Tuesday, January 13, 2015

"ರೋಗನಿರೋಧಕ ಶಕ್ತಿವರ್ಧನೆಗೆ ಸೊಪ್ಪುಗಳನ್ನು ಬಳಸಿ" - ಡಾ.ಸರಿತಾ ಹೆಗಡೆ

                   ಕೆಸುವಿನ ಪ್ರಬೇಧ 'ತಳ್ಳಿಚೇವು'ವಿನಿಂದ ಮಾಡಿದ ಮೊರಬ್ಬವನ್ನು ಹಂಚುವುದರ ಮೂಲಕ ಉದ್ಘಾಟನೆ.
                                        ನಾ. ಕಾರಂತ ಪೆರಾಜೆ ಸಂಪಾದಕತ್ವದ ವಾರ್ತಾಪತ್ರ ಬಿಡುಗಡೆ


              "ಪಾರಂಪರಿಕ ಆಹಾರಗಳು ಮರೆಯಾಗುತ್ತಿವೆ. ವಿವಿಧ ಬಗೆಯ ಸೊಪ್ಪುಗಳನ್ನು ಔಷಧೀಯ ಉದ್ದೇಶಕ್ಕಾಗಿ ಖಾದ್ಯಗಳನ್ನಾಗಿ ಮಾಡುವ ಸಂಪ್ರದಾಯವನ್ನು ಆಧುನಿಕ ಜೀವನ ಪದ್ಧತಿ ಕಸಿದುಕೊಂಡಿದೆ. ವಿಷಯುಕ್ತ ಆಹಾರಗಳು ಸ್ವಾಸ್ಥ್ಯಬದುಕಿಗೆ ಮಾರಕವಾಗಿದೆ. ಹಳ್ಳಿಯ ಉತ್ಪನ್ನಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆಗೊಳಿಸುವ ಕನಿಷ್ಠ ಜ್ಞಾನವನ್ನು ಹಳ್ಳಿಯಲ್ಲಿಯೇ ಪರಿಚಯಿಸುವ ಅಗತ್ಯವಿದೆ," ಎಂದು ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಡಾ.ಸರಿತಾ ಹೆಗ್ಡೆ ಹೇಳಿದರು.
                ಅವರು ಜನವರಿ 11ರಂದು ವಿಟ್ಲ-ಅಳಿಕೆ ಸನಿಹದ ಮುಳಿಯ ಶಾಲೆಯಲ್ಲಿ ಜರುಗಿದ 'ಊಟಕ್ಕಿರಲಿ, ಸೊಪ್ಪು ತರಕಾರಿ' ಕಾರ್ಯಾಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, "ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾತ್ರೆಗಳ ಬಳಕೆಯ ಬದಲಿಗೆ ಸೊಪ್ಪುಗಳನ್ನು ಬಳಸುವ ಪರಿಪಾಠ ಶುರುವಾಗಬೇಕು," ಎಂದರು. ಕೆಸುವಿನ ಪ್ರಬೇಧ 'ತಳ್ಳಿಚೇವು'ವಿನಿಂದ ಮಾಡಿದ ಮೊರಬ್ಬವನ್ನು ಸಭಿಕರಿಗೆ ಹಂಚುವುದರ ಮೂಲಕ ವಿಶಿಷ್ಟವಾಗಿ ಕಾರ್ಯಾಗಾರವನ್ನು ಉದ್ಘಾಟಿಸಿದ್ದರು.
            ಕೇಪು-ಉಬರು ಹಲಸು ಸ್ನೇಹಿ ಕೂಟವು ಆಯೋಜಿಸಿದ ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತ್ ಕರಿಂಗಾಣ ಅಧ್ಯಕ್ಷತೆ ವಹಿಸಿ, ವಾರ್ತಾಾಪತ್ರವನ್ನು ಬಿಡುಗಡೆಗೊಳಿಸಿದರು. ವಿಟ್ಲ ರೋಟರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ಅಬೂಬಕರ್ ಮುಖ್ಯ ಅತಿಥಿ ಸ್ಥಾನದಿಂದ ಸೋದಾಹರಣವಾಗಿ ಮಾತನಾಡಿದರು. ವೇದಿಕೆಯಲ್ಲಿ ಹಲಸು ಸ್ನೇಹಿ ಕೂಟದ ವರ್ಮುುಡಿ ಶಿವಪ್ರಸಾದ್ ಉಪಸ್ಥಿತರಿದ್ದರು.
