ಹೆಚ್.ಜೆ.ಪದ್ಮರಾಜು - ತುಮಕೂರು ಸನಿಹದ ತೋವಿನಕೆರೆಯವರು. ನ್ಯೂಸ್ ಏಜೆಂಟ್, ಪತ್ರಕರ್ತ, ಕೃಷಿಕ. ಎಲ್ಲಕ್ಕೂ ಹೆಚ್ಚಾಗಿ 'ಮಾಧ್ಯಮ ಮಿತ್ರ'. ತೋವಿನಕೆರೆ ಸುತ್ತಮುತ್ತ ನಡೆಯುವ ಬಹುತೇಕ ಕಾರ್ಯಕ್ರಮಗಳ ಹಿಂದೆ ಪದ್ಮರಾಜು - ಪದ್ಮಣ್ಣ - ಇದ್ದೇ ಇರುತ್ತಾರೆ.
ಮುಖ್ಯ ಅತಿಥಿಗಳನ್ನು ಗೊತ್ತು ಮಾಡುವಲ್ಲಿಂದ ಶಾಮಿಯಾನ ಹಾಕುವ ತನಕದ ನೇಪಥ್ಯ ಕೆಲಸಗಳಿಗೆ ಇವರೇ ಸೂತ್ರಧಾರಿ. ಮಾಧ್ಯಮದ ಮಂದಿಯನ್ನು ಆಹ್ವಾನಿಸಿ, ಅದರ ವರದಿ ಪತ್ರಿಕೆಯಲ್ಲಿ ಬೆಳಕು ಕಂಡಾಗಲೇ ವಿಶ್ರಾಂತಿ. ಹಾಗಾಗಿ ಈ ಊರಿನಲ್ಲಿ ಪದ್ಮಣ್ಣ ಇಲ್ಲದೆ ಕಾರ್ಯಕ್ರಮಗಳಿಲ್ಲ!
ಮಾಧ್ಯಮಗಳಲ್ಲಿ ಬರುವ ಕುತೂಹಲದ ಮಾಹಿತಿಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಾಗಿ ಪದ್ಮಣ್ಣನ ಫೋನ್ ಬಂದರೆ, ಏನಾದರೊಂದು ಹೊಸ ಸುದ್ದಿ ಇದ್ದೇ ಇರುತ್ತದೆ. ಎಲ್ಲಾ ವಾಹಿನಿಗಳ ಪ್ರತಿನಿಧಿಗಳೊಂದಿಗೆ ನಿಕಟ ಸಂಪರ್ಕ.
ತೋವಿನಕೆರೆ ಸುತ್ತುಮುತ್ತಲಿನ ಪ್ರದೇಶದ ಸುಮಾರು ಎಪ್ಪತ್ತಕ್ಕೂ ಮಿಕ್ಕಿ ಕೃಷಿ-ಗ್ರಾಮೀಣ ಯಶೋಗಾಥೆಗಳು ಬೇರೆ ಬೇರೆ ವಾಹಿನಿಗಳಲ್ಲಿ ಪ್ರಸಾರವಾಗಿರುವುದರ ಹಿಂದೆ ಪದ್ಮಣ್ಣನ ಕಾಣದ ಕೈಯಿದೆ. ಪ್ರಸಾರವಾಗುವ ದಿನಾಂಕಗಳನ್ನು ತಿಳಿದುಕೊಂಡು ಆತ್ಮೀಯರಿಗೆ ರವಾನಿಸುತ್ತಾರೆ. ಬಿತ್ತರದ ಬಳಿಕ, 'ಕಾರ್ಯಕ್ರಮ ನೋಡಿದ್ರಾ, ಹೇಗಿತ್ತು ಸಾರ್, ಹೇಗಾಗ್ಬೇಕಿತ್ತು' ಎಂಬ ಫೀಡ್ಬ್ಯಾಕ್ ಕೇಳುತ್ತಾರೆ.
ಪತ್ರಿಕಾವೃತ್ತಿ, ಕೃಷಿಗೆ ಮೊದಲ ಪ್ರಾಶಸ್ತ್ಯ. ಸಮಯ ಹೊಂದಿಸಿಕೊಂಡು ಇತರ ಸಾಮಾಜಿಕ ಕೆಲಸ. ಇದಕ್ಕೆಲ್ಲಾ ಕೈಯಿಂದಲೇ ವೆಚ್ಚ ಮಾಡುತ್ತಾರೆ. 'ಅವನಿಗೇನೋ ಆದಾಯ ಇದೆ. ಇಲ್ದಿದ್ರೆ ಯಾಕೆ ಆ ಕೆಲಸ ಮಾಡ್ತಾನೆ' ಎನ್ನುವ ಟೀಕೆ. 'ಜನ ಎಲ್ಲಿಯ ವರೆಗೆ ದುಡ್ಡಿಗೆ ಮಹತ್ವ ಕೊಡ್ತಾರೋ; ಅಲ್ಲಿಯವರೆಗೆ ಶ್ರಮ, ಸರ್ವೀಸಿಗೆ ಬೆಲೆಯಿಲ್ಲ ಸಾರ್' ಎಂದು ನೊಂದುಕೊಳ್ಳುತ್ತಾರೆ.
ತೋವಿನಕೆರೆಯ ಮಹಿಳಾ ಸ್ವ-ಸಹಾಯ ಸಂಘಗಳ ರಚನೆಯಲ್ಲಿ ಪದ್ಮಣ್ಣನ ಪಾತ್ರ ಗುರುತರ. ಸ್ತ್ರೀ-ಶಕ್ತಿ ಸಂಘಗಳ ಸಮಾವೇಶ, ಮೌಲ್ಯವರ್ಧಿತ ಉತ್ಪನ್ನ ತರಬೇತಿ, ಸಾವಯವ ತೋಟ ಭೇಟಿ, ಕೃಷಿಕರಿಗೆ ಸಂಮಾನ, ವಿಶ್ವಪರಿಸರ ದಿನಾಚರಣೆ-ಈ ಎಲ್ಲಾ ಕಾರ್ಯಕ್ರಮಗಳ ಸಂಪನ್ನತೆಯ ಹಿಂದಿನ ಶಕ್ತಿ. ತೆಂಗು, ಅಡಿಕೆ, ವೆನಿಲ್ಲಾ ಮೊದಲಾದ ಕೃಷಿಗಳ ಬಗ್ಗೆ ಇವರ ತೋಟವೇ ಡೆಮೋ ಸೆಂಟರ್.
ಪದ್ಮಣ್ಣನ ಜೋಳಿಗೆಯಲ್ಲಿ ವಿವಿಧ ಕೃಷಿ ಪತ್ರಿಕೆ ಗಳಿರುತ್ತವೆ. ಚಂದಾ ದಾಖಲಿಸುವುದು ಆಸಕ್ತಿಯ ವಿಚಾರ. ಕಳೆದ ಎರಡೂವರೆ ದಶಕಗಳಿಗೂ ಮಿಕ್ಕಿ ಅಡಿಕೆ ಪತ್ರಿಕೆಯ ಹೆಮ್ಮೆಯ ಏಜೆಂಟರು.
29-1-2023ರಂದು ಜರುಗಿದ ಅಡಿಕೆ ಪತ್ರಿಕೆಯ 35ರ ಸಂಭ್ರಮದಲ್ಲಿ ನಮ್ಮ 'ಪದ್ಮಣ್ಣ'ನಿಗೆ ಗೌರವ.