Wednesday, April 8, 2009

'ಕಾನೂನು ಮಾತ್ರವಲ್ಲ, ಮನಸ್ಸೂ ಬದಲಾಗಬೇಕು'

``ರಾಜಧಾನಿಯಲ್ಲಿ ಕೊಳಲು ಕಲಿಸುವ ಗುರುಗಳು ಶಿಷ್ಯರಿಗೆ ಕೊಳಲು ಕೊಡಿಸಲು ಹರಸಾಹಸ ಪಡುತ್ತಿದ್ದಾರೆ. ಕೊಳಲು ತಯಾರಿಸಲು ಬಿದಿರೇ ಸಿಕ್ತಾ ಇಲ್ಲ! ಪ್ಲಾಸ್ಟಿಕ್ ಕೊಳಲಿನಲ್ಲಿ ಬೇಕಾದ ನಾದ ಮೂಡುವುದಿಲ್ಲ.''ಬಿದಿರಿನ ಕೊರತೆಯನ್ನು ಈ ಮೂಲಕ ತೆರೆದಿಡುತ್ತಾರೆ ಮಾಜಿ ಅರಣ್ಯಾಧಿಕಾರಿ, ಬಿದಿರುಸಿರಿನ ಎ.ಸಿ.ಲಕ್ಷ್ಮಣ್.

ಬಿದಿರು ಕೃಷಿ ಮಾಡಬಹುದು. ಆದರೆ ಅದನ್ನು ಕಡಿದು, ಸಾಗಿಸಲು ಕಾನೂನಿನಲ್ಲಿ ನೂರಾರು ತೊಡಕುಗಳು. ಇದರಿಂದಾಗಿ ಪ್ರಾಮಾಣಿಕರು ಅಪ್ರಾಮಾಣಿಕರಾಗುತ್ತಾರೆ! 'ಎರಡು ಸಾವಿರ ವರುಷದ ಹಿಂದಿನ ಅರಣ್ಯ ಕಾನೂನುಗಳನ್ನು ಉರು ಹೊಡೆಯುವುದರ ಬದಲು, ಬೆಳೆಸುವವರ ನೆರವಿಗೆ ಬನ್ನಿ' - ಅಧಿಕಾರಿಗಳಿಗೆ ಲಕ್ಷ್ಮಣ್ ಸಲಹೆ.

ಬಿದಿರಿನ ಕೃಷಿಯ ಬಗ್ಗೆ ಅರಣ್ಯ ಇಲಾಖೆ ದೊಡ್ಡ ಮಾತುಗಳನ್ನಾಡುತ್ತದೆ - ವೇದಿಕೆಯಿಂದ. ಆದರೆ ಬೆಳೆಸಿದವರಿಗೇ ಗೊತ್ತು ವಾಸ್ತವ. ಕೆಲವಡೆ ವನ್ಯಜೀವಿ ಇಲಾಖೆಯೂ 'ಗುರ್ರೆನ್ನುತ್ತದೆ'! ಇದರಿಂದಾಗಿ ಸಾಮಾನ್ಯರಿಗೆ 'ಬಿದಿರು ಕೃಷಿ'ಯೆನ್ನಲು ಭಯ. ಬಿದಿರು ಕೃಷಿಯ ಬಗ್ಗೆ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಇಲಾಖೆಗಳ ಕಾನೂನುಗಳು ರೈತಪರವಾಗಬೇಕಿದೆ.

``ಇದಕ್ಕಾಗಿ ತಜ್ಞರ ಸಮಿತಿ ರಚಿಸಿ. ಬಿದಿರಿಗೆ ಮಾರಾಟ ದರವನ್ನು ನಿಗದಿಪಡಿಸಿ. ವರುಷದಲ್ಲಿ ನೂರು ದಿನವಾದರೂ 'ಹುಚ್ಚು ಹಿಡಿದಂತೆ' ಕೆಲಸ ಮಾಡಿ. ಆಗ ಎಲ್ಲಾ ಯೋಜನೆಗಳು ಸಾಮಾನ್ಯರಿಗೆ ತಲಪುತ್ತದೆ. ಜತೆಜತೆಗೆ ಅರಣ್ಯ ವಿಸ್ತಾರವೂ ಆಗುತ್ತದೆ'' - ಅರಣ್ಯಾಧಿಕಾರಿಗಳ ಮುಂದೆ ನಿದರ್ಾಕ್ಷಿಣ್ಯವಾಗಿ ಹೇಳಿದರು ಈ ನಿವೃತ್ತಾಧಿಕಾರಿ.

