು..

ರಾಜಧಾನಿಯ ಗಾಂಧಿ ಭವನದಲ್ಲಿ ಜರುಗಿದ 'ಭತ್ತ ಉತ್ಸವ'ದಲ್ಲಿ ಸಹಜ ಸಮೃದ್ಧದ ಜಿ.ಕೃಷ್ಣಪ್ರಸಾದ್ ಅಕ್ಕಿಯ ವಿಶ್ವರೂಪವನ್ನು ತೆರೆದಿಡುತ್ತಿದ್ದರು. ಇತ್ತ ಮಳಿಗೆಯಲ್ಲಿ 'ಬಾಣಂತಿ ಭತ್ತದ ಬೀಜ ಬೇಕಾಗಿತ್ತು, ರಾಜಮುಡಿ ಇದೆಯಾ? 'ನವರ' ಎಲ್ಲಿ ಸಿಗುತ್ತೆ? ಗಂಧಸಾಲೆ, ಜೀರಿಗೆ ಸಾಂಬ, ಘಂಗಡಲೆ, ಕರಿಭತ್ತ, ಕರಿಗಜಿವಿಲಿ, ಕಪ್ಪುಅಕ್ಕಿ..ಗಳ ಕುರಿತು ಮಾಹಿತಿ ಇದೆಯಾ? ಒಂಚೂರು ಬೀಜ ಸಿಗಬಹುದಾ? - ಹೀಗೆ ಅನೇಕರ ಬೆರಗು ಪ್ರಶ್ನೆಗಳು.

'ಸಹಜ ಸಮೃದ್ಧ' ಸಾವಯವ ಕೃಷಿಕರ ಸಂಸ್ಥೆಯು ಸಹಯೋಗಕಾರರೊಂದಿಗೆ ಭತ್ತ ಉತ್ಸವವನ್ನು ನಗರದ ಮಧ್ಯೆ ಇಟ್ಟುಕೊಂಡಿತ್ತು. ಹಿಂದಿನ ಎಲ್ಲಾ ಉತ್ಸವಗಳು ಬಹುತೇಕ ಹಳ್ಳಿಗಳಲ್ಲೇ ನಡೆಯುತ್ತಿದ್ದುವು. 'ನಗರದ ಜನಗಳಿಗೆ ಭತ್ತದ ವೈವಿಧ್ಯವನ್ನು ತೋರಿಸುವುದೇ ಈ ಉತ್ಸದವ ಉದ್ದೇಶ' ಎನ್ನುತ್ತಾರೆ ಕೃಷ್ಣಪ್ರಸಾದ್.

ಸಹಜ ಸಮೃದ್ಧವು 'ಭತ್ತ ಉಳಿಸಿ ಆಂದೋಳನ'ದ ಜತೆಗೂಡಿ ಕಣ್ಮರೆಯಾಗುತ್ತಿರುವ ಅಪರೂಪದ ಭತ್ತದ ತಳಿಗಳನ್ನು ಸಂರಕ್ಷಿಸುತ್ತಿದೆ. ಇವರೊಂದಿಗೆ ಕನ್ನಾಡಿನ ಭತ್ತ ಸಂರಕ್ಷಕರು ಕೈಜೋಡಿಸುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ದೇಸಿ ಭತ್ತದ ತಳಿಗಳನ್ನು ಬೆಳೆಯುತ್ತಿದ್ದಾರೆ. ದೊಡ್ಡಪ್ರಮಾಣದಲ್ಲಿ ಸಾವಯವ ಭತ್ತ ಉತ್ಪಾದನೆಯಾಗುತ್ತಿದೆ.

