Monday, July 27, 2015

ಬದುಕಿನ ಹಳಿ ಜಾರುತ್ತಿದೆ, ಕೈತಾಂಗು ಬೇಕಾಗಿದೆ!

                 ಮ್ಯಾಗಿ ಬೂದಿಯಾಗುತ್ತಿದ್ದಂತೆ ಅದಕ್ಕಂಟಿದ ಕಳಂಕ ಮಸುಕಾಗುತ್ತಿದೆ! ಕಂಪೆನಿಯೇ ಕೋಟಿಗಟ್ಟಲೆ ಉತ್ಪನ್ನವನ್ನು ಸುಡುತ್ತಿದೆ. ಮ್ಯಾಗಿ ಮರೆವಿಗೆ ಜಾರುತ್ತಿರುವಾಗಲೇ ಆಹಾರ ಕಲಬೆರಕೆಯ ನಿರಾಕಾರ ಮುಖಗಳ ಸಾಕಾರತೆಯ ಗೋಚರ.  ಇವೆಲ್ಲಾ ಗೊತ್ತಿದ್ದೂ ಒಪ್ಪಿಕೊಂಡ ಮನಃಸ್ಥಿತಿ. ಒಂದು ಸಂಸ್ಕೃತಿಯನ್ನು ಹಾಳುಮಾಡಲು ಅಲ್ಲಿನ ಭಾಷೆ ನಾಶವಾದರೆ ಸಾಕಂತೆ. ಮನುಕೋಟಿ ನಾಶವಾಗಲು ಬಾಂಬ್ಗಳು, ಅಣ್ವಸ್ತ್ರಗಳು ಬೇಡ. ಆಹಾರ ವಿಷವಾದರೆ ಸಾಕು. ನಾವೆಲ್ಲಾ ಈ ಜಾಡಿನ ಜಾರುವ ಬದುಕಿನ ಹಳಿಯಲ್ಲಿ ವಾಲುತ್ತಿದ್ದೇವೆ.
                ವಾಹಿನಿಗಳನ್ನು ಆಗಾಗ್ಗೆ ಇಣುಕುತ್ತಿರುತ್ತೇನೆ. ಹಿಂಜುವ ಧಾರಾವಾಹಿ ಭರಾಟೆಯ ಮಧ್ಯೆಯೂ ಆಹಾರ ಸೇರಿರುವ ವಿಷಗಳ ಘೊರತೆಯ ಪ್ರಸಾರ. ಅಧ್ಯಯನ ವರದಿಗಳ ಬಿತ್ತರ. ಕಲಬೆರಕೆ ವ್ಯವಹಾರದ ಬಯಲು. ಲೋಕಕ್ಕೂ ತಮಗೂ ಸಂಬಂಧವಿಲ್ಲದಂತಿರುವ ಕಾಳಸಂತೆಕೋರರ ದರ್ಶನ. ಬೆಣ್ಣೆ, ಸಾಸ್, ಹಾಲು, ಐಸ್ಕ್ರೀಮ್, ಎಣ್ಣೆ... ಕೃತಕಗಳ ಮಾಲೆಗಳ ಯಶೋಗಾಥೆ ಬರುತ್ತಿದ್ದಾಗ ಚಾನೆಲ್ ಬದಲಾಯಿಸುತ್ತೇವೆ! ಕನಿಷ್ಠ ಅರಿವಿನ ದೃಷ್ಟಿಯಿಂದಲಾದರೂ ನೋಡಬಾರದೇ. ಮಕ್ಕಳಿಗೂ ತೋರಿಸಬಾರದೆ? ಬೆಳೆಯುತ್ತಿರುವ ಕಂದಮ್ಮಗಳ ಭವಿತವ್ಯಕ್ಕಾದರೂ ಆಹಾರದ ಅರಿವನ್ನು ಹೆಚ್ಚಿಸಿಕೊಳ್ಳಲೇಬೇಕಾಗಿದೆ.
               ಬಣ್ಣ ಹಾಕಿದ ಉಣ್ಣುವ ಅಕ್ಕಿಯಿಂದ ಬೇರ್ಪಟ್ಟ ಬಣ್ಣದೊಳಗೆ ಆರೋಗ್ಯದ ಗುಟ್ಟಿಲ್ಲ. ವಿಷ ಮಜ್ಜನದಿಂದ ಮಿಂದು ಅಡುಗೆ ಮನೆ ಸೇರಿದ ತರಕಾರಿಗಳಲ್ಲಿ ಸ್ವಾಸ್ಥ್ಯದ ಸೋಂಕಿಲ್ಲ. ಹಾಲೆನ್ನುತ್ತಾ ಹಾಲಾಹಲವನ್ನು ಕುಡಿಸುವ ಪ್ಯಾಕೆಟ್ಟಿನಲ್ಲಿ ಸದೃಢ ಭವಿಷ್ಯವಿಲ್ಲ. ಇಂತಹ ಇಲ್ಲಗಳ ಮಧ್ಯೆ ಈಗ ಹೊಕ್ಕಿದೆ - 'ಪ್ಲಾಸ್ಟಿಕ್ ಅಕ್ಕಿ'ಯ ಗುಮ್ಮ. ಚೀನದಿಂದ ಹಾರಿ ಭಾರತ ಸೇರಿದೆ. ವಿಯೆಟ್ನಾಂ, ಇಂಡೋನೇಶ್ಯಾ, ಮಲೇಶ್ಯಾ, ಸಿಂಗಾಪುರದಲ್ಲೂ ತಲ್ಲಣವನ್ನುಂಟುಮಾಡಿದೆ. ಬಹುಶಃ ಇಂದಲ್ಲ, ಹಲವು ವರುಷಗಳಿಂದಲೇ ಈ ಜಾಲ ಅಜ್ಞಾತವಾಗಿ ಜೀವಂತವಾಗಿದ್ದಿರಬಹುದು.
