Tuesday, July 5, 2022

ಗ್ರಾಮ ಭಾರತದಿಂದ ಯುವ ಮನಸುಗಳ ಪೋಣಿಕೆ


ನಾವು ಚಳುವಳಿಗಳನ್ನು ಹೇಗೆ ಸ್ವೀಕರಿಸಿದ್ದೇವೆ? ಯಾವ ರೀತಿ ಅರ್ಥ ಮಾಡಿಕೊಂಡಿದ್ದೇವೆ? ಪ್ರತಿಭಟನೆ, ಕಾಕು ನುಡಿಗಳು, ಅವಾಚ್ಯ ಮಾತುಗಳು, ನಿಂದನೆ, ಪರದೂಷಣೆ, ಪ್ರತಿಕೃತಿ ದಹನ, ಉಪವಾಸ, ದೊಂಬಿ, ಗಲಾಟೆ, ಕಂಠತ್ರಾಣೀಯ ಬೊಬ್ಬಾಟಗಳು.. ಇತ್ಯಾದಿ. ಶಾಲೆಯ ಚಿಣ್ಣರಲ್ಲಿ ಕೇಳಿ, ಇದೇ ಉತ್ತರ!

ಪ್ರಯೋಜನ? ಶೂನ್ಯ ಸಂಪಾದನೆ. ಚಳುವಳಿಗಳ ಸೋಲು. ಇಲ್ನೋಡಿ.. ರಾಜ್ಯ ಅಲ್ಲ, ದೇಶವೇ ಕತ್ತು ತಿರುಗಿಸಿ ನೋಡುವಂತಹ 'ಗ್ರಾಮೀಣ ಅಭಿವೃದ್ಧಿ' ಚಳುವಳಿಯ ಬೀಜವೊಂದು ಅಂಕುರಗೊಂಡಿದೆ.  ಅದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ನ 'ಮೊಗ್ರ'ದಲ್ಲಿ ಬೆಳೆದು ಸಸಿಯಾಗುತ್ತಿದೆ.

ಗ್ರಾಮ ಪಂಚಾಯತಿಯ ಒಂದನೇ ವಾರ್ಡ್  ಮೊಗ್ರ. ತೀರಾ ಹಳ್ಳಿ. ಆಚೀಚೆ ಒಂದುವರೆ ಸಾವಿರ ಜನಸಂಖ್ಯೆ. ಸುತ್ತಲಿನ ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ, ಚಿಕ್ಕುಳಿ ಊರುಗಳಿಗೆ ಕೇಂದ್ರಸ್ಥಾನ. ಸಾಂಸ್ಕೃತಿಕವಾಗಿ ಹಿರಿಮೆ, ಗರಿಮೆಗಳನ್ನು ಹೊಂದಿದೆ. ಏಳೆಂಟು ದಶಕದ ಐತಿಹ್ಯವಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಇದು ಮತದಾನದ ಕೇಂದ್ರವೂ ಹೌದು. ಅಲ್ಲದೆ ಶ್ರದ್ಧಾ ಕೇಂದ್ರ, ಅಂಗನವಾಡಿ, ಸಾರ್ವಜನಿಕ ಆಸ್ಪತ್ರೆಯಿದೆ. ವಾರ್ಡಿನಲ್ಲೀಗ ಸ್ವಾಭಿಮಾನದ ಮಂತ್ರ. ಇಲ್ಲಿ ರೂಪುಗೊಂಡ 'ಗ್ರಾಮ ಭಾರತ' ತಂಡದ ಇಚ್ಚಾಶಕ್ತಿ. 

ಏನಿದು ಗ್ರಾಮ ಭಾರತ? ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ರೂಪುಗೊಂಡ ಏಕ ಮನಸ್ಸಿಗರ ಹಳ್ಳಿ ತಂಡ. ಬಹುಕಾಲ ಊರಿನ ಅಭಿವೃದ್ಧಿಯ ಯತ್ನಗಳೆಲ್ಲವೂ ಫಲ ನೀಡದಿದ್ದಾಗ ತಮ್ಮೂರಿಗೆ ಸೌಲಭ್ಯಗಳನ್ನು ಪಡೆಯಲು ಟೊಂಕಕಟ್ಟಿದ ಸಮ್ಮನಸಿಗರು. ಸಾತ್ವಿಕ ಪ್ರತಿಭಟನೆಯ ಸಂಕೇತವಾಗಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ವಾರ್ಡಿನ  ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಯುವ ಪಡೆ. ತಂಡದ ಅಗ್ರಣಿ ಸ್ಥಳೀಯ ಕೃಷಿಕ, ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ.

 ಎಂ.ಕೆ.ಶಾರದಾ, ಲತಾಕುಮಾರಿ, ಭರತ್ ಕೆ.ವಿ. ಮತ್ತು ವಸಂತ ಮೊಗ್ರ ಇವರೀಗ ಗ್ರಾಮದ ಮೊದಲ ಪ್ರಜೆಗಳು.

ಇದು 'ನಾಟಕ'ವಲ್ಲ!

