ಇಪ್ಪತ್ತು ವರುಷಗಳಿಂದ ಭಣಭಣವಾಗಿದ್ದ ಕೊಳವೆಬಾವಿಗಳು
ಮರುಜೀವ ಪಡೆದಿದೆ. ಮೂರ್ನಾಲ್ಕು ಕಿಲೋಮೀಟರ್ ವ್ಯಾಪ್ತಿಯ
ಸುಮಾರು ಹದಿನೈದಕ್ಕೂ ಮಿಕ್ಕಿ ಕೊಳವೆಬಾವಿಗಳಲ್ಲಿ ಮತ್ತೆ ನೀರು ಒಸರಿದೆ. ಜನವರಿಯಲ್ಲಿ ಬತ್ತುತ್ತಿದ್ದ ಕೆರೆ-ಬಾವಿಗಳಲ್ಲಿ ಈಗ ಮೇ
ತನಕ ನೀರಿರುತ್ತದೆ ಎಂದು ಸಂತಸವನ್ನು ಹಂಚಿಕೊಳ್ಳುತ್ತಾರೆ ಸೀಗೆಹಳ್ಳಿಯ ಕೃಷಿಕ ಶ್ರೀನಿವಾಸ ಮೂರ್ತಿ.
ದೊಡ್ಡಬಳ್ಳಾಪುರ ಜಿಲ್ಲೆಯ ಚೆನ್ನಗಿರಿ ಬೆಟ್ಟ
ಅರ್ಕಾವತಿ ನದಿಯ ಮೂಲ. ಇದರ ತಪ್ಪಲಲ್ಲಿದೆ - ಚೆನ್ನಪುರ, ಚಿಕ್ಕರಾಯಪ್ಪನಹಳ್ಳಿ, ದೊಡ್ಡರಾಯಪ್ಪನಹಳ್ಳಿ, ಶೀಗೆಹಳ್ಳಿ, ಸಾಧೂಮಠ ಹಳ್ಳಿಗಳು. ಭತ್ತ, ರೇಷ್ಮೆ, ದ್ರಾಕ್ಷಿ, ಸಪೋಟ,
ಸೀಬೆ, ಮಾವು, ತರಕಾರಿಗಳು..
ಹೀಗೆ ಎಲ್ಲರದೂ ಕೃಷಿ ಬದುಕು.
ಶ್ರೀನಿವಾಸ ಮೂರ್ತಿಯವರ ಸಂತಸದ ಹಿಂದಿರುವುದು ಸಂತೋಷವಲ್ಲ, ವಿಷಾದ.
ಹನ್ನೆರಡು ವರುಷದ ಹಿಂದೆ ತಮ್ಮೂರನ್ನು ಹೈರಾಣ ಮಾಡಿದ್ದ ಕಲ್ಲು ಗಣಿಗಾರಿಕೆ ದಂಧೆಯ ಕತೆ. ಹಳ್ಳಿಗರು
ಏಕಮನಸ್ಸಿನಿಂದ ಒಟ್ಟಾಗಿ ಊರಿಗೆ ಬಂದ ಮಾರಿಯನ್ನು ಓಡಿಸಿದ ಕತೆ.
