Wednesday, March 23, 2011

`ಸ್ವಾವಲಂಬಿ ಬದುಕು'

ಪಡೀಲು ಶಂಕರ ಭಟ್ - ಯಶಸ್ವೀ ಕೃಷಿಕ. ಏಳು ದಶಕದ ಕೃಷಿ ಅನುಭವ. ಯಾವುದೇ ಸಮಸ್ಯೆ-ಸವಾಲುಗಳಿಗೆ ಗೊಣಗಾಟವಿಲ್ಲದ ಸ್ವ-ದಾರಿ. ಅನುಭವದ ಜಾಣ್ಮೆ. ಮಾದರಿ ಬದುಕು. ತುಂಬು ಜೀವನಾಸಕ್ತಿ. ಕೊಡುಗೈ ದಾನಿ. ಯಕ್ಷಗಾನ ಪ್ರೇಮಿ.

ಶಂಕರ ಭಟ್ಟರ ವ್ಯಕ್ತಿತ್ವವನ್ನು ಅಕ್ಷರದಲ್ಲಿ ಹಿಡಿದಿಡಲು ಕಷ್ಟ. ಅದು ತುಂಬಿದ ಕೊಡ. ಮಾತು, ಕೆಲಸಗಳಲ್ಲಿ ಜಾಳಿಲ್ಲ. ಅಪ್ಪಟ ಪೈರು. 'ಅವರು ಮುಟ್ಟಿದ್ದೆಲ್ಲಾ ಚಿನ್ನ' ಎಂದು ಹತ್ತಿರದಿಂದ ಬಲ್ಲವರ ಮಾತು.

ಕೃಷಿಯಲ್ಲಿ ಸಾಕಷ್ಟು ಪಲ್ಲಟಗಳಾಗಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಹೇಗೆ? ಐದಾರು ವರುಷದ ಹಿಂದೆ ಅವರೊಮ್ಮೆ ಸಿಕ್ಕಾಗ ಪ್ರಶ್ನೆಸಿದ್ದೆ. 'ಪಲ್ಲಟಗಳು ಕೃಷಿಯಲ್ಲಿ ಯಾಕೆ, ನಮ್ಮ ಬದುಕಿನಲ್ಲೂ ಆಗುವುದಿಲ್ವಾ. ಬಂದುದನ್ನು ಬಂದ ಹಾಗೆ ಸ್ವೀಕರಿಸುವುದು ಮಾನವ ಧರ್ಮ. ಸ್ವೀಕರಿಸಿದ ಬಳಿದ ಅದನ್ನು ನಿಭಾಯಿಸುವುದು ಇದೆಯಲ್ಲಾ, ಅದು ಅನುಭವದಿಂದಲೇ ಬರಬೇಕು.' ಎಂದಿದ್ದರು.

ಶಂಕರ ಭಟ್ಟರು ಗತಿಸಿ ಮಾರ್ಚ್ 17ಕ್ಕೆ ಒಂದು ವರುಷ. ಅವರು ಜೀವತದಲ್ಲಿರುವಾಗಲೇ ತಮ್ಮ ಕುಟುಂಬ ವಿವರಗಳನ್ನೊಳಗೊಂಡ 'ನೆನಪಿನ ಬುತ್ತಿ' ಎಂಬ ಕೃತಿಯನ್ನು ಪ್ರಕಟಿಸಿದ್ದರು. ಅವರನ್ನು ಹತ್ತಿರದಿಂದ ಬಲ್ಲ ಅನೇಕ ಆಢ್ಯರು ಬರೆದ ಲೇಖನಗಳಿವೆ. ಬರೆಹಗಳಲ್ಲಿ ಭಟ್ಟರ ಕೃಷಿ ಸಾಧನೆಗಳಿವೆ. ಮನೆಯ ಯಜಮಾನನೊಬ್ಬನ ಯಶಸ್ವೀ ಬದುಕಿನ ಗಾಥೆಗಳಿವೆ. ವಂಶ ವಿವರಗಳಿವೆ.

