(26-1-2015ರ ಹೊಸದಿಗಂತದಲ್ಲಿ ಪ್ರಕಟ)
2009. ಅಡಿಕೆ ಸುಲಿತಕ್ಕೆ ಯಂತ್ರಗಳು ಹೆಜ್ಜೆಯೂರಿದ ಸಮಯ. ಕೃಷಿಕ ಸಂಶೋಧಕರು ಅಲ್ಲಿಲ್ಲಿ 'ತಮಗಾಗಿ' ಯಂತ್ರಗಳನ್ನು ಆವಿಷ್ಕರಿಸಿದ್ದರು. ಕೆಲವು ಉದ್ಯಮಗಳು ಯಂತ್ರಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು. ಅವುಗಳ ಕ್ಷಮತೆ, ಸುಲಿತದ ಸಾಮಥ್ರ್ಯ, ಸಾಧ್ಯಾಸಾಧ್ಯತೆಗಳ ನಿಖರ ಚಿತ್ರಣವಿರಲಿಲ್ಲ. ಪರಸ್ಪರ ಸಿಕ್ಕಾಗ ಯಂತ್ರಗಳದ್ದೇ ಮಾತುಕತೆ.
ಆಗಿನ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ರಂಗಮೂರ್ತಿಯವರ ಸಾರಥ್ಯದ ಮೊದಲ ಯಂತ್ರಮೇಳದಲ್ಲಿ ಅಡಿಕೆ ಸುಲಿ ಯಂತ್ರಗಳನ್ನು ಕೃಷಿಕರಿಗೆ ಪರಿಚಯಿಸುವುದು ಮೊದಲಾದ್ಯತೆಯ ಕೆಲಸವಾಗಿತ್ತು. ಆಗಲೇ ಅಡಿಕೆ ಪತ್ರಿಕೆಯಲ್ಲಿ ಬೆಳಕು ಕಂಡಿದ್ದ ಹತ್ತಾರು ಸಂಶೋಧಕರು ಮೇಳದಲ್ಲಿ ಮಳಿಗೆ ತೆರೆದಿದ್ದರು. ಮೂವತ್ತೈದಕ್ಕೂ ಮಿಕ್ಕಿದ ಯಂತ್ರಗಳು ಮೇಳದಲ್ಲಿ ಸದ್ದು ಮಾಡಿದಾಗ ಕೃಷಿಕರ ಮುಖದಲ್ಲಿ ನೆರಿಗೆಯ ಬದಲು ನಗು ಮೂಡಿತ್ತು.
ಮೇಳದ ಬಳಿಕ ಸಂಶೋಧಕರ ಮಧ್ಯೆ ಸಂವಹನ ಶುರುವಾಯಿತು. ಸಂಪರ್ಕದ ಕೊಂಡಿ ಬಿಗಿಯಾಯಿತು. ಯಂತ್ರಗಳತ್ತ ಹೊರಳಿದ ಕೃಷಿಕರ ಚಿತ್ತವನ್ನು ಮನಗಂಡ ಉದ್ಯಮಗಳು ಹೊಸ ಯಂತ್ರಗಳನ್ನು ರೂಪಿಸುವತ್ತ ಯೋಚಿಸಿದುವು. ಅಡಿಕೆ ಸುಲಿ ಯಂತ್ರಕ್ಕೂ ಮಾರುಕಟ್ಟೆ ಮಾಡಬಹುದೆಂಬ ಧೈರ್ಯ ಉದ್ಯಮಗಳಿಗೆ ಬಂದುವು. ಕೃಷಿಕ ಸಂಶೋಧಕರು ತಮ್ಮ ಜ್ಞಾನದ ಮಿತಿಯಲ್ಲಿ ಯಂತ್ರಗಳನ್ನು ತಯಾರಿಸುವತ್ತ ಯೋಚಿಸುವಂತಾಯಿತು. ಈ ಎಲ್ಲಾ ಅಜ್ಞಾತ ಪ್ರಕ್ರಿಯೆಗೆ ಕ್ಯಾಂಪ್ಕೋ ಬೆನ್ನು ತಟ್ಟಿತ್ತು.
