Tuesday, November 18, 2014

ಕೆನ್ ಲವ್ ವ್ಯಕ್ತಿಯಲ್ಲ, ಒಂದು ಸಂಸ್ಥೆ!               "ಕೃಷಿಯ ಆದಾಯ ವರ್ಧನೆ ಮಾಡದಿದ್ರೆ  ನಮ್ಮ ಮಕ್ಕಳನ್ನು ಕೃಷಿಯಲ್ಲಿ ಉಳಿಸಿಕೊಳ್ಳಲು ಅಸಾಧ್ಯ. ಮುಂದಿನ ಜನಾಂಗ ಕೃಷಿಯಲ್ಲಿ ಉಳಿಯಬೇಕಿದ್ದರೆ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡುವುದೊಂದೇ ದಾರಿ."
              ಹವಾಯಿಯ ಕೃಷಿಕ ಕೆನ್ ಲವ್ ಕನ್ನಾಡಿಗೆ ಬಂದು, ಕೃಷಿಕರನ್ನು ಭೇಟಿ ಮಾಡಿದಾಗ ಹೇಳಿದ  ಅನುಭವದ ಮಾತಿದು. ನವೆಂಬರ್ ಮೊದಲ ವಾರದಲ್ಲಿ ರಾಜಧಾನಿ, ಕರಾವಳಿ, ಕೇರಳದ ಕೆಲವು ತೋಟಗಳಿಗೆ ಸುತ್ತಿ ಕೃಷಿಕರೊಂದಿಗೆ ಮಾತನಾಡಿದರು. ಇಲ್ಲಿನ ಹಣ್ಣುಗಳ ವೈವಿಧ್ಯಗಳನ್ನು ನೋಡಿ ಅನುಭವ ಪಡೆದುಕೊಂಡರು. ಕಾರ್ಮಿಕ ಸಮಸ್ಯೆ, ಯುವಕರ ವಲಸೆ, ಅಸ್ಥಿರ ಮಾರುಕಟ್ಟೆಯಂತಹ ಸಂಕಟಗಳು ಭಾರತ ಮಾತ್ರವಲ್ಲ ಹವಾಯಿಯಲ್ಲೂ ಕೃಷಿಕರ ನಿದ್ದೆಗೆಡಿಸಿತ್ತು.
                ಇಲ್ಲಿನ ಏಕಬೆಳೆ ಪದ್ಧತಿಯನ್ನು ವೀಕ್ಷಿಸಿದ ಕೆನ್, ಏಕಬೆಳೆಯಿಂದ ಒಮ್ಮೆಗೆ ಲಾಭ ತರಬಹುದೇನೋ. ಆದರೆ ಕೃಷಿ ಯಶ ಕಾಣಬೇಕಾದರೆ ಬೆಳೆಯಲ್ಲಿ ವೈವಿಧ್ಯಗಳನ್ನು ತರಲೇಬೇಕು. ತಂತಮ್ಮ ಪ್ರದೇಶಕ್ಕೆ ಯಾವ್ಯಾವ ಬೆಳೆಗಳು ಹೊಂದಬಹುದೆನ್ನುವುದನ್ನು ಅರಿತು ಕೃಷಿ ಮಾಡಿದರೆ ಒಳ್ಳೆಯದು, ಎಂದರು.
              ಒಂದು ಕಾಲಘಟ್ಟದಲ್ಲಿ ಕೃಷಿ ಸಂಕಟಗಳು ಹವಾಯಿಯನ್ನು ತಲ್ಲಣಗೊಳಿಸಿತ್ತು. ಅಲ್ಲಿನ ಕೋನಾ ಕಾಫಿ ಕೃಷಿಯು ಸಮಸ್ಯೆಗಳಿಂದ ನಲುಗಿದಾಗ ಕೆನ್ ಮುಂದಾಳ್ತನದಲ್ಲಿ ಕೃಷಿಕರ ತಂಡವು ಪರಿಹಾರವನ್ನು ಕಂಡುಕೊಳ್ಳಲು ಹೆಜ್ಜೆಯೂರಿತು. ಕೃಷಿಯ ಸಂಕಟಗಳಿಗೆ ಸರಕಾರವನ್ನು ಯಾಚಿಸಿದರೆ ಪ್ರಯೋಜನವಾಗದು. ಕೃಷಿಕರೇ ಪರಸ್ಪರ ಒಟ್ಟಾಗಿ ಯೋಜನೆಯನ್ನು ರೂಪಿಸಿಕೊಳ್ಳಬೇಕೆಂಬುದು ಕೆನ್ ಪ್ರತಿಪಾದನೆ.
