
ದ್ವಿಚಕ್ರ, ಚತುಶ್ಚಕ್ರ ವಾಹನಗಳು ಭರ್ರನೆ ಬರುತ್ತವೆ. ನಿಲ್ಲುತ್ತದೆ. ಏನೋ ಸಂಭಾಷಣೆ. ವಾಹನ ಮ್ಹಾಲಕರ ಮುಖದಲ್ಲಿ ನಗು. ಒಂದಷ್ಟು ಮಂದಿ ವಾಹನ ಏರುತ್ತಾರೆ. ಅವರನ್ನು ನೋಡುತ್ತಾ ಉಳಿದವರಲ್ಲಿ ನಿಟ್ಟುಸಿರು! ಹೊತ್ತು ಏರುತ್ತಿದ್ದಂತೆ ಜನಜಂಗುಳಿ ತೆಳುವಾಗುತ್ತದೆ. ಬರುವ ವಾಹನ ಭರ ಕಡಿಮೆಯಾಗುತ್ತದೆ. 'ಬಂದ ದಾರಿಗೆ ಸುಂಕವಿಲ್ಲ'ವೆಂಬಂತೆ ಜಮಾವಣೆಯಾದ ಮಂದಿ ಹಾಗೆನೆ ನಗರದಲ್ಲಿ ಕರಗಿ ಹೋಗುತ್ತದೆ.
ಯಾರಿವರು? ವಾಹನವೇರಿ ಎಲ್ಲಿಗೆ ಹೋಗುತ್ತಾರೆ? ಹೊಸದಾಗಿ ಮುಂಬಯಿ ಕಂಡವರಿಗೆ ಆಶ್ಚರ್ಯವಾದೀತು. ಅಲ್ಲಿನವರಿಗೆ ಮಾಮಾಲಿ! ಇವರೆಲ್ಲಾ 'ಬಿಡಿಕೂಲಿ'ಗಳು. ಇವರಿಗೆ ನಿಶ್ಚಿತವಾದ ಉದ್ಯೋಗವಿಲ್ಲ. ಬಸ್ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಹೀಗೆ ನಿತ್ಯ ಒಂದೆಡೆ ಸೇರಿ 'ದಾತಾರ'ರಿಗಾಗಿ ಕಾಯುವುದು ಕಾಯಕ. ಕೆಲಸಕ್ಕೆ ಜನ ಬೇಕಾದವರು ಇಲ್ಲಿಗೆ ಬಂದರಾಯಿತು. ಮೇಸ್ತ್ರಿ, ಗಾರೆ, ಕೂಲಿ, ಡ್ರೈವರ್, ಹೊರೆಯಾಳು..ಹೀಗೆ ವಿವಿಧ ಅರ್ಹತೆಯವರು. ತಮ್ಮ ಕೆಲಸದ ರೀತಿಯನ್ನು ಹೊಂದಿಕೊಂಡು ಜನರ ಆಯ್ಕೆ. ಅಲಿಖಿತ ಒಪ್ಪಂದ. ಸ್ಟಾಂಡರ್ಡ್ ಸಂಬಳ! ಹೆಚ್ಚು ಹೇಳಿದರೂ ಬೇಕಾದರೆ ಕೊಡಬೇಕು! ಇದನ್ನು 'ಮನುಷ್ಯ ಬಜಾರ್' ಅನ್ನೋಣ.
ವಿವಿಧ ನಮೂನೆ ಕೆಲಸ ಅರಿತವರೆಲ್ಲಾ ಪ್ರತ್ಯಪ್ರತ್ಯೇಕವಾಗಿ ಗುಂಪಾಗಿರುತ್ತಾರೆ. 'ನಮಗೆ ಎಷ್ಟು ಜನ ಬೇಕು' ಎಂಬ ಲೆಕ್ಕಾಚಾರದಲ್ಲಿ ಜನರನ್ನು ಆಯ್ದರೆ ಆಯಿತು! ಸಂಜೆ ಪುನಃ ಅವರನ್ನು ನಿಲ್ದಾಣಕ್ಕೆ ಬಿಡುವ ಶರ್ತ ಇರಬಹುದು. ಸಿಕ್ಕಿದ ಸಂಬಳ ಅಂದಂದಿನ ವೆಚ್ಚಕ್ಕೆ ಸರಿಸಮ. ನಾಳೆಯ ಚಿಂತೆಯಿಲ್ಲ. ಪುನಃ ಜಮಾವಣೆ. ಇನ್ಯಾರೋ ಬರ್ತಾರೆ. ಒಯ್ತಾರೆ! ನಮಗಿದು ಅನಿಶ್ಚಿತ ಬದುಕಿನಂತೆ ಕಂಡರೂ, ಅವರಿಗದು 'ಒಂದು ಉದ್ಯೋಗ'.
