ದಶಂಬರ ಕೊನೆಗೆ ರಾಜಧಾನಿಯ ಹೊರವಲಯದ ಯುವ ಕೃಷಿಕ ಶಿವಮಣಿಯವರಲ್ಲಿಗೆ ಭೇಟಿ ನೀಡಿದ್ದೆ. ಆಗಷ್ಟೇ ಒಂದೆರಡು ಕೊಯಿಲು ಮುಗಿದಿತ್ತು. ಮಾರುಕಟ್ಟೆಯಲ್ಲಿ ಒಳ್ಳೆ ದರ ಇಲ್ಲವೆಂಬ ಆತಂಕ ಒಂದೆಡೆ, ಔಷಧ (ವಿಷ) ಸಿಂಪಡಿಸಿದಷ್ಟೂ ಕೀಟಗಳ ಹಾವಳಿ ಜಾಸ್ತಿ ಎಂಬ ಚಿಂತೆ ಮತ್ತೊಂದೆಡೆ.
ಉತ್ತಮ ಗಾತ್ರದ ಟೊಮೆಟೋ ಕಾಯಿಗಳು ಬಳ್ಳಿಯಲ್ಲಿ ತೊನೆಯುತ್ತಿದ್ದುವು. ನಸುಕೆಂಪು ಬಣ್ಣಕ್ಕೆ ತಿರುಗಿ ಕಟಾವಿಗೆ ಹಸಿರುನಿಶಾನೆ ತೋರಿಸುತ್ತಿದ್ದುವು. 'ನಾಡಿದ್ದು ಕೊಯ್ದು ಮಾರುಕಟ್ಟೆಗೆ ಒಯ್ಬೇಕು ಸಾರ್. ಎಲ್ಲಾದರೂ ಹುಳ ಹುಪ್ಪಟೆ ಬಂದುಬಿಟ್ರೆ..! ಕಾಯಿ ಹಾಳಾಗುತ್ತೆ. ಮಾರ್ಕೆಟಲ್ಲಿ ರಿಜೆಕ್ಟ್ ಆಗುತ್ತೆ. ಮುಂಜಾಗ್ರತೆಗಾಗಿ ಔಷಧ ಹೊಡಿತಾ ಇದ್ದೀವಿ' ಎನ್ನುತ್ತಾ ಆ ಯುವಕ ತನ್ನ ಟೊಮೆಟೋ ತೋಟಕ್ಕೆ ಸ್ವಾಗತಿಸಿದರು.
ಹೌದಲ್ಲಾ.. ಘಾಟು ವಾಸನೆ! ನಾಲ್ಕೈದು ಬಟ್ಟೆಯ ಮಾಸ್ಕ್ ಧರಿಸಿ ಔಷಧ (ವಿಷ) ಸಿಂಪಡಿಸುತ್ತಿದ್ದರು. ಸಂಜೆ ಆರೂವರೆಯಾದರೂ ಒಂದೇ ಒಂದು ಸೊಳ್ಳೆ ನೋಡಲು ಸಿಕ್ಕಿಲ್ಲ, ಕಡಿದಿಲ್ಲ! ಟೊಮೆಟೊ ಸಾಲುಗಳ ಮಧ್ಯೆ ತಿರುಗಾಡುತ್ತಿದ್ದಾಗ ನೀರವ/ನೀರಸ ಅನುಭವ. ಸಿಂಪಡಣೆಯ ಮಂಜುಹನಿಗಳಿಂದಾಗಿ ಸರಣಿಕೆಮ್ಮು! 'ತೊಂದ್ರೆಯಿಲ್ಲ ಸಾರ್, ಸ್ವಲ್ಪ ಹೊತ್ತಲ್ಲಿ ಸರಿ ಹೋಗುತ್ತೆ' ಎನ್ನುತ್ತಾ, 'ಎಷ್ಟು ಔಷಧ ಹೊಡೆದರೂ ಪ್ರಯೋಜನವಿಲ್ಲ ಸಾರ್, ಕೀಟ ಬಾಧೆ ಇದ್ದೇ ಇದೆ' ಎಂಬ ನಿರಾಶೆ ಅವರಲ್ಲಿತ್ತು.
