Tuesday, March 22, 2011

ರೈತನಿಗಿಲ್ಲಿ ಮೊದಲ ಮಣೆ

'ಭಾರತದಲ್ಲಿ ಹದಿಮೂರು ಟನ್ ಗೇರುಬೀಜಕ್ಕೆ ಬೇಡಿಕೆಯಿದೆ. ಆರೇಳು ಟನ್ ಮಾತ್ರ ಉತ್ಪಾದನೆಯಾಗುತ್ತಿದ್ದು, ಮಿಕ್ಕುಳಿದುದನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಗೇರುಬೀಜಕ್ಕೆ ಎಂದೂ ಬೇಡಿಕೆ ಕಡಿಮೆಯಾಗದು' ಎಂದವರು ಪುತ್ತೂರಿನ ಗೇರು ಸಂಶೋಧನಾ ಕೇಂದ್ರದ ಮುಖ್ಯಸ್ಥ ಎಂ.ಜಿ.ಭಟ್.

ಉಳಿದ ಕೃಷಿಗೆ ಹೋಲಿಸಿದರೆ ಗೇರು ಕೃಷಿ ಹೆಚ್ಚು ಶ್ರಮ ಬೇಡದ ಕೆಲಸ. ವರುಷ ಆರೇಳು ತಿಂಗಳುಗಳ ಶ್ರಮ. ಮಾರುಕಟ್ಟೆಯಲ್ಲಿ ಗೇರುಬೀಜದ ಪ್ರಸಕ್ತ ದರ ಕಿಲೋಗೆ ಎಂಭತ್ತು ರೂಪಾಯಿ.
ನಮ್ಮ ಕೃಷಿಕರಲ್ಲಿ ಅನೇಕರಿಗೆ ಇಳಿಜಾರಾದ ಗುಡ್ಡ ಭೂಮಿಯಿದೆ. ಅವೆಲ್ಲಾ ರಬ್ಬರ್ ಕೃಷಿಗಾಗಿ ನುಣುಪಾಗಿದೆ. ಬೆಲೆಯ ಮೋಹಕ್ಕೆ ಒಳಗಾಗಿ ಹೊಸ ಹೊಸ ಬೆಳೆಯತ್ತ ವಾಲುವುದು ಸಹಜ. ಆದರೆ ಭವಿಷ್ಯ? 'ರಬ್ಬರಿಗಿಂತ ಗೇರು ಎಷ್ಟೋ ವಾಸಿ. ಲಾಭದಾಯಕವೂ ಕೂಡಾ' ಎಂದು ದನಿಸೇರಿಸಿದರು ಕೃಷಿಕ ದೇರಣ್ಣ ರೈ.