ದೊಡ್ಡ ದೊಡ್ಡ ನಗರಗಳಲ್ಲಿ ಜನಗಳನ್ನು ಒದಗಿಸಲು ’ಮಧ್ಯವರ್ತಿ’ಗಳಿದ್ದಾರೆ. ಯಾರಿಗೆ ಜನ ಬೇಕೋ ಅವರಿಂದ ತಲೆಗೊಂದರಂತೆ, ಅತ್ತ ಕೆಲಸದವರಿಂದ ದಿನಕ್ಕಿಂತಿಷ್ಟು - ಎರಡೂ ಪಕ್ಷದವರಿಂದ ಜೇಬು ಭರ್ತಿ! ಈ ವಿಚಾರದಲ್ಲಿ 'ದಾದಾಗಿರಿ'ಯೂ ಇದೆಯಂತೆ. 'ಬಿಡಿಕೂಲಿ'ಗಳಿಗೆ ಅಂತಹ ಬದುಕು ಸಹ್ಯವಾಗಿರುತ್ತದೆ. 'ಅವರಿಗೆ ಶಾಶ್ವತ'ವಾದ ಬದುಕನ್ನು ಕಲ್ಪಿಸಿದರೂ, ಅವರಿಂದ ಜೀವನ ಮಾಡಲು ಕಷ್ಟ.
ನಮ್ಮೂರಲ್ಲೂ ಬಸ್ ನಿಲ್ದಾಣದಲ್ಲಿ ಹೀಗೆ ಜಮಾವಣೆಯಾಗುವ 'ಬಿಡಿಕೂಲಿ'ಗಳಿದ್ದರು. 'ನನಗಿವತ್ತು ಹತ್ತು ಜನ ಬೇಕು. ಹಾಗೆ ಸ್ಟಾಂಡಿಗೆ ಹೋಗಿ ಬರ್ತೇನೆ' ಎನ್ನುತ್ತಾ ಜೀಪು ಸ್ಟಾರ್ಟ್ ಮಾಡುವ ದಿನಗಳಿದ್ದುವು. ಯಾಕೋ, ಈಗೀಗ ಅಂತ ಶ್ರಮಜೀವಗಳ ಗುಂಪು ಕಡಿಮೆಯಾದಂತೆ ಭಾಸವಾಗುತ್ತಿದೆ. ಕೃಷಿ ಕಾರ್ಮಿಕ ಸಮಸ್ಯೆ. ಅಡಿಕೆ ಕೊಯ್ಯಲು, ತೆಂಗು ಕೊಯ್ಯಲು, ನೇಜಿ ನೆಡಲು ಜನವೇ ಇಲ್ಲ. ಕಾರ್ಮಿಕ ಸಮಸ್ಯೆಯಿಂದ ಕೃಷಿರಂಗ ನಲುಗುತ್ತಿದೆ.
ತಾಕೊಡೆ ಎಡ್ವರ್ಡ್ ಅವರಲ್ಲಿಗೆ ಹೋಗಿದ್ದೆ. ಅವರ ನೆರೆಮನೆಯ ಹಿರಿಯಜ್ಜಿಯ 'ಲೇಟೆಸ್ಟ್' ಅನುಭವ ನೋಡಿ - ಕೆಲಸಕ್ಕೆ ಜನ ಸಿಗುವುದಿಲ್ಲ. ಸಿಕ್ಕಿದರೂ ಮುನ್ನೂರೋ, ನಾನೂರೋ ಸಂಬಳ. ಜತೆಗೆ ಬೆಳಗ್ಗೆ ಉಪಾಹಾರಕ್ಕೆ ಇಡ್ಲಿಯೇ ಆಗಬೇಕು, ಮಧ್ಯಾಹ್ನ ಮಾಂಸದೂಟ. ಸಂಜೆ 'ಗಟ್ಟಿ ತಿಂಡಿ'ಯೊಂದಿಗೆ ಚಹಾ. ಮಧ್ಯೆಮಧ್ಯೆ ವಿಶ್ರಾಂತಿ. ಅಂತೂ ನಮ್ಮ ತೋಟದ ಕೆಲಸ ಮುಗಿಯಿತಪ್ಪಾ.
