Friday, February 2, 2018

ಸವೆಯದ ಹಾದಿಯಲ್ಲಿ ಬದ್ಧತೆಗಳ ಮಾಲೆ

          ದಾರಿ ಸವೆಯುವುದಿಲ್ಲ. ಊರಿದ ಪಾದಗಳು ಸವೆದರೂ ಅನುಭವಕ್ಕೆ ಬರುವುದಿಲ್ಲ, ನಿಲುಕುವುದಿಲ್ಲ. ಕಣ್ಣಿಗೆ ಕಾಣದ ಸವೆದ ಪಾದವೇಬದುಕು. ಎಷ್ಟು ಸವೆದಿದೆ ಎನ್ನುವ ಪ್ರಮಾಣ ಬುದ್ಧಿಗೆ ಗೊತ್ತಾದರೆ ಸಾಗಿ ಬಂದ ಬದುಕಿನ ಸಾಧನೆ ಅರಿವಾಗುತ್ತದೆ. ಹಾಗೆ ಅರಿವಾಗದಿರುವುದೇ ಬದುಕಿನ ಸುಭಗತನ. ಗೊತ್ತಾದರೆ ಸ್ವಾರಸ್ಯವಿಲ್ಲ.
ಡಾ.ರಮಾನಂದ ಬನಾರಿ (77) ಅವರಸವೆಯದ ಹಾದಿಆತ್ಮ ವೃತ್ತಾಂತವನ್ನು ಓದುತ್ತಿದ್ದಂತೆ ಸವೆದ ಪಾದಗಳ ಗಾಢತೆಯ ಅನುಭವವಾಯಿತು. ಅದು ಅನುಭವದ ಅಕ್ಷರಗಳಿಂದ ಹಾದಿಯನ್ನು ಅಲಂಕರಿಸಿದೆ. ಪೋಣಿಕೆಯೊಳಗೆ ಸ್ಥಿರತೆಗಾಗಿ ಕಾಲದೊಂದಿಗೆ ಒದ್ದಾಡಿದ, ಗುದ್ದಾಡಿದ ಘಳಿಗೆಗಳನ್ನು ಮಾಲೆ ಮಾಡಿದ್ದಾರೆ. ಇದರಲ್ಲಿ ವಿಷಾದಗಳ ಸಪ್ಪೆಮೋರೆಯನ್ನು ಎಲ್ಲೂ ತೋರಿಸಿಲ್ಲ! ಆತ್ಮವೃತ್ತಾಂತವನ್ನು ತನ್ನೊಳಗೆ ಮಾತ್ರ ಸುತ್ತಾಡಲು ಬಿಟ್ಟಿಲ್ಲ. ಸುತ್ತಲಿನ ವಿದ್ಯಮಾನಗಳನ್ನು, ಕಾಲಘಟ್ಟದ ಮನಃಸ್ಥಿತಿಗಳನ್ನು  ನೋಡುತ್ತಾ ಸಾಗುತ್ತದೆ.
ಡಾ.ರಮಾನಂದ ಬನಾರಿಯವರನ್ನು ಬಹುಕಾಲದಿಂದ ದೂರದಿಂದ ನೋಡುತ್ತಿದ್ದೇನೆ, ಮಾತನಾಡುತ್ತಿದ್ದೇನೆ. ಸಲುಗೆಯಿಂದ ಮಾತನಾಡುವುದಕ್ಕೆ ಯಾಕೋ ಅವರ ವ್ಯಕ್ತಿತ್ವ ಮತ್ತು ವ್ಯಕ್ತಿತ್ವ ರೂಪಿಸಿದ ಧ್ಯಾನ ಮನಸ್ಸಿನ ಆವರಣವು ಅಂತರವನ್ನು ಸೃಷ್ಟಿಸಿದೆ. ಎಷ್ಟೋ ಬಾರಿ ಒಂದೆರಡು ವಾಕ್ಯಗಳಲ್ಲಿ ಸಂಭಾಷಣೆ ಮುಗಿದುಹೋಗುತ್ತಿತ್ತು. ಅವರ ತಾಳಮದ್ದಳೆ ಅರ್ಥಗಾರಿಕೆಯ ಶೈಲಿ, ಪ್ರತಿಪಾದಿಸುವ ವಿಚಾರಗಳು, ಬದುಕಿನ ಬದ್ಧತೆಗಳು ನನ್ನನ್ನು ಆವರಿಸಿವೆ.
