ಆಹಾರ ಭದ್ರತೆಯತ್ತ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ನೀತಿ ನಿರೂಪಕರು ಪರಿಹಾರದತ್ತ ಲೇಖನಿ ಹಿಡಿದಿದ್ದಾರೆ! ಆಹಾರ ಆಭದ್ರತೆಯನ್ನು ನೋಡುತ್ತಾ ಭದ್ರತೆಯ ದಾರಿ ಹೊತ್ತ ಕಡತಗಳು ಎತ್ತರವಾಗುತ್ತಿವೆ. ನಾಲ್ಕು ಗೋಡೆಗಳ ಮಧ್ಯೆ ನಾಲ್ಕು ಮೂಲೆಗಳಿಗೆ ಕಡತಗಳು ಓಡಾಡುತ್ತಾ ಇವೆ. ಆದರೆ ಆಹಾರ ಭದ್ರತೆಯೆಂಬ ಆಡಳಿತದ ಮಂತ್ರ ಗ್ರಾಮೀಣ ಭಾರತವನ್ನು ತಲುಪುವುದೇ ಇಲ್ಲ.
ಸರಿ, ಭದ್ರತೆಯೇನೋ ಬೇಕು. ಇದರಲ್ಲಿ ಸುರಕ್ಷತೆ ಎಷ್ಟಿದೆ? ಆಹಾರ ಸರಕುಗಳು ಸ್ಯಾಚೆಟಿನೊಳಗೆ, ಟಿನ್ನಿನೊಳಗೆ ಅವಿತ ಈ ಕಾಲಮಾನದಲ್ಲಿ ಆಹಾರ ಸುರಕ್ಷತೆಯ ಮೂಲಕ, ಬದುಕಿನ ಸುರಕ್ಷತೆಯತ್ತಲೂ ನೋಟ ಬೀರುವುದು ಅಗತ್ಯವಾಗುತ್ತದೆ. ಆಹಾರದೊಂದಿಗೆ ವಿಷವೂ ರಕ್ತಗತವಾಗುತ್ತದೆ. ವಿಷ ಸಿಂಪಡಣೆಯಿಲ್ಲದೆ ಆಹಾರ ಉತ್ಪಾದನೆ ಅಸಾಧ್ಯ ಎಂಬ ನಿಲುವಿಗೆ ವ್ಯವಸ್ಥೆಗಳು ಅಂಟಿಕೊಂಡಿವೆ.
ನಮ್ಮ ಮನಸ್ಸುಗಳೂ ಕೂಡಾ ಅವಕ್ಕೆ ಟ್ಯೂನ್ ಆಗುತ್ತಲೇ ಇವೆ. ಅರಿವಿದ್ದೂ 'ಅನಿವಾರ್ಯ' ಎನ್ನುತ್ತಾ ವಿಷವನ್ನು ಆಪೋಷನ ಮಾಡುತ್ತಾ ಇದ್ದೇವೆ. ಇದು ಒಂದೆರಡು ದಿವಸಗಳ ಪ್ರಕ್ರಿಯೆಯಲ್ಲ, ಕಾಲು ಶತಮಾನದ ನಿತ್ಯಾವಸ್ಥೆ. ಹಾಗಾಗಿಯೇ ನೋಡಿ, ದೇಹದ ಟೂಲುಗಳೆಲ್ಲಾ ಸಡಿಲ. ನಲವತ್ತು ವರ್ಷವಾಗುವಾಗ ಎಪ್ಪತ್ತರ ಬದುಕಿನ ಅನುಭವ.
