
ಇವೆಲ್ಲಾ ಸಂಸ್ಕೃತಿಯೊಂದಿಗೆ ಮಿಳಿತವಾದ ಬದುಕಿನ ಮಾದರಿಗಳು. ಕ್ಯಾಲಿಕ್ಯುಲೇಟರ್ ಕೈಗೆ ಬಂದಾಗ ಭತ್ತದ ಬೇಸಾಯವು 'ಲಾಭ-ನಷ್ಟ'ದ ಲೆಕ್ಕಾಚಾರಕ್ಕೆ ಇಳಿಯಿತು. ಮೊದಲಿದ್ದ ಲವಲವಿಕೆಯ ದಿನಗಳಿಗೆ ಇಳಿಲೆಕ್ಕ ಶುರುವಾಯಿತು. ಭತ್ತದ ಕೃಷಿ, ಸಂಸ್ಕೃತಿಯಿಂದು 'ತೀವ್ರನಿಗಾ' ವಿಭಾಗದಲ್ಲಿದೆ!
ಬರಿದಾಗುತ್ತಿರುವ ಅನ್ನದ ಬಟ್ಟಲಿನ ಕುರಿತು, ಸುಳ್ಯದಲ್ಲೊಂದು ಮಾತುಕತೆ. ಜತೆಗೆ ಡಾ.ಸುಂದರ ಕೇನಾಜೆಯವರ 'ಬತ್ತದ ಲೋಕ' ಕೃತಿ ಬಿಡುಗಡೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂಬಳೆ ಸುಂದರ ರಾಯರು ಒಂದು ಮಾತನ್ನು ಹೇಳಿದರು - ಇಂದು ಭತ್ತ ಉಳಿಸಿ ಆಂದೋಳನ ಕನ್ನಾಡಿನಾದ್ಯಂತ ಹಬ್ಬುತ್ತಿದೆ. ಒಳ್ಳೆಯ ಲಕ್ಷಣ. ಜತೆಜತೆಗೆ 'ಗದ್ದೆ ಉಳಿಸಿ' ಆಂದೋಳನವೂ ಆಗಬೇಕು ಎಂದರು.
ಕರಾವಳಿ ಭತ್ತದ ಕಣಜ! ಈ ಹೆಗ್ಗಳಿಕೆಯಲ್ಲೇ ಕಣಜವನ್ನು ಸೂರೆಗೊಂಡಿದ್ದೇವೆ. ಪ್ರಸ್ತುತ ಮುಡಿಗಟ್ಟಲೆ ಇಳುವರಿ ಕೊಡುವ ಗದ್ದೆಗಳು ಅಡಿಕೆ ತೋಟದಡಿಯಲ್ಲಿವೆ. ಕೆಲವು ಹೆದ್ದಾರಿಯಡಿ ಅಪ್ಪಚ್ಚಿಯಾಗಿವೆ. ಮತ್ತೆಷ್ಟೋ ದೈತ್ಯ ಕಟ್ಟಡಗಳಿಗೆ ಅಡಿಗಟ್ಟಾಗಿದೆ. ಇಂತಹ ಸನ್ನಿವೇಶದಲ್ಲಿ 'ಗದ್ದೆ ಉಳಿಸಿ' ಆಂದೋಳನ ನಿಕಟಭವಿಷ್ಯದ ಆದ್ಯತೆ.
ನಮ್ಮದು ಅನ್ನ ಸಂಸ್ಕೃತಿ. ಆ ಜಾಗದಲ್ಲೀಗ 'ಚಪಾತಿ'ಗೆ ಸ್ಥಾನ. ಚಪಾತಿಯಿಲ್ಲದೆ ಊಟವಿಲ್ಲ. ಅದೇನೂ ಅನಿವಾರ್ಯವಲ್ಲ, ಸ್ಟೈಲ್! ಸಹಜ ಸಮೃದ್ಧದ ಅಧ್ಯಕ್ಷ ಎನ್.ಆರ್.ಶೆಟ್ಟಿ ಹೇಳುತ್ತಾರೆ - 'ಆಹಾರ ಔಷಧಿಯಾಗಬೇಕಿತ್ತು. ಆದರೀಗ ಔಷಧಿಯೇ ಆಹಾರವಾಗಿದೆ'!