ಊರಿನ ಮಧ್ಯೆ ಹಾದುಹೋಗುವ ರಸ್ತೆಯ ದುರಸ್ತಿ, ಮೊಗ್ರಕ್ಕೆ ಶಾಶ್ವತ ಸೇತುವೆ.. ಮೊದಲಾದ್ಯತೆಯ ಆವಶ್ಯಕತೆಗಳು. ಸರಕಾರಕ್ಕೆ ಹದಿನೈದು ವರುಷಗಳಿಂದ ನಿರಂತರ ಮನವಿಗಳು. ವರಿಷ್ಠರೊಂದಿಗೆ ಮಾತುಕತೆ. ನೂರಾರು ಪತ್ರಗಳ ವಿನಿಮಯ. ಎಲ್ಲದಕ್ಕೂ 'ಮಾಡ್ತೇವೆ' ಎನ್ನುವ ಷರಾದ ಹಿಂಬರಹ. ಇಲಾಖೆಗೆ ಹಳ್ಳಿಗರ ಅನುನಯಗಳು ದೌರ್ಬಲ್ಯವಾಗಿ ಕಂಡಿರಬೇಕು. ಚುನಾವಣೆ ಹತ್ತಿರವಾದಾಗ ಮಾತಿಗೆ ವಿಷಯವಾಗುವ ಸಮಸ್ಯೆಗಳು, ಬಳಿಕ  ಅಸಡ್ಡೆ-ಅನಾದರದೆಡೆಗೆ ಜಾರುತ್ತಿದ್ದುವು. 

2020ರಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಸಮನಿಸಿತು. ಇನ್ನು ಬಾಯ್ಮಾತು, ಮನವಿಗಳಲ್ಲ; ಹೋರಾಟಗಳ ಮೂಲಕ ಗಮನ ಸೆಳೆಯಲು 'ನಾಗರಿಕ ಹೋರಾಟ ಸಮಿತಿ' ರಚನೆಗೊಂಡಿತು. ಚುನಾವಣೆಯನ್ನು ಬಹಿಷ್ಕರಿಸೋಣ, 'ನೋಟಾ' ಮತದಾನ ಮಾಡೋಣ, ಉಗ್ರ ಪ್ರತಿಭಟನೆ ಹಮ್ಮಿಕೊಳ್ಳೋಣ.. ಹೀಗೆ ಹತ್ತಾರು ಸಲಹೆಗಳು. ಊರಿನ ವಿದ್ಯಾವಂತರಿಗೆ, ಹಿರಿಯರಿಗೆ ಪಕ್ಷಗಳಿಗಿಂತ 'ಹಳ್ಳಿಯ ಅಭಿವೃದ್ಧಿ' ಮಹತ್ವವಾಗಿ ಕಂಡಿತು. 'ಚುನಾವಣೆಯ ರಂಗಕ್ಕೆ ಧುಮುಕುವ ಮೂಲಕ ಪ್ರತಿಭಟನೆ ಮಾಡೋಣ', ಹಳ್ಳಿಯ ಒಕ್ಕೊರಲ ನಿರ್ಧಾರ.  ಹೀಗೆ ಹುಟ್ಟಿದ್ದೇ 'ಗ್ರಾಮ ಭಾರತ' ತಂಡ.

 ಗ್ರಾಮದ ಒಂದನೇ ವಾರ್ಡಿನ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಾಗ ಆಶ್ಚರ್ಯ ಪಟ್ಟವರು ಅಧಿಕ. ವಿದ್ಯಮಾನವನ್ನು ರಾಜಕೀಯ ಪಕ್ಷಗಳು ನಿರೀಕ್ಷಿಸಿರಲಿಲ್ಲ. 'ಇವರಿಂದ ಸಾಧ್ಯವೇ', ನಕ್ಕು ಗೇಲಿ ಮಾಡಿದರು. ಮನಚುಚ್ಚುವ ಉಡಾಫೆಯ ಮಾತುಗಳಿಗೆ ಹಳ್ಳಿ ಮನಸ್ಸುಗಳು ಅಧೀರರಾಗಲಿಲ್ಲ. ಪ್ರಬಲ ರಾಜಕೀಯ ಪಕ್ಷಗಳ ನಡುವೆ ಜೀಕುವುದು ದೊಡ್ಡ ಸವಾಲು. ಆರಂಭದಲ್ಲಿದ್ದ ಏಳೆಂಟು ಮಂದಿಯ ತಂಡವು ಸಶಕ್ತವಾಯಿತು. ಸದಸ್ಯರ ಸಂಖ್ಯೆ ಏರಿತು. ಪ್ರತಿ ಮನೆಗಳ ಭೇಟಿ. ಮನೆಯವರೊಂದಿಗೆ ಮನೆಯವರಾಗಿ ಮಾತುಕತೆ. ಊರಿನ ಅವಶ್ಯಕತೆಗಳನ್ನು ಮನದಟ್ಟು ಮಾಡುವ ಕೆಲಸಗಳು ನಡೆದುವು. ಇದು ನಮಗೋಸ್ಕರ ಹೋರಾಟ, ನಮ್ಮ ಹಳ್ಳಿಯ ಉದ್ಧಾರಕ್ಕಾಗಿ ಆಂದೋಳನ. ರಾಜಕೀಯ ಲಾಭಕ್ಕಲ್ಲ, - ಘೋಷಣೆಯು ಮನಸ್ಸುಗಳನ್ನು ಬಂಧಿಸಿದುವು.  

 ಯುವ ಪಡೆಯ ಹಿಂದೆ ಹಿರಿಯರ ಮಾರ್ಗದರ್ಶನವಿತ್ತು. ಅನೇಕರು ಕೂಲಿ ಕೆಲಸಗಳಿಗೆ ಹೋಗುವುದರಿಂದ ರಾತ್ರಿ ಸಮಯದಲ್ಲಿ ಸಭೆಗಳು ಜರುಗಿದುವು. ಕರೆಂಟ್ ಇಲ್ಲದಿದ್ದಾಗ ಮೊಬೈಲ್ ಲೈಟಿನ ಬೆಳಕಿನಲ್ಲಿ ಸಭೆಗಳಾದುವು. ಅಲ್ಲಿ ವಸ್ತುಸ್ಥಿತಿಯನ್ನು ಮನದಟ್ಟು ಮಾಡಲಾಯಿತು. ಮಧ್ಯೆ 'ಏನೋ ಗಿಮಿಕ್ ಮಾಡ್ತಾರೆ,' ಎಂದು ಹಂಗಿಸಿದರು. ವಾಟ್ಸಾಪ್ಪಿನಲ್ಲಿ ಸಂದೇಶಗಳು ಹರಿದಾಡಿದುವು. ಇವೆಲ್ಲಾ ತಂಡದ ಗಟ್ಟಿ ನಿರ್ಧಾರಗಳ ಮುಂದೆ ಮಂಕಾದುವು.

ಗ್ರಾಮ ಭಾರತದ ಹಳ್ಳಿ ದನಿಯು ತಾಲೂಕು ಅಲ್ಲ, ರಾಜ್ಯದಲ್ಲಿ ಸುದ್ದಿಯಾಯಿತು. ಹಳ್ಳಿಯ ಮೂಲಭೂತ ಸೌಕರ್ಯಗಳಿಗೆ ಅಪೇಕ್ಷಿಸಿ ಹೋರಾಟ ಮಾಡಿದಾಗ 'ನಾಟಕ'ವೆಂದು ಕರೆದರು. ಚುನಾವಣೆಯ ಪೂರ್ವದಲ್ಲಿ ಗೇಲಿಯಾಡಿದ್ದು ಒಳಿತೇ ಆಯಿತು. ಇಲ್ಲದಿದ್ದರೆ ಗ್ರಾಮ ಭಾರತವನ್ನು ಸಶಕ್ತವಾಗಿ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ನಿಜಕ್ಕೂ ಪ್ರತಿಭಟನೆಯ ಸಂಕೇತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಉದ್ದೇಶ ಇತ್ತಷ್ಟೇ ವಿನಾ ಗೆಲ್ಲಬೇಕೆಂಬ ನಿರೀಕ್ಷೆಯಾಗಲೀ, ಆಶಯವಾಗಲಿ ಇದ್ದಿರಲಿಲ್ಲ. ಆದರೆ ನಮ್ಮ ನಾಲ್ವರು ಅಭ್ಯರ್ಥಿಗಳು ವಿಜಯಿಯಾದರು. ಇದು ಹಳ್ಳಿಗೆ ಹಳ್ಳಿಗರೇ ತಂದಿತ್ತ ಮಾನ, ಮಹೇಶ್ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. 

ಚುನಾವಣೆ ಅಂದಾಗ ಆರ್ಥಿಕ  ಗಟ್ಟಿತನ ಬೇಕು. ನೀರಿನಂತೆ ಹಣ ಖರ್ಚು ಮಾಡಬೇಕು. ಹಿಂಬಾಲಕರನ್ನು ಸೇರಿಸಬೇಕು. ಜತೆಗೆ ಬಹುಪರಾಕ್ ಮಂದಿಯೂ ಬೇಕು. ಸಭೆ, ಸಮಾರಂಭಗಳು ಗೌಜಿಯಾಗಬೇಕು. ಧ್ವನಿವರ್ಧಕಗಳು ಆರ್ಭಟಿಸಬೆಕು. ಮಾಧ್ಯಮಗಳಲ್ಲಿ ಸುದ್ದಿಯಾಗಬೇಕು. ಇದು ಎಲ್ಲಾ ರಾಜಕೀಯ ಪಕ್ಷಗಳಲ್ಲೂ, ಮತದಾರರಲ್ಲೂ ಇರುವ ಮೈಂಡ್ಸೆಟ್. ನಾಲ್ಕು ಅಭ್ಯರ್ಥಿಗಳ ಚುನಾವಣೆಯ ಖರ್ಚು ಕೇವಲ 19600 ರೂಪಾಯಿ. ಊರಿನ ದಾನಿಗಳು ಭರಿಸಿದ್ದಾರೆ. ಐವತ್ತು ರೂಪಾಯಿಂದ ತೊಡಗಿ ಸಾವಿರದ ತನಕ ಹಣ ನೀಡಿದ್ದಾರೆ. ಎಲ್ಲರ ಹಾರೈಕೆ ಮತ್ತು ನಿರೀಕ್ಷೆಗಳಿಂದ ಚುನಾವಣೆಯಲ್ಲಿ ವಿಜಯಿಯಾಗಿದ್ದೇವೆ. - ಆಯ್ಕೆಗೊಂಡ ಪಂಚಾಯತ್ ಸದಸ್ಯೆ ಶಾರದಾ ಅವರ ಮನದ ಮಾತು.

