Friday, March 7, 2014

ಚಪ್ಪರದಡಿಯ ಆಪ್ತತೆಯ ಪುಳಕ

            ಹಳ್ಳಿ ಮನೆ. ನಾಲ್ಕು ಮಂದಿಯ ಕುಟುಂಬ. ಚಿಕ್ಕ ತೋಟ. ಸಾಲವಿಲ್ಲದ ಬದುಕು. ಮೊನ್ನೆಯಷ್ಟೇ  ಮಹೇಶನ ವಿವಾಹ. ನೂರೈವತ್ತು ಮೀರದ ಆಪ್ತೇಷ್ಟರ ಉಪಸ್ಥಿತಿ. ಕೃಷಿ, ನೆಲ, ಜಲವನ್ನು ಪ್ರೀತಿಸುವ ಮಹೇಶನ ತಂದೆ ಮಣ್ಣಿನೊಂದಿಗೆ ಬದುಕು ಕಟ್ಟಿಕೊಂಡವರು. ಇವರ ಹಳ್ಳಿಪ್ರೀತಿ ತೋರಿಕೆಯದ್ದಲ್ಲ. ಅಪ್ಪಟ ಪ್ರೀತಿ.
          ಅಂಗಳ ತುಂಬಿದ ಅಡಿಕೆ ಸೊಗೆಯ ಚಪ್ಪರ. ಕಂಗಿನದೇ ಕಂಬಗಳು. ಹೆಣೆದ ತೆಂಗಿನ ಮಡಲಿನ ಆವರಣ. ಬಾಳೆಗಿಡದ ತೋರಣ. ಮಾವಿನ ಸೊಪ್ಪಿನ ಅಲಂಕಾರ. ವೀಳ್ಯದೆಲೆ, ಅಡಿಕೆಯಿಂದ ರೂಪುಗೊಂಡ  ಮಂಟಪ. ಅಂಗಳಕ್ಕೆ ಸೆಗಣಿ ಸಾರಿಸಿ ಶುಭ್ರಗೊಳಿಸಿದ್ದರು. ರಂಗೋಲಿಯ ಚಿತ್ತಾರ ಕಣ್ಮನ ಸೆಳೆದಿತ್ತು.
          ನೆಂಟರಿಷ್ಟರು ಆಗಮಿಸುತ್ತಿದ್ದಂತೆ ಸ್ವಾಗತ. ಮಾನಿನಿಯರಿಗೆ ಅರಸಿನ ಕುಂಕುಮದ ಬಾಗಿನ. ತೃಷೆಗೆ ಎಳನೀರಿನಿಂದ ಸಿದ್ಧಪಡಿಸಿದ ಪಾನೀಯ. ಮಧ್ಯಾಹ್ನದೂಟಕ್ಕೂ ಬಹುತೇಕ ತೋಟದ ಉತ್ಪನ್ನಗಳೇ. ಬಾಳೆಕಾಯಿ, ಸುವರ್ಣಗೆಡ್ಡೆ, ಕೆಸು, ಹಲಸು, ತಾವೇ ಬೆಳೆದ ತರಕಾರಿ.. ವಿವಿಧ ವೈವಿಧ್ಯ ಖಾದ್ಯಗಳು.
           ಚಪ್ಪರದಡಿಯಲ್ಲಂದು ಆಪ್ತತೆಯ ಪುಳಕ. ಬಂಧುಗಳ, ರಕ್ತಸಂಬಂಧಿಗಳ ಮಿಳಿತ.  ಹೆತ್ತವರಿಗೆ ಎಲ್ಲಿ ಆತಿಥ್ಯ ಲೋಪವಾಗುತ್ತದೋ ಎನ್ನುವ ಆತಂಕ, ಭಯ! ಅತಿಥಿಗಳಲ್ಲಿ ಸಹಕಾರ ಮನೋಭಾವ. ಎಲ್ಲರೂ ಉಭಯಕುಶಲೋಪರಿಯಲ್ಲಿ ತಲ್ಲೀನ. ಬದುಕಿನಲ್ಲಿ ಹಾದುಹೋದ ಕ್ಷಣಗಳ ಮರುಕಳಿಕೆ. ಮದುಮಕ್ಕಳನ್ನು  ಛೇಡಿಸಿ ಸುಸ್ತಾಗಿಸಿದಾಗಲೇ ವಿಶ್ರಾಂತಿಗೆ ಜಾರಿದ ಹೊಂತಕಾರಿಗಳ ಗೆಜಲುವಿಕೆ.