               ಅಕ್ಕಿಯೊಂದಿಗೆ ಕೃತಕ ಪ್ಲಾಸ್ಟಿಕ್ ಅಕ್ಕಿಯನ್ನು ಮಿಶ್ರ ಮಾಡಿದರೂ ಗೊತ್ತಾಗದಂತಹ ತಾಜಾತನ. ಸಿಹಿ ಗೆಣಸು, ಪ್ಲಾಸ್ಟಿಕ್, ಕೃತಕ ರಾಸಾಯನಿಕ ಅಂಟು ಇದರ ಒಳಸುರಿ. 'ಮೂರು ಬೌಲ್ ಪ್ಲಾಸ್ಟಿಕ್ ಅಕ್ಕಿಯ ಅನ್ನವನ್ನು ತಿಂದರೆ ಒಂದು ಪ್ಲಾಸ್ಟಿಕ್ ಚೀಲ ತಿಂದ ಸಮವಂತೆ!' ವಿಷವನ್ನು ತಿಂದು ತಿಂದು ವಿಷದ ಕೊಂಪೆಯಾದ ನಮ್ಮ ದೇಹವು ಪ್ಲಾಸ್ಟಿಕನ್ನು ಕೂಡಾ ಕರಗಿಸಬಲ್ಲುದು! ಸಿಂಥೆಟಿಕ್ ಅಕ್ಕಿಯ ಹಿಂದಿನ ಆರ್ಥಿಕ ವ್ಯವಹಾರದೊಳಗೆ ಮನುಕುಲದ ನಾಶದ ಬ್ಯಾಲೆನ್ಸ್ ಶೀಟ್ ಇದೆ.
ಚೀನಾ ಯಾಕೆ, ನಮ್ಮ ಸುತ್ತಮುತ್ತಲಿನ ಅಂಗಡಿಗಳಲ್ಲಿರುವ ಉತ್ಪನ್ನಗಳನ್ನು ಸಾಚಾ ಎನ್ನಲು ಧೈರ್ಯ ಬರುವುದಿಲ್ಲ. ಈಚೆಗೆ ರಾಜಧಾನಿಯಿಂದ ಬಂಧುವೊಬ್ಬರು ರಾಗಿಯನ್ನು ತಂದಿದ್ದರು. ನೀರಿನಲ್ಲಿ ತೊಳೆದಾಕ್ಷಣ ಅರ್ಧಕ್ಕರ್ಧ ಕಾಳುಗಳು ಬಿಳುಪಾದುವು. ಅದಾವುದೋ ಕಾಳು ರೂಪದ, ಥೇಟ್ ರಾಗಿಯನ್ನೇ ಹೋಲುವ ಬಿಳಿ ಹರಳುಗಳು. ಬಣ್ಣ ಮಿಶ್ರಿತ ನೀರಿಗೂ ಕಮಟು ವಾಸನೆ. ಕೈಗಂಟಿದ ಬಣ್ಣ ತೊಳೆದುಹೋಗದಷ್ಟು ಗಾಢ. ಅವರಿಗೆ ತಿಳಿಸಿದಾಗ, ಇಲ್ಲಾರಿ..... ನಾವು ಮನೆಯಲ್ಲಿ ಅದನ್ನೇ ಬಳಸೋದು. ನಮಗೇನೂ ಆಗಿಲ್ಲ. ಅದು ರಾಗಿಯ ಸಹಜ ಬಣ್ಣವಲ್ವಾ.. ಎಂದಾಗ ಸುಸ್ತಾದೆ.
               ಹಿಂದೊಮ್ಮೆ ಕೇರಳದಲ್ಲಿ ಕಾಳುಮೆಣಸು ಮಾರುವ ದಲ್ಲಾಳಿಗಳು ಮಾಡಿದ ಎಡವಟ್ಟು ಹಸಿಯಾಗಿದೆ. ಐವತ್ತು ಟನ್ ಕಾಳುಮೆಣಸಿಗೆ ಡೀಸಿಲ್ ಮಿಶ್ರ ಮಾಡಿದ್ದರು. ತೇವದಿಂದಾಗಿ ಬೂಸ್ಟ್ ಹಿಡಿಯಬಹುದೆಂಬ ಭಯ.  ದೀರ್ಘ ತಾಳಿಕೆಯ ದೂರದೃಷ್ಟಿ. ವಿದೇಶಕ್ಕೆ ರಫ್ತಾದ ಉತ್ಪನ್ನವು ಪುನಃ ಮರಳಿದಾಗ ಆಡಳಿತ ಚುರುಕಾಯಿತು. ಅಧಿಕಾರಿಗಳು ಟೈ ಸರಿಮಾಡಿಕೊಂಡರು. ಕಲಬೆರಕೆ ಪತ್ತೆಯಾಯಿತು. ಸುಮಾರು ಮೂವತ್ತೆಂಟು ಕೋಟಿಗೂ ರೂಪಾಯಿಗೂ ಮಿಕ್ಕಿದ ಕಾಳುಮೆಣಸನ್ನು ಸುಡುವ ಆದೇಶಕ್ಕೆ ಸಹಿ ಬಿತ್ತು.
              ಕುಡಿಯುವ ನೀರಿನಿಂದ ಅನ್ನದ ಬಟ್ಟಲ ತನಕ ಮಿಳಿತವಾದ ವಸ್ತುಗಳಲ್ಲಿ ಕಲಬೆರಕೆಯಿದೆ ಎಂಬ ಸತ್ಯವನ್ನು ಆರೋಗ್ಯ ಸಚಿವರೇ ಒಪ್ಪಿಕೊಂಡ ಹೇಳಿಕೆಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ರಾಗಿಹಿಟ್ಟು, ಹೆಸರುಬೇಳೆ, ಅಡುಗೆ ಎಣ್ಣೆ, ಚಹ, ಕಾಫಿ, ಹಾಲು, ಸಾಸ್, ಅವಲಕ್ಕಿ... ಹೀಗೆ ನೂರರ ಹತ್ತಿರ ಉತ್ಪನ್ನಗಳಿಗೆ ಸಾಚಾ ಲೇಬಲ್ ಹಚ್ಚಲು ಕಷ್ಟವಾಗುವಷ್ಟು ಜಾಲ ವಿಸ್ತೃತವಾಗಿದೆ. ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಡ್ಡಿಕೊಂಡ ಉತ್ಪನ್ನಗಳು ಅಯೋಗ್ಯವೆಂದು ಛೀಮಾರಿ ಹಾಕಿಸಿಕೊಂಡಿವೆ! ಯೋಚಿಸಲಾಗದಷ್ಟು ಬೃಹತ್ತಾಗಿ ಬೆಳೆದ ಕರಾಳ ಲೋಕದ ನೆರಳಿನಿಂದ ಬದುಕಿನ ಹಳಿ ತಪ್ಪುತ್ತಿದೆ. ಕೈತಾಂಗು ಬೇಕಾಗಿದೆ.
