ಏನಿದು ಅಡಿಕೆ ಕೌಶಲ ಪಡೆ? ಅಡಿಕೆ ಮರ ಏರಿ ಮಾಡಬಹುದಾದ ಕೊನೆಗಾರರ ಕೆಲಸಗಳನ್ನು ಕಲಿಸುವ ತರಬೇತಿ. ಈಗ ಕೌಶಲ ಪಡೆಯ ಮೂರನೇ ತಂಡ ತಯಾರಾಗುತ್ತಿದೆ. ಕೊನೆಗಾರರು ರೂಪುಗೊಳ್ಳುತ್ತಿದ್ದಾರೆ. ಕಲಿಕೆಗಾಗಿ ಸ್ವಾನುಭವದ ಪ್ರಾಕ್ಟಿಕಲ್ ಜ್ಞಾನದ ಅಲಿಖಿತ ಸಿಲೆಬಸ್. ಈ ರಂಗದಲ್ಲಿ ಈಗಾಗಲೇ ಒಂದು ಒಂದೂವರೆ ದಶಕಗಳ ಕಾಲ ದುಡಿದ ಅನುಭವಿಗಳಿಲ್ಲಿ ಅಧ್ಯಾಪಕರು.
ಮಂಗಳೂರು ಅಡಿಕೆ ಸಹಕಾರಿ ಸಂಸ್ಥೆ 'ಕ್ಯಾಂಪ್ಕೋ' ಅನ್ಯಾನ್ಯ ಸಂಸ್ಥೆಗಳ ಹೆಗಲೆಣೆಯಲ್ಲಿ 'ಅಡಿಕೆ ಕೌಶಲ ಪಡೆ'ಯ ಎರಡು ತರಬೇತಿ ಶಿಬಿರಗಳನ್ನು ಯಶಸ್ವಿಯಾಗಿ ಮುಗಿಸಿದೆ. ಒಂದು - 2018ರ ದಶಂಬರ, ಮತ್ತೊಂದು ಫೆಬ್ರವರಿ ಮೊದಲ ವಾರ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಿ.ಪಿ.ಸಿ.ಆರ್.ಐ. ಆವರಣದಲ್ಲಿ ಶಿಬಿರ ಜರುಗಿತ್ತು. ಐವತ್ತಮೂರು ಮಂದಿ ಶಿಬಿರಾರ್ಥಿಗಳು ಮರ ಏರುವ ಶಿಕ್ಷಣ ಪಡೆದಿದ್ದಾರೆ. ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಮೂರನೇ ಕೌಶಲ ಪಡೆ ಶಿಬಿರವು ಎಪ್ರಿಲ್ 8ರಿಂದ 12ರ ತನಕ ನಡೆಯಲಿದೆ. ಸುಮಾರು ಇಪ್ಪತ್ತು ಮಂದಿ ನೋಂದಾಯಿಸಿದ್ದಾರೆ. ಕ್ಯಾಂಪ್ಕೋದ ನಿರ್ದೇಶನದಲ್ಲಿ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಇನ್ನಿತರ ಸಹಕಾರಿ ಸಂಘಗಳೊಂದಿಗೆ ಶಿಬಿರ ಸಂಪನ್ನಗೊಳಿಸುತ್ತಿದೆ. ಸ್ವಾವಲಂಬಿಯಾಗಿ, ಸ್ವ-ಉದ್ಯೋಗವಾಗಿ ತೊಡಗಿಸಿಕೊಳ್ಳಲು ಯುವ ಮನಸಿಗರಿಗಿದು ಅವಕಾಶ ಮತ್ತು ಸಕಾಲ.
2018ರ ಅಕ್ಟೋಬರ್ ತಿಂಗಳು. ತೀರ್ಥಹಳ್ಳಿಯ 'ಎಲೈಟ್' ಕೃಷಿಕರ ಬಳಗವು ಕೊನೆಗಾರ ತರಬೇತಿ ಏರ್ಪಡಿಸಿತ್ತು. ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದ ಸಹಕಾರ. ಶಿಬಿರ ನಡೆಯುತ್ತಿರುವಾಗಲೇ ಕ್ಯಾಂಪ್ಕೋ ಅಧ್ಯಕ್ಷರಾದ ಎಸ್.ಆರ್.ಸತೀಶ್ಚಂದ್ರ ನಿಯೋಗದ ಭೇಟಿ, ವೀಕ್ಷಣೆ, ಅಧ್ಯಯನ. ಕಾಸರಗೋಡು-ಕರಾವಳಿ ಭಾಗದಲ್ಲೂ ಶಿಬಿರ ಸಂಯೋಜಿಸುವ ಸಂಕಲ್ಪ. ಆರಂಭದಲ್ಲಿ ಬಂದ ಪ್ರತಿಕ್ರಿಯೆ ನೀರಸ. ಕೇವಲ ಏಳು ಅರ್ಜಿಗಳು!
