Monday, August 5, 2013

ಕೆರೆಗಳನ್ನು ನುಂಗಿದವರು ಯಾರು?

              ನೇತ್ರಾವತಿ ಮೈತುಂಬಿದ್ದಾಳೆ! ಎಡೆಬಿಡದ ಮಳೆಯಿಂದಾಗಿ ಸದ್ದು ಮಾಡುತ್ತಿದ್ದಾಳೆ. ಮಾನವ ಕರ್ಮಗಳನ್ನೆಲ್ಲಾ ಆಪೋಶನ ಮಾಡುತ್ತಾ ಹರಿಯುತ್ತಿದ್ದಾಳೆ. ಕರಾವಳಿಯ ಜೀವನದಿಯಾಗಿ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿ ಉಸಿರಾಗಿದ್ದಾಳೆ. ವನರಾಜಿಯ ಸೌಂದರ್ಯವರ್ಧನೆಗೆ ಕಾರಣಳಾಗಿದ್ದಾಳೆ.

                ಒಡಲಲ್ಲಿ ಸಮೃದ್ಧ ನೀರಿದೆ. ಹಸುರಿನ ಕುಣಿತಕ್ಕೆ ಅಡಿಗಟ್ಟು ಹಾಕಿದ್ದಾಳೆ. ಕೃಷಿ ಕೆಲಸಗಳು ಸದ್ದಿಲ್ಲದೆ ಶುರುವಾಗಿದೆ. ಋತುಗಳು ನರ್ತಿಸುತ್ತಿವೆ. ಘಟ್ಟದಿಂದ ಹರಿದಿಳಿದ ಜಲವನ್ನೆಲ್ಲಾ ಸ್ವೀಕರಿಸುತ್ತಿದ್ದಾಳೆ. ಬಾಗಿನ ಅರ್ಪಿಸುವ ಮುಖಗಳು ಅರಳುತ್ತಿದ್ದಾಗ, ನೇತ್ರಾವತಿಯ ಕಣ್ಣಂಚು ತೇವವಾಗಿದೆ. ದುಃಖ ಉಮ್ಮಳಿಸಿ ಬರುತ್ತಿದೆ. ರಕ್ಷಣೆಗೆ ಬೊಬ್ಬಿಟ್ಟರೂ ದನಿ ಕೇಳಿಸುತ್ತಿಲ್ಲ. ಮಾತು ಮೌನವಾಗುತ್ತದೆ. ನೇತ್ರಾವತಿ ಅಳುತ್ತಿದ್ದಾಳೆ!

                 ಯಾಕಾಗಿ ಅಳುತ್ತಿದ್ದಾಳೆ? ಎಲ್ಲರಿಗೂ ಗೊತ್ತು. ನಿತ್ಯ ಮಾತಿನ ವಸ್ತು. ಕನ್ನಾಡಿನ ಪೂರ್ವಭಾಗದ ಬರಗಾಲವು ನೇತ್ರಾವತಿಯ ನೀರಿನಿಂದಾಗಿ ನೀಗುತ್ತದೆ. ಅದೂ ಮಳೆಗಾಲದಲ್ಲಿ ಬಿದ್ದ ನೀರು ಮಾತ್ರ. ಇದಕ್ಕಾಗಿ 'ನೇತ್ರಾವತಿ ತಿರುವು ಯೋಜನೆ' ರೂಪುಗೊಂಡಿತು. ಬಳಿಕ 'ಎತ್ತಿನಹೊಳೆ ಯೋಜನೆ'ಯಾಗಿ ತಿರುವು ಪಡೆಯಿತು.

