ಅಳಿಕೆ-ಮುಳಿಯದಲ್ಲಿ ಈಚೆಗೆ 'ಹಣ್ಣು ತನ್ನಿ, ತಿನ್ನೋಣ ಬನ್ನಿ' ಎಂಬ ಹಲಸಿನ ತಳಿ ಆಯ್ಕೆ ಪ್ರಕ್ರಿಯೆ ಸಮಾರಂಭ. ಹದಿನೈದಕ್ಕೂ ಮಿಕ್ಕಿ ಅಪರೂಪದ್ದಾದ ಕಾಡು ಹಣ್ಣುಗಳ ಪ್ರದರ್ಶನ. ನಾಣಿಲು ಹಣ್ಣಗಳನ್ನು ಅಂಗೈಯಲ್ಲಿರಿಸಿಕೊಂಡ ಮುಚ್ಚಿರಪದವಿನ ಇಸ್ಮಾಯಿಲ್, 'ನಾಣಿಲು ಹಣ್ಣು, ಹೂ ತಿಂದರೆ ಕಣ್ಣಿನ ದೃಷ್ಟಿಗೆ ಒಳ್ಳೆಯದು, ನೇರಳೆ ಹಣ್ಣನ್ನು ತಿಂದರೆ ಹೊಟ್ಟೆಗೆ ಒಳ್ಳೆಯದು ಎಂದು ಹಿರಿಯರು ಸೂಚಿಸುತ್ತಿದ್ದರು. ಅದರಂತೆ ಬೆಳೆದು ಬಂದಿದ್ದೇವೆ,' ಬಾಲ್ಯವನ್ನು ಜ್ಞಾಪಿಸಿಕೊಂಡರು.
ಕಾಡು ಹಣ್ಣುಗಳ ಹಿಂದೆ ರೋಚಕವಾದ ಬಾಲ್ಯವಿದೆ, ಕಾಲದ ಕಥನವಿದೆ. ಕಾಡುವ ನೆನಪಿದೆ. ಸವಿದ ಒಬ್ಬೊಬ್ಬರಲ್ಲಿ ಒಂದೊಂದು ಅನುಭವಗಳು. ಒಂದು ಕಾಲಘಟ್ಟದಲ್ಲಿ ಮಾವು, ಹಲಸು ಬಿಟ್ಟರೆ ಮಿಕ್ಕಂತೆ ನಾಲಗೆಯ ರುಚಿಗಳನ್ನು ಕಾಡು ಹಣ್ಣುಗಳು ನೀಗಿಸುತ್ತಿದ್ದುವು. ವಿಷರಹಿತವಾದ, ನೈಸರ್ಗಿಕವಾದ ಹಣ್ಣುಗಳು ಆರೋಗ್ಯಕ್ಕೂ ದೊಡ್ಡ ಕಾಣ್ಕೆ ನೀಡಿತ್ತು.
ಇಸ್ಮಾಯಿಲ್ ಅನುಭವ ಇದೆಯಲ್ಲಾ, ಹಣ್ಣುಗಳನ್ನು ತಿಂದು ಬಾಲ್ಯ ಕಳೆದಿದ್ದ ಬಹುತೇಕ ಎಲ್ಲರದ್ದೂ ಇದೇ ಅನುಭವ. ಇದಕ್ಕೆಲ್ಲಾ ಲಿಖಿತವಾದ ವೈಜ್ಞಾನಿಕ ದಾಖಲೆಗಳಿಲ್ಲ. ಜೀವಿತವೇ ದಾಖಲೆ. ಶಾಲಾರಂಭದಿಂದ ಶೈಕ್ಷಣಿಕ ಅವಧಿ ಮುಗಿಯುವ ತನಕ ಕಾಡು ಹಣ್ಣುಗಳ ಅರಸುವಿಕೆ ಮತ್ತು ಸೇವನೆ ಪಠ್ಯಕ್ಕಂಟಿಕೊಂಡೇ ಸಾಗುವ ಬದುಕು. ಜೂನ್ ತಿಂಗಳಲ್ಲಿ ಕುಂಟಾಲ ಹಣ್ಣಿನ (ಕುಂಟು ನೇರಳೆ) ಋತು. ಮುಂದಿನ ಮೇಯಲ್ಲಿ 'ನಾಯಿ ನೇರಳೆ' ಹಣ್ಣು. ಇವುಗಳ ಮಧ್ಯದ ಋತುಗಳಲ್ಲಿ ವಿವಿಧ ವೈವಿಧ್ಯ ಹಣ್ಣುಗಳು.