               ಆಹಾರದಲ್ಲಿ ಕಲಬೆರಕೆ ಹೊಸ ವಿಷಯವಲ್ಲ. ರಾಜಾರೋಷವಾಗಿ ನಡೆಯುವ ವ್ಯವಸ್ಥಿತ ವ್ಯವಹಾರ. ಸರಕಾರದ ವರಿಷ್ಠರಿಂದ ಅಂಗಡಿ ಮಾಲಕನ ತನಕದ ಕೈಗಳ ಕೈವಾಡ. ಅಕ್ಕಿಗೆ ಬಣ್ಣ, ಹಾಲಿಗೆ ಬಿಳಿ ವರ್ಣದ ಇನ್ನೇನೋ, ಸಕ್ಕರೆಯೊಂದಿಗೆ ಮಿಶ್ರವಾಗುವ ಅದಾವುದೋ ಹರಳು.. ಹೀಗೆ ಗುರುತು ಹಿಡಿಯದಷ್ಟು ಜಾಣ್ಮೆಯ ಕರಾಮತ್ತು. ಅಪರೂಪಕ್ಕೊಮ್ಮೆ ಅಲ್ಲಿಲ್ಲಿ ಪತ್ತೆಯಾಗುತ್ತದೆ. ಕೇಸ್ ದಾಖಲಾಗುತ್ತದೆ. ಮಾಧ್ಯಮಗಳಲ್ಲಿ ವರದಿಯಾಗುತ್ತದೆ. ನ್ಯಾಯಾಲಯದ ಮೆಟ್ಟಿಲು ಏರುತ್ತದೆ. ಆಮೇಲೆ ಏನಾಗುತ್ತದೆ ಅಂತ ಗೊತ್ತಿಲ್ಲ.
                  ಆಹಾರದ ಕಲಬೆರಕೆಯನ್ನಷ್ಟೇ ಮಾತನಾಡುತ್ತೇವೆ. ಹಿಂದೆ ತಿರುಗಿ ನೋಡಿ. ಆಹಾರ ಉತ್ಪಾದನೆ ಮಾಡುವ ಹೊಲದಿಂದ ತೊಡಗಿ, ಯಾಂತ್ರೀಕರಣದ ವರೆಗೆ ಕಲಬೆರಕೆಯ ಮಾಲೆ ಮಾಲೆ. ಬೇಕೋ, ಬೇಡವೋ ಹೊಲಗಳಿಗೆ ರಾಸಾಯನಿಕ ಬೆರಕೆ ಮಾಡಿದೆವು. ಕೀಟನಾಶಕವನ್ನು ಸುರಿದೆವು. ಬಿತ್ತನೆಬೀಜ ಮೊಳಕೆ ಬಾರದ ದೃಷ್ಟಾಂತ ಎಷ್ಟು ಬೇಕು? ನೀರಿನಲ್ಲೂ ಕಲಬೆರಕೆಯಿಲ್ವಾ. ಸೇವಿಸುವ ಗಾಳಿಯೂ ಕಲ್ಮಶ. ಹಾಲಿಗೆ ನೀರು ತಾನಾಗಿ ಹರಿದು ಬರುವುದಿಲ್ಲವಲ್ಲಾ-ಅಲ್ಲೂ ಬೆರಕೆಯ ಭೂತ. ಹಾಲಿಗೆ ಅದಾವುದೋ ಪುಡಿ ಬೆರೆಸಿ 'ದಪ್ಪ ಹಾಲು' ಮಾರುವ ನಿಪುಣರು ಎಷ್ಟಿಲ್ಲ?
               ಬಳಸುವ ಯಂತ್ರೋಪಕರಣಗಳಲ್ಲೂ ಕಲಬೆರಕೆ! ಲಕ್ಷಗಟ್ಟಲೆ ಹಣ ತೆತ್ತರೂ ಅಸಲಿ ಪಡೆಯಲು ತ್ರಾಸ.   ಸಬ್ಸಿಡಿ ಫೈಲುಗಳು ಮಾಡುವ ರಾದ್ದಾಂತಗಳೇ ಬೇರೆ. ಪ್ರದರ್ಶಿಸುವುದು ಅಸಲಿ. ಬಿಕರಿ ಮಾಡುವುದು ನಕಲಿ. ಮನುಷ್ಯನ ಮನಃಸ್ಥಿತಿಯಲ್ಲೂ ಗೊಂದಲ. ಸಾಚಾತನದ ಯೋಚನೆಯಿಲ್ಲ. ದಿಢೀರ್ ಹಣ ಮಾಡುವ ಚಿತ್ತಸ್ಥಿತಿ. ಇದ್ದ ಸಂಪನ್ಮೂಲವನ್ನು ವೃದ್ಧಿಸುವ ಯೋಜನೆ. ಆಗ ಕೆಟ್ಟ ಯೋಚನೆಯ ಬೀಜದ ಮೊಳಕೆ. ಮೊಳಕೆಯೊಡೆದು ಮರವಾದರೆ ಸಾಕು, ಕಳಚಿಕೊಳ್ಳದಷ್ಟು ಬೇರುಗಳನ್ನು ಬದುಕಿನಲ್ಲಿ ಇಳಿಸಿರುತ್ತದೆ. ಜೀವನದ ರೂಪೀಕರಣದ ರೂಪವೇ ಹೀಗಿದ್ದ ಮೇಲೆ ಕಲಬೆರಕೆಯ ಭೂತವನ್ನು ಹೊಡೆದೋಡಿಸುವುದು ಹೇಗೆ?
