ಹುಬ್ಬಳ್ಳಿ ಸುತ್ತಲಿನ ಹಳ್ಳಿಗಳಲ್ಲಿ ಓಡಾಡುತ್ತಿದ್ದೆ. ಅಲ್ಲೆಲ್ಲ್ಲಾ ಕುಡಿನೀರು ಸರಬರಾಜಿನ ನಳ್ಳಿಗಳಲ್ಲಿ ತಿರುಗಣೆಗಳಿಲ್ಲ! ದಿನಪೂರ್ತಿ ನೀರು ಸೋರಿ ಚರಂಡಿ ಸೇರುತ್ತಿದೆ. ನೋಡಿಯೂ ನೋಡದಂತಿರುವ ನಾಗರಿಕರದು ದಿವ್ಯಮೌನ. ನಮಗೂ, ನೀರು ಸೋರುವಿಕೆಗೂ ಸಂಬಂಧವಿಲ್ಲವೆನ್ನುವ ನಿರ್ಲಕ್ಷ್ಯ.
ನಲವತ್ತು ಕಿಲೋಮೀಟರ್ ದೂರದ ಸವದತ್ತಿಯಿಂದ ಹುಬ್ಬಳ್ಳಿಗೆ ನೀರು ಬರುತ್ತಿದೆ. ಜೀವನಕ್ಕೆ ಸಮಸ್ಯೆಯಾಗದಷ್ಟು ನೀರು ಲಭ್ಯವಾಗುತ್ತದೆ. ಹಾಗಾಗಿ ಟ್ಯಾಪ್ಗಳನ್ನು ಬಂದ್ ಮಾಡುವವರೇ ಇಲ್ಲ. ಬಂದ್ ಮಾಡಬೇಕೆಂಬ ಅರಿವೂ ಇಲ್ಲ. ಅಲ್ಲೇ ಸ್ನಾನ ಮಾಡುತ್ತಾರೆ, ಬಹಿರ್ದೆಶೆ ಪೂರೈಸುತ್ತಾರೆ ಎನ್ನುತ್ತಾರೆ, ಜತೆಗಿದ್ದ ಸೀತಾರಾಮ ಶೆಟ್ಟಿ.
ವರುಷಪೂರ್ತಿ ನಳ್ಳಿಗಳಲ್ಲಿ ಹರಿಯುವ ಸವದತ್ತಿಯ ನೀರಿನ ಪೂರೈಕೆಯ ಹಿಂದೆ ನಾಗರಿಕರು ಬದುಕನ್ನು ಕಟ್ಟಿಕೊಳ್ಳಬೇಕೆಂಬ ಆಶಯ ಆಡಳಿತಕ್ಕಿದೆ. ಇದಕ್ಕಾಗಿ ಕೋಟಿಗಟ್ಟಲೆ ರೂಪಾಯಿ ವ್ಯಯವಾಗಿದೆ. ಈ ನೀರಿನಿಂದಾಗಿ ಕೃಷಿ ಉಸಿರಾಡುತ್ತಿವೆ. ಹನಿಹನಿ ನೀರನ್ನೂ ಪೋಲಾದರೆ ಒಂದೊಂದು ಪೈಸೆಯೂ ನಷ್ಟವಾದಂತೆ. ಒಂದೊಂದು ಉಸಿರು ಕ್ಷೀಣವಾದಂತೆ. ಮಾತಾಡಿದರೆ ಸಾಕು, 'ನಿಮ್ದೇನ್ರಿ. ಸರ್ಕಾರದಲ್ವಾ ಹಣ' ಎಂಬ ಉಡಾಫೆ.
ಹಕ್ಕಿಗಾಗಿ ಹೋರಾಟ ಮಾಡುತ್ತೇವೆ, ರಸ್ತೆ ತಡೆ ಮಾಡುತ್ತೇವೆ. ಪ್ರತಿಭಟನೆ ಮಾಡುತ್ತೇವೆ. ಗಂಟೆಗಟ್ಟಲೆ ಹಕ್ಕನ್ನು ಪ್ರತಿಪಾದಿಸುತ್ತೇವೆ. ಆದರೆ ನಾಗರಿಕರು ಪಾಲಿಸಲೇ ಬೇಕಾದ ಸಾಮಾಜಿಕ ಕರ್ತವ್ಯಗಳ ತಿಳುವಳಿಕೆಯಿಲ್ಲ. ತಿಳಿಯಬೇಕೆನ್ನುವ ಧಾವಂತವೂ ನಮಗಿಲ್ಲ. ನೀರಿನ ಮಿತ ಬಳಕೆಯ ಜ್ಞಾನವನ್ನು ಜನರಿಗೆ ಕೊಡಬೇಕಾದ ಅಗತ್ಯವಿದೆ. ಎಲ್ಲವೂ ಪಂಚಾಯತ್ ಮಾಡಲಿ, ಸರಕಾರ ಗಮನಕೊಡಲಿ ಎಂಬ ಭಾವನೆ. ಮನೆಮುಂದೆ ಕೊಳೆಯಿದ್ದರೂ ಪಂಚಾಯತಿನವರು ಬಂದಿಲ್ಲ ಎಂದು ಕಾಯುತ್ತಾ ಕೂಡ್ರುತ್ತಾರೆ,' ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ ಬಯಲು ಸೀಮೆಯ ಜನರ ಬದುಕಿನ ಒಂದು ಮುಖವನ್ನು ಹೇಳುತ್ತಾರೆ.