ವರ್ಷಾಂತಿಕದ ಆಮಂತ್ರಣ ಬಂದಾಗ, 'ನೆನಪಿನ ಬುತ್ತಿ' ಪುಸ್ತಕವನ್ನು ತಿರುವು ಹಾಕಿದೆ. ಅದರಲ್ಲಿ ಕೃಷಿಯ ಕುರಿತಾಗಿ ಉಲ್ಲೇಖವಿರುವ ಬರೆಹಗಳಿಂದಾಯ್ದ (ಮುಖ್ಯವಾಗಿ ಪ್ರೊ.ವಿ.ಬಿ.ಅರ್ತಿಕಜೆ ಮತ್ತು ಡಾ.ಯದುಕುಮಾರ್ ಅವರ ಬರೆಹ) ಒಂದಷ್ಟು ವಿಚಾರಗಳು ಮೆದುಳಿಗೆ ಮೇವನ್ನು ನೀಡುತ್ತದೆ.

ಹೈನುಗಾರಿಕೆ ಅವಲಂಬನಾ ಕೆಲಸವಲ್ಲ. ಮನೆಯವರೇ ಸ್ವತಃ ಮಾಡುವಂತಾದ್ದು. ಜಾನುವಾರುಗಳ ಬಗ್ಗೆ ಪ್ರೀತಿ ಬೇಕು. ನಮ್ಮ ತೋಟಕ್ಕೆ ನಮ್ಮದೇ ಸ್ಲರಿ-ಗೊಬ್ಬರ. ಗೋಬರ್ ಗ್ಯಾಸ್ನಿಂದ ಕಟ್ಟಿಗೆ ಉಳಿತಾಯ. ಮನೆಗೆ ಬೇಕಾದಷ್ಟು ಹಾಲು. ನಾಟಿ ಹಸುವಾದರೆ ಸಾಕಣೆ ಖರ್ಚು ಕಡಿಮೆ, ಹಾಲೂ ಕಡಿಮೆ! ಗೋಮೂತ್ರದಿಂದ ಆರ್ಕವನ್ನು ಮಾಡಬಹುದು. ಸಂಕರತಳಿಗಳಾದರೆ ಹಾಲಿನ ಪ್ರಮಾಣ ಹೆಚ್ಚು. ಖರ್ಚೂ ಹೆಚ್ಚು. ಆರೋಗ್ಯ ಕಡಿಮೆ.

ಕೂಲಿ ಕೆಲಸದವರ ಅಭಾವ, ಹೆಚ್ಚಿದ ಮಜೂರಿ, ಪಶುಆಹಾರದ ದರದಲ್ಲಿ ಏರಿಕೆ. ಇದರಿಂದಾಗಿ ಆರ್ಥಿಕವಾಗಿ ಹೈನುಗಾರಿಕೆಯನ್ನು ಸಮತೋಲನಗೊಳಿಸಲು ತ್ರಾಸ. ಇದು ಕೃಷಿಗೆ ಪೂರಕವಾದ್ದರಿಂದ ದೂರಗಾಮಿ ಪರಿಣಾಮದಲ್ಲಿ ಲಾಭದಾಯಕ. 'ಹೇಳುವುದೊಂದು, ತೋರಿಸುವುದೊಂದು, ತರುವುದೊಂದು ಎಂಬಂತಹ ಸಾವಯವ, ರಸಗೊಬ್ಬರಗಳಿಗಿಂತ ನಮ್ಮಲ್ಲಿ ತಯಾರಾದ ಗೊಬ್ಬರ ಅಥವಾ ಸ್ಲರಿ ಎಷ್ಟೋ ಉತ್ತಮ. ಹಾಗಾಗಿ ಹೈನುಗಾರಿಕೆ ಇಂದಿಗೂ ಸೂಕ್ತ
ಕೃಷಿಯಲ್ಲಿ ಲಾಭ ಪಡೆಯಲು ತುಂಬ ಕಷ್ಟವಿದೆ. ಆದರೆ ಸುಖಮಯ ಜೀವನಕ್ಕೆ ತೊಂದರೆಯಾಗದು.