ಹೌದಲ್ಲ. ಭತ್ತದಲ್ಲಿ ಎಷ್ಟೊಂದು ವಿಧ-ವೈವಿಧ್ಯ. ಒಂದೊಂದು ರೋಗಕ್ಕೆ ಒಂದೊಂದು ಭತ್ತ. ಬಾಣಂತಿಗೊಂದು, ಸಕ್ಕರೆ ಕಾಯಿಲೆಗೊಂದು, ರಕ್ತದ ಒತ್ತಡದ ಶಮನಕ್ಕೆ ಮತ್ತೊಂದು.. ಇದರ ಅನ್ನವನ್ನು ಸೇವಿಸಿದರೆ ರೋಗಶಮನ. ಗದ್ದೆಗಳೇ ಇಲ್ಲದ ಮೇಲೆ ಭತ್ತವೆಲ್ಲಿ! ಮಾತ್ರೆಗಳೇ ಆಹಾರ! ಒಬ್ಬೊಬ್ಬರ ಹೊಟ್ಟೆಯೊಳಗೆ ಏನಿಲ್ಲವೆಂದರೂ ದಿನಕ್ಕೆ ಕಾಲು ಕಿಲೋ ಗುಳಿಗೆಗಳು ಇಳಿಯುತ್ತವೆ.
ಆರುವತ್ತೈದಕ್ಕೂ ಮಿಕ್ಕಿ ಭತ್ತದ ತಳಿಗಳನ್ನು ಸಂರಕ್ಷಿಸುತ್ತಿರುವ ಅಮೈ ದೇವರಾವ್, ಎಪ್ಪತ್ತು ದೇಸೀ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡುತ್ತಿರುವ ಮಂಡ್ಯದ ಬೋರೇಗೌಡರ 'ಅನ್ನದ ಬಟ್ಟಲ ಮಾತುಕತೆ' - ಕೇಳಿ ಮರೆಯುವಂತಹುದಲ್ಲ. ಬೋರೇಗೌಡರಿಗೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನಾಲ್ಕೆಕ್ರೆ ಗದ್ದೆ. ಮಾಧ್ಯಮಗಳಲ್ಲಿ ಬರುವ ಯಶೋಗಾಥೆಗಳ ಹಿಂದೆ ಬಿದ್ದು 'ಭತ್ತದ ಹುಚ್ಚು' ಹಿಡಿಸಿಕೊಂಡವರು. ಇತ್ತ ತಮಿಳುನಾಡು, ಅತ್ತ ಒರಿಸ್ಸಾಕ್ಕೂ ಹೋಗಿ ಭತ್ತದ ಮಾದರಿಗಳನ್ನು ತಂದು ಬೆಳೆದ ಸಾಹಸಿ.
ಭತ್ತದ ಋತು ಮುಗಿದ ಬಳಿಕವೂ ಗದ್ದೆಯ 'ಡೆಮೋ' ಇರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. 'ಇಪ್ಪತ್ತು ದೇಶಗಳ ರೈತರು, ವಿಜ್ಞಾನಿಗಳು ನನ್ನ ಗದ್ದೆಗೆ ಬಂದು ನೋಡಿ ಹೋಗಿದ್ದಾರೆ. ಆದರೆ ಅನತಿ ದೂರದ ಕೃಷಿ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಸಂಶೋಧನಾ ಕೇಂದ್ರಕ್ಕೆ ಈ ವಿಚಾರ ತಿಳಿದಿಲ್ಲ. ಅವರು ಬರಲೂ ಇಲ್ಲ' ಎನ್ನುತ್ತಾರೆ ಬೋರೇಗೌಡರು. ನಮ್ಮ ಸಂಶೋಧನೆಗಳು, ವಿಜ್ಞಾನಿಗಳಿಗೆ ರೈತರ ಹೊಲ, ಬೆವರಿನ ಕತೆಗಳು ಬೇಕಾಗಿಲ್ಲ. ತಮ್ಮ ನಾಲ್ಕು ಗೋಡೆಯ ಮಧ್ಯೆ ಕಂಡುಕೊಂಡ 'ಮಹಾಸತ್ಯ'ವೇ ಅಂತಿಮ! ಹಾಗಾಗಿ ನೋಡಿ - ಸಂಶೋಧನೆ, ವಿಜ್ಞಾನಿ, ರೈತ - ಈ ಸರಳರೇಖೆಗಳು ಎಲ್ಲೂ ಸಂಧಿಸುವುದೇ ಇಲ್ಲ.