'ಹಲವಾರು ಮಂದಿ ಗೇರು ಯಾಕೆ ಹಾಕ್ತಿಯಾ? ರಬ್ಬರ್ ಹಾಕು ಅಂತ ಒತ್ತಾಯಿಸಿದರು. ಗೇರು ಕೃಷಿಯ ಬಗ್ಗೆ ವಿಶ್ವಾಸವಿದ್ದರೂ, ರಬ್ಬರ್ ಕೂಡಾ ಜತೆಗಿರಲಿ. ಲಾಭ ನಷ್ಟದ ಲೆಕ್ಕವನ್ನು ಪ್ರತ್ಯಕ್ಷ ನೋಡಿದ ಹಾಗಾಯಿತು. ಹಾಗಾಗಿ ಒಂದು ಪ್ಲಾಟ್ನಲ್ಲಿ ರಬ್ಬರ್ ಮತ್ತು ಇನ್ನೊಂದರಲ್ಲಿ ಗೇರು ಕೃಷಿ ಮಾಡಿದ್ದೇನೆ' ಎಂದರು. ರೈಗಳು ಎರಡೂ ಬೆಳೆಯ ಲೆಕ್ಕ ಪತ್ರಗಳನ್ನು ದಾಖಲಿಸುತ್ತಾರೆ.
ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯವು ಮಾರ್ಚ್ ಒಂದರಂದು ಗೇರು ದಿನೋತ್ಸವ ಆಚರಿಸಿತು. ಇದು ಹದಿನಾಲ್ಕನೇ ದಿನೋತ್ಸವ. ಗೇರು ಕೃಷಿಕರನ್ನು ಆಹ್ವಾನಿಸಿ, ಯಶಸ್ವೀ ಗೇರು ಕೃಷಿಕರ ತೋಟಗಳಿಗೆ ಕರೆದುಕೊಂಡು ಹೋಗಿ, ಅಲ್ಲಿನ ಕೃಷಿ ಪದ್ಧತಿಗಳನ್ನು ತೋರಿಸುವುದು ವಿಶೇಷ. ಇದರಿಂದಾಗಿ ಕೃಷಿ ಪದ್ಧತಿಗಳ ವೈವಿಧ್ಯತೆಯನ್ನು ಪ್ರತ್ಯಕ್ಷ ನೋಡಿದಂತಾಗುತ್ತದೆ. ತಾವೆಲ್ಲಿ ಎಡವುತ್ತೇವೆ ಎಂಬುದರ ಕುರಿತಾಗಿ ಪರಾಮರ್ಶೆಯೂ ಜತೆಜತೆಗೆ ನಡೆಯುತ್ತಿದೆ.

ಮೊದಲು ಎರಡು ತಂಡಗಳಲ್ಲಿ ಕೇಂದ್ರದ ಗೇರು ತಾಕುಗಳ ವೀಕ್ಷಣೆ. ವಿಜ್ಞಾನಿಗಳಿಂದ ವಿವರಣೆ. ಕೃಷಿಕರ ಪ್ರಶ್ನೆಗಳಿಗೆ ನಗುಮುಖದ ಉತ್ತರ. ಕೆಲವೊಂದು ಸಲ ಪ್ರಶ್ನೆಗಳಿಗೆ ರೈತರಿಂದ ಅಲ್ಲಲ್ಲೇ ಉತ್ತರ-ಸಮಾಧಾನ.

ಇದೇ ಕೇಂದ್ರದಲ್ಲಿ ವಿಜ್ಞಾನಿಯಾಗಿ ನಿವೃತ್ತರಾಗಿ, ಈಗ ಕೃಷಿಕರಾಗಿರುವ ಯದುಕುಮಾರ್ ಅವರ ತೋಟಕ್ಕೆ ಈ ಸಲ ಭೇಟಿ. ಮುನ್ನೂರಕ್ಕೂ ಮಿಕ್ಕಿ ಕೃಷಿಕರ ಭಾಗಿ. ವಿಆರ್ಐ-3, ವೆಂಗುರ್ಲ-4, ಉಲ್ಲಾಳ-3 ಮತ್ತು ಭಾಸ್ಕರ ಗೇರು ತಳಿಗಳನ್ನು ಯದುಕುಮಾರ್ ಹೊಂದಿದ್ದರು. ಎಲ್ಲವೂ ಆರಂಭಿಕ ಬೆಳವಣಿಗೆ. ಆರೋಗ್ಯಕರ ಇಳುವರಿ. ಕೃಷಿಯ ಏಳು-ಬೀಳುಗಳು, 'ಮಾಡಿ-ಬೇಡಿ'ಗಳನ್ನು ತಮ್ಮ ಅನುಭವಮೂಸೆಯಿಂದ ವಿವರಿಸಿದರು.