````ದಕ್ಷಿಣ ಅಮೆರಿಕಾದಲ್ಲಿ ಬಿದಿರಿನ 'ಸಂಚಾರಿ ಮನೆ'ಯನ್ನು ಬೇಕಾದೆಡೆ ಪ್ಯಾಕ್ ಮಾಡಿ ಒಯ್ಯುವಂತಹ ವ್ಯವಸ್ಥೆಯಿದೆ. ಇದು ನಮ್ಮಲ್ಲೂ ಯಾಕಾಗಬಾರದು? ಎಲ್ಲಾ ಜಿಲ್ಲಾ ಅರಣ್ಯ ಅಧಿಕಾರಿಗಳ ಶೆಡ್ನ್ನು ಮೊದಲಿಗೆ ಬಿದಿರಿನಲ್ಲೇ ತಯಾರಿಸುವಂತೆ ಸುತ್ತೋಲೆ ಹೊರಡಿಸಿ''.

ಪುತ್ತೂರಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ 'ಅವಸರದಲ್ಲಿ ನಿರ್ಧರಿಸಿದ' 'ಬಿದಿರು ಸಿರಿ' ಕಾರ್ಯಕ್ರಮದಲ್ಲಿ ಎ.ಸಿ.ಲಕ್ಷ್ಮಣ್ ಸಾತ್ವಿಕವಾಗಿ 'ಗುಡುಗಿದ'ರು. ಮೂಡಬಿದಿರೆಯ ಡಾ.ಎಲ್.ಸಿ.ಸೋನ್ಸ್ ತಮ್ಮ ಅನುಭವ ಬಿಚ್ಚಿಟ್ಟದ್ದು ಹೀಗ?``ತೊಟ್ಟಿಲಿನಿಂದ ಚಟ್ಟದ ತನಕ ಅಂತ ಬಿದಿರನ್ನು ವೈಭವಗೊಳಿಸುತ್ತೇವೆ. ಇಂದು ತೊಟ್ಟಿಲು ಮತ್ತು ಚಟ್ಟಕ್ಕೆ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಬಿದಿರಿನ ದೋಟಿ (ಮಾವು, ಸಪೋಟ ಕೊಯ್ಯಲು) ಏಣಿ ಅಲ್ಯೂಮಿನಿಯಂಮಯವಾಗಿವೆ. ''ಬಿದಿರು ಬೆಳೆಯಲು ಅರಣ್ಯವೇ ಆಗಬೇಕೆಂದಿಲ್ಲ. ಒಂದೆರಡು ಎಕ್ರೆ ಜಾಗವಿದ್ದವರು ಬರ್ಮಾ, ಹೆಬ್ಬಿದಿರು, ಸೋನೆಬಿದಿರುಗಳನ್ನು ಮನೆ ಬಳಕೆಗಾಗಿ ಬೆಳೆಯಬೇಕು. ಅಲಂಕಾರಕ್ಕಾಗಿ, ಕುಂಡಗಳಲ್ಲಿ ಬೆಳೆಯುವ ತಳಿಗಳಿವೆ. ಜಾವಾ ಮೂಲದ ಕಪ್ಪು ಬಣ್ಣದ ಬಿದಿರು, ದಕ್ಷಿಣ ಅಮೇರಿಕಾ ಮೂಲದ ವಾಡ್ವಾ ಇಂತಹುಗಳಲ್ಲಿ ಮುಖ್ಯವಾದುವು. ಡಾ.ಸೋನ್ಸ್ 30ಕ್ಕೂ ಹೆಚ್ಚು ತಳಿಗಳ ಬಿದಿರು ಕೃಷಿ ಮಾಡುತ್ತಿದ್ದಾರೆ. 'ನಿಯಮಗಳು ಸಡಿಲವಾದರೆ ರೈತರೇ ಬಿದಿರು ಕೃಷಿಯತ್ತ ಒಲವು ತೋರಿಸುತ್ತಾರೆ' ಎಂಬ ಆಭಿಪ್ರಾಯ ಅವರದು.

ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಜಿ.ಕುಶಾಲಪ್ಪ ಇನ್ನೂ ಒಂದು ಹೆಜ್ಜೆ ಮುಂದೆ - ' ಬದಲಾವಣೆಗಳು ಕಾನೂನಿನಲ್ಲಿ ಮಾತ್ರವಲ್ಲ, ಮನಸ್ಸಿನಲ್ಲೂ ಆಗಬೇಕು'. ಕೊಡಗಿನಲ್ಲಿ ಬರ್ಮಾ ಬಿದಿರು 1915ರಲ್ಲಿ ಕಾಲಿಟ್ಟ ದಾಖಲೆಯಿದೆ. 1962ರಲ್ಲಿ ಹೂ ಬಿಟ್ಟಿವೆ. ಎರಡನೇ ಬಾರಿ ಈ ವರುಷ ಹೂ ಬಿಟ್ಟಿದೆ. ಕೊಡಗು ಮಾತ್ರವಲ್ಲ, ಬಹುತೇಕ ಎಲ್ಲಾ ಪ್ರದೇಶದ ಬರ್ಮಾಕ್ಕೂ ಇದೇ ಸ್ಥಿತಿ. ಬಿದಿರು ಹೂ ಬಿಟ್ಟರೆ ಗಿಡವೇ ನಾಶ. ನಿಶ್ಚಿತ ಅವಧಿಯಲ್ಲಿ ಗಿಡ, ಸಸಿ ಎಲ್ಲೆಂದರಲ್ಲಿ ಹೂ ಬಿಟ್ಟು ತಾನು 'ಆತ್ಮಹತ್ಯೆ' ಮಾಡಿಕೊಳ್ಳುತ್ತದೆ. ನಮಗಿದೊಂದು ಅವಕಾಶ! ಹೂ ಬಿಟ್ಟು ಬೀಜವಾಗಿ ಉದುರಿದಾಗ ಅದನ್ನು ಸಂಗ್ರಹಿಸಿ.

'ಬಿದಿರಕ್ಕಿ'ಯ ಅನ್ನ ಮಾಡಿ ಉಂಡ ಹಿರಿಯರು ಕೆಲವರಾದರೂ ಸಿಕ್ಕಿಯಾರು. ಈಗ ಕಾಲ ಬದಲಾಗಿದೆ. ಅನ್ನಕ್ಕೆ ತೊಂದರೆಯಿಲ್ಲ. ಆದರೆ ಬಿದಿರಿನ ಅಭಿವೃದ್ಧಿಗಾಗಿಯಾದರೂ ಬೀಜ ಸಂಗ್ರಹಿಸಿ, ಸಸಿ ಮಾಡಿ ಬೆಳೆಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. 'ಇನ್ನು ನಲವತ್ತೈದು ವರುಷಕ್ಕೆ ಹೂ ಬರುವುದಿಲ್ಲ'!

ಕೊಡಗಿನಲ್ಲಿ ಭತ್ತ ಪಾರಂಪರಿಕ ಕೃಷಿ. ಒಂದು ಕಾಲಘಟ್ಟದಲ್ಲಿ ಬಿದಿರಿರುವ ಕಾಡನ್ನು ಕಡಿದು ಗದ್ದೆ ಮಾಡಿದ್ರು. ಈಗ? ಬೇಸಾಯ ಅಲ್ಲೋ ಇಲ್ಲೋ ಎಂಬಂತಾಗಿದೆ. ಹಡಿಲು ಬಿದ್ದ ಗದ್ದೆಗಳಲ್ಲಿ ಬಿದಿರು ಬೆಳೆಸುವ ಪ್ರಯತ್ನಗಳಾಗುತ್ತಿವೆ. ಮೌಲ್ಯವರ್ಧನೆ ಕಾಲದ ಆವಶ್ಯಕತೆ. ಅಗರ್ಬತ್ತಿ ಉದ್ಯಮಕ್ಕೆ ಬೇಕಾದ ಕಡ್ಡಿಗಳಿಗೆ ಒಳ್ಳೆಯ ಮಾರುಕಟ್ಟೆಯಿದೆ. ಇದಕ್ಕಾಗಿ ಯಂತ್ರಗಳೂ ಲಭ್ಯ. ಗ್ರಾಮ ಮಟ್ಟದಲ್ಲಿ ಇಂತಹ ಯಂತ್ರ ಸ್ಥಾಪಿಸಿ ಉದ್ಯಮ ತಯಾರಿಸಬಹುದು. 'ಇದರಿಂದಾಗಿ ಅಸ್ಸಾಂನಿಂದ ಬಿದಿರನ್ನು ತರಿಸಬೇಕಾದ ಪ್ರಮೇಯ ಬರುವುದಿಲ್ಲ'.