ಮುಳ್ಳು ಅಂಕೋಲೆ ಹಣ್ಣು, ಮುಳ್ಳಿನೆಡೆಯಿಂದ ಇಣುಕುವ 'ಬೆಲ್ಲಮುಳ್ಳು', ಹುಳಿಮಜ್ಜಿಗೆ ಕಾಯಿ, ಕೇಪುಳ ಹಣ್ಣು, ಕಡು ಕೇಸರಿ ವರ್ಣದ 'ಮಣ್ಣಮಡಿಕೆ ಹಣ್ಣು', ಜೇಡರ ಬಲೆಯ ಒಳಗಿರುವಂತೆ ಕಾಣುವ 'ಜೇಡರ ಹಣ್ಣು', ನೆಲ್ಲಿಕಾಯಿ, ಹುಣಸೆ, ಅಂಬಟೆ, ನಾಣಿಲು, ಚೂರಿ ಮುಳ್ಳಿನ ಹಣ್ಣು, ಅಬ್ಳುಕ, ಪೇರಳೆ, ಹೆಬ್ಬಲಸು, ಪುನರ್ಪುಳಿ, ರಂಜೆ, ಕೊಟ್ಟೆಮುಳ್ಳು, ಶಾಂತಿಕಾಯಿ..ಗಳ ಸಿಹಿ-ಹುಳಿ ರುಚಿಗಳನ್ನು ಸವಿದ ನಾಲಗೆಗಳ ಭಾಗ್ಯ. ಮಲೆನಾಡಿಗರಿಗೆ ಮೊಗೆದು ತಿನ್ನುವಷ್ಟು ಹಣ್ಣುಗಳ ಸಂಪತ್ತಿದೆ.
ಹಣ್ಣುಗಳ ಬೇಟೆ
ಹುಣಸೆ ಹಣ್ಣಿನ ಬೀಜವನ್ನು ಹುರಿದು (ತುಳುವಿನಲ್ಲಿ 'ಪುಳಿಂಕೊಟೆ') ಕಂಪಾಸ್ಬಾಕ್ಸ್ನಲ್ಲಿ ಕಾಪಿಟ್ಟುಕೊಳ್ಳದ ವಿದ್ಯಾರ್ಥಿಗಳೇ ಇಲ್ಲ. ಕ್ಲಾಸ್ ಆಗುತ್ತಿರುವಾಗಲೇ ಬಾಯಿಯೊಳಗೆ ಮಗುಮ್ಮನೆ ಕುಳಿತ ಹುಣಸೆ ಬೀಜ ನಿಶ್ಶಬ್ದದಲ್ಲಿ 'ಕುಟುಂ' ಶಬ್ದ ಮಾಡುತ್ತದೆ. ಅಧ್ಯಾಪಕರಿಂದ ತಲೆಗೆ 'ಕುಟ್ಟಿ' ಹೊಡೆಸಿಕೊಂಡು, ನಗೆಪಾಟಲಿಗೆ ಈಡಾದ ಶಾಲಾ ದಿನಗಳು ಮೆದುಳಿನ ಮೆಮೊರಿಯಲ್ಲಿ ಸೇವ್ ಆಗಿರುತ್ತದೆ. ಪುಸ್ತಕ, ಸ್ಲೇಟಿನ ಮಧ್ಯೆ ಅಪ್ಪಚ್ಚಿಯಾದ ಹಣ್ಣುಗಳ ರಸಗಳಿಂದಾಗಿ ಚೀಲದೊಂದಿಗೆ ಪುಸ್ತಕವೂ ಒದ್ದೆ. ಸಹಪಾಠಿಗಳಿಂದ, ಹೆತ್ತವರಿಂದ ನಿತ್ಯ ಬಯ್ಗಳು.