                ಯೋಜನೆ ಕಾಗದಕ್ಕಿಳಿಯಿತು. ನೀರು ಸಾಗಿಸುವ ರಚನೆಗಳು ಚಿತ್ರಿತವಾದುವು. ಅದಕ್ಕೆ ರಾಜಕೀಯದ ಹೊಲಸು ಮೆತ್ತಿಕೊಂಡಿತು. ನೀರಿನ ಬವಣೆಯನ್ನು ತೋರಿಸುವ ದೃಶ್ಯ ದಾಖಲಾತಿ ಸಿದ್ಧವಾಯಿತು. ಪೂರ್ವ ಕನ್ನಾಡಿನ ಜನ ಬದುಕಬೇಕಾದರೆ ನೇತ್ರಾವತಿಯನ್ನು ತಿರುಗಿಸುವುದೊಂದೇ ಪರಿಹಾರ ಎಂದು ಬಿಂಬಿಸುವ ದಾಖಲೆಗಳೆಲ್ಲಾ ವ್ಯವಸ್ಥಿತವಾಗಿ ತಯಾರಾದುವು. ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುವ ರಾಜಕೀಯ ಹುನ್ನಾರಗಳ ಮುಖಗಳು ಮುಖವಾಡದೊಂದಿಗೆ ಪ್ರತ್ಯಕ್ಷವಾದುವು. ಜನರನ್ನು ಎತ್ತಿಕಟ್ಟುವ ಪ್ರಕ್ರಿಯೆಗಳು ನಡೆಯುತ್ತಲೇ ಬಂದುವು.

              ಪಶ್ಚಿಮಘಟ್ಟವು ವಿಶ್ವಸಂಸ್ಥೆಯು ಗುರುತಿಸಿದ ಸೂಕ್ಷ್ಮ ಪ್ರದೇಶಗಳಲ್ಲೊಂದು. ಹದಿನೈದು ಸಾವಿರ ಜೀವಿಗಳು ವಾಸಿಸುವ ತಾಣ. ಸಾವಿರದಷ್ಟು ಪಕ್ಷಸಂಕುಲಗಳು, ಮುನ್ನೂರಕ್ಕೂ ಮಿಕ್ಕಿ ಪತಂಗ, ಚಿಟ್ಟೆಗಳ ಪ್ರಭೇದಗಳು, ನಾಲ್ಕು ಸಾವಿರಕ್ಕೂ ಮಿಕ್ಕಿ ಹೂಗಳ ಜಾತಿಗಳು ಪಶ್ಚಿಮಘಟ್ಟದ ಸಂಪತ್ತು. ಇದನ್ನು ಸೀಳಿಕೊಂಡು ಸಾಗುವ ನೀರಿನ ಕಾಲುವೆಗಳು ಉಂಟು ಮಾಡುವ ನಾಶ ಭಯ ಹುಟ್ಟಿಸುತ್ತದೆ.

               ನಮ್ಮ ನಡುವೆಯೇ ರಸ್ತೆ ಅಗಲೀಕರಣ ನಡೆಯುತ್ತಿದೆಯಲ್ಲಾ. ನಿಗದಿತ ಅಳತೆಯಲ್ಲೇ ರಸ್ತೆ ನಿರ್ಮಾಣವಾಗಬೇಕು. ಅದಕ್ಕಾಗಿ ಕಡಿದ ಮರಗಳ ಸಂಖ್ಯೆ ಆಡಳಿತದ ಫೈಲಿನಲ್ಲಿರಬಹುದು ಎಂದು ನಂಬುವಂತಿಲ್ಲ. ಬೇಕೋ ಬೇಡ್ವೋ ಕೊಡಲಿಗೆ ಆಹುತಿಯಾಗುವ ಮರಗಳು ಅಗಣಿತ. ನುಗ್ಗುವ ಜೆಸಿಬಿ ಯಂತ್ರಕ್ಕೆ ಮಾನವ ಲೆಕ್ಕಾಚಾರದ ಅಳತೆಗಳು ನಗಣ್ಯ.

                  ಪಶ್ಚಿಮ ಘಟ್ಟದ ವನರಾಜಿಯನ್ನೊಮ್ಮೆ ಮನಸ್ಸಿಗೆ ತೆಕ್ಕೊಳ್ಳಿ. ಸೂಕ್ಷ್ಮಾತಿಸೂಕ್ಷ್ಮ ಸ್ಪಂದನೆಯುಳ್ಳ ಪರಿಸರದ ಮಧ್ಯೆ ಜೆಸಿಬಿ ಯಂತ್ರಗಳ ಸದ್ದು. ಸದ್ದಿಲ್ಲದ ಗರಗಸಗಳಿಂದ ಸದ್ದಾಗಿ ಉರುಳುವ ಮರಗಳು. ಒಡಲಲ್ಲಿ ಒರತೆಯ ಜೀವಸೆಲೆಯಿಂದಾಗಿ ಹರಿವ ಚಿಕ್ಕಪುಟ್ಟ ತೋಡುಗಳ ನಾಶ, ಮಣ್ಣಿನ ಸವಕಳಿ, ಜೀವವೈವಿಧ್ಯದ ಅಸಮತೋಲನ.. ಇವೆಲ್ಲವೂ ಕಾಗದದಲ್ಲಿ ಹಿಡಿದಿಡಲು ಬರುವುದಿಲ್ಲ. ಯೋಜನೆ ರೂಪಿಸುವ, ಅನುಷ್ಠಾನಿಸುವ ದೊರೆಗಳಿಗೆ ಇವೆಲ್ಲಾ ಬೇಕಾಗಿಲ್ಲ.