ಒಂದು ಮುಂಜಾನೆ ಚೆನ್ನಗಿರಿ ಬೆಟ್ಟದಲ್ಲಿ ಸ್ಫೋಟ! ಮಲಗಿದ್ದ ಹಳ್ಳಿ ಮುಸುಕೆಳೆಯುವ ಮೊದಲೇ
ಕಂಪಿಸಿತು. ಎರಡು ವಾರದ ಸ್ಫೋಟದ ಸದ್ದು ಹಳ್ಳಿಗೆ ಮೃತ್ಯು ದರ್ಶನ ಮಾಡಿಸಿತ್ತು. ಹಣ ಮತ್ತು ರಾಜಕೀಯ
ಶಕ್ತಿಯ 'ಕಾಣದ' ಮೇಲಾಟಗಳು ಬದುಕನ್ನು ಹಿಂಡಿ
ಹಿಪ್ಪೆ ಮಾಡಿತ್ತು. ಸರಕಾರವು ಚೆನ್ನಗಿರಿಯನ್ನು 'ಅರ್ಕಾವತಿ ಜಲಾನಯನ ಸಂರಕ್ಷಿತ
ಅರಣ್ಯ ಪ್ರದೇಶ'ವೆಂದು ಘೋಷಿಸಿ, ಇಲ್ಲಿ ಸ್ಫೋಟಕ,
ಗಣಿಗಾರಿಕೆ ಕೂಡದು ಎಂದು ಆದೇಶಿಸಿತ್ತು. ಕಾನೂನಿನ ಕವಚವಿದ್ದರೂ ಗಣಿಗಾರಿಕೆ ಹಳ್ಳಿಗೆ
ನುಗ್ಗಿತು.
ಜನರು ಮುಗ್ಧರು. ಅಮಾಯಕರು. ಬಹುತೇಕ ಅನಕ್ಷರಸ್ಥರು.
ಗಣಿಧಣಿಗಳಿಗೆ ಬೆಟ್ಟಕ್ಕೆ ನುಸುಳಲು ಇಷ್ಟು ಸಾಕಾಗಿತ್ತು. ಅಮಾಯಕರಂತೆ ಬಂದರು. ಸರ್ವೇ ಮಾಡಿದರು.
ಜನರ ಮನೋಧರ್ಮವನ್ನು ಅರಿತರು. ಜನರೊಂದಿಗೆ ಬೆರೆತರು. ವಿಶ್ವಸಿಗನಂತೆ ನಡೆದುಕೊಂಡರು. 'ಹೆಚ್ಚು ವೇತನ ನೀಡ್ತೇವೆ' ಎಂದರು.
ರಾಜಕೀಯ ಮುಖಂಡರನ್ನು ಮುಷ್ಠಿಯೊಳಗಿಟ್ಟುಕೊಂಡರು. ಗಣಿಗಾರಿಕೆ ಚಾಲೂ ಆಗಲು ಬೇಕಾದ ನೀಲನಕ್ಷೆ ತಯಾರಿ.
ಜತೆಗೆ ಹಳ್ಳಿಯನ್ನು ಬೆಟ್ಟಕ್ಕೆ ಬೆಸೆಯುವ ಅಗಲ ರಸ್ತೆಯ ನಿರ್ಮಾಣವೂ ಶುರುವಾಗಿತ್ತು.
'ಊರಲ್ಲೇ ಕೆಲಸ ಸಿಗುತ್ತೆ,
ಕೈತುಂಬಾ ಕಾಸು ಸಿಗುತ್ತೆ. ಸಂಜೆ ಹೇಗೂ ಗಮ್ಮತ್ತು ಮಾಡ್ತಾರೆ' ಎಂದು ಬೀಗುತ್ತಿದ್ದ ಶ್ರಮಿಕರ ಗುಂಪು ಗಣಿಯವರ ದೊಡ್ಡ ಸಂಪತ್ತಾಯಿತು. ಇವರ ಮೂಲಕ ಇತರ ಅಮಾಯಕರ
ವಶೀಲಿ. ಹಳ್ಳಿಯ ಮನಸ್ಸುಗಳನ್ನು ಒಡೆದು, ಗುಡ್ಡದ ಸಂಪತ್ತನ್ನು ನಗರಕ್ಕೆ
ಸೇರಿಸುವ ಕಾರ್ಯಹೂರಣಗಳು ಸಿದ್ಧವಾಗುತ್ತಿದ್ದಂತೆ ಸ್ಫೋಟದ ಮಾಲೆ ಶುರು.
ಈ ಸದ್ದಿಗೆ ಮನೆಗಳ ಗೋಡೆಗಳು ಬಿರುಕುಬಿಟ್ಟವು.
