ಕಳೆದ ಶನಿವಾರ ಸಂಪನ್ನಗೊಂಡ ಅಳಿಕೆಯ (ದ.ಕ.) ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ. ಪ್ರತಿನಿಧಿ ಬ್ಯಾಜ್ ಹಾಕಿದ ಓರ್ವ 'ಕನ್ನಡ ಪುತ್ರ' ತನ್ನ ನಾಲ್ಕನೇ ತರಗತಿಯ ಚಿರಂಜೀವಿಯೊಂದಿಗೆ ಬಂದರು. ಪುಸ್ತಕ ಆಯಲು ಅವರನ್ನು ಮೊಬೈಲ್ ಬಿಡುತ್ತಿಲ್ಲ! ಮಗು ನಾಲ್ಕೈದು ಕನ್ನಡ ಪುಸ್ತಕಗಳನ್ನು ಆಯ್ದು, 'ಅಪ್ಪಾ, ಇಂಗ್ಲಿಷ್ ಕಥೆ ಪುಸ್ತಕ ಮನೆಯಲ್ಲಿ ಉಂಟು. ಕನ್ನಡ ಪುಸ್ತಕ ಇಲ್ಲ. ನನಗಿದು ಬೇಕು' ಎಂಬ ಬೇಡಿಕೆಯನ್ನು ಮುಂದಿಟ್ಟ.
'ಛೆ.. ಇಂಗ್ಲಿಷ್ ಪುಸ್ತಕವನ್ನೇ ಓದಬೇಕೆಂದು ಮಿಸ್ ಹೇಳಿಲ್ವಾ. ಕನ್ನಡ ಪುಸ್ತಕ ಬೇಡ. ಇಂಗ್ಲಿಷ್ನದ್ದು ತೆಕ್ಕೋ' ಎನ್ನುತ್ತಾ, ಮಗನ ಕೈಯಲ್ಲಿದ್ದ ಪುಸ್ತಕವನ್ನು ಸೆಳೆದು-ಕುಕ್ಕಿ, ಪುನಃ ಮೊಬೈಲ್ನ ದಾಸರಾದರು. ಮಗುವಿನ ಮೋರೆ ಸಣ್ಣದಾಯಿತು. ಕುಕ್ಕಿದ ಪುಸ್ತಕವನ್ನು ಪುನಃ ಆಯ್ದು ಅಪ್ಪನ ಮೋರೆ ನೋಡಿದ. ಪಾಪ, ಈ ಅಪ್ಪನಿಗೆ ಮಗನ ಮುಖಭಾವವನ್ನು ಓದಲು, ಅದಕ್ಕೆ ಸ್ಪಂದಿಸಲು ಪುರುಸೊತ್ತು ಎಲ್ಲಿದೆ? ಪುರುಸೊತ್ತು ಇದ್ದರೂ ಮುಖವನ್ನು ಓದಲಾಗದ ಅನಕ್ಷರಸ್ಥ.
'ನಿನಗೆ ಹೇಳಿದ್ರೆ ಅರ್ಥವಾಗುವುದಿಲ್ವಾ' ಎಂದು ಪುಸ್ತಕವನ್ನು ಎಳೆದು ಪುಸ್ತಕವನ್ನು ಮೇಜಿನ ಮೇಲೆ ಬಿಸಾಡಿ, ಮಗನನ್ನು ಎಳೆದುಕೊಂಡು ಹೋಗಬೇಕೇ?' ಅವರ ಅಂಗಿಗೆ ತೂಗಿಸಿದ ಬ್ಯಾಜ್ ಆಗ ನಕ್ಕಿತು!
ಕುತೂಹಲದಿಂದ ಅವರನ್ನು ಸ್ವಲ್ಪ ಹೊತ್ತು ಅನುಸರಿಸಿದೆ. ಇನ್ನೊಂದು ಮಳಿಗೆಯಲ್ಲೂ ಪುನರಾವರ್ತನೆ. ಕೊನೆಗೆ ಅಪ್ಪನ ಕೆಂಗಣ್ಣಿಗೆ ಬಲಿಯಾದ ಬಾಲಕ ಇಂಗ್ಲಿಷ್ ಪುಸ್ತಕ ಖರೀದಿಯಲ್ಲೇ ತೃಪ್ತಿಪಟ್ಟ. ಅದೂ ಬರೋಬ್ಬರಿ ಒಂದು ಸಾವಿರ ರೂಪಾಯಿಯ ಪುಸ್ತಕ. ಇದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗ್ಲ ನಂಟಿನ ಅಪ್ಪ-ಮಗನ ಪುಸ್ತಕದ ಕತೆ.