ಆಮೇಲಿನ ಬೆಳವಣಿಗೆಗಳಿಗೆ ವಿವರಣೆ ಬೇಕಾಗದು. ಕೃಷಿಕರ ಅಂಗಳದಲ್ಲಿ ಅಡಿಕೆ ಸುಲಿ ಯಂತ್ರಗಳು ಚಾಲೂ ಆದುವು. ಸ್ವಲ್ಪ ಮಟ್ಟಿನ ಏರು ದರವಿದ್ದರೂ ಕ್ಷಮತೆ ಮತ್ತು ಸಹಾಯಕರ ಅಲಭ್ಯತೆಯ ತಲೆನೋವನ್ನು ಯಂತ್ರಗಳು ಹಗುರಗೊಳಿಸುವುದು. ಸಕಾಲಕ್ಕೆ ಅಡಿಕೆ ಸುಲಿತವಾಗತೊಡಗಿದುವು. ಮಾರುಕಟ್ಟೆಯ ದರವನ್ನು ಅಧ್ಯಯನ ಮಾಡಿ, ಏರು ದರವಿದ್ದಾಗ ಅಡಿಕೆಯನ್ನು ಸುಲಿದು ಮಾರುಕಟ್ಟೆಗೆ ಬಿಡುವ ಜಾಣ್ಮೆ ರೂಢನೆಯಾಯಿತು.
ಕರಾವಳಿಯಲ್ಲಿ ಚಾಲಿ ಅಡಿಕೆಯಿದ್ದಂತೆ ಮಲೆನಾಡಿನಲ್ಲಿ 'ಕೆಂಪಡಿಕೆ' ಮಾಡುವುದು ಪಾರಂಪರಿಕ. ಎಳೆ ಅಡಿಕೆಯನ್ನು ಸುಲಿದು, ಬೇಯಿಸಿ, ಒಣಗಿಸುವ ಪ್ರಕ್ರಿಯೆ. ಎಳೆ ಅಡಿಕೆಯನ್ನು ಸುಲಿಯುವುದು ಶ್ರಮ ಬೇಡುವ ಕೆಲಸ. ಸಹಾಯಕರ ಅವಲಂಬನೆಯೂ ಹೆಚ್ಚು ಬೇಕಾಗುತ್ತದೆ. ಎಳೆ ಅಡಿಕೆ ಸುಲಿಯುವ ಯಂತ್ರಗಳು ಮಲೆನಾಡಿಯಲ್ಲಿ ಕ್ಷಿಪ್ರವಾಗಿ ಅಭಿವೃದ್ಧಿಯಾದುವು.
2012ರಲ್ಲಿ ಎರಡನೇ ಯಂತ್ರಮೇಳವು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭರ ನೇತೃತ್ವದಲ್ಲಿ ಜರುಗಿತ್ತು. ಅಂತರ್ಸಾಾಗಟಕ್ಕೆ ಹೆಚ್ಚು ಒತ್ತು ನೀಡಿದ ಮೇಳದಲ್ಲಿ ವಿವಿಧ ಕ್ಷಮತೆಯ ಗಾಡಿಗಳು, ಯಾಂತ್ರೀಕೃತ ಗಾಡಿಗಳು, ಮೋಟೊ ಕಾರ್ಟ್ ಗಳು ಕೃಷಿಕರ ಚಿತ್ತವನ್ನು ಗೆದ್ದುವು. ಮಳೆಗಾಲದಲ್ಲಿ ಅಡಿಕೆ ಕೊಳೆ ರೋಗಕ್ಕೆ ಬೋರ್ಡೋ ಸಿಂಪಡಿಸಲು ಯಾಂತ್ರೀಕೃತ ಸಿಂಪಡಣೆಗಳ ಪ್ರವೇಶವಾಯಿತು. ಪವರ್ ಸ್ಪ್ರೇಯರ್ಗಳ ಕ್ಷಮತೆಗಳು ಕೃಷಿಕ ಸ್ವೀಕೃತಿ ಪಡೆಯಿತು. ಒಂದು ಪವರ್ ಸ್ಪ್ರೇಯರಿನಿಂದ ನಾಲ್ಕು ಮಂದಿ ಏಕಕಾಲದಲ್ಲಿ ಸಿಂಪಡಣೆ ಮಾಡಬಹುದಾದ ವ್ಯವಸ್ಥೆಗಳು ಕೃಷಿ ಸಂಕಟಕ್ಕೆ ಚಿಕ್ಕ ಪರಿಹಾರವಾಗಿ ಒದಗಿ ಬಂದುವು.
