Friday, November 19, 2021

ಬರಡು ಬಯಲಲಿ ಹಸುರು ಭವನ – ‘ 'ಇಂದ್ರಪ್ರಸ್ಥ'


(ಸುಮಾರು ದಶಕದ ಹಿಂದೆ ‘ಪುರುಷೋತ್ತಮ ಪ್ರಶಸ್ತಿ’ ಘೋಷಣೆಯಾದ ಸಂದರ್ಭದಲ್ಲಿ ಸಿದ್ಧಪಡಿಸಿದ ಲೇಖನ.)

 'ಕೃಷಿಗಾಗಿ ನಾನು ಸಾಲ ಮಾಡಿಲ್ಲ!', ಸಾವಯವ ಕೃಷಿಕ .ಪಿ.ಚಂದ್ರಶೇಖರ್ ಮಾತಿಗಿಳಿದರು. ಹಾಗಾದರೆ ಬೇರೆ ಆರ್ಥಿಕ ಮೂಲ ಇರಬಹುದೇ? ಫಕ್ಕನೆ ರಾಚುವ ಪ್ರಶ್ನೆ. ಸಾಲ ಮಾಡಲು 'ಇಂದ್ರಪ್ರಸ್ಥ' ತೋಟ ಅವರನ್ನು ಬಿಟ್ಟಿಲ್ಲ!

 1981. ಚಂದ್ರಶೇಖರ್ (54) ಮೆಕಾನಿಕಲ್ ಇಂಜಿನಿಯರ್ ಪದವಿ ಪಡೆದಿದ್ದರು. ಕೊಯಂಬತ್ತೂರು, ಮಂಗಳೂರಿನಲ್ಲಿ ನವಮಾಸ ದುಡಿತ. ಯಂತ್ರಗಳ ನಡುವಿನ ಯಾಂತ್ರಿಕ ಬದುಕಿನಿಂದಾಗಿ ಇದ್ದಷ್ಟೂ ದಿವಸ ಚಡಪಡಿಕೆ.   ದುಡಿಮೆಗಾಗಿ ಪೇಟೆ ಸೇರಿದರೂ ಇನ್ನೊಬ್ಬರ ಅಧೀನದಲ್ಲಿ ದುಡಿಯಬೇಕು. ಇದೂ ಸಲ್ಲ. ಪೇಟೆಯ ಬದುಕಿನಿಂದ ದೂರವಿರಲು ನಿರ್ಧಾರ.  ಸ್ವತಂತ್ರವಾಗಿ ಜೀವಿಸುವತ್ತ ಯೋಚನೆ. ಮುಂದಿದ್ದ ಆಯ್ಕೆ ಕೃಷಿ.

ಮಗನ ನಿರ್ಧಾರಕ್ಕೆ ತಂದೆ .ಪಿ.ತಿಮ್ಮಪ್ಪಯ್ಯವರಿಂದ ಹಸಿರು ನಿಶಾನೆ. ಮೈಸೂರಿನಿಂದ ಹದಿನೈದು ಕಿಲೋಮೀಟರ್ ದೂರದ ಕಳಲವಾಡಿ ಗ್ರಾಮದಲ್ಲಿ ಹದಿಮೂರೆಕ್ರೆ ಜಾಗ ಖರೀದಿ. ದೊಡ್ಡ ಮನೆ. ನಾಲ್ಕನೂರ ಇಪ್ಪತ್ತೈದು ತೆಂಗಿನಮರಗಳಲ್ಲಿ ಎಪ್ಪತ್ತೈದರಲ್ಲಿ ಫಲ ನೀಡುತ್ತಿತ್ತು. ಮಧ್ಯ ನಾಲ್ಕೈದು ಎಕ್ರೆ ಕಬ್ಬಿನ ಕೃಷಿ. ಅಲ್ಲೋ ಇಲ್ಲೋ ಹಣ್ಣಿನ ಗಿಡಗಳು. ಉಳಿದಂತೆ ಖಾಲಿ ಜಾಗ. ಪಕ್ಕದಲ್ಲಿ 'ಎಣ್ಣೆಹೊಳೆ' ಹಳ್ಳ. ಅಲ್ಲಿಂದ ನೀರೆತ್ತುವ ವ್ಯವಸ್ಥೆಯಿತ್ತು. 

 'ಎಲ್ಲರೂ ಮಾಡುವ ಹಾಗೆ ಕೃಷಿಯನ್ನು ಮಾಡಿದೆ' ಎನ್ನುತ್ತಾರೆ. ಇದ್ದ ತೆಂಗಿನ ಗಿಡಗಳ ಆರೈಕೆ. ಜೊತೆಗೆ ಬಾಳೆ, ಕಬ್ಬು, ಅರಸಿನ, ರಾಗಿ, ಜೋಳ, ಹತ್ತಿ, ತರಕಾರಿಗಳ ಕೃಷಿ ಪ್ರಯೋಗ. ತಿಮ್ಮಪ್ಪಯ್ಯನವರು ಪುತ್ತೂರಿನಿಂದ ಆಗಾಗ್ಗೆ ಬಂದು 'ಬೇಕು-ಬೇಡ'ಗಳ ಪಾಠ ಮಾಡುತ್ತಿದ್ದರು.

 ಮೊದಲ ವರುಷದ ಬೇಸಿಗೆಯಲ್ಲಿ ಎಣ್ಣೆಹೊಳೆ ಹಳ್ಳ ಬತ್ತಬೇಕೇ? ಗಿಡಗಳೂ ನೀರಿಗಾಗಿ ಬಾಯ್ಬಿಡುತ್ತಿದ್ದುವು. ಸುತ್ತೆಲ್ಲಾ ಕೊಳವೆ ಬಾವಿಗಳು ಸದ್ದು ಮಾಡುತ್ತಿದ್ದುವು. ಸರಿ, ಕೊಳವೆ ಬಾವಿ ಕೊರೆಯಲು ನಿರ್ಧಾರ.  ಅಂತರ್ಜಲಕ್ಕೆ ಲಗ್ಗೆ. ಮೂರು ಕೊಳವೆ ಬಾವಿಗಳನ್ನು ತೆಗೆದರೂ ಭಣಭಣ. ನಾಲ್ಕನೆಯದರಲ್ಲಿ ಸ್ವಲ್ಪ ನೀರಿನ ಸೆಲೆ ಸಿಕ್ಕಿತು.

 ತೋಟದಲ್ಲಿ ಅಗತೆ ಮಾಡಿದರೆ, ಬೇರುಗಳು ಬೆಳೆಯುತ್ತದೆ, ಜತೆಗೆ ಕಳೆಯೂ ನಾಶವಾಗುತ್ತದೆ, ನೀರಿಂಗಲು ಅನುಕೂಲ - ತಜ್ಞರ ಸೂಚನೆ. ಸಮಸ್ಯೆಗೆ ಪರಿಹಾರವಾದರಾಯಿತು ಎನ್ನುತ್ತಾ ಎತ್ತು, ಟಿಲ್ಲರ್, ಟ್ರ್ಯಾಕ್ಟರ್ಗಳಿಂದ ಸತತ ಮೂರು ವರುಷ ಉಳುಮೆ. ಜತೆಗೆ ಕೊಳವೆ ಬಾವಿ ಪಕ್ಕದಲ್ಲಿ ಚಿಕ್ಕ ತೋಡುಬಾವಿ ಕೊರೆತ. ಆರಡಿಯಲ್ಲೇ ನೀರು. ಇನ್ನಷ್ಟು ಕೊರೆದಾಗ ಮತ್ತಷ್ಟು ನೀರು. ನೀರ ನೆಮ್ಮದಿ.

 ಬೇಸಿಗೆಯಲ್ಲಿ ಎಣ್ಣೆಹೊಳೆ ಬತ್ತುತ್ತಿತ್ತು. ತೋಡುಬಾವಿಯ ನೀರಿನ ಮಟ್ಟವೂ ಕುಸಿಯುತ್ತಿತ್ತು. ಎಣ್ಣೆ ಹೊಳೆ ಹರಿದರೆ ತೋಡುಬಾವಿಯ ಮಟ್ಟವೂ ಏರುತ್ತಿತ್ತು. 'ಬಾವಿಯನ್ನು ಇಪ್ಪತ್ತೈದು ಅಡಿ ಆಳ ಮಾಡಿದೆ. ಕೇಸಿಂಗ್ ಪೈಪ್ಗೆ  ಆಳದಲ್ಲಿ ತೂತುಮಾಡಿ ಕೊಳವೆಬಾವಿಯನ್ನು ತೋಡುಬಾವಿಗೆ ಸೇರಿಸಿದೆ. ದಿನಾ ಮೂರು ನಾಲ್ಕು ಗಂಟೆ ನೀರು ಸಿಗುತ್ತಿತ್ತು. ಅಷ್ಟನ್ನೂ ತೋಟಕ್ಕೆ ಬಳಸುತ್ತಿದ್ದೆ. ಪ್ರತಿದಿನ ಬಾವಿ ಖಾಲಿಯಾದಾಗ ಮತ್ತೆ ತುಂಬುತ್ತಿತ್ತು' ದಿನಗಳನ್ನು ನೆನೆಯುತ್ತಾರೆ. ನೀರಾವರಿಗೆ ತುಂತುರು (ಸ್ಪ್ರಿಂಕ್ಲರ್) ಪದ್ಧತಿ.