ರಸ್ತೆಗಳು ಇಲ್ಲ. ಶಾಲೆ ಒಂದೆಡೆ, ಮನೆ ಇನ್ನೊಂದೆಡೆ. ಮೈಲುಗಟ್ಟಲೆ ಕಾಡು ದಾರಿಯ ಕಾಲ್ನಡಿಗೆ. ಹತ್ತು ಗಂಟೆಗೆ ಶಾಲಾರಂಭ. ಎಂಟು ಗಂಟೆಗೆ ಬುತ್ತಿ ಕಟ್ಟಿಸಿಕೊಂಡು ಹೆಗಲಿಗೆ ಚೀಲ ಸಿಕ್ಕಿಸಿ ಹೊರಟರೆ ಸಾಕು, ದಾರಿಯುದ್ದಕ್ಕೂ ಕಾಡು ಹಣ್ಣುಗಳ ಬೇಟೆ. ಕುಂಟಾಲ ಮತ್ತು ನೇರಳೆ ಹೊರತು ಪಡಿಸಿ, ಮಿಕ್ಕೆಲ್ಲಾ ಹಣ್ಣುಗಳನ್ನು ತಿಂದ ಸುಳಿವು ಕೂಡಾ ಅಧ್ಯಾಪಕರಿಗೆ ಸಿಗದು.
ಸಂಜೆ ನಾಲ್ಕು ಗಂಟೆಗೆ ಶಾಲೆ ಬಿಟ್ಟರೆ, ಮನೆ ತಲಪುವಾಗ ಆರು ದಾಟಿರುತ್ತದೆ. ಅಪ್ಪಾಮ್ಮನಲ್ಲಿ ಸುಳ್ಳು ಹೇಳಿದರೂ ಅಂಗಿಯಲ್ಲಿರುವ 'ಬೇಟೆಯ ಕುರುಹು' ನಿಜಬಣ್ಣ ಬಯಲು ಮಾಡುತ್ತದೆ. ಸಾಹಸಕ್ಕೆ ಸಾಕ್ಷಿಯಾಗುತ್ತದೆ. ಸೈಕಲ್ ಕಲಿಯಲು ಇನ್ನೊಬ್ಬರ ಅವಲಂಬನೆ ಬೇಕು. ಆದರೆ ಮರಹತ್ತಲು? ಬೇಡ, ಹಣ್ಣಿನ ನೆವದಿಂದ ಮರಗಳೇ ಮರ ಹತ್ತಿಸುವ ಟ್ರೈನಿಂಗ್ ಕೊಡುತ್ತವೆ.
ಶರೀರಕ್ಕೆ ಬೇಕಾದ ವಿಟಮಿನ್ಗಳು ಹಣ್ಣಿನ ಸಹವಾಸದಲ್ಲಿ ಲಭ್ಯ. 'ಎ', 'ಬಿ'.. ಮಿಟಮಿನ್ ಅಂತ ಹೆಸರಿಸಲು ಬಾರದಿರಬಹುದು. ಆದರೆ ಸಣ್ಣಪುಟ್ಟ ದೇಹದ ಆರೋಗ್ಯದ ವ್ಯತ್ಯಾಸಗಳಿಗೆ ಇಂತಹುದೇ ಹಣ್ಣು ತಿನ್ನಬೇಕು ಎಂಬುದು ಹಿರಿಯರಿಗೆ ಗೊತ್ತಿತ್ತು. ಉದಾ: ಬಾಯಿಹುಣ್ಣು ಬಂದಾಗ 'ಕೊಟ್ಟೆಮುಳ್ಳು ಹಣ್ಣು' ತಿನ್ನಲೇ ಬೇಕು ಅಂತ ಅಮ್ಮ ಹೇಳುತ್ತಿದ್ದುರು.
