ಊಟದ ತಟ್ಟೆಯಲ್ಲಿ ಬಗೆಬಗೆಯ ಸೊಪ್ಪುಗಳ ಖಾದ್ಯಗಳ ಸಂಪನ್ನತೆಯ ದಿವಸಗಳಿದ್ದುವು ಎನ್ನಲು ವಿಷಾದವಾಗುತ್ತದೆ.
ಯಾವಾಗ ಪ್ರಕೃತಿದತ್ತವಾದ ಸೊಪ್ಪು, ಗೆಡ್ಡೆ, ಕಾಯಿ, ಹಣ್ಣುಗಳ ಬಳಕೆಗಳು ಬದುಕಿನಿಂದ ದೂರವಾಯಿತೋ ಅಂದಿನಿಂದ ವಿವಿಧ ರೋಗಗಳ ಪ್ರವೇಶಗಳಿಗೆ ರತ್ನಗಂಬಳಿ ಹಾಸಿದೆವು. ಪರಿಣಾಮ ಊಹಿಸಲು ದೂರ ಹೋಗಬೇಕಾಗಿಲ್ಲ. ಮೆಡಿಕಲ್ ಶಾಪ್ಗಳ ಮುಂದೆ ಮಾತ್ರೆಗಳಿಗಾಗಿ ನಿಲ್ಲುವ ಕ್ಯೂ ಸಾಕ್ಷಿ ಹೇಳುತ್ತದೆ.
ಹಿತ್ತಿಲಿನಲ್ಲಿ ಅಡ್ಡಾಡಿದರೆ ಸಾಕು, ಹತ್ತಾರು ವಿಧದ ಸಸ್ಯಗಳ ಕುಡಿಗಳು ಚಟ್ನಿಗೋ, ತಂಬುಳಿಗೋ, ಪಲ್ಯಕ್ಕೋ ಯಥೇಷ್ಟ ಸಿಗುತ್ತದೆ. ಅದನ್ನು ಗುರುತು ಹಿಡಿಯುವ, ಬಳಕೆಯ ವಿಧಾನ ತಿಳಿದಿರಬೇಕಷ್ಟೇ. ಒಂದೊಂದು ಕುಡಿಯಲ್ಲೂ ಔಷಧೀಯ ಗುಣಗಳಿರುವುದರಿಂದ ಆಹಾರವೇ ಔಷಧಿಯಾಗುತ್ತದೆ. ಆದರೆ ಈಗ ಔಷಧಿಯೇ ಆಹಾರ!
ಹಸಿರನ್ನೆಲ್ಲಾ ಕಳೆಯೆಂದು ತಿಳಿವ ಕಾಲಘಟ್ಟದಲ್ಲಿದ್ದೇವೆ. ವಿಷಕಾರಕವಾದ ಸಿಂಪಡಣೆಗಳು ವಿವಿಧ ರೋಗಕ್ಕೆ ಆಹ್ವಾನ ನೀಡುತ್ತಿವೆ. ದೇಹಕ್ಕೆ ವಿಟಮಿನ್ಗಳನ್ನು ನೀಡುವ ಸೊಪ್ಪುಗಳು ಬಟ್ಟಲಿನಿಂದ ದೂರವಾಗಿವೆ. ವರುಷಕ್ಕೊಮ್ಮೆ ಆಹಾರೋತ್ಸವ ಮಾಡಿ ಅದರಲ್ಲಿ ಪಾರಂಪರಿಕ ಖಾದ್ಯಗಳನ್ನು ಮಾಡಿ ಪ್ರದರ್ಶನವಿಟ್ಟು ಹೊಟ್ಟೆಗಿಳಿಸುವುದರಲ್ಲಿ ಆನಂದ, ಸಾರ್ಥಕ ಅನುಭವಿಸುತ್ತಿದ್ದೇವೆ.
ಸುಲಭವಾಗಿ ಬೆಳೆಯಬಹುದಾದ ಬಸಳೆ, ಕ್ರೋಟಾನ್ ಹರಿವೆ, ಕೆಂಪು-ಹಸಿರು ಹರಿವೆ, ನೆಲ ಬಸಳೆ.. ಮುಂತಾದ ಸೊಪ್ಪುಗಳನ್ನು ಬೆಳೆಸಲು ಎಕ್ರೆಗಟ್ಟಲೆ ಜಾಗ ಬೇಡ. ಚಕ್ರಮುನಿ, ಕೆಸು, ನುಗ್ಗೆ, ಪುಳಿಚ್ಚಪ್ಪು, ಓಟೆಹುಳಿ ಸೊಪ್ಪು, ಒಂದೆಲಗ, ಕೊತ್ತಂಬರಿ ಸೊಪ್ಪು, ದೊಡ್ಡ ಪತ್ರೆ, ಚಕ್ಕೋತ ಸೊಪ್ಪು, ನೀರ್ಪಂತಿ, ಪುದಿನ, ಮೆಂತೆ.. ಹೀಗೆ ಹತ್ತಾರು ಸೊಪ್ಪುಗಳು ಆಗಾಗ್ಗೆ ಅನ್ನದ ಬಟ್ಟಲಿಗೆ ಬರಬೇಕು. ಇದಕ್ಕಾಗಿ ಮೊದಲು ಮನಸ್ಸಿನಲ್ಲಿ ಜಾಗ ಕೊಡಿ, ಆಗ ಹಿತ್ತಿಲಿನಲ್ಲಿ ಬೆಳೆಯುವ, ಬೆಳೆಸುವ ಜಾಗ ಗೋಚರಿಸುತ್ತದೆ. ನಿವರ್ಿಷವಾಗಿ ಬೆಳೆಯುವ ಇಂತಹ ಸೊಪ್ಪುಗಳಿಂದ ಆರೋಗ್ಯ-ಭಾಗ್ಯ.
ಗ್ರಾಮೀಣ ಪ್ರದೇಶದ ಅಡುಗೆ ಮನೆಯಲ್ಲಿ ತಂಬುಳಿಗಳಿಗೆ ಪ್ರತ್ಯೇಕ ಮಣೆ. ತಂಬುಳಿ ಅಂದರೆ ತಂಪು ಹುಳಿ ಎಂದರ್ಥ. ಬ್ರಾಹ್ಮಿ, ನೆಲ್ಲಿ, ಮೊದಲಾದ ಹಸಿರೆಲೆಗಳಿಂದ ಸಿದ್ಧಪಡಿಸುವ ತಂಬುಳಿ ಮಿಳಿತವಾದ ಮೊದಲ ತುತ್ತು ಉದರಾಗ್ನಿಯನ್ನು ಶಮನಗೊಳಿಸುವ ಆಜ್ಯ. ದೇಹದ ಉಷ್ಣತೆಯನ್ನು ಸಮತೋಲನಗೊಳಿಸುವ ತಾಕತ್ತು ತಂಬುಳಿಗಿದೆ. ಬಸಳೆಯ ಪದಾರ್ಥ ಜನಪ್ರಿಯ. ನಮ್ಮ ಹಿರಿಯರ ಬದುಕಿನಲ್ಲಿ ತೊಂಡೆ ಮತ್ತು ಬಸಳೆಯ ಚಪ್ಪರಗಳು ಮನೆಯ ಹಿಂಬದಿಯಲ್ಲೋ, ತೋಟದಲ್ಲೋ ಇರುತ್ತಿತ್ತು. ಯಾಕೆಂದರೆ ಇದು ಆಪದ್ಭಾಂಧವ.
ಪಾಣಾಜೆಯ (ದ.ಕ.) ಗೃಹಿಣಿ ಜಯಲಕ್ಷ್ಮೀ ದೈತೋಟ ಹೇಳುತ್ತಾರೆ, "ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಪ್ರಕೃತಿಯು ಸಾಕಷ್ಟು ಸಂಪನ್ಮೂಲಗಳನ್ನು ನೀಡಿದೆ. ಅದನ್ನು ಗುರುತಿಸುವ ಜಾಣ್ಮೆಯನ್ನು ನಾವೇ ರೂಢಿಸಿಕೊಳ್ಳಬೇಕು. ಆಹಾರವೇ ಔಷಧಿಯಾಗಬೇಕು. ಹಿತ್ತಿಲಿನ ಧನ್ವಂತರಿಯನ್ನು ಮರೆತು ನಗರದಲ್ಲಿ ಸಿಗುವ ವಿಷಸಿಂಪಡಿತ ತರಕಾರಿಯನ್ನು ಹೊಟ್ಟೆಗಿಳಿಸುತ್ತೇವೆ. ನಗರದವರಿಗೆ ಅನಿವಾರ್ಯ. ಆದರೆ ಹಳ್ಳಿ, ಗ್ರಾಮೀಣ ಪ್ರದೇಶದವರೂ ಕೂಡಾ ಪೇಟೆಯಿಂದ ತರಕಾರಿ ತರುವುದು ನಿಜಕ್ಕೂ ನಾಚಿಕೆ." ಜಯಕ್ಕನ ಮಾತಲ್ಲಿ ಸತ್ಯವಿಲ್ವಾ. ಅರ್ಧ ಕಿಲೋ ಟೊಮೆಟೊವನ್ನು ಕೈಯಲ್ಲಿ ತೂಗಿಸಿಕೊಂಡು ಮನೆಗೆ ಬರುವುದೇ ನಮ್ಮ ಸ್ಟೇಟಸ್ ಆಗಿದೆ.