              'ಗ್ರಾಹಕರೇ ದೇವರು' ಎಂಬ ಫಲಕ ಅಂಗಡಿಯಲ್ಲಿ ನೋಡಿದ್ದೇನೆ. ಸರಿ, ದೇವರು ಮಾತನಾಡುವುದಿಲ್ಲವಲ್ಲಾ! ಭಕ್ತನ ಕೋರಿಕೆಯನ್ನು ಈಡೇರಿಸುವುದು ದೇವರ ಕೆಲಸ! ಭಕ್ತನ ತಪ್ಪನ್ನು ತಪ್ಪೆಂದು ಒಪ್ಪಿಕೊಳ್ಳಲಾಗದ ಅಸಹಾಯಕತೆ. ನೋಡಿಯೂ ನೋಡದಂತಿರಬೇಕಾದ ಸ್ಥಿತಿ. ಆಮಿಷಗಳ ಮಹಾಪೂರ. ರಿಯಾಯಿತಿಗಳ ಕೊಡುಗೆ. ಹೊಗಳಿಕೆಯ ಹೊನ್ನಶೂಲ. ಬೇಡದಿದ್ದರೂ ಸಾಲ ಸೌಲಭ್ಯ. ದೇವರಿಗೆ ಇನ್ನೇನು ಬೇಕು? ದಿವ್ಯ ಮೌನ.
               ಭಾರತದಲ್ಲಿ ಆಹಾರ ಸುರಕ್ಷತೆ ಕಾಪಾಡಿಕೊಳ್ಳಲು ಜಾರಿಯಲ್ಲಿದ್ದ 'ಆಹಾರ ಕಲಬೆರಕೆ ತಡೆ ಕಾಯ್ದೆ-1954', ನಿಯಮಗಳು-1955 ಹಾಗೂ ಇತರ ಆಹಾರ ಸಂಬಂಧದ ಕಾಯ್ದೆಗಳನ್ನು ರದ್ದು ಪಡಿಸಿ ಹೊಸದಾಗಿ ಏಕೀಕೃತವಾದ 'ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006' ನಿಯಮಗಳು, ನಿಬಂಧನೆಗಳನ್ನು 2011 ಆಗಸ್ಟಿನಿಂದ ಜಾರಿಗೆ ತಂದಿದೆ. ತಿನ್ನಲು ಯೋಗ್ಯವಲ್ಲದ, ಹಾನಿಕಾರಕ, ನಕಲಿ ಪದಾರ್ಥಗಳನ್ನು ಬೆರೆಸುವುದು ತಪ್ಪೆಂದು ಒತ್ತಿ ಹೇಳಿದೆ. ಅನೈರ್ಮಲ್ಯ ವಾತಾವರಣದಲ್ಲಿ ಉತ್ಪನ್ನ ತಯಾರಿಕೆ, ಆಹಾರದಲ್ಲಿ ಪೌಷ್ಟಿಕತೆಯನ್ನು ಕಡಿಮೆ ಮಾಡುವುದು, ತಪ್ಪು ಜಾಹೀರಾತು ನೀಡುವುದು ತಪ್ಪೆಂದು ಹೇಳಿದೆ. ತಪ್ಪಿದಲ್ಲಿ ಇಪ್ಪತ್ತೈದು ಸಾವಿರದಿಂದ ಹತ್ತು ಲಕ್ಷ ರೂಪಾಯಿ ತನಕ ದಂಡ, ಆರೇಳು ತಿಂಗಳು ಜೀವಾವಧಿ ಶಿಕ್ಷೆ ವಿಧಿಸಿದೆ. ಇವೆಲ್ಲಾ ಪಾಲನೆ ಆಗುವುದು ಯಾವಾಗ?
              ಆಹಾರ ಕ್ರಮ, ಜೀವನ ಶೈಲಿಯಲ್ಲಿ ಮಾರ್ಪಾಡು, ಯೋಚನೆಗಳು ಮತ್ತು ಸಮಸಾಮಯಿಕ ವಿಚಾರಗಳ ಅರಿವನ್ನು ಪಡೆಯುವುದು ಅನಿವಾರ್ಯ. ಬಹುತೇಕ ಬಂದಿಗೆ ಕಲಬೆರಕೆ, ವಿಷಗಳ ಗಾಢತೆ ಗೊತ್ತಿದೆ. ಗಂಭೀರವಾಗಿ ಯೋಚಿಸಲು ಕಾಂಚಾಣದ ನಾದವು ಬಿಡುತ್ತಿಲ್ಲ. ಎಲ್ಲಿಯ ವರೆಗೆ ಆಹಾರದ ನಿರ್ಲಿಪ್ತತೆ ಇರುತ್ತದೋ ಅಲ್ಲಿಯ ವರೆಗೆ ಕಲಬೆರಕೆ ಮಾಡುವವರು ಮಗ್ಗುಲಲ್ಲೇ ಇರುತ್ತಾರೆ. ವಿಷ ಹಾಕುವವರು ನೆರೆಮನೆಯಲ್ಲೇ ಇರುತ್ತಾರೆ. ನಮ್ಮ ಮಕ್ಕಳ ಆರೋಗ್ಯ ಸ್ವಾಸ್ಥ್ಯಕ್ಕಾದರೂ ಆಹಾರ ಕ್ರಮಗಳಲ್ಲಿ ಮಾರ್ಪಾಡು ಅಗತ್ಯ. ಹೇಗೆಂಬುದು ನಂನಮ್ಮ ವಿವೇಚನೆಗೆ ಬಿಟ್ಟದ್ದು. ಯಾಕೆಂದರೆ ಅನುಸರಿಸುವ ಮಾದರಿಗಳು ಇಲ್ಲ. ಕತ್ತಲೆಯಲ್ಲಿ ಬೆಳಕನ್ನು ಅರಸಲು ಕಾನೂನು ಸಹಾಯ ಮಾಡದು.

