Monday, January 8, 2024

ದೇಶವಾಸಿಗಳು ಸೈನಿಕರನ್ನು ಗೌರವಿಸಬೇಕು - ಶಂಕರನಾರಾಯಣ ಹೊಳ್ಳ

 ಕುಂಬಳೆ ಸನಿಹದ ಎಡನಾಡು ಸೂರಂಬೈಲು ನಿವಾಸಿ ಶಂಕರನಾರಾಯಣ ಹೊಳ್ಳರು ನಿನ್ನೆ (7-1-2024) ವಿಧಿವಶರಾದರು. ಅವರು ನಿವೃತ್ತ ಸೇನಾನಿ, ಕೃಷಿಕರಾಗಿದ್ದರು. ಅವರ ಪತ್ನಿ ಸೀತಾ 14-8-2018ರಂದು ಮರಣಿಸಿದ್ದರು. ಇಬ್ಬರು ಪುತ್ರರು. ರವೀಂದ್ರನಾಥ ಹಾಗೂ ರಾಮಚಂದ್ರ. ಪರಿಣಿತ ಹಾಗೂ ಶೈಲಜಾ ಸೊಸೆಯಂದಿರು.

ಹೊಳ್ಳರ ಬದುಕಿನಲ್ಲಿ ಢಾಂಬಿಕತೆ ಇದ್ದಿರಲಿಲ್ಲ. ನಂಬಿದ ತತ್ವಗಳಲ್ಲಿ ರಾಜಿಯಿಲ್ಲದ ನಿಷ್ಠುರತೆ. ನಿಜದ ನೇರಕ್ಕೆ ನಡೆವ ಜಾಯಮಾನ. ಒಂದೆರಡು ವರುಷದ ಅಸ್ವಸ್ಥತೆಯ ಪೂರ್ವದಲ್ಲಿ ಹೊಳ್ಳರು ಅಂತರ್ಮುಖಿಯಾಗಿದ್ದದ್ದೇ ಹೆಚ್ಚು. ಹಾಗೆಂದು ಮಾತಿಗಿಳಿದರೆ ಅನುಭವಗಳ ಗೊಂಚಲು. ತರ್ಕಗಳ ಸಾಲು ಸಾಲು!

ಹದಿನೈದು ವರುಷ ಭಾರತದ ಸೇನೆಯನ್ನು ಪ್ರತಿನಿಧಿಸಿದ್ದಾರೆ. ಸೊಸೆ ಪರಿಣಿತಾ ರವಿಯವರು ಶಂಕರನಾರಾಯಣ ಹೊಳ್ಳರ (ಎಸ್.ಎನ್.ಹೊಳ್ಳ) ಮಿಲಿಟರಿ ಬದುಕಿಗೆ 'ಯೋಧಗಾಥೆ' ಕೃತಿಯ ಮೂಲಕ ಬೆಳಕು ಹಾಕಿದ್ದರು. ಕೃತಿಯು 2020ರಲ್ಲಿ ಪ್ರಕಟವಾಗಿತ್ತು. ಕಾಸರಗೋಡಿನ ಸಿಂಪರ ಪ್ರಕಾಶನವು ಕೃತಿಯನ್ನು ಪ್ರಕಾಶಿಸಿತ್ತು.

'ಯೋಧಗಾಥೆ'ಯಲ್ಲಿ ಪ್ರಕಟವಾದ ನನ್ನ ಚಿಕ್ಕ ಸಂದರ್ಶನ ಬರಹವಿದು. ಹೊಳ್ಳರಿಗಿದು ನುಡಿ ನಮನ.

* ಸೇನೆಯಿಂದ ನಿವೃತ್ತರಾದ ಬಳಿಕ ಕೃಷಿಯಲ್ಲಿ ತೊಡಗಿಕೊಂಡ ಬಗೆ?

                ನಾನು ಬಾಲ್ಯದಿಂದಲೇ ಕೃಷಿಯಲ್ಲಿ ಆಸಕ್ತ. ಸೇನೆಯಿಂದ ನಿವೃತ್ತನಾದ ಬಳಿಕ ಸ್ವಂತದ್ದಾದ ತೋಟ ಮಾಡುವ ಕನಸಿತ್ತು. ಅದರಲ್ಲೂ ತೆಂಗು, ಅಡಿಕೆಯತ್ತ ಒಲವು ಅಧಿಕ. ಕುಳದಲ್ಲಿ ಜಾಗ ಖರೀದಿಸುವಾಗ ಗದ್ದೆ ಹೊರತು ಮತ್ತೆಲ್ಲಾ ಗುಡ್ಡ ಪ್ರದೇಶ. ಇಲ್ಲಿದ ಗಿಡಗಂಟೆಗಳನ್ನು ಕಡಿದು ಸಮತಟ್ಟು ಮಾಡಿ ಕೃಷಿಗೆ ಅನುಕೂಲವಾಗುವಂತೆ ಮಾಡಿದೆ. ಕೆರೆಯನ್ನು ದುರಸ್ತಿ ಪಡಿಸಿದೆ.

