"ಅಮೆರಿಕಕ್ಕೆ ಸೇರಿದ ಹವಾಯಿಯಲ್ಲಿ ಒಂದು ಗಂಟೆಯ ಕೃಷಿ ಶ್ರಮಕ್ಕೆ ಹದಿನೈದು ಡಾಲರ್ ವೇತನವಿದೆ. ಹೆಚ್ಚು ಬಿಸಿಲಿನಲ್ಲಿ, ಮೈಹುಡಿ ಮಾಡಿದ ದುಡಿತಕ್ಕೆ ನಗರದಲ್ಲಿ ಗಂಟೆಗೆ ಹದಿನೆಂಟು ಡಾಲರ್ ತನಕವೂ ವೇತನ ನಡೆಯುತ್ತದೆ"- ತಿಂಗಳ ಹಿಂದೆ ಕನ್ನಾಡಿಗೆ ಬಂದ ಹಣ್ಣು ಕೃಷಿಕ ಕೆನ್ ಲವ್ ತಮ್ಮೂರಿನ ಕೃಷಿ, ಕಾರ್ಮಿಕರ ಸಮಸ್ಯೆಯ ಎಳೆಯನ್ನು ಬಿಚ್ಚಿಟ್ಟ ಬಗೆ. ಅಬ್ಬಾ... ಹದಿನೈದು ಡಾಲರ್! ಅಂದರೆ ಸುಮಾರು ಸಾವಿರ ರೂಪಾಯಿ. ಸದ್ಯ ನಮ್ಮಲ್ಲಿ ಕೃಷಿ ಕೆಲಸಗಳ ಸಹಾಯಕರಿಗೆ (ಕಾರ್ಮಿಕರಿಗೆ) ಚಲಾವಣೆಯಲ್ಲಿರುವ 'ಎರಡು ದಿವಸ'ದ ವೇತನ ಎಂದಿಟ್ಟುಕೊಳ್ಳೋಣ.
"ಒಂದು ಕಾಲಘಟ್ಟದಲ್ಲಿ ನಮ್ಮ ತೋಟದಲ್ಲಿ ಕೃಷಿ ವೈವಿಧ್ಯವಿತ್ತು. ಅದನ್ನು ನಿರ್ವಹಿಸಲು ಇನ್ನೂರು ಮಂದಿ ಕೆಲಸಗಾರರಿದ್ದರು. ಈಗ ಇಪ್ಪತ್ತು ಮಂದಿಯನ್ನು ಹೊಂದಿಸಲು ತ್ರಾಸಪಡಬೇಕಾಗುತ್ತದೆ," ಎನ್ನುತ್ತಾರೆ ಪುತ್ತೂರಿನ ಕೃಷಿಕ ಸೇಡಿಯಾಪು ಜನಾರ್ದನ ಭಟ್. ಕಾರ್ಮಿಕರ ಕೊರತೆಯಿಂದಾಗಿ ಕೃಷಿಗೆ ಸಂಕಟ. ಕಾಲಕಾಲಕ್ಕೆ ನಿರ್ವಹಣೆ ಬೇಡುವ ಕೆಲಸಗಳು ಆಗಬೇಕಾದುದು ಅಗತ್ಯ. ಸ್ವಲ್ಪ ವ್ಯತ್ಯಯಗೊಂಡರೂ ಫಸಲಿನ ಮೇಲೆ ಹೊಡೆತ. ಒಟ್ಟೂ ವ್ಯವಸ್ಥೆಗಳು ಬುಡಮೇಲು. ಬಹುತೇಕ ಅವಲಂಬನಾ ಕೆಲಸವಾದ್ದರಿಂದ ಸಹಾಯಕರನ್ನು ಅವಲಂಬಿಸಿಯೇ ಕರಾವಳಿ, ಮಲೆನಾಡಿನ ಕೃಷಿಕಾರ್ಯಗಳು ಉಸಿರಾಡುತ್ತಿವೆ.