ಮಳೆಗಾಲದ ದ್ವೀಪ

ಮೊಗ್ರವು ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದು. ಇಲ್ಲಿನ ಹಳ್ಳವು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಆಗ ಸುಮಾರು ಇನ್ನೂರು ಮನೆಗಳ ಸಂಪರ್ಕ ಕಡಿದು ಎರಡು ತಿಂಗಳು ದ್ವೀಪವಾಗುತ್ತದೆ. ವಿದ್ಯಾರ್ಥಿಗಳು ಶಾಲೆಗೆ ಬರುವಂತಿಲ್ಲ, ಕೂಲಿ ಶ್ರಮಿಕರು ದುಡಿಮೆಗೆ ಹೋಗುವಂತಿಲ್ಲ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವವರ ಪಾಡು ಹೇಳತೀರದು. ಬೆಳಿಗ್ಗೆ ಹಳ್ಳದ ನೀರು ಕಡಿಮೆಯಾಯಿತೆಂಬ ಖುಷಿ ಒಂದೆಡೆ. ಸಂಜೆ ಮಳೆಬಂದು ದಾಟಲಾಗದ ಸಂಕಟ ಮತ್ತೊಂದೆಡೆ. ಹಳ್ಳಕ್ಕೆ ಪಂಚಾಯತ್ ಹಾಕುವ ಅಡಿಕೆ ಮರದ ಕಾಲು ಸಂಕ(ಪಾಲ, ಕಿರುಸೇತುವೆ)ವೇ ಆಧಾರ. ಕಿರಿದಾದ ಸಂಕದಲ್ಲಿ ಉಸಿರು ಬಿಗಿ ಹಿಡಿದು ದಡ ಸೇರಬೇಕು. ಹಳ್ಳದ ನೆರೆಯು ಕಾರಣವಾಗಿ ವಿದ್ಯಾರ್ಥಿಗಳು ಶಾಲೆಯನ್ನು ಬದಲಾಯಿಸಿದ ಉದಾಹರಣೆಗಳಿವೆ. 

 ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಮತ್ತೆ ಕಾಲ್ಸಂಕ ಸದ್ದು ಮಾಡಿತು. ಪತ್ರಿಕೆಗಳು  ಸ್ಪಂದಿಸಿದುವು.  ವಾಹಿನಿಗಳಲ್ಲಿ ವಸ್ತುಸ್ಥಿತಿಗಳ ಚಿತ್ರಗಳು ಹರಿದಾಡಿದುವು. ವಿಧಾನಸೌಧವಲ್ಲ, ಪ್ರಧಾನಿ ಮೋದಿಯವರ ಕಚೇರಿ ತಲುಪಿತು. ಅಲ್ಲಿನ ಬಂದ ಹಿಮ್ಮಾಹಿತಿಗಳು ಕಡತ ಸೇರಿದುವು. ಸರಕಾರವನ್ನು ಅವಲಂಬಿಸದೆ ನಾವೇನಾದರೂ ಮಾಡಬಹುದಾ? ಊರಿನ ಯುವಕರ ಪ್ರಶ್ನೆ. ಗ್ರಾಮ ಭಾರತದ ಮಹೇಶರ ಕಿವಿಯರಳಿತು. 

ಸುಳ್ಯದ 'ಆಯಶ್ಶಿಲ್ಪ' ಯುವ ತಂತ್ರಜ್ಞ ಪತಂಜಲಿ ಭಾರದ್ವಾಜರನ್ನು ಭೇಟಿಯಾದರು. ಅರೆ ಶಾಶ್ವತ ಸೇತುವೆಗೆ ಒಂದೂವರೆ ಲಕ್ಷ ರೂಪಾಯಿಯ ನೀಲನಕ್ಷೆ ಸಿದ್ಧವಾಯಿತು. ಸ್ಥಳೀಯರಿಂದ ಆರ್ಧ ಭರಿಸಬಹುದೆನ್ನುವ ಅಪ್ಪಟ ಆಶ್ವಾಸನೆ. ಪರವೂರಿನಲ್ಲಿರುವ ಊರಿನ ಸಹೃದಯರಿಂದ ಮಿಕ್ಕುಳಿದ ಮೊತ್ತದ ಸಂಗ್ರಹಗಳ ನಿರೀಕ್ಷೆ. ಪರಿಣಾಮ, ಆಶ್ವಾಸನೆಗಳು ಅನುಷ್ಠಾನಗೊಂಡುವು. ಕಾಂಚಾಣವು ಹನಿ ಹನಿಯಾಗಿ ಕೈತುಂಬಿದುವು. ಒಂದೇ ತಿಂಗಳಲ್ಲಿ ಸೇತುವೆ ನಿರ್ಮಾಣಗೊಂಡು 2021 ಜುಲೈ 1ರಂದು ಸಂಚಾರಕ್ಕೆ  ಮುಕ್ತವಾಯಿತು. ಪತ್ರಿಕೆಗಳ ಮುಲಕ ಜಾಗೃತಿ ಮೂಡುತ್ತ ಬಂದ ಸೇತುವೆಯು ಪತ್ರಿಕಾ ದಿನಾಚರಣೆಯಂದೇ ಲೊಕಾರ್ಪಣೆಗೊಂಡುದು ಕಾಕತಾಳೀಯ ಮತ್ತು ಯೋಗಾಯೋಗ.