                ಆಗ ಸುತ್ತೆಲ್ಲಾ ಭತ್ತದ ಕೃಷಿ ಮಾಡುವ ಕೃಷಿಕರ ಸಂಖ್ಯೆ ಹೆಚ್ಚಾಗಿತ್ತು. ತಾವು ಬೆಳೆದ ಅನ್ನವನ್ನು ವರುಷಪೂರ್ತಿ ಉಣ್ಣುವುದು ಗೌರವ. ಬರಬರುತ್ತಾ ಕೂಲಿಯಾಳುಗಳ ಸಮಸ್ಯೆ ಕಾಡಿತು. ಸಕಾಲಕ್ಕೆ ಕೆಲಸಗಳಾಗುತ್ತಿರಲಿಲ್ಲ. ಅಲ್ಲದೆ ಪೈರುಗಳನ್ನು ಕಾಡು ಪ್ರಾಣಿಗಳು ಆಪೋಶನ ಮಾಡುತ್ತಿದ್ದುವು. ಸುಮಾರು ಇಪ್ಪತ್ತೈದು ವರುಷಗಳ ಕಾಲ ಭತ್ತದ ಬೇಸಾಯ ಮಾಡಿ 'ಇನ್ನು ಆಗದು' ಎಂದಾವಾಗ ಬಿಟ್ಟುಬಿಟ್ಟೆ.

                ಮಧ್ಯೆ ಅಡಿಕೆ, ತೆಂಗು ಕೃಷಿಯನ್ನು ಅಭಿವೃದ್ಧಿ ಪಡಿಸಿದೆ. ಒಂದು ಕೊಳವೆಬಾವಿಯನ್ನು ಕೊರೆಸಿ ನೀರಿನ ಸಂಪತ್ತನ್ನು ಹೆಚ್ಚಿಸಿಕೊಂಡೆ. ಆದರೂ ಎಪ್ರಿಲ್-ಮೇ ತಿಂಗಳಾಗುವಾಗ ನೀರಿಗೆ ತತ್ವಾರವಾಗುತ್ತಿದೆ. ಪ್ರತಿ ವರುಷವೂ ಅಂತರ್ಜಲ ಪಾತಾಳಕ್ಕಿಳಿಯುತ್ತಿದ್ದು ನೀರಿನ ಸಮಸ್ಯೆ ಉಂಟಾಗುತ್ತಿದೆ. ನನಗೆ ಮಾತ್ರವಲ್ಲ ಸುತ್ತಲಿನ ಎಲ್ಲರಿಗೂ ನೀರಿನ ಸಮಸ್ಯೆಯನ್ನು ಯೋಚಿಸುವಾಗ ಭವಿಷ್ಯದಲ್ಲಿ ತೊಂದರೆಯಾದೀತು ಎನ್ನುವ ಭಯವೂ ಕಾಡುತ್ತದೆ.

                ಕೃಷಿಯಲ್ಲಿ ನಾನು ತೃಪ್ತ. ಒಂದು ವರುಷ ಕೃಷಿ ಕೈಕೊಟ್ಟಿತು ಎಂದಿಟ್ಟುಕೊಳ್ಳೋಣ. ಮುಂದಿನ ವರುಷ ಸರಿದೂಗಿಸಬಹುದು. ಭೂಮಿಗೆ ಶಕ್ತಿಯಿದೆ. ಕೃಷಿಯಲ್ಲಿ ಸಂಪತ್ತಿಗಿಂತಲೂ ಮುಖ್ಯವಾಗಿ ಬೇಕಾಗಿರುವುದು ಉಮೇದು. ನಾನು ನಗರದಲ್ಲಿ ಉದ್ಯೋಗ ಮಾಡುತ್ತಿರುತ್ತಿದ್ದರೆ ಸಂತೃಪ್ತಿ ಸಿಗುತ್ತಿರಲಿಲ್ಲ. 'ನನ್ನ ದುಡಿಮೆ, ನನ್ನ ಅನ್ನ' ಎನ್ನುವ ಸ್ವಾಭಿಮಾನಕ್ಕಿಂತ ಮಿಗಿಲಾದುದು ಬೇರಿಲ್ಲ.

                ಕುಳದಲ್ಲಿ ನೆಲೆಯಾಗುವಾಗ ಚಿಕ್ಕ ಗುಡಿಸಲು ಇತ್ತು. ಬಹುಕಾಲ ಇದರಲ್ಲೇ ವಾಸವಾಗಿದ್ದೆವು. ಮಡದಿ ಸೀತಾ ಮನೆ ಕಟ್ಟುವ ಆಶೆಯನ್ನು ಆಗಾಗ್ಗೆ ವ್ಯಕ್ತಪಡಿಸುತ್ತಿದ್ದಳು. ಆದರೆ ಸಾಲ ಮಾಡಿ ಮನೆ ಕಟ್ಟಲು ಒಲವಿರಲಿಲ್ಲ. ಹಾಗಾಗಿ ದುಡಿಮೆಯ ಒಂದೊಂದು ಪೈಸೆಯನ್ನು ಕೂಡಿಟ್ಟು ಮನೆಯನ್ನು ಕಟ್ಟಿದೆ. ಅಲ್ಲದೆ ಮಕ್ಕಳ ದುಡಿತದ ಸಂಪಾದನೆಯೂ ಸುಂದರ ಮನೆಯಾಗುವಲ್ಲಿ ನೆರವಾಗಿದೆ