ಟೊಮೆಟೊ ಸಾಲುಗಳ ಮಧ್ಯೆ ಎಲ್ಲೆಂದರಲ್ಲಿ ವಿಷದ ಕ್ಯಾನ್ಗಳು, ಸ್ಯಾಚೆಟ್, ಪ್ಲಾಸ್ಟಿಕ್ ಪೊಟ್ಟಣಗಳು ಸಿಂಪಡಣೆಗೆ ಸಾಕ್ಷಿಗಳಾಗಿ ಬಿದ್ದಿದ್ದವು. ಬಳ್ಳಿಗಳಿಗೆ ಆಧಾರವಾಗಿ ಊರಿದ್ದ ಕಂಬಗಳಿಗೆ ಬಳಸಿದ ವಿಷಗಳ ಪ್ಲಾಸ್ಟಿಕ್ ಪ್ಯಾಕೆಟ್ಗಳ ಟೊಪ್ಪಿಗೆ! 'ಇಷ್ಟೇ ಅಲ್ಲ ಸಾರ್, ಮೂಟೆಗಟ್ಟಲೆ ಇದೆ. ಗುಜರಿಯವರು ಒಯ್ಯುತ್ತಾರೆ' ಎಂದು ಬಳಸಿ ಎಸೆದ ವಿಷದ ಪ್ಲಾಸ್ಟಿಕ್ ತ್ಯಾಜ್ಯಗಳತ್ತ ಬೆರಳು ತೋರಿದರು.
ನಾಟಿಯಿಂದ ಕೊಯ್ಲು ತನಕ ಎಂಟರಿಂದ ಹತ್ತು ಸಲ ಸಿಂಪಡಣೆ ಬೇಕಂತೆ. ಮುಂಜಾಗ್ರತೆಗಾಗಿ ಇನ್ನೆರಡು ಸಲ ಬೋನಸ್! ಏನಿಲ್ಲವೆಂದರೂ ತನ್ನ ಒಂದೂವರೆಯೆಕ್ರೆ ಟೊಮೆಟೋ ಬೆಳೆಗೆ ಇಪ್ಪತ್ತು ಸಾವಿರಕ್ಕೂ ಮಿಕ್ಕಿ ಸಿಂಪಡಣೆಗೆ ವೆಚ್ಚವಾಗುತ್ತದೆ!
'ಅಲ್ಲಣ್ಣಾ, ಇಷ್ಟೆಲ್ಲ ಖರ್ಚು ಮಾಡಿ ಬೆಳೆ ತೆಗೆದರೂ ನಿಮ್ಗೆ ಗಿಟ್ಟುತ್ತಾ?' ಪ್ರಶ್ನಿಸಿದೆ. 'ಆರೇಳು ವರುಷದಿಂದ ಟೊಮೆಟೊ ಕೃಷಿ ಮಾಡ್ತಾ ಇದ್ದೀವಿ. ಅದಕ್ಕಿಂತ ಹಿಂದೆ ರಾಗಿ ಬೆಳಿತಿದ್ವಿ. ಯಾಕೋ ಸಾರ್ ಟೊಮೆಟೊ ಸಹಜವಾಗಿ ಬೆಳೆಯುವುದಿಲ್ಲ. ಕೀಟ, ಬೆಂಕಿರೋಗ ಬರುತ್ತೆ. ಔಷ್ದ ಸ್ಪ್ರೇ ಮಾಡದೆ ಸಾಧ್ಯವಿಲ್ಲ. ಔಷ್ದ ಅಂಗಡಿಯವರು ಸಿಂಪಡಣೆಯ ಪ್ರಮಾಣ ಹೇಳ್ತಾರೆ. ಆದರೆ ಅಷ್ಟು ಸಿಂಪಡಿಸಿದರೆ ಕೀಟಗಳಿಗೆ ಕ್ಯಾರೇ ಇಲ್ಲ! ಹಾಗಾಗಿ ನಮ್ದೇ ಪ್ರಮಾಣ.. ಹೇಳುತ್ತಾ ಹೋದರು.
