Saturday, May 15, 2010

ವಿಷರಹಿತ ಶುಂಠಿ ಕೃಷಿ

ರಾಸಾಯನಿಕ ಗೊಬ್ಬರ ಬಳಸದ, ವಿಷ ಸಿಂಪಡಿಸದೆ ಶುಂಠಿ ಕೃಷಿ ಮಾಡಲು ಸಾಧ್ಯವಾ?
ಸಕಲೇಶಪುರ ಸನಿಹದ ಯಡೆಹಳ್ಳಿ-ಕಾಡುಗದ್ದೆಯ ಚಿದಂಬರಂ ಹತ್ತು ಗುಂಟೆ (ಕಾಲು ಎಕ್ರೆ) ಯಲ್ಲಿ ನಾಲ್ಕು ವರುಷಗಳಿಂದ ವಿಷರಹಿತವಾಗಿ ಶುಂಠಿ ಬೆಳೆಯುತ್ತಿದ್ದಾರೆ.

'ಶುಂಠಿಗೆ ಬೀಜೋಪಚಾರ ಮುಖ್ಯ. ಮಣ್ಣಿನಲ್ಲಿ ಹೆಚ್ಚು ತೇವಾಂಶವಿದ್ದರೆ ರೋಗ ಹುಡುಕಿ ಬರುತ್ತೆ' ಎನ್ನುತ್ತಾರೆ. ಕೇರಳದ ಕೃಷಿಕರೊಬ್ಬರಿಂದ ಕಲಿತುಕೊಂಡ ಬೀಜೋಪಚಾರವನ್ನು ವಿವರಿಸಿದ್ದು ಹೀಗೆ : ಬೇಕಾಗುವ ವಸ್ತುಗಳು - ಬೇವಿನ ಎಣ್ಣೆ 300 ಎಂ.ಎಲ್., ಹಸುವಿನ ಗಂಜಲ ಐದು ಲೀಟರ್ ಮತ್ತು ಹೊಗೆಸೊಪ್ಪು 200 ಗ್ರಾಂ. ನಾಲ್ಕು ಕಿಲೋ ಸೆಗಣಿ - ಮೊದಲು ಹೊಗೆಸೊಪ್ಪನ್ನು ಇಪ್ಪತ್ತು ನಿಮಿಷ ಕುದಿಸಿ ಕಷಾಯ ಮಾಡಿಟ್ಟುಕೊಳ್ಳಿ. ಬೇವಿನೆಣ್ಣೆ, ಗಂಜಲ ಮತ್ತು ಈ ಕಷಾಯವನ್ನು ಅರುವತ್ತು ಲೀಟರ್ ನೀರಿನೊಂದಿಗೆ ಬೆರೆಸಿ. ಇದರಲ್ಲಿ ಹದಿನೈದು ನಿಮಿಷ ಶುಂಠಿಬೀಜವನ್ನು ಅದ್ದಿಡಿ. ನೆರಳಿನಲ್ಲಿ ಯಾವುದೇ ಮರದ ಸೊಪ್ಪನ್ನು ಹರಡಿಟ್ಟುಕೊಳ್ಳಿ. ನೆನೆಸಿದ ಬೀಜವನ್ನು ತೆಗೆದು ಗುಡ್ಡೆಹಾಕಿ. ಇಪ್ಪತ್ತು ದಿವಸದಲ್ಲಿ ಮೊಳಕೆಯೊಡೆಯುತ್ತದೆ.

ನೆಡುವಾಗಲೂ ತಮ್ಮದೇ ವಿಧಾನ. ಹದಿನೈದಡಿ ಉದ್ದ, ಮೂರೂವರೆ ಅಡಿ ಅಗಲ ಬರುವಂತಹ ಹನ್ನೆರಡು ಮಡಿಗಳು. ಪ್ರತಿ ಮಡಿಯ ಮಧ್ಯೆ ಮತ್ತು ಮಡಿಗಳ ಸುತ್ತಲೂ ನೀರು ಹರಿದುಹೋಗುವಂತೆ ಕಣಿಗಳ (ಚಿಕ್ಕ ಕಾಲುವೆ) ವ್ಯವಸ್ಥೆ.

ಮಡಿಯಲ್ಲಿ ಬೇವಿನಹಿಂಡಿ ಹರಡಿ ಮಣ್ಣಿನೊಂದಿಗೆ ಮಿಶ್ರ ಮಾಡುತ್ತಾರೆ. ಅಡಿಗೊಂದರಂತೆ ಶುಂಠಿಯ ಮೊಳಕೆಯನ್ನು ಮೇಲ್ಬದಿ ಬರುವಂತೆ ಮಣ್ಣಿನಲ್ಲಿ ಊರಿ, ಅದರ ಮೇಲೆ ಕೊಟ್ಟಿಗೆ ಗೊಬ್ಬರ ಹಾಕಿ ಮುಚ್ಚುವುದು. ಕಳೆ ಬಾರದಂತೆ ಒಣಹುಲ್ಲನ್ನು ಹರಡಿದರೆ ಆಯಿತು. ಹುಲ್ಲಿನ ಬದಲಿಗೆ ಸೊಪ್ಪನ್ನೂ ಬಳಸಬಹುದು.