ಒಂದು ಕ್ಷಣ ಆತಂಕವಾಗಿತ್ತು. ಸಹಕಾರಿ ಸಂಘಗಳನ್ನು ವಿನಂತಿಸಿದ್ದೆವು. ಜಾಲತಾಣಗಳಲ್ಲಿ ವಿಚಾರ ಹರಿಯ ಬಿಟ್ಟೆವು. ಪರಿಣಾಮವಾಗಿ ನೂರಕ್ಕೂ ಮಿಕ್ಕಿ ಅರ್ಜಿಗಳು ಬಂದಿದ್ದುವು. ಹದಿನೆಂಟರಿಂದ ಮೂವತ್ತೈದು ವರುಷದೊಳಗಿನ ಮೂವತ್ತಮೂರು ತರುಣರ ಪಟ್ಟಿ ಸಿದ್ಧವಾಯಿತು. ಇದರಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಸೇರಿದ್ದರು, ಮೊದಲ ಶಿಬಿರದ ಮಾಹಿತಿ ನೀಡುತ್ತಾರೆ, ಶಂ.ನಾ.ಖಂಡಿಗೆ. ಇವರು ಕ್ಯಾಂಪ್ಕೋ ಉಪಾಧ್ಯಕ್ಷರು ಹಾಗೂ ಶಿಬಿರದ ನಿರ್ದೇಶಕರು.
ಕಾಲಿಗೆ 'ತಳೆ' ಕಟ್ಟಿ ಅಡಿಕೆ ಮರ ಏರುವಲ್ಲಿಂದ ಕೊಯ್ಲು ತನಕದ ಪ್ರಾಕ್ಟಿಕಲ್ ಶಿಕ್ಷಣ. ಅಡಿಕೆ ಹಾಳೆಯನ್ನು ಬಳಸಿ ತಳೆ ಕಟ್ಟುವುದು ಪಾರಂಪರಿಕ ವಿಧಾನ. ಈಗ ಸಿಮೆಂಟಿನ ಅಥವಾ ರಾಸಾಯನಿಕ ಗೊಬ್ಬರದ ಗೋಣಿಯನ್ನು ಬಿಡಿಸಿ ಬಹಳ ಜಾಗ್ರತೆಯಾಗಿ, ಸಡಿಲಗೊಳ್ಳದಂತೆ ಬಿಗಿಯಾಗಿ ಕಟ್ಟುವುದು ಮೊದಲ ಪಾಠ. ಜತೆಗೆ ಮರ ಏರುವಾಗ ಮರ್ಮಾಂಗಕ್ಕೆ ಏಟು ಬೀಳದಂತೆ ಹಾಳೆಯಿಂದ ತಯಾರಿಸುವ 'ಸೆಂಟರ್ ಪ್ಯಾಡ್' ಎನ್ನುವ ರಕ್ಷಕನ ತಯಾರಿ.