ಈ ಚಕ್ರವ್ಯೂಹವನ್ನು ಬೇಧಿಸುವ, ಬದುಕಿನಲ್ಲಿ ಸುಭಗತೆಯನ್ನು ಕಾಣುವ, ಅನ್ನದ ಬಟ್ಟಲನ್ನು ವಿಷಮುಕ್ತಗೊಳಿಸುವ ಕೆಲಸಗಳು ಸದ್ದಿಲ್ಲದೆ ನಡೆಯುತ್ತಿದೆ. ಬಂಟ್ವಾಳ ತಾಲೂಕಿನ ವಿಟ್ಲ ಸನಿಹದ ಉಬರು 'ಹಲಸು ಸ್ನೇಹಿ ಕೂಟ'ವು ಕಳೆದ ಎರಡು ವರುಷದಿಂದ ಸದ್ದಿಲ್ಲದ ತನ್ನ ಕಾರ್ಯಹೂರಣಕ್ಕೆ ಸದ್ದು ಮಾಡದ, ಸಮಾನಾಸಕ್ತರನ್ನು ರೂಪಿಸಿದೆ. ಹಲಸು, ಮಾವು, ತರಕಾರಿಗಳ ಹಬ್ಬವನ್ನು ಆಚರಿಸಿದೆ. ಅದರ ಮುಂದುವರಿಕೆಯಾಗಿ ಕ್ರಿಸ್ಮಸ್ ಶುಭದಿನದಿಂದು 'ಗಡ್ಡೆ ತರಕಾರಿ'ಗಳ ಮಾತಿಗೆ ಹಬ್ಬದ ರೂಪ ಕೊಟ್ಟಿದೆ. ಮಂಚಿ ಸನಿಹದ ಕಜೆ ಮನೆಯವರ ಆತಿಥ್ಯ.
'ಒಂದಷ್ಟು ಸಸ್ಯಗಳು ಜೀವನ ಪರ್ಯಂತ ಕೂಡಿಟ್ಟ ಪೋಷಕ ಶಕ್ತಿಯನ್ನೆಲ್ಲಾ ಭೂಮಿಯೊಳಗೊಂದು ತಿಜೋರಿ ತೆರೆದು, ಒತ್ತಿ ಸಂಗ್ರಹಿಸಿಟ್ಟು, ಸಮಯ ಬಂದಾಗ ಚಿಗುರಿ, ಮೇಲೆದ್ದು ಬರುವ ಅದಮ್ಯ ಜೀವಶಕ್ತಿಯನ್ನು ಅದರ ಒಳಗೆ ಅಲ್ಲಲ್ಲಿ ಊರಿ, ಜೀವತ್ಯಾಗ ಮಾಡುತ್ತವೆ. ಆ ತಿಜೋರಿಗಳೇ ಗಡ್ಡೆಗಳು. ಅವು ಜೀವಶಕ್ತಿಯ ಗುಡ್ಡೆಗಳು. ಕಾಯಿಲೆಗೆ ಔಷಧಿ, ಹಸಿವಿಗೆ ತರಕಾರಿ - ಅವು ನಮಗೆ ಉಪಕಾರಿ. ಅವುಗಳ ಉಳಿಕೆ, ಬಳಕೆಗಳ ಕಲಿವಿಕೆಗಾಗಿ ಗಡ್ಡೆ ಹಬ್ಬ', ಹಬ್ಬದ ಒಟ್ಟೂ ಆಶಯವನ್ನು ಕಟ್ಟಿಕೊಟ್ಟವರು, ಆತಿಥೇಯ ವಸಂತ ಕಜೆ. ಆಹಾರ ಸುರಕ್ಷತೆಯತ್ತ ಚಿಕ್ಕ ಹೆಜ್ಜೆಯಿದು.