* ಸೇನೆ, ಸೈನಿಕ, ರಾಷ್ಟ್ರೀಯತೆ - ಮೂರರ ಕುರಿತು ಸಾಮಾಜಿಕ ಭಾವನೆಗಳು ಹೇಗಿದ್ದುವು

                ನಾನು ಸೇನೆಯಲ್ಲಿದ್ದಾಗ ಯಾವ ಭಾವನೆಗಳಿದ್ದುವೋ ಈಗಲೂ ಏನೂ ವ್ಯತ್ಯಾಸ ಕಾಣುತ್ತಿಲ್ಲ. ಒಬ್ಬ ಮಿಲಿಟ್ರಿಗೆ ಸೇರುವಾಗ ಆತನೊಳಗೆ ಸುಪ್ತವಾಗಿ ದೇಶಭಕ್ತಿಯಿರುತ್ತದೆ.ಸೇವಾ ಭಾವನೆಯಿರುತ್ತಿತ್ತು. ಜತೆಗೆ ಉದ್ಯೋಗ ಪ್ರಾಪ್ತಿಯ ಖುಷಿ. ಆಗ ನಾಲ್ಕನೇ ತರಗತಿ ಕಲಿತರೂ ಒಂದಲ್ಲ ಒಂದು ಅವಕಾಶವಿರುತ್ತಿತ್ತು. ಈಗ ಹಾಗಲ್ಲ. ಕನಿಷ್ಠ ಎಸ್.ಎಸ್.ಎಲ್.ಸಿ. ಆಗಿರಲೇ ಬೇಕು.

                ಆಗ ಈಗಿನಂತೆ ಅತ್ಯಾಧುನಿಕ ವ್ಯವಸ್ಥೆಗಳು ಇದ್ದಿರಲಿಲ್ಲ. ಇದ್ದ ವ್ಯವಸ್ಥೆಯಲ್ಲಿ ಯುದ್ಧ ಪ್ರಕ್ರಿಯೆಗಳನ್ನು ಹೊಂದಾಣಿಸಿಕೊಳ್ಳಬೇಕು. ಈಗ ಹಾಗಲ್ಲ. ವಿಮಾನದಿಂದ ಶುರುವಾಗಿ ಅಸ್ತ್ರ-ಶಸ್ತ್ರಗಳ ತನಕ ತುಂಬಾ ಅಪ್ಡೇಟ್ ಆಗಿದೆ.          ಈಚೆಗೆ ಗಮನಿಸಿದ್ದೇನೆ. ಸೇನೆಯ ಕುರಿತು, ಸೇನಾನಿಗಳ ಕುರಿತು ರಾಜಕಾರಣಿಗಳು ತುಂಬಾ ಹಗುರವಾಗಿ ಮಾತನಾಡುತ್ತಾರೆ. ಇದು ಅವರ ಅಜ್ಞಾನ. ಸೇನೆಯನ್ನು ದೇಶವಾಸಿಗಳೆಲ್ಲರೂ ಗೌರವಿಸಬೇಕು. ದೇಶ ಉಳಿಯಲು ಮಿಲಿಟ್ರಿ ಬೇಕೇಬೇಕು.

 ಇಂದು ಸೇನೆಯ ಚಟುವಟಿಕೆಗಳು ಎಷ್ಟು ಜನರಿಗೆ ಗೊತ್ತು. ಹಳ್ಳಿಯಲ್ಲಿ ದುಡಿಯುವ ಸಾಮಾನ್ಯನಿಗೂ ಸೇನೆಯ ಕುರಿತು ತಿಳುವಳಿಕೆ ಬೇಕು. ಇದಕ್ಕಾಗಿ ಪ್ರಾಥಮಿಕ ಶಿಕ್ಷಣದಿಂದಲೇ ಸೇನೆ, ಸೇನಾನಿಗಳ ಕುರಿತು ಪರಿಚಯಾತ್ಮಕವಾದ ಪಠ್ಯಗಳಿರಬೇಕು. ವಿವಿಧ ಮಾಧ್ಯಮಗಳ ಮೂಲಕ ಸರಕಾರವು ಸೇನೆಯ ಔನ್ನತ್ಯವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೆಲಸಗಳು ಅಲ್ಲೋ ಇಲ್ಲೋ ಹೊರತುಪಡಿಸಿ ತುಂಬಾ ಸೀರಿಯಸ್ ಆಗಿ ಆಗುತ್ತಿಲ್ಲ