'ಕನ್ನಡ ಮನಸ್ಸು' ಕುರಿತು ಮಾತನಾಡುವಾಗ, ಯೋಚಿಸುವಾಗ ಈ ಅಪ್ಪ-ಮಗನನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಅಜ್ಞಾತವಾಗಿ ರಿಂಗಣಿಸುವ ಆಂಗ್ಲ ಮನಸ್ಸು ಇದೆಯಲ್ಲಾ, ಬಹುತೇಕ ಮನೆಮನೆಯಲ್ಲಿ ಪ್ರಕಟವಾಗುವಂತಾದ್ದೇ. 'ಸಾಹಿತ್ಯ ಸಮ್ಮೇಳನದಲ್ಲಿ ಆಂಗ್ಲ ಪುಸ್ತಕದ ಮಾರಾಟಕ್ಕೆ ನಿಷೇಧ ಹೇರಬೇಕು,' ಪ್ರತ್ಯಕ್ಷದರ್ಶಿ ಅಕ್ಷರಪ್ರಿಯರೊಬ್ಬರ ಅನಿಸಿಕೆ.
ಮಳಿಗೆಯಲ್ಲಿ ಆಂಗ್ಲ ಪುಸ್ತಕಗಳೇ ಇಲ್ಲದಿರುತ್ತಿದ್ದರೆ? ಆ ಬಾಲಕನಿಗೆ ಕನ್ನಡ ಪುಸ್ತಕ ಸಿಗುತ್ತಿತ್ತೇನೋ? ಒತ್ತಾಯಕ್ಕಾದರೂ ಮಗನ ಆಸೆಯನ್ನು ಅಪ್ಪ ಪೂರೈಸುತ್ತಿದ್ದರೇ? - ಹೀಗೆ ಪ್ರಶ್ನೆಗಳನ್ನು ಪಟ್ಟಿ ಮಾಡಿದರೆ, ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಕೇವಲ ಬ್ಯಾಜ್ ಧರಿಸಿ ಸಮ್ಮೇಳನದಲ್ಲಿ ಭಾಗವಹಿಸಿ 'ನಾನೊಬ್ಬ ಕನ್ನಡ ಪ್ರೇಮಿ' ಎಂದು ತೋರಿಸಿ ಕೊಳ್ಳಬಹುದಷ್ಟೇ. ಇದರಿಂದ ಅವರಿಗಾಗಲೀ, ಸಮ್ಮೇಳನಕ್ಕಾಗಲೀ ಏನೂ ಪ್ರಯೋಜನವಿಲ್ಲ
'ಕನ್ನಡ ಮನಸ್ಸು'ಗಳ ಉದ್ದೀಪನಕ್ಕೆ ಸಾಹಿತ್ಯ ಸಮ್ಮೇಳನಗಳು ಒತ್ತುಕೊಡುತ್ತಿವೆ. ಎಷ್ಟು ಮನಸ್ಸುಗಳು ಸಭಾಮಂಟಪದಲ್ಲಿ ಮೇಳೈಸಿವೆ? ಎಷ್ಟು ಮನಸ್ಸುಗಳಿಗೆ ಕಲಾಪ ಹೂರಣ ಮನ ಹೊಕ್ಕಿವೆ? ಪ್ರಬಂಧ ಮಂಡಣೆಗೆ ಆರಂಭವಾಗುವಾಗ 'ಗೊಣಗುವ, ಅತೃಪ್ತಿ ಸೂಚಿಸುವ, ಚಡಪಡಿಸುವ' ಮಂದಿ ತನ್ನ ಆಚೀಚೆ ಕುಳಿತವರ 'ಕನ್ನಡ ಮನಸ್ಸನ್ನು' ಕೆದಕುತ್ತಾನೆ! ಚಿತ್ತಸ್ಥೈರ್ಯವನ್ನು ಒರೆಗೆ ಹಚ್ಚುತ್ತಾನೆ. ಇವೆಲ್ಲಾ ಸಮ್ಮೇಳನ ಕಲಾಪದ ಹೊರಗೆ ವಿಹರಿಸುವ ವಿಚಾರಗಳು.