ಹದಿನೈದನೇ ದಿವಸದಿಂದ ಸ್ಲರಿ ಮತ್ತು ಜೀವಾಮೃತ ಉಣಿಕೆ. ನಲವತ್ತೈದನೇ ದಿನಗಳಲ್ಲಿ ಗಿಡ ಮೇಲೆದ್ದು ಬರುತ್ತದೆ. ಕಾಂಪೋಸ್ಟ್, ಎರೆಗೊಬ್ಬರ, ದ್ರವರೂಪಿ ಗೊಬ್ಬರಗಳು, ಸ್ಲರಿ, ಜೈವಿಕ ಗೊಬ್ಬರಗಳನ್ನು ಕಾಲ ಕಾಲಕ್ಕೆ ನೀಡಿದ್ದಾರೆ.

ಕೆಲವು ಸಲ ಕೊಳೆ ರೋಗ ಬರುವುದುಂಟು. 'ಸುಣ್ಣ ಮತ್ತು ಮೈಲುತುತ್ತು ಅಥವಾ ಗಂಜಲವನ್ನು ಮಿಶ್ರಮಾಡಿ ಕೊಳೆಯುಕ್ತ ಶುಂಠಿ ಗಿಡಗಳಿಗೆ ಕೊಟ್ಟರೆ ಶಮನವಾಗುತ್ತದೆ' ಇದು ಮಾಡಿ ನೋಡಿದ ಅನುಭವ. 'ತೇವ ಹೆಚ್ಚಾದರೆ ಕೊಳೆ ರೋಗ ಬರುತ್ತದೆ. ಹಾಗಂತ ಆ ರೋಗ ನಿವಾರಣೆಗೆ ಯದ್ವಾತದ್ವಾ ವಿಷ, ಕ್ರಿಮಿನಾಶಕ ಹೊಡೆಯುವ ಅಗತ್ಯವಿಲ್ಲ' ಎನ್ನುವುದು ಕಿವಿಮಾತು.

'ನೆಟ್ಟು 8-9 ತಿಂಗಳಲ್ಲಿ ಶುಂಠಿ ಅಗೆಯಲು ಸಿದ್ಧ. ರೋಗ ಬರಬಹುದೆಂಬ ಭೀತಿಯಿಂದ ಐದಾರು ತಿಂಗಳಲ್ಲೇ ಕೆಲವರು ಶುಂಠಿ ತೆಗೆಯುತ್ತಾರೆ. ಆದರದು ಹೆಚ್ಚು ಬಲಿತಿರುವುದಿಲ್ಲ.'

ಬೀಜದ ಆಯ್ಕೆಯಲ್ಲೂ ಕೆಲವು ಕಟ್ಟುಪಾಡುಗಳು - 'ಕನಿಷ್ಠ ಒಂಭತ್ತು ತಿಂಗಳು ನೆಲದೊಳಗೆ ಇದ್ದ ಶುಂಠಿಯನ್ನು ತೆಗೆಯುವಾಗಲೇ ಮೊಳಕೆಯೊಡೆದ ಕಣ್ಣನ್ನು ಬೀಜಕ್ಕಾಗಿ ತೆಗೆದಿಡಬೇಕು. ಮೊಳಕೆ ದೊಡ್ಡದಾದರೆ ನೆಡುವ ಹಂತದಲ್ಲಿ ಅಜಾಗ್ರತೆಯಿಂದ ಮುರಿಯುತ್ತದೆ. ಅಂತಹುದಕ್ಕೆ ಬೆಳವಣಿಗೆ ಕಡಿಮೆ.'