'ಗೇರು ಬೆಳೆಯುವ ರೈತರಲ್ಲಿಗೆ ಹೋದಾಗ ವೆರೈಟಿಗಳ ಪರಿಚಯವಾಗುತ್ತದೆ. ಬೆಳೆಕ್ರಮ ಅರಿವಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ತಳಿಗಳ ಕುರಿತಾದ ಆಯ್ಕೆಯಲ್ಲಿ ರೈತರು ಮೋಸ ಹೋಗುವುದೇ ಹೆಚ್ಚು. ಅದರ ಪರಿಚಯ ಮೊದಲೇ ಇರಬೇಕು' - ಯದುಕುಮಾರರ ಕಿವಿಮಾತು.
ಮಧ್ಯಾಹ್ನದ ಹೊತ್ತಿಗೆ ಸಭಾ ಕಲಾಪ. ಅತಿಥಿ ವಿಜ್ಞಾನಿಗಳಿಂದ ಅನುಭವ ವಿನಿಮಯ. ಕೊನೆಗೆ ಪ್ರಶ್ನೋತ್ತರ. ಕರ್ನಾಟಕ ಗೇರು ನಿಗಮದ ಅಧಿಕಾರಿ ವಿಜಯಲಾಲ್ ಮೀನಾ ಈ ಸಲದ ಅತಿಥಿ. 'ಎಷ್ಟೋ ಕಡೆ ಬೆಳೆದು ನಿಂತ ಗೇರು ಮರಗಳನ್ನು ಕಡಿದು ರಬ್ಬರ್ ಗಿಡಗಳನ್ನು ನೆಡುವುದನ್ನು ನೋಡಿದ್ದೇನೆ. ಇದು ಒಳ್ಳೆಯದಲ್ಲ. ಕೃಷಿಯಲ್ಲಿ ತಕ್ಷಣದ ಬದಲಾವಣೆ ಪ್ರಯೋಜನ ಬಾರದು. ಗೇರಿನ ಈ ವರೆಗಿನ ಇತಿಹಾಸದಲ್ಲಿ ಬೆಲೆ ಕುಸಿತದಿಂದ ಯಾವ ರೈತರಿಗೂ ತೊಂದರೆಯಾಗಿಲ್ಲ' ಎಂದರು.

ಗೇರು ಬೀಜಕ್ಕೇನೋ ಮಾರುಕಟ್ಟೆಯಿದೆ. ಆದರೆ ಗೇರು ಹಣ್ಣನ್ನು ಮೌಲ್ಯವರ್ಧನೆ ಮಾಡಲು ಸಾಧ್ಯವಿಲ್ಲವೇ? ರೈತರೊಬ್ಬರ ಪ್ರಶ್ನೆ. ಇದಕ್ಕೆ ಆಡಳಿತಾತ್ಮಕವಾದ ಉತ್ತರವೇನೋ ದೊರೆಯಿತು. 'ಇದರಿಂದ ತಯಾರಿಸುವ ಸ್ಕ್ವಾಷ್ಗೆ ಡಿಮಾಂಡ್ ಇಲ್ಲ' ವರಿಷ್ಠರಿಂದ ಉತ್ತರ. 'ಕೇರಳದಲ್ಲಿ ಇದೆಯಲ್ಲಾ' ರೈತರಿಂದ ಪ್ರತ್ಯುತ್ತರ.

ಈ ಸಂವಾದದ ಹಿನ್ನೆಲೆಯಲ್ಲಿ ಕೇರಳದ 'ಕ್ಯಾಶ್ಯೂ ಕೋಲಾ' ಮಾಡುವ ಘಟಕವೊಂದರ ಸೂಕ್ಷ್ಮ ಪರಿಚಯ ನಿಮಗೆ ಹೇಳಲೇ ಬೇಕು - ಕೇರಳದ ಕಣ್ಣೂರು ಜಿಲ್ಲೆಯ ವಾಣಿಯಂಪಾರದ ಕೃಷಿಕ ಟೋಮಿಚ್ಚನ್. ಇವರಿಗೆ ಟೋಮ್ಕೋ ಉದ್ಯಮದ ಮೂಲಕ ಗೇರು ಹಣ್ಣಿನ ಪೇಯ ತಯಾರಿ ವೃತ್ತಿ. ಇವರ ಲಘುಪೇಯ ಮತ್ತು ಸಿರಪ್ಗಳು ಕಣ್ಣೂರಿನ ಮುಖ್ಯ ಕೇಂದ್ರಗಳಲ್ಲಿ, ಮಾರ್ಜಿನ್ ಶಾಪ್, ಹಣ್ಣು ತರಕಾರಿ ಅಂಗಡಿ, ಬೇಕರಿ, ಹಾಲಿನ ಬೂತ್ಗಳಲ್ಲಿ ಪೇಯ ಸಿಗುತ್ತಿದ್ದು ಆಶಾದಾಯಕ ಗ್ರಾಹಕ ಒಲವು ಪಡೆಯುತ್ತಿದೆ.