ಮಿತ ಬಳಕೆಯಿಂದಾಗಿ ಇಂದ್ರಪ್ರಸ್ಥದಲ್ಲೀಗ ನೀರಿನ ಸ್ಥಿರತೆಯಿದೆ. ಐದು ಬಾವಿಗಳು.ಮೂರು ಪಂಪ್ಸೆಟ್ಗಳು. 'ಮುಂದೊಂದು ದಿನ ಇಲ್ಲಿನ ಗಿಡಗಳೆಲ್ಲಾ ನೀರಿಲ್ಲದೆ ಬದುಕಬೇಕು' ವಿನೋದಕ್ಕೆ ಚಂದ್ರಶೇಖರ್ ಹೇಳಿದರೂ, ಹಿಂದಿನ ಸದುದ್ದೇಶ ಅರ್ಥವಾಗಲು ನಾವು ಇಂದ್ರಪ್ರಸ್ಥದ ಮಣ್ಣನ್ನು ಮುಟ್ಟಬೇಕು, ಸಸ್ಯ ಸಂಪತ್ತನ್ನು ಅರ್ಥಮಾಡಿಕೊಳ್ಳಬೇಕು. ಪರಿಸರವನ್ನು ಓದಬೇಕು. ಏನಿಲ್ಲವೆಂದರೂ ಎರಡು ಸಾವಿರಕ್ಕೂ ಮಿಕ್ಕಿ ಸಸ್ಯ ವೈವಿಧ್ಯಗಳು ಮಣ್ಣಿನ ಸತ್ವವನ್ನು ಹೆಚ್ಚಿಸಿದೆ.

ಸಾವಯವದತ್ತ ಹೊಸ ಹೆಜ್ಜೆ

ಆರಂಭದ ದಿವಸಗಳಲ್ಲಿ ರಸಗೊಬ್ಬರಗಳ ಬಳಕೆ. ವಿವಿಧ ಕೀಟಗಳು. ಒಂದಿಷ್ಟು ಸಿಂಪಡಣೆ. ವಿಷವ್ಯೂಹದಿಂದ ಹೊರಬರಲು ದಾರಿ ಕಾಣದೇ ಇದ್ದಾಗ ಡಾ.ನಾರಾಯಣ ರೆಡ್ಡಿಯವರ ತೋಟ ವೀಕ್ಷಣೆ. ವಿಚಾರಗಳ ಮನನ. ಆಗಷ್ಟೇ ಪತ್ರಿಕೆಗಳಲ್ಲಿ ರಾಸಾಯನಿಕ ಕೃಷಿಯ ದುಷ್ಪರಿಣಾಮಗಳು ಪ್ರಕಟವಾಗುತ್ತಿದ್ದುವು. ಸಾವಯವದ ಕತೆಗಳು ಬರುತ್ತಿದ್ದುವು. ಇವುಗಳಿಂದ ಪ್ರೇರಣೆ. 'ತೀರ್ಮಾನ ತೆಗೆದುಕೊಳ್ಳಲು ಮೂರ್ನಾಲ್ಕು ತಿಂಗಳು ಬೇಕಾಯಿತು. ಬಳಿಕ ಕೃಷಿ, ಅವುಗಳ ಸಮಸ್ಯೆ, ಸಾವಯವ ದೃಷ್ಟಿಯಿಂದ ಬದುಕನ್ನು ನೋಡುತ್ತಾ ಬಂದೆ' ಎನ್ನುತ್ತಾರೆ.

ತೆಂಗು: ಫಲ ಬರುವ ಆರುನೂರು ತೆಂಗಿನ ಮರಗಳು. ಅವುಗಳಲ್ಲಿ ನೂರು ಮರಗಳಿರುವ ಜಾಗದಲ್ಲಿ ಸುಣ್ಣಕಲ್ಲಿರುವ ಕಾರಣ ಇಳುವರಿ ಅಷ್ಟಕ್ಕಷ್ಟೇ. ತಿಪಟೂರು ಉದ್ದನೆಯ ತಳಿಗಳು ಜಾಸ್ತಿ. ಕೆಲವು ಕುಬ್ಜ ತಳಿಗಳು. ಸುಮಾರು ಮೂವತ್ತರಷ್ಟು ಪಶ್ಚಿಮ ಕರಾವಳಿಯ ಉದ್ದ ತಳಿಗಳು. ಅಷ್ಟೇ ಸಂಖ್ಯೆಯ ಟಿಡಿ, ಗಂಗಾಪಾನಿ, ಸಿಲೋನಿನ ಭೀಮಗಾತ್ರದ ಕಾಯಿ, ಹಳದಿಜಾತಿ, ಕೆಂಪುಜಾತಿ, ಹಸುರು ಎಳನೀರು ಜಾತಿ, ರುದ್ರಾಕ್ಷಿ.. ಹೀಗೆ.

2010ರಲ್ಲಿ ಬಂಪರ್ ಇಳುವರಿ. ಮರವೊಂದರ 200-210 ಕಾಯಿಗಳು! ಈಗ ಸರಾಸರಿ 100-120 ಕಾಯಿಗಳು ಸಿಗುತ್ತವೆ. ತೆಂಗಿನಕಾಯಿಯಲ್ಲಿ ಶೇ.50 ಮಾರಾಟ. ಮಿಕ್ಕುಳಿದ ತೆಂಗು ಕೊಬ್ಬರಿಯಾಗಿ ಪರಿವರ್ತನೆ. ಅದರಿಂದ ಶುದ್ಧ ತೆಂಗಿನ ಎಣ್ಣೆ ತಯಾರಿ.

ಮರದಿಂದ ಒಣಗಿ ಬಿದ್ದ ತೆಂಗಿನಕಾಯಿಯನ್ನು ತೋಟದ ಮಧ್ಯದ ರಸ್ತೆಯ ಪಕ್ಕ ಅಲ್ಲಲ್ಲಿ ಪೇರಿಸಿಡುತ್ತಾರೆ. ಎತ್ತಿನ ಗಾಡಿಯಲ್ಲಿ ತಂದು ತೆಂಗಿನ ಮನೆಯಲ್ಲಿ ಸಂಗ್ರಹ. ಒಂದು ಎತ್ತು ಮತ್ತು ಒಂದು ಹಸುವನ್ನು ಬಳಸಿ ಗಾಡಿ ಚಾಲೂ! 'ಬೆಳೆಯ ಪ್ರಮಾಣ ಜಾಸ್ತಿಯಾಗಿರುವುದು ಮತ್ತು ಬಳಸುವ ಪ್ರಮಾಣ ಕಡಿಮೆಯಾಗಿರುವುದು ತೆಂಗಿನಕಾಯಿಯ ಮಾರುಕಟ್ಟೆ ಕುಸಿತಕ್ಕೆ ಕಾರಣ' ಎನ್ನುತ್ತಾರೆ.      

 ಅಡಿಕೆ : ಒಂದು ಸಾವಿರ ಇಳುವರಿ ನೀಡುವ ಅಡಿಕೆ ಮರಗಳು. ಒಂದೂವರೆ ಸಾವಿರ ಹೊಸ ಅಡಿಕೆ ಗಿಡಗಳು. ಎಲ್ಲವೂ ತೆಂಗಿನ ಮರಗಳ ಮಧ್ಯೆ ಇದೆ. ಒಂದೊಂದು ಜಾಗದಲ್ಲಿ ಒಂದೊದು ರೀತಿಯ ಅಂತರ. ಕೆಲವೆಡೆ ಹೊಂಡಕ್ಕೆರಡು, ಮೂರರಂತೆ ಗಿಡ ನೆಟ್ಟದ್ದೂ ಇದೆ.

 ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ತಳಿಗಳು ಹೆಚ್ಚು. ರತ್ನಗಿರಿ, ಮಂಗಳ, ಶ್ರೀಮಂಗಳ, ಸುಮಂಗಲ, ಮೋಹಿತ್ನಗರ, ಕುಬ್ಜ ಅಡಿಕೆ, ಸಿಂಗಾಪುರ ಅಡಿಕೆ, ಪಾಂಡವರ ಅಡಿಕೆ, ಮೈಸೂರು ಸ್ಥಳೀಯ, ಶಿವಮೊಗ್ಗ ಸ್ಥಳೀಯ, ಶಿರಸಿ ಸ್ಥಳೀಯ ಮತ್ತು ತುಮಕೂರು ಸ್ಥಳೀಯ - ಹೀಗೆ ಹದಿಮೂರು ಜಾತಿ.

 ಚಿಕ್ಕು: ಫಲ ನೀಡುವ 50-60 ಮರಗಳಿವೆ. ವರುಷಕ್ಕೆ ಸುಮಾರು ಮೂರು ಟನ್ ಇಳುವರಿ. ದಶಂಬರ ಮಧ್ಯಭಾಗದಿಂದ ಮಾರ್ಚ್ ವರೆಗೆ ಕೊಯಿಲು. ಒಂದು ಗಿಡಕ್ಕೆ ಸರಾಸರಿ ಐವತ್ತು ಕಿಲೋ. ಮೈಸೂರು ಪೇಟೆಯಲ್ಲಿರುವ 'ನೇಸರ' ಮಳಿಗೆ ಮೂಲಕ ಶೇ.80ರಷ್ಟು ಹಣ್ಣುಗಳ ಮಾರಾಟ. ಉಳಿದವುಗಳ ಮೌಲ್ಯವರ್ಧನೆ. 

 ಭತ್ತ: ಕಾಲು ಎಕ್ರೆಯಲ್ಲಿ ಭತ್ತದ ಬೇಸಾಯ. ಹಕ್ಕಿ, ಹಂದಿ, ಇಲಿ ತಿಂದು ಮಿಕ್ಕಿದ್ದು ಬಳಕೆಗೆ. ' ವರ್ಷ ಮೂರು ಮೂಟೆ ಭತ್ತ ಸಿಕ್ಕಿದೆ' ಎನ್ನುತ್ತಾರೆ. ಒಂದು ಮೂಟೆ ಅಂದರೆ ಅರುವತ್ತು ಕಿಲೋ.

 ಬಾಳೆ : ಸಾವಿರಕ್ಕೂ ಮಿಕ್ಕಿ ಬಾಳೆ. ಏಲಕ್ಕಿ, ಪಚ್ಚೆ, ನಂಜನಗೂಡು ರಸಬಾಳೆ, ದಕ್ಷಿಣ ಕನ್ನಡದ ರಸಬಾಳೆ, ಬೂದಿ, ಪೂಜೆ ಬಾಳೆ, ರಾಜ ಬಾಳೆ, ಚಂದ್ರ ಬಾಳೆ, ಮದುರಂಗ, ಜಾಂಜೀಬಾರ್, ನೇಂದ್ರ, ಮುಂಡುಬಾಳೆ, ಕಲ್ಲುಬಾಳೆ. 'ಬಾಳೆ ಮತ್ತು ಭತ್ತ ಹೆಚ್ಚು ನೀರು ಬೇಡುವ ಬೆಳೆಗಳು. ಅದಕ್ಕೆ ಕಡಿಮೆ ನೀರು ಕೊಟ್ಟು ಬೆಳೆಸಬೇಕು. ಪ್ರಯತ್ನಿಸುತ್ತಿದ್ದೇನೆ' ಎನ್ನುತ್ತಾರೆ.

ತರಕಾರಿ: ಬೀಟ್ರೂಟ್, ನೀರುಳ್ಳಿ, ನವಿಲುಕೋಸು, ಬೀನ್ಸ್, ಮೂಲಂಗಿ, ಹಾಗಲಕಾಯಿ, ಅಲಸಂಡೆ, ಸೀಮೆಬದನೆ, ಗುಳ್ಳ, ಮೆಣಸು, ಎಲ್ಲಾ ವಿಧದ ಸೊಪ್ಪುಗಳು, ಪಡುವಲಕಾಯಿ, ಸೊರೆಕಾಯಿ, ಕುಂಬಳಕಾಯಿ.. ಹೀಗೆ ಹಲವು ತರಕಾರಿಗಳ ಕೃಷಿ. ಮಳೆಗಾಲದಲ್ಲಿ ಬಸವನಹುಳದ ಕಾಟ. ಹಾಗಾಗಿ ಬೇಸಿಗೆಯ ತರಕಾರಿ ಬರೋಬ್ಬರಿ. ಮೈಕ್ರೋ ಸ್ಪ್ರಿಂಕ್ಲರ್ ಮೂಲಕ ನೀರಾವರಿ. ಒಣಗಿದ ಸ್ಲರಿಯ ಪುಡಿ ಮುಖ್ಯ ಗೊಬ್ಬರ. ' ವರುಷದಿಂದ ನೀರುಳ್ಳಿ ಮತ್ತು ಬೆಳ್ಳುಳ್ಳಿ ಕೃಷಿ ಮಾಡಿದ್ದೇವೆ. ಚೆನ್ನಾಗಿ ಬಂದಿದೆ. ಭರವಸೆ ಬಂದಿದೆ' ಎನ್ನುತ್ತಾರೆ ನಿರ್ಮಲ .ಪಿ. ಇವರ ಅಡುಗೆ ಮನೆಗೆ ಹೊರಗಿನಿಂದ ತರಕಾರಿ ಬರುವುದಿಲ್ಲ. ಎಲ್ಲವೂ ತೋಟದ್ದೇ.

ಇಂದ್ರಪ್ರಸ್ಥ ತೋಟದೊಳಗೆ ವರುಷಪೂರ್ತಿ  ಒಂದಲ್ಲ ಒಂದು ಬೆಳೆಗಳ ಕೊಯ್ಲು. ಜೂನ್ನಿಂದ ಆಗಸ್ಟ್ ಲಿಂಬೆ ಸೀಸನ್. ವಾರಕ್ಕೆ ಮೂರು ಬಾರಿ ಕೊಯಿಲು. ಕೊಯ್ಯುವುದಕ್ಕಿಂತ ಬಿದ್ದ ಹಣ್ಣುಗಳು ಜ್ಯೂಸ್ಗೆ ಸೂಪರ್! ಕಾರಣ, ಅದರಲ್ಲಿ ರಸ ಹೆಚ್ಚಿರುತ್ತದೆ, ಹಿಂಡಲು ಸುಲಭ.

ಹೆರಳೆ, ಮುಸುಂಬಿ, ಕಿತ್ತಳೆ, ಪಪ್ಪಾಯಿ, ಜಾಯಿಕಾಯಿ, ನೇರಳೆ, ಬೆಣ್ಣೆಹಣ್ಣು, ಕಮ್ರಾಕ್ಷಿ, ಫ್ಯಾಷನ್ಫ್ರುಟ್, ಬೇಲ, ಕರಂಡೆ, ರಾಜಕರಂಡೆ, ಸಂಪಿಗೆಹಣ್ಣು, ಚೆರ್ರಿ, ಅರಾರೂಟ್, ಕೆಸುವಿನಗೆಡ್ಡೆ, ಹುತ್ತರಿ ಗೆಣಸು, ಅರಶಿನ, ಶುಂಠಿ, ಹಿಪ್ಪಿಲಿ, ಕರಿಮೆಣಸು, ರಂಗುಮಾಲಿ, ಹತ್ತಿ, ಮಾವು, ಕಬ್ಬು, ಪದ್ಮುಖ, ಕಾಫಿ.. ಇನ್ನೂ ಹಲವು, ಕೆಲವು. 