ಇನ್ನು ಮಳೆಗಾಲದಲ್ಲಿ ನಮ್ಮೂರು ದ್ವೀಪವಾಗುವುದಿಲ್ಲ. ವಿದ್ಯಾರ್ಥಿಗಳು ಶಾಲೆ ಬಿಡುವುದಿಲ್ಲ. ಮಕ್ಕಳ ಹೆತ್ತವರ ಭಯ ದೂರವಾಯಿತು. ಮೊದಲಾದರೆ ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಹಳ್ಳದಲ್ಲೇ ಆಫ್ ಆಗಿ, ಪುನಃ ಸ್ಟಾರ್ಟ್  ಆಗದೆ ಒದ್ದಾಡಿದ್ದುಂಟು. ದ್ವಿಚಕ್ರದ ಬ್ರೇಕ್ಲೈನರನ್ನು ಆಗಾಗ್ಗೆ ಬದಲಾಯಿಸಲು ಖರ್ಚು ಬರುತ್ತಿತ್ತು. ಇವೆಲ್ಲವುಗಳನ್ನು ಸೇತುವೆ ಮುಕ್ತಗೊಳಿಸಿತು, ಎನ್ನುವಾಗ ಸ್ಥಳೀಯ ಲಕ್ಷ್ಮೀಶ ಗಬ್ಲಡ್ಕರ ಕಣ್ಣಂಚಲ್ಲಿ ಆನಂದಭಾಷ್ಪ. ಚಳುವಳಿಯಲ್ಲಿ ಮಹೇಶರ ಜತೆ ಇವರದು ದೊಡ್ಡ ಹೆಜ್ಜೆ.

ನೆಟ್ವರ್ಕ್ ಒದ್ದಾಟ-ಗುದ್ದಾಟ

ತಂತ್ರಜ್ಞಾನಗಳು ಬೆರಳಿನ ತುದಿಯಲ್ಲಿವೆ. ಹಳ್ಳಿಗಳು ನೆಟ್ವರ್ರ್ಕ  ಸಿಗದೆ ಒದ್ದಾಡುತ್ತಿವೆ. ಲಾಕ್ಡೌನಿನಲ್ಲಿ ದೂರದ ಬೆಟ್ಟವೇರಿ, ಮರದ ಮೇಲೆ ಅಟ್ಟಳಿಗೆ ನಿರ್ಮಿಸಿ  ಆನ್ಲೈನ್ ತರಗತಿಗಳಿಗೆ ಕಿವಿಯಾಗಬೇಕು. ಪಾಠ ಆಗುತ್ತಿರುವಾಗ ನೆಟ್ವರ್ಕ ಕಡಿತಗೊಂಡು ಪಾಠ ತಪ್ಪಿದ ದಿನಮಾನಗಳು ಅಧಿಕ.  'ವರ್ಕ್  ಫ್ರಂ ಹೋಂ' ಮಾಡುವವರಿಗೆ ನೆಟ್ ಅವಶ್ಯ. ಇಲ್ಲಿ ಇಂಜಿನಿಯರಿಂಗ್, ಪದವಿ ಓದುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಹಳ್ಳಿಯೆನ್ನುವ ತಾತ್ಸಾರ ಬಿಡಿ. ಮೂಲ ಸೌಕರ್ಯ ಒದಗಿಸಿ ಬಿಡಿ. ನಮಗೂ ಕನಸುಗಳಿವೆ. ನಾವೇನು ತಪ್ಪು ಮಾಡಿದ್ದೇವೆ? ವಿಷಾದಗಳ ಪ್ರಶ್ನೆಗಳನ್ನು ಎಸೆಯುತ್ತಾರೆ, ಶಮಿತಾ ಹಾಗೂ ಉಜಿತ್ಶ್ಯಾಂ. ಯುವ ಮನಸ್ಸುಗಳ ನೋವು, ಸಂಕಟಗಳು ರಾಜಧಾನಿಗೆ ಎಂದು ಕೇಳಿಸಿತು? 