* ಸೇವೆಯಲ್ಲಿರುವಾಗ ವೈಯಕ್ತಿಕ ಜೀವನದತ್ತ ಯೋಚನೆ ಬರುವ ಸಾಧ್ಯತೆ ಇದೆಯಲ್ವಾ

                ಸೇನಾನಿಗೆ ಖಾಸಗಿ ಜೀವನ ಸೆಕೆಂಡರಿ. ಡ್ಯೂಟಿ ಫಸ್ಟ್. ಒಮ್ಮೆ ಡ್ಯೂಟಿಗೆ ಸೇರಿದ ಬಳಿಕ ಮನೆ ಮರೆತು ಹೋಗುತ್ತದೆ! ಯುದ್ಧ ಶುರುವಾದರಂತೂ ಮನೆಯ ನೆನಪು ಎನ್ನುವುದು ಮಾರುದೂರ! ಗಡಿ ರಕ್ಷಣೆಗೆ ಆದ್ಯತೆ. ಸೇನೆಯ ತರಬೇತಿ ಸಮಯದಿಂದಲೇ ಶಿಸ್ತಿನ ಪಾಠವಾಗುವುದರಿಂದ ಮನಸ್ಥಿತಿ ಸ್ಥಿರವಾಗಿರುತ್ತದೆ. ಎಲ್ಲಿ ಡ್ಯೂಟಿ ಹಾಕ್ತಾರೆ ಎನ್ನುವ ಖಚಿತತೆ ಇಲ್ಲ. ವರಿಷ್ಠರು ನಿರ್ಧರಿಸಿದ ಜಾಗದಲ್ಲಿ ಕೆಲಸ ಮಾಡಬೇಕು. ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಬೇಕಾದ್ದರಿಂದ ಅಲ್ಲೆಲ್ಲಾ ವೈಯಕ್ತಿಕ ಜೀವನದ ಕುರಿತು ಯೋಚಿಸುವಂತಿಲ್ಲ. ಯೋಚನೆಯೇ ಬಾರದು. ಬಂಕರ್ ಗಳಲ್ಲಿ ಅಡಗುವಂತಹ ಸಂದರ್ಭಗಳಲ್ಲಿ ದೇವರೇ ಕಾಪಡಬೇಕಷ್ಟೇ. ಹದಿನೈದು ವರುಷಗಳಲ್ಲಿ ನನಗೆ ಒಮ್ಮೆಯೂ 'ಬಿಟ್ಟು ಬರೋಣ' ಅನ್ನಿಸಲಿಲ್ಲ.               

* ಸೇನೆಯ ಶಿಸ್ತು 'ಭಾರ' ಆಗುವುದಿಲ್ಲವೇ?

                ಮಿಲಿಟ್ರಿಯಲ್ಲಿ ಪಾಲಿಸುವ ಶಿಸ್ತು ನಿವೃತ್ತಿಯ ನಂತರವೂ ಬದುಕಿನಲ್ಲಿ ಪ್ರತಿಫಲನವಾಗುತ್ತದೆ. ಆದರೆ ಅಲ್ಲಿನ ಶಿಸ್ತಿನ ವಿಧಾನ, ವಿನ್ಯಾಸಗಳೇ ಬೇರೆ. ನಿವೃತ್ತಿ ನಂತರದ ಬದುಕೇ ಬೇರೆ. ಮನೆಗೆ ಬಂದಾಗ ಅಲ್ಲಿನ ಕಾಯಕಷ್ಟಗಳೆಲ್ಲಾ ಮರೆತುಹೋಗುತ್ತದೆ. ಸೇನೆಯ ಅತಿಶಿಸ್ತು ಕೆಲವರಿಗೆ ತಡೆದುಕೊಳ್ಳಲು ಕಷ್ಟವಾಗಿ ರಾಜೀನಾಮೆ ನೀಡಿ ಮರಳಿ ಮನೆಗೆ ಬಂದವರೂ ಇದ್ದಾರೆ. ಮುಖ್ಯವಾಗಿ ಒಮ್ಮೆ ಸೇನೆಗೆ ಸೇರಿದರೆ ಮನಸ್ಸು ಪೂರ್ತಿ ಸೇನೆಯತ್ತಲೇ ಗಟ್ಟಿಯಾಗಿರಬೇಕು. ರೂಢಿಯ ಮಾತೊಂದಿದೆ ; ಮಿಲಿಟ್ರಿಯ ಶಿಸ್ತು, ಮಿಲಿಟ್ರಿಯ ಸ್ನೇಹವು ರೈಲ್ವೇ ಸ್ಟೇಶನ್ ವರೆಗೆ

* ಶಿಸ್ತಿನ ಮಧ್ಯೆಯೂ ಮಾನವಿಯತೆ ಇಲ್ವಾ?

                ಸೇನೆ ಅಂದಾಗ ಮೊದಲು ನೆನಪಾಗುವುದು ಅಲ್ಲಿನ ಶಿಸ್ತು. ಅಲ್ಲೂ ಮಾನವೀಯತೆ ಇದೆ. ಅಸೌಖ್ಯವಾದಾಗ ಚಿಕಿತ್ಸೆಗಾಗಿ ಆಸ್ಪತ್ರೆಗಳಿವೆ. ಪ್ರತಿಯೊಂದೂ ಘಟಕದಲ್ಲೂ ಚಿಕಿತ್ಸಾಲಯಗಳಿವೆ. ಆಹಾರ ಪದಾರ್ಥಗಳನ್ನು ಪರೀಕ್ಷೆಗೊಳಪಡಿಸಿಯೇ ಸೈನಿಕರಿಗೆ ಸೇವಿಸಲು ನೀಡುತ್ತಾರೆ. ಹಣ್ಣುಗಳನ್ನು ತಿನ್ನಲೇ ಬೇಕು. ಸೈನಿಕರ ಆರೋಗ್ಯ ಕಾಳಜಿಯು ಸೇನೆಯ ಅಡಳಿತದಲ್ಲಿರುವು ನಿಜಕ್ಕೂ ಹೆಗ್ಗಳಿಕೆಯ ವಿಚಾರ

* ಸೈನಿಕರೊಳಗೆ ಕುಟುಂಬ ಬಾಂಧವೈಗಳು, ಹಬ್ಬದ ಆಚರಣೆಗಳು ಹೇಗಿವೆ?