ನಂದಿನಿ ಕುಟುಂಬ

ಹಟ್ಟಿಯಲ್ಲಿ ಹನ್ನೆರಡು ಹಸುಗಳು. ಮೂರು ಎತ್ತು, ಮೂರು ಕರುಗಳು. ಮಿಕ್ಕಂತೆ ಮಿಶ್ರತಳಿಗಳು. ಮನೆಯಡುಗೆಗೆ, ಮೌಲ್ಯವರ್ಧನಾ ಘಟಕಕ್ಕೆ ಗೋಅನಿಲ. ಗ್ಯಾಸ್ ಸಿಲಿಂಡರ್ ಮನೆಯೊಳಗೆ ಬಾರದೆ ಹತ್ತು ವರುಷವಾಯಿತು! ತೋಟದೊಳಗೆ ಜಾನುವಾರುಗಳಿಗೆ ಮೇವಾಗಬಲ್ಲ ಬೇಕಾದ ನೂರಾರು ಸಸ್ಯಗಳಿವೆ. ಉದಾ: ದಾಸವಾಳ, ಅಲಂಕಾರಿಕ ಹೂಗಳ ವಿಧಗಳು.     'ವರ್ಷಕ್ಕೆ ಹೈನುಗಾರಿಕೆಯಿಂದ ಸುಮಾರು ಎಂಭತ್ತೆರಡು ಸಾವಿರ ರೂಪಾಯಿ ಖರ್ಚ  ಬಂದರೆ, ಆದಾಯ ಕೇವಲ ಐವತ್ತಾರು ಸಾವಿರ. ಇಪ್ಪತ್ತಾರು ಸಾವಿರ ರೂಪಾಯಿ ನಷ್ಟ! ನಮ್ಮ ಮನೆಗೆ ದಿನಕ್ಕೆ ನಾಲ್ಕು ಲೀಟರ್ ಹಾಲು ಬೇಕು. ಖರೀದಿ ದರವನ್ನು ಲೀಟರಿಗೆ ಇಪ್ಪತ್ತು ರೂಪಾಯಿಯಂತೆ ಹಿಡಿದರೂ ನಾಲ್ಕು ಲೀಟರಿಗೆ ವರ್ಷಕ್ಕೆ ಇಪ್ಪತ್ತಾರು ಸಾವಿರ ದಾಟುತ್ತದೆ. ಹಾಗಿರುವಾಗ ನಷ್ಟ ಎಲ್ಲಿಂದ? ಸ್ಲರಿ, ಗೊಬ್ಬರದ ಲೆಕ್ಕಾಚಾರ ಬೇರೆ..' ಹೈನುಗಾರಿಕೆಯ ಸೂಕ್ಷ್ಮಗಳನ್ನು ಚಂದ್ರಶೇಖರ್ ಹೇಳುತ್ತಾರೆ.

ಬೋನ್ಸಾಯಿ

ಮನೆಯ ಸುತ್ತ ಕುಬ್ಜಮರಗಳ ಕುಂಡಗಳು ಮನೆಯ, ಮನದ ಅಂದವನ್ನು ಹೆಚ್ಚಿಸುತ್ತದೆ. ಇದು ಮರವನ್ನು ಕುಬ್ಜಗೊಳಿಸುವ ಕಲೆ. 'ಪ್ರಕೃತಿಯನ್ನು ಆರಾಧಿಸುವ ನೀವು ಕುಬ್ಜಗೊಳಿಸುವುದು ತಪ್ಪಲ್ವಾ' ಅನೇಕರು ಪ್ರಶ್ನಿಸಿದ್ದಾರಂತೆ. ಪ್ರಕೃತಿ ಯಾವುದನ್ನೂ ಕುಬ್ಜ ಮಾಡುವುದಿಲ್ಲ. ಗಿಡವು ಮನೆಯ ಹತ್ತಿರವಿದ್ದರೆ ಅದು ಒಡನಾಡಿಯಾಗುತ್ತದೆ.  ಬೆಳವಣಿಗೆಯನ್ನು ಗಮನಿಸಲು ಸಾಧ್ಯವಾಗುತ್ತದೆ. ಯಾವ ಕಾಲದಲ್ಲಿ ಏನೇನು ಬದಲಾವಣೆ ಸಾಧ್ಯ ಎಂಬುದನ್ನು ಅಧ್ಯಯನ ಮಾಡಲು ಅನುಕೂಲ. ಬದುಕಿನಲ್ಲಿ ಪ್ರಯೋಗ ಮತ್ತು ಕುತೂಹಲ ತಪ್ಪಲ್ಲವಲ್ವಾ.

 ಭೂಮಿಯ ಮೇಲೆ ಗಿಡಗಳು ಹೆಚ್ಚು ಬಂದಾಗ ಭೂಮಿಗೆ ಹೆಚ್ಚುವರಿ ಪಕ್ವತೆ ಬಂದಂತಾಗುತ್ತದೆ. ಅದೊಂದು ಆಧ್ಯಾತ್ಮಕ ಸಂದೇಶ. 'ನೋಡಿ.. ಇಲ್ಲಿ ಎಷ್ಟೊಂದು ಕಲ್ಲುಗಳಿವೆ. ಅವುಗಳೆಲ್ಲಾ ಪ್ರವಾಹದಲ್ಲಿ ಕೊಚ್ಚಿಕೊಂಡು, ತಮ್ಮನ್ನು ಉಜ್ಜಿಸಿಕೊಳ್ಳುತ್ತಾ ನುಣುಪಾದವುಗಳು,' ತಮ್ಮ ಕಲ್ಲುಗಳ ಸಂಗ್ರಹದತ್ತ ಚಂದ್ರಶೇಖರ್ ಗಮನ ಸೆಳೆಯುತ್ತಾರೆ. ಪ್ರತೀ ಬೊನ್ಸಾಯಿ ಕುಂಡದಲ್ಲಿ ಭಾರಕ್ಕಾಗಿ ಕಲ್ಲುಗಳನ್ನಿಟ್ಟಿದ್ದಾರೆ. ಅವು ತೇವವನ್ನೂ ಹಿಡಿದಿಟ್ಟುಕೊಳ್ಳುತ್ತವೆ.

ಸಸ್ಯವೈವಿಧ್ಯಗಳು

ಇಂದ್ರಪ್ರಸ್ಥವೊಂದು 'ಕಾಡು ತೋಟ'. ಸಸ್ಯಗಳಿಗೆ ಕಾಡಿನ ವಾತಾವರಣವನ್ನು ನಿರ್ಮಿಸಿಕೊಟ್ಟರೆ ಸಾಕು, ಮತ್ತವೇ ಬೆಳೆದುಕೊಳ್ಳುತ್ತವೆ. ನಿಧಾನಕ್ಕೆ ಭೂಮಿಗೆ ಅವೇ ಜೀವಧಾರಕವಾಗುತ್ತದೆ.

 ಒಂದು ರೂಪಕವನ್ನು ಪ್ರಸ್ತುತಪಡಿಸುತ್ತಾರೆ - 'ಪ್ರಯಣ ಕಾಲದಲ್ಲಿ ನನ್ನ ವಾಹನದಲ್ಲಿ ಟೂಲ್ಬಾಕ್ಸ್ ಇರುತ್ತದೆ. ಯಾವುದೋ ಕಾರಣಕ್ಕೆ ರಸ್ತೆಯಲ್ಲಿ ವಾಹನ ಹಾಳಾಯಿತೆನ್ನಿ. ಬೇಕಾದ ಸ್ಪಾನರ್ ಇಲ್ಲದಿದ್ದರೆ ರಿಪೇರಿ ಮಾಡಲು ಅಸಾಧ್ಯ. ದಾರಿಯಲ್ಲಿ ಯಾರೋ ರಿಪೇರಿ ಮಾಡುವ ಅನುಭವಿ ಹೋಗುತ್ತಿರುತ್ತಾನೆ. ಸ್ಪಾನರ್ ಇಲ್ಲ ಎಂಬ ಕಾರಣಕ್ಕಾಗಿ ಆತನ ಜ್ಞಾನವನ್ನು ನೋಡಲು, ಅರಿಯಲು ಅಸಾಧ್ಯವಾಗುತ್ತದೆ. ಸ್ಪಾನರ್ ಇದ್ದುದರಿಂದ ಅವನ ಜ್ಞಾನ ನನಗೆ ಸಿಗುತ್ತದೆ.'

ಇದನ್ನೇ ಸಸ್ಯಗಳಿಗೆ ಸಮೀಕರಿಸಿ. 'ಗಿಡವೊಂದು ನನ್ನಲ್ಲಿದೆ. ಅದರ ಪರಿಚಯವಿಲ್ಲ. ಯಾರೋ ಬರುತ್ತಾರೆ, ನೋಡುತ್ತಾರೆ, ಗಿಡದ ಪರಿಚಯವನ್ನು ಹೇಳುತ್ತಾರೆ. ಗಿಡ ಇದ್ದುದರಿಂದ ನನಗದು ತಿಳಿಯಿತು. ಗೊತ್ತಿರುವ ಗಿಡದಲ್ಲಿ ಅದರ ಜ್ಞಾನವನ್ನು ತಿಳಿಯಲು ಸಾಧ್ಯವಾಯಿತಲ್ವಾ. ಹಾಗಾಗಿ ಪ್ರಕೃತಿಯ ನಿಯಮವೇ ವೈವಿಧ್ಯ. ತೋಟವೊಂದು ಕಾಡಿಗೆ ಹತ್ತಿರವಾದಾಗ ಮಾತ್ರ ಇದು ಸಾಧ್ಯ.' ಇಂದ್ರಪ್ರಸ್ಥದ ಸಂಪನ್ನತೆಯ ಹಿಂದಿನ ಗುಟ್ಟನ್ನು ಚಂದ್ರಶೇಖರ್ ಕಟ್ಟಿಕೊಟ್ಟದ್ದು ಹೀಗೆ.

