Monday, January 26, 2015

'ತೆಂಗಿನಿಂದ ನೀರಾ ತಯಾರಿ' - ಕೃಷಿಯಂತ್ರ ಮೇಳದಲ್ಲಿ ವಿಚಾರಗೋಷ್ಠಿ

             ಪುತ್ತೂರಿನಲ್ಲಿ ಜರುಗಿದ ಕೃಷಿಯಂತ್ರ ಮೇಳದ ಎರಡನೇ ದಿವಸದ (25-1-2015) ವಿಚಾರಗೋಷ್ಠಿಯಿದು. ವಿಷಯ : 'ತೆಂಗಿನಿಂದ ನೀರಾ ತಯಾರಿ'.
             "ನೀರಾ ಒಂದು ಆರೊಗ್ಯಕರ ಹಾಗೂ ನೈಸರ್ಗಿಕ ಪಾನೀಯ. ಇದರಲ್ಲಿ ಅನೇಕ ಬಗೆಯ ಪೌಷ್ಟಿಕಾಂಶಗಳು ಇದೆ. ಈ ಬಗ್ಗೆ ಈಗಾಗಲೇ ಅಧ್ಯಯನಗಳೂ ನಡೆದಿದೆ ಸರ್ಕಾಾರದ ಪಾಲಿಸಿಗಳಲ್ಲಿ  ಬದಲಾವಣೆಯಾಗದ ಹೊರತು ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಈಗಾಗಲೇ ಬಹುತೇಕ ರಾಜ್ಯಗಳು ನೀರಾ ಬಗ್ಗೆ ಚಿಂತಿಸಿವೆ. ಆದರೆ ರಾಜ್ಯದಲ್ಲಿ  ಮಾತ್ರ ಈ ಬಗ್ಗೆ ಯಾವುದೇ ಪ್ರಗತಿ ಆಗಿಲ್ಲ ನೀರಾವನ್ನು ಕಾರ್ಬೋನೇಟೆಡ್ ಡ್ರಿಂಕ್ ಆಗಿಯೂ ಬಳಕೆ ಮಾಡಲು ಸಾಧ್ಯವಿದೆ. ಇದರಲ್ಲಿ  ವಿವಿಧ ಪ್ಲೇವರ್ ನೀಡಿ ಗ್ರಾಹಕರಿಗೇ ಆಯ್ಕೆ ಕೊಡಬೇಕಾಗಿದೆ. ಸ್ಥಳೀಯ ಪೇಯವಾಗಿಯೂ ನೀರಾ ಬಳಕೆ ಮಾಡಲು ಸಾಧ್ಯವಿದೆ. ಆದರೆ ಈಗಾಗಲೇ ಬಹುಪಾಲು ಸ್ಥಳೀಯ ಕಂಪನಿಗಳನ್ನು ದೊಡ್ಡ ಕಂಪನಿಗಳು ಖರೀದಿ ಮಾಡಿವೆ. ಈಗ ನೀರಾವನ್ನು ಬ್ರಾಂಡಿಂಗ್ ಮಾಡುವ ಕೆಲಸ ಆಗಬೇಕಾಗಿದೆ," ಎಂದು ಪಾಲಕ್ಕಾಡ್ ತೆಂಗು ಉತ್ಪಾದಕರ ಸಹಕಾರಿ ಸಂಘದ ಸತೀಶ್ ನೀರಾ ಗೋಷ್ಠಿಯಲ್ಲಿ ಶಿಖರೋಪನ್ಯಾಸ ನೀಡಿದರು.
              ಕಾಸರಗೋಡಿನ ಸಿಪಿಆರ್ಐನ ಹಿರಿಯ ವಿಜ್ಞಾನಿ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಮಾತನಾಡಿ, "ದೇಶದಲ್ಲಿ  ಶೇ.15 ರಷ್ಟು ಎಳನೀರು ಬಳಕೆಯಾದರೆ ಉಳಿದಂತೆ ಬಹುಪಾಲು ತೆಂಗಿನ ಕಾಯಿ ಬಳಕೆ ಮಾತ್ರ  ಆಗುತ್ತಿದೆ. ನೀರಾ ಬಳಕೆ ಆರಂಭವಾದ ಬಳಿಕ ಮೌಲ್ಯವರ್ಧನೆಯ ಪಾಲು ಅಧಿಕವಾಗಿದೆ. ನೀರಾದಲ್ಲಿ  ರೋಗ ನಿರೋಧಕ ಶಕ್ತಿ ಹೆಚ್ಚಿದೆ. ನೀರಾ ಬೇರೆ, ಶೇಂದಿ ಬೇರೆ - ಈ ಬಗ್ಗೆ ಅರಿವು ಬೇಕು. ನೀರಾ ಸಂಗ್ರಹಕ್ಕೆ ಐಸ್ ಬಾಕ್ಸ್ ತಂತ್ರಜ್ಞಾನ ಉಪಯೋಗಿಸಲಾಗುತ್ತಿದೆ. ನೀರಾ ಗುಣಮಟ್ಟವು 7.8 ಪಿಎಚ್ ಇರಬೇಕು, ಇದಕ್ಕಿಂತ ಕಡಿಮೆ ಬಂದರೆ ಅದರ ಉಪಯೋಗ ಆಗದು. ಸದ್ಯ ನೀರಾ ದಾಸ್ತಾನು ಸಮಸ್ಯೆ ಇದೆ. ತೆಂಗಿನ ಮರದಿಂದ ನಿರಂತರ ನೀರಾ ತೆಗೆಯುವ ಬದಲು ಮೂರು ತಿಂಗಳಿಗೊಮ್ಮೆ ಈ ಪ್ರಯೋಗ ಮಾಡಿದರೆ ತೆಂಗಿನ ಕಾಯಿ ಕೂಡಾ ಲಭ್ಯವಾಗುತ್ತದೆ. ನೀರಾದಿಂದ ಸಕ್ರೆ, ಬೆಲ್ಲ, ಜೇನು ಮೊದಲಾದ ಉತ್ಪನ್ನಗಳನ್ನು ಮಾಡಲು ಸಾಧ್ಯವಿದೆ. ಒಂದು ಎಕ್ರೆ ತೆಂಗಿನ ತೋಟದಲ್ಲಿ ಹತ್ತೊಂಭತ್ತು ಟನ್ ಸಕ್ರೆ ಉತ್ಪಾದನೆಗೆ ಸಾಧ್ಯವಿದೆ. ದೇಶದ ತೆಂಗಿನ ಉತ್ಪಾದನೆಯ ಶೇ.10 ರಷ್ಟು ನೀರಾಕ್ಕೆ ಬಳಕೆ ಮಾಡಿದರೆ ಮೂರು ಸಾವಿರದಿಂದ ನಾಲ್ಕು ಸಾವಿರ ಆದಾಯ ಗಳಿಸಬಹುದು," ಎಂದರು.
                  ಬೆಂಗಳೂರಿನ ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ್ಯೆ ಸಿಮಿ ಥಾಮಸ್ ಮಾತನಾಡಿ, "ನೀರಾ ತೆಗೆಯುವ ಮೊದಲು  ಬೆಳೆಗಾರರು ಸಂಘದ ರಚನೆ ಮಾಡಬೇಕು, ಆ ಬಳಿಕ ಒಕ್ಕೂಟದ ರಚನೆಯಾಗಿ ಬಳಿಕ ಕಂಪನಿ ರಚನೆಯಾದಾಗ ನೀರಾ ಇಳುವರಿ ಪಡೆಯಲು ಸುಲಭವಾಗುತ್ತದೆ. ಮಂಡಳಿ ವತಿಯಿಂದ ಕಂಪನಿ ಮೂಲಕ ನೀರಾ ಟ್ಯಾಪಿಂಗ್ಗೆ ತರಬೇತಿಯನ್ನೂ ನೀಡಲಾಗುತ್ತದೆ. ರಾಜ್ಯದಲ್ಲಿ  ಈಗಾಗಲೇ ಕಂಪನಿ ರಚನೆ ಪ್ರಕ್ರಿಯೆ ಶುರುವಾಗಿದೆ. ಕೇರಳದಲ್ಲಿ  13 ಕಂಪನಿ ಸ್ಥಾಪನೆಯಾಗಿದೆ" ಎಂದರು.
               ಸಭಾಧ್ಯಕ್ಷತೆ ವಹಿಸಿದ್ದ ಶಿರಸಿಯ ಟಿಎಸ್ಎಸ್ನ ಅಧ್ಯಕ್ಷ ಶಾಂತಾರಾಮ ಹೆಗ್ಡೆ ಮಾತನಾಡಿ, "ನಮಗೆ ನೀರಾದ ಬಗ್ಗೆ ತಪ್ಪು ಕಲ್ಪನೆ ಇದೆ. ಈಗ ದೂರವಾಗಿದೆ. ಮುಂದೆ ಈ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ನಡೆಯಲಿ ಎಂದರು.  ಇಂಜಿನಿಯರಿಂಗ್ ಕಾಲೇಜಿನ ತಾಂತ್ರಿಕ ವಿಭಾಗದ ಉಪನ್ಯಾಸಕಿ ನಿರುಪಮಾ ಕೆ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಮಂಜುನಾಥ ಐ ವಂದಿಸಿದರು. ಹಿರಿಯ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ಕಾರ್ಯಕ್ರಮವನ್ನು ಸಮನ್ವಯಗೊಳಿಸಿದರು.