ಗಡ್ಡೆಗಳು ಬದುಕಿನೊಂದಿಗೆ ಹೊಸೆದು, ಅಡುಗೆ ಮನೆಯಲ್ಲಿ ಖಾದ್ಯಗಳಾಗಿ ಬಟ್ಟಲು ಸೇರುತ್ತಿದ್ದ ದಿನಗಳನ್ನು ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ. ಹಿರಿಯರ ಅವಗಣನೆ ಆದಂದಿನಿಂದ ಗಡ್ಡೆಗಳೂ ಅಜ್ಞಾತ! ಕೇವಲ ಆಲೂಗಡ್ಡೆ, ಬಟಾಟೆ, ಬೀಟ್ರೂಟ್, ಮೂಲಂಗಿ, ಗೆಣಸು.. ಇವಕ್ಕೆ ಮಾತ್ರ ಗಡ್ಡೆಯ ಪಟ್ಟ. ಉಳಿದ ಅವೆಷ್ಟೋ ಗಡ್ಡೆಗಳು ಮಣ್ಣಲ್ಲೇ ಅವಿತಿರುತ್ತದೆ. ಟೊಮೆಟೋ, ಕ್ಯಾಬೇಜ್ ಭರಾಟೆಗೆ ಗಡ್ಡೆಗಳು ಭೂಒಡಲಿನಾಳಕ್ಕೆ ಇಳಿಯುತ್ತವೆ! ಅವುಗಳನ್ನು ಮತ್ತೊಮ್ಮೆ ಅಗೆಯುವ ಕೆಲಸವಾದಾಗ ಮಾತ್ರ ಆಹಾರ ಸುರಕ್ಷತೆ.
ಇಡ್ಲಿ ಮಾಡಲು ಒಂದು ಕಿಲೋ ಅಕ್ಕಿಗೆ ಕನಿಷ್ಠ ಮುನ್ನೂರು ಗ್ರಾಮ್ ಉದ್ದಿನಬೇಳೆ ಬೇಕು. ಹುತ್ತರಿ ಗೆಣಸನ್ನು ಅಕ್ಕಿಯೊಂದಿಗೆ ಸೇರಿಸಿ ಇಡ್ಲಿ ಮಾಡಿ. ಉದ್ದಿನಬೇಳೆಯೂ ನಾಚುವಂತಹ ಒದಗು! ಮೈಸೂರು ಇಂದ್ರಪ್ರಸ್ಥದ ಎ.ಪಿ ಚಂದ್ರಶೇಖರ್ ಹೇಳುತ್ತಾರೆ, 'ಮೂರನೇ ಒಂದು ಅಕ್ಕಿ, ಮೂರನೇ ಎರಡು ಹುತ್ತರಿ ಗೆಣಸು ಹಾಕಿದರೆ ಅಕ್ಕಿಯಲ್ಲಿ ಉಳಿತಾಯ. ನಮ್ಮ ಮನೋಬಲವನ್ನು ಹೆಚ್ಚಿಸುತ್ತಾ ಹೋದಂತೆ ಅಕ್ಕಿಯ ಪ್ರಮಾಣ ಕಡಿಮೆ ಮಾಡಿ, ಗಡ್ಡೆಯ ಪ್ರಮಾಣ ಹೆಚ್ಚು ಮಾಡಿ. ಇದುವೇ ಆಹಾರ ಸುರಕ್ಷತೆ'.
ಅತ್ಯಂತ ಕೃತಕವಾಗಿ, ದುಬಾರಿಯಾಗಿ, ಎಕ್ರೆಗಟ್ಟಲೆ ಆಲೂಗಡ್ಡೆ ಬೆಳೆಸುತ್ತೇವೆ. ವಿಷದಿಂದ ಮಿಂದೆಂದು ಶಿಮ್ಲಾದಂತಹ ದೂರದಿಂದ ಬಂದ ಬೀಜಗಳು ದೇಶಾದ್ಯಂತ ನೆಲದಲ್ಲಿ ನೆಲೆಯೂರುತ್ತವೆ. ವಿಶೇಷವಾದ ಆರೈಕೆಯಿಂದ ಬೆಳೆವ ಅದಕ್ಕೆ ವಿಶೇಷ ಮಾನ್ಯತೆ ನೀಡುತ್ತೇವೆ. ಇದಕ್ಕೆ ಸರಿಸಾಟಿಯಾಗಿ ನಮ್ಮ ತೋಟದಲ್ಲಿ ಬೆಳೆಯುವ ಕೆಸುವಿನ ಗೆಡ್ಡೆಯನ್ನು ನಾವೆಷ್ಟು ಬಳಸುತ್ತೇವೆ? ಕೃಷಿಕರಾದ ನಾವೆ ಇದನ್ನು ಬಳಕೆ ಮಾಡದಿದ್ದರೆ ಬೇರ್ಯಾರು ಮಾಡಬಹುದು? ವಾಸ್ತವದತ್ತ ನೋಟ ಬೀರುತ್ತಾರೆ ಎ.ಪಿ.ಚಂದ್ರಶೇಖರ್.