ಚಿತ್ರ : ನೆಟ್
( ನೆಲದನಾಡಿ/ಉದಯವಾಣಿ/23-7-2015 ಪ್ರಕಟ)

Monday, July 6, 2015

ಹಲಸಿಗೆ ವ್ಯಾಪಕ ಮುಂಭಡ್ತಿ

              ಐದಾರು ದಶಕದ ಹಿಂದಿನ ಸ್ಥಿತಿಯನ್ನು ಕೃಷಿಕ ಅಡ್ಕ ಗೋಪಾಲಕೃಷ್ಣ ಭಟ್ ನೆನಪಿಸಿಕೊಂಡರು, "ತುತ್ತಿಗೆ ತತ್ವಾರದ ದಿನಗಳಲ್ಲಿ ಎರಡು ಸೌಟು ಗಂಜಿಯೊಂದಿಗೆ ಹೆಚ್ಚೇ ಹಲಸಿನ ಪಲ್ಯವನ್ನು ಸೇರಿಸಿಕೊಂಡು  ಹೊಟ್ಟೆ ತುಂಬಿಸುತ್ತಿದ್ದೆವು. ಮಧ್ಯಾಹ್ನ ಅತಿಥಿಗಳು ಬಂದಾಗ ಊಟದ ಮೊದಲು ಹಲಸಿನ ಹಣ್ಣಿನ ಸಮಾರಾಧನೆ. ಬಂದವರ ಅರ್ಧ ಹೊಟ್ಟೆ ತುಂಬಿತೋ, ನಂತರವಷ್ಟೇ ಭೋಜನ. ಹಲಸಿನ ಸೀಸನ್ ಮುಗಿಯುವಾಗ ಸಂಕಟವಾಗುತ್ತಿತ್ತು."
             2015 ಜೂನ್ 14. ಬಿ.ಸಿ.ರೋಡು (ದ.ಕ.) ಶ್ರೀನಿವಾಸ್ ರೆಸಿಡೆನ್ಸಿಯಲ್ಲಿ ಹಲಸಿನ ಸವಿಯೂಟ. ಇಪ್ಪತ್ತೆಂಟು ವಿಧದ ಹಲಸಿನ ಖಾದ್ಯಗಳು. 199 ರೂಪಾಯಿ ಶುಲ್ಕ ನೀಡಿ ನೂರಾರು ಹಲಸು ಪ್ರಿಯರು ಭಾಗವಹಿಸಿದ್ದರು. ಸವಿಯೂಟ ಸವಿದು ತೇಗಿದರು. ಕಬಾಬ್, ಮಂಚೂರಿಯನ್, ಹಲ್ವ, ಐಸ್ಕ್ರೀಮ್... ಇತ್ಯಾದಿ. ಗಂಜಿಯ ಬಟ್ಟಲಿಂದ ಹೋಟೆಲ್ ಟೇಬಲಿಗೆ ಹಲಸು ಏರಿದುದರ ಹಿಂದೆ ದಶಕದ ಅಜ್ಞಾತ ಶ್ರಮವಿದೆ.
              2002ರಲ್ಲಿ ಸಾಗರ ತಾಲೂಕಿನ ಕೆಳದಿಯಲ್ಲಿ ಮೊದಲ ಹಲಸು ಮೇಳ ಜರುಗಿತು. ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರದ ಆಯೋಜನೆ. ನಿರ್ದಿಷ್ಟವಾದ ಕಾರ್ಯಯೋಜನೆ ಇರಲಿಲ್ಲವಾದರೂ ಆ ಭಾಗದ ವಿವಿಧ ತಳಿಗಳು ಒಂದೆಡೆ ಸೇರಿದುವು. ಮಾತುಕತೆ ಆರಂಭವಾದುವು. ಐದಾರು ವರುಷ ಬಳಿಕ ಪ್ರಥಮವಾಗಿ ಕೇರಳದ ವಯನಾಡಿನ ಉರವು ಸಂಸ್ಥೆಯು ಮೇಳದ ಸ್ವರೂಪ ನೀಡಿದರೆ, ಕನ್ನಾಡಿನಲ್ಲಿ ಬೈಫ್ ಉತ್ಸವವಾಗಿ ಆಚರಿಸಿತು. ಆ ಬಳಿಕ ಮೇಳಗಳ ಮಾಲೆ. ಈ ವರೆಗೆ ಏನಿಲ್ಲವೆಂದರೂ ಎಪ್ಪತ್ತೈದಕ್ಕೂ ಮಿಕ್ಕಿ ಮೇಳಗಳು ಸಂಪನ್ನವಾಗಿರಬಹುದು. ದೂರದ ಮಿಜೋರಾಂ, ಮಹಾರಾಷ್ಟ್ರದ ದಾಪೋಲಿ, ತಮಿಳುನಾಡಿನಲ್ಲೂ ಕೂಡಾ.
             ಬೆಂಗಳೂರು ವಿಶ್ವವಿದ್ಯಾನಿಲಯದ ಆಗಿನ ಉಪಕುಲಪತಿ ಡಾ.ನಾರಾಯಣ ಗೌಡರ ಮುಂದಾಳ್ತನದಲ್ಲಿ ವಿವಿಯ ಒಳಗೆ ಹಲಸಿನ ಪರಿಮಳ ಹಬ್ಬಿತು. ತೂಬುಗೆರೆ ಹಲಸು ಬೆಳೆಗಾರರ ಸಂಘ ಸ್ಥಾಪನೆಯಾಯಿತು. ವಿವಿ ಆವರಣದಲ್ಲಿ ಸೆಮಿನಾರು, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನಗಳು ಏರ್ಪಾಡಾದುವು. ಲಾಲ್ಭಾಗಿನಲ್ಲಿ ಹಲಸಿನ ಮಾರಾಟಕ್ಕೆ ವ್ಯವಸ್ಥೆಯಾಯಿತು. ಕೃಷಿಕರಿಗೆ ಬಿಸಾಕು ದರದ ಬದಲಾಗಿ ಉತ್ತಮ ವರಮಾನ ಬರಲು ಆರಂಭವಾಯಿತು.
