ವಾರದಾರಂಭಕ್ಕೆ ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ಕಾಲಾವಧಿ 'ಫಲಪುಷ್ಪ ಪ್ರದರ್ಶನ' ನಡೆದಿತ್ತು. ಪುಷ್ಪ ವಿನ್ಯಾಸಗಳು. ಗುಲಾಬಿ ಹೂವಿನ ಕಲಶ, ಕಲ್ಲಂಗಡಿಯಲ್ಲಿ ಕೆತ್ತಿದ ವಿವಿಧ ಸಾಹಿತಿಗಳ ರಚನೆಗಳು, ಪಿಲಿಕುಳದ ದೇಸೀ ತಯಾರಿಗಳು, ಸಿರಿ ಉತ್ಪನ್ನಗಳು.. ಮಿಕ್ಕಂತೆ ಮಾಮೂಲಿ ಮಳಿಗೆಗಳು.
ಪ್ರದರ್ಶನದಂಗವಾಗಿಯೇ ರೂಪಿತವಾಗಿತ್ತು - 'ಪೌಷ್ಟಿಕಾಂಶ ತರಕಾರಿ ತೋಟ'. ಸುಮಾರು ಇಪ್ಪತ್ತೈದು ವಿಧಧ ತರಕಾರಿಗಳನ್ನು ಬೆಳೆಸಲಾಗಿತ್ತು. ಫಲದ ಭಾರದಿಂದ ಅವೆಲ್ಲಾ ತೊನೆದಿದ್ದುವು! ಹೆಚ್ಚಿನವು ಮಾಗಿ, ದಿನದೆಣಿಕೆ ಸುರುಮಾಡಿದ್ದುವು!
ತರಕಾರಿ ತೋಟದ ವಿವರಗಳ ಬಗ್ಗೆ ಇಲಾಖಾ ಮಳಿಗೆಯೊಂದರಲ್ಲಿ ಕೇಳಿದಾಗ ಅದೇ ಸರಕಾರಿ ಮರ್ಜಿಯ ಉತ್ತರ! ಅತ್ತಿತ್ತ ಅಲೆದಾಡಿದ ಬಳಿಕ ಒಬ್ಬ ಮಹಾಶಯನಿಂದ 'ಅಲ್ಲಿ ಹೋಗ್ರಿ.. ಬಾಬು ನಾಯಕ್ ಎಂಬವರಿದ್ದಾರೆ. ಅವರಲ್ಲಿ ಕೇಳಿ' ಎಂಬ ಉತ್ತರ ಸಿಕ್ತು! 'ಇನ್ನೆಂದೂ ಯಾರಿಗೂ ನಗುಮುಖ ತೋರಿಸಲಾರೆ' ಎಂಬ ಹರಕೆ ಹೊತ್ತಂತಿತ್ತು ಆ ಮುಖ!
ನಾಯ್ಕರನ್ನು ಹುಡುಕಿ ಹೋದೆ. ತರಕಾರಿ ಗಿಡಗಳಿಗೆ ತಮ್ಮ ಪಾಡಿಗೆ ನೀರು ಹಾಕುತ್ತಿದ್ದರು. 'ನೋಡಿ.. ಈ ಜನವರಿ ತಿಂಗಳಿಗೆ ಸರಿಯಾಗಿ ಇಳುವರಿ ಬರುವಂತೆ ಬೆಳೆಸಿದ್ದೇವೆ. ಫೆಬ್ರವರಿಯಲ್ಲಿ ಪ್ರದರ್ಶನ ಮಾಡಿದ್ದಾರೆ. ತರಕಾರಿಗಳು ಗಿಡದಲ್ಲಿ ಉಳಿದಿರುವುದೇ ಪುಣ್ಯ' ಎಂದರು.
ಪ್ರದರ್ಶನಕ್ಕೆ ಪುಷ್ಟವೇ ಮುಖ್ಯ. ಹಾಗಾಗಿ ಅವಗಳು ಅರಳುವ ಸಮಯದಲ್ಲೇ ಪುಷ್ಪಪ್ರದರ್ಶನ. ಈ ಸಲ ಹವಾಮಾನದ ವೈಪರೀತ್ಯದಿಂದಾಗಿ ಒಂದು ತಿಂಗಳು ತಡವಾಗಿ ಹೂಗಳು ಅರಳಿವೆ. ಹಾಗಾಗಿ ಫೆಬ್ರವರಿಯಲ್ಲಿ ಪ್ರದರ್ಶನ. 'ಜನವರಿಯಲ್ಲಿ ಶೋ ಇರಬೇಕಿತ್ತು. ತರಕಾರಿಗಳಿಗೆ ಕಣ್ಣುಮುಟ್ಟುತ್ತಿತ್ತು. ಅಷ್ಟು ಹಿಂಡುಹಿಂಡಾಗಿ ಬಂದಿತ್ತು'- ಎನ್ನುತ್ತಾರೆ ಬಾಬು.