ಸಿ.ಜಿ.ಕುಶಾಲಪ್ಪ ಬಿದಿರು ಕೃಷಿಯ ಲಾಭದ ಅಂಕಿಅಂಶ ಹೇಳುತ್ತಾರೆ : ``ಒಂದು ಎಕ್ರೆಯಲ್ಲಿ 40-42 ಸಸಿ ಹಾಕಬಹುದು. ಐದನೇ ವರುಷದಿಂದಲೇ 10-12 ಬಿದಿರು ಗಳ ಕಡಿಯಲು ಸಿಗ್ತದೆ. ಇಂದು 30-40 ಅಡಿ ಎತ್ತರದ ಬಿದಿರಿಗೆ 60-100 ರೂಪಾಯಿ ಸಿಗುತ್ತಿದೆ. ಪ್ರತಿಯೊಬ್ಬರೂ ಬಿದಿರ ಕೃಷಿ ಮಾಡುವುದರಿಂದ 'ಇಲಾಖೆಯ ಹಂಗಿಲ್ಲದೆ ಬಿದಿರು ಬೆಳೆದುಕೊಳ್ಳಬಹುದು.'' 'ಹಳ್ಳಿಯ ಮಕ್ಕಳು ನಮ್ಮ ಕಾಲೇಜಿಗೆ ಬನ್ನಿ. ನಿಮಗೆ ಸರಿಯಾದ ಉದ್ಯೋಗ ಸಿಗುತ್ತದೆ. ಇಲ್ಲಿ ಇಲ್ಲಿ ಕಲಿತವರು ರಾಜ್ಯಮಟ್ಟದ ಅಧಿಕಾರಿಗಳಾಗಿದ್ದಾರೆ' - ಕೃಷಿಕರಿಗೆ ಅರಣ್ಯ ಕಾಲೇಜಿನ ಪ್ರಾಂಶುಪಾಲರ ಕರೆ.

'ಕೃಷಿಕರೊಬ್ಬರ 'ಆನೆ ಕಾಟ ಜಾಸ್ತಿ. ಏನು ಮಾಡೋದು' ಎಂಬ ಪ್ರಶ್ನೆಗೆ ಕುಶಾಲಪ್ಪ ಉತ್ತರ :`'ಅಂಥಲ್ಲಿ ಬಿದಿರು ಕೃಷಿ ಮಾಡಬೇಡಿ.''

ಇಲಾಖೆಯ ರಾಜ್ಯ ವರಿಷ್ಠ ಡಾ.ಕೆ.ಸುಂದರ ನಾಯಕ್ರಿಂದ ಬಿದಿರು ಕೃಷಿಕರ ಸಮಸ್ಯೆಗಳಿಗೆ ಉತ್ತರ. ''ಸರಕಾರಿ ಅರಣ್ಯಗಳ ಮೇಲೆ ಅವಲಂಬಿತರಾಗಬೇಡಿ. ನೀವೇ ಅರಣ್ಯ ಕೃಷಿ ಮಾಡಿ'' ಎಂಬ ಕಿವಿಮಾತು. ಮಂಗಳೂರು ವಲಯದ ಅರಣ್ಯ ಇಲಾಖೆಯ ವತಿಯಿಂದ ನಡೆದ 'ಬಿದಿರು ಸಿರಿ'ಯಲ್ಲಿ ವಯನಾಡಿನ 'ಉರವು' ಸಂಸ್ಥೆಯ ಉತ್ಪನ್ನಗಳ ಮಳಿಗೆ ಹೆಚ್ಚು ಗಮನ ಸೆಳೆದಿತ್ತು. ಉರವು - ಸರಕಾರದ ಹಂಗಿಲ್ಲದೆ ಬಿದರನ್ನು ಬೆಳೆಸಿ ಬಳಸುತ್ತಿದೆ.

ಅರಣ್ಯ ಇಲಾಖೆಯ ದೊಡ್ಡದೊಡ್ಡ ಅಧಿಕಾರಿಗಳು ತಮ್ಮ ಇಲಾಖೆಯ ಹಂಗಿಲ್ಲದೆ ಬಿದಿರು ಬೆಳೆಯಬಹುದು ಎಂದು ಸಲಹೆ ಮಾಡುವುದನ್ನು ಕೇಳುವಾಗ ಖುಷಿಯಾಗುತ್ತದೆ. ಆದರೆ 'ಮನಸ್ಸೂ ಬದಲಾಗಬೇಕು' ಎಂಬ ಸಲಹೆಯಲ್ಲೇ ನಿಜಸ್ಥಿತಿಯ ಸೂಚನೆ ಇದೆ !

1 comments:

VasanthKaje said...

ಕಾರಂತರೆ,

ಚಿತ್ರದಲ್ಲಿ ತೋರಿಸಿದ ಬಿದಿರಿನ ಸಸಿ ಬೈಫ್ ನಲ್ಲಿ ಸಿಗುತ್ತದೆಯೆ? ನನಗೆ ಇದು ಬೇಕಿತ್ತು. ಇದನ್ನು ಸೋನ್ಸ್ ಫಾರ್ಮ್ ನಲ್ಲಿ ನೋಡಿದ್ದೆ.

ವಸಂತ್ ಕಜೆ

Post a Comment