               ಮೇಳಗಳು ಮೂಡಿಸಿದ ಭರವಸೆಯ ಹಿಂದೆ ಕೃಷಿ ಮಾಸಿಕ ಅಡಿಕೆ ಪತ್ರಿಕೆಯ ಶ್ರಮವಿದೆ. ಹಲಸು ಆಂದೋಳನವನ್ನು ಹುಟ್ಟುಹಾಕಿದ ಪತ್ರಿಕೆಯು ದೇಶವಲ್ಲ, ವಿದೇಶಿ ಹಲಸು ಪ್ರಿಯರ ಕದವನ್ನೂ ತಟ್ಟಿದೆ. ಹೊಸ ವಿಚಾರಗಳ ತುಣುಕುಗಳನ್ನು ಜಾಲತಾಣಗಳ ಗುಂಪುಗಳ, ಮಿಂಚಂಚೆ ಮೂಲಕ ವಿನಿಮಯ. ಕನ್ನಡೇತರ ಭಾಷೆಗಳನ್ನು ತಲಪಿದ್ದು ಹೀಗೆ. ಹೊಸ ತಳಿ, ಉತ್ಪನ್ನಗಳ ಸುಳಿವು ಸಿಕ್ಕಾಗ ಬೆನ್ನೇರಿ ಮಾಹಿತಿ ಕಲೆ ಹಾಕುವ ನಿರಂತರ ಕೆಲಸಗಳು. ಇದರಿಂದಾಗಿ ಹಲಸಿನ ಕೆಲಸಗಳು ಮತ್ತು ಅಂತಹ ಸಂಘಟನೆ, ವ್ಯಕ್ತಿಗಳನ್ನು ಒಗ್ಗೂಡಿಸುವ ಕೆಲಸ ನಡೆಯುತ್ತಾ ಬಂತು.
                ಮೇಳಗಳಲ್ಲಿ ಮೊದಲಿಗೆ ಹಪ್ಪಳ, ಚಿಪ್ಸ್ನಂತಹ ಸಾಂಪ್ರದಾಯಿಕ ಉತ್ಪನ್ನಗಳೇ ಪ್ರದರ್ಶನಗಳಲ್ಲಿ ಕಂಡು ಬಂದುವಷ್ಟೇ. ಹೊಸಹೊಸ ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗುತ್ತಿರಲಿಲ್ಲ. ಹಲಸಿನ ಮೌಲ್ಯವರ್ಧನೆ ನಕ್ಷೆಯಲ್ಲಿ ಭಾರತ ಇಲ್ಲ. ದೇಶದಲ್ಲಿ ಇಂದು ಕಿಂಚಿತ್ತಾದರೂ ಮೌಲ್ಯವರ್ಧನೆ ನಡೆಯುತ್ತಿರುವುದು ಮಹಾರಾಷ್ಟ್ರ, ಕೀರ್ನಾಟಕ, ಕೇರಳ ರಾಜ್ಯಗಳಲ್ಲಿ. ಹಲಸಿನ ಸಾಮೂಹಿಕ ಜಾಗೃತಿ ಮೂಡಿಸುವಲ್ಲಿ ಕೇರಳ ಉಳಿದೆರಡು ರಾಜ್ಯಗಳನ್ನೂ ತುಂಬ ಹಿಂದೆ ಹಾಕಿದೆ.
            ವಯನಾಡಿನ ಎಡವಗ ಪಂಚಾಯತ್ ಹಲಸಿನ ಮೌಲ್ಯವರ್ಧನೆಗೆ ದೊಡ್ಡ ಅಡಿಗಟ್ಟು ಹಾಕಿತ್ತು. ಸ್ಥಳೀಯರನ್ನು ಒಳಗೊಳ್ಳುವ ಹಲಸಿನ ಉತ್ಪನ್ನ ತಯಾರಿ ಮತ್ತು ಬಿಕರಿ ವ್ಯಾಪಕವಾದ 'ಕೃಷಿಕ ಆತ್ಮಹತ್ಯೆಯನ್ನು ತಡೆಯುವ ಉಪಾಯ' ಎಂದೂ ಪಂಚಾಯತಿಗೆ ಮನದಟ್ಟಾಗಿದೆ. ಯಾವುದೋ ಕಾರಣದಿಂದ ಯೋಜನೆಯು ಕಾರ್ಯಗತವಾಗಿಲ್ಲ. 'ಹಲಸು ಬದುಕಿನ ಶಾಕ್ ಅಬ್ಸೋರ್ಬರ್' ಎಂದು ಡಾ.ನಾರಾಯಣ ಗೌಡರು ಆಗಾಗ್ಗೆ ಹೇಳುತ್ತಿರುತ್ತಾರೆ. ನಡುವಿಲ್ ಎಂಬ ಹಳ್ಳಿಮೂಲೆಯ ಪಂಚಾಯತ್ ಉತ್ಸವ ಮಾಡುವ ಮೂಲಕ ಗಮನ ಸೆಳೆದಿದೆ.
               ಈಚೆಗೆ ಕಣ್ಣೂರು ಸನಿಹದ ತಳಿಪರಂಬದಲ್ಲಿ ಹಲಸಿನ ಮೌಲ್ಯವರ್ಧನೆಗಾಗಿಯೇ ಆರ್ಟೋಕಾರ್ಪಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹುಟ್ಟಿದೆ. ವರಟ್ಟಿ, ಚಿಪ್ಸ್ಗಳಲ್ಲದೆ ಹಲಸಿನ ಬೀಜದ ಹುಡಿ, ಸೊಳೆಯ ಹುಡಿ, ಪಲ್ಪ್.. ಸಿದ್ಧ ಮಾಡುವ ಈ ಸಂಸ್ಥೆಗೆ ಉತ್ತಮ ಪ್ರತಿಕ್ರಿಯೆ. "ಕೇರಳವು ಹಲಸಿನ ಬಳಕೆಯಲ್ಲಿ, ಮೌಲ್ಯವರ್ಧನೆಯಲ್ಲಿ ಮುಂದು. ಸಮಾಜದ ವಿವಿಧ ವರ್ಗದವರಲ್ಲಿ ಉತ್ಸವಗಳು ಹೊಸ ಉತ್ಸಾಹ ಮೂಡಿಸಿದೆ. ಇಪ್ಪತ್ತಕ್ಕೂ ಮಿಕ್ಕಿ ಗುಂಪುಗಳು ಸಕ್ರಿಯವಾಗಿವೆ. ಒಂದು ಹಲಸಿನ ಹಣ್ಣು/ಕಾಯಿಂದ ಒಂದು ಸಾವಿರ ರೂಪಾಯಿ ಟರ್ನ್ ಓವರ್ ಗಳಿಸಬಹುದೆನ್ನುವ ವಿಶ್ವಾಸ ಬಂದಿದೆ" ಎನ್ನುತ್ತಾರೆ ಹಿರಿಯ ಪತ್ರಕರ್ತ ಶ್ರೀ ಪಡ್ರೆ.
