Wednesday, January 29, 2014

ಸಿದ್ಧಮೂಲೆ ಮತ್ತು ಬೆಂಡರವಾಡಿಯವರಿಗೆ - 'ಬೋಳಂತಕೋಡಿ ಕನ್ನಡ ಪ್ರಶಸ್ತಿ' ಪ್ರದಾನ



              "ಪುಸ್ತಕ ಪ್ರೀತಿಯಿದ್ದರೆ ಮಾತ್ರ ಸಾಹಿತ್ಯ ಹಿತವಾಗುತ್ತದೆ. ಸಂಮಾನ, ಪ್ರಶಸ್ತಿ, ಹಿರಿಯರ ಸ್ಮರಣೆ, ಸಾಹಿತ್ಯದ ಮಾತುಕತೆಗಳಿಂದ ಕನ್ನಡ ಸಾಹಿತ್ಯದ ಬೇರನ್ನು ಗಟ್ಟಿಮಾಡಿದಂತಾಗುತ್ತದೆ. ಬದುಕಿನಲ್ಲಿ ಅತ್ಯುನ್ನದ ಸಾಧನೆ ಮಾಡಿದವರನ್ನು ಸ್ಮರಿಸುವುದು, ಅವರ ಸಾಧನೆಯನ್ನು ಮೆಲುಕು ಹಾಕುವುದು ಕೂಡ ಸಾಹಿತ್ಯದ ಕೆಲಸವಾಗುತ್ತದೆ," ಎಂದು ಹಿರಿಯ ಸಾಹಿತಿ ಶ್ರೀಮತಿ ಎ.ಪಿ.ಮಾಲತಿ ಹೇಳಿದರು.
               ಅವರು ಜನವರಿ 28ರಂದು ಪುತ್ತೂರಿನ ಟೌನ್ ಬ್ಯಾಂಕ್  ಸಭಾಭವನದಲ್ಲಿ ಬೋಳಂತಕೋಡಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ 'ಬೋಳಂತಕೋಡಿ ಕನ್ನಡ ಪ್ರಶಸ್ತಿ' ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬದುಕಿನ ಸುಭಗತೆಗೆ ಸಾಹಿತ್ಯದ ಓದು, ಪ್ರೀತಿ ಅನಿವಾರ್ಯ ಎಂದರು.
               ವಿದ್ವಾಂಸ ಸಿದ್ಧಮೂಲೆ ಶಂಕರನಾರಾಯಣ ಭಟ್ ಮತ್ತು ಕವಿ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮರಿಗೆ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು. ವಿಶ್ರಾಂತ ಉಪನ್ಯಾಸಕ ಪ್ರೊ:ವಿ.ಬಿ.ಅರ್ತಿಕಜೆ ಮತ್ತು ರಂಗಕರ್ಮಿ ಮೂರ್ತಿ ದೇರಾಜೆ ಪ್ರಶಸ್ತಿ ಪುರಸ್ಕೃತರನ್ನು ನುಡಿ ಗೌರವದ ಮೂಲಕ ಅಭಿನಂದಿಸಿದರು. ಪುಸ್ತಕ ಪರಿಚಾರಕ ಲೈನ್ಕಜೆ ರಾಮಚಂದ್ರ ಗುಣಕಥನ ಫಲಕ ವಾಚಿಸಿದರು.
                  ಪುತ್ತೂರು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ, ಪ್ರಕಾಶಕ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರನ್ನು ಸಂಸ್ಮರಿಸಲಾಯಿತು. ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಜಿ.ಶ್ರೀಧರ್ ಅವರು ಬೋಳಂತಕೋಡಿಯವರ ಒಡನಾಟಗಳನ್ನು ನೆನಪಿಸಿಕೊಂಡು ನುಡಿನಮನ ಸಲ್ಲಿಸಿದರು.