ಸಾಮಾನ್ಯವಾಗಿ ಇಲ್ಲಿ ವಿಷ ಸಿಂಪಡಿಸದೆ ಕೃಷಿ ಮಾಡಲು ಸಾಧ್ಯವೇ ಇಲ್ಲ ಎಂಬಂತಹ ನಂಬುಗೆ. ಇದಕ್ಕೆ ಕರಾವಳಿಯೂ ಹೊರತಲ್ಲ ಬಿಡಿ. ಆದರೆ ಸಿಂಪಡಣೆ ಎಷ್ಟು ಅನಿವಾರ್ಯ? ಪ್ರಮಾಣ ಎಷ್ಟು? ಕೀಟಗಳು ನಿಯಂತ್ರಣವಾಗುವುದಿಲ್ಲ ಅಂತಾದ್ರೆ ಸಿಂಪಡಿಸುವ ಔಷಧ ಯಾ ವಿಷದ ಸಾಚಾತನ ಎಷ್ಟು? ಮೊದಲಾದ ಸಾಮಾನ್ಯ ಜ್ಞಾನದ ಕೊರತೆ ಎದ್ದುಕಾಣುತ್ತದೆ.
ತಮ್ಮದೇ ಪ್ರಮಾಣದ ಡೋಸೇಜ್ನ್ನು ಫಿಕ್ಸ್ ಮಾಡಿಕೊಂಡು ಸಿಂಪಡಣೆ ಮಾಡುತ್ತಾರೆ. ಕೇವಲ ಟೊಮೆಟೋ ಪಡೆಯುವ ಒಂದೇ ಉದ್ದೇಶಕ್ಕಾಗಿ. ಆರೋಗ್ಯದ ಕುರಿತು ಯಾವುದೇ ಕಾಳಜಿಯಿಲ್ಲದಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. 'ಏನೂ ಆಗೊಲ್ಲ ಸಾರ್, ನಾವು ಬದುಕಿಲ್ವಾ' ಎಂಬ ಆತ್ಮವಿಶ್ವಾಸ.
ವಿಷದ ಡಬ್ಬಗಳನ್ನು, ಪೊಟ್ಟಣಗಳನ್ನು ಕಸ ತುಂಬಿಸಿದಂತೆ ತುಂಬಿಸಿಟ್ಟು 'ಗುಜರಿಯವರಿಗೆ ಮಾರ್ತೇವೆ' ಅನ್ನುವಾಗಲೇ ಅವರನ್ನಾವರಿಸಿದ 'ವಿಷದ ಗಾಢತೆ'ಯ ಶೂನ್ಯತೆ ತಿಳಿದುಬಿಡುತ್ತದೆ. 'ಫೋನ್ನಲ್ಲಿ ಆರ್ಡರ್ ಮಾಡಿದರೆ ಸಾಕು, ಒಂದು ಗಂಟೆಯೊಳಗೆ ಅಂಗಡಿಯವರು ಹೊಲಕ್ಕೆ ಸಪ್ಲೈ ಕೊಡ್ತಾರೆ. ಹಣ ಮತ್ತೆ ಕೊಟ್ಟರಾಯಿತು' ಎನ್ನುವಾಗ ಈ ತರುಣನ ಮುಖ ಅರಳುತ್ತದೆ. ಯಾಕೆಂದರೆ ವಿಷ ಸಪ್ಲೈ ಮಾಡುವ ನಮ್ಮ ವ್ಯವಸ್ಥೆ ಅಷ್ಟು ಸಾಚಾ!
ನಿಮ್ಮ ಅಡುಗೆ ಮನೆಯಲ್ಲಿ ಅಕ್ಕಿ ಮುಗಿದಿದೆ. ದವಸ ಧಾನ್ಯ ಖಾಲಿಯಾಗಿದೆ. ಅಂಗಡಿಯವರಿಗೆ ಫೋನ್ ಮಾಡಿ. ಅವರಲ್ಲಿ ಮನೆ ಬಾಗಿಲಿಗೆ ಅಕ್ಕಿ ಮೂಟೆಯನ್ನು, ಧಾನ್ಯಗಳನ್ನು ತಲುಪಿಸುವ ವ್ಯವಸ್ಥೆ ಇದೆಯೇ? ಇಲ್ಲ, ಇಲ್ಲವೇ ಇಲ್ಲ. ಇದ್ದಿದ್ದರೆ.. ನಾವೇ ಭಾಗ್ಯಶಾಲಿಗಳು.