ಸಸ್ಯಸಂಕುಲದ ಸಂಗ್ರಹಕ್ಕಾಗಿ ಪ್ರಯಾಣ ಮಾಡಿಲ್ಲ. ಹೋದಲ್ಲಿ ಬಂದಲ್ಲಿ ಪ್ರತ್ಯೇಕವಾದ ನೋಟವಿದ್ದರಾಯಿತು. ಗಿಡಗಳು ಗೋಚರವಾಗಿ ಬಿಡುತ್ತವೆ. ನೆಂಟರ ಮನೆಗೆ ಹೋದಾಗ, ರಸ್ತೆಬದಿಗಳಿಂದ ಸಂಗ್ರಹವಾ ಮಾಡಿದುದು ಹೆಚ್ಚಂತೆ. ಮೈಸೂರಿನಿಂದ ಪುತ್ತೂರು ಮನೆಗೆ ಏನಿಲ್ಲವೆಂದರೂ ವರುಷಕ್ಕೆ ನಾಲ್ಕು ಸಲ ಪ್ರಯಾಣಿಸುತ್ತಾರೆ. ಅಂದರೆ ಎಂಟು ಟ್ರಿಪ್. ಪ್ರತೀ ಸಲ ಪ್ರಯಾಣ ಮಾಡುವಾಗಲೂ ಹೊಸ ಗಿಡಗಳೇ ಅವರಿಗೆ ಕಂಡಿವೆ. ಅವೆಲ್ಲವೂ ಇಂದ್ರಪ್ರಸ್ಥದಲ್ಲಿವೆ.

 ಇಲ್ಲಿನ ಸಸ್ಯವೈವಿಧ್ಯವನ್ನು ಹೀಗೆ ಪಟ್ಟಿಮಾಡಬಹುದು : ಹನ್ನೊಂದು ಜಾತಿಯ ತೆಂಗು, ಹದಿನಾರು ಜಾತಿಯ ಬಾಳೆ, ತೊಂಭತ್ತು ಜಾತಿಯ ಗಡ್ಡೆಗಳು, ಅಷ್ಟೇ ತರಕಾರಿಗಳು; ನೂರೈವತ್ತು ಜಾತಿಯ ಔಷಧೀಯ ಗಿಡಗಳು, ಐನೂರೈವತ್ತು ಜಾತಿಯ ಅಲಂಕಾರಿಕ ಗಿಡಗಳು, ಇನ್ನೂರ ಇಪ್ಪತ್ತೈದು ಕಾಡು ಮರಗಳು, ಹದಿಮೂರು ಜಾತಿಯ ಅಡಿಕೆ, ನೂರ ಎಂಭತ್ತು ವಿಧದ ಹಣ್ಣುಗಳು, ಎಂಭತ್ತೈದು ಜಾತಿಯ ಸೊಪ್ಪುಗಳು, ಅರುವತ್ತು ಸುವಾಸನಾ ಸಸ್ಯಗಳು, ಇಪ್ಪತ್ತೈದು ಜಾತಿಯ ಹುಲ್ಲುಗಳು, ನೂರು ಜಾತಿಯ ಹಳ್ಳಿಗಳು. ಅಲ್ಲದೆ ಹೆಸರು ಗೊತ್ತಿಲ್ಲದ ಅಲಂಕಾರಿಕ ಗಿಡಗಳು, ಬಳ್ಳಿಗಳು, ಕಳೆಗಳು ಸಾವಿರಕ್ಕೂ ಮಿಕ್ಕಿ..!

ನೋಟ-ಒಳನೋಟ

 'ನನ್ನ ತೋಟದ ಚಿಗುರು, ಕಾಯಿಗಳು ಅಡುಗೆ ಮನೆಗೆ ಹೋಗುತ್ತದೆ. ಬಳಕೆ ಸಾಧ್ಯವೋ ಎಂದು ಅಲ್ಲಿ ಸಂಶೋಧನೆಯಾಗುತ್ತದೆ,' ಮಡದಿಯತ್ತ ಕಣ್ಣುಮಿಟುಕಿಸುತ್ತಾ ಚಂದ್ರಶೇಖರ್ ವಿನೋದಕ್ಕೆ ಹೇಳುತ್ತಾರೆ. 'ತಿಂದು ನೋಡಿದರೆ ತಾನೆ, ತಿನ್ನಲು ಆಗುತ್ತೋ, ಇಲ್ವೋ ಅಂತ ಗೊತ್ತಾಗೋದು'? ದನಗಳು ತಿಂದರೆ ಏನೂ ಆಗುವುದಿಲ್ಲ ಅಂತಾದರೆ ಮನುಷ್ಯರು ಧಾರಾಳ ತಿನ್ನಬಹುದು. ಶೇ.99ರಷ್ಟು ಬಾಯಿಗೆ ಇಷ್ಟವಾದರೆ ಅದು ಆಹಾರಕ್ಕೆ ಓಕೆ. ಪಕ್ಷಿಗಳಿಗೆ ಮೂಸಿದ ತಕ್ಷಣ ಗೊತ್ತಾಗಿ ಬಿಡುವುದಿಲ್ವಾ. ರುಚಿ ಇಲ್ಲದ್ದನ್ನು ರುಚಿ ಬರುವಂತೆ ಮಾಡಿ ಸೇವಿಸುತ್ತೇವೆ. ಹಾಗಾಗಿ ಹೊಸತನ್ನು ಹುಡುಕಿ ತಿನ್ನಲು ಕಲಿಯಬೇಕು.

ಸಾವಯವ ಕೃಷಿಯು ಉಪದೇಶ, ಭಾಷಣದಿಂದ ಬರುವಂತಹುದಲ್ಲ. ಬಹುತೇಕರು ರಾಸಾಯನಿಕ ಕೃಷಿಯಿಂದ ರೋಸಿ ಹೋಗಿಯೇ ಸಾವಯವವನ್ನು ನೆಚ್ಚಿಕೊಂಡಿದ್ದಾರೆ. ನನ್ನ ತೋಟದಲ್ಲಿ ಇಳುವರಿಗಿಂತ, ಜ್ಞಾನಕ್ಕೆ ಪ್ರಾಧಾನ್ಯತೆ. ಇದು 'ನಾಲೇಜ್ ಬ್ಯಾಂಕ್'. ದಿಸೆಯಲ್ಲಿ ಪ್ರಯತ್ನ. ಇದಕ್ಕೆ ಮಾನಸಿಕ ದೃಢತೆ ಬೇಕು.

ನಿತ್ಯ ಎಂಟು ಗಂಟೆ ದುಡಿತ. ಗಿಡಗಳ ಅಂದವರ್ಧನೆಗೆ ಹೆಚ್ಚು ಸಮಯ ವ್ಯಯ. ಕುಂಡದ ಕೆಲಸಗಳೇ ಅಧಿಕ. ಮಾರ್ಚ್ , ಎಪ್ರಿಲ್ನಲ್ಲಿ ಬಿದ್ದ ತೆಂಗಿನ ಗರಿಗಳನ್ನು ತುಂಡು ಮಾಡಿ ಗಿಡದ ಬುಡಕ್ಕೆ ಪೇರಿಸುವುದು ಕಾಯಕಷ್ಟದ ಕೆಲಸ.

ಮೊದಲೆಲ್ಲಾ ಕೃಷಿಕೂಟಗಳ ಸಂಘಟನೆ. ಆರಂಭಕ್ಕೆ ಉತ್ತಮ ಪ್ರತಿಕ್ರಿಯೆ. ಕೃಷಿಕರ ಉಪಸ್ಥಿತಿ ಅಧಿಕ. ಬರಬರುತ್ತಾ ಉಪಸ್ಥಿತಿ ಕ್ಷೀಣನೆ. ಹೇಳಿದ, ಕೇಳಿದ, ಚರ್ಚಿಸಿದ ವಿಚಾರಗಳನ್ನು ಮನದೊಳಕ್ಕೆ ಸ್ವೀಕರಿಸುವವರು ಕಡಿಮೆ. ಬರೇ ಗಾಳಿಗುದ್ದಾಟ. ಬರಿಗುಲ್ಲು, ನಿದ್ದೆಗೇಡು! ಹಾಗಾಗಿ ಇಂತಹ ಕೂಟಗಳ ಕಲಾಪಗಳಲ್ಲಿ ಚಂದ್ರಶೇಖರ್ಗೆ ಒಲವು ಕಡಿಮೆಯಾಗಿದೆ.