ನೆಟ್ವರ್ಕ್  ಒದಗಿಸುವಲ್ಲಿ ಗ್ರಾಮ ಭಾರತ, ಊರಿನ ಯುವ ಶಕ್ತಿಯ ಯತ್ನವು ಫಲಸಿದೆ. ಹೇಗೆ? ಇದು ಕೇಂದ್ರ ಸರಕಾರದ 'ಪಿ.ಎಂ.ವಾಣಿ' ಯೋಜನೆ. ಟೆಲಿಕಾಂ ಇಲಾಖೆಯ ಸಹಕಾರದೊಂದಿಗೆ ಸಾರ್ವಜನಿಕರಿಗೆ ವೈಫೈ ಒದಗಿಸುವ ಮೂಲೋದ್ದೇಶ. ವಿದ್ಯಾರ್ಥಿಗಳ, ಸಾರ್ವಜನಿಕರ ಒದ್ದಾಟಕ್ಕೆ ಸುಳ್ಯದ ಸಾಯಿರಂಜನ್ ಕಲ್ಚಾರು, ಸದಾಶಿವ ಕೊಡಪ್ಪಾಲ, ಶ್ರೀನಿವಾಸ ಉಬರಡ್ಕ ಮರುಗಿದರು. ವೈಫೈ ಸಂಪರ್ಕಕ್ಕಾಗಿ ಇಲಾಖೆಯಿಂದ ಅನುಮತಿ ಪಡೆದರು. ಬಿಎಸ್ಎನ್ಎಲ್ನಿಂದ ಏರ್ಫೈಬರ್ ಮೂಲಕ ನೆಟ್ ಪಡೆದು, ಪ್ರತ್ಯೇಕ ಡಿವೈಸ್ ಮೂಲಕ ವೈಫೈ ಒದಗಿಸುವುದು. ಸ್ವಲ್ಪ ಖರ್ಚು ಬೀಳುವ ಕೆಲಸವಾದ್ದರಿಂದ ವೈಫೈಗೆ ಶುಲ್ಕವಿದೆ. ಕಮಿಲ ಸುತ್ತಮುತ್ತ ಸುಮಾರು ಎರಡು ಸಾವಿರ ಚದರ ಅಡಿ ಸುತ್ತಳತೆಯಲ್ಲಿ ಸಿಗ್ನಲ್ ಲಭ್ಯ. ಅಗತ್ಯ, ತುರ್ತು ವೈಫೈ ಅಪೇಕ್ಷಿತರಿಗೆ ಅನುಕೂಲವಾಗಿದೆ. ಎಂದರು ಮಹೇಶ್.

ಬಾಲ್ಯದಲ್ಲಿ ಬದುಕಿನ ಜಂಜಾಟ, 'ಇಲ್ಲ'ಗಳೊಂದಿಗೆ ಸವೆಯುವ ಜೀವನ, ಗೊಣಗಾಟಗಳನ್ನು  ಕೇಳುತ್ತಾ ಬೆಳೆದ ಯುವಕರು ಮುಂದೆ ಉನ್ನತ ವಿದ್ಯಾಭ್ಯಾಸಕ್ಕೆ ಅಥವಾ ಉದ್ಯೋಗವನ್ನರಸಿ ನಗರವನ್ನು ಸೇರುತ್ತಾರೆ. ಒಂದು ಕ್ಲಿಕ್ಕಿನಲ್ಲಿ ವಿಶ್ವವನ್ನು ತೋರಿಸುವ ಅಲ್ಲಿನ ಬದುಕಿಗೆ ಒಗ್ಗಿಕೊಳ್ಳುತ್ತಾರೆ. ತಮ್ಮ ಬಾಲ್ಯವನ್ನೆಣಿಸಿ, ಮತ್ತೆ ಹಳ್ಳಿಯ 'ಇಲ್ಲ'ಗಳು ನೆನಪಾಗಿ ಹಳ್ಳಿಯ ಒಲವು ಕಡಿಮೆಯಾಗುತ್ತದೆ. ಹಳ್ಳಿ ಪ್ರೀತಿ ಮತ್ತು ಕೃಷಿ ಪ್ರೀತಿಯು ಬಾಲ್ಯದಲ್ಲಿ ಗಟ್ಟಿಯಾಗಬೇಕಾದರೆ ಆಧುನಿಕ ತಂತ್ರಜ್ಞಾನಗಳ ಕನಿಷ್ಠ ಒದಗಣೆ ಹಾಗೂ ರಸ್ತೆ, ನೀರು, ಸಾರಿಗೆಯಂತಹ ವ್ಯವಸ್ಥೆಗಳು ಸಜೀವವಾಗಿರಬೇಕು. ಹಳ್ಳಿ ಸುದೃಢವಾದರೆ ತಾನೆ ದೇಶ ನಗುವುದು! 

ಸಮುದಾಯ ಸುಖ

 ವಾರ್ಡಿನ  ಹದಿನೆಂಟು ಮನೆಗಳಲ್ಲಿ ಕೊರೊನಾ ಸೋಂಕಿತರಿದ್ದರು, ಪಾಸಿಟಿವ್ ಅಂದಾಗ ಜನರು ದೂರ ಓಡಿ ಹೋಗುವುದು, ಮುಖ ಸಿಂಡರಿಸುವುದು ಸೋಂಕು ತಂದಿತ್ತ ಮನಸ್ಥಿತಿ. ಗ್ರಾಮ ಭಾರತದ ಸದಸ್ಯರು ಸೋಂಕಿತರ ಹಾಗೂ ಸೋಂಕಿನಿಂದ ಮುಕ್ತರಾದವರ ಮನೆಗೆ ತೆರಳಿ ಮಾನಸಿಕ ಧೈರ್ಯವನ್ನು ತುಂಬಿದರು. ದಾನಿಗಳ ನೆರವಿನಿಂದ ಜೀನಸು, ಔಷಧಗಳನ್ನು ಒದಗಿಸಿದರು. ಅವರ ಅಗತ್ಯಗಳಿಗೆ ಸ್ಪಂದಿಸಿದರು.

