ಕೃಷಿಗೆ ಪೂರಕವಾಗಿಲ್ಲದ ಅಂತರ್ಜಲ ಮಸೂದೆ ಇನ್ನೇನು ಮಂಜೂರಾಗಲಿದೆ. ಮರಗಳನ್ನು ತಮಗಿಷ್ಟ ಬಂದಂತೆ ಕಡಿದು, ಪರಿಸರವನ್ನು ನುಣುಪಾಗಿಸುವ (!) ಮಾರಕ ವಿಧೇಯಕದ ಅಡಿಕಟ್ಟು ಸಿದ್ಧವಾಗುತ್ತಿದೆ. ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ ಮಸೂದೆಯು ಚರ್ಚೆಯಲ್ಲಿದೆ. ಇವೆಲ್ಲಾ ತೆರೆಮರೆಯಲ್ಲಿ ಸದ್ದಿಲ್ಲದೆ ತಂಪುಕೋಣೆಯಲ್ಲಿ ರೂಪುಗೊಳ್ಳುತ್ತಿವೆ. ಜಾಲತಾಣಗಳಲ್ಲಿ ಪ್ರಕಟಿಸಿದರೆ 'ಸಾರ್ವಜನಿಕರಿಗೆ ತಿಳಿಸಿದಂತೆ' ಎಂದು ವರಿಷ್ಠರು ತಿಳಿದಂತಿದೆ.
ಇಂದು ಕಂಪ್ಯೂಟರ್ ಪ್ರವೇಶಿಸದ ಹಳ್ಳಿಗಳು ಎಷ್ಟಿಲ್ಲ? ಕಂಪ್ಯೂಟರ್ ಇದ್ದರೂ, ಜಾಲತಾಣ ಸಂದರ್ಶಿಸಲು ಎಷ್ಟು ಮಂದಿಗೆ ಸಾಧ್ಯವಾಗಿದೆ? ಬ್ರಾಡ್ ಬ್ಯಾಂಡ್ಗಳು ಎಷ್ಟು ಹಳ್ಳಿಗಳಿಗೆ ನುಗ್ಗಿವೆ? ಪ್ರತಿಯೊಂದು ವಿಧೇಯಕಗಳಿಗೂ ಸಾರ್ವಜನಿಕ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಇದು ಬಳಕೆದಾರನಿಗೆ ಹೇಗೆ ತಿಳಿಯಬೇಕು? ಪತ್ರಿಕೆಯ ಮೂಲೆಯಲ್ಲೆಲ್ಲೋ ಇಲಾಖೆಯು ಜಾಹೀರಾತು ಕೊಟ್ಟ ಮಾತ್ರಕ್ಕೆ ತಿಳಿಯುತ್ತದೇನು?
ಇಂತಹ ಸಂದರ್ಭದಲ್ಲಿ ಪರಸ್ಪರ ಮಾತುಕತೆಗಳಿಂದ 'ತಮಗೇನು ಬೇಕು', 'ವಿಧೇಯಕದಲ್ಲಿ ಏನು ತೊಂದರೆಗಳಿವೆ', 'ಸರಕಾರದಿಂದ ನಮಗೆ ಎಂತಹ ಸವಲತ್ತುಗಳು ಬಂದಿಲ್ಲ', 'ಬದುಕಿಗೆ ಮಾರಕವಾಗುವಂತಹ ಕಾನೂನುಗಳು ಏನಿವೆ? - ಇಂತಹ ಸಂವಹನಗಳು ಹಳ್ಳಿಗಳಲ್ಲಿ ನಡೆಯದಿದ್ದರೆ; ಪ್ರತಿದಿನ ಒಂದೊಂದು ವಿಧೇಯಕಗಳು ನಮ್ಮ ಕಿಟಕಿಯೊಳಗೆ ಪ್ರವೇಶಿಸಿ ಬದುಕನ್ನು ಕಸಿಯುತ್ತವೆ.