ಉತ್ತರ ಕರ್ನಾಾಟಕದ ಹೊಲಕ್ಕೆ ಕಾಲಿಟ್ಟರೆ ಯಜಮಾನನೊಂದಿಗೆ ಕುಟುಂಬವೇ ದುಡಿಯುವುದನ್ನು ಕಾಣಬಹುದು. ಬೆಳ್ಳಂಬೆಳಿಗ್ಗೆ ಹೊಲ ಪ್ರವೇಶಿಸಿದರೆ ಸೂರ್ಯಾಸ್ತದ ಬಳಿಕವೇ ಮನೆಕಡೆ ಮುಖ ಮಾಡುವ ಶ್ರಮಿಕರು ಎಂದೂ ಸಹಾಯಕರನ್ನು ನೆಚ್ಚಿಕೊಂಡಿಲ್ಲ. ಅಲ್ಲೋ ಇಲ್ಲೋ ಪರಸ್ಪರ ಶ್ರಮ ವಿನಿಮಯದ ಮೂಲಕ ಕೆಲಸಗಳನ್ನು ಹಗುರಗೊಳಿಸುತ್ತಿರುವುದು ಕಾಣಬಹುದು.
ಕೆಲವು ವರುಷದ ಹಿಂದೆ ಧಾರವಾಡ, ಬೆಳಗಾವಿ, ಬಿಜಾಪುರ.. ಮೊದಲಾದ ಪ್ರದೇಶಗಳಲ್ಲಿ ಮಳೆ ಕೈಕೊಟಾಗ ಕೃಷಿಕರು ಗುಳೆ ಹೋದರು. ಹಲವಾರು ಮಂದಿ ಕರಾವಳಿಯ ತೋಟಗಳಲ್ಲಿ ಕೆಲಸ ಕಲಿತು ಹೊಟ್ಟೆಪಾಡಿಗಾಗಿ ದುಡಿದರು. ಇವರನ್ನು ಒದಗಿಸಲು ದಲ್ಲಾಳಿಗಳು ಹುಟ್ಟಿಕೊಂಡರು! ಎಷ್ಟು ಮಂದಿ ಸಹಾಯಕರು ಬೇಕೆಂಬ ಲೆಕ್ಕದಲ್ಲಿ ವಾಹನದಲ್ಲಿ ಕರೆದುಕೊಂಡು ಹೋಗಿ, ಸಂಜೆ ಮರುಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಂಡರೆ ಆಯಿತು. ಈಗೆಲ್ಲವೂ ತಿರುಗುಮುರುಗು. ಮಳೆ ಬಂದಿದೆ. ಕಾಳು ಕೈಯಲ್ಲಿದೆ. ಮತ್ಯಾಕೆ ಇನ್ನೊಬ್ಬರ ಹೊಲದ ದುಡಿತ!