 ಸ್ಥಳೀಯ ದಲಿತ ಕಾಲನಿಯ ನಿವಾಸಿಗಳು ಕುಡಿಯುವ ನೀರಿಗಾಗಿ ಕಷ್ಟಪಡುತ್ತಿದ್ದರು. ಹತ್ತಿರದ ಕೆರೆ, ಬಾವಿಗಳನ್ನು ಅವಲಂಬಿಸಬೇಕಾಗಿತ್ತು. ವಿಚಾರವು ಪತ್ರಿಕೆಯಲ್ಲಿ ಪ್ರಕಟವಾಯಿತು. ಪಂಚಾಯತ್ ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು. ಪರಿಣಾಮ, ಪಂಚಾಯತ್ ಕೊಳವೆ ಬಾವಿಯನ್ನು ಕೊರೆದು ನೀರಿನ ಬವಣೆಯನ್ನು ತೊಲಗಿಸಿತು. ಇವೆಲ್ಲದರ ಹಿಂದಿನ ಗ್ರಾಮ ಭಾರತದ ಅಜ್ಞಾತ ಶ್ರಮ ಗುರುತರ.

ರಸ್ತೆ ದುರಸ್ತಿಗಾಗಿ ಹಳ್ಳಿ ಕಾಯುತ್ತಿದೆ. ಸಂಚಾರದ ಸುಗಮತೆಗಾಗಿ ನಾಲ್ವರು ಪಂಚಾಯತ್ ಸದಸ್ಯರು ತಮಗೆ ಸಿಗುವ ಕಿಂಚಿತ್ ಮಾಸಿಕ ಸಂಭಾವನೆಯನ್ನು ಒಟ್ಟುಸೇರಿಸಿ ಮಾರ್ಗದ ಹೊಂಡ-ಗುಂಡಿಗಳನ್ನು ಮುಚ್ಚುವ ಯೋಚನೆ ಮಾಡಿದ್ದಾರೆ!

ಕನಸು ನನಸಾದ ಕ್ಷಣ

 ಪಕ್ಷದ ಬ್ಯಾನರ್ ಇಲ್ಲದೆ, ಇಚ್ಛಾಶಕ್ತಿಯ ಮತ್ತು ಯುವ ಶಕ್ತಿಯ ಬಲದೊಂದಿಗೆ ರೂಪುಗೊಂಡ ಗ್ರಾಮ ಭಾರತ ತಂಡದ ಕನಸು ಇದೆಯಲ್ಲಾ ಅದು ಗಾಂಧೀಜಿಯವರ ಕಲ್ಪನೆಗೆ ಸರಿಹೊಂದುತ್ತದೆ.  ನಮ್ಮದು ಆಶಾವಾದದ ಕಣ್ಣುಗಳಿಗೆ, ಮನಸ್ಸುಗಳಿಗೆ ಬೆಳಕಾಗಬೇಕೆಂಬ ಕನಸು.  ಬೇರೆ ಯಾವ ಉದ್ದೇಶವಿಲ್ಲ. ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಶುರುವಾದ ಹೋರಾಟವನ್ನು ರಾಜಕೀಯ ನಾಯಕರು 'ನಾಟಕ' ಎಂದು ಕರೆದರು. ಅದು ನಾಟಕ ಅಲ್ಲ, ಬದುಕಿನ ಅಸಲಿ ಎಂದು ಗ್ರಾಮಸ್ಥರು ತೋರಿಸಿಕೊಟ್ಟರು. - ಮಹೇಶರ ಕಣ್ಗಳಲ್ಲಿ ಸಾರ್ಥಕ್ಯದ ಮಿಂಚು.

ರಾಜಕೀಯ ಪಕ್ಷಗಳ ಮೇಲಾಟ, ಅಜ್ಞಾತ ಹಳ್ಳಿ ರಾಜಕೀಯ, ವೈಯಕ್ತಿಕ ನಿಂದೆ, ಸುಳ್ಳು ಸುದ್ದಿಗಳು.. ಇವೆಲ್ಲವನ್ನೂ ಮೀರಿ ತಾಲೂಕು ಬಿಡಿ, ಪಂಚಾಯತ್ ಮಟ್ಟದ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಹಸ. ಸ್ಪರ್ಧಿಸಿ ವಿಜಯಿಯಾಗುವುದು ಹಿಮಾಲಯ ಏರಿದಷ್ಟು ಕಠಿಣ. ಮೊಗ್ರದ ಗ್ರಾಮಸ್ಥರು ಪಕ್ಷಾತೀತವಾಗಿ ನಾಲ್ವರನ್ನು ಆರಿಸಿದ್ದಾರೆ. ಯಶದ ಹಿಮಾಲಯ ಏರಿದ್ದಾರೆ. ಉಸ್ಥಾಪಿತ ರಾಜಕೀಯ ಪಕ್ಷಗಳ ಪ್ರಖರತೆಯನ್ನು ತಾಳಿಕೊಂಡು 'ಗ್ರಾಮ ಭಾರತ' ಧ್ವಜ ಊರಿದ್ದಾರೆ. ಇದಲ್ವಾ, ನಿಜವಾದ ಅಭಿವೃದ್ಧಿ.

---------------------------------------------------------------------------------------------------------------------------------

ಲೀಡರ್ಗಳ ಸೃಷ್ಟಿ ಇಲ್ಲಾಗುತ್ತಿದೆ!