ಪಾಲಿಶ್ ಅಕ್ಕಿಯನ್ನು ತಿಂದು, ರಾಸಾಯನಿಕ ಹಾಕಿದ-ವಿಷ ಸಿಂಪಡಿಸಿದ ಭತ್ತವನ್ನು ಅಡುಗೆ ಮನೆಯೊಳಗೆ ತಂದಿರುವುದರ ಪರಿಣಾಮ, ಒಂದಲ್ಲ ಒಂದು ಕಾಯಿಲೆಗಳು ಶರೀರ ಹೊಕ್ಕಿವೆ. ನಮ್ಮೊಳಗಿದ್ದು ಕ್ಷಣಕ್ಷಣಕ್ಕೂ ನಮ್ಮನ್ನು ತಿನ್ನುತ್ತಿವೆ. ಯಾವ ಔಷಧಿಗೂ ಬಗ್ಗುವುದಿಲ್ಲ, ಒಗ್ಗುವುದಿಲ್ಲ. 'ನಮ್ಮ ಹೊಲ ಸಾವಯವ ಆದರೆ ಸಾಲದು, ನಮ್ಮ ಅಡುಗೆ ಮನೆಗಳೂ ಸಾವಯವವಾಗಬೇಕು. ವೈಯಕ್ತಿಕವಾಗಿ ನಾವೂ ಸಾವಯವವಾಗಬೇಕು' ಪತ್ರಕರ್ತ ಶಿವಾನಂದ ಕಳವೆ ಸಿಕ್ಕಾಗಲೆಲ್ಲಾ ಈ ಮಾತನ್ನು ಹೇಳುತ್ತಿರುವುದರ ಉದ್ದೇಶವೇ ಅದು.

'ಸಾವಯವದ ಕುರಿತು ಹುಡುಕಾಟ ಶುರುವಾಗಿದೆ. ಮುಖ್ಯವಾಗಿ ನಗರದ ಮಂದಿ ಸಾವಯವ ಉತ್ಪನ್ನವನ್ನು ಬಯಸುತ್ತಾರೆ. ಅವರಿಗೆ ಸಿಗುವಂತೆ ಮಾಡಬೇಕಾದುದು ನಮ್ಮ ಆಂದೋಳನದ ಮುಂದಿನ ಗುರಿ' ಎನ್ನುತ್ತಾರೆ ಸಹಜ ಸಮೃದ್ಧದ ಅಧ್ಯಕ್ಷ ಎನ್.ಆರ್.ಶೆಟ್ಟಿ.

ಭತ್ತದ ಉತ್ಸವದ ಕೆಲವು ಹೈಲೈಟ್ಸ್ಗಳನ್ನು ಶೆಟ್ಟರು ಕಟ್ಟಿ ಕೊಟ್ಟದ್ದು ಹೀಗೆ - ಆಯುರ್ವೇದ ವೈದ್ಯರೊಬ್ಬರಿಗೆ ಔಷಧೀಯ ಅಕ್ಕಿಯೆಂದರೆ ಅದು 'ನವರ' ಅಂತ ಗೊತ್ತಿತ್ತು. ಎಲ್ಲಿ ಸಿಗುತ್ತೆ ಅಂತ ಗೊತ್ತಿರಲಿಲ್ಲ. ಅದನ್ನು ಹುಡುಕಿಕೊಂಡು ಬಂದಿದ್ದರು. ಹಲವು ಮಂದಿ ಆಯುರ್ವೇದ ಡಾಕ್ಟರ್ಗಳು ಇಂತಹುದೇ ತಳಿ ಬೇಕೆಂದು ಪಟ್ಟು ಹಿಡಿದು ಬೇಡಿಕೆ ಸಲ್ಲಿಸಿದ್ದರು. ಡಾಕ್ಟರ್ಗಳಿಗೆ ವಿಷಮುಕ್ತ ಆಹಾರದ ಅರಿವು ಬಂದುಬಿಟ್ಟರೆ; ತಮ್ಮ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಈ ಕುರಿತಾದ ಅರಿವು ಹರಿದುಬಿಡುತ್ತದೆ. ಇದೊಂದು ಒಳ್ಳೆಯ ಬೆಳವಣಿಗೆ.