ಕೃಷಿ ಕೆಲಸಗಳ ಜಾಣ್ಮೆ ಅಪ್ಪನಲ್ಲೆ ಉಳಿಯಿತು. ಮಗನಿಗೆ ಶಾಲೆಯ ಓದು. ಬಾಲ್ಯದಲ್ಲಿ ಅಪ್ಪನ ದುಡಿತದ ಕಷ್ಟಗಳ ಅರಿವಿದ್ದ ಮಗನಿಗೆ ಆ ಉದ್ಯೋಗದಲ್ಲಿ ಭರವಸೆಯಿಲ್ಲ. ಕೆಲವರನ್ನು ನಗರ ಸೆಳೆಯಿತು. ಇನ್ನೂ ಕೆಲವರನ್ನು ಹೆತ್ತವರೇ ತಳ್ಳಿದರು. ಹಳ್ಳಿಯ ಪಗಾರಕ್ಕಿಂತ ಕಡಿಮೆ ಸಿಕ್ಕರೂ ಬಸ್ಸಿನಲ್ಲಿ ಬಂದ ಹೋಗುವ ಖುಷಿ. ಹಳ್ಳಿಯಲ್ಲಿ ಶ್ರಮಿಕ ವರ್ಗ ಕರಗುತ್ತಿದ್ದಂತೆ, ತೋಟದ ವ್ಯವಸ್ಥೆಗಳು ನಲುಗಲು ಆರಂಭವಾಗಿ ಒಂದೂವರೆ-ಎರಡು ದಶಕ ಮೀರಿತು. ಈಚೆಗಿನ ಕೆಲವು ವರುಷಗಳಿಂದ ಕೃಷಿ ಕೆಲಸಗಳಿಗೆ ಪರ್ಯಾಾಯ ವ್ಯವಸ್ಥೆಗಳು ಅಲ್ಲಿಲ್ಲಿ ತಲೆಎತ್ತಿವೆ. ಚಿಕ್ಕಪುಟ್ಟ ಕೆಲಸಗಳಿಗೆ ಯಂತ್ರಗಳು, ಸಾಧನಗಳು ಸಬ್ಸಿಡಿಯಲ್ಲಿ ದೊರೆತುವು. ಅವೆಷ್ಟು ಬಳಕೆಯಾಗುತ್ತಿವೆ ಎನ್ನುವುದು ಬೇರೆ ಮಾತು. ಜವ್ವನವಿರುವಾಗಲೇ ಕೃಷಿಯನ್ನು ಹೊಣೆಗೇರಿಸಿಕೊಂಡ ಯುವಕರು ಜಾಣ್ಮೆಯ ಮೂಲಕ ಕೆಲಸಗಳನ್ನು ಹಗುರ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು.
ದಕ್ಷಿಣ ಕನ್ನಡ ಜಿಲ್ಲೆಯ ಕನ್ಯಾನ ಸನಿಹದ ಆನೆಕಲ್ಲು ಸುಳ್ಳಿಮೂಲೆಯ ಸದಾಶಿವರಲ್ಲಿ ಹತ್ತು ಮಂದಿಯ ಟೀಮ್ ಇದೆ. ಎಲ್ಲರೂ ಒಂದೇ ಕುಟುಂಬದ ಸದಸ್ಯರು. ಕೃಷಿ ಕೆಲಸಗಳಲ್ಲಿ ಪ್ರವೀಣರು. ಮೂವತ್ತರೊಳಗಿನ ಹೊಂತಕಾರಿಗಳು. ಇವರಿಗೆ ತಂತಮ್ಮ ತೋಟಗಳಲ್ಲಿ ದುಡಿದ ಅನುಭವವಿದೆ. ಸದಾಶಿವ ತಂಡ ಕೆಲಸದ ಸರಂಜಾಮಿನೊಂದಿಗೆ ತೋಟಕ್ಕಿಳಿಯುವಾಗಲೇ ಮೊಬೈಲ್ ಆಫ್. ಕಾಡುಹರಟೆಯಿಲ್ಲ. ಲೋಕದ ಸುದ್ದಿಯಿಲ್ಲ. ಕೊಳಕು ರಾಜಕೀಯದ ಮಾತುಕತೆಯಿಲ್ಲ. ಕಾಫಿ, ಊಟಕ್ಕೆ ಬ್ರೇಕ್. ಬೆಳಿಗ್ಗೆ ಒಂಭತ್ತರಿಂದ ಸಂಜೆ ಐದು ಗಂಟೆಯ ತನಕ ಅವಿರತ ಕೆಲಸ. ತಂಡದಲ್ಲಿ ಮದ್ಯಪಾನಿಗಳಿಲ್ಲ. ಯಾರು ಯಾವ ಕೆಲಸ ಮಾಡಬೇಕೆನ್ನುವುದು ಸದಾಶಿವರ ನಿರ್ದೇಶನದಂತೆ ನಡೆಯುತ್ತದೆ.