          ಮದುವೆ ಮನೆ ಅಂದ ಮೇಲೆ ಇಂತಹ ವಾತಾವರಣ ಇರಲೇಬೇಕು. ಇದರಲ್ಲೇನು ಮಹಾ? ಸರಿ,  ಈಗಿನ ಬಹುತೇಕ ಮದುವೆಗಳಲ್ಲಿ ಭಾವನೆಗಳು ಶುಷ್ಕವಾಗಿವೆ. ಮನಸ್ಸುಗಳನ್ನು, ಸಂಬಂಧಗಳನ್ನು ಬೆಸೆಯುವ ಮನಃಸ್ಥಿತಿ ಆದ್ರ್ರವಾಗಿಲ್ಲ. 'ಇಂತಿಷ್ಟು ಲಕ್ಷ ವೆಚ್ಚವಾಯಿತು' ಎನ್ನುವ ಘೋಷಣೆಯಲ್ಲೇ ತೃಪ್ತಿ, ಸಂತೃಪ್ತಿ. ಅದನ್ನು ಹತ್ತು ಮಂದಿಯಲ್ಲಿ ವಿನಿಮಯ ಮಾಡಿಕೊಂಡಾಗಲೇ ಸಾರ್ಥಕ.
           ರಾಜಧಾನಿಯಲ್ಲಿ ಉದ್ಯೋಗದಲ್ಲಿರುವ ಮಹೇಶನಿಗೆ ಕೈತುಂಬುವ ಉದ್ಯೋಗ. ಹತ್ತಿರದ ಪಟ್ಟಣದಿಂದ ವಸ್ತುಗಳನ್ನು ತರುವ ತಾಕತ್ತಿತ್ತು. ನಗರದ ಸಭಾಮಂದಿರದಲ್ಲೂ ಅದ್ದೂರಿಯಾಗಿ ಮದುವೆ ಏರ್ಪಡಿಸಬಹುದಿತ್ತು. ಬಯಲಾಟದ ಕರಪತ್ರ ಹಂಚಿದಂತೆ ಆಮಂತ್ರಣ ಪತ್ರಿಕೆಯನ್ನು ಹಂಚಬಹುದಿತ್ತು. ಹಳ್ಳಿಯ ಸಂಸ್ಕೃತಿಯಲ್ಲಿ ರೂಪುಗೊಂಡ ಮನಸ್ಸು ಅದ್ದೂರಿನತನಕ್ಕೆ  ಸ್ಪಂದಿಸಲಿಲ್ಲ.
            ನಗರದಲ್ಲಿ ವಾಸ ಮಾಡುವವರಿಗೆ ಸಭಾಮಂದಿರವನ್ನು ಅವಲಂಬಿಸುವುದು ಅನಿವಾರ್ಯ. ಆದರೆ ಹಳ್ಳಿಯಲ್ಲಿ ಎಲ್ಲಾ ಸೌಕರ್ಯಗಳಿದ್ದರೂ ನಗರಕ್ಕೆ ದೌಡಾಯಿಸುತ್ತೇವಲ್ಲಾ.  ವ್ಯವಸ್ಥೆಯಿಲ್ಲ, ಸಹಾಯಕರಿಲ್ಲ, ಸುಧಾರಿಸಲು ಕಷ್ಟ, ಬರುವವರಿಗೆ ತ್ರಾಸ, ಅಮೇರಿಕಾದ ಮಾವನಿಗೆ ಹಳ್ಳಿ ಮನೆ ಸೇರದು, ಸಿಂಗಾಪುರದ ಚಿಕ್ಕಪ್ಪನಿಗೆ ನಗರದ ತಂಪು ಕೋಣೆಯೇ ಬೇಕು, ದೆಹಲಿಯ ಅತ್ತೆಯ ಕಾರು ಅಂಗಳಕ್ಕೆ ಬಾರದು.. ಹೀಗೆ ನೂರಾರು ಸಬೂಬುಗಳು ಜಾತಕ ನೋಡುವಾಗಲೇ ಫಿಕ್ಸ್ ಆಗಿರುತ್ತವೆ. ಇವರೆಲ್ಲಾ ಬದುಕನ್ನು ಕಟ್ಟಿಕೊಂಡು ಪ್ರೌಢರಾಗಿ ನಗರಕ್ಕೆ ಹಾರಿದವರು. ಕಾಂಚಾಣದ ಸದ್ದಿನಿಂದ ಸಾಗಿ ಬಂದ ದಾರಿಗೆ ಮಸುಕು!