ಮರ ಏರುವಾಗ ಕಾಲಿನ ರಚನೆ, ಕೈಯನ್ನು ಮರಕ್ಕೆ ಹೇಗೆ ಸೇರಿಸಿಕೊಳ್ಳಬೇಕು, ಮರದಲ್ಲಿ ಕುಳಿತು ಔಷಧ ಸಿಂಪಡಿಸಲು, ಕೊಯಿಲು ಮಾಡುವಾಗ ಬಳಸುವ 'ಕೊಟ್ಟೆಮಣೆ' ಬಳಕೆ, ಅದಕ್ಕೆ ರಕ್ಷಣಾತ್ಮಕವಾಗಿ ಹಗ್ಗ ಹಾಕುವ ವಿಧಾನ, ಕೊಟ್ಟೆಮಣೆಯೊಂದಿಗೆ ಮರ ಏರುವ ಮತ್ತು ಇಳಿಯುವ ಜಾಣ್ಮೆ, ಅಡಿಕೆ ಕೊಯ್ಲಿನ ಕೊಕ್ಕೆಗೆ (ಬಿದಿರನ ಗಳ) ಸಿಕ್ಕಿಸುವ ಹಲ್ಲಿನ ತಯಾರಿ, ಕೊಕ್ಕೆ ಹಿಡಿಯವ ಶೈಲಿ, ಹಣ್ಣಡಿಗೆ ಕೊಯ್ಯುವಾಗ ಯಾವ ವಿನ್ಯಾಸದಲ್ಲಿ ಕೊಕ್ಕೆ ಇರಬೇಕೆನ್ನುವ ಪಾಠ.. ಇವೇ ಮೊದಲಾದ ವೃತ್ತಿಸೂಕ್ಷ್ಮಗಳನ್ನು ಅನುಭವಿಗಳು ಕಲಿಸಿಕೊಟ್ಟರು. ಆರಾರು ಮಂದಿ ಶಿಬಿರಾರ್ಥಿಗಳಿಗೆ ಒಬ್ಬರು ಶಿಕ್ಷಕರು. ಇಂದು ಒಂದು ತಂಡಕ್ಕೆ ಶಿಕ್ಷಕರಾಗಿ ನಿಯುಕ್ತಿಗೊಂಡವರು ನಾಳೆ ಇನ್ನೊಂದು ತಂಡಕ್ಕೆ ಬದಲಾವಣೆ. ಇದರಿಂದಾಗಿ ಒಬ್ಬೊಬ್ಬರ ಬೌದ್ಧಿಕ ಜ್ಞಾನವು ಎಲ್ಲಾ ಶಿಬಿರಾರ್ಥಿಗಳಿಗೆ ಸಿಗುವಂತಾಗುತ್ತದೆ.
ಅಡಿಕೆ, ತೆಂಗು ಮರ ಏರುವ ವೃತ್ತಿಯಲ್ಲಿ ಅಕಸ್ಮಾತ್ ಬಿದ್ದು ಬೆನ್ನುಹುರಿಗೆ ಏಟು ಮಾಡುಕೊಂಡವರು ಅಧಿಕ. ಮೃತರಾದ ದೃಷ್ಟಾಂತಗಳೂ ಇವೆ. ರಕ್ಷಣೆಯ ದೃಷ್ಟಿಯಿಂದ ಶಿಬಿರಾರ್ಥಿಗಳ ಸೊಂಟಕ್ಕೆ 'ಸೇಪ್ಟಿ ಬೆಲ್ಟ್' (ಹಾನರ್ೆಸ್) ಬಿಗಿದು ಮರ ಏರಲು ಅಭ್ಯಾಸ ಮಾಡಿಸಲಾಗಿತ್ತು. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಕೃಷಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಕೆ.ಸಿ.ಶಶಿಧರ್ ಸಾಧನದೊಂದಿಗೆ ಎರಡೂ ಶಿಬಿರದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
ಸೇಪ್ಟಿ ಬೆಲ್ಟ್ ಕೊಟ್ಟೆಮಣೆಗೆ ಪರ್ಯಾಯ. ಆದರೆ ಬೆಲ್ಟಿನ ಹುಕ್ ಇದೆಯಲ್ವಾ, ಅದು ಕೊಟ್ಟೆಮಣೆಯ ಬಳ್ಳಿಗೆ ಸೇರಿಸಿಕೊಂಡರೆ ಡಬ್ಬಲ್ ಸೇಫ್! ಮರ ಏರಿದಾಗ ಅಕಸ್ಮಾತ್ ಬೀಳದ ಹಾಗೆ ಪಾಲ್ ಅರೆಸ್ಟರ್ ಸಾಧನ. ಮಳೆಗಾಲದಲ್ಲೂ ಮರ ಏರಲು