"ಆಳಕ್ಕಿಳಿದು ಆಲೋಚಿಸುವದು ಭಾರತೀಯ ಪರಂಪರೆ, ಇಲ್ಲಿ ಹಣಕ್ಕಿಂತ ಯಾವಾಗಲೂ ಗುಣ ಮಹತ್ವದ್ದಾಗಿದೆ. ನಮ್ಮ ವ್ಯವಹಾರಗಳೆಲ್ಲ ವಸ್ತು ವಿನಿಮಯದ ಮೂಲಕ ನಡೆಯುತ್ತಿದ್ದ ಕಾಲದಲ್ಲಿ ಒಬ್ಬರ ಅಗತ್ಯವನ್ನು ಮತ್ತೊಬ್ಬರ ಕೃಷಿ ಉತ್ಪಾದನೆಯಿಂದ ಪಡೆಯಲಾಗುತ್ತಿತ್ತು. ಹೀಗಾಗಿ ಒಂದಿಲ್ಲೊಂದು ಬೆಳೆ ಬೆಳೆಯುವದು ಅನಿವಾರ್ಯವಾಗಿತ್ತು. ಆಗ ವಸ್ತು ಉತ್ಪಾದನೆಗೆ ಗೌರವವಿತ್ತು. ಈಗ ವಸ್ತು ಉತ್ಪಾದನೆಯ ಮಹತ್ವ ಕಡಿಮೆಯಾಗಿ ಹಣವೇ ಅತಿಯಾಗಿ ವಿಜ್ರಂಬಿಸುತ್ತಿದೆ" ಎಂದು ಖ್ಯಾತ ಯಕ್ಷಗಾನ ಗುರು ಹೊಸ್ತೋಟ ಮಂಜುನಾಥ ಭಾಗವತ್ ವಿಷಾಯ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡದ ಶಿರಸಿ ತಾಲೂಕಿನ ಕಳವೆಯಲ್ಲಿ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಸಂಘಟಿಸಿರುವ ’ಅನ್ನದ ಚಿತ್ರಗಳ”ರಾಜ್ಯ ಮಟ್ಟದ ಕೃಷಿ ಪತ್ರಿಕೋದ್ಯಮ ಶಿಬಿರವನ್ನು ಇಂದು (ಜನವರಿ 10, ೨೦೧೪) ರಂದು ಉದ್ಘಾಟಿಸಿ ಮಾತನಾಡುತ್ತಿದ್ದರು.
ಒಮ್ಮೆ ಆಶ್ರಮವೊಂದರಲ್ಲಿ ಭೋಜನಕ್ಕೆ ಕುಳಿತ ವಿದ್ಯಾರ್ಥಿಯೊಬ್ಬ ಅನ್ನದ ತುತ್ತು ಬಾಯಿಗೆ ಇಡುವ ಸಂದರ್ಭದಲ್ಲಿ ’ಅನ್ನ ಹೆಣಗವಲಾಗಿದೆ’ ಎನ್ನುತ್ತಾನೆ. ಉಣ್ಣುವ ಅನ್ನಕ್ಕೆ ’ಹೆಣದ ವಾಸನೆ’ ಹೇಗೆ ಸಾಧ್ಯ? ಚರ್ಚೆ ಶುರುವಾಗುತ್ತದೆ. ವಿಚಾರಿಸಿದರೆ ಸ್ಮಶಾನದ ಜಾಗದಲ್ಲಿ ಬೆಳೆದ ಭತ್ತದಿಂದ ತಯಾರಿಸಿದ ಅನ್ನ ಅದಾಗಿತ್ತು! ತುತ್ತು ಕೈಗೆ ಎತ್ತಿಕೊಂಡಾಗ ಅದು ಎಲ್ಲಿ ಹೇಗೆ ಬೆಳೆದದ್ದು ಎಂದು ಮೂಲ ಶೋಧಿಸುವ ತಾಕತ್ತು ಅತ್ಯಂತ ಸೂಕ್ಷ್ಮವಾದುದು. ಕೃಷಿಕ ಹೇಗೆ ಅನ್ನ ಬೆಳೆದಿದ್ದಾನೆಂದು ಅರಿತಾಗ ಆಹಾರದ ಬೆಲೆ, ಕೃಷಿಯ ಕಷ್ಟ ಅರ್ಥವಾಗುತ್ತದೆ ಎಂದು ಕಥೆಯ ಉದಾಹರಣೆಯ ಮೂಲಕ ಹೊಸ್ತೋಟ ಭಾಗವತ ವಿವರಿಸಿದರು. ’ಕುತೂಹಲವಿದ್ದರೆ ಜ್ಞಾನ ಬೆಳೆಯುತ್ತದೆ. ಪ್ರತಿ ವ್ಯಕ್ತಿಯೂ ಒಂದು ಪುಸ್ತಕವಿದ್ದಂತೆ, ವಿವಿಧ ರಂಗದ ವ್ಯಕ್ತಿಗಳ ಜೊತೆ ಒಡನಾಡಿದರೆ ವ್ಯಕ್ತಿತ್ವ ವಿಕಸನವಾಗುತ್ತದೆ. ಬದುಕಿಗೆ ಸೀಮಿತ ಗಡಿ ಹಾಕಿಕೊಂಡರೆ ಅನುಭವ ಬೆಳೆಯುವದಿಲ್ಲ. ಪತ್ರಿಕೋದ್ಯಮ ಆಸಕ್ತರು ಕೃಷಿಯ ಅರಿವು ಪಡೆಯಲು ಹಳ್ಳಿಗರ ಜೊತೆ ಒಡನಾಡಬೇಕ” ಎಂದರು.
ಶಿಬಿರ ನಿರ್ದೇಶಕ,ಹಿರಿಯ ಬರಹಗಾರ ಅಡ್ಡೂರು ಕೃಷ್ಣರಾವ್ ಮಾತನಾಡಿ ’ಪರಿಸ್ಥಿತಿ ಬದಲಾಗುತ್ತಿದೆ, ತಟ್ಟೆಗೆ ಸುಲಭದಲ್ಲಿ ಅನ್ನ ಬಂದು ಬೀಳುತ್ತದೆಂಬ ಭ್ರಮೆ ಕಳಚುತ್ತಿದೆ. ಕೃಷಿ ಮರೆತು ಓಡುತ್ತಿರುವ ಈ ದಿನಗಳಲ್ಲಿ ಹಸಿವು ಭವಿಷ್ಯದ ದೊಡ್ಡ ಸಮಸ್ಯೆಯಾಗಲಿದೆ’ ಎಂದರು. ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರದ ಸಂಚಾಲಕ ಶಿವಾನಂದ ಕಳವೆ ಸ್ವಾಗತಿಸಿದರು. ಕಳೆದ 11 ವರ್ಷಗಳಿಂದ ಪತ್ರಿಕೋದ್ಯಮ ಶಿಬಿರ ನಡೆಸುತ್ತಿದೆ. ಈವರೆಗೆ 500ಕ್ಕೂ ಹೆಚ್ಚು ಅಭ್ಯರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಕೃಷಿ ಬರವಣಿಗೆಯಲ್ಲಿ ಅಧ್ಯಯನಶೀಲತೆ ಹೆಚ್ಚಿಸುವ ಕಾರಣಕ್ಕಾಗಿ ಅನ್ನದ ಚಿತ್ರ ಶಿಬಿರ ಆಯೋಜಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಬರಹಗಾರರು,ಪತ್ರಿಕೋದ್ಯಮ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲದ ಸಾಮಥ್ರ್ಯ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ.ನಿರಂಜನ ವಾನಳ್ಳಿ, ಬರಹಗಾರ ಪೂರ್ಣಪ್ರಜ್ಞ ಬೇಳೂರು, ಶಿಗ್ಗಾಂವ್ ರಾಕ್ ಗಾರ್ಡನ್ನ ಹಿರಿಯ ಕಲಾವಿದ ಸುಲಬಕ್ಕನವರ್ ಶಿಬಿರ ಸಂಪನ್ಮೂಲ ವ್ಯಕ್ತಿಗಳು. ಜನವರಿ 12ರವರೆಗೆ ಶಿಬಿರ ನಡೆಯಲಿದೆ.
0 comments:
Post a Comment