Friday, September 13, 2024

ಸಮ್ಮನಸ್ಸಿಗೆ ಶರಣು

ಪಡುಬಿದ್ರೆ ಸನಿಹದ ಅಕ್ಷರ ಪ್ರೇಮಿ ಆನಂದ್ ನನ್ನ ಕೃಷಿ ಸಂಬಂಧಿ 'ಮಣ್ಣಿಗೆ ಮಾನ' ಹಾಗೂ ಯಕ್ಷಗಾನ ಕುರಿತಾದ 'ಮಣಿಸರ' ಎರಡು ಪುಸ್ತಕಗಳನ್ನು ಖರೀದಿಸಿದ್ದರು. ಅವರು ನನ್ನ ಬಹುತೇಕ ಪುಸ್ತಕಗಳ ಓದುಗ ಕೂಡಾ. ಅವರ ಮನೆಯಲ್ಲಿದ್ದ ಚಿಕ್ಕ ಗ್ರಂಥಾಲಯವೇ ಅಕ್ಷರಪ್ರೀತಿಗೆ ಸಾಕ್ಷಿ.

ಈಚೆಗೆ ಅವರ ಮನೆಯಲ್ಲಿ ಸಾಹಿತ್ಯ ಕಾರ್ಯಕ್ರಮ. ಎರಡೂ ಪುಸ್ತಕಗಳ ಐವತ್ತೈವತ್ತು ಪ್ರತಿಗಳನ್ನು ಹಂಚಲು ಖರೀದಿಸಿದ್ದರು. 'ಕಾಫಿ, ಚಹ ಹೇಗೂ ಇದ್ದೇ ಇರುತ್ತದೆ. ಮನೆಗೆ ಒಯ್ಯಲು ಪುಸ್ತಕಗಳ ಉಡುಗೊರೆ. ಬಂದವರೆಲ್ಲರೂ ಅಕ್ಷರ ಪ್ರೇಮಿಗಳೇ' ಎಂದು ಹಿಮ್ಮಾಹಿತಿ ನೀಡಿದ್ದರು.

ಅವರ ಸಮ್ಮನಸ್ಸನ್ನು ಮನಸಾ ಕೊಂಡಾಡಿದೆ. 'ನನ್ನ ಪುಸ್ತಕವನ್ನು ಖರೀದಿಸಿದ್ದಾರೆ' ಎನ್ನುವುದರಿಂದ ಅಲ್ಲ. ಮಾರುಕಟ್ಟೆಯಲ್ಲಿ ನೂರಾರು ಅಲ್ಲ, ಸಾವಿರಾರು; ಸಿದ್ಧ, ಪ್ರಸಿದ್ಧ ಲೇಖಕರ ಪುಸ್ತಕಗಳು ಪೈಪೋಟಿಯಲ್ಲಿ ಇಲ್ವಾ.  ಅಂತಹುದರಲ್ಲಿ ನನ್ನ ಪುಸ್ತಕವನ್ನೇ ಖರೀದಿಸಿದ್ದಾರೆ ಎಂದರೆ ಹೆಮ್ಮೆ.  

ಸ್ನೇಹ, ವಿಶ್ವಾಸ ಹಾಗೂ ಬಂಧುತ್ವಕ್ಕೆ 'ಮಾನ ನೀಡುವುದು' ಅಂದರೆ ಇದೇ ಅಲ್ವಾ. ಎಲ್ಲೋ ಒಂದು ಕಡೆ ನಮ್ಮನ್ನು ಪ್ರೀತಿಸುವವರು ಇದ್ದಾರೆ ಖಂಡಿತ. 

ಕೀರ್ತಿಶೇಷ ಹಾಸ್ಯಗಾರ ಪೆರುವೋಡಿ ನಾರಾಯಣ ಭಟ್ಟರ ಒಂದು ಮಾತು ನೆನಪಾಯಿತು.. "ಕುಳಿತ ಪ್ರೇಕ್ಷಕರು ರಂಗದ ಅಭಿನಯವನ್ನು ನೋಡ್ತಾರೋ ಇಲ್ವೋ ಬೇರೆ ಮಾತು. ಅವರ ಮಧ್ಯೆ ಒಬ್ಬ ನನ್ನ ಅಭಿನಯವನ್ನು ಮೆಚ್ಚುವವನಿದ್ದಾನೆ. ಅವನಿಗಾಗಿ ನಾನು ಅಭಿನಯ ಮಾಡಲೇ ಬೇಕು."

ಆನಂದ್ ಅವರ ಸಮ್ಮನಸ್ಸಿಗೆ ಶರಣು. ಆನಂದ್ ಹಾದಿಯಲ್ಲಿ ಸಾಗೋಣವೇ. ನೂರು ಬೇಡ, ಹತ್ತು ಪುಸ್ತಕ ಸಾಕು! ಏನಂತೀರಿ

(ನಾ. ಕಾರಂತ ಪೆರಾಜೆ : 9448625794)


0 comments:

Post a Comment