                ಹವಾಯಿ ಹಣ್ಣುಗಳ ವೈವಿಧ್ಯಕ್ಕೆ ಖ್ಯಾತಿ. ಕೆನ್ ಹಣ್ಣು ಬೆಳೆಗಾರ. ಕಳೆದ ಶತಕದ ಆರಂಭದಲ್ಲಿ ರಫ್ತು ಮಾಡುವ ಅವಕಾಡೋದಲ್ಲಿ  (ಬೆಣ್ಣೆ ಹಣ್ಣು)  ಕಂಡು ಬಂದ ಹಣ್ಣುಹುಳವು ರಫ್ತು ಉದ್ಯಮಕ್ಕೆ ತಿಲಾಂಜಲಿ ನೀಡಿತು. ಈಗ ಈ ದ್ವೀಪ ಬೆಳೆಯುವ ಯಾವುದೇ ತಾಜಾ ಹಣ್ಣನ್ನೂ ಹೊರಗೆ ಒಯ್ಯುವುದು ಕಾನೂನು ರೀತ್ಯಾ ಅಪರಾಧ! ಕಣ್ಣೆದುರಿನಲ್ಲಿ ಯಥೇಷ್ಟ ಹಣ್ಣುಗಳಿದ್ದರೂ ಮಾರುಕಟ್ಟೆ ಮಾಡಲು ಅಸಾಧ್ಯವಾದ ಸನ್ನಿವೇಶ. ಆಮದು ಹಣ್ಣುಗಳತ್ತ ವ್ಯಾಪಾರಿಗಳ ಚಿತ್ತ. ಮಾರಾಟ ಅವಕಾಶಗಳಿಗೆ ಇಳಿಲೆಕ್ಕ.
             ಪರಿಣಾಮ, ಸ್ಥಳೀಯ ತಳಿಗಳು ಕಣ್ಮರೆಯಾದುವು. ನೂರಕ್ಕೂ ಮಿಕ್ಕಿ ಬಾಳೆ ವೈವಿಧ್ಯಗಳಿದ್ದುವು. ಈಗದು ಐವತ್ತೂ ಮೀರದು. ರೈತರಿಗೂ ಆಸಕ್ತಿ ಕುಗ್ಗಿತು. ಕಂಪೆನಿಗಳು ನೀಡುವ ಹಣ್ಣುಗಳಿಗೆ ಕೈಒಡ್ಡಬೇಕಾದ ಸ್ಥಿತಿ. ಬೆಳೆದ ಹಣ್ಣುಗಳು ಮಣ್ಣಲ್ಲಿ ಮಣ್ಣಾಗಿ ಹೋಗುವುದನ್ನು ನೋಡುವ ದಾರುಣ ಸ್ಥಿತಿ.
            ಸ್ಥಳೀಯ ಮಾರುಕಟ್ಟೆ ಸೃಷ್ಟಿ, ಕೃಷಿಕರಿಗೆ ಮತ್ತೆ ಒಲವು ಮೂಡಿಸುವ ಯತ್ನ - ಇವೆರಡೇ ಮುಂದಿದ್ದ ಆಯ್ಕೆ. ಕಳೆದುಕೊಂಡಿರುವ ಹಣ್ಣುಗಳ ಪತ್ತೆಗೆ ಮೊದಲಾದ್ಯತೆ ನೀಡಿದರು. ವರ್ಷಪೂರ್ತಿ ವಿವಿಧ ಹಣ್ಣುಗಳನ್ನು ಪಡೆಯಲು ತಂತ್ರಗಳ ರೂಪುರೇಷೆ. ಕೃಷಿಕನೇ ಮಾರಾಟಗಾರನಾಗಬೇಕೆನ್ನುವ ಸಂಕಲ್ಪ. ಇವೆಲ್ಲವನ್ನೂ ಕ್ರೋಢಿಸಿಕೊಂಡು ಹವಾಯ್ ಪ್ರವಾಸೋದ್ಯಮ ಕೇಂದ್ರವಾಗಬೇಕೆನ್ನುವ ದೂರದೃಷ್ಟಿ.