ಬಾಯಿ ರುಚಿ ಮಾಡಿದ ನೀರಾ!
ನೀರಾ ಬಗ್ಗೆ ವಿಚಾರಗೋಷ್ಟಿ ನಡೆಯುತ್ತಿರುವ ವೇಳೆ ಜಿಲ್ಲೆಯ ತುಂಬೆಯಲ್ಲಿ  ತಯಾರಾಗುತ್ತಿರುವ ನೀರಾ ಘಟಕದ ವತಿಯಿಂದ ಸಭೆಯಲ್ಲಿ  ಭಾಗವಹಿಸಿದ ಎಲ್ಲರಿಗೂ ನೀರಾ ವಿತರಣೆ ನಡೆಯಿತು. ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ , ಕ್ಯಾಂಪ್ಕೋ ನಿರ್ದೇಶಕ ರಾಧಾಕೃಷ್ಣ ಕೋಟೆ, ಪುತ್ತೂರು ಪುರಸಭಾ ಅಧ್ಯಕ್ಷ ಜಗದೀಶ ನೆಲ್ಲಿಕಟ್ಟೆ ಅವರಿಗೆ ಸಭೆಯಲ್ಲಿ ನೀರಾ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು. ನೀರಾ ಸವಿದ ಎಲ್ಲರೂ ಬಾಯಿ ಚಪ್ಪರಿಸಿದರು.

0 comments:

Post a Comment