             ಸ್ವಲ್ಪ ಹೊಂದಾಣಿಸಿಕೊಂಡರೆ  ಸಭಾಭವನದಲ್ಲಿ ಆಗುವ ಸಂಭ್ರಮಕ್ಕಿಂತ ನೂರ್ಮಡಿ ವೈಭವವನ್ನು ಹಳ್ಳಿ ಮನೆಯ ಅಂಗಳ ನೀಡುತ್ತದೆ. ಕುಡಿಯಲು ಬಾಟಲಿ ನೀರು ಬೇಕಿಲ್ಲ. ಅದಕ್ಕಿಂತಲೂ ಶುದ್ಧವಾದ ಬಾವಿ ನೀರಿದೆ. ನಿರ್ವಿಷವಾಗಿ ಬೆಳೆದ ತೋಟದ ಉತ್ಪನ್ನವಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಶುದ್ಧ ಗಾಳಿಯಿದೆ, ನಿಶ್ಶಬ್ದ ವಾತಾವರಣವಿದೆ. ಒಂದು ದಿವಸದಲ್ಲಿ ಅಮೆರಿಕಾದ ಮಾವನ, ಸಿಂಗಾಪುರದ ಚಿಕ್ಕಪ್ಪನ ಆರೋಗ್ಯದಲ್ಲಿ ಏರುಪೇರಾಗದು.
             ಹಳ್ಳಿ ವಾತಾವರಣದಲ್ಲಿ ತಿಂಗಳ ಮೊದಲೇ ಮದುವೆಯ ಸಂಭ್ರಮ ಪದರ ಪದರವಾಗಿ ತೆರೆದುಕೊಳ್ಳುತ್ತಾ ಇರುತ್ತದೆ. ನೆರೆಕರೆಯವರು, ಹತ್ತಿರದ ಬಂಧುಗಳು ಆಗಿಂದಾಗ್ಗೆ ಬಂದು ಹೋಗುತ್ತಾ ವ್ಯವಸ್ಥೆಗೆ ಸ್ಪಂದಿಸುವ ಪರಿ. ಆಮಂತ್ರಣ ಪತ್ರದ ಮೊದಲ ಪ್ರತಿಯನ್ನು ದೇವರಿಗೆ ಸಮರ್ಪಿಸಿ ಸುಖಾಂತ್ಯವಾಗುವಂತೆ ಪ್ರಾರ್ಥನೆ. ಇದು ಮನೆಮಂದಿಯ ಮೂಲ ನಂಬುಗೆ. ಅಲ್ಲಿಂದ ಆಮಂತ್ರಣ ಪತ್ರ ಬಟವಾಡೆಯ ಕಾಯಕ. ಒಂದು ರೀತಿನ ಟೆನ್ಶನ್ ಕೆಲಸವೇ. ಇದೆಲ್ಲವೂ ಮದುವೆಯ ಸುತ್ತ ಹೆಣೆಯಲ್ಪಟ್ಟ ಅನುಭವಕ್ಕೆ ನಿಲುಕುವ ಕ್ಷಣಗಳು.