ಬಣ್ಣದ ಕೂವೆ, ಅರಾರೂಟ್ ಕೂವೆ, ಕ್ಯಾನಾಕೂವೆ, ಮುಂಡಿಕೆಸು, ಕಪ್ಪು ಕೆಸು, ನುಗ್ಗೆ ಗಡ್ಡೆ, ಕಾಡುಪೀರೆ ಗಡ್ಡೆ, ನೀಲಿ ಅರಶಿನ, ತಗ್ಗೆಣಸು, ಕರಿಬೀಳು ಕೆಸು, ಮೊಟ್ಟೆ ಕೆಸು, ಸುವರ್ಣಗೆಡ್ಡೆ, ಕಸ್ತೂರಿ ಅರಸಿನ, ಕಲ್ಲುಶುಂಠಿ, ಮರಗೆಣಸು, ನರೆ, ಅಡ್ಡತಾಳಿ, ಕೆಂಬಲ್ ಗಡ್ಡೆ.. ಹೀಗೆ ಗಡ್ಡೆ ಹಬ್ಬದಲ್ಲಿ ಗಡ್ಡೆಗಳ ಪ್ರದರ್ಶನಗಳು. ಹೆಸರುಗಳಲ್ಲಿ ಪ್ರಾದೇಶಿಕವಾದ ಚಿಕ್ಕಪುಟ್ಟ ವ್ಯತ್ಯಾಸಗಳಿವೆ. 'ಎಲ್ಲವೂ ಆಹಾರದಲ್ಲಿ ಬಳಕೆ ಮಾಡುವಂತಾದ್ದೇ. ಈಗೆಲ್ಲವೂ ಮರೆತುಹೋಗಿದೆ' ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತರ ವಿಷಾದ.
ಮಧ್ಯಾಹ್ನದ ಭೋಜನಕ್ಕೆ ಎಲ್ಲವೂ ಗಡ್ಡೆಯ ಖಾದ್ಯಗಳೇ. ತೆಂಗಿನಗಡ್ಡೆ-ಚಕೋತ ಸಲಾಡ್, ಬಾಳೆಗಡ್ಡೆ ಸಲಾಡ್; ಸಾಂಬ್ರಾಣಿ ಗಡ್ಡೆ, ಕೆಸುವಿನ ಗಡ್ಡೆ, ಕೇನೆ ಗಡ್ಡೆ ಸೇರಿಸಿದ ಪಲಾವ್, ಸುವರ್ಣಗಡ್ಡೆ ಪಾಯಸ, ಅರಾರೂಟು ಮತ್ತು ಕೊಕ್ಕೊ ಹುಡಿ ಸೇರಿಸಿದ ಹಾಲುಬಾಯಿ (ಹಲ್ವದಂತಹ ಪಾಕ), ಕೂರಿಕೆ-ಕೆಸುವಿನ ಗಡ್ಡೆ ಸೇರಿಸಿದ ಮೊಸರನ್ನ.. ಹೀಗೆ ಗಡ್ಡೆಗಳದ್ದೇ ಕಾರುಬಾರು. ಈ ರೀತಿಯ ಅಡುಗೆ ಮಾದರಿಗಳು ಮುಂದಿದ್ದಾಗ ಬಳಕೆಗೆ ಬೀಸು ಹೆಜ್ಜೆ. ಆದರೆ ಮನಸ್ಸು ಸಿದ್ಧವಾಗಬೇಕು. ಅಡುಗೆ ಮನೆಯ ಒಲೆಯಲ್ಲಿ ಬೆಂಕಿ ಉರಿಯಬೇಕಷ್ಟೇ!