ಕಾಸರಗೋಡು-ಕರ್ನಾಟಕದ ಸಂಧಿಗ್ರಾಮ ದೇಲಂಪಾಡಿ. ಇಲ್ಲಿನ ಬನಾರಿ ಅಂದು ತೀರಾ ಹಳ್ಳಿ. ಈಗಲೂ ಕೂಡಾ. ಬದುಕನ್ನು ಕಟ್ಟಿಕೊಳ್ಳಲು ಆಗಮಿಸಿದ ಮಾಸ್ಟರ್ ಕೀರಿಕ್ಕಾಡು ವಿಷ್ಣು ಭಟ್ಟರು ತನ್ನ ಬದುಕಿನೊಂದಿಗೆ ಹಳ್ಳಿಯನ್ನು ಕಟ್ಟಿದರು. ಅಕ್ಷರ ವಂಚಿತ ಮನಸ್ಸುಗಳಲ್ಲಿ ಅಕ್ಷರಗಳನ್ನು ಕೆತ್ತಿದರು. ಸಂಸ್ಕಾರವನ್ನು ಅನುಷ್ಠಾನಿಸುತ್ತಾ ಕಲಿಸಿದರು. ರಮಾನಂದ ಬನಾರಿಯವರು ವಿಷ್ಣು ಭಟ್ಟರ ದ್ವಿತೀಯ ಪುತ್ರ. ಸವೆಯದ ಹಾದಿಯಲ್ಲಿ ತಾನು ಅನುಭವಿಸಿದ ಬಾಲ್ಯ, ನೋಡಿದ ಪರಿಸರ, ಬೆಳೆಯಲು ಬೇಕಾದ ಸ್ವ-ರೂಢಿತ ಸಂಸ್ಕಾರಗಳನ್ನು ಕಲಿಸಿದ ತಂದೆಯವರ ಬದುಕು ಮತ್ತು ಅವರ ಗುರುಕುಲಗಳ ಕಾರ್ಯಹೂರಣಗಳನ್ನು ಉಲ್ಲೇಖಿಸಿದ್ದಾರೆ. ಸವೆಯದ ಹಾದಿಗೆ ಕಾರಣಗಳಾದ ದಿವಸಗಳನ್ನು ಒಮ್ಮೆ ಇಣುಕೋಣ. 
ಮಾಸ್ತರ್ ಕೀರಿಕ್ಕಾಡು ವಿಷ್ಣು ಭಟ್ಟರ ಯೌವನದಲ್ಲಿ ಹಳ್ಳಿಯಲ್ಲಿ ಹೇಳುವಂತಹ ಸೌಕರ್ಯವಿರಲಿಲ್ಲ. ತನ್ನ ಬೌದ್ಧಿಕ ಗಟ್ಟಿತನದಿಂದ ಹೊಸ ಪ್ರಪಂಚವೊಂದನ್ನು ಹಳ್ಳಿಯಲ್ಲಿ ಸೃಷ್ಟಿಸುವ ಸಾಮಥ್ರ್ಯ ಅವರಿಗಿತ್ತು. ಮನೆಯಲ್ಲೇ ಯಕ್ಷಗಾನದ ಕಲಿಕೆ. ಜತೆಗೆ ಆಟ, ಊಟ. ಬಿಡುವಿನಲ್ಲಿ ದುಡಿಮೆ. ಪೌರಾಣಿಕ ವಿಚಾರಗಳ ಪ್ರಸ್ತುತಿಯಲ್ಲಿ ಪಾತ್ರಗಳ ಗುಣ-ಸ್ವಭಾವಗಳ ದರ್ಶನ. ರಾತ್ರಿ, ಹಗಲೆನ್ನದೆ ಶಿಷ್ಯರನ್ನು ರೂಪಿಸುವ ಕಾಯಕ. ಆಕಾರದ ಮೂಲಕ ವಿಕಾರಗಳನ್ನು ದೂರವಿಡುವ ಕಠಿಣ ಅಲಿಖಿತ ಪಠ್ಯ. ತಪ್ಪಿದಾಗ ಸಾತ್ವಿಕ ಶಿಕ್ಷೆ. ಸಾಲದಾದಾಗ ತನಗೆ ತಾನೇಉಪವಾಸದ ಮೂಲಕ ಶಿಕ್ಷೆಯನ್ನು ಆವಾಹಿಸಿಕೊಳ್ಳುತ್ತಿದ್ದರು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವು ಕೀರಿಕ್ಕಾಡು ಮಾಸ್ತರರ ಮೆದುಳಮರಿ. ಇದು ಸು-ಮನಸ್ಸುಗಳನ್ನು ಸೃಷ್ಟಿಸಿದ ತಾಣ.