ನವೆಂಬರಿನಿಂದ ಫೆಬ್ರವರಿ ತನಕ ಅಡಿಕೆ ಕೊಯ್ಲಿನ ಕೆಲಸ. ಮಳೆಗಾಲದಲ್ಲಿ ಅಡಿಕೆ ಮರಗಳಿಗೆ ಬೋರ್ಡೋ ದ್ರಾವಣ ಸಿಂಪಡಣೆ. ಮಳೆಯಿಂದಾಗಿ ಸಿಂಪಡಣೆ ಕೆಲಸ ನಿಂತಾಗ ತೋಟದ ಇತರ ಕೆಲಸಗಳಿಗೂ ಬಳಸಿಕೊಳ್ಳಬಹುದು. ಕೆಲಸ ಮುಗಿದ ತಕ್ಷಣ ಲೆಕ್ಕ ಚುಕ್ತಾ. ತನ್ನೂರಿನ ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯೊಳಗೆ ಸದಾಶಿವ ತಂಡ ವರುಷಪೂರ್ತಿ ದುಡಿಯುತ್ತದೆ. ಹಳ್ಳಿಯಲ್ಲಿ ದುಡಿದರೆ ಹನ್ನೆರಡು ತಿಂಗಳೂ ಕೆಲಸವಿದೆ. ಕೇವಲ ಕೆಲಸಕ್ಕಾಗಿಯೇ ನಗರಕ್ಕೆ ಹೋಗುವುದು ಅರ್ಥಶೂನ್ಯ. ನಗರಕ್ಕಿಂತ ಹೆಚ್ಚು ನಮ್ಮ ತಂಡ ದುಡಿಯುತ್ತದೆ - ಎನ್ನುವುದು ಸದಾಶಿವರ ವಿಶ್ವಾಸದ ಮಾತು.
ಇತ್ತ ತೀರ್ಥಹಳ್ಳಿ ಸುತ್ತಮುತ್ತ ಮಳೆಗಾಲದಲ್ಲಿ ಅಡಿಕೆ ಗೊನೆಗಳಿಗೆ ಬೋರ್ಡೋ ಸಿಂಪಡಿಸುವ 'ಜಾಬ್ ವರ್ಕ್’ ತಂಡ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಮರ ಏರಿ ಮದ್ದು ಸಿಂಪಡಿಸುವ ಕೌಶಲ, ಅನುಭವ, ದೇಹಶ್ರಮವಿರುವ ಟೀಮ್ನಿಂದಾಗಿ ಅಡಿಕೆ ತೋಟದ ಕೆಲಸಗಳು ಸಕಾಲಕ್ಕೆ ನಡೆಯುತ್ತಿವೆ. ಇಂತಹ ಕೆಲಸಗಳಿಗೆ ಹೊಸಬರನ್ನು ಪ್ರೇರೇಪಿಸಲು ಸಂಘಸಂಸ್ಥೆಗಳು ಸಿಂಪಡನಾ ತರಬೇತಿ ನೀಡುವಂತಾಗಬೇಕು. ಜಾಬ್ ವರ್ಕ್ ತಂಡಗಳಿಗೆ ಪರಿಕರಗಳ ಖರೀದಿಗೆ ಬ್ಯಾಂಕ್, ಸಹಕಾರಿ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು.