ಪರಸ್ಪರ ಸಿಕ್ಕಾಗ, ಸಮಾರಂಭಗಳಲ್ಲಿ ಮುಖತಃ ಭೇಟಿಯಾದಾಗ ಮಾತ್ರ ಕೃಷಿ ಮಾತುಕತೆಗಳು ನುಸುಳುತ್ತವೆ! ಅದೂ 'ಋಣಾತ್ಮಕ' ವಿಷಯಗಳಲ್ಲಿ, ಪರದೂಷಣೆಯಲ್ಲೇ ಗಿರಕಿ ಹೊಡೆಯುತ್ತಿರುತ್ತವೆ!
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಮೀಯಪದವಿನಲ್ಲಿ ಇಂತಹ ಕೃಷಿ ಮಾತುಕತೆಗಳಿಗಾಗಿ 'ಚೌಟರ ಚಾವಡಿ' ಸಜ್ಜಾಗಿದೆ. ಖಾಸಗಿ ನೆಲೆಯಲ್ಲಿ ರೂಪುಗೊಂಡಿದ್ದರೂ, ಕೃಷಿ ಮಾತುಕತೆಗಳಿಗೆ ಸದಾ ತೆರೆದ ಬಾಗಿಲು.
ಚಾವಡಿಯ ಆಧ್ಯಕ್ಷ ಡಾ.ಡಿ.ಸಿ.ಚೌಟ ಹೇಳುತ್ತಾರೆ - ಹಳ್ಳಿಗಳ ಕೃಷಿ ಸಂಪತ್ತಿಗೆ ನಷ್ಟ ಸಂಭವಿಸದಂತೆ ಹಳ್ಳಿಯ ಬದುಕು ಮತ್ತು ಕೃಷಿ ಸಂಸ್ಕೃತಿಯ ಸುತ್ತ ನಿರಂತರ ಸಂವಾದ ನಡೆಯುತ್ತಲೇ ಇರಬೇಕು. ಸಂವಾದ, ಚರ್ಚೆ ಮತ್ತು ವಿಚಾರ ಸಂಕಿರಣಗಳ ಕೇಂದ್ರಸ್ಥಾನದಲ್ಲಿ ಕೃಷಿಕ ಸಮುದಾಯ ಇರಬೇಕು. ಕೃಷಿಕ ಸಮುದಾಯದ ದೇಶೀಯ ಜ್ಞಾನ ಪರಂಪರೆಯ ಅನಾವರಣ ಮತ್ತು ಬಳಕೆಯನ್ನು ಸಮರ್ಪಕ-ಪರಿಣಾಮಕಾರಿಯಾಗಿ ಮಾಡಬೇಕೆಂಬ ಉದ್ದೇಶಕ್ಕೆ ಅನುಗುಣವಾಗಿ ಕೃಷಿಕರ ಸಮುದಾಯ ಭವನ 'ಚೌಟರ ಚಾವಡಿ' ನಿರ್ಮಾಣವಾಗಿದೆ.
'ಕೃಷಿ ಮತ್ತು ಗ್ರಾಮೀಣ ಬದುಕಿನ ಭವಿಷ್ಯದ ಚಿಂತನ-ಮಂಥನ'ದೊಂದಿಗೆ ಚಾವಡಿ ಶುಭಾರಂಭಗೊಂಡಿತ್ತು. ನಮ್ಮ ಬಹುತೇಕ ಮಾತುಕತೆಗಳಲ್ಲಿ ಕೃಷಿ ಕ್ಷೇತ್ರದ ಗಣ್ಯರು, ಕೃಷಿಕರು, ವಿಜ್ಞಾನಿಗಳು ತಮ್ಮ ಅನುಭವವನ್ನು ಹೇಳುತ್ತಾರೆ. ಇಲ್ಲಿ ಹಾಗಲ್ಲ. ಕೃಷಿ ಕುಟುಂಬದಲ್ಲಿ ಹುಟ್ಟಿ, ಬೆಳೆದು, ಪ್ರಸ್ತುತ ಉದ್ಯೋಗ ನಿಮಿತ್ತ ಅನ್ಯಕ್ಷೇತ್ರದಲ್ಲಿದ್ದು ಸದಾ 'ಕೃಷಿ ತುಡಿತ'ವನ್ನು ಅಂಟಿಸಿಕೊಂಡಿರುವ ಗಣ್ಯರಿಲ್ಲಿ ಮಾತುಕತೆಯಲ್ಲಿ ತೊಡಗಿರುವುದು ಗಮನಾರ್ಹ.
ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೃಷಿ ಮೂಲದಿಂದ ಬೆಳೆದವರು. ಅವರು ಯಾವುದೇ ದೇಶಕ್ಕೆ ಹೋದರೂ ಕೃಷಿಕರನ್ನು ಮಾತನಾಡಿಸುವ ಒಲವು. ಅವರ ಚಿತ್ರಗಳಲ್ಲೆಲ್ಲಾ ಕೃಷಿ/ಹಳ್ಳಿ ಟಚ್.
ಕೃಷಿಯಲ್ಲಿ 'ವಿದ್ಯುತ್, ನೀರು, ಬೆಲೆ' ಇವಿಷ್ಟಕ್ಕೆ ಸರಕಾರ ನಿಗಾ ವಹಿಸಿದರೆ ಸಾಕು, ಮಿಕ್ಕೆಲ್ಲಾ ಪ್ರಕೃತಿಯೊಂದಿಗೆ ರೈತನೇ ನಿಭಾಯಿಸುತ್ತಾನೆ. ಕೃಷಿಯು ಪಾರಂಪರಿಕವಾಗಿ ಬದುಕಿನಲ್ಲಿ ಬೇರೂರಿದ ಕಸುಬು. ಪ್ರಸ್ತುತ ಮಳೆಯನ್ನೇ ನಂಬಿ ಬೆಳೆಯಬೇಕಾದ ಭೂಮಿಗಳಿಗೆ ತೊಂದರೆಯಾಗಿದೆ. ರೈತರು ಕಂಗಾಲಾಗಿದ್ದಾರೆ. ನೀರಿನ ಸಂಕಟ ಬೇರೆ. ಇಂತಹ ತೊಂದರೆಗಳಿಗೆ ಪರಿಹಾರ ಏನು?' ಹೀಗೆ ತಮ್ಮ ಆರೆಕ್ರೆ ಕೃಷಿಯ ಅನುಭವದೊಂದಿಗೆ ವಾಸ್ತವಿಕ ವಿಚಾರಗಳತ್ತ ನೋಟ ಬೀರಿದರು.
ಡಾ.ಬಿ.ಎ.ವಿವೇಕ ರೈಯವರು ಇಂದಿನ ಕೃಷಿ, ಕೃಷಿಕರ ಹಿಂದಿನ ರಾಜಕೀಯ ಹುನ್ನಾರಗಳತ್ತ ಬೆಳಕು ಚೆಲ್ಲುತ್ತಾ, 'ಕೃಷಿಕರೆಂದು ಹೇಳುವ ಕೃಷಿಕರಿಗೆ ಬೇರೆ ಬೇರೆ ಬಣ್ಣ, ಧ್ವಜಗಳಿವೆ! ನಿಜವಾದ ಕಾಳಜಿ ಮಸುಕಾಗಿ ಫ್ಯಾಶನ್ ರೂಪ ಪಡೆದಿವೆ. ಇವೆಲ್ಲಾ ಪಕ್ಷಗಳೊಂದಿಗೆ ಗುರುತಿಸಿಕೊಂಡಿವೆ. ಇಂದಿನ ಜಾಗತಿಕ ವ್ಯವಸ್ಥೆಯು ಕೃಷಿಕನಿಂದ ಭೂಮಿ, ನೀರು, ಬೀಜಗಳನ್ನು ಕಸಿದುಕೊಂಡಿದೆ. ಅದನ್ನು ಮತ್ತೆ ಹೇಗೆ ಮರಳಿ ಪಡೆಯಬೇಕು? ಕೃಷಿಯಿಂದು ದುರುಪಯೋಗವಾಗುತ್ತದೆ. ಇಂಡಿಯಾದಲ್ಲಿ ಭ್ರಷ್ಠಾಚಾರ ನಾಚಿಕೆಯಿಲ್ಲದೆ ನಡೆಯುತ್ತಿವೆ.'
