Monday, January 26, 2015

ಕೃಷಿ ಯಂತ್ರಮೇಳದಲ್ಲಿ "ಕೃಷಿ ಸಂಸತ”


             ಕೃಷಿ ಯಂತ್ರಮೇಳದಲ್ಲಿ  ಈ ಬಾರಿ ಕೃಷಿ ಸಂಸತ್ ಕಾರ್ಯಕ್ರಮ ಆಯೋಜಿಸಲಾಗಿತ್ತು.ಅತ್ಯಂತ ಯಶಸ್ವಿಯಾಗಿ ನಡೆದ ಕಾರ್ಯಕ್ರಮ.  ಇಡೀ ಕಾರ್ಯಕ್ರಮದಲ್ಲಿ  ಕೃಷಿಕರು ಉತ್ಸಾಹದಿಂದ. ವೇದಿಕೆ ಕೂಡಾ ಸಂಸತ್ ಮಾದರಿಯಲ್ಲೇ ರೂಪುಗೊಂಡಿತ್ತು. .
              ಜನವರಿ ೨೪, ಶನಿವಾರ ಕ್ಯಾಂಪ್ಕೋ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್ ಸಹಯೋಗದೊಂದಿಗೆ  ನಡೆದ ಕೃಷಿಯಂತ್ರ ಮೇಳದಲ್ಲಿ  ಕೃಷಿ ಸಂಸತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸದ ಬಿ.ಎಸ್.ಯಡಿಯೂರಪ್ಪ  ವಹಿಸಿದ್ದರು.
              "ಅಡಿಕೆ ಬೆಳೆಗಾರರ ಪರವಾಗಿ ಇರುವ ಗೋರಖ್ ಸಿಂಗ್ ವರದಿ ಜಾರಿಗೆ ಸರಕಾರ  ಏಕೆ ಪ್ರಯತ್ನ ಮಾಡುತ್ತಿಲ್ಲ, ಈಗಲಾದರೂ ಈ ಬಗ್ಗೆ ಕ್ರಮ ಕೈಗೊಳ್ಳಬಹುದಲ್ಲಾ" -  ಕೃಷಿಕ ಕರುಣಾಕರ ಪ್ರಶ್ನೆ. ಉತ್ತರಿಸಿದ ಶೋಭಾ ಕರಂದ್ಲಾಜೆ, "ಗೋರಖ್ಸಿಂಗ್ ವರದಿಯ ಎರಡು ಅಂಶಗಳ ಬಗ್ಗೆ ಮಾತ್ರ ಅಡಿಕೆ ಬೆಳೆಗಾರರಿಗೆ ಗೊತ್ತಿದೆ. ಆದರೆ ವರದಿಯ ಬಗ್ಗೆ ಸಮಗ್ರ ಅಧ್ಯಯನವಾಗಬೇಕು. ಏಕೆಂದರೆ ವರದಿಯ ಕೊನೆಯಲ್ಲಿ  ಮುಂದೆ ಅಡಿಕೆ ಬೆಳೆಯನ್ನು  ಬೆಳೆಯಲೇಬಾರದು, ರಾಸಾಯನಿಕ ಬಳಕೆ ಇಲ್ಲವೇ ಇಲ್ಲ, ಸಹಜವಾಗಿ ಹರಿಯುವ ನೀರನ್ನು  ಅಡಿಕೆ ಕೃಷಿಗೆ ಬಳಕೆ ಮಾಡುವಂತಿಲ್ಲ ಎಂಬ ಇತ್ಯಾದಿ ಅಂಶಗಳು ಇವೆ. ಹೀಗಾಗಿ ಈ ಬಗ್ಗೆ ಸಮಗ್ರ ಅಧ್ಯಯನವಾದ ಬಳಿಕವೇ ವರದಿಯ ಬಗ್ಗೆ ಹೇಳಲಾಗುತ್ತದೆ. ಒಂದು ವೇಳೆ ವರದಿ ಜಾರಿಯಾದರೆ ಅಡಿಕೆ ಬೆಳೆಗಾರರಿಗೆ ಆಗುವ ಸಂಕಷ್ಟಗಳ ಬಗ್ಗೆಯೂ ಅಧ್ಯಯನವಾಗಬೇಕಾಗಿದೆ" ಎಂದರು.
              ಸಭೆಯಲ್ಲಿ  ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ, "ಕೃಷಿಕರ ಸಮಸ್ಯೆಗಳ ಬಗ್ಗೆ ನೇರವಾಗಿ ಸಂಸದರುಗಳ ಮೂಲಕವೇ ಉತ್ತರ ಕಂಡುಕೊಳ್ಳುವ ವಿಶೇಷ ಪ್ರಯತ್ನ ಮಾಡಲಾಗಿದೆ. ಇದರ ಜೊತೆಗೇ ಇಲ್ಲಿನ ಸಮಸ್ಯೆಗಳು ಸಂಸತ್ನಲ್ಲಿ ಕೂಡಾ ಚರ್ಚೆಯಾದಾಗ ಕೃಷಿಕರಿಗೆ ಅನುಕೂಲವಾಗುತ್ತದೆ" ಎಂದರು.

