Monday, January 26, 2015

ಕೃಷಿ ಯಂತ್ರ ಮೇಳದಲ್ಲಿ 'ಸೌರ ಶಕ್ತಿ' - ವಿಚಾರ ಗೋಷ್ಠಿ


                    "ದೇಶದಲ್ಲಿ ಸುಮಾರು ಮೂವತ್ತೈದು ಕೋಟಿಯಷ್ಟು ಜನಕ್ಕೆ ವಿದ್ಯುತ್ ಸೌಲಭ್ಯ ಇಲ್ಲ. ಬಿಹಾರದಂತಹ ರಾಜ್ಯಗಳಲ್ಲಿ ಮೊಬೈಲ್ ಚಾರ್ಜು ಮಾಡಲು ಐದರಿಂದ ಎಂಟು ರೂಪಾಯಿ ಖರ್ಚುು ಮಾಡುತ್ತಾರೆ. ನಾವು ಸೌರ ಶಕ್ತಿಯನ್ನು ಸಮರ್ಪಕವಾಗಿ ಬಳಸುವ ಯೋಚನೆ ಮಾಡಿದರೆ ದೇಶದ ವಿದ್ಯುತ್ ಕೊರತೆಯನ್ನು ನೀಗಿಸಲು ಸಾಧ್ಯ, ಮಾತ್ರವಲ್ಲ  ವಿದ್ಯುತ್ನಲ್ಲೂ ಸ್ವಾವಲಂಬಿಯಾಗಲು ಸಾಧ್ಯ," ಎಂದು ಸೆಲ್ಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಹಂದೆ ಹೇಳಿದರು.
               ಪುತ್ತೂರಿನಲ್ಲಿ ಜರುಗಿದ (25-1-2015) ಎರಡನೇ ವಿಚಾರಸಂಕಿರನದಲ್ಲಿ ಸೌರಶಕ್ತಿಯ ಬಳಕೆಯ ಕುರಿತು ಮಾತನಾಡುತ್ತಾ, ಸೋಲಾರ್ ತಂತ್ರಜ್ಞಾನವನ್ನು ಕೇವಲ ತಂತ್ರಜ್ಞಾನವೆಂಬಂತೆ ನೋಡದೆ ಬದುಕಿನ ಉಪಯೋಗದ ಭಾಗವಾಗಿ ನೋಡಿದಾಗ ನಮಗೆ ಸೋಲಾರ್ ತಂತ್ರಜ್ಞಾನದ ಬಗ್ಗೆ ಒಲವು ಮೂಡಲು ಸಾಧ್ಯ. ಸೋಲಾರ್ ತಂತ್ರಜ್ಞಾನದ ಪರಿಣಾಮಗಳ ಬಗ್ಗೆ ನಾವು ಗಮನಹರಿಸಿದಾಗ ಇನ್ನಷ್ಟು ಪ್ರಗತಿ ಸಾಧ್ಯವಿದೆ. ಅನೇಕ ಸಂದರ್ಭದಲ್ಲಿ  ಸೋಲಾರ್ ತೀರಾ ದುಬಾರಿ ಎನ್ನಲಾಗುತ್ತಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಇದು ದುಬಾರಿಯಾಗಲು ಸಾದ್ಯವಿಲ್ಲ. ಸೌರ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುವುದರ ಮೂಲಕ ಶಾಲೆಗಳಲ್ಲಿ ಬೆಳಕು ನೀಡಲು ಹಾಗೂ ವಿದ್ಯುತ್ ಒದಗಿಸಲಾಗದ ಹಳ್ಳಿಗಳಿಗೆ ಬೆಳಕು ನೀಡಲು ಸಾಧ್ಯ. ಕರ್ನಾಾಟಕದಲ್ಲಿ ಸೋಲಾರ್ ಕ್ಷೇತ್ರದಲ್ಲಿ ಆದ ಕೆಲಸ ಗಮನಾರ್ಹವಾದದ್ದು. ಇಲ್ಲಿ ಐದು ಲಕ್ಷ ಮನೆಗಳು ಸೌರಶಕ್ತಿಯನ್ನು ಬಳಸುತ್ತಿವೆ. ಕೇವಲ ಬೆಳಕಿಗೆ ಮಾತ್ರವಲ್ಲದೆ ಸೌರಶಕ್ತಿಯ ಮೂಲಕ ಅಕ್ಕಿ ಮಿಲ್ ಗಳನ್ನೂ ನಡೆಸಬಹುದು. ಅಲ್ಲದೆ ನವೀಕರಿಸಬಹುದಾದ ಇಂಧನಗಳನ್ನು ಸರಿಯಾಗಿ ಬಳಸಿಕೊಳ್ಳಲು ಕಾರ್ಯಪ್ರವೃತ್ತರಾದರೆ ಉದ್ಯೋಗವೂ ಸೃಷ್ಟಿಯಾಗುತ್ತದೆ, ಅಮೇರಿಕಾಕ್ಕೂ ಸೌರಶಕ್ತಿ ಕುರಿತಾಗಿ ಮಾರ್ಗದರ್ಶನ ನೀಡುವಷ್ಟು ನಾವು ಸಶಕ್ತರಾಗಬಹುದು," ಎಂದು ತಿಳಿಸಿದರು.
                     ಬೆಂಗಳೂರಿನ ಎನ್ಟಿಸಿಎಸ್ಟಿಯ ನಿರ್ದೇಶಕ ಡಾ.ನಾಗನ ಗೌಡ ಮಾತನಾಡಿ, "ನವೀಕರಿಸಲಾಗದ ಇಂಧನಗಳನ್ನು ನಾವೀಗಾಗಲೇ ಶೇ.60 ರಷ್ಟು ಉಪಯೋಗಿಸಿಬಿಟ್ಟಿದ್ದೇವೆ. ಇನ್ನುಳಿದ ಶೇ.40 ರಷ್ಟು ಇಂಧನ ಮುಂದಿನ ಐವತ್ತು ವರ್ಷದಲ್ಲಿ ಬರಿದಾಗಲಿದೆ. ಹಾಗಾಗಿ ನಾವು ನಮ್ಮ ಅವಶ್ಯಕತೆಯಷ್ಟೇ ವಿದ್ಯುತ್ ಬಳಸಿಕೊಳ್ಳುವುದು ಅಗತ್ಯ. ಸೌರಶಕ್ತಿಯ ಬಳಕೆ ಮಾತ್ರ ಇದಕ್ಕೆ ಪರಿಹಾರವಾಗಬಲ್ಲದು" ಎಂದರು.
                  ಅಧ್ಯಕ್ಷತೆಯನ್ನು ವಹಿಸಿದ್ದ ಶಿವಮೊಗ್ಗದ ಮ್ಯಾಮ್ಕೋಸ್ ಸಂಸ್ಥೆಯ ಉಪಾಧ್ಯಕ್ಷ ನರಸಿಂಹ ನಾಯಕ್ ಮಾತನಾಡುತ್ತಾ, "ಬೆಳೆಗಾರರ ಬಗ್ಗೆ, ಕೃಷಿಕರ ಬಗ್ಗೆ ಅಧಿಕಾರಿಗಳು ನಿಗಾ ಇರಿಸಬೇಕು. ಅಧಿಕಾರಿಗಳು ಕೃಷಿಕರನ್ನು  ನಿರ್ಲಕ್ಷ್ಯ ಮಾಡಿದ್ದರಿಂದಲೇ ಇಂದು ಸಮಸ್ಯೆಯಾಗಿದೆ. ಗ್ರಾಮೀಣ ಭಾಗದಲ್ಲಿ  ಸೋಲಾರ್ ಶಕ್ತಿ ಬಳಕೆಗೆ ಅವಕಾಶ ಇದೆ. ಆದರೆ ಅದರ ಬಗ್ಗೆ ಮಾಹಿತಿ ಬೇಕು,"  ಎಂದರು. ಇದೇ ಸಂದರ್ಭದಲ್ಲಿ  ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ಆನಂದ್ ಅವರು  ತಯಾರಿಸಿದ ಅಡಿಕೆ ಕೃಷಿ ಬಗ್ಗೆ ಮೊಬೈಲ್ ಆಪ್ ಪತ್ರಕರ್ತ ಶ್ರೀ ಪಡ್ರೆ ಉದ್ಘಾಟಿಸಿದರು.
               ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಮಹೇಶ್ ಕೆ.ಕೆ ಸ್ವಾಗತಿಸಿದರು. ಪ್ರಾಧ್ಯಾಪಕಿ ಜಿ.ಆರ್.ಕಲ್ಪನಾ ವಂದಿಸಿದರು. ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಕಾರ್ಯಕ್ರಮ ಸಮನ್ವಯಗೊಳಿಸಿದರು.


0 comments:

Post a Comment