ತೊಂದರೆಯಾಗದು. ಎಂದು ಶಿಬಿರಾರ್ಥಿಗಳನ್ನು ಹುರಿದುಂಬಿಸಿದ್ದಾರೆ. ಶಿಕ್ಷಕರಿಗೂ ಮನದಟ್ಟು ಮಾಡಿಕೊಟ್ಟಿದ್ದಾರೆ. ಬೇರೆ ಬೇರೆ ಕ್ಷೇತ್ರದಲ್ಲಿ ಬಳಸುವ ಸುರಕ್ಷಾ ಸಾಧನಗಳನ್ನು ಅಭ್ಯಸಿಸಿದ ಶಶಿಧರ್ ಕೌಶಲ ಪಡೆಗಾಗಿಯೇ ಸೇಪ್ಟಿ ಬೆಲ್ಟನ್ನು ವಿನ್ಯಾಸಿಸಿದ್ದಾರೆ. (ಅನುಭವಿಗಳು ಮೊದಲೇ ಮರ ಏರಿ ಮೇಲ್ತುದಿಯಿಂದ ಹಗ್ಗವೊಂದನ್ನು ಕಟ್ಟಿ ಇಳಿಬಿಡಬೇಕು. ಇದಕ್ಕೆ ಫಾಲ್ ಅರೆಸ್ಟರ್ ಜೋಡಣೆ. ಮರ ಏರುವ ಹೊಸಬರ ದೇಹಕ್ಕೆ ಫಾಲ್ ಅರೆಸ್ಟರನ್ನು ಸಿಕ್ಕಿಸಿದರೆ ಆಯಿತು. ಯಾವುದೇ ಸಂದರ್ಭದಲ್ಲಿ ಅದು ಮರದಿಂದ ಬೀಳಬಿಡುವುದಿಲ್ಲ)
ಏನೂ ಅರಿವಿಲ್ಲದವರಿಗೆ ನಾಲ್ಕು ಮರಗಳ ಮಧ್ಯೆ ನಾಲ್ಕಡಿ ಎತ್ತರದಲ್ಲಿ ನೆಟ್ ಬಿಗಿದು ಮರ ಏರಲು ಕಲಿಸಿದ್ದೇವೆ. ಹೊಸಬರು ಇವನ್ನೆಲ್ಲಾ ಬಳಸಿ ಕಲಿತು ಶಿಬಿರದ ಎರನೇ ದಿವಸವೇ ಮರ ಏರಲು ಯತ್ನಿಸಿ ಯಶಸ್ಸಾಗಿದ್ದಾರೆ ಎನ್ನುವ ಖುಷಿಯಲ್ಲಿ ಶಿಬಿರ ನಿರ್ದೇಶಕರು ಶಿಬಿರಾರ್ಥಿಗಳಿಗೆ ಕೆಲವೊಂದು ಸೂಚನೆಯನ್ನೂ ನೀಡುತ್ತಾರೆ, ಐದು ದಿವಸದ ಕಲಿಕೆಯಲ್ಲಿ 'ಎಲ್ ಬೋರ್ಡ್’ ಪರವಾನಿಗೆ ಮಾತ್ರ. ಮುಂದೆ ಇವರೆಲ್ಲಾ ಪರಿಣತರ ಜತೆಗಿದ್ದು ಪಳಗಬೇಕು. ಜಾಣ್ಮೆಯ ಸೂಕ್ಷ್ಮಗಳನ್ನು ಅನುಷ್ಠಾನ ಮಾಡುತ್ತಾ ವಿದ್ಯೆಯನ್ನು ತಮ್ಮದನ್ನಾಗಿಸಬೇಕು.
ಇದು ಆಧುನಿಕ ತಂತ್ರಜ್ಞಾನದ ಕಾಲ. ಮರ ಏರಲು ಯಾಂತ್ರಿಕ ವಿಧಾನವನ್ನು ಕಲಿಸಬಹುದಲ್ಲಾ? ಎನ್ನುವ ಪ್ರಶ್ನೆಗೆ ಖಂಡಿಗೆ ಉತ್ತರ : ಶ್ರಮ ಬೇಡುವ ಕೆಲಸಗಳನ್ನು ಯಾಂತ್ರೀಕರಣಗೊಳಿಸಿದರೆ ಒಳ್ಳೆಯದೇ. ಇದಕ್ಕಾಗಿ ಪರಿಪೂರ್ಣ ಯಂತ್ರಗಳು ಬಂದಿವೆಯೇ? ಬಂದರೆ ಸಂತೋಷ. ಅಪರಿಪೂರ್ಣವಾದ ಯಂತ್ರಗಳನ್ನು ಬಳಸುವುದು ಅಪಾಯ. ಅಡಿಕೆ ಮರದ ಸಿಪ್ಪೆ ಎದ್ದು ಹೋಗುವುದು ಕೂಡಾ ಮರದ ಬೆಳವಣಿಗೆಗೆ ಮಾರಕ. ಮೊದಲು ವೈಯಕ್ತಿಕವಾಗಿ ಮರ ಏರಲು ಕಲಿತು ವಿಶ್ವಾಸ ಹೊಂದುವುದು ಮುಖ್ಯ. ನಂತರವಷ್ಟೇ ಯಾಂತ್ರಿಕತೆಯ ಮಾತು.