ಕೃಷಿ ಸಂಸತ್ ನಲ್ಲಿ ಬಂದ ಪ್ರಶ್ನೆಗಳು ಹೀಗಿದೆ :

* ಆಹಾರ ಬೆಳೆಗಳ ದೃಷ್ಟಿಯಿಂದ ಕೈಗೊಂಡ ಕ್ರಮಗಳು ಏನು ? - ಮಹೇಶ್ ಚೌಟ
- ಹಸಿರು ಕ್ರಾಂತಿಯ ಬಳಿಕ ಸ್ವಾವಲಂಬಿಗಳಾಗಿದ್ದರೂ ಕೂಡಾ ಸರ್ಕಾಾರ ಆಹಾರ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. . ಇದಕ್ಕಾಗಿ ಸೂಕ್ತ ಬೆಂಬಲ ಬೆಲೆ, ವೈಜ್ಞಾನಿಕ ಬೆಲೆ ನಿಗದಿಯಾಗಲಿ - ಯಡಿಯೂರಪ್ಪ

* ಬೀಳಿ ಚೀಟಿ ವ್ಯವಹಾರ ತಡೆಯಲು ಸರಕಾರದ ಕ್ರಮ ಏನು ? - ಎಂ.ಡಿ.ವಿಜಯಕುಮಾರ್
- ಅಡಿಕೆ ವ್ಯವಹಾರ ಸೇರಿದಂತೆ ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಪಾರದರ್ಶಕತೆ ಬೇಕು. ಇದಕ್ಕಾಗಿ ಸಿಸಿಟಿವಿ, ಕಂಪ್ಯೂಟರ್ ಬಳಕೆ, ಬಿಲ್ ಮೂಲಕವೇ ವ್ಯವಹಾರ ಸೇರಿದಂತೆ ವೈಜ್ಞಾನಿಕ ತಂತ್ರಜ್ಞಾನ ಬಳಕೆಯಾಗಬೇಕು. ಕೃಷಿಕರೂ ಎಚ್ಚರ ವಹಿಸಬೇಕು.- ಯಡಿಯೂರಪ್ಪ

* ಅಡಿಕೆ ಹಳದಿ ರೋಗ ಪೀಡಿತ  ಬೆಳೆಗಾರರಿಗೆ ಪರ್ಯಾಯ ಬೆಳೆಯಾದ ತಾಳೆ ಬೆಳೆಯ ಬಗ್ಗೆ ಏನು ಕ್ರಮ? - ವಸಂತ ರಾವ್
_ಅಡಿಕೆ ಹಳದಿ ರೋಗ ಪೀಡಿತ ಪ್ರದೇಶದ ಅಡಿಕೆ ಬೆಳೆಗಾರರಿಗೆ  ತಾಳೆ ಬೆಳೆಯಲು ಸರಕಾರ ಪ್ರೋತ್ಸಾಹ ನೀಡುತ್ತಿದೆ.  ಜೊತೆಗೆ ಇತರ ಬೆಳೆಯ ಕಡೆಗೂ ಕೃಷಿಕರು ಗಮನಹರಿಸಬೇಕು.- ಯಡಿಯೂರಪ್ಪ