ಬೆಳಿಗ್ಗೆ ಶಾಲೆ ತಲುಪುವಾಗ ಹೊಟ್ಟೆ ತುಂಬಿರುತ್ತದೆ. ಮಧ್ಯಾಹ್ನದ ಬುತ್ತಿ ಮರಳಿ ಮನೆಗೆ ಬರುತ್ತದೆ. ಸಂಜೆ ಪುನಃ ಹಣ್ಣುಗಳ ಬೇಟೆ, ಸೇವನೆ. ಮಕ್ಕಳೊಳಗೆ ಕೊಡುಕೊಳ್ಳುವ ವ್ಯವಹಾರವನ್ನು ಹಣ್ಣುಗಳು ಕಲಿಸುತ್ತವೆ! ಒಂದು ತುಂಡು ಬಳಪದ ಕಡ್ಡಿ ನೀಡಿದರೆ, ಪ್ರತಿಫಲವಾಗಿ ಐದು ಹುರಿದ ಹುಣಸೆ ಬೀಜ ಅಥವಾ ಅಬ್ಳುಕದ ಹಣ್ಣು.. ಹೀಗೆ.
ಕಾಣದಂತೆ ಮಾಯವಾಯಿತು
ಹಳ್ಳಿಗೆ ರಸ್ತೆಗಳು ಬಂದಿವೆ. ಕಾಡು ದಾರಿ ಮಾಯವಾಗಿದೆ. ಸೇಬು, ದ್ರಾಕ್ಷಿ, ದಾಳಿಂಬೆಗಳು.. ಹಳ್ಳಿಯ ಚಹದಂಗಡಿಯಲ್ಲೂ ಮಾರಾಟಕ್ಕೆ ಸಿಗುತ್ತದೆ. ರಸ್ತೆ ನಿರ್ಮಾಣಕ್ಕೆ ಕಾಡುಗಳು ನಾಶವಾಗಿವೆ. ಹಣ್ಣುಗಳ ಸಹವಾಸದಲ್ಲಿ ಬದುಕಿದ ವಿದ್ಯಾರ್ಥಿಗಳು ಪ್ರೌಢರಾಗಿದ್ದು ಕೆಲವರು ನಗರ ಸೇರಿದ್ದಾರೆ. ಅವರಿಗೆ ಮದುವೆಯಾಗಿದೆ. ಅವರ ಮಕ್ಕಳನ್ನು ಅಳಿದುಳಿದ ಕಾಡು ಹಣ್ಣಿನ ಮರಗಳು ಕೈಬೀಸಿ ಕರೆಯುತ್ತಿವೆ, 'ಉತ್ಕೃಷ್ಟವಾದ ಹಣ್ಣುಗಳಿವೆ, ತಿನ್ನಿ' ಅಂತ ಕೂಗುತ್ತಿವೆ. ಹಣ ಕೊಟ್ಟರೆ ಸಾಕು, ಕಿಲೋಗಟ್ಟಲೆ ಕೊಳ್ಳಬಹುದಾದ ರಂಗುರಂಗಿನ ಹಣ್ಣುಗಳ ಮಧ್ಯೆ ಹಣ್ಣಿನ ಕೂಗು ಕೇಳಿಸುವುದಿಲ್ಲ.
ಈಗಂತೂ ರಬ್ಬರ್ ಕೃಷಿಯ ಧಾವಂತ. ಗುಡ್ಡಗಳು ನುಣುಪಾಗಿವೆ. ಇತರ ಮರಗಳೊಂದಿಗೆ ಹಣ್ಣು ನೀಡುವ ಮರಗಳೂ ನೆಲಕ್ಕೊರಗಿವೆ. ಇವುಗಳನ್ನೇ ತಿಂದು ಬದುಕುವ ಕಾಡು ಪ್ರಾಣಿಗಳು ನಾಡಿಗೆ ಬಂದಿವೆ. 'ಛೇ.. ಮಂಗಗಳು, ಹಂದಿಗಳು ಎಲ್ಲಾ ಹಾಳು ಮಾಡುತ್ತವಲ್ಲಾ..' ಅಂತ ಮರುಗುವ ನಮಗೆ ಕಾಡು ಕಡಿಯಲು ಅಧಿಕಾರವಿದೆ. ಒಂದು ಗಿಡವನ್ನಾದರೂ ನೆಟ್ಟು ಪೋಶಿಸಲು ಮನಸ್ಸು ಇದೆಯಾ?