                ಕೇರಳದ ಪಾಲಕ್ಕಾಡಿನ ಪೇಯೆಸ್ಸೆಸ್ಪಿ ಕಳೆದ ವರ್ಷ ಆರು ಟನ್ ಹಲಸಿನ ಕಾಯಿಸೊಳೆ ಒಣಗಿಸಿ ಮಾರಿದೆ. ಕನ್ನಾಡಿನ ಶಿರಸಿಯಲ್ಲಿ ವಿನುತ ಪರಮೇಶ್ವರ ಹೆಗಡೆ ಐದು ವರುಷದಿಂದ ಹಲಸಿನ ಹಣ್ಣಿನ ಬಾರ್ ತಯಾರಿಸುತ್ತಿದ್ದಾರೆ. ಇದುವರೆಗೆ ಮೂರು ಟನ್ ಬಾರ್ ತಯಾರಿಸಿ ಮಾರುಕಟ್ಟೆಗೆ ಒದಗಿಸಿದ ಇವರನ್ನು ಈಚೆಗೆ ಸನ್ಮಾನಿಸಿದ್ದಾರೆ. ಇದನ್ನು ಶಿರಸಿಯ ಕದಂಬ ಸಂಸ್ಥೆಯು ಮಾರುಕಟ್ಟೆ ಮಾಡುತ್ತಿದೆ. ಶಿರಸಿಯಲ್ಲಿ ಚಿಪ್ಸ್ ಉದ್ಯಮ ಬೆಳೆಸಿರುವ ಜೈವಂತ್ ಗಣೇಶ್ ವರ್ಷದ ಏಳು ತಿಂಗಳ ಕಾಲ ದಿನಕ್ಕೆ ಒಂದು ಟನ್ ಚಿಪ್ಸ್ ತಯಾರಿಸುತ್ತಿದ್ದಾರೆ!
                 ಈಚೆಗೆ ಉ.ಕ. ಜಿಲ್ಲೆಯ ಕುಮಟಾದಲ್ಲಿ ಶಿರಸಿಯ ಕದಂಬ ಸಂಸ್ಥೆಯು ಹಲಸಿನ ಮೇಳವನ್ನು ಸಂಘಟಿಸಿತ್ತು. ಸುಮಾರು ಅರುವತ್ತು ಮಂದಿ ಹೆಣ್ಮಕ್ಕಳು ಖಾದ್ಯಗಳನ್ನು ತಯಾರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೇಳಕ್ಕಾಗಿಯೇ ಹೈದ್ರಾಬಾದಿನ 'ತಿನ್ಲೇ' ಸಂಸ್ಥೆಯು ಪ್ರಾಯೋಗಿಕವಾಗಿ ತಯಾರಿಸಿದ ಹಲಸಿನ ಸಾಂಬಾರು, ಪಾಯಸ, ಜಾಮೂನು, ಶೀರಾವನ್ನು ಬಾಟಲುಗಳಲ್ಲಿ ಪ್ರದರ್ಶನಕ್ಕಿಟ್ಟಿತ್ತು. "ಈ ಉತ್ಪನ್ನಗಳಿಗೆ ಯಾವುದೇ ಸಂರಕ್ಷಕಗಳನ್ನು ಬಳಸಿಲ್ಲ. ಆರು ತಿಂಗಳು ತಾಳಿಕೆ. ಇಂತಹ ತಕ್ಷಣ ಬಳಸಬಹುದಾದ ಉತ್ಪನ್ನ ಮಾಡಬಹುದೆಂದು ತೋರಿಸಲು ನಾವಿದನ್ನು ಮಾಡಿತಂದಿದ್ದೇವೆ" ಎನ್ನುತ್ತಾರೆ ಬ್ರಹ್ಮಾವರ ಮೂಲಕ ಸಂಸ್ಥೆಯ ಶ್ರೀಕಾಂತ್ ಭಟ್.
                      ದಕ್ಷಿಣ ಭಾರತದಲ್ಲಿ ದೊಡ್ಡ, ಸಣ್ಣ ಮಟ್ಟದ ಉದ್ಯಮಗಳು ಸೇರಿದಂತೆ ಮೂವತ್ತಕ್ಕೂ ಮಿಕ್ಕಿದ ಕಂಪೆನಿಗಳು ಹಲಸಿನ ಹಣ್ಣಿನ ಐಸ್ಕ್ರೀಮ್ ತಯಾರಿಸುತ್ತಿರುವುದು ಗಮನಾರ್ಹ. ಕಳೆದೈದು ವರುಷದಲ್ಲಿ ಚಿಕ್ಕಪುಟ್ಟ ಪೇಟೆ, ಪಟ್ಟಣಗಳಲ್ಲೂ ಗ್ರಾಹಕರು ರೂಪುಗೊಂಡಿದ್ದಾರೆ. ಹಲಸಿನ ಮೌಲ್ಯವರ್ಧನೆಯ ಸಾಧ್ಯತೆಗಳು ಅಗಣಿತ. ಮೌಲ್ಯವರ್ಧನೆಯಲ್ಲಿ ಗುಣಮಟ್ಟ, ಬ್ರಾಂಡಿಂಗ್, ನೋಟ, ಪ್ಯಾಕಿಂಗ್.. ಮೊದಲಾದ ಮಾರುಕಟ್ಟೆ ಜಾಣ್ಮೆಗಳಲ್ಲಿ ಸುಧಾರಿಸಬೇಕಾಗಿದೆ. ಬೆಂಗಳೂರಿನ ಎಡಬಲದ ಐದಾರು ಜಿಲ್ಲೆಗಳಲ್ಲಿ ಹೆಚ್ಚು ಕಡಿಮೆ ಐನೂರು ಎಕ್ರೆ ಹಲಸಿನದೇ ತೋಪುಗಳು ಮೇಲಕ್ಕೇಳುತ್ತಿದೆ.