              ಕೆನ್ ಯೋಚನೆಗಳಿಗೆ ಹೆಗಲೆಣೆಯಾಗುವ ತಂಡ ಸಿದ್ಧವಾಯಿತು. ಕಳೆದುಹೋಗಿರುವ ಹಣ್ಣುಗಳನ್ನು ಪಟ್ಟಿ ಮಾಡಿ ಮತ್ತೆ ತೋಟಕ್ಕೆ ತರುವ ಯೋಚನೆಗೆ ಚಾಲನೆ ಕೊಟ್ಟರು. ವರುಷದ ಎಲ್ಲಾ ತಿಂಗಳುಗಳಲ್ಲಿ ಹಣ್ಣು ಪಡೆಯುವ '12 ಟ್ರೀಸ್ ಪ್ರಾಜೆಕ್ಟ್' ಅನುಷ್ಠಾನಿಸಿದರು. ಕೆನ್ ಸ್ವತಃ ಬೆಳೆಸಿ ತೋರಿಸಿದ ಬಳಿಕ ಕೃಷಿಕರಿಗೆ ನಂಬುಗೆ ಬಂತು. ಯೋಜನೆಯನ್ನು ಅನುಸರಿಸಿದರು.
              ಮಾರುಕಟ್ಟೆಯಲ್ಲಿ ರೈತನೇ ವ್ಯಾಪಾರಿ. ಅವರವರ ತೋಟದ ಹಣ್ಣುಗಳನ್ನು ಆಕರ್ಷಕ ನೋಟಗಳಲ್ಲಿ ಬಿಂಬಿಸುವ ಯತ್ನ. ಸೈನ್ಬೋಡರ್್ಗಳ ಮುದ್ರಣ. ಬೆಳೆ ವಿವಿರಗಳಿರುವ ಫಲಕ. ಒಂದೊಂದು ಹಣ್ಣುಗಳಿಗೂ ರೈತನದ್ದೇ ಬ್ರಾಂಡಿಗ್. ತಾವು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಮಾರಿಹೋಗುತ್ತದೆ ಎನ್ನುವ ಧೈರ್ಯ ಬಂತು. ಕೃಷಿಗೆ ಮರಳಲು ಹುಮ್ಮಸ್ಸು ಹೆಚ್ಚಿತು.
ಲಾಂಗಾನ್, ರಂಬುಟಾನ್, ಜಂಬುನೇರಳೆ, ಅಬಿಯು, ಮೊಂಬಿನ್, ಇಪ್ಪತ್ತೈದಕ್ಕೂ ಮಿಕ್ಕಿದ ಬೆಣ್ಣೆಹಣ್ಣುಗಳ ತಳಿಗಳು, ಜಬೋಟಿಕಾಬಾ, ಫ್ಯಾಶನ್ಫ್ರುಟ್, ಸ್ಟಾರ್ಫ್ರುಟ್.. ಹೀಗೆ ಒಂದೊಂದೇ ಮಾರುಕಟ್ಟೆಯ ಜಗಲಿಯೇರಿದುವು. ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿದ್ದಾಗ, ಮೌಲ್ಯವರ್ಧನೆಯಿಂದ ಹೇಗೆ ದುಪ್ಪಟ್ಟು ಗಳಿಸಬಹುದೆನ್ನುವ ಅಧ್ಯಯನ. ತನ್ನ ಅಡುಗೆಮನೆಯಲ್ಲಿ ಉತ್ಪನ್ನಗಳನ್ನು ತಯಾರಿಸಿ, ಜನರಿಗೆ ರುಚಿಹತ್ತಿಸಿ, ಮಾರಾಟ ಮಾಡುವ ಯೋಚನೆ ಯಶವಾಯಿತು. ನೂರಕ್ಕೂ ಮಿಕ್ಕಿ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನವನ್ನು ಕೆನ್ ಅವರೊಬ್ಬರೇ ಮಾಡುತ್ತಾರೆ.