ಹಾರುಬೂದಿ ಹಳ್ಳಿಯನ್ನೇ ವ್ಯಾಪಿಸಿದುವು. ಕೃಷಿ ಕೈಕೊಟ್ಟಿತು. ಕೊಳವೆ ಬಾವಿಗಳು ಮುಷ್ಕರ ಹೂಡಿದುವು.
ಅಂತರ್ಜಲ ಮಟ್ಟ ಕುಸಿತದ ಅನುಭವ. ಎಲ್ಲರ ಕತೆಯೂ ಒಂದೇ ರೀತಿ.
ಹಳ್ಳಿಯ ಬದುಕಿನ ಚಿತ್ರಗಳು ಮಾಧ್ಯಮಗಳಲ್ಲಿ
ಬಿತ್ತರ. ಸುದ್ದಿಗಳು ನಾಡಿನ ದೊರೆಗಳ ಕದ ತಟ್ಟಿತು. ಆದರೆ ಮನ ತಟ್ಟಲಿಲ್ಲ. ಪರಿಸ್ಥಿತಿ ಅರಿವಾಗುವಾಗ ಸಮಯ ಮೀರಿತ್ತು.
ಬದುಕನ್ನು ಗಣಿಧಣಿಗಳಿಗೆ ಒತ್ತೆಯಿಟ್ಟಾಗಿತ್ತು. ಕಾಂಚಾಣ ಸದ್ದಿನ ಪುಂಗಿಗೆ ಶ್ರಮಿಕರ ಸಣ್ಣ ಗುಂಪು
ಹೆಡೆಯೆತ್ತುತ್ತಿತ್ತು. ಭುಸುಗುಟ್ಟುತ್ತಿರಲಿಲ್ಲ! ಮುಂದೇನು ದಾರಿ? ಆಸಕ್ತರು ಸೇರಿದರು, ಚರ್ಚಿಸಿದರು.
ಮನೆಮನೆ ಭೇಟಿ. ಯುವಕರೊಂದಿಗೆ ಮಾತುಕತೆ. ರಾಜಕೀಯ ರಹಿತವಾದ ಹೋರಾಟಕ್ಕೆ ಅಣಿಯಾದರು. ಹಳ್ಳಿ ಉಳಿಸುವ,
ಬೆಟ್ಟವನ್ನು ಸಂರಕ್ಷಿಸುವ ಯೋಜನೆ ಸಿದ್ಧವಾಯಿತು. ಹೋರಾಟ ಸಮಿತಿ ರೂಪೀಕರಣವಾಯಿತು.
ರೈತ ಸಂಘ, 'ಸ್ವರಾಜ್' ಸಂಸ್ಥೆ, ಸಮಾನ ಮನಸ್ಸಿನ ಸಂಸ್ಥೆಗಳು ಹೆಗಲು ನೀಡಿದುವು.
ಮೊದಲು ಕಾನೂನಿನಡಿ ಹೋರಾಟ. ಮನವಿ, ಅರ್ಜಿಗಳನ್ನು ನೀಡಲು ಕಚೇರಿಗಳ ಅಲೆದಾಟ. ಸಚಿವರು,
ಅಧಿಕಾರಿಗಳ ಭೇಟಿ. ಜನನಾಯಕರಲ್ಲಿ ಮಾತುಕತೆ. ಎಲ್ಲವೂ 'ನಿರೀಕ್ಷಿತ' ನಿಷ್ಫಲ. ಮುಂದಿನ ದಾರಿ - ಗಾಂಧಿಗಿರಿ ಹೋರಾಟ. ಮುಖ್ಯವಾಗಿ
ಮಹಿಳೆಯರು ಹೋರಾಟದ ಮುಂಚೂಣಿಯಲ್ಲಿದ್ದರು. ಹಳ್ಳಿ ಎದ್ದು ನಿಂತಾಗ ಗಣಿಯವರು ಬೆವರೊರೆಸಿಕೊಂಡರು. ಸಬೂಬು
ಹೇಳಿ ಹಳ್ಳಿಗರ ಮೇಲೆ ಗೂಬೆ ಕೂರಿಸುವ ಪ್ರಯತ್ನವೂ ಮುಂದುವರಿದಿತ್ತು. ಆದರೆ ಪೋಲಿಸ್, ಅರಣ್ಯ ಇಲಾಖೆ ಮತ್ತು ಪ್ರಾಮಾಣಿಕ ಸರಕಾರಿ, ಜನನಾಯಕರು ಚೆನ್ನಗಿರಿಗೆ
ದನಿಯಾದರು.