                ಸಮಸ್ಯೆಗಳೂ ಬೆಟ್ಟದಷ್ಟಿವೆ. ಎಲ್ಲವೂ ಸುಗಮ ಎನ್ನುವಂತಿಲ್ಲ. ಉತ್ಪನ್ನ ತಯಾರಿಸಲು ಸಿದ್ಧ ತಂತ್ರಜ್ಞಾನವಿಲ್ಲ. ಶ್ರಮ ಉಳಿಸುವ ಉಪಕರಣಗಳ ಆವಿಷ್ಕಾರವಾಗಿಲ್ಲ. ಉದ್ದಿಮೆಗಳ ಸಮಸ್ಯೆಗಳಿಗೆ ಪರಿಹಾರ ಹೇಳುವವರಿಲ್ಲ. ಮೌಲ್ಯವರ್ಧನೆಗೆ ವ್ಯವಸ್ಥಿತ ತರಬೇತಿ ನೀಡುವ ಸಂಸ್ಥೆಗಳಿಲ್ಲ. ಮರದಿಂದ ಕಾಯಿ ಇಳಿಸುವುದು ಕಷ್ಟ. ಹಲಸಿನ ರಾಶಿಯಲ್ಲಿ ಉತ್ತಮ ಹಣ್ಣನ್ನು ಆಯ್ಕೆ ಮಾಡುವ ವ್ಯವಸ್ಥೆ.. ಹೀಗೆ ಹತ್ತಾರು 'ಬೇಕು'ಗಳಿವೆ. ಕಸಿ ಗಿಡಗಳಿಗೆ ಬೇಡಿಕೆ ಯಥೇಷ್ಟವಾಗಿದ್ದರೂ, ಕಸಿಯು ಸಂಕೀರ್ಣವಾದ ಕಾರಣ ಪೂರೈಕೆ ಕಡಿಮೆ.
                 ಐದಾರು ವರುಷಗಳ ಹಲಸಿನ ಆಂದೋಳನದಲ್ಲಿ ಮೂಡಿಬಂದ ಯಶೋಗಾಥೆಗಳು ನೂರಾರು, ಅಲ್ಲ-ಸಾವಿರಾರು. ಈಗ ಆಗಿರುವ ಮೌಲ್ಯವರ್ಧನೆ ಕೆಲಸಗಳೆಲ್ಲಾ ಹಲಸಿನಲ್ಲಿ ಪ್ರೀತಿ ಇರುವ ಮಂದಿಯಿಂದಷ್ಟೇ ಆಗಿದೆ. ಇಷ್ಟು ದೊಡ್ಡ ದೇಶದಲ್ಲಿ ಎರಡು ಕೃಷಿ ವಿಜ್ಞಾನ ಕೇಂದ್ರ ಮತ್ತು ಎರಡು ಕೃಷಿ ವಿಶ್ವವಿದ್ಯಾಲಯಗಳು ಮಾತ್ರ ಹಲಸಿನ ಕೆಲಸ ಮಾಡುತ್ತಿವೆ. ಮಿಕ್ಕಂತೆ ಸರಕಾರದ ಕೃಷಿ ಪೂರಕ ಇಲಾಖೆಗಳು ಹೃತ್ಪೂರ್ವಕವಾಗಿ ಸ್ಪಂದನ ನೀಡಿದ್ದು ಕಡಿಮೆ.
                    ಇದುವರೆಗೆ ಜರುಗಿದ ಮೇಳಗಳಿಗೆ ಬಂದ ಮೌಲ್ಯವರ್ಧಿತ ಉತ್ಪನ್ನಗಳು ಮಾರಾಟವಾಗದೆ ಹಿಂದೆಹೋದ ದೃಷ್ಟಾಂತ ಇಲ್ಲವೇ ಇಲ್ಲ. ಉತ್ಪನ್ನವನ್ನು ಕೊಂಡುಕೊಳ್ಳಲು ಗ್ರಾಹಕರು ತುದಿಗಾಲಲ್ಲಿದ್ದಾರೆ. ಪೂರೈಕೆ ಸರಪಳಿ ವಿಸ್ತರಿಸಬೇಕು. ವರುಷದ ಹನ್ನೆರಡು ತಿಂಗಳೂ ಹಲಸಿನ ಉತ್ಪನ್ನ ಸಿಗುವಂತಹ ತಂತ್ರಜ್ಞಾನಗಳು ಮೊದಲಾದ್ಯತೆಯಲ್ಲಿ ಆಗಬೇಕು.
                ಐದಾರು ವರುಷದ ಆಂದೋಳನದ ಫಲಶ್ರುತಿಯಾಗಿ ಹಿತ್ತಿಲಿನ ಹಲಸು ಬಟ್ಟಲಿಗೆ ಬಂದಿದೆ. ಕೇಳುವವರೇ ಇಲ್ಲದ ಹಲಸನ್ನು ಚರಿತ್ರೆಯಲ್ಲೇ ಮೊತ್ತಮೊದಲ ಬಾರಿ ಮಾರಿ ಅಷ್ಟಿಷ್ಟು ಗಳಿಸಿದ ಕೃಷಿಕರಿದ್ದಾರೆ. ಫ್ರೀಝ್ ಡ್ರೈ ಹಲಸನ್ನು ಹೊರತಂದ ಕೇರಳದ ಜೇಮ್ಸ್ ಜೋಸೆಫ್ ಅವರ ಅವಿರತ ಯತ್ನದಿಂದ ಹಲಸು ಪಂಚತಾರಾ ಹೋಟೆಲುಗಳನ್ನೂ ಪ್ರವೇಶಿಸಿದೆ. ಅಲ್ಲೂ ಗೌರವದ ಸ್ಥಾನ ಪಡೆಯುತ್ತಿದೆ.


(ಉದಯವಾಣಿಯ ನೆಲದ ನಾಡಿ ಕಾಲಂನಲ್ಲಿ 2-7-2015ರಂದು ಪ್ರಕಟ)