               ಪ್ರವಾಸಿ ತಾಣ, ಹೋಂ ಸ್ಟೇ, ರೈತ ಸಂತೆಗಳಲ್ಲಿ ಉತ್ಪನ್ನಗಳನ್ನು ಸಿಗುವಂತೆ ಮಾಡಿದರು. ಪ್ರವಾಸಿಗರು ಯಾವ ಉತ್ಪನ್ನವನ್ನು ಅಪೇಕ್ಷಿಸುತ್ತಾರೋ ಅದನ್ನು ಒದಗಿಸುವ ಕೃಷಿಕರ ಮಾರಾಟ ಜಾಲವನ್ನು ಸೃಷ್ಟಿಸಿದರು. ಕೆನ್ ಹೇಳುತ್ತಾರೆ, ಒಣ ಅಂಜೂರ, ಜೇನಿನಲ್ಲಿ ಹಾಕಿದ ಒಣ ಹಲಸಿನ ಹಣ್ಣು, ಚಾಕೋಲೇಟಿನಲ್ಲಿ ಅದ್ದಿನ ಹಲಸಿನ ಹಣ್ಣು, ಬಾಳೆಹಣ್ಣಿನ ಕೆಚಪ್, ವಿವಿಧ ಉಪ್ಪಿನಕಾಯಿಗಳಿಗೆ ಬೇಡಿಕೆ ಹೆಚ್ಚು. ಮನೆಯ ಉತ್ಪನ್ನಗಳನ್ನು ಗ್ರಾಹಕರು ಇಷ್ಟ ಪಡುತ್ತಾರೆ. ಉತ್ಪನ್ನಗಳ ರುಚಿ ತೋರಿಸಿ ಗ್ರಾಹಕರನ್ನು ಸೆಳೆಯುತ್ತೇವೆ. ಅವರಿಗೆ ಇಷ್ಟವಾದರೆ ಮಾರಾಟ ಸಲೀಸು. ಮತ್ತೆ ಅವರೇ ಹುಡುಕಿ ಬರುತ್ತಾರೆ.
               ಹೋಟೆಲಿನ ಬಾಣಸಿಗರನ್ನು ಭೇಟಿಯಾಗಿ ಸಂಘಟಿಸಿದರು. ಯಾವ ನಮೂನೆಯ ಹಣ್ಣುಗಳಿಗೆ, ಯಾವ ತಿಂಗಳಲ್ಲಿ ಬೇಡಿಕೆಯಿದೆ ಎನ್ನುವ ಮಾಹಿತಿ ಸಂಗ್ರಹಿಸಿ ಅದರಂತೆ ಪೂರೈಸಿ ಮಾರಾಟ ಕೊಂಡಿ ಗಟ್ಟಿಯಾಗಿಸಿದರು. ಹೀಗೆ ಕೃಷಿಕರನ್ನು ಕೃಷಿಯಲ್ಲಿ ಉಳಿಸಲು ಕೆನ್ ಮಾಡಿದ ಕೆಲಸಗಳು ಹಲವು ಮಂದಿ ದುಡಿಯುವ ಒಂದು ಕ್ರಿಯಾಶೀಲ ಸಂಸ್ಥೆಗೆ ಸಮನಾದದ್ದು.
ಕನ್ನಾಡಿಗೆ ಬಂದಾಗ ಕರಾವಳಿಯ ತೋಟಗಳಿಗೆ ಕೆನ್ ಭೇಟಿಯಿತ್ತರು. ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸ್, ಪುತ್ತೂರಿನ ವಿವೇಕಾನಂದ ಕಾಲೇಜು, ಕಬಕ ನಿನ್ನಿಕಲ್ಲಿನ ಜ್ಯಾಕ್ ಅನಿಲರ ನರ್ಸರಿ, ಪುತ್ತೂರಿನ ಗಿಡ ಗೆಳೆತನ ಸಂಘ 'ಸಮೃದ್ಧಿ', ಮೀಯಪದವಿನ ಡಾ.ಡಿ.ಸಿ.ಚೌಟರ ತೋಟ, ಮುಳಿಯ ವೆಂಕಟಕೃಷ್ಣ ಶರ್ಮರ ತೋಟ,.. ಹೀಗೆ ವಿವಿಧ ತೋಟಗಳನ್ನು ಭೇಟಿ ಮಾಡಿದಾಗ ಅವರು ಪ್ರತಿಪಾದಿಸಿದ ಅಂಶಗಳು ನಮ್ಮೂರಿಗೂ ಹೊಂದುತ್ತದೆ :