ಹಳ್ಳಿಯನ್ನು ಗುಡ್ಡಕ್ಕೆ ಸಂಪರ್ಕಿಸುತ್ತಿದ್ದ
ಅಗಲ ರಸ್ತೆಯಿದೆಯಲ್ಲಾ, ಅದನ್ನು ಮೊದಲು ಬಂದ್
ಮಾಡಿದರು. ರಸ್ತೆಯುದ್ದಕ್ಕೂ ಮಣ್ಣುಮಾಂದಿ (ಜೆಸಿಬಿ) ಯಂತ್ರದಿಂದ ಹೊಂಡ ತೆಗೆದರು. ನೇರಳೆ,
ಬೇವು, ಹಲಸು, ಹುಣಸೆ,
ಹೊಂಗೆ, ಮಾವು.. ಹೀಗೆ ಸುಮಾರು ಸಾವಿರಕ್ಕೂ ಮಿಕ್ಕಿ ಗಿಡಗಳನ್ನು
ನೆಟ್ಟರು. ಬೀಜಗಳನ್ನು ಗುಡ್ಡದಲ್ಲಿ ಎರಚಿದರು. ಯಾವಾಗ ಸಂಪರ್ಕ ಬಂದ್ ಆದುವೋ, ಅಲ್ಲಿಗೆ ಗಣಿಧೂಳು ಕಡಿಮೆಯಾಯಿತು. ಯಂತ್ರದ ಸದ್ದು ನಿಂತಿತು. ಜನಶಕ್ತಿಯ ಮುಂದೆ ಕಾಣದ ಮುಖಗಳು
ಮರೆಯಾದುವು. ಆ ದಿನ ಜೂನ್ 11, 2006 - ಹಳ್ಳಿಗರ ಗಾಂಧಿಗಿರಿ ಹೋರಾಟಕ್ಕೆ
ಜಯ ಸಿಕ್ಕಿದ ದಿವಸ. ಚೆನ್ನಗಿರಿ ಉತ್ಸವದ ಮೂಲಕ ಸಂಭ್ರಮಾಚರಣೆ.
ಗಿಡಗಳನ್ನು ನೆಡುವತ್ತ ಎಷ್ಟು ಆಸಕ್ತಿ ಇತ್ತೋ, ಅದಕ್ಕೆ ನೀರು, ಗೊಬ್ಬರ ಹಾಕಿ
ಸಾಕಿ ಸಲಹುವತ್ತಲೂ ಪೈಪೋಟಿ. ಕಲ್ಲು ಅಗೆದು ಬೋಳಾಗಿದ್ದ ಗುಡ್ಡಕ್ಕೆ ಪುನಃ ಹಸಿರು ಹೊದೆಸುವ ಕೆಲಸ.
ಅದಕ್ಕಾಗಿ ನರ್ಸರಿಗಳ ಹುಟ್ಟು. ಗಿಡಗಳ ತಯಾರಿ.
