ಕಾಂತಾವರದಲ್ಲಿ ಕನ್ನಡ ಸಂಸ್ಕೃತಿಯ ಲೋಕವನ್ನು ರೂಪಿಸಿದ ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ ಇವರು 2020ನೇ ಸಾಲಿನ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಶಂಬರ 13ರಂದು ಕಾಂತಾವರದಲ್ಲಿ ಜರುಗಲಿದೆ.
ದಿ.ಬೋಳಂತಕೋಡಿ ಈಶ್ವರ ಭಟ್ಟರು ಪುತ್ತೂರು ಕರ್ನಾಟಕ ಸಂಘಕ್ಕೆ ಹೊಸ ಆಯಾಮವನ್ನು ನೀಡಿದವರು. ಪ್ರಕಾಶನದ ಮೂಲಕ, ಸಾಹಿತ್ಯ ಕಾರ್ಯಕ್ರಮಗಳ ಮೂಲಕ ಪುತ್ತೂರಿನಲ್ಲಿ ಅಕ್ಷರ ಮೆರವಣಿಗೆಯನ್ನು ಮಾಡಿದವರು. ಬೋಳಂತಕೋಡಿ ಅಭಿಮಾನಿ ಬಳಗವು ಪ್ರತಿವರುಷ ಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಬೋಳಂತಕೋಡಿ ಕನ್ನಡ ಪ್ರಶಸ್ತಿಯನ್ನು ಈ ಹಿಂದಿನ ವರುಷಗಳಲ್ಲಿ ಪಳಕಳ ಸೀತಾರಾಮ ಭಟ್, ಸಿದ್ಧಮೂಲೆ ಶಂಕರನಾರಾಯಣ ಭಟ್ (ದಿ.), ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ(ದಿ.) ಹರೇಕಳ ಹಾಜಬ್ಬ, ಕುಂಞಿಹಿತ್ಲು ಸೂರ್ಯನಾರಾಯಣ ಭಟ್, ಕವಯಿತ್ರಿ ನಿರ್ಮಲಾ ಸುರತ್ಕಲ್, ಕು.ಗೋ.ಉಡುಪಿ, ಬಿ.ಶ್ರೀನಿವಾಸ ರಾವ್-ಸಾವಿತ್ರೀ ಎಸ್.ರಾವ್ ಮತ್ತು ಅಂಬಾತನಯ ಮುದ್ರಾಡಿಯವರಿಗೆ ಪ್ರದಾನಿಸಲಾಗಿದೆ.
ಪ್ರಶಸ್ತಿ ಪುರಸ್ಕೃತರ ಪರಿಚಯ : ಡಾ.ನಾ.ಮೊಗಸಾಲೆಯವರಿಗೆ ಈಗ 76 ವರುಷ. ಕಾಂತಾವರದಲ್ಲಿ ಕನ್ನಡದ ನಿತ್ಯ ಆರಾಧನೆಯೊಂದಿಗೆ ಮಾತು ಮತ್ತು ಕೃತಿಗಳ ಪ್ರಕಟಣೆ ಮೂಲಕ ಕನ್ನಾಡು ಹೆಮ್ಮೆ ಪಡುವಂತಹ ಕೆಲಸ ಮಾಡಿದವರು. ಕಾಂತಾವರ ಕನ್ನಡ ಸಂಘ, ಅಲ್ಲಮ ಪ್ರಭು ಪೀಠ, ಮುದ್ದಣ ಕಾವ್ಯ ಪ್ರಶಸ್ತಿ, ವರ್ಧಮಾನ ಪ್ರಸಸ್ತಿ, ನಾಡಿಗೆ ನಮಸ್ಕಾರ ಸರಣಿ ಪ್ರಕಟಣೆಗಳ ಹಿಂದೆ ಮೊಗಸಾಲೆಯವರ ನೇತೃತ್ವ. ಕಾದಂಬರಿ, ಕಥಾ ಸಂಕಲನ, ಲೇಖನಗಳು, ವೈದ್ಯಕೀಯ ಕೃತಿಗಳು, ಸಂಪಾದನಾ ಕೃತಿಗಳು, ಬಯಲು ಬೆಟ್ಟ ಎನ್ನುವ ಆತ್ಮ ಕಥನಗಳ ರಚಯಿತರು.
'ತೊಟ್ಟಿ' ಕಾದಂಬರಿಯು ತೆಲುಗಿಗೆ, 'ದೃಷ್ಟಿ, ಉಲ್ಲಂಘನೆ' ಕಾದಂಬರಿಯು ತೆಲುಗು, ಮರಾಠಿ, ಇಂಗ್ಲೀಷಿಗೆ ಹಾಗೂ 'ನನ್ನದಲ್ಲದು' ಮಲೆಯಾಳಕ್ಕೆ ಅನುವಾದಗೊಂಡಿದೆ. 'ಮೊಗಸಾಲೆ 50 ಮತ್ತು ಆಯಸ್ಕಾಂತಾವರ' ಮೊಗಸಾಲೆಯವರಿಗೆ ಸಲ್ಲಲ್ಪಟ್ಟ ಅಬಿನಂದನಾ ಕೃತಿಗಳು. ಮೂರು ಬಾರಿ ಸಾಹಿತ್ಯ ಅಕಾಡೆಮಿ ಪ್ರಸಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ಕುವೆಂಪು ಪ್ರಶಸ್ತಿ.. ಹೀಗೆ ಹಲವಾರು ಗೌರವಗಳಿಂದ ಪುರಸ್ಕೃತರು.