ಈಗ ಎಲ್ಲೆಲ್ಲೂ ಅಡಿಕೆ, ತೆಂಗು, ರಬ್ಬರ್, ಗೇರು ಕೃಷಿಗಳಿಂದಾಗಿ ಕೃಷಿ ವಿಸ್ತರಣೆಯಾಯಿತು. ಕೃಷಿ ಕಾರ್ಮಿಕರ ಕುಟುಂಬ ಸದಸ್ಯರ ಸಂಖ್ಯೆ ಕೂಡಾ ಹೆಚ್ಚಾಯಿತು. ಉಳ್ಳವರು ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಪೇಟೆ-ಪಟ್ಟಣಗಳಲ್ಲಿ ಸೆಟ್ಲ್ ಆದರು. ಊರು ಬೆಳೆದಂತೆ ಕಟ್ಟಡ, ಮನೆಗಳು, ಸೇತುವೆಗಳು, ರಸ್ತೆಗಳು ಮೊದಲಾದ ಮೂಲಭೂತ ಸೌಕರ್ಯಗಳು ಹೆಚ್ಚಾದುವು. ಕಾರ್ಮಿಕರ ಇದಕ್ಕೆ ಹಂಚಿ ಹೋದರು. ಕೆಲಸದವರು ಸಾಕಷ್ಟು ಮಂದಿ ಇದ್ದಾಗ ಸಣ್ಣಪುಟ್ಟ ಕೆಲಸಗಳಿಗೂ ಅವರನ್ನೇ ಅವಲಂಬಿಸಿ ಸ್ವತಃ ಕೆಲಸ ಮಾಡುವುದನ್ನು ನಿಲ್ಲಿಸಿದೆವು. ಒಂದರ್ಥದಲ್ಲಿ ಸೋಮಾರಿಗಳಾದೆವು. ನಮ್ಮ ಮಕ್ಕಳನ್ನು ಕೃಷಿಯಿಂದ ಬಿಡಿಸಿ ಉದ್ಯೋಗಕ್ಕೆ ಕಳುಹಿಸಿದೆವು. ಈಗ ಕಷ್ಟ ಅನುಭವಿಸುತ್ತಿದ್ದೇವೆ.

ಈಗ ಹಲವು ರೀತಿಯ ಯಂತ್ರೋಪಕರಣಗಳು ಬಂದಿವೆ. ಬರುತ್ತಲೇ ಇವೆ. ಗೊಬ್ಬರದ ಬದಲು ಸ್ಲರಿ, ರಸಾವರಿ ವ್ಯವಸ್ಥೆ ಮಾಡಿ, ತೋಟದೊಳಗೆ ಗಾಡಿ ಅಥವಾ ರಿಕ್ಷಾ, ಜೀಪು ವಾಹನಗಳು ಹೋಗುವಂತೆ ಮಾಡಿದರೆ ಕಾರ್ಮಿಕರ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಹಗುರ ಮಾಡಬಹುದು. ಕಳೆ ತೆಗೆಯಲು, ಔಷಧಿ ಸಿಂಪಡಣೆಗೆ ಸಹಾಯಕವಾಗುವ ಪಂಪು, ಅಡಿಕೆ ಸುಲಿಯುವ ಯಂತ್ರಗಳು ಬಂದಿವೆ. ಬೆಲೆ ಇಳಿತದಿಂದ, ಕೆಲಸಗಾರರ ಕೊರತೆಯಿಂದ ಕಂಗೆಡದೆ, ಧೈರ್ಯವಾಗಿ ತನ್ನಿಂದಾದಷ್ಟು ಕೆಲಸವನ್ನು ಮಾಡುತ್ತಾ ಬಂದರೆ ಅತೀವ ಲಾಭದಾಯಕವಲ್ಲದಿದ್ದರೂ ಸ್ವಾವಲಂಬಿಯಾಗಿ ಬದುಕಬಹುದು.