ಈ ಶಿಬಿರವನ್ನು ಕ್ಯಾಂಪ್ಕೋ ಆಯೋಜಿಸದೇ ಇರುತ್ತಿದ್ದರೆ ಐವತ್ತೋ ಅರುವತ್ತೋ ಮಂದಿ ಅಡಿಕೆ ಕೃಷಿ ಕ್ಷೇತ್ರದಿಂದ ದೂರ ಹೋಗುತ್ತಿದ್ದರೇನೋ! ಶಿಬಿರಾರ್ಥಿಗಳಿಗೆ ಕೊಟ್ಟೆಮಣೆಯನ್ನು ಕ್ಯಾಂಪ್ಕೋ ಉಚಿತವಾಗಿ ನೀಡಿದೆ. ಸ್ವಂತಕ್ಕಾಗಿ ಸೇಪ್ಟಿ ಬೆಲ್ಟ್ ಕೂಡಾ ರಿಯಾಯಿತಿ ದರದಲ್ಲಿ - ಅಂದರೆ ಅಪೇಕ್ಷಿತರು ಶೇ.50ರಷ್ಟು, ಮಿಕ್ಕ ಶೇ.50 ಕ್ಯಾಂಪ್ಕೋ ಭರಿಸಿದೆ. ಶಿಬಿರಾರ್ಥಿಯ ಹೆಸರಿನಲ್ಲಿ ಐದು ಲಕ್ಷ ರೂಪಾಯಿಯ ವಿಮೆಯನ್ನೂ ಮಾಡಿದೆ. ಗುರುತು ಕಾರ್ಡು ವಿತರಿಸಿದೆ. ಕ್ಯಾಂಪ್ಕೋದ ಜಾಲತಾಣದಲ್ಲಿ ಮರ ಏರುವ ಕೌಶಲ ಪಡೆಯ ವಿಳಾಸ, ಸಂಪರ್ಕ ಸಂಖ್ಯೆಯನ್ನು ಅಪ್ಲೋಡ್ ಮಾಡಲಿದೆ. ಶಿಬಿರದ ಪೂರ್ವದಲ್ಲಿ ಆರೋಗ್ಯ ತಪಾಸಣೆಯನ್ನು ಮಾಡಿದೆ. ಜತೆಗೆ ದೈನಂದಿನ ಶಿಷ್ಯ ವೇತನ ಕೂಡಾ.
ಸ್ವ-ಉದ್ಯೋಗ ಮತ್ತು ಸ್ವಾವಲಂಬನೆಯು ಹಳ್ಳಿಯಲ್ಲೇ ರೂಪುಗೊಂಡರೆ ನಗರದ ಸೆಳೆತ ಯುವಕರನ್ನು ಸೆಳೆಯದು. ಯುವಕರ ಬದುಕಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸದೆ ಅವರನ್ನು ದೂರ ಮಾಡಿದ್ದೇವೆ ಎಂದೆನಿಸುತ್ತದೆ. ಶಿಬಿರದ ಮೂಲಕ ಅವರು ಸಮಾಜದಲ್ಲಿ ಗೌರವಯುತವಾಗಿ ಬದುಕುವ ಕೌಶಲ್ಯವನ್ನು ಕಲ್ಪಿಸಿದ್ದೇವೆ. ಅಡಿಕೆ ಕೃಷಿಯ ಕ್ಷೇತ್ರದಲ್ಲಿರುವವರು ಐವತ್ತರಿಂದ ಅರುವತ್ತರ ವಯೋಮಾನದವರು. ಅವರ ನಂತರದ ಪೀಳಿಗೆ ಈ ಕ್ಷೇತ್ರಕ್ಕೆ ಬರುತ್ತಾ ಇಲ್ಲ. ಬಹುತೇಕ ಮಂದಿಯನ್ನು ನಗರದ ಅನ್ಯಾನ್ಯ ಕೆಲಸಗಳು ಸೆಳೆಯುತ್ತವೆ. ಇನ್ನೂ ಕೆಲವರು ವಲಸೆ ಹೋಗುತ್ತಾರೆ. ಅಂತಹ ಶ್ರಮಿಕರನ್ನು ಹಳ್ಳಿಯಲ್ಲಿ ಉಳಿಸಿಕೊಳ್ಳುವ ನೆಲೆಯಲ್ಲಿ ಶಿಬಿರವು ಪೂರಕವಾಗಿದೆ.