* ಆಮದು ಅಡಿಕೆಗೆ ಏನು ಕ್ರಮ ಕೈಗೊಂಡಿದೆ, ಸಾರ್ಕ್ ಒಪ್ಪಂದದಿಂದ ಅಡಿಕೆ ಹೊರಗಿಡಲು ಅಸಾಧ್ಯವೇ ? - ಶಾಂತಾರಾಮ ಹೆಗಡೆ
- ಅಡಿಕೆ ಆಮದು ತಡೆಗೆ ಈಗಾಗಲೇ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಆಮದು ತಡೆಗೆ ಮತ್ತಷ್ಟು ಬಿಗಿ ಕಾನೂನು ಮಾಡಲಾಗುತ್ತಿದೆ. ಈಗಾಗಲೇ ನೇಪಾಳ ಮೂಲಕ ಬರುವ ಅಡಿಕೆಗೆ ತಡೆಯಾಗಿದೆ .ಸಾರ್ಕ್ ಒಪ್ಪಂದ ಈಗಾಗಲೇ ಆಗಿರುವುದರಿಂದ ಏನೂ ಮಾಡಲು ಆಗದು. ಆದರೆ ಕಾನೂನು ಬಿಗಿ ಮಾಡುವ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ. - ಯಡಿಯೂರಪ್ಪ

* ರಬ್ಬರ್ ಧಾರಣೆ ಇಳಿಕೆಯಾಗುತ್ತಿದೆ, ಸರಕಾರ  ಕೈಗೊಂಡ ಕ್ರಮ ಏನು ? - ರಮೇಶ್ ಕೈಕಾರ
- ರಬ್ಬರ್ ಧಾರಣೆ ಇಳಿಕೆಗೆ ಹಿಂದಿನ ಸರಕಾರವೇ ಕಾರಣ. ಅಂದು ಕೈಗೊಂಡ ನಿರ್ಣಯದ ಕಾರಣ ಇಂದು ಧಾರಣೆ ಇಳಿಕೆಯಾಗಿದೆ. ಹಾಗಿದ್ದರೂ ಕೇಂದ್ರ ಸರಕಾರ ಧಾರಣೆ ಏರಿಕೆಗೆ ಬೇಕಾದ ಕ್ರಮ ಕೈಗೊಳ್ಳುತ್ತಿದೆ. ಇಲ್ಲಿನ ರಬ್ಬರ್ ಬಳಕೆಗೇ ಆದ್ಯತೆ ನೀಡಬೇಕು ಎಂದು ಕಂಪನಿಗಳಿಗೆ ಹೇಳಿದೆ. ಆಮದು ಸುಂಕ ಹೆಚ್ಚು ಮಾಡಿ ರಬ್ಬರ್ ಆಮದು ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ  ಧಾರಣೆ ಏರಿಕೆಯಾಗಬಹುದು. -ಶೋಭಾ ಕರಂದ್ಲಾಜೆ

*ಯಂತ್ರಗಳಿಗೆ ಸಿಗುವ ಸಬ್ಸೀಡಿ ನೇರವಾಗಿ ಕೃಷಿಕರಿಗೇ ಲಭ್ಯವಾಗಲಿ - ಸಂತೋಷ್ ಕುತ್ತಮೊಟ್ಟೆ
-ಈ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಪ್ರಯತ್ನವಾಗುತ್ತಿದೆ. ಯಂತ್ರೋಪಕರಣಗಳ ಸಬ್ಸೀಡಿ ನೇರವಾಗಿ ಕೃಷಿಕರ ಖಾತೆಗೇ ಜಮಾಮಾಡುವಂತೆ ಸರಕಾರ್ರವನ್ನು  ಒತ್ತಾಯಿಸುತ್ತೇನೆ. - ಯಡಿಯೂರಪ್ಪ.

*ಅಡಿಕೆ ಮೌಲ್ಯವರ್ಧನೆಗೆ ಕೇಂದ್ರ ಸರಕಾರ ಕೈಗೊಂಡಿರುವ ನಿರ್ಧಾರ ಏನು ? - ಎ.ಎಸ್.ಭಟ್
- ಈಗ ಅಡಿಕೆ ನಿಷೇಧವಾಗುವ ಹಂತಕ್ಕ ಬಂದಿದೆ. ಇದಕ್ಕೆ ಹಿಂದಿನ ಸರಕಾರದ ನಿರ್ಧಾರಗಳೇ ಕಾರಣ. ಆದರೆ ಈಗ ಅದೆಲ್ಲವನ್ನೂ ಸರಿ ಮಾಡಿ ನಿಷೇಧ ಪಟ್ಟಿಯಿಂದ ಹೊರತರುವ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ನ್ಯಾಚುರಲ್ ಅಡಿಕೆ ಬೆಳೆಯ ಬಗ್ಗೆ ಈಗ ಚಿಂತನೆ ನಡೆಯಬೇಕು. . - ಶೋಭಾ ಕರಂದ್ಲಾಜೆ