ಕಳೆದ ವರುಷದಿಂದ ತರಕಾರಿ ಡೆಮೋ ಸುರು. ಈ ಸಲ ವಿಸ್ತಾರಗೊಂಡಿದೆ. ಬದನೆ, ಸೊರೆ, ಚೀನಿಕಾಯಿ, ಬೂದುಗುಂಬಳ, ಬೆಂಡೆ, ತಿಂಗಳ ಹುರುಳಿ, ಮೂಲಂಗಿ.. ಹೀಗೆ ನಾಯ್ಕರ ಕೈ ಗುಣದಿಂದ ಸೊಂಪಾಗಿ ಬೆಳೆದಿವೆ.
ಆರಂಭಕ್ಕೆ ರಾಸಾಯನಿಕ ಗೊಬ್ಬರ ಕೊಟ್ಟಿಲ್ಲ! ಕುರಿಗೊಬ್ಬರ ಹೇರಳ ಕೊಟ್ಟಿದ್ದಾರೆ. ಇಳುವರಿಯ ಹಂತವೂ ದಾಟಿತಲ್ವಾ - ಪ್ರದರ್ಶನಕ್ಕಾಗಿ ಇವರನ್ನು ಉಳಿಸಲೋಸುವ ರಾಸಾಯನಿಕ ಗೊಬ್ಬರೆ ಕೊಟ್ಟಿದ್ದೇವೆ - ಎನ್ನುತ್ತಾರೆ ಬಾಬು. ಇವರ ಅನುಭವದಂತೆ ಕುರಿಗೊಬ್ಬರ ಹೆಚ್ಚಾದರೆ ಅವಕ್ಕೆ ಯಥೇಷ್ಟ ನೀರು ಬೇಕು, ಗಿಡದ ಬುಡಕ್ಕೆ ಉಷ್ಣ ಹೆಚ್ಚಾಗಿ ಗಿಡಗಳು ಬಾಡುತ್ತವೆ. ಎರೆ, ಹಟ್ಟಿಗೊಬ್ಬರ ಒಳ್ಳೆಯದು.
ಪ್ರದರ್ಶನಕ್ಕೆ ಬಂದ ತರಕಾರಿ ಪ್ರಿಯರೊಬ್ಬರು ಕೇಳಿದರು - ನಾವು ಎಷ್ಟು ಆರೈಕೆ ಮಾಡಿದರೂ ಬೀಜ ಮೊಳಕೆ ಬರುವುದೇ ಇಲ್ಲ - ಏನು ಕಾರಣ? ತರಕಾರಿ ಕೃಷಿಗೆ ಬಿಸಿಲು ಬೇಕು. ನೆರಳಿನಲ್ಲಿ ಗಿಡ, ಇಳುವರಿ ಚೆನ್ನಾಗಿ ಬರುವುದಿಲ್ಲ. ಮೊಳಕೆ ಹಂತದಲ್ಲಿ ನೀರಿನಂಶ ಮಣ್ಣಿನಲ್ಲಿ ಹೆಚ್ಚಾಗಕೂಡದು. ಬಳ್ಳಿ ತರಕಾರಿಗಳಿಗೆ ಚಪ್ಪರ ಬೇಕೇ ಬೇಕು. ಅದು ಅದರ ಗುಣ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟರೆ ಬಳ್ಳಿ ತರಕಾರಿಗಳು ಒಳ್ಳೆಯ ಇಳುವರಿಯನ್ನು ನೀಡುತ್ತವೆ.