ಕೊಡಗಿನ ಕೆ.ಆರ್.ಪುರದಿಂದ ಭತ್ತ ಬೆಳೆಯುವ ರೈತರು 'ಔಷಧೀಯ, ಪರಿಮಳಯುಕ್ತ ಭತ್ತದ ಬೀಜ ಕೊಡಿ. ನಾವು ಬೆಳೆದ ಕೊಡ್ತೀವಿ. ಮುಂದಿನ ಸಲ ನಮ್ಮಲ್ಲಿ ಭತ್ತದ ಉತ್ಸವ ಮಾಡಿ' ಅಂದರು. ಡಯಾಬಿಟೀಸ್, ಸಕ್ಕರೆ ಕಾಯಿಲೆಗೆ ಬಳಸುವ ಅಕ್ಕಿಯಿದೆ ಎಂದಷ್ಟೇ ಗೊತ್ತು. ಯಾವುದೆಂದು ಗೊತ್ತಿರಲಿಲ್ಲ - ಇಲ್ಲಿಗೆ ಬಂದಾಗ ಅದು 'ದೊಡ್ಡ ಬೈರನೆಲ್ಲು' ಕೆಂಪಕ್ಕಿ ಅಂತ ಗೊತ್ತಾಯಿತು - ಸಂತಸ ಹಂಚಿಕೊಂಡರು ಬಸನಗೌಡರು.

'ಉತ್ಸವದಲ್ಲಿ ಶುದ್ಧ ಅಕ್ಕಿಯೋ, ಭತ್ತವೋ ಸಿಗುತ್ತೆ ಅಂತ ಕೈಯಲ್ಲಿ ಸ್ವಲ್ಪ ದುಡ್ಡನ್ನಿಟ್ಟುಕೊಂಡು ಬಂದಿದ್ದೆ. ಇಲ್ಲಿ ಸ್ವಲ್ಪವಷ್ಟೇ ಸಿಕ್ಕಿತು' ಅಂತ ನೆಲಮಂಗಳದ ಮಹಾಲಕ್ಷ್ಮೀಯವರ ಸಾತ್ವಿಕ ಸಿಟ್ಟು! ಇವರಂತೆ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಒಯ್ಯಲು ಬಂದವರ ಸಂಖ್ಯೆ ಜಾಸ್ತಿ ಇತ್ತು.

ಒಂದೇ ಹೊತ್ತಲ್ಲಿ ಹದಿಮೂರು ಕ್ವಿಂಟಾಲ್ ಅಕ್ಕಿ ಖಾಲಿ' ಎನ್ನುತ್ತಾರೆ ಕೃಷ್ಣಪ್ರಸಾದ್. ಇಷ್ಟೊಂದು ಪ್ರಮಾಣದಲ್ಲಿ ಜನರಿಂದ ಬೇಡಿಕೆ ಬರುತ್ತೇಂತ ಗೊತ್ತಿರಲಿಲ್ಲ ಅನ್ನುತ್ತಾರೆ. ಇವೆಲ್ಲಾ 'ಭತ್ತ ಉತ್ಸವ'ದ ಫಲಶೃತಿಗಳು. ಉತ್ಸವಗಳ ಹಿಂದಿನ ಆಶಯಗಳು ಅಡುಗೆ ಮನೆಯಲ್ಲಿ ಚರ್ಚೆಯಾಗಲು ಸುರುವಾಗಿದೆ. ನಮ್ಮ ಆಹಾರದಲ್ಲಿ 'ನಾವೆಲ್ಲೋ ತಪ್ಪಿದ್ದೇವೆ' ಎನ್ನುತ್ತಾ ಬಾಳಿನ ಪುಟಗಳನ್ನು ತೆರೆದು ನೋಡುವ ಪ್ರಕ್ರಿಯೆ ಆರಂಭವಾಗಿದೆ!