'ಎಂತಹ ಬರವೇ ಬರಲಿ, ನಾನು ಮಾತ್ರ ವರುಷಪೂರ್ತಿ ಮೂರು ಹೊತ್ತು ಉಣ್ಣುತ್ತೇನೆ' - ಅಮೈ ದೇವರಾಯರ 'ಗಟ್ಟಿ' ಮಾತು! ಅವರಿಗೆ ವಿಶ್ವಾಸವಿದೆ - ನಾನು ಬೆಳೆದ ಅಕ್ಕಿಯನ್ನು ಉಣ್ಣುವುದಕ್ಕಿಂತ ಹೆಚ್ಚಿನ ಸಂತೃಪ್ತಿ, ನೆಮ್ಮದಿ ಬೇರೇನಿದೆ?
'ನನ್ನ ಅನ್ನಕ್ಕೆ ಪ್ರತ್ಯೇಕ ರುಚಿ. ಯಾವುದೇ ಸಮಾರಂಭಕ್ಕೆ ಹೋದರೂ ಅನ್ನ ರುಚಿಸುವುದಿಲ್ಲ. ನನಗೀಗ ಅರುವತ್ತೈದು ವರುಷ. ಈಗಲೂ ನನ್ನ ಆಹಾರ ಅನ್ನ-ಗಂಜಿ, ಚಪಾತಿಯಲ್ಲ! ಭತ್ತದಷ್ಟು ಶೀಘ್ರ ಇಳುವರಿ ಕೊಡುವ ಬೇರೆ ಯಾವ ಕೃಷಿಯಿದೆ? ಮೂರೇ ತಿಂಗಳಲ್ಲಿ ಇಳುವರಿ ನಿಮ್ಮ ಅಂಗಳಕ್ಕೆ! ಭತ್ತದ ಕೃಷಿ ಲಾಭವಿಲ್ಲದಿದ್ದರೂ ನಷ್ಟವಿಲ್ಲ. ವರ್ಷಪೂರ್ತಿ ಉಣ್ಣಬಹುದಲ್ಲಾ ಮಾರಾಯ್ರೆ - ದೇವರಾಯರ ವಿಶ್ವಾಸದ ಮಾತು. ಇದು ಅನುಭವದಿಂದ ರೂಢಿತವಾದ ವಿಶ್ವಾಸ. ಅಡಿಕೆಗಾಗಿಯೇ ದೊಡ್ಡದೊಡ್ಡ ಅಂಗಳ ಮಾಡ್ತೀರಲ್ಲಾ - ಅಡಿಕೆ ಸಿಪ್ಪೆ ಹಾಸಿ, ಅದರ ಮೇಲೆ ಮಣ್ಣನ್ನು ಹಾಕಿ ಭತ್ತದ ಕೃಷಿ ಮಾಡಬಹುದಲ್ಲಾ - ಮನಸ್ಸು ಬೇಕಷ್ಟೇ. ದೇವರಾಯರ ಹಿರಿ ಕಿವಿಮಾತು, 'ಮಾಜಿ ಭತ್ತದ ಕೃಷಿಕ'ರನ್ನು ಚುಚ್ಚದೆ ಬಿಡದು!
ಮನೆಯ ಚಾವಡಿಯಲ್ಲಿ, ಗದ್ದೆ ಹುಣಿಗಳಲ್ಲಿ, ಊರಿನ ಅಶ್ವತ್ಥಕಟ್ಟೆಯ ಬುಡದಲ್ಲಿ ಎಷ್ಟು ಕೃಷಿ ಮಾತುಕತೆಗಳು ನಡೆದಿಲ್ಲ? ಈಗ ಮನೆಗಳಿಗೆ ಚಾವಡಿಗಳೇ ಇಲ್ಲ, ಗದ್ದೆಯಿಲ್ಲದ ಮೇಲೆ ಹುಣಿಗಳೆಲ್ಲಿ? ಅಶ್ವತ್ಥ ಮರವು ಸಮೂಲ ನಾಶವಾಗಿದೆ? ಹಾಗಾಗಿ ಇಂತಹ ಮಾತುಕತೆಗಳೆಲ್ಲಾ ಮೌನವಾಗಿವೆ! ಅವಕ್ಕೆ ಮಾತುಕೊಡುವ ದಿವಸಗಳು ಬಂದಿದೆ.
1 comments:
tumba kalajiyulla baraha istavaaytu sir.
annada kuritada ananya baraha
Post a Comment