                  ಯೋಜನೆಯ ಅನುಷ್ಠಾನದ ಹಿಂದೆ ಹತ್ತು ಸಾವಿರ ಕೋಟಿಗೂ ಮಿಕ್ಕಿದ ವ್ಯವಹಾರವಿದೆ. ಪಶ್ಚಿಮಘಟ್ಟದಲ್ಲಿ ಸದ್ದು ಮಾಡುವ ಕಾಂಚಾಣದ ದನಿಗೆ ನರ್ತಿಸುವ ರಾಜಕೀಯದ ಹೇಸಿಗೆ ಮುಖಗಳನ್ನು ಗುರುತು ಹಿಡಿಯಲು ಕಷ್ಟವಿಲ್ಲ ಬಿಡಿ. ಪರಿಸರ ಮತ್ತು ಜೈವಿಕ ವ್ಯವಸ್ಥೆ ಹಾಳಾಗದು. ಅರಣ್ಯ ನಾಶವಾಗದು. ಕರಾವಳಿಗೆ ತೊಂದರೆಯಾಗದು ಎನ್ನುವ ಬೋಧೆ ಢಾಳೆಂದು ಆಡಳಿತ ವ್ಯವಸ್ಥೆಗೂ ಗೊತ್ತಿದೆ.

                24.01 ಟಿಎಂಸಿ ಅಡಿ ನೀರನ್ನು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಈ ಯೋಜನೆ. ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯೋಜನೆಯಲ್ಲಿ ಆದ್ಯತೆ. ಅಲ್ಲಿಗೆ 10 ಟಿಎಂಸಿ ನೀರು.

             ಯೋಜನೆಗೆ ವರದಿಗೆ ಶ್ರೀಕಾರ ಬರೆದ ಜಿ.ಎಸ್.ಪರಮಶಿವಯ್ಯ ಹೇಳುತ್ತಾರೆ, ಒಟ್ಟು ಏಳು ಯೋಜನಾ ವರದಿಯನ್ನು ತಯಾರಿಸಿ ಸರಕಾರಕ್ಕೆ ನೀಡಲಾಗಿದೆ. ಮೊದಲ ಐದರಲ್ಲಿ ಬಯಲುಸೀಮೆಯ 139 ತಾಲೂಕುಗಳಿಗೆ ನೀರಿನ ವ್ಯವಸ್ಥೆ ಮಾಡಬಹುದು. ಆರನೇ ವರದಿಯಲ್ಲಿ ಮಲೆನಾಡಿನ ಹದಿನೆಂಟು ತಾಲೂಕು, ಕೊನೆಯ ವರದಿಯಲ್ಲಿ ಕರಾವಳಿಯ ಹತ್ತೊಂಭತ್ತು ತಾಲೂಕುಗಳಿಗೆ ನೀರವರಿ ಸೌಲಭ್ಯ ಕಲ್ಪಿಸಬಹುದು. ಈ ಎಲ್ಲಾ ಯೋಜನೆ ಅನುಷ್ಠಾನಗೊಂಡರೆ ರಾಮರಾಜ್ಯ ಆಗುತ್ತದೆ.