            ಅಂಕಣಗಾರ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಶ್ರೀಮತಿ ವಿನುತ ರವಿ ಮುಳಿಯ ಪ್ರಾರ್ಥನೆಗೈದರು. ವಸಂತ ಕಜೆ ಮಂಚಿ ಪ್ರಸ್ತಾವನೆಗೈದರು. ಬೈಂಕ್ರೋಡು ಗಿರೀಶ ವಂದಿಸಿದರು. ಉಬರು ರಾಜಗೋಪಾಲ ಭಟ್, ಶಿರಂಕಲ್ಲು ನಾರಾಯಣ ಭಟ್, ಬೈಂಕ್ರೋಡು ವೆಂಕಟಕೃಷ್ಣ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಜನಹಿತ ಅಳಿಕೆ, ರೋಟರಿ ಕ್ಲಬ್ ವಿಟ್ಲ ಸಂಸ್ಥೆಗಳು ಕಾರ್ಯಕ್ರಮಕ್ಕೆ ಕೈಜೋಡಿಸಿದ್ದುವು.
              ಈಶ್ವರಮಂಗಲದ ವೈದ್ಯ ಡಾ.ಶ್ರೀಕುಮಾರ್, ಆಶಾ ಶ್ರೀಕುಮಾರ್ ಸೊಪ್ಪುಗಳ ವಿವಿಧ ಖಾದ್ಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮಾಡಿ ತೋರಿಸಿದರು. ಸೊಪ್ಪುಗಳ ಆಹಾರ ಮತ್ತು ಔಷಧೀಯ ಗುಣಗಳ ಕುರಿತು ಉಡುಪಿಯ ಡಾ.ಸಾವಿತ್ರಿ ದೈತೋಟ ಮಾಹಿತಿ ನೀಡಿದರು. ಉಕ್ಕಿನಡ್ಕ ಸಹಸ್ರಾಕ್ಷ ವೈದ್ಯಶಾಲಾದ ಮುಖ್ಯಸ್ಥ ಡಾ.ಜಯಗೋವಿಂದ ಇವರು ಬದುಕಿನೊಂದಿಗೆ ಮಿಳಿತವಾಗಲೇಬೇಕಾದ ಸೊಪ್ಪುಗಳ ವೈಜ್ಞಾನಿಕ, ಔಷಧೀಯ ಮಾಹಿತಿಯನ್ನು ಪವರ್ಪಾಯಿಂಟ್ ಪ್ರಸ್ತುತಿಯ ಮೂಲಕ ವಿವರಿಸಿದರು. ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆ ಸಮಾರೋಪ ಭಾಷಣ ಮಾಡಿದರು.
               ಹಲಸು ಸ್ನೇಹಿ ಕೂಟದ ಕಡಂಬಿಲ ಕೃಷ್ಣಪ್ರಸಾದ್ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಮುಳಿಯ ವೆಂಕಟಕೃಷ್ಣ ಶರ್ಮ ವಂದಿಸಿದರು. ಮಧ್ಯಾಹ್ನದ ಭೋಜನಕ್ಕೆ ವಿವಿಧ ಸೊಪ್ಪುಗಳ ಖಾದ್ಯ ವೈವಿಧ್ಯಗಳಿದ್ದುವು. ನೂರಕ್ಕೂ ಮಿಕ್ಕಿ ಅಡುಗೆ, ಔಷಧೀಯ ಸಸ್ಯಗಳ ಪ್ರದರ್ಶನವು ಗಮನ ಸೆಳೆಯಿತು.

0 comments:

Post a Comment