ಎಲ್ಲವನ್ನೂ ಕ್ಯಾಂಪ್ಕೋ ಮಾಡಬೇಕೆನ್ನುವ ಮನಸ್ಥಿತಿ ತಪ್ಪು. ಸ್ಥಳೀಯ ಸಹಕಾರಿ ಸಂಘಗಳು ಈ ದಿಸೆಯಲ್ಲಿ ಯೋಚಿಸಬೇಕು. ಸ್ಥಳೀಯವಾಗಿ ಕೌಶಲ ಪಡೆಯನ್ನು ಕಟ್ಟಬೇಕು. ಕೊನೇ ಪಕ್ಷ ತಂತಮ್ಮ ಊರಿನ ಮರ ಏರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಎರಡೂ ಶಿಬಿರದ ಯಶದ ಹಿನ್ನೆಲೆಯಲ್ಲಿ ಪೆರ್ಲದಲ್ಲಿ ಸ್ಥಳೀಯ ಸಹಕಾರಿ ಸಂಘಗಳ ಸಾರಥ್ಯದಲ್ಲಿ ಮೂರನೇ ಶಿಬಿರ ಸಂಪನ್ನವಾಗುತ್ತಿದೆ.
"ಈ ಕೆಲಸಗಳನ್ನು ಸಹಕಾರಿ ಸಂಘಗಳು ಮುಂದುವರಿಸಬೇಕು. ಕೆಲಸಗಳಿಗೆ ಎಳೆಯರು ಬರ್ತಾ ಇಲ್ಲ ಎನ್ನುವುದು ಸುಳ್ಳು. ಸರಿಯಾದ ರೀತಿಯಲ್ಲಿ ಯೋಜನೆ ಹಾಕಿಕೊಂಡರೆ ಬರ್ತಾರೆ. ಐದು ದಿವಸದಲ್ಲಿ ಕಲಿಕೆ ಪರಿಪೂರ್ಣ ಆಗದು. ಸೈಕಲ್ ಕಲಿತ ನಂತರ ಸ್ಕೂಟರ್ ಚಲಾಯಿಸಲು ಸುಲಭವಲ್ವಾ. ಅಡಿಕೆ ಕೃಷಿ ನೆಲೆ ನಿಲ್ಲಬೇಕಾದರೆ ಅದಕ್ಕೆ ಅಗತ್ಯವಿರುವ ಕೊಯ್ಲು ವ್ಯವಸ್ಥೆ ರೂಪಿಸಿಕೊಳ್ಳಲು ಕೃಷಿಕ ಸಮುದಾಯ ಕ್ರಿಯಾಶೀಲವಾಗಬೇಕಾಗಿದೆ." ಅಡಿಕೆ ಕೌಶಲ ಪಡೆಯ ಕನಸನ್ನು ಹೊತ್ತ ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರ ಆಶಯ
ಫೆಬ್ರವರಿಯಲ್ಲಿ ಶಿಬಿರ ನಡೆಯುತ್ತಿರುವಾಗ ಶಿರಸಿಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸಿದ್ದರು. "ಶಿರಸಿಯಲ್ಲಿ ನಾವೂ ಶಿಬಿರ ಮಾಡುತ್ತೇವೆ. ನಮ್ಮಲ್ಲೂ ಸಮಸ್ಯೆಗಳಿವೆ. ವ್ಯವಸ್ಥಿತವಾದ ಕಲಿಕೆ ಇಲ್ಲದಿದ್ದರೆ ಅರ್ಧಂಬರ್ಧ ಕಲಿತವರಲ್ಲಿ ಕಲಿತು ಅಪಾಯ ಮಾಡುಕೊಳ್ಳುವುದೇ ಹೆಚ್ಚು."ಎಂದವರು ಶಿರಸಿ ತೋಟಗಾರ್ಸ್ ಸೇಲ್ ಸೊಸೈಟಿಯ ರವಿ ಹೆಗಡೆ. ಆಗ ಪೆರ್ಲ ಸೇವಾ ಸಹಕಾರಿ ಬ್ಯಾಂಕಿನವರು 'ತಮ್ಮಲ್ಲೂ ಮಾಡುತ್ತೇವೆ' ಎಂದು ಆಗ ಕ್ಷೀಣ ದನಿಯಲ್ಲಿ ಹೇಳಿದ ಮಾತು ಅನುಷ್ಠಾನ ಮಾಡುತ್ತಿದ್ದಾರೆ.