ಎಡ್ವರ್ಡ್ ಅವರ ತಾಯಿ ದನಿಗೂಡಿಸಿದರು - 'ನಮ್ಮ ಕಾಲದಲ್ಲಿ ಭತ್ತದ ಬೇಸಾಯ ಜೋರಾಗಿತ್ತು. ಹಲಸಿನ ಚಂಗುಲಿ (ಸೊಳೆಯಿದಂದ ಮಾಡಿ ಪಲ್ಯದಂತಹ ತಿಂಡಿ) ತಿಂದು ಮಧ್ಯಾಹ್ನದವರೆಗೆ ದುಡಿಯುತ್ತಿದ್ದೆವು.' ಒಂದೆಡೆ ಮಾಂಸದ ಊಟ ಕೊಟ್ಟರೂ ಅತೃಪ್ತಿ. ಮತ್ತೊಂದೆಡೆ ಚಂಗುಲಿ ತಿಂದು ಜೀವಿಸಿದ ಕಾಲಘಟ್ಟ. ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲವಲ್ಲಾ! ಇದು ಈಗಿನ ಪರಿಸ್ಥಿತಿ. ನಗರದ ಆಕರ್ಷಣೆಯೂ ಇಂತಹ ಸಮಸ್ಯೆಗೆ ಮುಖ್ಯ ಕಾರಣ.
ಕರಿಂಗಾಣದ ಡಾ.ಕೆ.ಎಸ್.ಕಾಮತ್ ಹೇಳುತ್ತಾರೆ 'ಹೆಚ್ಚಿನ ಹಳ್ಳಿಯ ಹುಡುಗರಿಗೆ ಕಂಕುಳಲ್ಲಿ ಪ್ಲಾಸ್ಟಿಕ್ ಚೀಲವನ್ನಿಟ್ಟು, ಮಾರ್ಗದ ಬದಿ ಬಸ್ಗಾಗಿ ಕಾಯುವುದೆಂದರೆ ಎಂತಹ ಸುಖ. ಇವರೆಲ್ಲಾ ಸಂಜೆಯಾಗುವಾಗ ಮನೆ ಸೇರುತ್ತಾರೆ. ದುಡಿಯುತ್ತಾರೋ, ಇಲ್ಲವೋ ಯಾರಿಗೆ ಗೊತ್ತು? ಅಂತೂ ಹಳ್ಳಿಯಲ್ಲಿರಲು ಬಹಳ ಕಷ್ಟವಾಗುತ್ತದೆ.' ತೋಟದ ಕೆಲಸಕ್ಕೆ ನಮ್ಮಲ್ಲಿ ಎಷ್ಟು ಜನ ಸ್ಪೆಷಲಿಸ್ಟ್ಗಳಿದ್ದರು. ಇವರ ಮಕ್ಕಳು ತಂದೆಯ ದಾರಿಯನ್ನು ತುಳಿಯುವುದಿಲ್ಲ. ಬೇರೆ ಉದ್ಯೋಗದತ್ತ ಹೊರಳುತ್ತಾರೆ. ಹೀಗಾಗಿ ತಂದೆಯ ಜ್ಞಾನ ಅವರಲ್ಲೇ ಮಡುಗಟ್ಟಿರುತ್ತದೆ! ಮಕ್ಕಳಿಗೆ ಬೇಡ.
ಕಾರ್ಮಿಕ ಸಮಸ್ಯೆಯನ್ನು ಬಿಚ್ಚುತ್ತಾ ಹೋದರೆ 'ಕತ್ತಲೆಯ ಲೋಕ' ದರ್ಶನವಾಗುತ್ತದೆ. ಹಾಗಿದ್ದರೆ ಮುಂದೇನು? ಮುಂಬಯಿಯಲ್ಲಾದರೆ 'ಮನುಷ್ಯ ಬಜಾರ್'ನಲ್ಲಿ ಜನ ಸಿಗುತ್ತಾರೆ. ನಮ್ಮೂರಲ್ಲಿ? ಇತ್ತೀಚೆಗೆ ಕಾಂಚನದ ಶಿವರಾಮ ಕಾರಂತರು ತಮ್ಮೂರಿನ ಕತೆಯನ್ನು ಹೇಳಿದರು -ನಮ್ಮೂರಲ್ಲಿ ಅಡಿಕೆ ಮರವೇರಲು ಸಮಸ್ಯೆಯಿಲ್ಲ. ನಾಲ್ಕೈದು ಮಂದಿ ಯುವಕರು ಈ ವಿದ್ಯೆಯನ್ನು ಕಲಿತಿದ್ದಾರೆ. ಯಶಸ್ವಿಯಾಗಿದ್ದಾರೆ'. ಈ ಯುವಕರಿಗೆ ಅಭಿನಂದನೆ ಹೇಳೋಣ.
(ಮಾಹಿತಿ : ಮಂಚಿ ಶ್ರೀನಿವಾಸ ಆಚಾರ್)