             ಆದರೆ ಸಂತೋಷ. ನೀರು ಪ್ರಾಕೃತಿಕ ಸಂಪತ್ತು. ಎಲ್ಲರಿಗೂ ಹಕ್ಕಿದೆ. ಕೊಡಲಾರೆವು ಎನ್ನುವಂತಿಲ್ಲ. ಎನ್ನಲಾಗದು. ನೀರು ಹಂಚುವ ವಿಚಾರದಲ್ಲಿ ಯಾರದ್ದೂ ತಕರಾರಿಲ್ಲ. ಆದರೆ ನೀರನ್ನು ಸಾಗಿಸುವ ದಾರಿಯು ಉಂಟು ಮಾಡುವ ಪ್ರಾಕೃತಿಕ ತೊಡಕುಗಳಿವೆಯಲ್ಲಾ, ಇದು ಒಂದು ಸಂಸ್ಕೃತಿಯನ್ನು ನಾಶ ಮಾಡುತ್ತದೆ, ಜನಜೀವನವನ್ನು ಹಾಳುಮಾಡುತ್ತದೆ. ಘಟ್ಟದ ಮಧ್ಯೆ ಸೀಳಿಕೊಂಡು ಹೋಗುವ ಕಾಮಗಾರಿಯು ಮಾಡುವ ನಾಶವು ದಾಖಲೆಗೂ ನಿಲುಕದು.

             ದಕ್ಷಿಣ ಕನ್ನಡ ಜಿಲ್ಲೆಯ ಭೂಮಿಯು ಮುರಕಲ್ಲಿನಿಂದ ಕೂಡಿದ್ದಾಗಿದೆ. ಏನಿಲ್ಲವೆಂದರೂ ನಲವತ್ತರಿಂದ ಐವತ್ತು ಅಡಿಗಳಷ್ಟು ಆಳಕ್ಕಿದಿವೆ. ಅಂತರ್ಜಲವನ್ನು ಕೂಡಿಡಲು ದೀರ್ಘ ಸಮಯ ಬೇಡುತ್ತದೆ. ನೇತ್ರಾವತಿಯ ಹರಿವು ಕಡಿಮೆಯಾದರೆ ಜಲನಿಧಿ ತಳಕ್ಕಿಳಿಯುತ್ತದೆ. ಈಗಲೇ ಬೇಸಿಗೆಯಲ್ಲಿ ಕುಡಿನೀರಿಗೆ ಒದ್ದಾಡುವ ಸ್ಥಿತಿಯನ್ನು ಕರಾವಳಿಯ ಹಳ್ಳಿಗಳಲ್ಲಿ ಕಾಣುತ್ತೇವೆ. ನೇತ್ರಾವತಿ, ಕುಮಾರಧಾರಾ ನದಿಗಳಿಗೆ ಸಾಕಷ್ಟು ಅಣೆಕಟ್ಟುಗಳಿವೆ. ಯೋಜನೆಗಳಿವೆ. ನೇತ್ರಾವತಿ ತಿರುಗಿದರೆ ಇವೆಲ್ಲಾ ಭವಿಷ್ಯದ ಸ್ಮಾರಕಗಳು.

             ಯೋಜನೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಪುತ್ತೂರಿನ ಡಾ.ಶ್ರೀಶಕುಮಾರ್ ನದಿತಿರುವಿನ ಅಪಾಯದತ್ತ ಬೊಟ್ಟು ಮಾಡುತ್ತಾರೆ, ಪ್ರಸ್ತುತ ಅರಬೀ ಸಮುದ್ರದ ನೀರು ನೇತ್ರಾವತಿ ನದಿಯೊಳಗೆ ಸುಮಾರು ಇಪ್ಪತ್ತೆರಡು ಕಿಲೋಮೀಟರ್ ವರೆಗೆ ಮುಂದೆ ಬರುತ್ತಿದೆ. ಒಂದು ವೇಳೆ ನೇತ್ರಾವತಿಯ ಮಳೆ ನೀರನ್ನು ತಿರುಗಿಸಿದರೆ ಅದು ಕನಿಷ್ಠ ದಕ್ಷಿಣ ಕನ್ನಡವನ್ನೇ ವ್ಯಾಪಿಸಿಬಿಡಬಹುದು. ಉಪ್ಪು ನೀರಿನ ತಡೆಗೋಡೆಗಳೂ ಬಳಕೆಗೆ ಬಾರದ ಸ್ಥಿತಿ ಬರಬಹುದು. ಮೀನುಗಳಿಗೆ ಬೇಕಾದ ಆಹಾರವನ್ನು ಮಳೆಗಾಲದಲ್ಲಿ ನೇತ್ರಾವತಿ ಹೊತ್ತು ತರುವುದರಿಂದಲೇ ದಕ್ಷಿಣ ಕನ್ನಡದ ಬೆಸ್ತ ಬಂಧುಗಳು ಊಟ ಮಾಡುತ್ತಿದ್ದಾರೆ. ಒಂದು ವೇಳೆ ಕೇವಲ ತೊಂಭತ್ತು ಟಿಎಂಸಿ ನೀರು ಎಂದು ಹೇಳಿ ಮಾಡುವ ಮೋಡಿ ಕೊನೆಗೆ ಸರ್ವನಾಶಕ್ಕೆ ಕಾರಣವಾಗಬಹುದು..