             ಹಣ್ಣನ್ನು ತಿನ್ನಲು ಮಾತ್ರವಲ್ಲ, ಪಂಚತಾರಾ ಹೋಟೆಲಿನ ಅಡುಗೆಗೂ ಬಳಸಬೇಕು. ಅದನ್ನು ಒಂದು ಆದಾಯ ತರುವಂತಹ ಬೆಳೆ ಎಂದು ಪರಿಗಣಿಸಬೇಕು. ಒಂದೇ ತಳಿಯನ್ನು ಬೆಳೆಯುವ ಪರಿಪಾಠದ ಬದಲು ಚಿಕ್ಕ ಚಿಕ್ಕ ತೋಟಗಳಲ್ಲಿ ಬೇರೆ ಬೇರೆ ಋತುಗಳಲ್ಲಿ ಫಲ ಕೊಡುವ ಹಣ್ಣುಗಳನ್ನು ಬೆಳೆಸಿ. ಹಣ್ಣುಗಳನ್ನು ಆಕರ್ಷಕವಾಗಿ ಪ್ಯಾಕಿಂಗ್ ಮಾಡಿದರೆ ಗ್ರಾಹಕರು ನೋಟಕ್ಕೆ ಆಕಷರ್ಿತರಾಗುತ್ತಾರೆ. ತೋಟದಲ್ಲಿ ಬೆಳೆಯಲು 'ಬೆಳೆ ಯೋಜನೆ' ಮಾಡಿದರೆ ಒಂದು ಬೆಳೆ ಕೈಕೊಟ್ಟರೂ ಆಧೀರರಾಗುವ ಪ್ರಮೇಯ ಬರುವುದಿಲ್ಲ.
              ಹಣ್ಣುಗಳನ್ನು ಕೊಯಿಲು ಮಾಡಿದ ತಕ್ಷಣ ಮಾರಾಟ ಮಾಡುವ ಜಾಲವನ್ನು ಸೃಷ್ಟಿಸಿಕೊಳ್ಳಬೇಕು. ಕೊಯ್ದಾಗ ತೋಟದಲ್ಲೇ ಪ್ಯಾಕಿಂಗ್ ಮಾಡಿದರೆ ಬಾಳಿಕೆ ಹೆಚ್ಚು. ಹಣ್ಣುಗಳಿಗೆ ಪ್ರಿಕೂಲಿಂಗ್ ವ್ಯವಸ್ಥೆ ಬಾಳಿಕೆ ಹೆಚ್ಚಿಸಲು ತುಂಬ ಪ್ರಯೋಜನಕರ. ಕೆಲವು ಹಣ್ಣುಗಳು ಬಹಳ ಮೃದುವಾಗಿದ್ದು, ಕೊಯ್ಯಲು ಜಾಣ್ಮೆ ಬೇಕಾಗುತ್ತದೆ. ಇಂಥವನ್ನು ಕೊಯ್ದ ಕೂಡಲೇ ಅಚ್ಚುಕಟ್ಟ್ಟಾಗಿ ಪೆಟ್ಟಿಗೆಗಳಲ್ಲಿ ಒಂದೇ ಪದರದಲ್ಲಿ ಪ್ಯಾಕ್ ಮಾಡಬೇಕು. ಪ್ರತಿ ಕೃಷಿಕರು ತಮ್ಮ ಉತ್ಪನ್ನಗಳಿಗೆ ಬ್ರಾಂಡಿಂಗ್ ಮಾಡಿದರೆ ಮಾತ್ರ ಯಶ.
                 ಗ್ರಾಹಕರಿಗೆ ಆಯ್ಕೆಗೆ ಅವಕಾಶ ಕೊಡಿ. ಜತೆಗೆ ಅರಿವನ್ನೂ ಮೂಡಿಸಿ. ಪ್ರಕೃತ ಮಾರುಕಟ್ಟೆಯ ಒಲವು ಹೇಗಿದೆ ಎನ್ನುವ ಅಧ್ಯಯನ ಕಾಲಕಾಲಕ್ಕೆ ಮಾಡುತ್ತಿರಿ. ಬೆಳೆಗಳ ಬೆಲೆಯನ್ನು ಕೃಷಿಕನೇ ನಿರ್ಧರಿಸಬೇಕು. ಎಂದೂ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ಮಾರಬೇಡಿ. ಕೃಷಿ ಪ್ರವಾಸೋದ್ಯಮ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಿ... ಹೀಗೆ ಕೆನ್ ತಮ್ಮೂರಿನಲ್ಲಿ ಮಾಡಿದ ಕೆಲಸಗಳನ್ನು ವಿವರಿಸುತ್ತಾ, ಮನಸ್ಸು ಮಾಡಿದರೆ ನಿಮ್ಮೂರಲ್ಲೂ ಸಾಧ್ಯ ಎನ್ನಲು ಮರೆಯಲಿಲ್ಲ.