'ಇವರಿಗೇನು ಕೃಷಿ ಗೊತ್ತು' ಎಂದು ಇಂತಹ ಚಿಂತನೆಗಳನ್ನು ಬದಿಗಿಡಬೇಕಾಗಿಲ್ಲ. ಸ್ವಲ್ಪ ಹೊತ್ತು ನಿಂತು ಚಿಂತಿಸಿದರೆ ಗಾಢತೆಯ ಅರಿವಾಗುತ್ತದೆ. 'ನಿಂತು ಚಿಂತಿಸಲು' ನಮಗೆ ಪುರುಸೊತ್ತಿಲ್ಲವಲ್ಲಾ! ತಕ್ಷಣದ ಪ್ರತಿಕ್ರಿಯ ನೀಡುತ್ತಾ, ಋಣಾತ್ಮಕ ಚಿಂತನೆಯನ್ನೇ ಧನಾತ್ಮಕ ಎಂದು ಸ್ವೀಕರಿಸುವ ನಮ್ಮ ಬೌದ್ಧಿಕ ದಿವಾಳಿಗೆ ಯಾರನ್ನು ದೂರಬೇಕು?
ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರು - '2025ರ ಹೊತ್ತಿಗೆ ನಮ್ಮ ರಾಜ್ಯದ ಕೃಷಿ ಪರಿಸ್ಥಿತಿ ಹೇಗಿರಬಹುದು' ಎಂಬ ಹೊಸ ಬಾಣ ಬಿಟ್ಟಾಗ, ಒಂದು ಕ್ಷಣ ಮೌನ. 'ಪಟ್ಟಣದ ಕಡೆಗೆ ಜನ ಹೋಗುತ್ತಾರೆ. ಅಲ್ಲಿನ ಸಮಸ್ಯೆಯಿಂದಾಗಿ ಹೆಚ್ಚಿನವರು ಕೃಷಿಗೆ ಮರಳುವುದು ಖಚಿತ. ಹಾಗೆ ಮರಳುವಾಗಿ ಮೊದಲಿನ ತಮ್ಮ ಕೃಷಿ ಭೂಮಿ ನಾಪತ್ತೆಯಾಗಿರುತ್ತದೆ! ಮತ್ತದೇ ತಲ್ಲಣದ ಬದುಕು. 'ಮರಳಿ ಹಳ್ಳಿಗೆ ಹೋಗೋಣ' ಎಂಬ ಹೊಸದೊಂದು ಚಳುವಳಿಯೇ ಬೇಕಾಗಬಹುದೇನೋ?
ರೈತರ ಸಮಸ್ಯೆಗಳಿಗೆ ವೈಯಕ್ತಿಕವಾಗಿ ರೈತರೇ ಚಿಂತಿಸಿದರೆ ಸಾಲದು. ಸಾಧ್ಯವೂ ಇಲ್ಲ. ನೋವಿಗೆ ಮಾತು ಕೊಡುವ ಕೆಲಸ ಇಂತಹ ಹಳ್ಳಿ ಕಟ್ಟುವ ಚಾವಡಿಗಳಿಂದಾಗಬೇಕು. ಈಗಿನ ಕೃಷಿ ತಲ್ಲಣಗಳಿಗೆ ಬೆಳಕಿಂಡಿಯಾದೀತು. ಬದುಕಿನಲ್ಲಿ ಮಾತುಗಳೇ ದೂರವಾಗುತ್ತಿರುವ ಕಾಲಘಟ್ಟದಲ್ಲಿ 'ಮಾತನಾಡೋಣ ಬನ್ನಿ' ಎಂದು ಕರೆಯುತ್ತಿರುವ ಚೌಟರ ಚಾವಡಿ ಒಂದು ಸ್ಟೆಪ್ಪಿಂಗ್ ಸ್ಟೋನ್. ಇಂತಹ ವೇದಿಕೆಗಳು ಹಳ್ಳಿಹಳ್ಳಿಗಳಲ್ಲಿ ರೂಪಗೊಳ್ಳಬೇಕು. ಆದರವು ಬಣ್ಣ, ಧ್ವಜಗಳಿಂದ ಮುಕ್ತವಾಗಿರಲಿ.
Home › Unlabelled › ಹಳ್ಳಿ ಕಟ್ಟುವ 'ಚಾವಡಿ'
0 comments:
Post a Comment