ಒಬ್ಬ ಕಲಾವಿದನಾಗಿ ತನ್ನ ಬದುಕನ್ನು ಕಲಾತ್ಮಕವನ್ನಾಗಿ ಮಾಡಿಕೊಂಡರು.  ಅದರ ನೆರಳಿನಡಿ ಹಳ್ಳಿಯ ಜೀವನಕ್ಕೂ ಕಲಾಸ್ಪರ್ಶ ಮಾಡಿದರು. ಸರಳವಾಗಿದ್ದು, ಸಹಜ ಜೀವನವನ್ನು ಒಪ್ಪಿಕೊಂಡರು, ಅಪ್ಪಿಕೊಂಡರು. ತನ್ನ ಬೌದ್ಧಿಕ ಪ್ರಖರತೆ, ವ್ಯಕ್ತಿತ್ವಗಳಿಂದಾಗಿ ಬನಾರಿಯು ನೂರಾರು ವಿದ್ವಾಂಸರನ್ನು ಸೆಳೆಯಿತು.  ಸಾಹಿತ್ಯ ಸುಧೆಯನ್ನು, ಕಲಾಮೃತವನ್ನು ಸವಿಯಲು ಕಾಯುವ ಮನಸ್ಸುಗಳಿಗಂದು ಹಬ್ಬ. ವಾತಾವರಣವನ್ನು ನೋಡುತ್ತಾ, ಅನುಭವಿಸುತ್ತಾ ಬೆಳೆದ ರಮಾನಂದ ಬನಾರಿಯವರು ಮುಂದೆ ವೃತ್ತಿಗಾಗಿ ವೈದ್ಯರಾದರು. ಯಕ್ಷಗಾನವು ವೃತ್ತಿಯಾಗದ್ದರಿಂದ ಪಕ್ವತೆಯ ಸ್ವ-ರೂಢಿತ ವಿನ್ಯಾಸದ ಅರ್ಥಧಾರಿಯಾಗಿ ಬೆಳೆದರು.
       ಬನಾರಿಯವರ ಅರ್ಥಗಾರಿಕೆಯು ಚುಟುಕುಚೂರು. ಸಣ್ಣಸಣ್ಣ ವಾಕ್ಯಗಳಲ್ಲಿ ಸ್ಫುರಿಸುವ ರಸಧ್ವನಿಗಳು. ಅದು ಇದಿರು ಅರ್ಥಧಾರಿಗೆ ಪಾಶವಾದುದೂ ಇದೆ! ಫಕ್ಕನೆ ನೋಡುವಾಗ ಸರಳ. ಅವರು ಕಟ್ಟಿದ ಅರ್ಥಗಾರಿಕೆಯ ಸೌಧದೊಳಗೆ ಪ್ರವೇಶಿಸುವುದು ಸುಲಭವಲ್ಲ. ಕೆಣಕಿದರೆ ಕೆಣಕಿದವನ ಮುಖದಲ್ಲಿ ನೆರಿಗೆ ಮೂಡದೆ ಇರದು. ಬೇಕಾದಲ್ಲಿ ಗೊತ್ತಾಗದ ಆಕ್ರಮಣ, ಹೊಡೆತಗಳು. ತನ್ನೆಡೆಗೆ ಬರುವ ಪ್ರತಿರೋಧಗಳನ್ನು ತಪ್ಪಿಸಿಕೊಳ್ಳುವ ಜಾಣ್ಮೆ. ಕೆಲವೊಮ್ಮೆ ತೀರಾ ಅರ್ಗಂಟು! ಹಿಂದೆ ಮುಂದೆ ಸರಿಯದ ಛಲ. ಬಹುಶಃ ಇದೆಲ್ಲಾ ಡಾ.ಶೇಣಿ, ಸಾಮಗರು, ದೇರಾಜೆ, ತೆಕ್ಕಟ್ಟೆ, ಕೆರೆಕೈ... ಇಂತಹ ಉದ್ಧಾಮರ ಸಂಪರ್ಕದಿಂದ ಬಂದಿರಬೇಕು. ‘ಸವೆಯದ ಹಾದಿಯಲ್ಲಿ ಅರ್ಥಗಾರಿಕೆಯ ಸೂಕ್ಷ್ಮಗಳನ್ನು ನೋಡಬಹುದು.