 ಮಹೇಶ್ ಪುಚ್ಚಪ್ಪಾಡಿ ಕಮಿಲ ನಿವಾಸಿ. ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಪತ್ರಕರ್ತರಾಗಿ ಅನುಭವಿ. ಮೂಲತಃ ಕೃಷಿಕ. ಹಳ್ಳಿಯ ಆಂದೋಳನದ ತಂಗಾಳಿಯು ಮಾಧ್ಯಮ ಲೋಕದಲ್ಲಿ ಪಸರಿಸಲು ಕಾರಣರು. ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಹಳ್ಳಿ ಮನಸ್ಸುಗಳನ್ನು ಕಟ್ಟಿದರು. ಇದು ವರ್ತಮಾನ ಭಾರತದ ಅಪೇಕ್ಷೆ ಹಾಗೂ ಮಾದರಿ ಕೂಡಾ. ಮಹೇಶ್ ಹೇಳುತ್ತಾರೆ, ಗ್ರಾಮ ಭಾರತ ತಂಡಕ್ಕೆ ಪದಾಧಿಕಾರಿಗಳಿಲ್ಲ. ಬೋರ್ಡ್ ಇಲ್ಲ. ವಿಸಿಟಿಂಗ್ ಕಾರ್ಡ್ ಇಲ್ಲ. ನಾನು ಲೀಡರ್ ಅಲ್ಲ. ಲೀಡರ್ಗಳನ್ನು ಸೃಷ್ಟಿ ಮಾಡುವ ಕೆಲಸ ಇಲ್ಲಿ ಆಗುತ್ತಿದೆ. ಕುರ್ಚಿ, ಅಧಿಕಾರ, ಪ್ರತಿಷ್ಠೆಗಾಗಿ ಪೈಪೋಟಿ ನಡೆಯುತ್ತಿರುವ ಕಾಲಘಟ್ಟದಲ್ಲಿ ಮಹೇಶರ ಮಾತಿನಲ್ಲಿ ಅತಿಶಯೋಕ್ತಿ, ಉತ್ಪ್ರೇಕ್ಷೆ ಕಂಡರೆ ಅದು ಅವರ ಸಮಸ್ಯೆಯಲ್ಲ.

ಚಿತ್ರ ತಂದ ಸುದ್ದಿ

ಊರಿನ ಬಳ್ಳಕ್ಕದ ಗುಡ್ಡ. ರಸ್ತೆ ಪಕ್ಕ ಹತ್ತಾರು ವಿದ್ಯಾರ್ಥಿಗಳ ಕೈಯಲ್ಲಿ ಸ್ಮಾರ್ಟ್ ಫೋನ್. ಮಳೆಯೊಂದಿಗೆ ಗಾಳಿ ಚೆನ್ನಾಗಿ ಬೀಸುತ್ತಿತ್ತು. ಹತ್ತರ ವಿದ್ಯಾರ್ಥಿ ಬಿಂದು ಆನ್ಲೈನ್ ತರಗತಿಯಲ್ಲಿದ್ದಾಳೆ. ನೋಟ್ಸ್ ಡೌನ್ಲೋಡ್ ಆಗದೆ ಒದ್ದಾಡುತ್ತಿದ್ದಾಳೆ. ಮಗಳು ಮಳೆಯಿಂದ ಒದ್ದೆಯಾಗದಂತೆ ತಂದೆ ನಾರಾಯಣ ಗೌಡರು ಛತ್ರಿ ಹಿಡಿದು ರಕ್ಷಿಸುತ್ತಿದ್ದಾರೆ. ನೆಟ್ ಕೈಕೊಟ್ಟಾಗ ಪಾಠ ಅರ್ಧದಲ್ಲೇ ನಿಲ್ಲುತ್ತದೆ. ಅವಳ ಕಣ್ಣು ಆದ್ರ್ರವಾಗುತ್ತದೆ.

 ಮಹೇಶರ ಕ್ಯಾಮೆರಾದಲ್ಲಿ ಚಿತ್ರವು ಸೆರೆಯಾಗಿ ಜಾಲತಾಣದಲ್ಲಿ ಹರಿದಾಡಿತು. ರಾಜ್ಯ ಶಿಕ್ಷಣ ಮಂತ್ರಿಗಳ ಗಮನ ಸೆಳೆಯಿತು. ರಾಷ್ಟ್ರ ಮಟ್ಟದ ಮಾಧ್ಯಮಗಳು ಪ್ರಸಾರ ಮಾಡಿದುವು. ಒಂದೇ ದಿನದಲ್ಲಿ ಬಿಂದು ಸುದ್ದಿಯಾದಳು. ಸುದ್ದಿಯು ಅವಳಿಗೆ ಖುಷಿ ತಂದಿಲ್ಲ. ಆದರೆ ಹಳ್ಳಿಯ ದನಿಗೆ ಮಾಧ್ಯಮಗಳು ಗೌರವ ನೀಡಿದುವು. ಇದು ಬಿಂದು ಒಬ್ಬಳ ಕತೆಯಲ್ಲ. ಕನ್ನಾಡಿನ ನೂರಾರು ಹಳ್ಳಿಗಳ ಕತೆ-ವ್ಯಥೆ. ದೇವರನ್ನು ಹುಡುಕುವಂತೆ ನೆಟ್ವರ್ಕ್ ಹುಡುಕುವ ಯುವ ಮನಸ್ಸುಗಳ ತುಮುಲ ಮಾತಾಗುವುದಿಲ್ಲ.