             ಕೆನ್ ಜಪಾನಿನಲ್ಲಿ 'ಫ್ರುಟ್ ಪಾರ್ಕ್’ ವೀಕ್ಷಿಸಿದ್ದರು. ಅದರಲ್ಲಿ ಒಂದು ಬೆಳೆಯ ಬೀಜಪ್ರದಾನದಿಂದ ತೊಡಗಿ ಹಣ್ಣುಗಳನ್ನು ಮೌಲ್ಯವರ್ಧನೆ ಮಾಡುವ ತನಕದ ವಿವಿಧ ಹಂತದ ಮಾಹಿತಿ, ಪ್ರಾತ್ಯಕ್ಷಿಕೆಯಿದೆ. ಆ ಸರಹದ್ದಿನಲ್ಲಿ ಸಿಗುವ ಹಣ್ಣುಗಳ ಮಾಹಿತಿ ಪಾರ್ಕಿನಲ್ಲಿ ಸಿಗುವಂತಹ ವ್ಯವಸ್ಥೆಯಿದೆ. ಕೃಷಿಕ ಅಲ್ಲಿಗೆ ಹೋದರೆ ಹಣ್ಣುಗಳ ಪೂರ್ತಿ ಜ್ಞಾನ ಸಿಗುತ್ತದೆ. ಇಂತಹ ಪರಿಕಲ್ಪನೆ ಕಾಲದ ಅನಿವಾರ್ಯತೆ.
              ಹವಾಯಿಯ ಟ್ರಾಫಿಕಲ್ ಫ್ರುಟ್ ಅಸೋಸಿಯೇಶನ್ನಿನ ಅಧ್ಯಕ್ಷರಾಗಿರುವ ಕೆನ್ ಲವ್ ಕರ್ನಾಾಟಕ ಪ್ರವಾಸ ಮುಗಿಸಿ ಈ ವಾರ ಹವಾಯಿಗೆ ಹಾರಲಿದ್ದಾರೆ. ಒಬ್ಬ ಕೃಷಿಕನ ನೋವು-ನಲಿವು ಇನ್ನೊಬ್ಬ ಕೃಷಿಕನಿಗೆ ಗುರುತಿಸಲು ಕಷ್ಟವಲ್ಲ. ಹೀಗೆ ಅರ್ಥಮಾಡಿಕೊಳ್ಳುವಲ್ಲಿ ಭಾಷೆ ಅಡ್ಡಿಯಾಗಿಲ್ಲ. ನಾವು ಅಸಡ್ಡೆಯಿಂದ ಬದಿಗಿಟ್ಟ, ಆಲಸ್ಯದಿಂದ ಲಕ್ಷ್ಯವಹಿಸದ ಹಲವಾರು ಗಿಡ, ಸಸ್ಯ, ಹಣ್ಣುಗಳನ್ನು ಕೆನ್ ಅವರ ಮೂರನೇ ಕಣ್ಣು ಗ್ರಹಿಸಿ, ನಾಲ್ಕನೇ ಕಣ್ಣು ಕ್ಲಿಕ್ಕಿಸಿಕೊಂಡಿತು. 

1 comments:

ಭರತೇಶ ಅಲಸಂಡೆಮಜಲು said...

ಖಂಡಿತ ಹೆಮ್ಮೆಯೇ ವ್ಯಕ್ತಿತ್ವ... ದೇಶ ದೇಶ ಸುತ್ತಿ ಅಪಾರ ಕೃಷಿ, ತೋಟಗಾರಿಕೆ ಜ್ಞಾನ ಸಂಪಾದಿಸಿದ ಅಪರೂಪದ ವ್ಯಕ್ತಿ. ನಮ್ಮ ಪುತ್ತುರಿಗೂ ಬಂದಿದ್ದಾರೆ ಅಂದರೆ ನಮ್ಮ ಹೆಮ್ಮೆ .

Post a Comment