             'ನೀರು ಕೊಡುವುದಿಲ್ಲ' ಎನ್ನುವ ಸಂಸ್ಕೃತಿ ತುಳುನಾಡಿದ್ದಲ್ಲ. ಸಹಬಾಳ್ವೆ ಇಲ್ಲಿನ ಹಿರಿಮೆ, ಗರಿಮೆ. ನೀರು ಕೊಡೋಣ. ಆದರೆ ನೀರಿನ ಸಂಪತ್ತಿದ್ದ ಪೂರ್ವ ಕನ್ನಾಡು ಯಾಕೆ ಈಗ ಬರಡಾಗಿದೆ? ಎಂಬ ಯೋಚನೆಯನ್ನು ಯೋಜನೆ ರೂಪಿಸುವ ಅಧಿಕಾರಿಗಳಾಗಲೀ, ನಾಡಿನ ದೊರೆಗಳಾಗಲೀ ಯೋಚಿಸಲಾರರು. ಈ ಹಿನ್ನೆಲೆಯಲ್ಲಿ ರಾಜಧಾನಿಯತ್ತ ಕತ್ತು ತಿರುಗಿಸೋಣ.

           ಒಂದು ಅಂಕಿಅಂಶದಂತೆ 35,783 ಕೆರೆಗಳಿದ್ದ ಕೋಲಾರ ಜಿಲ್ಲೆಯಲ್ಲಿ ಈಗಿರುವ ಕೆರೆಗಳ ಸಂಖ್ಯೆ 2095. ಅದು ಕಡತದಲ್ಲಿ ಮಾತ್ರ! ಹೂಳು ತುಂಬಿವುಗಳು ಆಧಿಕ. ಕೆಲವು ನಾಮಮಾತ್ರಕ್ಕೆ ಮಾತ್ರ. ಇನ್ನೂ ಕೆಲವು ಕೆರೆಗಳು ಬಹುಮಹಡಿ ಕಟ್ಟಡಕ್ಕೆ ಅಡಿಪಾಯಗಳಾಗಿವೆ. ಮೂವತ್ತೈದು ಸಾವಿರಕ್ಕೂ ಅಧಿಕ ಕೆರೆಗಳಿದ್ದ ಕೋಲಾರ ನೀರಿನ ಸಂಪನ್ಮೂಲ ಹೊಂದಬೇಕಿತ್ತು. ಇದ್ದ ಕೆರೆಗಳನ್ನು ದುರಸ್ತಿ ಪಡಿಸಿಲ್ಲ. ಹೇಳಬೇಕಾದವರು ಹೇಳಿಲ್ಲ. ಹೇಳುವವರಿಗೆ ವಾಸ್ತವದ ಅರಿವಿಲ್ಲ. ಸಮಸ್ಯೆಯ ಗಾಢತೆ ಬಂದಾಗ ಕಾಲ ಮಿಂಚಿತ್ತು.

               ಸರಕಾರದ ಕೋಟಿ ಮೊತ್ತದ ಫೈಲಿನಲ್ಲಿ ಬಹುಶಃ ಈ ಕೆರೆಗಳೆಲ್ಲಾ ದುರಸ್ತಿಯಾಗಿರಬಹುದು! ಮನೆಮನೆಯಲ್ಲೂ ನೀರು ಹರಿಯುತ್ತಿರಬಹುದು! ಪ್ರತಿವರುಷವೂ ರಿಪೇರಿಗಾಗಿ ಹಣದ ಹರಿವು ಬರುತ್ತಿರಬಹುದು! ಅವೆಲ್ಲವೂ ವ್ಯವಸ್ಥಿತ ಮಾರ್ಗದಲ್ಲಿ ಹರಿಯುತ್ತಿರುವುದನ್ನು ನೋಡಿಯೂ ನೋಡದಂತಿರುವ ಶ್ರೀಸಾಮಾನ್ಯ ಪ್ರಭು. ಪ್ರಶ್ನಿಸಲಾಗದ ಅಸಹಾಯಕತೆ.