ಚೆನ್ನಗಿರಿ ಬೆಟ್ಟ ಉಳಿಸುವ ಹೋರಾಟದಲ್ಲಿ
ಜತೆಗಿದ್ದ 'ಸ್ವರಾಜ್' ಸಂಸ್ಥೆಯು 2009ರಿಂದ ಸರಕಾರದ ಆಯೋಜನೆಯಲ್ಲಿ 'ಜಲಾನಯನ ಅಭಿವೃದ್ಧಿ' ಕೆಲಸಗಳನ್ನು ಶುರು ಮಾಡಿತು. ಸ್ಥಳೀಯ ಶ್ರೀ
ಚನ್ನರಾಯಸ್ವಾಮಿ ಜಲಾನಯನ ಅಭಿವೃದ್ಧಿ ಸಮಿತಿ ಸಾಥ್ ನೀಡಿತು. ಕೆರೆಗಳ ಹೂಳು ತೆಗೆಯುವುದು,
ಹಳ್ಳಿಗಳಿಗೆ ನೀರು ಸರಬರಾಜು ಕೆಲಸಗಳು ಜತೆಜತೆಗೆ ನಡೆಯುತ್ತಿದ್ದುವು. ಜಲಾನಯನ ಕೆಲಸದಡಿಯಲ್ಲಿ
ಹದಿನೈದು ಸಾವಿರಕ್ಕೂ ಮಿಕ್ಕಿ ಕಾಡು ಗಿಡಗಳನ್ನು ನೆಡಲಾಗಿದೆ. ಕೆರೆಗಳ ಹೂಳು ತೆಗೆಯುವುದು,
ನಾಲಾ ಬಂಡ್ಗಳ ಜೀರ್ಣೋದ್ಧಾರ, ಜಲಮರುಪೂರಣ.. ಕೆಲಸಗಳು
ಸದ್ದಿಲ್ಲದೆ ನಡೆಯಿತು.
ರಾಸಾಯನಿಕ ಸಿಂಪಡಣೆಗಳಿಂದ ತೋಯ್ದ ನೆಲವನ್ನು
ಪುನಃ ಫಲವತ್ತತೆ ಮಾಡುವ ಕೆಲಸಕ್ಕೆ 'ಸ್ವರಾಜ್' ಮುಂದಾಯಿತು. ಇಪ್ಪತ್ತೈದಕ್ಕೂ ಮಿಕ್ಕಿ ಕೃಷಿಕರು ಹೊರಬಂದು ಸಾವಯವ ಕೃಷಿಗೆ ಬದಲಾದರು. ಎಂಭತ್ತು
ರೈತರು ಹೊಲಗಳಿಗೆ ಬದುಗಳನ್ನು ಹಾಕಿಸಿಕೊಂಡರು. ಬದುವಿನಂಚಿನಲ್ಲಿ ತರಕಾರಿ ಕೃಷಿ. ಈ ಎಲ್ಲಾ ಕೆಲಸಗಳಿಂದಾಗಿ ಕೊಳವೆ ಬಾವಿಗಳು ಮರುಜೀವ ಪಡೆಯುತ್ತಿವೆ.
ಬತ್ತಿದ ಬಾವಿಗಳು ತುಂಬುತ್ತಿವೆ. 'ಕಳೆದೆರಡು ವರುಷದಲ್ಲಿ ಸುಮಾರು ಇಪ್ಪತ್ತು
ಎಕರೆಯಷ್ಟು ಕೃಷಿ ವಿಸ್ತಾರವಾಗಿದೆ. ಈಗ ಮೇಲ್ಮಣ್ಣು ಕೊಚ್ಚಿ ಹೋಗುತ್ತಿಲ್ಲ. ಇಳುವರಿಯಲ್ಲಿ ಹೆಚ್ಚಳವಾದುದನ್ನು
ಗಮನಿಸಿದ್ದೇವೆ' ಎನ್ನುತ್ತಾರೆ ಸ್ವರಾಜ್ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದ
ಲೋಹಿತ್. ಜತೆಗೆ ಸರಕಾರದ ವಿವಿಧ ಯೋಜನೆಗಳೂ ಅಭಿವೃದ್ಧಿಗೆ ನೆರವಾಗಿವೆ.