ಗಡ್ಡೆ ತರಕಾರಿ ಅಂದಾಗ ಎಲ್ಲವನ್ನೂ ಬಳಸಬಹುದು ಎನ್ನುತ್ತೇವೆ. ಅವುಗಳ ಗುಣ ದೋಷಗಳನ್ನು ಅರಿತು ಸೇವಿಸಿದಾಗ ಆರೋಗ್ಯ. 'ಯಾವುದನ್ನು ಬಳಸಬೇಕು, ಯಾವುದು ಬೇಡ' ಮತ್ತು ಅವುಗಳ ಔಷಧೀಯ ಗುಣಗಳತ್ತ ಬೆಳಕು ಹಾಕಿದವರು ಮೂಲಿಕಾ ತಜ್ಞ ವೆಂಕಟ್ರಾಮ ದೈತೋಟ ಮತ್ತು ಜಯಲಕ್ಷ್ಮೀ ದೈತೋಟ. ಒಂದೆರಡು ಉದಾಹರಣೆ ನೋಡಿ.
ಕೆಸುವಿನಲ್ಲಿ ದಂಟು ವಿಶೇಷ. ದಂಟಿನ ಖಾದ್ಯಕ್ಕೆ ಹಲಸಿನ ಬೀಜ ಕಾಂಬಿನೇಶನ್. ನೋವಿಗೆ ಶಾಖ ಕೊಡಲು ಇದರ ಎಲೆ ಬಳಕೆ. ಶರೀರದೊಳಗೆ ಹೊಕ್ಕ ಚಿಕ್ಕ ಮುಳ್ಳುಗಳನ್ನು ಹೊರ ತೆಗೆಯಲು ಕೆಸುವಿನ ದಂಟಿನ ರಸದ ಬಳಕೆ ಆಯುರ್ವೇದದಲ್ಲಿದೆ. ಮುಂಡಿಗಡ್ಡೆ (ಮಾನಕಂದ) ಶರೀರದಲ್ಲಿ ಮಧುರ ಪರಿಣಾಮ ಬೀರುತ್ತದೆ. ಇದರಲ್ಲಿ ಪೋಷಕಾಂಶ ಹೆಚ್ಚು. ಎಲೆಯನ್ನು ಬಿಸಿ ಮಾಡಿ ಲೇಪ ಹಾಕಿದರೆ ವಾತ ನೋವು ಕಡಿಮೆಯಾಗುತ್ತದೆ.
ಕಿಡ್ನಿಸ್ಟೋನಿಗೆ ಬಾಳೆಗಡ್ಡೆಯ ರೊಟ್ಟಿ, ಪೋಡಿ, ಚಟ್ನಿ, ತಂಬುಳಿ ಉತ್ತಮ. ಸೊಪ್ಪವರೆಯ ಗಡ್ಡೆ, ದಂಟು, ಬೀಜ, ಕಾಯಿ ಎಲ್ಲವೂ ಬಳಕೆ. ಇದರಿಂದ ಮಧುಮೇಹ ಶಮನ. ಗುಡ್ಡಗಾಡಿನಲ್ಲಿ ಬೆಳೆಯುವ ಬಾಳೆಗೆಣಸನ್ನು ಸುಟ್ಟುಹಾಕಿ ತಿಂದರೆ ಒಳ್ಳೆಯ ಪೌಷ್ಟಿಕಾಂಶ. ಶುಂಠಿ ಜೀರ್ಣಕಾರಿ. ಅಗಸೆ ಸೊಪ್ಪನ್ನು ಒಮ್ಮೆ ಕುದಿಸಿ ನೀರು ತೆಗೆದು ಇದರ ತಂಬುಳಿ, ಸಾರು ಸೇವನೆಯಿಂದ ಕಣ್ಣಿನ ದೃಷ್ಟಿ ಶುಭ್ರವಾಗುವುದು. ಗಡ್ಡೆಗಳನ್ನು ಹುಡಿ ಮಾಡಿಟ್ಟುಕೊಂಡರೆ ಇತರ ಪದಾರ್ಥಗಳನ್ನು ಮಾಡುವಾಗ ಒಳಸುರಿಯಾಗಿ ಬಳಸಬಹುದು.