                ಅಲ್ಲೂ ಕುಟುಂಬ ಬಾಂಧವ್ಯಗಳಿವೆ. ಹಬ್ಬಗಳ ಆಚರಣೆಗಳಿವೆ. ಕೆಲವು ಆಚರಣೆಗಳಲ್ಲಿ 'ಬಡಾ ಖಾನ' (ಔತಣ ಕೂಟ) ಏರ್ಪಡಿಸುತ್ತಾರೆ. ಅವರವರ ಮತಗಳಿಗೆ ಅನುಸಾರವಾಗಿ ಹಬ್ಬಗಳನ್ನು ಆಚರಿಸಬಹುದಿತ್ತು. ಉದಾ: ಯೂನಿಟ್ಗಳಲ್ಲಿ ಹಿಂದುಗಳ ಸಂಖ್ಯೆ ಬಹುಮತದಲ್ಲಿದ್ದರೆ ಹಿಂದೂ ಹಬ್ಬವನ್ನು ವೈಭವವಾಗಿ ಅಚರಿಸಲಾಗುತ್ತಿತ್ತು. ಅವರವರ ಶ್ರದ್ಧೆ, ಭಾವನೆಗಳಿಗನುಸಾರವಾಗಿ ದೇವಾಲಯ, ದರ್ಗಾಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವ ಅವಕಾಶಗಳಿದ್ದುವು. ಧಾರ್ಮಿಕ ಭಾವನೆಗಳನ್ನು ಸೇನೆಯಲ್ಲಿ ಗೌರವದಿಂದ ಕಾಣುತ್ತಾರೆ.

                ಹಬ್ಬಗಳಲ್ಲಿ ಸೈನಿಕರ ಕುಟುಂಬದವರು ಒಟ್ಟಾಗುತ್ತಿದ್ದರು. ಕೆಲವು ಯೂನಿಟ್ಗಳಲ್ಲಿ ಸಿನಿಮಾ ಥಿಯೇಟರ್ಗಳಿದ್ದುವು. ಲಾರಿಯ ಮೇಲೇರಿ ಬರುವ ಸಂಚಾರಿ ಥಿಯೇಟರ್ಗಳ ಮೂಲಕವೂ ಸಿನಿಮಾ ತೋರಿಸುತ್ತಿದ್ದರು. ವಾರಕ್ಕೊಂದು ಬಾರಿ ಸಿನಿಮಾ ನೋಡುವ ಅವಕಾಶಗಳಿದ್ದುವು. ಯುದ್ಧದ ಸಂದರ್ಭ ಹೊರತು ಪಡಿಸಿ ಮಿಕ್ಕೆಲ್ಲಾ ಸಮಯದಲ್ಲೂ ಸೈನಿಕರಿಗೆ ಹಬ್ಬ, ಸಿನಿಮಾ..ಮೊದಲಾದ ಮನಸ್ಸನ್ನು ಅರಳಿಸುವ ವ್ಯವಸ್ಥೆಗಳಿದ್ದುವು. ಕೆಲವೊಮ್ಮೆ ಸಿನಿಮಾ ನಟರು ಬಂದು ಆರ್ಕೆಸ್ಟ್ರಾಗಳನ್ನು ಸೈನಿಕರಿಗಾಗಿ ಏರ್ಪಡಿಸುವುದೂ ಇದೆ

* ಕರ್ತವ್ಯದಲ್ಲಿದ್ದಾಗ ಜತೆಯಾಗುವ ಸ್ನೇಹಿತರು ನಿವೃತ್ತಿಯ ನಂತರ ಸಂಪರ್ಕದಲ್ಲಿದ್ದಾರಾ?