'ಆರು ವರುಷದ ಹಿಂದೆ ಇಳಿಲೆಕ್ಕವಾಗಿದ್ದ
ಬದುಕಿನಲ್ಲಿ ವಿಶ್ವಾಸ ಬಂದಿದೆ. ಗಣಿಗಾರಿಕೆಯ ಅಬ್ಬರಕ್ಕೆ ರೋಸಿ ಹೋಗಿ ಹಳ್ಳಿಯನ್ನೇ ತೊರೆದು ಹೋಗೋಣ
ಎಂದು ನಿರ್ಧರಿಸಿದ್ದೆವು. ಗಾಂಧೀಜಿಯವರು ಹಾಕಿಕೊಟ್ಟ ಅಹಿಂಸಾ ಮಾರ್ಗದ ದಾರಿಯಲ್ಲೇ ಚೆನ್ನಗಿರಿ ಹೋರಾಟವೂ
ನಡೆದಿರುವುದು ನಮ್ಮ ಬದುಕಿನ ಮಹತ್ವದ ದಿನಗಳು' ಎಂದು ಕಳೆದ ದಿನಗಳನ್ನು
ನೆನಪಿಸಿಕೊಳ್ಳುತ್ತಾರೆ ಕೃಷಿಕ ಮುನಿರಾಜ್.
ಗಣಿಗಾರಿಕೆಯ ಹೋರಾಟ ಅಂತಿಮ ನಡೆಯಲ್ಲಿದ್ದಾಗ
ಚೆನ್ನಗಿರಿ ಬೆಟ್ಟಕ್ಕೆ ಭೇಟಿ ನೀಡಿದ್ದೆ. ಮೊನ್ನೆ
ಫೆಬ್ರವರಿಯಲ್ಲಿ ಮತ್ತೊಮ್ಮೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ರಸ್ತೆಯುದ್ದಕ್ಕೂ ನೆಟ್ಟ
ಗಿಡಗಳು ಅರೈಕೆಯಿಂದಾಗಿ ಚೆನ್ನಾಗಿ ಬೆಳೆದು ನಿಂತಿದೆ. ಗಣಿಯ ಅಟ್ಟಹಾಸಕ್ಕೆ ನಲುಗಿದ್ದ ಬೆಟ್ಟದಲ್ಲಿ
ಹಸಿರು ಚಿಗುರುತ್ತಿದೆ.
ಬೆಟ್ಟದಲ್ಲಿ ಹಸಿರು ಹೊದಿಕೆ ಜೀವಪಡೆಯುತ್ತಿದ್ದಂತೆ; ಇತ್ತ ಹಳ್ಳಿಗಳ ಬಾವಿಗಳಲ್ಲಿ, ಕೊಳವೆ ಬಾವಿಗಳಲ್ಲಿ ನೀರಿನೊಸರಿಗೆ ಜೀವ ಬಂದಿದೆ. 'ನಾವು ಉಳಿಸಿದ
ಹಳ್ಳಿ' ಎನ್ನುವ ಅಭಿಮಾನ ಅಲ್ಲಿ ಮೂಡಿವೆ. ಹಳ್ಳಿಯ ಒಗ್ಗಟ್ಟಿನ ಮುಂದೆ ನೋಟಿನ
ಕಂತೆಗಳು ಮೌಲ್ಯ ಕಳೆದುಕೊಂಡಿವೆ.
ಗಣಿಗಾರಿಕೆಯಿಂದ ನಲುಗಿದ ಚೆನ್ನಗಿರಿ ಬೆಟ್ಟಕ್ಕೆ
ಮುಕ್ತಿ ಸಿಕ್ಕಿತು. ಜತೆಗೆ ಒಂದಷ್ಟು ಸದ್ದು ಮಾಡಿತು. ಆದರೆ ಗಣಿ ಧೂಳಿನಿಂದ ಮುಚ್ಚಿಹೋಗಿರುವ ಎಷ್ಟೋ
ಹಳ್ಳಿಗಳು ಇಲ್ವಾ. ಅದಕ್ಕೆ ಸದ್ದಾಗುವವರು ಯಾರು?