'ಶುಂಠಿ ಬೀಜವನ್ನು ನಾನು ಕೊಂಡು ತರುವುದಿಲ್ಲ. ನಮ್ಮ ತೋಟದಲ್ಲೇ ಬೇಕಾದಷ್ಟು ಸಾವಯವ ಗೊಬ್ಬರ ತಯಾರಿಸುತ್ತೇನೆ. ಬೇವಿನ ಹಿಂಡಿ, ಬೇವಿನೆಣ್ಣೆ, ಜೀವಾಮೃತಕ್ಕೊಂದಿಷ್ಟು ಬೆಲ್ಲ, ಕೆಲಸಕ್ಕೆ ಅಪರೂಪಕ್ಕೆ ಆಳುಗಳು - ಇವು ಬಿಟ್ಟರೆ ಬೇರೆ ನಗದು ಖರ್ಚೆಲ್ಲ. ಅಂದಾಜು 1000 ರೂಪಾಯಿಯಲ್ಲಿ ಎಲ್ಲವೂ ಮುಗಿಯುತ್ತವೆ. ಪ್ರತಿ ವರ್ಷ ಸರಾಸರಿ ಏಳು ಕ್ವಿಂಟಾಲ್ (ಹನ್ನೆರಡು ಚೀಲ) ಚೀಲ ಶುಂಠಿ ಸಿಗುತ್ತಿದೆ.'

ಮಡಿಯಲ್ಲಿ ಶುಂಠಿ ಬೀಜ ನೆಟ್ಟು ಗಿಡ ಬೆಳೆಯಲು ಹೇಗೂ ಎರಡು ತಿಂಗಳು ಬೇಕು. ಈ ಅವಧಿಯ ಮಧ್ಯೆ ಅಲಸಂಡೆ, ಬೆಂಡೆ, ಹಾಗಲ, ಮೆಣಸು, ಬೂದುಗುಂಬಳ, ಟೊಮೆಟೋ ಇತ್ಯಾದಿ ತರಕಾರಿ ಬೆಳೆದಿದ್ದಾರೆ. ಪ್ರತ್ಯೇಕ ಗೊಬ್ಬರ ಇಲ್ಲ.

ಏಳು ವರ್ಷ ಹಿಂದೆ ಒಂದೆಕೆಯಲ್ಲಿ ರಾಸಾಯನಿಕ ಬಳಸಿ ಶುಂಠಿ ಕೃಷಿ ಮಾಡಿದ್ದರಂತೆ. ಅದಕ್ಕೆ ವಿಷ ಹೊಡೆದು ಸಾಕಾಯ್ತು. ಹೇಳುವಂತಹ ಆದಾಯವೂ ಸಿಗಲಿಲ್ಲ. ಅಲ್ಲಿಂದ ಈ ತನಕ ವಿಷಮುಕ್ತ ಕೃಷಿ. ಅಂದು ರಾಸಾಯನಿಕ ಕೃಷಿಯಲ್ಲಿ ಸಿಕ್ಕಷ್ಟೇ ಇಳುವರಿ ಆಗ ಸಾವಯವದಲ್ಲೂ ಬರುತ್ತಿದೆಯಂತೆ.

ಚಿದಂಬರಂ ನಿವೃತ್ತ ಸೈನಿಕ. ತಂದೆ ತೀರಿಕೊಂಡಾಗ ಮನೆಯ ಜವಾಬ್ದಾರಿ ಹೆಗಲೇರಿತು. ಈ ಕಡೆ ಸಾವಯವ ಕೃಷಿಯ ರೂಢಿಯೇ ಇಲ್ಲ. ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಸಾವಯವದ ಅರಿವು ಕೊಟ್ಟಾಗ ಕಣ್ತೆರೆಯಿತು. ನಾಲ್ಕೆಕರೆಯಲ್ಲಿ ಮೂರೆಕರೆಯಷ್ಟು ಸಾವಯವ ಭತ್ತ ಬೆಳೆಯುತ್ತಿದ್ದಾರೆ.

ಮೂಡಿಗೆರೆ ಸನಿಹದ ಫಲ್ಗುಣಿಯ ಕೆ.ಕೆ.ಗೋಪಾಲ್ ಹದಿನೈದು ವರುಷದಿಂದ ಐದು ಕ್ವಿಂಟಾಲ್ ಶುಂಠಿ ಬೆಳೆಯುತ್ತಾರೆ. ಅವರದು ಅಡಿಕೆ ತೋಟ. ಖಾಲಿ ಜಾಗ ಇರುವಲ್ಲೆಲ್ಲಾ 15-20 ಉದ್ದದ ಮಡಿ ಮಾಡಿ ಶುಂಠಿ ಕೃಷಿ. ಗೌರಿ ಹಬ್ಬ ಬಂದಾಗ ಕೀಳುತ್ತಾರೆ. 'ನಾಟಿ ಶುಂಠಿ ತಳಿಗೆ ರೋಗವಿಲ್ಲ. ಹೈಬ್ರಿಡ್ಗೆ ರೋಗ ಜಾಸ್ತಿ' ಎನ್ನುವ ಗೋಪಾಲ್ ಹಟ್ಟಿ ಗೊಬ್ಬರ, ಎರೆಗೊಬ್ಬರ ಬಳಸಿ ಕೃಷಿ ಮಾಡುತ್ತಾರೆ.

0 comments:

Post a Comment