               ಹಳ್ಳಿಯಲ್ಲಿ ಸಮಸ್ಯೆ ಇದೆ. ಚಪ್ಪರ ಹಾಕುವಲ್ಲಿಂದ ಭೋಜನದ ತನಕ ತ್ರಾಸದ ಕೆಲಸವಿದೆ, ನಿಜ. ಸಹಕಾರ ಮನೋಭಾವ, ಜಾಣ್ಮೆ ಮತ್ತು ತನ್ನೂರಿನ-ತನ್ನ ಮನೆಯ ಕುರಿತು ಪ್ರೀತಿಯಿದ್ದರೆ ಎಲ್ಲಾ ಕಷ್ಟಗಳು ಹತ್ತಿಗಿಂತಲೂ ಹಗುರವಾಗಲಾರದೇ? ಸಹಕಾರ ಮನೋಭಾವ ಇಂದು ಉಳಿದಿದ್ದರೆ ಹಳ್ಳಿಯಲ್ಲಿ ಮಾತ್ರ. ಬದುಕಿನಲ್ಲಿ ಅದನ್ನು ಜೀವಂತವಾಗಿಟ್ಟರೆ ಸಮಸ್ಯೆಯಿಲ್ಲ.
               ಸಮಾರಂಭ ಅದ್ದೂರಿಯಾಗಿಯೇ ಮಾಡೋಣ. ಅದ್ದೂರಿಯೆಂದರೆ ಜನರನ್ನು ಒಗ್ಗೂಡಿಸುವುದಲ್ಲ. ಮೊದಲು ಮನಸ್ಸಿಗೆ ಅದ್ದೂರಿತನ ಬರಬೇಕು. ಆಗ ಮದುವೆಯ ಎಲ್ಲಾ ಕಲಾಪಗಳೂ ಸಂಭ್ರಮಿಸುತ್ತವೆ. ಖುಷಿ ಪಡುತ್ತವೆ. ನಗರದ ಜಂಜಾಟದಿಂದ ಆಗಮಿಸಿದ ಬಂಧುಗಳಿಗೆ ಮುಕ್ತ ವಾತಾವರಣವನ್ನು ಕಲ್ಪಿಸಿದ ಪುಣ್ಯ ಬರುತ್ತದೆ! ಬಾಲ್ಯದಲ್ಲಿ ತಾವು ಓಡಾಡಿದ ಜಾಗ, ಸಾಧಿಸಿದ ಬಾಲ್ಯ ಸಾಧನೆಗಳು, ಓದಿದ ಶಾಲೆ, ಬೆತ್ತದ ರುಚಿ ತೋರಿಸಿದ ಅಧ್ಯಾಪಕರು.. ಬದುಕಿನ ಪುಟಗಳನ್ನು ಪುನಃ ತೆರೆದು ಮೆಲುಕು ಹಾಕುವ ಅವಕಾಶ. ಮೂಲೆ ಸೇರಿದ ಅಜ್ಜಿ, ಊರುಗೋಲು ಹಿಡಿದ ಅಮ್ಮನ ಜತೆಯಲ್ಲಿ ಹರಟುವ ವಿಶೇಷ ದಿವಸವಾಗುತ್ತದೆ.