ಇಲ್ಲ.... ನಿವೃತ್ತಿಯಾಗಿ ರೈಲು ಏರುವಾಗಲೇ ಬಹ್ವಂಶ ಸಂಬಂಧ ಮುಗಿದುಹೋಗುತ್ತದೆ! ಟೆಲಿಗ್ರಾಂ, ಅಂಚೆಯ ಹೊರತು ಬೇರೆ ಸಂಪರ್ಕ ಸಾಧನಗಳಿದ್ದಿರಲಿಲ್ಲ. ಹಾಗಾಗಿ ದೇಶದ ನಾನಾ ಭಾಗದ ಸ್ನೇಹಿತರನ್ನು ಮತ್ತೆ ಸಂಪಕರ್ಿಸುವುದು ತ್ರಾಸ. ಅವರೆಲ್ಲಾ ಎಲ್ಲಿ ಇದ್ದಾರೆ ಎಂದು ಕಂಡು ಹಿಡಿಯುವುದು ತ್ರಾಸ. ಊರಿನವರಾಗುತ್ತಿದ್ದರೆ ಸ್ನೇಹ-ಸಂಪರ್ಕ ಮುದುವರಿಯುತ್ತಿತ್ತೋ ಏನೋ. ಆದರೆ ಹಿರಿಯ ಅಧಿಕಾರಿಗಳು ಬಹುಕಾಲ ನೆನಪಿನಲ್ಲಿದ್ದರು. ಈಗ ಅದೂ ಮರೆತುಹೋಗಿದೆ. ಸೇನಾ ಕರ್ತವ್ಯದಲ್ಲಿದ್ದಾಗ ಮಾತ್ರ ಒಟ್ಟಿಗೆ ಇರುವುದು ಅಷ್ಟೇ

* ಸೇನೆ ಸೇರುವಾಗ ಸಾಮಾನ್ಯವಾಗಿ ಯಾವ ರೀತಿಯ ಮನಃಸ್ಥಿತಿಯಿರುತ್ತದೆ.

ಮುಖ್ಯವಾಗಿ ಹೊಟ್ಟೆಪಾಡು. ಬದುಕಿಗೆ ಒಂದು ಸುದೃಢ ಉದ್ಯೋಗ. ನಿವೃತ್ತಿ ನಂತರ ಸಿಗುವ ಸವಲತ್ತುಗಳು. ಜತೆಗೆ ದೇಶಸೇವೆಯ ಮನಸ್ಥಿತಿ. ಇವೆಲ್ಲವೂ ಮಿಳಿತಗೊಂಡು ಸೇನೆಯನ್ನು ಸೇರುತ್ತಾರೆ. ಈಗ ಮಿಲಿಟ್ರಿಯ ಆಯ್ಕೆಯ ವಿನ್ಯಾಸಗಳು ಬದಲಾಗಿವೆ. ವ್ಯವಸ್ಥೆಗಳೂ ಅಭಿವೃದ್ಧಿಗೊಂಡಿವೆ. ನೂರು ಜನ ಸೇನೆ ಸೇರಲು ಹೋದರೆ ಅಲ್ಲಿನ ಆಯ್ಕೆ ಪ್ರಕ್ರಿಯೆಗಳಲ್ಲಿ ಉತ್ತೀರ್ಣರಾಗುವುದು ಹತ್ತೋ ಹದಿನೈದು ಮಂದಿ ಮಾತ್ರ. ಪರೀಕ್ಷೆಗಳೆಲ್ಲಾ ಅಷ್ಟು ಜಟಿಲ. ಸೇನೆ ಸೇರುವುದು ಅಂದಾಗ ಸಾಮಾನ್ಯರಲ್ಲಿ ಒಂದು ಭಾವನೆಯಿದೆ - ಕೈಯಲ್ಲಿ ಪಿಸ್ತೂಲು ಹಿಡಿದು ಗಡಿಯಲ್ಲಿ ಸೆಣಸಾಡುವುದು... ಹಾಗಲ್ಲ. ಅಲ್ಲಿಯೂ ಅನೇಕ ವಿಭಾಗಗಳಿವೆ. ಉದಾ: ಚಾಲಕರು, ಇಂಜಿನಿಯರ್, ವೈದ್ಯರು.. ಹೀಗೆ ಒಂದೊಂದು ವೃತ್ತಿಗೆ ಅರ್ಹ ಅಭ್ಯರ್ಥಿಗಳು ಸೇರುತ್ತಾರೆ. ಎಲ್ಲರನ್ನೂ ಒಟ್ಟು ಸೇರಿಸಿ ಸಹಜವಾಗಿ 'ಸೇನೆಯಲ್ಲಿದ್ದಾರೆ' ಎಂದು ಹೇಳಲಾಗುತ್ತದೆ

* ಲೋಕದ ಆಗುಹೋಗುಗಳು ಗಮನಕ್ಕೆ ಬರುತ್ತವೆಯೇ?

ಖಂಡಿತ. ನಂನಮ್ಮ ಯೂನಿಟ್ಗಳಲ್ಲಿ ದಿನಪತ್ರಿಕೆಗಳು ಓದಲು ಸಿಗುತ್ತವೆ. ರಾಜಕೀಯ ಆಗುಹೋಗುಗಳನ್ನು ಅಪ್ಡೇಟ್ ಮಾಡಿಕೊಳ್ಳುತ್ತಿದ್ದೆವು. ರೇಡಿಯೋ ಕೇಳುವ ಅವಕಾಶವಿತ್ತು. ಮೊದಲಿನಿಂದಲೂ ನಾನು ರೇಡಿಯೋ ಕೇಳುಗ. ಕಾಲಘಟ್ಟದಲ್ಲಿ ಸೇನೆಯ ಕುರಿತು ಯಾರಾದರೂ ಹಗುರವಾಗಿ ಮಾತನಾಡಿದರೆ 'ಅವನಿಗೆ ಬುದ್ಧಿ ಇಲ್ಲ' ಎನ್ನುತ್ತಾ ತಮ್ಮ ಪಾಡಿಗೆ ಅಧಿಕಾರಿಗಳು ಸುಮ್ಮನಿರುತ್ತಿದ್ದರು. ನಾವೂ ಅಷ್ಟೇ. ದೇಶ ಬಗ್ಗೆ ಗೌರವ ಇದ್ದವರು ಸೇನೆ, ಸೈನಿಕರನ್ನು ಹಗರುವಾಗು ಕಾಣಲಾರರು, ಕಾಣಬಾರದು