ಶಂಕರ ಭಟ್ಟರ ಕೃಷಿ ಲೆಕ್ಕಾಚಾರ ಪಕ್ಕಾ. ಅಡಿಕೆ ಕೃಷಿಯಲ್ಲಿ ಕೊಯ್ಲೋತ್ತರ ಸಂಸ್ಕರಣೆ ಅಚ್ಚುಕಟ್ಟು. ಅಡಿಕೆ ಸುಲಿದ ನಂತರ ಗ್ರೇಡ್ ಮಾಡುವುದರಲ್ಲಿ ಸ್ವ-ವಿಧಾನ. ಇವರ ಕೈಯಲ್ಲಿ ಒಮ್ಮೆ ಗ್ರೇಡ್ ಆದ ಅಡಿಕೆ ಹೆಚ್ಚಿನ ಧಾರಣೆ ಖಚಿತ. ಇದರಿಂದಾಗಿ ಇವರ ಮನೆಗೆ ವ್ಯಾಪಾರಿಗಳು ಬಂದು ಅಡಿಕೆ ಖರೀದಿ ಮಾಡುತ್ತಿದ್ದರು.

ಕೃಷಿ ಜೀವನದಲ್ಲಿ ಆರ್ಥಿಕತೆಯ ನಿಭಾವಣೆ, ಕೃಷಿಗೆ ಆಧುನೀಕರಣದ ಸ್ಪರ್ಶ, ಕೃಷಿಭೂಮಿಯನ್ನು ಖರೀದಿಸುವಾಗ ಎಚ್ಚರವಹಿಸಬೇಕಾದ ಅಂಶಗಳು, ಯವ್ಯಾವ ಸಮಯದಲ್ಲಿ ಕೃಷಿಗೆ ಪೂರಕವಾದ ವಸ್ತುಗಳಗಳನ್ನು ಖರೀದಿಸಬೇಕು.. ಮುಂತಾದ ವಿಚಾರದಲ್ಲಿ ಶಂಕರ ಭಟ್ಟರಲ್ಲಿ ನಿಖರ ನಿಲುವಿತ್ತು.

ಇವರಿಗೆ ದುಡಿತವೆಂದರೆ ಪ್ರೀತಿ. ಭತ್ತದ ಕೃಷಿ ಸಹಿತ ಬಹುತೇಕ ಎಲ್ಲಾ ಬೆಳೆಗಳನ್ನು ಬೆಳೆದ ಅನುಭವಿ. ಮಾರುಕಟ್ಟೆ ವಿಚಾರದಲ್ಲೂ ಇದಮಿತ್ಥಂ ಎಂಬ ತಿಳುವಳಿಕೆ.

ಅಡಿಕೆ ತೋಟದಲ್ಲಿ ದಿನಾ ಬಿದ್ದ ಅಡಿಕೆಯನ್ನು ಹೆಕ್ಕುವುದು ದೊಡ್ಡ ಕೆಲಸ. ದೊಡ್ಡ ತೋಟವಾದರೆ ಹೆಕ್ಕಿ ಪೂರೈಸುವಂತಹುದಲ್ಲ. ಅದಕ್ಕಾಗಿ ಇವರು ಶಾಲೆಗೆ ಹೋಗುವ ಮಕ್ಕಳನ್ನು ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಅಡಿಕೆ ಹೆಕ್ಕಲು ಹುರಿದುಂಬಿಸುತ್ತಿದ್ದರು. ಮಕ್ಕಳಿಗೆ ಪುಸ್ತಕ-ಬಟ್ಟೆಗಳಿಗೆ ಕಾಸೂ ಆಯಿತು, ಸಂಪಾದನೆಯೂ ಆಯಿತು. ಮಾನವ ಸಂಪನ್ಮೂಲದ ಬಳಕೆಯ ಚಿಕ್ಕ ಮಾದರಿ.

ಹೀಗೆ ಕೃಷಿಯಲ್ಲಿ ಚಿಕ್ಕ ಚಿಕ್ಕ ವಿಚಾರಗಳಿಗೂ ಮಹತ್ತಿದೆ. ಬದುಕಿನಲ್ಲಿ ಮಹತ್ತನ್ನು ಸಾಧಿಸಿ ತೋರಿಸಿದ ಕೀರ್ತಿಶೇಷ ಶಂಕರ ಭಟ್ಟರಿಗೆ ಇದು ಅಕ್ಷರ ನಮನ.

0 comments:

Post a Comment