ಸುಂದರ ವಿನ್ಯಾಸದಲ್ಲಿ ತರಕಾರಿ ತೋಟವನ್ನು ಬೆಳೆಸಿದ್ದಾರೆ. ಪ್ರವೇಶದಲ್ಲೇ ಬಸಲೆ ಚಪ್ಪರ. ನಂತರ ಸೊಪ್ಪು ತರಕಾರಿಗಳ 'ಗಡಿಯಾರ ತೋಟ'! ಅಂದರೆ ವೃತ್ತಾಕಾರದಲ್ಲಿ ವಿವಿಧ ಸೊಪ್ಪು ತರಕಾರಿಗಳ ಬೆಳೆ. ಹೊರಭಾಗದಲ್ಲಿ ಅಲಂಕಾರಿಕ ಕೋಸು ಗಿಡಗಳು. ಮಧ್ಯದಲ್ಲಿ ಹರಿವೆ ಗಿಡಗಳು. ಮಧ್ಯೆ ಪಾಲಕ್, ಮೆಂತೆ ಮೊದಲಾದ ಸೊಪ್ಪುಗಳು.
'ದಿಸ್ ಇಸ್ ಬ್ರಿಂಜಾಲ್' ಇಂಗ್ಲೀಷ್ ಅಮ್ಮ ತನ್ನ ಮಗುವಿಗೆ ಬದನೆಯನ್ನು ವಿವರಿಸುತ್ತಿದ್ದರು. ಆ ಮಗು ಬದನೆಯನ್ನು ಮುಟ್ಟಿ-ತಟ್ಟಿ ಸಂತೋಷಪಡುತ್ತಿತ್ತು. ಅಂಗಡಿಯಿಂದ ತೊಟ್ಟೆಯಲ್ಲಿ ತೂಗಿಸಿಕೊಂಡು ಮನೆಗೆ ತರುವ ತರಕಾರಿಯನ್ನು ನೋಡಿದ ಮಗುವಿಗೆ ಗಿಡದ 'ಲೈವ್' ತರಕಾರಿಯನ್ನು ನೋಡಿದಾಗ ಎಷ್ಟು ಖುಷಿಯಾಗಿತ್ತು ಗೊತ್ತಾ?
ಶಾಲಾ ತಂಡವೊಂದು ಪ್ರದರ್ಶನವನ್ನು ವೀಕ್ಷಿಸಲು ಬಂದಿತ್ತು. ಬಹಳ ಶಿಸ್ತಿನ ವೀಕ್ಷಣೆ. ಮಕ್ಕಳು ಗಿಡಗಳನ್ನು, ಬದನೆ, ಬೆಂಡೆ, ಸೊರೆಗಳನ್ನು ನೇವರಿಸುತ್ತಿದಾಗ, 'ಡಿಸಿಪ್ಲಿನ್.. 'ಡಿಸಿಪ್ಲಿನ್' ಶಿಕ್ಷಕಿಯರು 'ಬೊಬ್ಬೆ'ಯೊಡೆಯುತ್ತಿದ್ದರು! ಪ್ರದರ್ಶನಕ್ಕೆ ಮಕ್ಕಳನ್ನು ಕರೆತರುವುದು ಶಾಲೆಯ 'ಡಿಸಿಪ್ಲಿನ್ ಶೋ'ಗೆ ಅಲ್ವಲ್ಲಾ. ಅಲ್ಲಾದರೂ ಮಕ್ಕಳನ್ನು ಹಾಯಾಗಿ ಬಿಟ್ಟುಬಿಡಿ. ಮಕ್ಕಳೇ ಕಲಿತುಕೊಳ್ಳುತ್ತಾರೆ. ಈ 'ಡಿಸಿಪ್ಲಿನ್' ಭೂತವಿದೆಯಲ್ಲಾ, ಮಕ್ಕಳ ಅರ್ಧ ಜ್ಞಾನದಾಹವನ್ನು ಮುರುಟಿಸಿಬಿಡುತ್ತದೆ.