'ಹತ್ತು ವರುಷದ ಹಿಂದೆ ಈ ಜಾಗದಲ್ಲಿ ಮನೆ ಕಟ್ಟಿಕೊಳ್ಳುವ ಹೊತ್ತಿಗೆ ಮನೆತುಂಬಾ ಗುಬ್ಬಚ್ಚಿಗಳಿದ್ದುವು. ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟುತ್ತಿದ್ದುವು. ಈಗವು ನೋಡೋಕೆ ಸಿಕ್ತಾ ಇಲ್ಲ, ಗುಬ್ಬಚ್ಚಿ ಬಿಡಿ, ಕಾಗೆನೂ ಇಲ್ಲ' ಎಂದು ಶಿವಮಣಿಯ ಅಮ್ಮ ಜ್ಞಾಪಿಸಿಕೊಂಡರು. ಹೌದು. ಗುಬ್ಬಚ್ಚಿಗಳು ಕಾಣೆಯಾಗಿವೆ, ಜೇಡಗಳು ಅಜ್ಞಾತವಾಗುತ್ತಿವೆ. ತಿಥಿಯ ದಿವಸ ಮನೆ ಮುಂದೆ ವಕ್ಕರಿಸುತ್ತಿದ್ದ ಕಾಗೆಗಳೂ ನಾಪತ್ತೆ! ಕಾರಣ, ಬೆಳೆಗಳಿಗೆ ಎರಚುವ ವಿಷಗಳು.
ರಾಸಾಯನಿಕ ಗೊಬ್ಬರ-ವಿಷಗಳ ಅರಿವನ್ನು ನೀಡದ ಆಡಳಿತ ವ್ಯವಸ್ಥೆ, ಗಾಢತೆಯನ್ನು ವಿವರಿಸದ ವಿಷದ ಅಂಗಡಿಗಳು. ಅಗತ್ಯಗಳ ಮಾಹಿತಿಗಳನ್ನು ನೀಡದ ಇಲಾಖೆ.. ಇವುಗಳ ಮಧ್ಯೆ ಹಿಪ್ಪೆಯಾಗುವುದು ಶಿವಮಣಿಯಂತಹ ಕೃಷಿಕರು. 'ಪ್ರತೀ ಸಲ ಸಿಂಪಡಿಸುವಾಗಲೂ ಡೋಸೇಜ್ ಹೆಚ್ಚು ಮಾಡಲೇ ಬೇಕು' ಎಂಬುದನ್ನು ಅವರಿಗೆ ಅನುಭವ ಕಲಿಸಿಕೊಟ್ಟಿರುತ್ತದೆ.
ಇವರ ಟೊಮೆಟೊ ತೋಟದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ಬಾಬಣ್ಣ ಅವರ ಟೊಮೆಟೊ ಕೃಷಿ. ಪೂರ್ತಿ ವಿಷ ರಹಿತ! ಐದಾರು ವರುಷದಿಂದ ಯಾವುದೇ ಔಷಧ/ವಿಷವನ್ನು ಸಿಂಪಡಿಸದೆ ಬಾಬು ಉತ್ತಮ ಗಾತ್ರದ, ರುಚಿಯ ಟೊಮೆಟೊವನ್ನು ಪಡೆಯುತ್ತಿದ್ದಾರೆ.