             ಮಹೇಶನ ಮದುವೆಯನ್ನು ನಗರದ ಸಭಾಮಂದಿರದಲ್ಲಿ ಮಾಡಿದರು ಎಂದು ಕಲ್ಪಿಸಿಕೊಳ್ಳೋಣ. ಮನೆಯ ಆಪ್ತತೆಯಂತೂ ದೂರ. ಹೇಗೂ ರಾಜಧಾನಿಯ ಉದ್ಯೋಗ. ಸ್ನೇಹಿತರು, ಪರಿಚಯದವರು.. ಸಾವಿರ ಮೀರಿದ ಆಮಂತ್ರಣ. ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ನಡು ಮಧ್ಯಾಹ್ನ ಬಂದುಬಿಡುತ್ತಾರೆ. ಖಾದ್ಯಗಳನ್ನು ಒತ್ತಡದ ಮಧ್ಯೆ ಅಷ್ಟಿಷ್ಟು ಹೊಟ್ಟೆ ಸೇರಿಸಿಕೊಳ್ಳುತ್ತಾರೆ. ಕೈಕುಲುಕಿ ಹೊರಟು ಹೋಗುತ್ತಾರೆ. ಬಡಿಸಿದ ಅರ್ಧಕ್ಕರ್ಧ ಖಾದ್ಯಗಳು ಎಲೆಯಲ್ಲಿ ಗುಡ್ಡೆಯಾಗಿರುತ್ತದೆ. ಮೂರು ಗಂಟೆಯ ಹೊತ್ತಿಗೆ ಸಭಾಭವನದಲ್ಲಿ ಸ್ಮಶಾನ ಮೌನ! ಮನೆಗೆ ಮರಳಿದ ಬಳಿಕ ಅದೇ ಜಗಲಿ, ಅದೇ ಬೆಂಚ್! ಮದುವೆಯ ಕುರುಹಿಗೆ ವಾರದ ಬಳಿಕ ಸಿಗುವ ಫೋಟೋ ಆಲ್ಬಂ. ತಿಂಗಳ ನಂತರ ವಶವಾಗುವ ವೀಡಿಯೋ ಸಿಡಿ.
             'ಹಳ್ಳಿಗಳು ವೃದ್ಧಾಶ್ರಮವಾಗುತ್ತಿವೆ' - ಹಳ್ಳಿ, ಗ್ರಾಮೀಣ ಸುದ್ದಿಗಳನ್ನು ಮಾತನಾಡುವಾಗಲೆಲ್ಲಾ ಈ ಮಾತನ್ನು ಹೇಳದೆ ಭಾಷಣ ಮುಂದೆ ಹೋಗದು. ಸರಿ, ಹಳ್ಳಿಯಲ್ಲಿ ಯುವಕರಿಲ್ಲ. ನಗರ ಸೇರಿದ್ದಾರೆ. ಅಪ್ಪಾಮ್ಮಂದಿರು ಹಳ್ಳಿ ಮನೆಯಲ್ಲಿದ್ದಾರೆ. ಬಾಲ್ಯದಿಂದಲೇ ಮಣ್ಣು, ಕೃಷಿಯ ಕುರಿತು ಒಲವು ಮೂಡಿಸಿದ್ದರೆ ನಗರ ಸೇರಿದ ಮಕ್ಕಳಿಗೂ ಮಣ್ಣು ಪರಿಮಳ ತಂದೀತು. ಹಾಗಾಗುತ್ತಿಲ್ಲ - ಕೃಷಿ ಪ್ರಯೋಜನವಿಲ್ಲ, ಬದುಕಲು ಸಾಧ್ಯವಿಲ್ಲ, ನನ್ನ ಮಕ್ಕಳಿಗೆ ಕೃಷಿ ಬೇಡವೇ ಬೇಡ - ನಿತ್ಯ ಗೊಣಗಾಟ. ಇದನ್ನು ಆಲಿಸುತ್ತಾ ಬಾಲ್ಯವನ್ನು ಕಳೆದ ಎಳೆಯ ಮನಸ್ಸುಗಳು 'ಮಣ್ಣಿನ ವೈರತ್ವ'ವನ್ನು ಅವಾಹಿಸಿಕೊಳ್ಳುತ್ತಾ ಪ್ರೌಢಾವಸ್ಥೆಗೆ ಕಾಲಿಡುತ್ತಾರೆ.