* ಟಿವಿ, ರೇಡಿಯೋಗಳ ಸುದ್ದಿಗಳು, ದಿನಪತ್ರಿಕೆಗಳ ದೈನಂದಿನ ಓದು, ವಿಮರ್ಶೆಗಳು ತಮಗೆ ರೂಢಿಯಾದುದು ಹೇಗೆ?

                ಬಾಲ್ಯದಿಂದಲೇ ನನಗೆ ರಾಷ್ಟ್ರಿಯ ವಿಚಾರಗಳಲ್ಲಿ ಆಸಕ್ತಿ. ಪತ್ರಿಕಗಳನ್ನು ಓದುತ್ತಾ ಅದರಲ್ಲಿರುವ ರಾಜಕೀಯ ವಿಚಾರಗಳನ್ನು ಸಮಾನಾಸಕ್ತರು ಸಿಕ್ಕಿದಾಗ ಚರ್ಚಿಸುತ್ತಿದ್ದೆ. ನನ್ನೊಳಗೆ ವಿಚಾರಗಳು ನಿತ್ಯ ಮಥನವಾಗುತ್ತಿದ್ದುವು. ಏನಿದ್ದರೂ ಹಿಂದೂಪರವಾದ ಚಿಂತನೆಗಳು ನಿತ್ಯ ಗರಿಗೆದರುತ್ತಿದ್ದುವು. ಪಕ್ಷ ಯಾವುದೇ ಇರಲಿ 'ಹಿಂದೂ, ಹಿಂದೂಸ್ಥಾನ' ಎನ್ನುವಲ್ಲಿ ಗೌರವ ಮತ್ತು ಸ್ವಾಭಿಮಾನ. ಸೋಗಿನ ಜಾತೀವಾದಕ್ಕೆ ಬೆಂಬಲವಿಲ್ಲ. ಈಗೆಲ್ಲಾ ಜಾತ್ಯತೀತ ಎನ್ನುತ್ತಾ ರಾಜಕಾರಣ ಮಾಡುತ್ತಾರಲ್ಲಾ... ಅವೆಲ್ಲಾ ಸುಮ್ಮನೆ!

                ದಿನಪತ್ರಿಕೆಗಳಲ್ಲಿ ಬರುವ ಮುಖ್ಯ ವಿಚಾರಗಳನ್ನು, ಅದರಲ್ಲೂ ಮುಂದೆ ಇದು ಉಪಯೋಗಕ್ಕೆ ಬೀಳಬಹುದು ಎನ್ನುವಂತಹುದನ್ನು ಪುಸ್ತಕದಲ್ಲಿ ಬರೆದಿಡುತ್ತಿದ್ದೆ. ಅದು ಕಾಲದ ದಾಖಲೆ. ಸುಮಾರು ಮೂರೂವರೆ ದಶಕಗಳಿಂದ ರೀತಿಯ ಲಿಖಿತ ಅಭ್ಯಾಸ. ಇದರಿಂದಾಗಿ ರಾಜಕೀಯವಾಗಿ ಅಥವಾ ರಾಷ್ಟ್ರದ ಕುರಿತು ಯಾರು ತಪ್ಪು ಮಾತನಾಡಿದರೂ 'ಅದು ತಪ್ಪು' ಎಂದು ನಿರ್ಭೀತಿಯಿಂದ ಹೇಳಬಲ್ಲೆ! ಯಾಕೆಂದರೆ ನನ್ನಲ್ಲಿ ದಾಖಲೆಯಿದೆ

* ನೀವು ನಂಬುವ, ನಂಬಿದ ರಾಜಕೀಯ ಸಿದ್ಧಾಂತಗಳು ಯಾವುವು?

                ಈಗಾಗಲೇ ಹೇಳಿದ್ದೇನೆ. ರಾಷ್ಟ್ರೀಯ ಚಿಂತನೆಗಳು ನನ್ನಲ್ಲಿ ಈಗಲೂ ಜೀವಂತ. ಅದರಲ್ಲಿ ರಾಜಿಯಿಲ್ಲ. ಸಿದ್ದಾಂತವನ್ನು ಕಾಂಗ್ರೇಸಿನಲ್ಲಿ ಸ್ವಲ್ಪ ಕಾಲ ನೋಡಿದ್ದೆ. ಹೊತ್ತಲ್ಲಿ ಪಕ್ಷಕ್ಕೆ ಮತವನ್ನೂ ನೀಡಿದ್ದೆ. ನಂತರದ ದಿವಸಗಳಲ್ಲಿ ಜನತಾ ಪಕ್ಷಕ್ಕೆ ಮತ. ಈಗಂತೂ ಭಾರತೀಯ ಜನತಾ ಪಕ್ಷ ತುಂಬಾ ಶಿಸ್ತಿನಿಂದ ರಾಷ್ಟ್ರೀಯ ಸಿದ್ಧಾಂತ ಮತ್ತು ಅದರ ಅನುಷ್ಠಾನವನ್ನು ಮಾಡುತ್ತಿದೆ.