ಕಾಯಕಷ್ಟವನ್ನು ಬೇಡುವ ಅಡಿಕೆ ಕೊಯ್ಲು ಕೆಲಸಕ್ಕೆ ತಮಿಳುನಾಡಿನ ಕೃಷಿಕ-ಉದ್ಯಮಿ ನಟರಾಜನ್ ಹೊಸ ಹಾದಿ ಕಂಡುಕೊಂಡಿದ್ದಾರೆ. ಅಡಿಕೆ ಕೊಯ್ಯುವ ಉಪಕರಣವನ್ನು ತನ್ನ ಕಾರ್ಯಾಗಾರದಲ್ಲಿ ನಿರ್ಮಿಸಿ ಹೆಣ್ಮಕ್ಕಳ ಮೂಲಕ ಅಡಿಕೆ ಕೊಯ್ಲು ಮಾಡಿ ಯಶ ಕಂಡವರು. ಕೇರಳದಲ್ಲಿ ತೆಂಗು ಅಭಿವೃದ್ಧಿ ಮಂಡಳಿಯು ಮಹಿಳೆಯರೂ ಸೇರಿದಂತೆ ಎಳೆಯರಿಗೆ ತೆಂಗಿನ ಮರವೇರುವ ತರಬೇತಿ ನೀಡುತ್ತಿದೆ. ಬಹುತೇಕ ಮಂದಿ ಮರವೇರಿ ತೆಂಗು ಕೊಯಿಲಿನ ವೃತ್ತಿ ಮಾಡುವಷ್ಟು ನಿಪುಣೆಯರಾಗಿದ್ದಾರೆ. 'ತೆಂಗಿನ ಮರದ ಗೆಳೆಯರು' (ಫ್ರೆಂಡ್ಸ್ ಆಫ್ ಕೊಕೊನಟ್ ಟ್ರೀಸ್) ಎಂಬ ತಂಡಗಳು ರೂಪುಗೊಂಡಿವೆ. ಇದನ್ನು ಅಧ್ಯಯನ ಮಾಡಿದ ಹಿರಿಯ ಪತ್ರಕರ್ತ ಶ್ರೀ ಪಡ್ರೆ ಹೇಳುತ್ತಾರೆ, "ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ಮೂವತ್ತನಾಲ್ಕು ಸಾವಿರಕ್ಕೂ ಮಿಕ್ಕಿ 'ತೆಂಗಿನ ಸ್ನೇಹಿತರು' ತಯಾರಾಗಿದ್ದಾರೆ. ಇದರಲ್ಲಿ ಕೇರಳಿಗರದು ಸಿಂಹಪಾಲು. ಕೃಷಿಕ ಸಮುದಾಯದ ಕಷ್ಟ ಮನಗಂಡು ಇಂತಹ ಕಾರ್ಯಕ್ರಮ ಹಾಕಿಕೊಂಡ ಮಂಡಳಿಯು ಅಭಿನಂದನೀಯ."
ಕಳೆ ಕೊಚ್ಚುವ ಯಂತ್ರದಲ್ಲಿ ಕಳೆ ತೆಗೆಯುವ ಕೆಲಸವನ್ನು ನಿಭಾಯಿಸುವ ಜಾಬ್ ವರ್ಕ್ ತಂಡಗಳು ಕೆಲಸವನ್ನು ಹಗುರ ಮಾಡಿವೆ. ಆವಶ್ಯಕತೆಯನ್ನು ಸಕಾಲಕ್ಕೆ ಪೂರೈಸುವ ತಂಡಗಳು ಕೃಷಿಕರ ಮನ ಗೆದ್ದಿವೆ. ತಂಡದಲ್ಲಿ ಹತ್ತಾರು ಮಂದಿ ಸಹಾಯಕರಿದ್ದು ಎಲ್ಲರಿಗೂ ಸ್ಥಳೀಯವಾಗಿ ಉದ್ಯೋಗಾವಕಾಶ ನೀಡಿದೆ. ಹತ್ತಾರು ದಿವಸಗಳಲ್ಲಿ ಮುಗಿಯದ ಕೆಲಸವನ್ನು ಒಂದೇ ದಿವಸದಲ್ಲಿ ಮುಗಿಸುವ ಜಾಬ್ ವರ್ಕ್ ತಂಡದ ಕೆಲಸ ಕೃಷಿಕರ ಸ್ವೀಕೃತಿ ಪಡೆದಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ 'ಪ್ರಗತಿ ಬಂಧು' ತಂಡಗಳ ಮೂಲಕ ಸಣ್ಣ, ಅತಿಸಣ್ಣ ರೈತರ ತಂಡಗಳನ್ನು ಹುಟ್ಟುಹಾಕಿದೆ. ಮುರಿಯಾಳು ಪದ್ಧತಿಯಲ್ಲಿ ಕೃಷಿ ಕೆಲಸಗಳನ್ನು ಹಗುರ ಮಾಡಿಕೊಂಡಿದೆ. ತಂತಮ್ಮ ಜಮೀನಿನಲ್ಲಿ ದುಡಿಯುವ ಪರಿಪಾಠವನ್ನು ಹೇಳಿಕೊಟ್ಟಿದೆ. ಕಾರ್ಮಿಕ ಸಮಸ್ಯೆಗೆ ತನ್ನದೇ ವಿಧಾನದಲ್ಲಿ ಪರಿಹಾರವನ್ನೂ ಕಂಡುಕೊಂಡಿದೆ.