               ಕಾಲದ ಓಟ ವೇಗವಾಗಿದೆ. ಬದುಕು ಹಳಿ ತಪ್ಪುತ್ತಿದೆ. ಅದನ್ನು ಪ್ರೀತಿಯಿಂದ ಒಪ್ಪಿಕೊಳ್ಳುತ್ತಿದ್ದೇವೆ. ಕಾಂಚಾಣ ಎಲ್ಲೆಲ್ಲಿಂದಲೋ ಬಂದು ಕಿಸೆಯಲ್ಲಿ ಕುಣಿಯುತ್ತಿದ್ದಾಗ ಮಣ್ಣಿನ ಬದುಕು ಅರ್ಥ ಕಳೆದುಕೊಳ್ಳುತ್ತದೆ.  ಭೂಮಿ ಮಾರಿದಾಗ ಸಿಗುವ ಕೋಟಿಗಟ್ಟಲೆ ಹಣದಲ್ಲಿ ನಗರದ ಬದುಕಿಗೆ ಶ್ರೀಕಾರ ಬರೆಯುತ್ತೇವೆ. ಕ್ರಮೇಣ ಉಸಿರಾಡಲು ಗಾಳಿಗೂ ಹಣ ಕೊಡಬೇಕಾದ ದುರ್ಬರ ಸ್ಥಿತಿ ಬಂದಾಗ ಹಳ್ಳಿ ನೆನಪಾಗುತ್ತದೆ, ಕೃಷಿ ಬದುಕು ರಾಚುತ್ತದೆ. ಮತ್ತೆ ಮರಳಿ ಹಳ್ಳಿಗೆ ಬಂದಾಗ ಜೆಸಿಬಿ ಮನೆಯನ್ನು ಕೆಡವಿರುತ್ತದೆ! ತೋಟ ನೆಲಸಮವಾಗಿರುತ್ತದೆ.
                 ಮಹೇಶನಿಗೆ ಭವಿಷ್ಯದ ಬದುಕಿನ ಸ್ಪಷ್ಟತೆಯಿತ್ತು. ಎಂಬಿಎ ಓದುವಲ್ಲಿಯ ತನಕ ತಂದೆಯೊಂದಿಗೆ ಹೊಟ್ಟೆಪಾಡಿಗಾದರೂ ಕೃಷಿಯ ಅನುಭವ ಪಡೆದಿದ್ದಾನೆ. ಹಟ್ಟಿ ಗೊಬ್ಬರವನ್ನು ತಲೆ ಮೇಲೆ ಹೊತ್ತು ಅಡಿಕೆ ಗಿಡಗಳಿಗೆ ಉಣಿಸಿದ್ದಾನೆ. ತೆಂಗು, ಅಡಿಕೆ ಮರವೇರುವ ಶಿಕ್ಷಣವನ್ನು ತಂದೆ ಕಲಿಸಿದ್ದಾರೆ. ಹಟ್ಟಿಯಿಂದ ಸೆಗಣಿ ಬಾಚುವ ಕಾಯಕ ಮಾಡಿದ ಮಹೇಶನಿಗೆ 'ಎಂಬಿಎ ಕಲಿತುದಕ್ಕೆ ಮಾತ್ರ ಒಂದು ಉದ್ಯೋಗ'ವಷ್ಟೇ.
               ಮದುವೆ ಮನೆಯಿಂದ ಹೊರಟಾಗ ಆತ ಹೇಳಿದ ಮಾತು ರಿಂಗಣಿಸುತ್ತಿದೆ, "ರಾಜಧಾನಿಯ ಸಹವಾಸ ಸಾಕು ಮಾರಾಯ. ನೀರು, ಗಾಳಿಗೆ ಪರದಾಡುವ ಸ್ಥಿತಿ. ಆರೋಗ್ಯಕ್ಕೆ ಪೂರಕವಾದ ಆಹಾರಕ್ಕೂ ದಾರಿದ್ರ್ಯ. ಹಣವನ್ನು ಕೊಡುವುದಲ್ಲ, ಬಿಸಾಡಿದರೆ ಎಲ್ಲವೂ ಸಿಗುತ್ತದೆ ಎನ್ನುವ ಭ್ರಮೆ ಹಲವರಲ್ಲಿದೆ. ಅದು ಸುಳ್ಳು. ಆರೇ ತಿಂಗಳಲ್ಲಿ ನಾನು ಹಳ್ಳಿಗೆ ಬಂದುಬಿಡುತೇನೆ. ಅಪ್ಪಾಮ್ಮನೊಂದಿಗೆ ನೆಲೆಸುತ್ತೇನೆ. ಕೃಷಿ ವೃತ್ತಿಯನ್ನು ಸ್ವೀಕರಿಸುತ್ತೇನೆ."


0 comments:

Post a Comment