Wednesday, January 22, 2014

ಬೋಳಂತಕೋಡಿ ಸ್ಮೃತಿ - 'ಬೋಳಂತಕೋಡಿ ಕನ್ನಡ ಪ್ರಶಸ್ತಿ' ಪ್ರದಾನ
              ಪುತ್ತೂರು ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ಸಂಸ್ಮರಣ ಸಮಾರಂಭವು ಜನವರಿ 28, ಮಂಗಳವಾರರಂದು ಸಂಜೆ 5 ಗಂಟೆಗೆ ಪುತ್ತೂರು ಟೌನ್ ಬ್ಯಾಂಕ್ ಸಭಾಭವನದಲ್ಲಿ ಜರುಗಲಿದೆ.  ಈ ಸಂದರ್ಭದಲ್ಲಿ ಈಶ್ವರ ಭಟ್ಟರ ನೆನಪಿನ ಬೋಳಂತಕೋಡಿ ಕನ್ನಡ ಪ್ರಶಸ್ತಿ'ಯನ್ನು ವಿದ್ವಾಂಸರಾದ ಶ್ರೀ ಸಿದ್ಧಮೂಲೆ ಶಂಕರನಾರಾಯಣ ಭಟ್ ಮತ್ತು ಶ್ರೀ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ಇವರಿಗೆ ಪ್ರದಾನಿಸಲಾಗುವುದು.
          ಸಾಹಿತಿ ಶ್ರೀಮತಿ ಎ.ಪಿ.ಮಾಲತಿಯವರು ಸಮಾರಂಭದ ಅಧ್ಯಕ್ಷರಾಗಿದ್ದು, ವಿಶ್ರಾಂತ ಉಪನ್ಯಾಸಕ ಪ್ರೊ:ವಿ.ಬಿ.ಅರ್ತಿಕಜೆ, ರಂಗಕರ್ಮಿ ಶ್ರೀ ಮೂರ್ತಿ ದೇರಾಜೆಯವರು ಪ್ರಶಸ್ತಿ ಪುರಸ್ಕೃತರ ಕುರಿತು ಶುಭನುಡಿಗಳನ್ನಾಡುತ್ತಾರೆ. ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಜಿ.ಶ್ರೀಧರ್ ಬೋಳಂತಕೋಡಿಯವರ ಸಂಸ್ಮರಣೆ ಮಾಡಲಿದ್ದಾರೆ. ಪುತ್ತೂರು ರಾಜೇಶ್ ಪವರ್ ಪ್ರೆಸ್ಸಿನ ಮ್ಹಾಲಕ ಎಂ.ಎಸ್.ರಘುನಾಥ ರಾವ್ ಶುಭಾಶಂಸನೆ ಮಾಡಲಿದ್ದಾರೆ.
          ಇದೇ ಸಭಾಭವನದಲ್ಲಿ ಶ್ರೀ ಜ್ಞಾನಗಂಗಾ ಪುತ್ತೂರು ಇವರ ಸಂಯೋಜನೆಯ 'ಪುಸ್ತಕ ಹಬ್ಬ'ದ ಉದ್ಘಾಟನೆಯನ್ನು ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಮತಿ ಶ್ರೀದೇವಿ ಕಾನಾವು ನಿರ್ವಹಿಸಲಿದ್ದಾರೆ. ಶ್ರೀ ಎಂ.ಸತ್ಯಮೂರ್ತಿ ಹೆಬ್ಬಾರ್ ಇವರ 'ವಿದ್ಯಾರ್ಥಿಗಾಗಿ : ಏನು? ಏಕೆ? ಹೇಗೆ?' ಎನ್ನುವ ಪುಸ್ತಕ ಅನಾವರಣಗೊಳ್ಳಲಿದೆ.
          ಪುತ್ತೂರಿನ ಬೋಳಂತಕೋಡಿ ಪ್ರತಿಷ್ಠಾನದ ಆಯೋಜನೆಯ ಈ ಸಮಾರಂಭದ ಕೊನೆಯಲ್ಲಿ ಪುತ್ತೂರಿನ ಧೀಃಶಕ್ತಿ ಮಹಿಳಾ ಯಕ್ಷ ಬಳಗದವರಿಂದ 'ಮೋಕ್ಷ ಸಂಗ್ರಾಮ' ಎನ್ನುವ ಪ್ರಸಂಗದ ತಾಳಮದ್ದಳೆ ಜರುಗಲಿದೆ. 2012ರಲ್ಲಿ ಪ್ರಥಮ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಯನ್ನು ಮಕ್ಕಳ ಸಾಹಿತಿ ಶ್ರೀ ಪಳಕಳ ಸೀತಾರಾಮ ಭಟ್ಟರಿಗೆ ಪ್ರದಾನಿಸಲಾಗಿತ್ತು.

ಪ್ರಶಸ್ತಿ ಪುರಸ್ಕೃತರ ಪರಿಚಯ:

ಶ್ರೀ ಸಿದ್ಧಮೂಲೆ ಶಂಕರನಾರಾಯಣ ಭಟ್ : ಬಹುಶ್ರುತ ವಿದ್ವಾಂಸರು. ದೀರ್ಘಕಾಲ ಅಧ್ಯಾಪಕರಾಗಿ ದುಡಿತ. ಹಲವು  ಸಂಘಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಕವನ ಸಂಕಲನ, ಗೀತ-ನೃತ್ಯರೂಪಕ, ಕಾವ್ಯ, ವಿಮರ್ಶೆ, ಸಂಶೋಧನೆ, ಅನುವಾದ, ಪ್ರವಾಸ ಕಥನಗಳ ಜತೆಗೆ ಗೋ-ವಿಶ್ವಕೋಶದಂತಹ ಬೃಹತ್ ಗ್ರಂಥ ರಚಿಸಿದವರು. ಕೊಡುಗೈ ದಾನಿ. ಸ್ವತಃ 'ಶಂಕರ ಪ್ರಶಸ್ತಿ' ಹುಟ್ಟುಹಾಕಿದವರು.

ಶ್ರೀ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ : 'ಕನ್ನಡದಲ್ ಪದ ಹಾಡ್ತಾ ಹಾಡ್ತಾ ಈ ಜೀವ ಕೊನೆಗಾಣಬೇಕು' ಎನ್ನುತ್ತಾ ನಾಡಿನಾದ್ಯಂತ ಮಕ್ಕಳ ಪದ, ಭಾವಗೀತ, ಜನಪದ ಗೀತಗಳನ್ನು ಹಾಡಿ ಜನಮನ ರಂಜಿಸಿದವರು. ಸುಬ್ಬನ ಹಾಡು, ಪೆಪ್ಪರಮಿಂಟು, ಸುಬ್ಬಜ್ಜನ ಪದಗಳ ಮೂಲಕ ಜನಪ್ರಿಯರಾದ ಇವರು ಚೇತೋಹಾರಿ ಚುಟುಕುಗಳ ರಚಯಿತರು. ಕನ್ನಡಕ್ಕಾಗಿ ಜೀವ ಸವೆಸಿದ ಕನ್ನಡದ ಹಿರಿಯ ಸಾಹಿತಿ.

* ಪ್ರಕಾಶ್ ಕೊಡೆಂಕಿರಿ (9480451560 )

0 comments:

Post a Comment