                ನನ್ನ ರಾಷ್ಟ್ರೀಯ ಚಿಂತನೆ ವೈಯಕ್ತಿಕವಾದುದಲ್ಲ. 'ಭಾರತ ಸುಭಿಕ್ಷವಾಗಿರಬೇಕು. ರಕ್ಷಣಾ ಇಲಾಖೆಯು ಸುದೃಢವಾಗಿರಬೇಕು.' ಇವೆರಡರ ಅನುಷ್ಠಾನದಿಂದ ನಿಜಾರ್ಥದಲ್ಲಿ ಭಾರತವು ರಾಮರಾಜ್ಯವಾಗುತ್ತದೆ. ರಾಜಕೀಯ ಮತ್ತು ಧರ್ಮ ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಆದರೆ ಧಾರ್ಮಿಕ ನಂಬುಗೆಗಳು ವೈಯಕ್ತಿಕ. ಅದು ರಾಜಕೀಯದಲ್ಲಿ ಮಿಳಿತವಾಗಕೂಡದು. ರಾಜಕೀಯದಲ್ಲಿರುವವರು ಧಾರ್ಮಿಕತೆಯನ್ನು ಬಿಟ್ಟಿರಲು ಸಾಧ್ಯವೇ

 * ರಾಷ್ಟ್ರೀಯ ಚಿಂತನೆಯಲ್ಲಿ ರಾಜಿಯಿಲ್ಲವೇನೋ ಸರಿ, ಆದರೆ ತಮ್ಮ ಧಾರ್ಮಿಕ ಚಿಂತನೆಗಳು?

                ನಾನು ನಾಸ್ತಿಕನಲ್ಲ, ಆಸ್ತಿಕ. ಧಾರ್ಮಿಕತೆಯಲ್ಲಿ ನಂಬುಗೆಯುಳ್ಳವನು. ದೇವಸ್ಥಾನಗಳಲ್ಲಿ ಆಗುವ ಧಾರ್ಮಿಕ, ವೈದಿಕ ವಿಧಿ ವಿಧಾನಗಳಲ್ಲಿ ನಂಬುಗೆಯಿದೆ. ದೇವರ ಅಸ್ತಿತ್ವ ನಂಬುತ್ತೇನೆ. ಆದರೆ ನಂಬುಗೆ 'ಮೂಢನಂಬುಗೆ'ಯಂತಿಲ್ಲ. ಬದುಕಿಗೆ ಎಷ್ಟು ಬೇಕೋ ಅಷ್ಟು. ಜನರು ಹೆಚ್ಚೆಚ್ಚು ಪಾಲ್ಗೊಂಡಾಗ ಮಾತ್ರ ಧಾರ್ಮಿಕತೆಯ ಮನಸ್ಥಿತಿ ರೂಪುಗೊಳ್ಳಲು ಸಾಧ್ಯವಾಗುತ್ತದೆ.

 * ನಿಮಗೆ ಸೇನೆ ಸೇರುವ ಆಶೆಯ ಬೀಜಾಂಕುರವಾದುದು ಹೇಗೆ?

                ನಾನು ಬಾಲ್ಯದಲ್ಲಿದ್ದಾಗ ನಮ್ಮೂರಿನ ಕುಂಬಳೆ-ಶಾಂತಿಪಳ್ಳದಲ್ಲಿ ಮಿಲಿಟ್ರಿ ಕ್ಯಾಂಪು ಇತ್ತು. ಆಗದು ಬ್ರಿಟಿಷರ ಕಾಲ. ಸೇನೆಯ ವಾಹನಗಳು ಸಾಲು ಸಾಲಾಗಿ ಹೋಗುತ್ತಿದ್ದಾಗ ಅದನ್ನು ನೋಡಲು ನನ್ನ ಅಜ್ಜ ಬಿಡುತ್ತಿರಲಿಲ್ಲ. ಸೇನೆ ಅಂದರೆ ಇಷ್ಟೊಂದು ಶಿಸ್ತು ಇದೆ ಎಂದು ಎಳೆ ಮನಸ್ಸು ಅರಿತ್ತಿತ್ತು. ಮುಂದೆ ಭಾರತ-ಚೀನಾ ಯುದ್ಧವಾಯಿತು. ಸಂದರ್ಭಗಳ ರೋಚಕ ಸುದ್ದಿಗಳಿಗೆ ಕಿವಿಯಾಗಿದ್ದೆ. ಚೀನಾ ವಿರುದ್ಧ ಸೆಣಸಾಡಬೇಕೆನ್ನುವ ಮನಸ್ಥಿತಿ ಸೃಷ್ಟಿಯಾಯಿತು. ಬಹುಶಃ ಇದೇ ಮುಂದೆ ಸೇನೆ ಸೇರಲು ಸ್ಫೂರ್ತಿಯಾಯಿತು.