                ರಾಜ್ಯ ಸಣ್ಣ ನೀರಾವರಿ ಇಲಾಖೆಯಡಿ 3579 ಮತ್ತು ಗ್ರಾಮಾಭಿವೃದ್ಧಿ ಇಲಾಖೆಯ ಫೈಲಿನಲ್ಲಿ ಇಪ್ಪತ್ತ ಆರು ಸಾವಿರ ಕೆರೆಗಳಿವೆಯಂತೆ. ನಗರ ಬೆಳೆಯುತ್ತಿದ್ದಂತೆ ಕೆರೆಗಳೂ ಮಾಯವಾಗುತ್ತಿವೆ. ಅಭಿವೃದ್ಧಿಯ ಬೀಸುಹೆಜ್ಜೆಗೆ ಪ್ರಾಕೃತಿಕ ಸಂಪತ್ತು ನಲುಗುತ್ತಿರುವುದಕ್ಕೆ ಬರಗಾಲವೇ ಸಾಕ್ಷಿ. ಕೆರೆಗಳ ಅಭಿವೃದ್ಧಿಗೆ ಸರಕಾರವು 'ಕೆರೆ ಅಭಿವೃದ್ಧಿ ಪ್ರಾಧಿಕಾರ'ವನ್ನು ರಚಿಸುವ ಸುದ್ದಿ ಸಂತೋಷವೇನೋ ಹೌದು.

                ಅಂತರ್ಜಲ ಅಭಿವೃದ್ಧಿಗೆ ಕೆರೆಗಳು ಜೀರ್ಣೋದ್ಧಾರವೊಂದೇ ದಾರಿ. ಸರಣಿ ಕೆರೆಗಳು ನೀರಿನ ನಿಧಿಯನ್ನು ಭೂಒಡಲಲ್ಲಿ ಸಂರಕ್ಷಿಸಿದ ದಿನಗಳಿದ್ದುವಲ್ಲಾ. ಅದಕ್ಕೆ ಕನ್ನ ಹಾಕಿದವರು ಯಾರು? ಕೋಲಾರ ಮಾತ್ರವಲ್ಲ, ಕನ್ನಾಡಿನಾದ್ಯಂತ ಕೃಷಿಗೆ ನೆರವಾಗುತ್ತಿದ್ದ ಕೆರೆಗಳನ್ನು ನುಂಗಿದವರು ಯಾರು? ಕೆರೆಗಳಿದ್ದ ಜಾಗದಲ್ಲೆಲ್ಲಾ ಬಹುಮಹಡಿ ಕಟ್ಟಡಗಳಾಗಿವೆ.

                ಅಳಿದುಳಿದ ಕೆರೆಗಳ ದುರಸ್ತಿ. ನೀರಿನರಿವು. ಜಲಸಂರಕ್ಷಣೆಯ ಪಾಠ. ನೀರಿನ ಮಿತ ಖರ್ಚು ಮತ್ತು ಕೆರೆಗಳನ್ನು ನುಂಗಿದ ನುಂಗಣ್ಣರಿಂದ ಕೆರೆಗಳ ಶಾಪಮೋಕ್ಷ - ಮೊದಲಾದ್ಯತೆಯಲ್ಲಿ ಆಗಬೇಕಾದ ಈ ಕೆಲಸಗಳಿಗೆ ಪ್ರಾಧಿಕಾರವು ದಿಟ್ಟಹಜ್ಜೆಯಿಟ್ಟರೆ ಪಾತಾಳಕ್ಕೆ ಜಿಗಿದ ಬಾಗೀರಥಿಗೆ ಮೇಲೆದ್ದು ಬರಲು ನಿರಾಳ. ಇಷ್ಟಾಗಿಯೂ ಅವಳು ಸ್ಪಂದಿಸಿಲ್ಲ ಎಂತಾದರೆ ನೀರು ಕೊಡಲಾಗದಷ್ಟು ತುಳುನಾಡಿಗರು ಕೃತಘ್ನರಲ್ಲ.

0 comments:

Post a Comment