'ಸಮ್ಮೇಳನಕ್ಕೆ ಹೋಗಿದ್ದೆ. ಭಾರೀ ಗೌಜಿ' ಎನ್ನುವಲ್ಲೇ ಸಂಭ್ರಮ. 'ಸಾವಿರಗಟ್ಟಲೆ ಜನ ಬಂದಿದ್ದರು. ಒಳ್ಳೆಯ ಊಟ' ಎನ್ನುತ್ತಾ ಬಾಯಿಚಪ್ಪರಿಸುವುದರಲ್ಲೇ ಸಂತೃಪ್ತಿ. 'ಇದೆಲ್ಲಾ ಮಾಮೂಲಿ ಮಾರಾಯ್ರೆ' ಎನ್ನುವ ಕನ್ನಡ ಮನಸ್ಸು ಮುಂದಿನ ಸಮ್ಮೇಳನದಲ್ಲೂ ಇದೇ ಪುನರುಕ್ತಿ. ನಡೆದ ಗೋಷ್ಠಿಗಳ ಮಥನ, ಸಾಹಿತಿಗಳ ಭಾಷಣಗಳ ಸಾರ ಗ್ರಹಿಕೆ, ಕನ್ನಡ ಪುಸ್ತಕಗಳ ಓದು ಮತ್ತು ಖರೀದಿ, ಕನ್ನಡ ನಾಡು-ನುಡಿಯ ಕುರಿತಾಗಿ ಶ್ರದ್ಧೆ-ಗೌರವ ಬಾರದ ಹೊರತು ಕನ್ನಡದ ಮನಸ್ಸನ್ನು ಹೇಗೆ ಕಟ್ಟಲು ಸಾಧ್ಯ ಹೇಳಿ? ಸಮ್ಮೇಳನಗಳನ್ನು ಒಪ್ಪದೆ, ವಿಚಾರಗಳನ್ನು ಮನನಿಸದೆ, ಕನ್ನಡಕ್ಕೆ ಮನ-ಮನೆಯಲ್ಲಿ ಸ್ಥಾನಕೊಡದೆ, 'ನಾನು ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದೆ' ಎಂದರೆ 'ಹೋದ ಪುಟ್ಟ.. ಬಂದ ಪುಟ್ಟ..' ಅಷ್ಟೇ.
ಸರಿ, ವಿಚಾರ ಎಲ್ಲೋ ಹೋಯಿತಲ್ವಾ. ಎರಡು ದಿವಸದ ಅಳಿಕೆಯ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು 'ಕನ್ನಡ ಮನಸ್ಸು'ಗಳನ್ನು ಕಂಡಾಗ ನನಗುದಿಸಿದ ವಿಚಾರಗಳು. ಉದ್ಘಾಟನಾ ಸಮಾರಂಭ ತಡವಾದುದು ಬಿಟ್ಟರೆ, ಮಿಕ್ಕಂತೆ ಯಶಸ್ವೀ ಸಮ್ಮೇಳನ. ಸಂವಾದವೊಂದರಲ್ಲಿ ಸಮ್ಮೇಳನಾಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರರು ತಮ್ಮ ಬಾಲ್ಯ-ಬದುಕನ್ನು ನೆನಪಿಸಿಕೊಂಡಾಗ, ಕಣ್ಣೀರಿನ ಒಂದು ಹನಿ ಬಿದ್ದುದು ನನಗೆ ಗೊತ್ತಾಗಲೇ ಇಲ್ಲ!