                 ಶ್ರೀಜ್ಞಾನಗಂಗಾ ಮತ್ತು ದೀಪಾ ಬುಕ್ ಹೌಸ್ ಆಯೋಜನೆಯ ಪುಸ್ತಕ ಹಬ್ಬ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪುತ್ತೂರಿನ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಟ್ರಸ್ಟಿ ಶ್ರೀಮತಿ ಶ್ರೀದೇವಿ ಕಾನಾವು ದೀಪಜ್ವಲನದ ಮೂಲಕ ಉದ್ಘಾಟಿಸಿದರು. ಪುತ್ತೂರಿನ ರಾಜೇಶ್ ಪವರ್ ಪ್ರೆಸ್ಸಿನ ಮ್ಹಾಲಕ ಎಂ.ಎಸ್.ರಘುನಾಥ ರಾವ್ ಶುಭಾಶಂಸನೆ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ನಾ. ಕಾರಂತ ಪೆರಾಜೆಯವರ 'ಅವಿಲು, ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಅವರ 'ಬುತ್ತಿ', ಎಂ.ಸತ್ಯಮೂರ್ತಿ ಹೆಬ್ಬಾರ್ ರಚಿತ 'ವಿದ್ಯಾರ್ಥಿಗಳಿಗಾಗಿ ಏನು-ಏಕೆ-ಹೇಗೆ?', ಸಂತೋಷ್ ಅವರ 'ಮುದ್ರಾಜ್ಞಾನ' ಪುಸ್ತಕಗಳ ಅನಾವರಣ ನಡೆಯಿತು.
                  ಬೋಳಂತಕೋಡಿ ಪ್ರತಿಷ್ಠಾನದ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ನ್ಯಾಯವಾದಿ ಕೆ.ಆರ್.ಆಚಾರ್ಯ ಸ್ವಾಗತಿಸಿದರು. ಪ್ರಕಾಶ್ ಕುಮಾರ್ ಕೊಡೆಂಕಿರಿ ವಂದಿಸಿದರು. ಉಪನ್ಯಾಸಕ ಡಾ.ರಾಜೇಶ್ ಬೆಜ್ಜಂಗಳ ನಿರ್ವಹಿಸಿದರು. ಸ್ವಪ್ನಾ ಉದಯಕುಮಾರ್ ಪ್ರಾರ್ಥಿಸಿದರು. ಸುಧಾ ಹೆಬ್ಬಾರ್, ಶಾರದಾ ಭಟ್ ಕೊಡೆಂಕಿರಿ ಅತಿಥಿಗಳಿಗೆ ಸ್ಮರಣಿಕೆ ನೀಡಿದರು.
               ಕೊನೆಯಲ್ಲಿ ಶ್ರೀಮತಿ ಪದ್ಮಾ ಕೆ.ಆರ್.ಆಚಾರ್ಯ ಇವರ ನಿರ್ದೇಶನದಲ್ಲಿ ಪುತ್ತೂರಿನ ಧೀಃಶಕ್ತಿ ಮಹಿಳಾ ಯಕ್ಷ ಬಳಗ ಇವರಿಂದ 'ಮೋಕ್ಷ ಸಂಗ್ರಾಮ' ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರುಗಿತು. ಕಲಾವಿದರಾಗಿ ಕಾವ್ಯಶ್ರೀ ಆಜೇರು, ಶ್ರೀಪತಿ ನಾಯಕ್ ಆಜೇರು, ಪಿ.ಜಿ.ಜಗನ್ನಿವಾಸ ರಾವ್ (ಹಿಮ್ಮೇಳ), ವೀಣಾ ನಾಗೇಶ ತಂತ್ರಿ, ಪದ್ಮಾ ಕೆ.ಆರ್.ಆಚಾರ್ಯ, ಡಾ.ಶೋಭಿತಾ ಸತೀಶ್, ಗೀತಾ ರಾಮಚಂದ್ರ ಕೆದಿಲ, ವೀಣಾ ಸರಸ್ವತಿ ನಿಡ್ವಣ್ಣಾಯ (ಅರ್ಥದಾರಿ) ಭಾಗವಹಿಸಿದ್ದರು.

(ಚಿತ್ರ : ಚೇತನಾ ಸ್ಟುಡಿಯೋ, ಪುತ್ತೂರು)


0 comments:

Post a Comment