ಸಾವಯವದ ಕುರಿತು ಅಧಿಕೃತವಾಗಿ ಮತ್ತು ಅನುಭವದಿಂದಾಗಿ ನಿಷ್ಠುರವಾಗಿ ಮಾತನಾಡುತ್ತಾರೆ. ಸಂಪನ್ಮೂಲ ವ್ಯಕ್ತಿಯಾಗಿ ಕರೆ ಬರುತ್ತದೆ. ಸೀಮಿತವಾಗಿ ಭಾಗಿ. 'ತಿರುಗಾಡುತ್ತಾ ಇದ್ದರೆ ಕೃಷಿ ನೋಡುವವರಾರು? ನನಗೆ ಪ್ರಯಾಣ ಅಂದರೆ ಅಲರ್ಜಿ.  ಇಲ್ಲೇ ಇರುವುದರಲ್ಲೇ ಖುಷಿ,' ಎನ್ನುತ್ತಾರೆ. ಆದರೂ ಒತ್ತಾಯಕ್ಕೆ ಕಟ್ಟುಬಿದ್ದು ಭಾಗವಹಿಸುವುದೂ ಇದೆಯೆನ್ನಿ.

ಹಣ್ಣು ಬೆಳೆಗಳ ಮೌಲ್ಯವರ್ಧನೆ-ಮಾನವರ್ಧನೆ

ಅಡುಗೆ ಮನೆಯೇ ಮೌಲ್ಯವರ್ಧನಾ ಉತ್ಪನ್ನ ತಯಾರಿ. ತೋಟದ ಉತ್ಪನ್ನಗಳು ಒಳಸುರಿ. ಇನ್ನೂರಕ್ಕೂ ಮಿಕ್ಕಿದ ಉತ್ಪನ್ನಗಳ ತಯಾರಿ. ಮೈಸೂರಿನಲ್ಲಿರುವ 'ನೇಸರ'ದಲ್ಲಿ ಹೆಚ್ಚಿನವು ಬಿಕರಿ. ಎಪಿ ದಂಪತಿಗಳ ಜಂಟಿ ದುಡಿಮೆ. 'ನನ್ನ ತೋಟದ ಉತ್ಪನ್ನಗಳನ್ನು ಉಚಿತವಾಗಿ ಕೊಡುವುದನ್ನು ನನಗೆ ಬ್ರೇಕ್ ಮಾಡಬೇಕಿತ್ತು' ಮೌಲ್ಯವರ್ಧನೆಯ ಹಿಂದಿರುವ ಆಶಯವನ್ನು ಹೇಳುತ್ತಾರೆ.

ಮನೆಯ ಒಂದು ಪಾಶ್ರ್ವ ಮೌಲ್ಯವರ್ಧನೆ ಉತ್ಪನ್ನಗಳ ಮಿನಿ ಗೋದಾಮು. ಮೌಲ್ಯವರ್ಧಿತ ಉತ್ಪನ್ನವೆಂದರೆ ಜ್ಯೂಸ್, ಜ್ಯಾಂ, ಜೆಲ್ಲಿ.. ಹೀಗೆ ಒಂದಷ್ಟನ್ನು ಹೇಳಬಹುದು. ರಾಸಾಯನಿಕ ರಹಿತವಾದ ಕೃಷಿ ಉತ್ಪನ್ನಗಳಿಂದ ಏನೆಲ್ಲಾ ತಯಾರಿಸಬಹುದು ಎಂಬುದಕ್ಕೆ ಎಪಿ ದಂಪತಿಗಳ ಶ್ರಮ ಉತ್ತರ ಹೇಳುತ್ತದೆ. ಪ್ರಯೋಗಶೀಲ ಮನಸ್ಸು ಕ್ಷೇತ್ರದಲ್ಲಿ ಹೊಸ ಸಾಧ್ಯತೆಯನ್ನು ತೋರಿದೆ. ಇಲ್ಲಿ ಕಳೆಯೂ ಒಂದೇ, ಬೆಳೆಯೂ ಒಂದೇ! ಎಲೆ, ಹೂ, ಸಿಪ್ಪೆ, ತೊಗಟೆ, ಬೀಜ ಹಾಳಾಗುವುದಿಲ್ಲ.

ತನ್ನ ಅಜ್ಜನ ಮನೆಯಲ್ಲಿ ಭತ್ತದ ಹೊಟ್ಟಿನ ಇದ್ದಿಲಿಗೆ ಉಪ್ಪು ಬೆರೆಸಿ ಹಲ್ಲುಪುಡಿ ತಯಾರಿಸುತ್ತಿದ್ದರು. ಇದೇ ಆಧಾರದಲ್ಲಿ ಲಭ್ಯ ಕೃಷಿ ಉತ್ಪನ್ನಗಳಿಂದ ಹಲ್ಲುಪುಡಿ ತಯಾರಿಸಿದರು. ನಂತರ ಸ್ನಾನದ ಪುಡಿ. ಬಳಿಕ ನಿರಂತರ ಪ್ರಯೋಗ. ಮನೆಗಾಗಿ ತಯಾರಿಸಿದ ವಸ್ತುಗಳಿಗೆ ಹೊರಗಿನಿಂದ ಬೇಡಿಕೆ ಬಂದಾಗ ಮಾರುಕಟ್ಟೆ ಯೋಜನೆ, ಯೋಚನೆ.

ಮಧುನಾಶಿನಿ, ಶ್ರೀಗಂಧ, ಅಮೃತಬಳ್ಳಿ, ಹರ್ಬಲ್ ಟೀಪುಡಿ.. ಹೀಗೆ ನೂರೈವತ್ತು ಹಸಿರು ಉತ್ಪನ್ನಗಳಿವೆ. ಆಹಾರ ಉತ್ಪನ್ನಗಳು, ಮಾರ್ಜಕಗಳು, ಆಯುರ್ವೇದ ಔಷಧಿ, ಎಣ್ಣೆಗಳು, ಕುಂಕುಮ, ದಾರೆಹುಳಿಯ ಒಣರೂಪ 'ಕಮರಾಕ್ಷಿ ದ್ರಾಕ್ಷಿ', ಮಜ್ಜಿಗೆ ಮಸಾಲೆ, ಕಾಫಿಗೆ ಪರ್ಯಾಯವಾಗಿ 'ಪೂಗಪೇಯ', ಫ್ಯಾಶನ್ಫ್ರುಟ್ ಶರಬತ್ ಮತ್ತು ಜ್ಯಾಂ, ಚಟ್ನಿಪುಡಿಗಳು, ಬಾಳೆಕಾಯಿ ಹಿಟ್ಟು, ಏಲಕ್ಕಿ ಸಿಪ್ಪೆಯ ಕಾಡಿಗೆ, ಚ್ಯವನಪ್ರಾಶ (ಮೌಲ್ಯವರ್ಧಿತ ಉತ್ಪನ್ನಗಳ ವಿವರ ಮುಂದೆ ನೀಡಲಾಗಿದೆ)

ಬೆಂಕಿ, ಉಪ್ಪು, ಸಕ್ಕರೆ ಮೊದಲ ದರ್ಜೆಯ  ಸಂರಕ್ಷಕಗಳು. ಅದನ್ನೂ ಉತ್ತಮವಾದುದು ಸೂರ್ಯನ ಬಿಸಿಲು. ಪ್ರಾಕೃತಿಕ ಸಂಪನ್ಮೂಲವನ್ನು ಬಳಸಿ ಮಾಡಿದ ಉತ್ಪನ್ನಗಳು ಹಲವು. ಬಿಸಿಲು ಇಲ್ಲದ ಸಮಯ ಮತ್ತು ಮಳೆಗಾಲದಲ್ಲಿ ಕಟ್ಟಿಗೆಯಿಂದ ಚಾಲೂ ಆಗುವ ಡ್ರೈಯರ್ ಬಳಕೆ. ಪ್ಲಾಸ್ಟಿಕ್ ಹೊದೆಸಿದ ಬಿಸಿಲಮನೆಯೂ ಇದೆ.

ತೋಟ ವೀಕ್ಷಿಸಲು ಆಗಮಿಸಿದ ಕೃಷಿಕರು ಬಯಸಿದರೆ ಅವರ ಅನುಕೂಲಕ್ಕೆ ಮನೆಯಲ್ಲೇ ಉತ್ಪನ್ನಗಳ ಮಾರಾಟ ವ್ಯವಸ್ಥೆ. ಮಿಕ್ಕಂತೆ ನೇಸರ ಮಳಿಗೆಗಳಲ್ಲಿ ಮಾರಾಟ. 'ಗಾಜಿನ ಬಾಟಲಿಗಳಲ್ಲಿ ಉತ್ಪನ್ನಗಳನ್ನು ತುಂಬಿ  ಮಾರಬೇಕೆನ್ನುವುದು ಒಲವು. ಜನರು ಪ್ಲಾಸ್ಟಿಕ್ ಬಾಟಲಿಗಳನ್ನು ಲೈಕ್ ಮಾಡುತ್ತಾರೆ. ಹಾಗಾಗಿ ಪ್ಲಾಸ್ಟಿಕ್ಗೆ ಅನಿವಾರ್ಯವಾಗಿ ಒಗ್ಗಬೇಕಾಗುತ್ತದೆ. ಉತ್ಪನ್ನಗಳ ವಿವರವಿರುವ ಸ್ಟಿಕ್ಕರನ್ನು ಆಗಾಗ್ಗೆ ಬದಲಿಸಬೇಕಾಗುತ್ತದೆ. ಎಲ್ಲರಿಗೂ ಗೊತ್ತಿರುವ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದು ಸುಲಭ. ಗೊತ್ತಿರದ ಉತ್ಪನ್ನಗಳಿಗೆ ಕಷ್ಟ', ಎನ್ನುತ್ತಾರೆ.