ನಳ್ಳಿಯಿಂದ ಸೋರುವ ನೀರು ಚರಂಡಿ ಸೇರುತ್ತದೆ. ಕೊಳಕು ರಾಡಿ ಉತ್ಪನ್ನವಾಗುತ್ತದೆ. ಭೂಮಿ ಜವುಳಾಗುತ್ತದೆ. ಮನೆಮುಂದೆ ಜೋಡಿಸಿದ ನಳ್ಳಿಯಲ್ಲಿ ವ್ಯರ್ಥವಾಗುವ ನೀರನ್ನು ಬಂದ್ ಮಾಡಲು ಪಂಚಾಯತ್ ವರಿಷ್ಠರೇ ಬರಬೇಕೆಂದಿಲ್ಲ. ಪ್ರತಿಯೊಬ್ಬರೂ ಮಾಡಬಹುದಾದ ಕರ್ತವ್ಯ. ನೀರಿನ ಸಂಕಟದ ಅನುಭವವಿಲ್ಲ. ನಳ್ಳಿ ತಿರುವಿದರೆ ಸಾಕು, ನೀರು ಬರುತ್ತದೆ. ಒಂದು ದಿವಸ ನಳ್ಳಿ ಬಂದ್ ಆದರೆ ಸಾಕು, ಧರಣಿ-ಹರತಾಳಗಳ ಮಾಲೆ.
ಕರಾವಳಿಯಲ್ಲಿ ಈ ವರುಷ ಶಾಪಹಾಕುವಷ್ಟು ಯಥೇಷ್ಟ ಮಳೆ. ಅತ್ತ ಹುಬ್ಬಳ್ಳಿಯಿಂದ 20-25 ಕಿಲೋಮೀಟರ್ ದೂರದ ನವಲಗುಂದದಲ್ಲಿ ಮಳೆ ಸುರಿಯುವುದು ಬಿಡಿ, ಹನಿಯೂ ಬಿದ್ದಿಲ್ಲ. ಸಾವಿರಗಟ್ಟಲೆ ಎಕ್ರೆ ಹೊಲಗಳು ಭಣಭಣ. ಮಾರುಕಟ್ಟೆಯಲ್ಲಿ ನೀರುಳ್ಳಿಯ ಬೆಲೆಯು ಎಪ್ಪತ್ತೋ ಎಂಭತ್ತೋ ರೂಪಾಯಿ ಏರುತ್ತಿದ್ದರೆ, ಅಲ್ಲಿ ಮಾತ್ರ ನೀರುಳ್ಳಿಯ ಬಿತ್ತನೆ ಆಗುತ್ತಿದೆಯಷ್ಟೇ. 'ಸಾರ್, ಒಂದು ಮಳೆ ಬಂದ್ರೆ ಸಾಕು, ಬಿತ್ತಿದ ಬೀಜಗಳೆಲ್ಲಾ ಹುಲುಸಾಗಿ ಮೊಳಕೆಯೊಡೆದು ಮೇಲೆ ಬರುತ್ತೆ. ಇಲ್ದಿದ್ರೆ ಬೀಜಕ್ಕೆ ಹಾಕಿ ರೊಕ್ಕ ನಷ್ಟ,' ಎಂದು ಕೊರಗುತ್ತಾರೆ ಕೃಷಿಕ ಶಂಕರಪ್ಪ.