ಕಳೆದೆರಡು ವರುಷಗಳಿಂದ ತೋಟಗಳಲ್ಲಿ ಮಹತ್ತಾದ ಬದಲಾವಣೆ ಕಾಣುತ್ತೇವೆ. ಸಹಾಯಕರು ಕೆಲಸಕ್ಕೆ ಬಾರದಿದ್ದಾಗ ಅಧೀರರಾಗದೆ ಯಜಮಾನನೇ ಕೇರ್ಪು, ಏಣಿಯನ್ನು ಬಳಸಿ ಮರವೇರಿ ಪವರ್ ಸ್ಪ್ರೇಯರ್ನಿಂದ ಬೋರ್ಡೋ ಸಿಂಪಡಿಸುವುದನ್ನು ನೋಡುತ್ತೇವೆ. ಈ ರೀತಿಯ ಧೈರ್ಯ, ಸ್ಥೈರ್ಯ ಕೊಟ್ಟಿರುವುದು ಯಂತ್ರ ಮೇಳಗಳೆಂದು ಹೇಳಲು ಖುಷಿಯಾಗುತ್ತದೆ,' ಎನ್ನುತ್ತಾರೆ ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ.
ಯಂತ್ರಾಸಕ್ತ ಕೃಷಿಕರು ಬೇರೆ ಬೇರೆ ದೇಶಗಳಿಗೆ ಪ್ರವಾಸ ಹೋಗುವಾಗ ಅಲ್ಲಿನ ಯಾಂತ್ರೀಕರಣವನ್ನು ನೋಡುವ ಮನಃಸ್ಥಿತಿ ರೂಪಿತವಾಗಿದೆ. ಇಸ್ರೇಲ್, ಚೀನಾ, ಫಿಲಿಪೈನ್ಸ್ ದೇಶಗಳ ಯಂತ್ರಗಳನ್ನು ಅಭ್ಯಸಿಸಿ, ಅವು ನಮ್ಮ ನೆಲಕ್ಕೆ ಹೇಗೆ ಹೊಂದಬಹುದೆನ್ನುವ ಪರೀಕ್ಷೆಗಳು ನಡೆಯುತ್ತಿವೆ. ಹೊರ ದೇಶಗಳ ಮೋಟೋಕಾರ್ಟ್ ಗಳು ವಿವಿಧ ವಿನ್ಯಾಸಗಳಲ್ಲಿ ನಮ್ಮೂರ ತೋಟ ಹೊಕ್ಕಿವೆ. ಅಲ್ಲಿನ ವಿನ್ಯಾಸವನ್ನು ಅಧ್ಯಯನ ಮಾಡಿದ ತಂತ್ರಜ್ಞರು ತಂತಮ್ಮ ವರ್ಕ್ ಶಾಪಿನಲ್ಲಿ ವಿವಿಧ ಸಾಗಾಟ ಯಂತ್ರಗಳನ್ನು ರೂಪಿಸುತ್ತಿರುವುದು ದೊಡ್ಡ ಹೆಜ್ಜೆ.
ದೆಹಲಿ, ಪೂನಾ, ಬೆಂಗಳೂರು.. ಮೊದಲಾದೆಡೆ ನಡೆಯುವ ಕಿಸಾನ್ ಮೇಳ, ಯಂತ್ರಮೇಳಗಳತ್ತ ಆಸಕ್ತರಾಗಿ ಯಂತ್ರೋಪಕರಣ, ಕೃಷಿ ಅಭಿವೃದ್ಧಿ, ಬದಲಾವಣೆಗಳನ್ನು ನೋಡುವ ಅಭ್ಯಾಸ ಬಹುತೇಕರಲ್ಲಿ ರೂಢಿಯಾಗಿದೆ. ಕೃಷಿಕ ಸಂಕಟಗಳನ್ನು ಪರಸ್ಪರ ಹಂಚಿಕೊಂಡು, ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವ ರೈತಜಾಣ್ಮೆಗಳು ಅಪ್ಡೇಟ್ ಆಗುತ್ತಿವೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆವಿಷ್ಕರಿಸಿದ ಯಂತ್ರಗಳ ಪ್ರದರ್ಶನಗಳಿಗೆ ಮೇಳದಲ್ಲಿ ಅನುವು ಮಾಡಿದೆ.
ಈಗ ಮೂರನೇ ಯಂತ್ರಮೇಳ ಸಂಪನ್ನವಾಗಿದೆ. ಕಳೆದೆರಡು ಮೇಳಗಳು ಹಬ್ಬಿಸಿದ ಯಂತ್ರಗಳ ಅರಿವು ಮೂರನೇ ಮೇಳದಲ್ಲಿ ಮಿಳಿತವಾಗಿ, ಕೃಷಿ ಸಂಕಟಗಳ ಪರಿಹಾರಕ್ಕೆ ಹೊಸ ಹಾದಿ ಕಂಡುಕೊಳ್ಳಲು ಸಹಕಾರಿಯಾಯಿತು.
0 comments:
Post a Comment