'ಹೌದು ಸಾರ್, ಅವರ ಕೃಷಿ ಚೆನ್ನಾಗಿದೆ. ಶ್ರಮಪಟ್ಟು ದುಡಿಯುತ್ತಾರೆ' ಬಾಬಣ್ಣ ಅವರನ್ನು ಶಿವಮಣಿ ಅಭಿನಂದಿಸುವಾಗ ನನ್ನೊಳಗೆ ದ್ವಂದ್ವ! ಅರೆ, ಅಂಗೈಯಲ್ಲೇ ಅಮೃತವಿದೆ, ಆದರೂ ವಿಷವನ್ನು ಸ್ವೀಕರಿಸುವ ಮನಸ್ಥಿತಿ. ಇವರ ಕೃಷಿಯನ್ನು ನೋಡಿಯೂ ನೋಡದಂತಿರುವ ಕಣ್ಣುಗಳು. ಗ್ರಹಿಸದ ಮನಸ್ಸುಗಳು. 'ಅವರಂತೆ ಕೃಷಿ ಮಾಡಲು ಧೈರ್ಯ ಬಂದಿಲ್ಲ ಸಾರ್' ಸತ್ಯವನ್ನು ಹೇಳುತ್ತಾರೆ.
ಟೊಮೆಟೊಗೆ ಬರುವ ಕೀಟ, ಹುಳಗಳನ್ನು ಬಾಬಣ್ಣ ವಿವಿಧ ಸೊಪ್ಪುಗಳಿಂದ ತಯಾರಿಸಿದ ಬಯೋಡೈಜಸ್ಟರ್ ದ್ರಾವಣ ಸಿಂಪಡಿಸುವ ಮೂಲಕ ನಿಯಂತ್ರಿಸುತ್ತಿದ್ದಾರೆ. ಭೂಮಿಗೆ ರಾಸಾಯನಿಕ ಗೊಬ್ಬರವನ್ನು ಸುರಿದಿಲ್ಲ. ಕುರಿಹಿಕ್ಕೆ, ಕೊಟ್ಟಿಗೆ ಗೊಬ್ಬರ ನೀಡಿದ್ದಾರೆ. ಇವರ ಟೊಮೆಟೋ ಮಾತ್ರವಲ್ಲ, ಬೆಂಡೆ, ಬಾಳೆ, ಅವರೆ, ರಾಗಿ.. ಮೊದಲಾದ ಕೃಷಿಗಳು ಕೃಷಿಕರಲ್ಲಿ ಆಶ್ಚರ್ಯ ಮೂಡಿಸಿದ್ದರೂ, ಯಾರೂ ಆ ದಾರಿಯಲ್ಲಿ ಸಾಗುವುದು ಬಿಡಿ, ನೋಡುವುದೂ ಇಲ್ಲ.
ಇವರು ತರಕಾರಿಗಳನ್ನು ಸೈಕಲ್ನಲ್ಲಿಟ್ಟು ಮನೆಮನೆಗೆ ಒಯ್ಯುತ್ತಾರೆ. ನೋಡಲು ತಾಜಾ ಇರುವುದರಿಂದ ಬಹುಬೇಗ ಬುಟ್ಟಿ ಖಾಲಿ. ಸೈಕಲ್ನಲ್ಲಿ 'ಇದು ಸಾವಯವ ತರಕಾರಿ' ಅಂತ ಬೋರ್ಡೋ ಹಾಕಬಹುದಲ್ವಾ ಅಂತ ಒಣ ಸಲಹೆ ನೀಡಿದೆ. 'ನಾನೇ ಓದ್ಬೇಕಷ್ಟೇ' ಎಂದು ನಕ್ಕರು.
'ಇಲ್ಲಿ ಸಾವಯವ ಅನ್ನುವ ಕಲ್ಪನೆಯೇ ದೂರ ಸಾರ್, ತರಕಾರಿಗಳು ನೋಡಲು ಚೆಂದವಾಗಿರಬೇಕು. ತಾಜಾ ಆಗಿರಬೇಕು. ಅವುಗಳು ವಿಷದಲ್ಲಿ ಮಿಂದವುಗಳೋ, ಅಲ್ಲವೋ ಎಂಬುದು ಜನರಿಗೆ ಬೇಕಾಗಿಲ್ಲ. ಅವುಗಳ ಪರಿಣಾಮದತ್ತ ಲಕ್ಷ್ಯವಿಲ್ಲ. ರೋಗ ಬಂದರೆ ಆಸ್ಪತ್ರೆ ಇದೆಯಲ್ವಾ' ಎನ್ನುತ್ತಾರೆ ಜತೆಗಿದ್ದ ಕೃಷಿ ಪತ್ರಕರ್ತ ಗಣಪತಿ ಭಟ್ ಹಾರೋಹಳ್ಳಿ.