ಅಲ್ಲೊಂದೆಡೆ ಕೆಂಪು ಬಸಳೆ ಬೆಳೆದಿದ್ದರು. 'ಅದರ ಬೀಜ ಬೇಕಿತ್ತಲ್ವಾ' ಒಬ್ಬರು ಬೇಡಿಕೆ ಮುಂದಿಟ್ಟರು. 'ಅದರ ಬೀಜವನ್ನು ಬಿತ್ತಿ ಬಸಳೆ ಬೆಳೆಯಬಾರದು. ಗೆಲ್ಲನ್ನು ನೆಡಿ. ಬೀಜವನ್ನು ಬಿತ್ತಿದರೆ ನಮ್ಮ ಜೀವಮಾನ ಪರ್ಯಂತ ನಮ್ಮ ಮನೆತೋಟದಲ್ಲಿ ಬೆಳೆಯುತ್ತಿರಬೇಕು. ಇಲ್ಲವಾದರೆ ನೆಟ್ಟವರಿಗೆ ಅಪಶಕುನ' ರೂಢಿಯಲ್ಲಿದ್ದ ನಂಬುಗೆಯನ್ನು ಬಾಬು ಹೇಳುತ್ತಿದ್ದಂತೆ ಆ ಅಮ್ಮ ಜಾಗ ಖಾಲಿ ಮಾಡಬೇಕೇ?
ಮತ್ತೊಂದೆಡೆ ಅಲಂಕಾರಿಕ ಮೆಣಸು ಗಿಡ. ಬರೋಬ್ಬರಿ ಇಳುವರಿ. 'ಅದರ ಬೀಜ ಎಲ್ಲಿ ಸಿಗುತ್ತೆ.' ಹಲವಾರು ಮಂದಿ ಕೇಳುವವರೇ. 'ನಗರದಲ್ಲಿ ತರಕಾರಿ ಬೆಳಸುವ ಆಸಕ್ತಿ ಇದೆ. ಆದರೆ ಮಾಡುವ ಕ್ರಮ ಮತ್ತು ಬೀಜಗಳ ಅಲಭ್ಯತೆಯಿಂದಾಗಿ ಎಷ್ಟೋ ಮಂದಿ ಹಿಂದೆ ಸರಿದಿದ್ದಾರೆ ಎಂದು ಈ ನಾಲ್ಕು ದಿನಗಳಲ್ಲಿ ಗೊತ್ತಾಯಿತು' ಎನ್ನುತ್ತಾರೆ ಬಾಬು.
ಬಳ್ಳಿ ತರಕಾರಿಗಳನ್ನು ಚಪ್ಪರಕ್ಕೆ ಬಿಟ್ಟರೆ, ಮಿಕ್ಕುಳಿದವನ್ನು ಮಣ್ಣಿನ ಚಟ್ಟಿ (ಕುಂಡ)ಗಳಲ್ಲಿ ಬೆಳೆದಿದ್ದಾರೆ. 'ಇವೆಲ್ಲಾ ಎಲ್ಲಿಂದ ತಂದ್ರಿ. ಇನ್ನು ಎಲ್ಲಿಗೆ ಕೊಂಡು ಹೋಗ್ತೀರಿ' ಎನ್ನುವ ಮಂದಿಯೂ ಇದ್ದಾರೆ!
ತರಕಾರಿಯ ಇಳುವರಿ ತೋಟಗಾರಿಕಾ ಇಲಾಖೆಯ ಸೊತ್ತು. ಬಾಬು ನಾಯ್ಕರು ಪುತ್ತೂರಿನ ತೋಟಗಾರಿಕಾ ಇಲಾಖೆಯಲ್ಲಿ 'ಮುಖ್ಯ ತೋಟಗಾರ'. ಇಲಾಖೆಯ ಬೀಜೋತ್ಪಾದನಾ ಕೇಂದ್ರದಲ್ಲಿ ದುಡಿದ ಅನುಭವ.
ಮಂತ್ರಿ ಮಹೋದಯರು ಪುಷ್ಪಪ್ರದರ್ಶನ, ತರಕಾರಿ ತೋಟವನ್ನು ವೀಕ್ಷಿಸಿದ್ದಾರೆ, ಖುಷಿಪಟ್ಟಿದ್ದಾರೆ. ಅಧಿಕಾರಿಗಳಿಗೆ ಶಹಬ್ಬಾರಿಗಿರಿ ಸಿಕ್ಕಿದೆ. ಇದಕ್ಕೆಲ್ಲಾ ಕಾರಣನಾದ ಬಾಬು ನಾಯ್ಕರಿಗೆ ಶಹಬ್ಬಾಸ್ ಬಿಡಿ, ಒಂದು ಕಿರುನಗೆ ಸಿಕ್ಕರೆ ಸಾಕು, ಅವರ ತರಕಾರಿ ಕೃಷಿಯ ಶ್ರಮ ಸಾರ್ಥಕ!
0 comments:
Post a Comment