ಹೊರ ಅವಲಂಬನೆಯಿಂದ ದೂರ

ಅವಲಂಬನಾ ಕೆಲಸಗಳನ್ನು ಎಪಿಯವರು ಮೆಚ್ಚಿಕೊಳ್ಳುವುದಿಲ್ಲ, ಒಪ್ಪುವುದಿಲ್ಲ. ಕೃಷಿಕನಾದವನಿಗೆ ಎಲ್ಲವೂ ತಿಳಿದಿರಬೇಕು. ಇಂದ್ರಪ್ರಸ್ಥದಲ್ಲಿ ಕುಲುಮೆ ಇದೆ. ವಿದ್ಯುತ್ ಉತ್ಪಾದನಾ ಘಟಕವಿದೆ. ಆಲೆಮನೆಯಿದೆ. ಪಂಪ್, ಪೈಪ್, ವಾಹನಗಳ ರಿಪೇರಿಯ ಎಲ್ಲ ಪರಿಕರಗಳುಳ್ಳ 'ಆಯುಧಾಗಾರ'ವಿದೆ. 'ಯಾವಾಗ ಏನು ಬೇಕಾಗುತ್ತೋ ಗೊತ್ತಿಲ್ಲ. ಹಾಗಾಗಿ ಎಲ್ಲವೂ ಇದೆ. ಒಂದು ದಿವಸದ ಚಿಕ್ಕಪುಟ್ಟ ಕೆಲಸಗಳನ್ನು ನಾನೇ ನಿರ್ವಹಿಸುತ್ತೇನೆ. ನಮ್ಮ ಪಂಪ್ಸೆಟ್ಟಿನ ಗೋಡೆಯನ್ನು ನಾನೇ ಕಟ್ಟಿದ್ದು. ಈಗೀಗ ಬೇರೆ ಕೆಲಸಗಳು ಹೆಚ್ಚಾಗಿ ಇಂತಹ ಕೆಲಸಗಳನ್ನು ಮಾಡಲಾಗುತ್ತಿಲ್ಲ' ಎನ್ನುತ್ತಾರೆ.

ಇಂದ್ರಪ್ರಸ್ಥದ ವಿಂಶತಿಗೆ ತೋಟದಲ್ಲೊಂದು 'ಪ್ರಶ್ನಾರಂಗ'ವೆಂಬ ಸಭಾಗೃಹ ನಿರ್ಮಾಣ ಮಾಡಿದ್ದರು. ಅಪ್ಪಟ ದೇಸಿ ತಯಾರಿ. ಅದರ ಗೋಡೆಗಳಲ್ಲೆಲ್ಲಾ ಸಾವಯವ ಸಂದೇಶಗಳು. ರೈತರ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೊಂದು ತಾಣ. 

ಸಾವಯವದ ಸೂತ್ರವೇ ಸ್ವಾವಲಂಬನೆ. 'ಮನೆಯಲ್ಲಿ ಟಿವಿ, ವಾಹನ, ಮೊಬೈಲ್, ಕಂಪ್ಯೂಟರ್, ಮಿಕ್ಸಿ, ಪಂಪ್.. ಎಲ್ಲಾ ಆಧುನಿಕಗಳು ಬಂದಿವೆ. ಎಲ್ಲಾ ಕಡೆ ಇವುಗಳು ಇರುವ ಕಾರಣ ನಮಗೂ ಬೇಕಾಗಿದೆ. ಆದರೆ ಇದು ಅನಿವಾರ್ಯವಲ್ಲ. ಯಥಾಸಾಧ್ಯ ಇವುಗಳ ಅವಲಂಬನೆಯನ್ನು ಕಡಿಮೆಗೊಳಿಸುತ್ತಿದ್ದೇವೆ. ಹೇಳಿದಷ್ಟು ಸುಲಭವಲ್ಲ. ಅವೆಲ್ಲಾ ಇವತ್ತಿನ ಆವಶ್ಯಕತೆ', ಚಂದ್ರಶೇಖರ್ ಆಧುನಿಕ ಒಳಸುರಿಗಳನ್ನು ಸ್ವೀಕರಿಸಿದ ಬಗೆಯನ್ನು ಹೇಳುತ್ತಾರೆ.

ಇಪ್ಪತ್ತೊಂಭತ್ತು ವರುಷದ ಕೃಷಿ ಅನುಭವಗಳನ್ನು ಕನ್ನಾಡಿನ ವಿವಿಧ ಪತ್ರಿಕೆಗಳಿಗೆ ಬರೆಯುತ್ತಾರೆ. ಅವರ ಪ್ರಕಟಿತ ಪುಸ್ತಕಗಳು : ಅಡುಗೆಯ ಮೂಲಭೂತ ಸಿದ್ಧಾಂತಗಳು, ಕುಂಕುಮದಿಂದ ಕ್ರಾಂತಿ, ತೆಂಗಿನ ಹಣ್ಣು ತೆರೆಯಲು ನಮ್ಮ ಕಣ್ಣು, ಆಮಿಷಗಳ ಬೋನಿನೊಳಗೆ ಬೀಳಬೇಡಿ, ಬಾಣಲೆಯಿಂದ ಬೆಂಕಿಗೆ, ನಾವೆಲ್ಲಾ ಪ್ರಬುದ್ಧರಾಗುವುದು ಯಾವಾಗ?, ಇಂದ್ರಪ್ರಸ್ಥದೊಳಗೊಂದು ಸುತ್ತು, ನಿಂಬೆ ಹಿಚುಕಿದಾಗ, ಹಲಸು ಬಿಡಿಸಿದಾಗ, ಭೂಮಿ ನಮ್ಮ ಪಾಠಶಾಲೆ.

2003ರಲ್ಲಿ ಕರ್ನಟಕ ಸರಕಾರದ 'ಕೃಷಿ ಪಂಡಿತ ಪ್ರಶಸ್ತಿ', 2004ರಲ್ಲಿ ಮಂಡ್ಯದ ಚೌಡಯ್ಯ ಪ್ರತಿಷ್ಠಾನದ ಪ್ರಶಸ್ತಿ, 2008ರಲ್ಲಿ ಅಹಮದಾಬಾದಿನಲ್ಲಿ 'ಸೃಷ್ಟಿ ಸಂಮಾನ್'...ಪ್ರಾಪ್ತವಾದ ಪ್ರಶಸ್ತಿಗಳು.

ಪತ್ನಿ ನಿರ್ಮಲ .ಪಿ.ಸಿ. (48), ಮಗ ಡಾ.ಅಭಿಜಿತ್ .ಪಿ.ಸಿ. (27), ಮೈಸೂರಿನಲ್ಲಿ ಹೋಮಿಯೋ ವೈದ್ಯ. ಸೊಸೆ ಶ್ರೀಲತಾ (22). ಮಗಳು ಶಿಲ್ಪಾ ಗಂಡನ ಮನೆ ಸೇರಿದ್ದಾರೆ. (ಅಳಿಯ : ವಂಸತ ಕೇಶವ)

ತನ್ನ ಕೃಷಿಯನ್ನು ಅವರೇ ಒಂದೆಡೆ ಹೇಳುತ್ತಾರೆ - ಇಂದ್ರಪ್ರಸ್ಥವೆಂಬ ನಮ್ಮ ತೋಟದಲ್ಲಿ ಏನಾದರೊಂದಷ್ಟು ಭಿನ್ನ ಸಾಧನೆ ಆಗಿದ್ದರೆ, ಇತರರಿಗೆ ಹೇಳಬಹುದಾದ ಒಂದಷ್ಟು ವಿಷಯಗಳು ನನಗೆ ತಿಳಿದಿದ್ದರೆ, ಅದಕ್ಕೆ ಅತ್ಯಂತ ಪ್ರಮುಖ ಕಾರಣ - ನಮಗೆ ಇರುವುದರೊಂದೇ ಮನೆ, ಅದುವೇ ನಮ್ಮ ತೋಟದ ಮನೆ. ಮನವೆಲ್ಲೋ? ಮನೆಯೆಲ್ಲೋ? ಇರುವವರಿಗೆ ಎಲ್ಲಿದ್ದೀತು ನೆಮ್ಮದಿ ಸುಮ್ಮನೆ?! ಇಷ್ಟೆಲ್ಲಾ ಸಂಪನ್ಮೂಲವಿದ್ದ ಇಂದ್ರಪ್ರಸ್ಥದ ಆದಾಯ ಎಷ್ಟು? 'ಸಾಲಸೋಲಗಳಿಲ್ಲದೆ ಜೀವನ ನಡೆಸುವಷ್ಟು'!