ಹಲಸು ಸ್ನೇಹಿ ಕೂಟವು ಹಲಸಿಗೆ ಮಾನವನ್ನು ತಂದಿತ್ತಿದೆ. ತನ್ನ ವ್ಯಾಪ್ತಿಯಲ್ಲಿ ಇಪ್ಪತ್ತೇಳು ಟನ್ ಹಲಸನ್ನು ಮುಂಬಯಿಯಲ್ಲಿ ಮಾರುಕಟ್ಟೆ ಮಾಡಿದೆ. ಹಲಸು, ಮಾವು, ತರಕಾರಿ ಮೇಳಗಳನ್ನು ಆಯೋಜಿಸಿ ಅನ್ನದ ಬಟ್ಟಲನ್ನು ತಂಪು ಮಾಡುವಲ್ಲಿ ಊರಿದ ಸಣ್ಣ ಹೆಜ್ಜೆ ದೊಡ್ಡದಾಗುತ್ತಿದೆ.
ಕಜೆ ಮನೆಯಂಗಳದಲ್ಲಿ ಜರುಗಿದ ಗಡ್ಡೆ ತರಕಾರಿ ಹಬ್ಬದ ಬಳಿಕ ಮುಂದೇನು? ಪ್ರಶ್ನೆ ಸಹಜ. ಹಬ್ಬಗಳಿಗೆ ಶ್ರೀಕಾರವನ್ನು ಹಲಸು ಸ್ನೇಹಿ ಕೂಟವೇನೋ ಬರೆಯಿತು. ಅದರ ಮುಂದುವರಿಕೆ ಮನೆಯಲ್ಲಾಗಬೇಕು, ಮನದಲ್ಲಾಗಬೇಕು. ಅಡುಗೆ ಮನೆಯ ಖಾದ್ಯಗಳಲ್ಲಿ ಸಿದ್ಧವಾಗಬೇಕು. ಅಡುಗೆ ಮನೆ ನಿಜಾರ್ಥದಲ್ಲಿ ಹಬ್ಬದ ಮನೆಯಾಗಬೇಕು.
ಗಡ್ಡೆ ತರಕಾರಿ ಹಬ್ಬವನ್ನು ಮನೆಯಂಗಳದಲ್ಲಿ ಆಯೋಜಿಸಿದ ವಸಂತ ಕಜೆ ಇವರು ಐಟಿ ಉದ್ಯೋಗಿ. ಕೈತುಂಬಾ ಗಳಿಸುವ ಉದ್ಯೋಗ. ಆದರೆ ಬದುಕಿನ ಸುಸ್ಥಿರತೆಗೆ ಕೃಷಿರಂಗವೇ ಅಡಿಪಾಯ ಎನ್ನುವುದನ್ನು ವಸಂತ್ ಮರೆತಿಲ್ಲ. ಕೃಷಿಯಲ್ಲಿ ಅಚಲ ನಂಬಿಕೆ, ಶ್ರದ್ಧೆ.
ನಮ್ಮ ಜೀವವೈವಿಧ್ಯವನ್ನು, ಮರೆತ ತರಕಾರಿ, ಅಡುಗೆಗಳನ್ನು ನೆನಪಿಸುವ, ಕೃಷಿಪ್ರೀತಿ ಹೆಚ್ಚಿಸುವ ಇಂಥಾ ಕಾರ್ಯಕ್ರಮಗಳು ಬೇರೆಬೇರೆ ಕೃಷಿಕರ ಮನೆಗಳಲ್ಲಿ, ಇನ್ನಷ್ಟು ಹಳ್ಳಿಹಳ್ಳಿಗಳಲ್ಲಿ ಆಗಲಿ.
(ಉದಯವಾಣಿಯ 'ನೆಲದ ನಾಡಿ' ಅಂಕಣ ಬರೆಹ)