ಗೇರು ಹಣ್ಣಿನಲ್ಲಿರುವ ಗಂಟಲು ಕೆರೆಯುವ ಗುಣ ಟೋಮ್ಕೋದಲಿಲ್ಲ. ಪೇಯದ ಬಾಟಲಿಂಗ್ ತುಂಬ ಆಕರ್ಷಕ. ಬಾಟ್ಲಿಯ ಆಕಾರ ತಲೆಕೆಳಗಾದ ಗೇರುಹಣ್ಣಿನಂತಿದೆ. ಮುಚ್ಚಳ ಬೀಜದಂತೆ. ಮುಚ್ಚಳದ ಆಕಾರ, ಬಣ್ಣ ಗೇರು ಬೀಜದಂತೆ. 250 ಎಂ.ಎಲ್.ಪೇಯಕ್ಕೆ ಹದಿನೇಳು ರೂಪಾಯಿ, ಐನೂರಕ್ಕೆ ಮೂವತ್ತು ರೂಪಾಯಿ. ಸಿರಪ್ಗೆ ಐದಾರು ಪಾಲು ನೀರು ಯಾ ಸೋಡ ಸೇರಿಸಿ ಕುಡಿಯಬಹುದು. ಇದು ಗೇರು ಹಣ್ಣಿನ ಸಾಧ್ಯತೆ. ನಮ್ಮಲ್ಲಿ ಇದಿನ್ನೂ ಪ್ರಯೋಗ ಹಂತದಲ್ಲಿದೆಯಷ್ಟೇ. ಕೇರಳಿಗರು ಇಂತಹ ಮೌಲ್ಯವರ್ಧನೆಯಲ್ಲಿ ಯಾವಾಗಲೂ ಮುಂದು.

ಗೇರು ಸಂಶೋಧನಾಲಯಕ್ಕೀಗ ರಜತ ಸಂಭ್ರಮ. ಗೇರು ದಿನೋತ್ಸವ ರಜತದ ಮೊದಲ ಕಲಾಪ. ನಮ್ಮ ಹೆಚ್ಚಿನ ಸಂಶೋಧನಾಲಯಗಳಿಗೆ ರೈತರೆಂದರೆ ಯಾಕೋ ಅಲರ್ಜಿ.. ಆದರೆ ಗೇರು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಗಳೆಂದರೆ ರೈತರಿಗೆ ಪ್ರೀತಿ. ಅವರಿಗೆ ಸದಾ ತೆರೆದ ಬಾಗಿಲು. ರೈತರ ತೋಟಕ್ಕೆ ಸ್ವತಃ ವಿಜ್ಞಾನಿಗಳೇ ಭೇಟಿ ಕೊಡುವುದು ವಿಶೇಷ. ಹಾಗಾಗಿ ಇಲ್ಲಿಂದ ಯಾವುದೇ ಸಮಾರಂಭದ ಕರೆ ಹೋದಾಗಲೂ ಕೃಷಿಕರಿಂದ ಸಭಾಭವನ ತುಂಬಿರುತ್ತದೆ.

0 comments:

Post a Comment