ಮೌಲ್ಯವರ್ಧಿತ ವಸ್ತುಗಳು

* ಶುಂಠಿ, ನೇರಳೆ, ಫ್ಯಾಶನ್ಫ್ರುಟ್, ಪುನರ್ಪುಳಿ,  ಲಿಂಬೆ, ಮುಸುಂಬಿ, ಕಿತ್ತಳೆ, ಸಂಪಿಗೆ, ರಾಜಕರಂಡೆ, ಕೆನ್ನೇರಳೆ, ಚೆರಿ, ಸೀತಾಫಲ, ಕಮ್ರಾಕ್ಷಿ, ಬೆಂಬ್ಲಿ, ಕರಿಮೆಣಸು, ತುಳಸಿ, ಪದ್ಮುಖ, ದಾಳಿಂಬೆ ಮತ್ತು ಸಮ್ಮಿಶ್ರ ಹಣ್ಣುಗಳ ಶರಬತ್ತುಗಳು.

* ಜಾ ಹಣ್ಣು, ಚೆರ್ರಿ, ಪಪ್ಪಾಯಿ, ಚಿಕ್ಕು, ನೆಲ್ಲಿಕಾಯಿ, ಪುನರ್ಪುಳಿ,  ಬೇಲದಹಣ್ಣು, ಮಾವು, ಹಲಸು, ನೇರಳ, ಸೀಬೆ, ಶುಂಠಿ ಮತ್ತು ಸಮ್ಮಿಶ್ರ ಹಣ್ಣುಗಳ ಜ್ಯಾಂಗಳು.

* ಸಪೋಟ ಸಾಟೆ, ಕಮ್ರಾಕ್ಷಿ ದ್ರಾಕ್ಷೆ, ಒಣ ಬಿಂಬ್ಲಿ, ಒಣ ರಾಜ ಕರಂಡೆ, ಸುಕೇಳಿ, ಮಾಂಬಳ, ಭಾವನಾ ಶುಂಠಿ, ನೆಲ್ಲಿ ಅಡಿಕೆ ಸಿಹಿ/ಖಾರ, ಶುಂಠಿ ಮಿಠಾಯಿ, ಚ್ಯೂಯಿಂಗ್ ಹಣ್ಣು, ಮಾವು, ಬಾಳೆದಿಂಡು, ಒಣ ಅಂಬಟೆ, ಒಣ ಕೆನ್ನೇರಳೆ, ಒಣಗಿಸಿದ ಜಂಬುನೇರಳೆ, ಒಣ ಟೊಮೆಟೋ - ಒಣಗಿಸಿದ ಹಣ್ಣುಗಳು.

* ಜಾಯ್ ಸೆಂಡಿಗೆ, ಕುದನೆ, ಬೆರಕೆ ಸೊಪ್ಪು, ಹಸಿಮೆಣಸು, ಬೂದುಕುಂಬಳ, ಬಾಳೆಕಾಯಿ, ಬಾಳೆಕಾಯಿ - ಹಪ್ಪಳ, ಸೆಂಡಿಗೆಗಳು.

* ಲಿಂಬೆ ಸಟ್ಟು, ಕಂಚಿ ಸಟ್ಟು, ಅಜೋಲ, ಕರಿಬೇವು-ವಿಟಮಿನ್ ಸೊಪ್ಪು, ಜಾಯ್ ಸಟ್ಟು, ಮಜ್ಜಿಗೆ ಚಟ್ನಿ - ಇವೆಲ್ಲಾ ಚಟ್ನಿಪುಡಿಗಳು.

* ದಾಸವಾಳ+ಆವರಿಕೆ+ತಾವರ ಹೂಗಳ ಪುಡಿ, ರಕ್ತಶುದ್ಧಿ ಪುಡಿ, ಪೂಗಪೇಯ, ಕೊಕ್ಕೋಪುಡಿ, ಕಾಫಿಪುಡಿ, ಮಜ್ಜಿಗೆ ಹುಲ್ಲಿನ ಪುಡಿ - ಕಷಾಯಗಳು.

* ಅರಸಿನ, ಒಣಮೆಣಸಿನ ಪುಡಿ, ಕರಿಮೆಣಸು, ಬಿಳಿಮೆಣಸು, ವೆನಿಲಾ, ಜಾಯ್ಕಾಯಿ, ಜಾಯ್ಪತ್ರೆ, ಏಲಕ್ಕಿ, ಲವಂಗ, ಕರಿಬೇವು, ಸರ್ವಸಾಂಬಾರ್ ಸೊಪ್ಪು, ಬಾಸ್ಮತಿ ಸೊಪ್ಪು, ಪುದಿನಾ, ಪೆಪ್ಪರಮೆಂಟ್, ತುಳಸಿ - ಮಸಾಲೆಗಳು.

* ಕುಂಕುಮ, ರಂಗುಮಾಲಿ, ಮೆಹಂದಿ, ಪದ್ಮುಖ, ಕಾಡಿಗೆ, ಬೊಟ್ಟಿನ ಕುಳ - ಬಣ್ಣಗಳು.

* ಚ್ಯವನಪ್ರಾಶ, ಚ್ಯವನಚೂರ್ಣ, ಬೇಲದಪುಡಿ, ದಾಳಿಂಬೆ ಪುಡಿ, ನೆಲ್ಲಿಪುಡಿ, ಪಪ್ಪಾಯಿ ಬೀಜದ ಪುಡಿ, ಶುಂಠಿಪುಡಿ, ಮಧುನಾಶಿನಿ, ನೇರಳಬೀಜದ ಪುಡಿ, ಅಮೃತಬಳ್ಳಿ, ಬೇವು, ಕಿರಾತಕಡ್ಡಿ, ವಿಭೂತಿ, ಲಾವಂಚ, ಪುನರ್ಪುಳಿ ಕಡಿ, ಅರಾರೂಟ್ ಪುಡಿ, ಗರಿಕೆ ಪುಡಿ, ಪಾಷಾಣಭೇದಿ+ಅತಿಬಲ+ನೆಗ್ಗಿಲಪುಡಿ, ತ್ರಿಫಲ, ತ್ರಿಕಟು, ಮರಗೆಣಸಿನ ಪುಡಿ, ಬಾಳೆಕಾಯಿ ಪುಡಿ, ಮೆಣಸಿನ ಪುಡಿ -ಆಯುರ್ವೇದೀಯ ಔಷಧಿಗಳು.

* ಕರಟದ ಎಣ್ಣೆ, ಹೊಮ್ಮುಗುಳು, ಕಮ್ರಾಕ್ಷಿ, ತುಳಸಿ, ಬ್ರಾಹ್ಮೀ, ಗಡಿಮದ್ದು, ಜೇನುಮೇಣ, ಭ್ರುಂಗರಾಜ ತೈಲ, ಹೆರಳೆ - ಎಣ್ಣೆಗಳು.

* ಸ್ನಾನಚೂರ್ಣ, ದಂತಚೂರ್ಣ, ಸೀಗೆ, ಅಂಟುವಾಳ, ಪಾತ್ರೆಪುಡಿ, ಹುತ್ತದ ಮಣ್ಣು, ಕೊಬ್ಬರಿ ಎಣ್ಣೆಯ ಸಾಬೂನುಗಳು, ದ್ರವರೂಪಿ ಸಾಬೂನು, ತುಪ್ಪೀರೇ ಜುಂಗು- ಮಾರ್ಜಕಗಳು.

* ಇಡಿ ಮತ್ತು ಹೋಳು ಲಿಂಬೆ ಉಪ್ಪಿನಕಾಯಿ,  ಟೊಮೆಟೋ ಸಾಸ್, ಚೆರಿ ಸಾಸ್, ಬಾಳೆಹಣ್ಣು ಹಲ್ವ, ಲಿಂಬೆ-ಕಿತ್ತಳೆ-ಹೆರಳೆ ಹಣ್ಣುಗಳ ಒಣ ಸಿಪ್ಪೆಗಳು.


 

0 comments:

Post a Comment