ಸಹಜ ಸಮೃದ್ಧವು ಮೂವತ್ತಕ್ಕೂ ಮಿಕ್ಕಿ ಭತ್ತದ ತಳಿಯನ್ನು ಪ್ರದರ್ಶನಕ್ಕಿಟ್ಟಿತ್ತು. ತುಮಕೂರಿನ ಭೂಮಿ ಸಂಸ್ಥೆಯು ಚೌಳು ನಿರೋಧಕ ದೇಸಿ ಭತ್ತದ ತಳಿಗಳಾದ ಬಿಳಿ ತೋಕದಡ್ಲು, ಕಾಸರನೆಲ್ಲು, ಸಣ್ಣಕೊಡ್ಲು, ಸಣ್ಣನೆಲ್ಲು, ಮುಳುಭತ್ತ, ಕರಿತೋಕವಡ್ಲುತಳಿಗಳನ್ನು ತೋರಿಸುತ್ತಿದರು. ಹೊಳೆನರಸೀಪುರದ ಸಾವಯವ ಕೃಷಿಕರ ಸಂಘ, ಹರಿಹರ-ಕುಂಬಳೂರಿನ ಶರಣ ಮುದ್ದಣ ಸಾವಯವ ಕೃಷಿಕರ ಬಳಗಗಳು ತಂತಮ್ಮೂರಿನ ವಿವಿಧ ತಳಿಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಆಸಕ್ತರನ್ನು ಸೆಳೆದಿತ್ತು.

ಉತ್ಸವದಲ್ಲಿ ಭಾಗವಹಿಸಿದ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರು, 'ನನ್ನಲ್ಲಿ ಅನೇಕ ಮಂದಿ ಡಾಕ್ಟರ್ಗಳು ಸಾವಯವ ಅಕ್ಕಿ, ಗಸೋಧಿಯ ಬಗ್ಗೆ ಸಂದರ್ಭ ಸಿಕ್ಕಾಗಲೆಲ್ಲಾ ಮಾತನಾಡ್ತಾರೆ. ತಂದು ಕೊಡಿ ಅಂತ ಕೇಳ್ತಾರೆ. ತೆಕ್ಕೊಳ್ಳುವವರು ಇದ್ದಾರೆ. ಪೂರೈಕೆ ವ್ಯವಸ್ಥೆ ಆಗಬೇಕು. ಹಾಪ್ಕಾಮ್ಸ್ನಂತೆ ಸಾವಯವ ಉತ್ಪನ್ನಗಳಿಗೂ ದೊಡ್ಡ ಮಟ್ಟದ ಮಳಿಗೆಯ ಆವಶ್ಯಕತೆ ಇದೆ.' ಎಂದರು. ಕೃಷಿ ಕುಟುಂಬದಿಂದ ವಿಧಾನಸಭೆಯ ಮೆಟ್ಟಲೇರಿದ ಶೋಭಕ್ಕ, ಕೃಷಿ ಸಂಸ್ಕೃತಿಯಿಂದ ರೂಪುಗೊಂಡವರು. ಅವರು ಮನಸ್ಸು ಮಾಡಿದರೆ ಕಷ್ಟವಲ್ಲ. ಚಿಟಿಕೆ ಹೊಡೆವಷ್ಟೇ ಕೆಲಸ!

1 comments:

Venkatakrishna.K.K. said...

ತುಂಬ ಮಾಹಿತಿ ಒದಗಿಸುವ ಲೇಖನ.
ಚೆನ್ನಾಗಿದೆ.
ಜಾಗತೀಕರಣದ ಭರಾಟೆಯಲ್ಲಿ ನಾವು ಏನೇನೆಲ್ಲ ಕಳಕೊಳ್ಳುತ್ತಿದ್ದೇವೆ ??
ಹಳಹಳಿಸಿ ಏನು ಉಪಯೋಗ ಅಲ್ಲವೇ?

Post a Comment