       ಸುಮಾರು ಅರ್ಧ ಶತಮಾನದ ಯಕ್ಷಗಾನದ ನಂಟು ಇರುವ ಡಾಕ್ಟರ್ ಅರ್ಥಗಾರಿಕೆಯಲ್ಲಿ ಸ್ವ-ಚಿಂತನೆ. “ರಾಮ-ಕೃಷ್ಣರಂತಹ ಪಾತ್ರಗಳು ತಮ್ಮ ಸೈದ್ಧಾಂತಿಕವಾದ ನಿಲುವುಗಳನ್ನು ಸ್ಪಷ್ಟೀಕರಿಸುವುದಕ್ಕೂ ಪ್ರತಿನಾಯಕ ಪ್ರಬಲವಾದ ಪ್ರಶ್ನೆಗಳನ್ನು ಉತ್ತರಿಸುವುದಕ್ಕೂ ಸಿದ್ಧರಿರಬೇಕು. ಎಷ್ಟೋ ತಾಳಮದ್ದಳೆಗಳಲ್ಲಿ ರಾವಣ, ಕಂಸ, ಮಾಗಧರಂತಹ ಉದ್ಧಟ ನಾಯಕರ ಪಾತ್ರವನ್ನು ನಿರ್ವಹಿಸುವವರು ದೊಡ್ಡ ಅರ್ಥಧಾರಿಗಳೆಂಬ ಕಾರಣದಿಂದ ಅವರೇ ವಿಜೃಂಭಿಸಿ ಪ್ರಸಂಗದ ಕೊನೆಯಲ್ಲಿ ರಾಮ-ಕೃಷ್ಣರು ಪೇಲವವಾಗಿ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುವಂತಹ ಸಂದರ್ಭಗಳು ಪ್ರಾಪ್ತವಾಗುತ್ತವೆ. ಹೀಗಾಗದಂತೆ ಕಲಾವಿದರೂ ವ್ಯವಸ್ಥಾಪಕರೂ ಎಚ್ಚರಿಕೆ ವಹಿಸಬೇಕು.” ಎನ್ನುತ್ತಾರೆ.
       ಬನಾರಿಯವರು ಒಂದು ಕಾಲಘಟ್ಟದ ಸಾಂಸ್ಕøತಿಕ ಮತ್ತು ಸಾಹಿತ್ಯಿಕ ದನಿಯಾಗಿ ಮಲೆಯಾಳ ನೆಲದಲ್ಲಿ ಭದ್ರವಾಗಿದ್ದರು. ಭಾಷಣ, ಕವಿತೆ, ಸಾಹಿತ್ಯ, ಕನ್ನಡ ಹೋರಾಟಗಳಲ್ಲಿ ಬದ್ಧತೆಯ ಕಾವು ಮತ್ತು ಶುಚಿತ್ವವನ್ನು ಕಾಪಾಡಿಕೊಂಡವರು. ಲೇಖಕರ ಸಂಘಟನೆ, ವಿವಿಧ ಸಂಸ್ಥೆಗಳಲ್ಲಿ ಜವಾಬ್ದಾರಿಯನ್ನು ನಿಭಾಯಿಸಿದವರು. ಸವೆಯದ ಹಾದಿಯಲ್ಲಿ ದಿನಮಾನಗಳ ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮ ಸಂಘಟಿಸುವಾಗ ಎದುರಾದ ವಿಘ್ನಗಳು, ಅದರಿಂದ ಹೊರಬರಲು ಅನುಭವಿಸಿದ ಪಾಡು. ಇವೆಲ್ಲಾ ಬದುಕು ಕಲಿಸಿದ, ಕಲಿತ ವಿದ್ಯಮಾನಗಳು.