ಒಂದು ಕಾಲಘಟ್ಟದಲ್ಲಿ ಅನಿವಾರ್ಯವೆಂದಿದ್ದ 'ಕಾಡು ಹಣ್ಣು'ಗಳ ಹಿಂದೆ ಬದುಕು ಕಟ್ಟುವ ಕಾಯಕವಿತ್ತು. ಈಗ ಅನಿವಾರ್ಯವಿಲ್ಲ. ಕಾರಣ, ಆಧುನಿಕವಾದ ಜೀವನ ಶೈಲಿ. ಆರೋಗ್ಯಕ್ಕೆ ಹಾಳು ಅಂತ ಗೊತ್ತಿದ್ದೂ ತಿನ್ನಬೇಕಾದ ಸ್ಥಿತಿ. ಜತೆಗೆ ಅಂತಸ್ತು ಕಾಪಾಡುವ ಭರ. ಪ್ರದರ್ಶನಗಳಲ್ಲಿ ಹಳ್ಳಿ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟರೆ ಅದರತ್ತ ತಿರಸ್ಕಾರ ಮನೋಭಾವದ ಮುಖಗಳ ಹತ್ತಿರದ ಪರಿಚಯವಿದೆ.
ಹಿಂದೆ ರಸ್ತೆಗಳಿಲ್ಲದ್ದರಿಂದ ಕಾಲ್ನಡಿಗೆ. ಈಗ ಹಾಗಲ್ಲ, ಒಂಭತ್ತು ಗಂಟೆಗೆ ಸರಿಯಾಗಿ ರಿಕ್ಷಾದ ಮಾಮ ಮನೆ ಮುಂದೆ ಹಾರ್ನ್ ಮಾಡುತ್ತಾನೆ. ಶೂ, ಟೈ, ಇಸ್ತ್ರಿ ಹಾಕಿದ ಅಂಗಿ, ಚೀಲದೊಂದಿಗೆ ರಿಕ್ಷಾದೊಳಗೆ ಬಿದ್ದರೆ ಆಯಿತು, ರೆಪ್ಪೆ ಮುಚ್ಚಿ ಬಿಡುವುದರೊಳಗೆ ಶಾಲಾ ಆವರಣದೊಳಗೆ ಹೆಜ್ಜೆಯಿಡಬಹುದು. ಇಂತಹ ವಿದ್ಯಾರ್ಥಿಗಳಿಗೆ ಸೇಬು, ದ್ರಾಕ್ಷಿಗಳ ಹೊರತಾದ ಬೇರೊಂದು ಪ್ರಪಂಚದ ಪರಿಚಯವಿರುವುದಿಲ್ಲ. ಮಗನಿಗೆ ಹೇಳಲು ಹಳ್ಳಿ ಮೂಲದ ಅಪ್ಪನಿಗೆ ಪುರುಸೊತ್ತಿಲ್ಲ. ಒಂದು ವೇಳೆ ಅಲ್ಲೋ ಇಲ್ಲೋ ಹಣ್ಣುಗಳು ಕಾಣಸಿಕ್ಕರೆ 'ಅದು ತಿನ್ನಲು ಆಗುತ್ತದೆ' ಎಂದು ಹೇಳುವವರಿಲ್ಲ.