ಅಡಿಕೆ ಕೌಶಲ ಪಡೆಯ ತಯಾರಿ ಸುಲಲಿತ ಆಗಬೇಕೆಂದರೆ, ನಮ್ಮ ಮಧ್ಯೆ ಇರುವ 'ಡ್ರೈವಿಂಗ್ ಸ್ಕೂಲಿನಂತೆ' ಕಲಿಸುವ ವ್ಯವಸ್ಥೆಗಳು ರೂಪುಗೊಂಡರೆ ಅಡಿಕೆ ಕ್ಷೇತ್ರದ ಶ್ರಮದ ಕೆಲಸಗಳು ಹಗುರವಾಗುವುದರಲ್ಲಿ ಸಂಶಯವಿಲ್ಲ. ಜತೆಗೆ ಯುವಕರ ನಗರ ವಲಸೆಗೂ ಬ್ರೇಕ್! ವೈಯಕ್ತಿಕವಾಗಿ ಹಾಗೂ ಕೊನೆಗಾರ ವೃತ್ತಿಗೆ ಗೌರವದ ಸ್ಥಾನ, ಮಾನ.
ಮೊದಲ ಶಿಬಿರದ ಪೂರ್ವದಲ್ಲಿ ದಿವಸಕ್ಕೆ ಮುನ್ನೂರು ರೂಪಾಯಿ ಪಗಾರ ಪಡೆಯುತ್ತಿದ್ದವರು, ಶಿಬಿರದ ನಂತರ ಒಂದಷ್ಟು ಪಳಗಿ ದುಪ್ಪಟ್ಟು ದುಡಿಯುತ್ತಿರುವುದು ಖುಷಿ ನೀಡಿದೆ. ತನ್ನ ಉದ್ಯೋಗಕ್ಕೆ ಸಂಬಳ ನಿಗದಿ ಮಾಡುವಷ್ಟು ಯುವಕರು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಸಂತಸ ವ್ಯಕ್ತಪಡಿಸುತ್ತಾ, ಸಿ.ಪಿ.ಸಿ.ಆರ್.ಐ. ಜವಾಬ್ದಾರಿ ತೆಕ್ಕೊಂಡರೆ ಮಹಿಳೆಯರಿಗೂ ಅಡಿಕೆ ಮರವೇರುವ ಕೌಶಲವನ್ನು ಕಲಿಸೋಣ. ಕ್ಯಾಂಪ್ಕೋ ಪೂರ್ಣ ಸಹಕಾರ ನೀಡಲಿದೆ. ಎಂದು ಘೋಷಿಸಿದರು.
ಬಾಕ್ಸ್:
* ಮೊದಲು ಅಡಿಕೆ ಗೊನೆಗಳಿಗೆ ಕೊಕ್ಕೆ ಹಾಕಲು ತಿಳಿದಿರಲಿಲ್ಲ. ಶಿಬಿರದಲ್ಲಿ ಕಲಿತೆ. ನಂತರ ಒಂದು ತಿಂಗಳು ಇದೇ ಕೆಲಸ ಕಲಿತೆ. ಈಗ ಸಲೀಸು' - ಸುರೇಶ ಪೆರಡಾಲ
* ಕೃಷಿಯಲ್ಲಿ ಗೌರವವನ್ನು ನಾವೇ ಇಟ್ಟುಕೊಳ್ಳಬೇಕು. ಆದರೆ ಕಳೆದುಕೊಳ್ಳುತ್ತಿದ್ದೇವೆ. ನನ್ನ ತಂದೆಯವರು ಮರ ಏರಲು ಬಿಡಲಿಲ್ಲ. ಹಾಗಾಗಿ ಕಲಿಕೆಗೆ ಬಂದಿದ್ದೇನೆ. ಕಲಿತಿದ್ದೇನೆ. ಇನ್ನು ತೋಟಕ್ಕೆ ಹೋಗಿ ಪ್ರಯೋಗ. - ನವೀನ್ ಪ್ರಕಾಶ್