ಅಳಿಕೆಯ ಪ್ರಧ್ಯಾಪಕ ವದ್ವ ವೆಂಕಟ್ರಮಣ ಭಟ್ಟರ 'ಪತ್ರಿಕೆಗಳ ವಿಶ್ವರೂಪ' ಸಮ್ಮೇಳನದ ಆಕರ್ಷಣೆ. ದೈನಿಕ, ಸಾಪ್ತಾಹಿಕ, ಪಾಕ್ಷಿಕ, ಮಾಸಿಕಗಳ ಪ್ರದರ್ಶನ. 'ಐದು ಸಾವಿರಕ್ಕೂ ಮಿಕ್ಕಿ ಸಂಗ್ರಹವಿದೆ. ಇಲ್ಲಿಗೆ ಕೇವಲ ಒಂದು ಸಾವಿರ ಮಾತ್ರವಷ್ಟೇ ತಂದಿದ್ದೇನೆ' ಎಂದರು. ಅವರದ್ದೇ ಸಂಗ್ರಹದ 'ಚಿಟ್ಟೆಗಳ ಸಾಮ್ರಾಜ್ಯ' ವಿದ್ಯಾರ್ಥಿಗಳನ್ನು ಬಹುವಾಗಿ ಆಕರ್ಶಿಸಿತು.
ಕೃಷಿಕ ಮುಳಿಯ ವೆಂಕಟಕೃಷ್ಣ ಶರ್ಮರು ಅಪರೂಪವಾಗುತ್ತಿರುವ ಹದಿನೈದಕ್ಕೂ ಮಿಕ್ಕಿ ಗೆಡ್ಡೆ ಗೆಣಸುಗಳನ್ನು ಹುಡುಕಿ ತಂದು ಪ್ರದರ್ಶನಕ್ಕಿಟ್ಟಿದ್ದರು. 'ಸಮ್ಮೇಳನ ಮುಗಿಯುವಾಗ ಕೆಂಪು ಕೂವೆ ಗೆಡ್ಡೆಯನ್ನು ನನಗೆ ಕೊಡ್ತೀರಾ', 'ಮನೆ ಮಟ್ಟದಲ್ಲಿ ಗೆಡ್ಡೆಗಳನ್ನು ಬೆಳೆಯಲು ಉತ್ತೇಜನ ಬಂದಿದೆ. ಮಾಹಿತಿ ಕೊಡಿ'.. ಹೀಗೆ ಮಾಹಿತಿ ಅಪೇಕ್ಷಿಸುವ ಮಂದಿಯನ್ನು ಗೆಡ್ಡೆಗೆಣಸುಗಳು ಆಕರ್ಷಿಸಿದುವು.
ಮತ್ತೊಂದೆಡೆ ಮಂಗಳೂರಿನ ಕಲಾವಿದ ದಿನೇಶ್ ಹೊಳ್ಳ ಮತ್ತು ಸಂಗಡಿಗರಿಂದ ಸ್ಥಳದಲ್ಲೇ ಚಿತ್ರ ರಚನೆ. ಕ್ಯಾರಿಕೇಚರ್, ತೈಲಚಿತ್ರ, ಶೇಡ್ ಚಿತ್ರಗಳ ರಚನೆ. 'ಹದಿನೇಳನೇ ಸಮ್ಮೇಳನ ಅಲ್ವಾ. ಹಾಗಾಗಿ ನಾವು ಹದಿನೇಳು ಮಂದಿ ಕಲಾವಿದರು ಭಾಗವಹಿಸಿದ್ದೇವೆ' ಎಂದರು. ಇವರೆಲ್ಲಾ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ, ಸ್ವ-ಇಚ್ಚೆಯಿಂದ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ ಎಂಬುದು ಉಲ್ಲೇಖನೀಯ. ಪೂಜ್ಯ ಸಾಯಿಬಾಬಾ ಅವರ ಬದುಕಿನ ಕ್ಷಣಗಳ ಪ್ರದರ್ಶನ, ಪವರ್ ಪಾಯಿಂಟ್ ಪ್ರಸ್ತುತಿ ಚಿಂತನಾಗ್ರಾಸ.
ಅಳಿಕೆ ಸಮ್ಮೇಳನ (19-11-2011) ಯಶಸ್ವಿಯಾಗಿ ಮುಗಿದಿದೆ. ಮುಂದಿನ ಸಮ್ಮೇಳನ..? ಆಗಲೂ ಕನ್ನಡ ಮನಸ್ಸುಗಳ ಹುಡುಕಾಟ-ತಡಕಾಟ!