ಒಂದೆಡೆಯಿಂದ ಕೃಷಿ ಸಹಾಯಕರ ಅಲಭ್ಯತೆಯ ಕೊರಗಿನ ಮಧ್ಯೆ, ಪರಿಹಾರವಾಗಿ ಇಂತಹ ಚಿಕ್ಕಪುಟ್ಟ ವ್ಯವಸ್ಥೆಗಳು ಆಶಾದಾಯಕ. ಕೃಷಿಯಲ್ಲಿ ಬಲವಂತದಿಂದಲಾದರೂ ಯಾಂತ್ರೀಕರಣ ವ್ಯವಸ್ಥೆಯನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಉತ್ತರ ಕರ್ನಾಾಟಕದ ಕೃಷಿಯಲ್ಲಿ ಯಾಂತ್ರೀಕರಣದ್ದೇ ಕರಾಮತ್ತು. ಅಡಿಕೆ ಸುಲಿ ಯಂತ್ರವು ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಈಗಾಗಲೇ ಸದ್ದು ಮಾಡುತ್ತಿವೆ.
ಕರ್ನಾಾಟಕ ಸರಕಾರವು ಕೃಷಿ ಯಂತ್ರಗಳನ್ನು ಬಾಡಿಗೆ ನೀಡುವ ಹೊಸ ಯೋಜನೆಗೆ ಸಹಿ ಹಾಕಿರುವುದು ಭರವಸೆಯ ಬೆಳವಣಿಗೆ. ಕರ್ನಾಾಟಕದ ನೂರ ಎಂಭತ್ತಾರು ಕೇಂದ್ರಗಳಲ್ಲಿ ಯೋಜನೆಯ ಅನುಷ್ಠಾನ. ಇದರಲ್ಲಿ ನೂರ ಅರವತ್ತ ಒಂದು ಕೇಂದ್ರಗಳ ಅನುಷ್ಠಾನದ ಹೊಣೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಿದೆ. ಒಂದೊಂದು ಕೇಂದ್ರಕ್ಕೆ ಆಯಾಯಾ ಪ್ರದೇಶಕ್ಕೆ ಹೊಂದುವ ಸುಮಾರು ಐವತ್ತು ಲಕ್ಷ ರೂಪಾಯಿ ಮೊತ್ತದ ಯಂತ್ರೋಪಕರಣಗಳ ಸಂಪನ್ನತೆ.
ಸಂಕಟಗಳ ಮಧ್ಯೆ ಪರಿಹಾರವೋ ಎಂಬಂತೆ ಖಾಸಗಿ, ಸರಕಾರದ ವ್ಯವಸ್ಥೆಗಳು ರೂಪುಗೊಳ್ಳುತ್ತಿರುವುದು ಶ್ಲಾಘ್ಯ. ಇದು ನೆರೆಯಲ್ಲಿ ಕೊಚ್ಚಿಕೊಂಡು ಹೋಗುವವನಿಗೆ ಹುಲ್ಲುಕಡ್ಡಿ ಸಿಕ್ಕಂತೆ. ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅದರ ಯಶಸ್ಸು.
(ಚಿತ್ರ : ಶ್ರೀ ಪಡ್ರೆ)
(ನೆಲದನಾಡಿ/ಉದಯವಾಣಿ/8-1-2015)

0 comments:
Post a Comment