*ಸರಕಾರದ ಕೃಷಿ ಸಂಸ್ಥೆಗಳ ಜವಾಬ್ದಾರಿ ಬಗ್ಗೆ ಏನು ಕ್ರಮ ? - ಸುರೇಶ್ವಂದ್ರ ಟಿ.ಆರ್
- ಕೃಷಿ ಸಂಸ್ಥೆಗಳಾದ ಸಿಪಿಸಿಆರ್ ಐ ಅಡಿಕೆ ಬೆಳೆಗೆ ಬೇಕಾದ ಎಲ್ಲಾ ಅಂಶಗಳ ಬಗ್ಗೆ ಅಧ್ಯಯನ ಮಾಡಿ ಬೆಳೆಗಾರರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು .ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗುತ್ತದೆ. - ಯಡಿಯೂರಪ್ಪ

*ಭತ್ತದ ಕೃಷಿಗೆ ಸಹಾಯ ಬೇಕು - ಕೃಷ್ಣ ರೈ ಪುಣ್ಚಪ್ಪಾಡಿ
-ಭತ್ತದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಹಾಗೂ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು ಎಂದು ಈಗಾಗಲೇ ಒತ್ತಾಯಿಸಲಾಗಿದೆ. ಈಗ ಸರಕಾರ ಒಂದು  ರೂಪಾಯಿಗೆ ಅಕ್ಕಿ ನೀಡುತ್ತಿರುವುದು  ರೈತರ ಮೇಲೆಯೇ ಒತ್ತಡ ತಂದಂತಾಗಿದೆ. ಇದಕ್ಕಾಗಿ ಸರಕಾರವೇ ರೈತರಿಗೆ ಸಹಾಯ ನೀಡಬೇಕು. -ಯಡಿಯೂರಪ್ಪ

* ಮಂಗನ ಹಾವಳಿಗೆ ಏನು ಕ್ರಮ ಇದೆ ? - ಯೂಸುಫ್
- ಕಾಡುಪ್ರಾಣಿಗಳ ಹಾವಳಿಗೆ ರಾಜ್ಯ ಸರಕಾರದಲ್ಲಿ ಸಾಕಷ್ಟು ಅನುದಾನಗಳು ಇದೆ. ಈ ಅನುದಾನಗಳ ಮೂಲಕ ಕಾಡುಪ್ರಾಣಿ ಹಾವಳಿ  ತಡೆಗೆ ಸಾಧ್ಯವಿದೆ. ಆದರೆ ಅರಣ್ಯ ಸಚಿವರಿಗ ಈ ಬಗ್ಗೆ ಆಸಕ್ತಿ ಬೇಕು ಅಷ್ಟೇ. ಇಲ್ಲಿ  ಅನುದಾನ ಇದ್ದರೂ ಈ ಬಗ್ಗೆ ಯಾವುದೇ ಚರ್ಚೆಯಾಗದ ಕಾರಣ ಹೀಗಾಗಿದೆ.- ಶೋಭಾ ಕರಂದ್ಲಾಜೆ

* ವೆನಿಲ್ಲಾ ನಾಶವಾಗಿ ಬ್ಯಾಂಕ್ ಸಾಲ ಕಟ್ಟಲಾಗುತ್ತಿಲ್ಲ, ಪರಿಹಾರ ಇದೆಯಾ ?- ದೀಪಕ್
-ವೆನಿಲ್ಲಾ ಬೆಳೆ ನಾಶವಾದ ಬಗ್ಗೆ ಈಗಾಗಲೇ ಎಲ್ಲಡೆ ಕೇಳಿಬರುತ್ತಿದೆ. ಆದರೆ ಧಾರಣೆ ಇದ್ದ ಸಂದರ್ಭದಲ್ಲಿ  ಈ ಬಗ್ಗೆ ಯಾವುದೇ ಸೂಕ್ತ ದಾಖಲೆಗಳು ರಚನೆಯಾಗದ ಕಾರಣ ಈಗ ಸಮಸ್ಯೆಯಾಗಿದೆ. ಈಗ ಸಾಲಮನ್ನಾವೇ ಪರಿಹಾರ ಅಲ್ಲ, ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕು, ಪರ್ಯಾಾಯ ಬೆಳೆಗೆ ವ್ಯವಸ್ಥೆಯಾಗಬೇಕು- ಯಡಿಯೂರಪ್ಪ

(ವರದಿ ಕ್ರಪೆ : ಹರ್ಶಿತಾ ಪಿ.)

0 comments:

Post a Comment