ನಗರಗಳು ವಿಸ್ತರಣೆಯಾಗುತ್ತಿದ್ದಂತೆ ಕಟ್ಟಡ ಕಾಮಗಾರಿಗಳಿಗೆ ಬೀಸುಹೆಜ್ಜೆ. ಜತೆಗೆ ಸರಕಾರದ ಅಭಿವೃದ್ಧಿ ಕೆಲಸಗಳು. ನಳ್ಳಿಗಳ ನೀರು ಕಾಮಗಾರಿಗಳಿಗೆ ಬಳಕೆ. ನೀರಿನ ಪೋಲು ಆಡಳಿತದ ಗಮನಕ್ಕೆ ಬರುತ್ತಿಲ್ಲ. ಬರಲೂ ಬಿಡುತ್ತಿಲ್ಲ! ಓಣಿಗಳಲ್ಲಿ ನಡೆದುಕೊಂಡು ಹೋದರೆ ಸಾಕು, ನೀರು ರಾಡಿಯಾಗಿ ರಸ್ತೆಯಲ್ಲಿ ಹರಿಯುವ ಪರಿ. ಅದರಲ್ಲೇ ಅತ್ತಿತ್ತ ಓಡಾಡುವ ಮಂದಿಗೆ ಅದು ಮಾಮೂಲಿಯಾಗಿದೆ.
ಮಳೆಗಾಗಿ ಪ್ರಾರ್ಥಿಸುವ, ಪೂಜೆ ಪುರಸ್ಕಾರವನ್ನು ಮಾಡುವ, ಕಪ್ಪೆಗಳ ಮದುವೆಗಳನ್ನು ಮಾಡಿಸುವ ಕೃಷಿಕರ ಗೋಳಿನ ಅರಿವಾಗಬೇಕಾದರೆ ಒಮ್ಮೆ ಆ ಪ್ರದೇಶವನ್ನು ಭೇಟಿ ಮಾಡಲೇ ಬೇಕು. ಆಗ ಅರಿವಾಗುತ್ತದೆ, ಕರಾವಳಿಯ ಶ್ರೀಮಂತಿಕೆ. ಅಲ್ಲಿ ನೀರಿನ ಬಳಕೆಯ ಅರಿವಿಲ್ಲದಿರಿವುದು ದೊಡ್ಡ ಸಮಸ್ಯೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಳೆಕೊಯ್ಲು, ನೀರಿನ ಮಿತ ಬಳಕೆಯತ್ತ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಳೆನೀರನ್ನು ಹಿಡಿದಿಟ್ಟು ಬಳಸುವ ಪ್ರಕ್ರಿಯೆ ಅಲ್ಲಿಲ್ಲಿ ಶುರುವಾಗುತ್ತಿದೆ.
ದೂರದ ಹುಬ್ಬಳ್ಳಿಯಲ್ಲಿ ನೀರಿನ ಕತೆ ಹೀಗಾದರೆ, ನಾವೇನೂ ಬೆನ್ನು ತಟ್ಟಿಕೊಳ್ಳಬೇಕಾಗಿಲ್ಲ. ನಮ್ಮಲ್ಲೂ ಸಾರ್ವಜನಿಕ ನಲ್ಲಿ ಸೋರುತ್ತಿದ್ದರೆ ಮುಖ ತಿರುಗಿಸಿ ಹೋಗುತ್ತೇವೆ. ನೀರು ಸರಬರಾಜಿನ ಪೈಪ್ ಒಡೆದರೆ ಸಂಬಂಧಪಟ್ಟ ವರಿಷ್ಟರಿಗೂ ತಿಳಿಸುವ ಕನಿಷ್ಟ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತೇವೆ. ಯಾಕೆ ಹೇಳಿ, ನಾವು ನೀರಿನ ಬಿಲ್ ಪಾವತಿಸುತ್ತೇವೆ ಎನ್ನುವ ಹಮ್ಮು.
ಮನೆಗೆ ಒಂದು ದಿವಸ ನೀರು ಬಾರದಿದ್ದರೆ ಒತ್ತಡ ಏರುತ್ತದೆ. ಹಿಡಿಶಾಪ ಹಾಕುತ್ತೇವೆ. ಮನೆಯಂಗಳದಲ್ಲಿ ಶತಪಥ ಓಡಾಡುತ್ತೇವೆ. ನೀರಿನ ಎಚ್ಚರವು ಮೂಡದಿದ್ದರೆ, ಸ್ವಯಂ ಆಗಿ ಮೂಡಿಸಿಕೊಳ್ಳದಿದ್ದರೆ ನಾಳೆ ಕರಾವಳಿಯೂ ಇನ್ನೊಂದು ನವಲಗುಂದ ಆದರೆ ಆಶ್ಚಯವಿಲ್ಲ. ಇದಕ್ಕೆ ಪೂರಕವಾಗಿ ವಿವಿಧ ಕೈಗಾರಿಕೆಗಳು, ನಿಡ್ಡೋಡಿಯಂತಹ ಯೋಜನೆಗಳು, ನದಿತಿರುವಿನಂತಹ ಮಾರಕ ನಿರ್ಧಾರಗಳು ಬದುಕನ್ನು ಕಮರಿಸಲು ಅಟ್ಟಿಸಿಕೊಂಡು ಬರುತ್ತಿದೆ.