ಬಂಟ್ವಾಳ ತಾಲೂಕು (ದ.ಕ.) ಉಬರಿನ ಹಲಸು ಸ್ನೇಹಿ ಕೂಟವು ಇಂತಹ ಮರೆಯುತ್ತಿರುವ ಖಾದ್ಯಗಳನ್ನು ನೆನಪಿಸುವ ಜಾಗೃತಿ ಕಾರ್ಯಕ್ರಮವನ್ನು ಕಳೆದೈದು ವರುಷದಿಂದ ಮಾಡುತ್ತಿದೆ. ಇದೇ ೨೦೧೫ ಜನವರಿ 11ರಂದು ವಿಟ್ಲ ಸನಿಹದ ಅಳಿಕೆಯ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಶಾಲೆಯಲ್ಲಿ ಒಂದು ದಿವಸದ 'ಊಟಕ್ಕಿರಲಿ ಸೊಪ್ಪು ತರಕಾರಿ' ಎನ್ನುವ ಕಾರ್ಯಾಗಾರವನ್ನು ಏರ್ಪಡಿಸಿದೆ. ಊಟದ ತಟ್ಟೆಗೆ ವಿಧವಿಧದ ಸೊಪ್ಪನ್ನು ಖಾದ್ಯ ಮೂಲಕ ಉಣಿಸಲಿದೆ. ಇದರ ಔಷಧೀಯ ವಿಚಾರಗಳನ್ನು ತಿಳಿಸಲಿದೆ. ಖರ್ಚು ವೆಚ್ಚಗಳನ್ನು ಸರಿಸಮಗೊಳಿಸಲು ಶುಲ್ಕ ನಿಗದಿಪಡಿಸಿದೆ. ವ್ಯವಸ್ಥೆಯ ಅನುಕೂಲಕ್ಕಾಗಿ ಮೊದಲೇ ತಿಳಿಸಿ ನೋಂದಾಯಿಸಿದವರಿಗೆ ಆದ್ಯತೆ. (ವೆಂಕಟಕೃಷ್ಣ ಶರ್ಮ : 94802 00832)
ಹಲಸು ಸ್ನೇಹಿ ಕೂಟವು ತರಕಾರಿ ಹಬ್ಬ, ಹಲಸು ಹಬ್ಬ, ಮಾವಿನ ಹಬ್ಬ, ಗೆಡ್ಡೆ ತರಕಾರಿ ಹಬ್ಬ, ಸಿರಿಧಾನ್ಯದಡುಗೆ.. ಹೀಗೆ ನಿರ್ವಿಷ ಆಹಾರವನ್ನು ಬದುಕಿನಲ್ಲಿ ಮಿಳಿತಗೊಳಿಸುವ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ಸಾಗಿದೆ. ಈಗ ಸೊಪ್ಪು ತರಕಾರಿಗಳ ಸರದಿ. ಇದಕ್ಕಾಗಿ ಕಳೆದೆರಡು ತಿಂಗಳುಗಳಿಂದ ವಿವಿಧ ಸೊಪ್ಪುಗಳನ್ನು ಬೆಳೆಸುವ ಕೆಲಸವನ್ನು ಹಲಸು ಸ್ನೇಹಿ ಕೂಟದ ಸದಸ್ಯರು ಮಾಡುತ್ತಿದ್ದಾರೆ.
0 comments:
Post a Comment