ವಿವಿಧ ರಾಸಾಯನಿಕಗಳಿಂದ ಮಿಂದೆದ್ದು ನಗುನಗುತ್ತಾ ಕುಣಿಯುತ್ತಿರುವ ಹಣ್ಣುಗಳ 'ಗುಣಮಟ್ಟ'ವನ್ನೇ ಶ್ರೇಷ್ಠ ಎನ್ನುವ ಕಾಲಮಾನದಲ್ಲಿ ಬದುಕುತ್ತಿದ್ದೇವೆ. ಮಕ್ಕಳಿಗೆ ಕಾಡು ಹಣ್ಣುಗಳ ಕತೆಗಳನ್ನು ಅಪ್ಪ ಹೇಳಿದರೆ ಆಕಳಿಕೆ ಬರುತ್ತದೆ. ಕೈಯಲ್ಲಿರುವ ರಿಮೋಟ್ ಸದ್ದು ಮಾಡುತ್ತದೆ, ಮೊಬೈಲ್ನ ರಿಂಗ್ಟೋನ್ಗಳು ರಿಂಗಿಸುತ್ತವೆ! ಹುಡುಕಿ ತಂದ ಹಣ್ಣುಗಳನ್ನು ಮಕ್ಕಳ ಕೈಗಿತ್ತರೆ 'ಇಸ್ಸೀ' ಅನ್ನುತ್ತಾ ಎಸೆಯುವ ಮನಸ್ಸುಗಳನ್ನು ಬದಲಾದ ಜೀವನ ಶೈಲಿಯು ನುಂಗಿ ನೊಣೆದಿದೆ.
ಬೇಸಿಗೆ ರಜೆ ಬಂದಾಗ ನಗರದಲ್ಲಿ 'ಬದುಕು ಬದಲಾಯಿಸುವ' ತರಬೇತಿಗಳ ಜಾಹೀರಾತು ಫ್ಲೆಕ್ಸಿಗಳು ದಿಢೀರ್ ಕಾಣಸಿಗುತ್ತವೆ. ಶಿಬಿರಗಳು ಮೈಲಿಗೊಂದು ರೂಪುಗೊಳ್ಳುತ್ತವೆ. ಎಂದಾದರೂ ನಗರದ ಮಕ್ಕಳಿಗೆ ಹಳ್ಳಿಗಳನ್ನು ತೋರಿಸುವ ಕೆಲಸಗಳನ್ನು ಶಿಬಿರಗಳು ಮಾಡಿದ್ದಿವೆಯೇ? ಶಿರಸಿಯ ಪ್ರಕೃತಿ ಸಂಸ್ಥೆಯು ಎರಡು ವರುಷದ ಹಿಂದೆ ನಗರದ ಮಕ್ಕಳನ್ನು ಹಳ್ಳಿಗೆ ಕರೆದೊಯ್ದು; ಹಳ್ಳಿಯ ಬದುಕು, ಹಣ್ಣುಗಳು, ಸಸ್ಯಗಳ ಪರಿಚಯ, ಜೇನುಕುಟುಂಬ, ಈಜುಗಾರಿಕೆ, ಚಾರಣ.. ಹೀಗೆ ನೈಸರ್ಗಿಕ ಬದುಕನ್ನು ಕಟ್ಟಿಕೊಟ್ಟು ಯಶಸ್ಸಾಗಿದೆ. ಮಿಕ್ಕೆಲ್ಲಾ ಶಿಬಿರಗಳು ಯಾಕೆ 'ಮಸಿ ಚಿತ್ರ, ಮುಖವಾಡ'ಗಳ ಸುತ್ತ ಸುತ್ತುತ್ತಿರುತ್ತವೆ?
ಕಾಡುಗಳೇ ನಾಶವಾಗುತ್ತಿರುವಾಗ 'ಕಾಡುಹಣ್ಣು'ಗಳ ಸಂಭ್ರಮವೆಲ್ಲಿ? ಇದನ್ನು ಅನುಭವಿಸುವ ಮಕ್ಕಳೇ ಇಲ್ಲದಿರುವಾಗ ಮರಗಳಿಗೂ ಬದುಕು ಸಾಕಾಗಿದೆ! ಹಾಗಾಗಿಯೇ ನೋಡಿ, 'ನಾಡಿನ ಅಭಿವೃದ್ಧಿ'ಗಾಗಿ ತಮ್ಮ ಕೊರಳನ್ನು ಕೊಡಲಿಗೆ ಅರ್ಪಿಸುತ್ತಿವೆ! ಕಾಡುಗಳು ದೂರ ಸಾಗುತ್ತಿವೆ. ಅವು ದೂರ ಹೋದಷ್ಟೂ ಭವಿಷ್ಯದ ಸಂಕಷ್ಟದ ಸರಮಾಲೆಗೆ ಸಾಕ್ಷಿಗಳಾಗುತ್ತಿದ್ದೇವೆ.