ಕೃಷಿಕರಲ್ಲಿ ಅರಿವಿನ ಕೊರತೆಯಿದೆ, ನಿಜ. ಆದರೆ ಗ್ರಾಹಕರಲ್ಲೂ ಕೂಡಾ ವಿಷರಹಿತವಾದ ಆಹಾರವನ್ನು ಸ್ವೀಕರಿಸುವ ಪ್ರಜ್ಞೆ ಮೂಡಬೇಕಾದುದು ಕಾಲದ ಅನಿವಾರ್ಯತೆ. ವಿಷರಹಿತವಾಗಿ ಬೆಳೆದ ತರಕಾರಿಗೆ ಗ್ರಾಹಕ ಬೇಡಿಕೆ ಮುಂದಿಟ್ಟಾಗ ಕೃಷಿಕ ಬೆಳೆಯಲು ಅನಿವಾರ್ಯವಾಗಿ ಪ್ರಯತ್ನ ಮಾಡದೇ ಇದ್ದಾನೇ? ಅವನು ಯಶಸ್ವಿಯಾಗುತ್ತಾನೋ ಇಲ್ಲವೋ ಎಂಬುದು ಬೇರೆ ಮಾತು.
ಸುತ್ತೆಲ್ಲಾ ವಿಷ ಸಿಂಪಡಣೆಯ ಕೃಷಿಯಿದ್ದರೂ, ಅವರ ಮಧ್ಯೆ ವಿಷರಹಿತವಾಗಿ ಟೊಮೆಟೊದಂತಹ ಬೆಳೆಯನ್ನು ಮಾಡಬಹುದು ಎಂದು ತೋರಿಸಿದ ಬಾಬಣ್ಣ ಅವರ ದಾರಿ ಇತರರೂ ತುಳಿಯದೇ ಇದ್ದಾರೆ?
ಎಲ್ಲಿಯವರೆಗೆ ವಿಷ ರಹಿತ ಆಹಾರದ ಬೇಡಿಕೆಗೆ ಗ್ರಾಹಕ ಜಾಗೃತನಾಗಿರುವುದಿಲ್ಲವೋ ಅಲ್ಲಿಯ ತನಕ ವಿವಿಧ ಬಣ್ಣಗಳಲ್ಲಿ, ರೂಪಗಳಲ್ಲಿ ಧಾಂಗುಡಿಯಿಡುತ್ತಿರುವ ವಿಷ ತಯಾರಿಕ ಕಂಪೆನಿಗಳು ರೈತರ ಹೊಲದಲ್ಲಿ ಬಿಡಾರ ಮಾಡುತ್ತಿರುತ್ತವೆ! (ಇಲ್ಲಿ ಕೃಷಿಕರಿಬ್ಬರ ಹೆಸರು ಮಾತ್ರ ಬದಲಾಯಿಸಿದೆ)
ನನಗಂತೂ ಟೊಮೆಟೊ ಹೊಲದಲ್ಲಿಷ್ಟೂ ಹೊತ್ತು ಹೊಸ ಹೊಸ ಪಾಠಗಳ ಅನುಭವ. 'ಸಾರ್. ದೊಡ್ಡ ಸೈಜಿನದು ಕೊಯಿದು ಕೊಡ್ತೇನೆ. ಮನೆಗೆ ಒಯ್ಯಿರಿ ಸಾರ್. ಸಾಂಬಾರು ಮಾಡಿ' ಎಂದು ಶಿವಮಣಿ ಟೊಮೆಟೊ ಪ್ಯಾಕೆಟ್ ನೀಡಿದಾಗ ನಿಜಕ್ಕೂ ಕೈ ನಡುಗಿತು!