       ಕವನ, ಮಕ್ಕಳ ಕವನ, ಚುಟುಕು, ಪ್ರಬಂಧಗಳು ಸಂಕಲನಗಳಾಗಿವೆ. ಪತ್ರಿಕೆಗಳಲ್ಲಿ ಲೇಖನ, ಕವಿತೆಗಳು ಪ್ರಕಟವಾಗಿವೆ. ಆಧುನಿಕ ವೈದ್ಯಕೀಯ ದೃಷ್ಟಿಯಲ್ಲಿ ರೋಗಗಳ ಕುರಿತ ಕವನ ಸಂಕಲನ ಹೊಸ ಹಾದಿ. ಓರ್ವ ವೈದ್ಯರಾಗಿ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಳ್ಳುವುದಲ್ಲ, ಅರ್ಪಿಸಿಕೊಳ್ಳುವುದಕ್ಕೆ ಸಾಧ್ಯವಾ? ಸಾಧ್ಯ ಎನ್ನುವುದಕ್ಕೆ ಉತ್ತರ ಡಾ. ಬನಾರಿ. ಕನ್ನಡ ಪರ ಹೋರಾಟಗಳಲ್ಲಿ ಧರಣಿ, ಪ್ರತಿಭಟನೆ, ಸಮ್ಮೇಳನ.. ಹೀಗೆ ಒಂದೊಂದು ಹೆಜ್ಜೆಯೂ ಸವೆಯದ ಹಾದಿ. ಕೃತಿಯಲ್ಲಿ ಕಥಾನಾಯಕ ತಾನಾದರೂ ನಾಯಕನಾಗುವುದಕ್ಕೆ ಉಪಾಧಿಯಾದ ಅನೇಕ ವ್ಯಕ್ತಿಗಳು, ಸಂದರ್ಭಗಳು, ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ಪೋಣಿಸಿದ್ದಾರೆ. ಕಾರಣಕ್ಕಾಗಿ ಆತ್ಮವೃತ್ತಾಂತ ಇಷ್ಟವಾಯಿತು.   
ಆತ್ಮ ವೃತ್ತಾಂತದಲ್ಲಿ ಆರು ಪರ್ವಗಳು. ಮೊದಲ ಪರ್ವ, ಉದ್ಯೋಗ ಪರ್ವ, ಕುಟುಂಬ ಪರ್ವ, ಸಾಹಿತ್ಯ ಪರ್ವ, ಕಲಾ ಪರ್ವ, ಸಂಕೀರ್ಣ ಪರ್ವ. ಬದುಕಿನ ಹಾದಿಗಳು ಬನಾರಿಯವರಿಗೆ ನಿಜಾರ್ಥದಲ್ಲಿ ಪರ್ವ. ಪುಸ್ತಕದಲ್ಲಿ ಅವೆಲ್ಲವನ್ನೂ ವಿಂಗಡಿಸಿದರೂ ಅವುಗಳೆಲ್ಲಾ ವಿಂಗಡಿಸದ ಹಾದಿಗಳು. ಹಾಗಾಗಿ ಎಲ್ಲಾ ರಂಗಗಳ ವಿಕಾರಗಳನ್ನು ಅಂಟಿಸಿಕೊಳ್ಳದೆ ಅಂಟಿಸಿಕೊಂಡಂತೆ ಕಾಣುವ ಬದುಕು. ಅದರೊಳಗಿದೆ, ಬದ್ಧತೆಗಳ ಮಾಲೆ.
ಕವಿಯಾಗಿ ಸಹೃದಯತೆಯನ್ನು ಮೂಲಧಾತುವಾಗಿ ಉಳ್ಳ ಮತ್ತು ಯಕ್ಷಗಾನದ ಅರ್ಥಧಾರಿಯಾಗಿ ಸಾಂಸ್ಕøತಿಕ ವೈಚಾರಿಕತೆಯನ್ನು ಸ್ಪಷ್ಟವಾಗಿ ಹೊಂದಿರುವ ಬನಾರಿಯವರು ಮನುಷ್ಯರನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲ ವಿಮರ್ಶಕ. ಎಲ್ಲರ ಒಳ್ಳೆಯ ಗುಣಗಳನ್ನು ಗುರುತಿಸಿ ದಾಖಲಿಸುವ ವಿಶಾಲ ಹೃದಯಿ,” ಆತ್ಮವೃತ್ತಾಂತದ ಬೆನ್ನುಡಿಯಲ್ಲಿ ಡಾ.ಬಿ..ವಿವೇಕ ರೈಗಳು ರಮಾನಂದ ಬನಾರಿಯವರ ಕಲಾ ಬದುಕಿನ ಹೊಳಪನ್ನು ಕೊಡುತ್ತಾರೆ. ನಿಜಾರ್ಥದಲ್ಲಿದು ಸವೆಯದ ಹಾದಿ. ಇಡೀ ಕುಟುಂಬವೇ ಹಾದಿಯನ್ನು ಗೌರವಿಸಿದೆ. ಕಲಾ ಕುಟುಂಬ ಆದರಿಸಿದೆ.

ಚಿತ್ರ : ಉದಯ ಕಂಬಾರು, ನೀರ್ಚಾಲು

0 comments:

Post a Comment